You are hereಶರಣ ಸಂಸ್ಕೃತಿಯ ಮೂಲ ರೈತಾಪಿ ಸಂಸ್ಕೃತಿ

ಶರಣ ಸಂಸ್ಕೃತಿಯ ಮೂಲ ರೈತಾಪಿ ಸಂಸ್ಕೃತಿ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

೧೪ನೇ ಶತಮಾನದ ಖಾಜಾ ಬಂದಾ ನವಾಜ್ ಮತ್ತು ೧೮ನೇ ಶತಮಾನದ ಶರಣಬಸವೇಶ್ವರರು. ಹೈದರಾಬಾದ ಕರ್ನಾಟಕ ಪ್ರದೇಶದ ಜನರ ಮೇಲೆ ಗಾಢವಾದ ಪ್ರಭಾವ ಬೀರಿದ್ದಾರೆ. ಅವರು ಬೇರೆ ಬೇರೆ ಶತಮಾನಗಳಿಗೆ ಸೇರಿದ್ದರೂ ಜನರ ಹೃನ್ಮಂದಿರದಲ್ಲಿ ಏಕಕಾಲಕ್ಕೇ ಮಿಡಿಯುತ್ತಿದ್ದಾರೆ. ಬಂದಾ ನವಾಜರು ಉರ್ದು ಗದ್ಯದ ಜನಕರು. ಸಂಸ್ಕೃತ ಭಾಷಾ ಜ್ಞಾನವನ್ನೂ ಹೊಂದಿದ್ದ ಅವರು ಪಾರ್ಸಿ ಮತ್ತು ದಖನಿ ಉರ್ದು ಭಾಷೆಗಳಲ್ಲಿ ೧೦೫ ಗ್ರಂಥಗಳ ರಚನೆ ಮಾಡಿದ್ದಾರೆ. ಶರಣಬಸವೇಶ್ವರರು ರೈತಾಪಿ ಜನರ ಸಂಕೇತ. ಅವರು ಯಾವುದೇ ಗ್ರಂಥ ಬರೆದಿಲ್ಲ. ಆದರೆ ಅವರೂ ಜನಮಾನಸದಲ್ಲಿ ಕಂಗೊಳಿಸುತ್ತಿದ್ದಾರೆ. ಅವರು ಹೆಚ್ಚಿಗೆ ಮಾತನಾಡಲಿಲ್ಲ. ಆದರೆ ದಾಸೋಹದ ಮಹತ್ವವನ್ನು ಕೃತಿಗೆ ಇಳಿಸಿ ಜನಸಮುದಾಯಕ್ಕೆ ತೋರಿಸಿಕೊಟ್ಟರು. ರೈತಾಪಿ ಸಂಸ್ಕೃತಿಯ ಪ್ರತೀಕವಾದರು. ಕೃಷಿ ಕಾಯಕ ಮತ್ತು ಪ್ರಸಾದ ಪ್ರಜ್ಞೆಯೊಂದಿಗೆ ದಾಸೋಹಂಭಾವದಿಂದ ಬದುಕಿ ತೋರಿಸಿದರು. ಪಾಲಿಗೆ ಬಂದ ಕರ್ಕಿ ಹೊಲವನ್ನು ಹಸನುಗೊಳಿಸಿದರು. ಬೇಲಿಯಿಲ್ಲದ ಹೊಲದಲ್ಲಿ ಸಮೃದ್ಧ ಬೆಳೆ ಬೆಳೆದರು. ಕಾಳು ತಿನ್ನಲು ಹೊಲಕ್ಕೆ ಬರುವ ಹಕ್ಕಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಹಕ್ಕಿಗಳು ಕಾಳಿನ ಜೊತೆ ಕೀಟಗಳನ್ನೂ ತಿನ್ನುವುದರ ಮೂಲಕ ಸಹಜ ಕೀಟನಾಶಕಗಳಾದವು. ಬೇಲಿ ಇಲ್ಲದ ಹೊಲ ಮೆಯ್ದ ದನಕರುಗಳು ಸೆಗಣಿ ಹಾಕಿ ಗೊಬ್ಬರ ಪೂರೈಸಿದವು.

ಹೀಗೆ ಸಕಲ ಜೀವಾತ್ಮರು ಕೂಡಿ ಬದುಕಲು ಸಾಧ್ಯ ಎಂಬ ಶರಣ ತತ್ತ್ವವನ್ನು ಶರಣಬಸವೇಶ್ವರರು ಬದುಕುವ ಮೂಲಕ ಸಾಧಿಸಿ ತೋರಿಸಿದರು. ಶರಣಬಸವೇಶ್ವರರು ಅಂದು ಸಾಧಿಸಿದ್ದನ್ನು ಇಂದು ಕೃಷಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಶರಣಬಸವೇಶ್ವರರ ಕಾಯಕ- ಪ್ರಸಾದ- ದಾಸೋಹ ಪ್ರಜ್ಞೆ ಕೋಟ್ಯಂತರ ರೈತರ ಮೇಲೆ ಪ್ರಭಾವ ಬೀರಿದೆ. ಶರಣಬಸವೇಶ್ವರರು ರೈತಾಪಿ ಜನರ ಮತ್ತು ಕಲ್ಯಾಣ ನಾಡಿನ ಇಡೀ ಜನಸಮುದಾಯದ ಆರಾಧ್ಯ ದೈವವಾಗಿದ್ದಾರೆ. ಜೀವನ ಶ್ರದ್ಧೆ ಮತ್ತು ಸರ್ವಸಮತ್ವವನ್ನು ಸಾರುವ ಇಷ್ಟಲಿಂಗ ನಿಷ್ಠೆಯಿಂದಾಗಿ ಅವರು ೧೨ನೇ ಶತಮಾನದ ಶರಣರ ಪ್ರತಿರೂಪವಾದರು. ಅಂತೆಯೆ ಅವರ ತೋರುಗದ್ದುಗೆಗಳು ಈ ಭಾಗದಲ್ಲಿ ನೂರಾರು ಕಡೆಗಳಲ್ಲಿವೆ. ಗುಲ್ಬರ್ಗಾದಲ್ಲಿ ಇರುವ ಅವರ ಗದ್ದುಗೆ ಅಪ್ಪನ ಗುಡಿ ಎಂದೇ ಪ್ರಸಿದ್ಧವಾಗಿದೆ. ಅಪ್ಪನ ಗುಡಿ ಮತ್ತು ಖಾಜಾ ಬಂದಾ ನವಾಜ್ ದರ್ಗಾಗಳು ನಗರದ ಎರಡು ಅರಿವಿನ ಕಣ್ಣುಗಳೆಂದೇ ಜನ ಭಾವಿಸಿದ್ದಾರೆ. ಜೇವರ್ಗಿಯ ಷಣ್ಮುಖ ಶಿವಯೋಗಿಗಳು, ಕಡಕೋಳ ಮಡಿವಾಳಪ್ಪ ಮುಂತಾದವರು ಇಂಥದೇ ಪರಂಪರೆಯ ಸಾಲಿಗೆ ಸೇರುತ್ತಾರೆ. ಹೀಗೆ ಶರಣಬಸವೇಶ್ವರರಿಂದಾಗಿ ರೈತಾಪಿ ಸಂಸ್ಕೃತಿ ಈ ಭಾಗದ ಮೂಲ ಸಂಸ್ಕೃತಿಯಾಗಿದೆ.

ಹಾಗೆ ನೋಡಿದರೆ ಇಡೀ ಶರಣ ಸಂಸ್ಕೃತಿಯ ಮೂಲವೇ ರೈತಾಪಿ ಸಂಸ್ಕೃತಿಯಾಗಿದೆ. ವೈದಿಕ ಸಂಸ್ಕೃತಿಯಲ್ಲದೆ ಜಗತ್ತಿನ ಎಲ್ಲ ನಾಗರೀಕತೆ ಮತ್ತು ಸಂಸ್ಕೃತಿಗಳಿಗಿಂತ ರೈತಾಪಿ ಸಂಸ್ಕೃತಿ ಹಳೆಯದಾಗಿದೆ. ನೈಲನದಿ ಸಂಸ್ಕೃತಿ, ಮಹೆಂಜೊದಾರೊ ಸಂಸ್ಕೃತಿ, ಗ್ರೀಕ್ ಸಂಸ್ಕೃತಿ ಹೀಗೆ ಯಾವುದೇ ಸಂಸ್ಕೃತಿ ತೆಗೆದುಕೊಂಡರೂ ಅವುಗಳಿಗೆ ೧೦ ಸಾವಿರ ವರ್ಷಗಳ ಇತಿಹಾಸವಿಲ್ಲ. ಆದರೆ ಭಾರತದ ಕೃಷಿಗೆ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿ ಮತ್ತು ನಾಗರೀಕತೆಗಳಿಗೆ ಮೂಲವಾಗಿದೆ. ಕೃಷಿಯು ಒಂದೆಡೆ ನೆಲೆನಿಂತ ಮಾತೃಕುಟುಂಬ ವ್ಯವಸ್ಥೆಯ ಕಾಣಿಕೆಯಾಗಿದೆ. ಕೃಷಿಯನ್ನು ಮಹಿಳೆ ಕಂಡುಹಿಡಿದದ್ದೊಂದು ವಿಶೇಷ. ಆದ್ದರಿಂದಲೇ ಮಹಿಳೆ ಮತ್ತು ಕೃಷಿ ಎಲ್ಲ ನಾಗರೀಕತೆಗಳ ಮೂಲ. ಆದರೆ ದುರಂತವೆಂದರೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ನಾಶವಾದಮೇಲೆ ಎಲ್ಲ ನಾಗರೀಕತೆಗಳು ಕೃಷಿ ಮತ್ತು ಮಹಿಳೆಯನ್ನು ಗೌಣವಾಗಿ ಕಾಣುತ್ತ ಬಂದವು. ಕೃಷಿಯು ರೈತರಿಗಷ್ಟೇ ಅಲ್ಲದೆ ವಿವಿಧ ಕಾಯಕಜೀವಿಗಳಿಗೆ ಮೂಲಾಧಾರವಾಗಿದೆ. ಭೂಮಿಯಿಂದ ಪಡೆದದ್ದನ್ನು ದಾಸೋಹಂಭಾವದಿಂದ ಹಂಚಿಕೊಂಡು ತಿನ್ನುವುದು ರೈತರ ಮೌಲ್ಯವಾಗಿತ್ತು. ಕಂಬಾರ, ಕುಂಬಾರ, ಮಡಿವಾಳ, ಹಡಪದ, ಮುಂತಾದ ಬಾರಾಬಲೂತಿದಾರರ ಜೊತೆ ಮಾತ್ರ ಆತ ತನ್ನ ಉತ್ಪನ್ನಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಪಶು ಪಕ್ಷಿಗಳು ಮತ್ತು ಹುಳ ಹುಪ್ಪಡಿಗಳು ಕೂಡ ಅವನ ಕೃಷಿ ಉತ್ಪನ್ನದ ಪಾಲುದಾರರು. ಹೀಗೆ ರೈತನ ಬದುಕೇ ಉದಾತ್ತವಾಗಿದೆ. ಆತ ಎಲ್ಲ ಕಾಯಕಜೀವಿಗಳಿಗೆ ಕೇಂದ್ರಬಿಂದುವಾಗಿ ತಾನಿರುವ ಹಳ್ಳಿಯ ಎಲ್ಲ ಸಮುದಾಯಗಳು ಹಾಸುಹೊಕ್ಕಾಗಿರುವಂಥ ವ್ಯವಸ್ಥೆಯನ್ನು ಹೊಂದಿದ್ದ. ಇಂಥ ಜಾನಪದ ಜಗತ್ತಿಗೆ ’ಸ್ವಯಂ ಪರಿಪೂರ್ಣ ಗ್ರಾಮ ವ್ಯವಸ್ಥೆ’ ಎಂದು ಕರೆಯುತ್ತಾರೆ. ರಾಜ್ಯಶಕ್ತಿ ಮತ್ತು ವೈದಿಕ ಶಕ್ತಿಗಳು ಒಂದಾಗಿ ಈ ಸ್ವಯಂ ಪರಿಪೂರ್ಣ ಗ್ರಾಮ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದವು. ದುಡಿಯುವವರು ಕೀಳಾಗಿ ಪರಾವಲಂಬಿಗಳು ಮೇಲಾಗಿ ಬದುಕುವಂಥ ಸಮಾಜ ವ್ಯವಸ್ಥೆಯ ಬಗ್ಗೆ ಬಸವಣ್ಣನವರು ಕೂಲಂಕಷ ಅಧ್ಯಯನ ಮಾಡಿದರು. ವೈದಿಕದ ಒಳಹೊರಗನ್ನು ಚೆನ್ನಾಗಿ ಅರಿತಿದ್ದ ಬಸವಣ್ಣನವರು ಅವೈದಿಕ ರೈತಾಪಿ ಸಂಸ್ಕೃತಿ ಸರ್ವಶೇಷ್ಠ ಎಂಬುದನ್ನು ಮನಗಂಡರು. ಮನುವಾದಿಗಳಿಂದಾಗಿ ರೈತಾಪಿ ಸಂಸ್ಕೃತಿಯಲ್ಲಿ ನುಸುಳಿರುವ ಜಾತಿಗಳನ್ನು ನಿರ್ನಾಮ ಮಾಡಿ ಕಾಯಕ ಜೀವಿಗಳ ಕೇಂದ್ರಿತ ಸಮಾಜ ಸ್ಥಾಪನೆ ಮಾಡುವ ಮೂಲಕ ರೈತಾಪಿ ಸಮಾಜಕ್ಕೆ ಹೊಸ ರೂಪ ಕೊಟ್ಟರು. ಜಾತಿ ನಾಶಮಾಡಿ ಕಾಯಕಪ್ರಧಾನ ಸಮಾಜ ಕಟ್ಟಿದರು.

ಇಂಥ ಅತ್ಯಾಧುನಿಕ ಸಮಾಜ ಕಟ್ಟುವುದಕ್ಕಾಗಿ ಅವರು ಜಾನಪದ ಲೋಕದ ಸಂಪೂರ್ಣ ಅಧ್ಯಯನ ಮಾಡಿದರು.

"ಹತ್ತು ಸಾವಿರ ಪದವ ಎತ್ತಿನ ಮೇಲೆ ಹೇರ‍್ಕೊಂಡು
ಮತ್ತೆ ಸಾವಿರ ಪದವ ಹಿಡಕೊಂಡು ಕೋಲೆ...
ಎಂಟು ಸಾವಿರ ಪದವ ಒಂಟೆ ಮೇಲೆ ಹೇರ‍್ಕೊಂಡು
ಬಸವಣ್ಣನ ಸಭೆಗೆ ಬಂದೇವು ಕೋಲೆ...
ಕೋಲಿನ ಮೇಲೊಬ್ಬ ಬಸವಣ್ಣ ಕೂತ್ಕೊಂಡು
ಲಾಲಿಸಿ ಪದವ ಬರಕೊಂಡು ಕೋಲೆ..."

ಎಂಬ ಜನಪದ ಹಾಡಿನಿಂದ ಬಸವಣ್ಣನವರು ಜಾನಪದ ಜೀವನ ಕ್ರಮವನ್ನು ಆಳವಾಗಿ ಅರಿತುಕೊಂಡದ್ದು ತಿಳಿದುಬರುತ್ತದೆ.

ಶರಣಧರ್ಮವೆಂಬುದು ಜನಪದ ಧರ್ಮದ ಆಧುನಿಕ ರೂಪವಾಗಿದೆ. ಭೂಮಿಯ ಮಹತ್ವವನ್ನು ಸಾರುವ ಜೀವನ್ಮುಖಿ ಧರ್ಮವಾಗಿದೆ. ಸ್ವರ್ಗದ ಮಹತ್ವವನ್ನು ಅಲ್ಲಗಳೆಯುವ ಧರ್ಮವಾಗಿದೆ. "ಕೈಲಾಸವೆಂಬುದೇನೋ ಪೃಥ್ವಿಯ ಮೇಲೊಂದು ಮೊರಡಿ" ಎಂದು ಬಸವಣ್ಣನವರು ಹೇಳಿದ್ದಾರೆ. "ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ" ಎಂದು ಅಕ್ಕ ಮಹಾದೇವಿ ಪ್ರಶ್ನಿಸಿದ್ದಾರೆ. ಭೂಮಿಯ ಮಹತ್ವವನ್ನು ಸಾರುವ ಧರ್ಮವು ಶಾಸ್ತ್ರಕರ್ಮಪ್ರಧಾನ ಆಗಿರುವುದಿಲ್ಲ. ಜೀವಕಾರುಣ್ಯ ಪ್ರಧಾನವಾಗಿರುತ್ತದೆ. ಕಾಯಕದಲ್ಲೇ ಕೈಲಾಸವನ್ನು ಕಾಣುವಂಥದ್ದಾಗಿರುತ್ತದೆ. ದೇವರು ಇಲ್ಲಿ ನಿರಾಕಾರ. ಶರಣಧರ್ಮವು ಇಂಥ ಕಾಯಕ ಪ್ರಧಾನ ಧರ್ಮವಾಗಿದೆ. ಇಷ್ಟಲಿಂಗವು ಇಂಥ ಅರಿವಿನ ಕುರುಹು ಆಗಿ ಇದೆ. "ದೇಹಾರ (ಇಷ್ಟಲಿಂಗ ಪೂಜೆ) ಮಾಡುವ ಅಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ" ಎಂದು ಅಂಬಿಗರ ಚೌಡಯ್ಯನವರು ಹಸಿದವರ ಪರವಾಗಿ ನಿಲ್ಲುತ್ತಾರೆ. "ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ" ಎಂದು ಅಲ್ಲಮ ಪ್ರಭುಗಳು ಎಚ್ಚರಿಸಿದ್ದಾರೆ. "ಕಾಲಿಲ್ಲದವಂಗೆ ಕಾಲು ಕೊಟ್ಟೆ ಬಸವಾ, ಕಣ್ಣಿಲ್ಲದವಂಗೆ ಕಣ್ಣು ಕೊಟ್ಟೆ ಬಸವಾ" ಎಂದು ಸಿದ್ಧರಾಮರು ಬಸವಣ್ಣನವರನ್ನು ಕೊಂಡಾಡುವುದರ ಮೂಲಕ ಬದುಕಿನ ಮಹತ್ವ ಸಾರಿದ್ದಾರೆ. "ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ... ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡಾ ರಾಮನಾಥ." ಎಂದು ಜೇಡರ ದಾಸಿಮಯ್ಯನವರು ದೇವರಿಗೇ ಸವಾಲು ಹಾಕಿದ್ದಾರೆ. "ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು." ಎಂದು ಆಯ್ದಕ್ಕಿ ಮಾರಯ್ಯನವರು ತಿಳಿಸಿದ್ದಾರೆ. "ಹೆಣ್ಣ ಬಿಟ್ಟು ಲಿಂಗವನೊಲಿಸಬೇಕೆಂಬರು. ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?" ಎಂದು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಪ್ರಶ್ನಿಸಿದ್ದಾಳೆ. "ಜಾಗ್ರಸ್ವಪ್ನಸುಷುಪ್ತಿಗಳಲ್ಲಿ ಕಾಮವಿಕಾರ ತೋರಿತ್ತೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧಿಗಳಿಂದ ಘಟವ ಬಿಟ್ಟಡೆ ಆತ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ." ಎಂದು ಅವಸರದ ರೇಕಣ್ಣ ಜೀವಪರ ನಿಲುವು ತಾಳಿದ್ದಾನೆ. "ಕುಲಛಲವೆಂದೇನೊ ಮನದ ಹೊಲೆಯ ಕಳೆದವಂಗೆ?" ಎಂದು ಹಡಪದ ಅಪ್ಪಣ್ಣನವರು ಪ್ರಶ್ನಿಸಿದ್ದಾರೆ. "ಜೀವ ಹೋದಡೆ ಸಾಯಿ ಇದಕಾ ದೇವರ ಹಂಗೇಕೆ" ಎಂದು ಲದ್ದೆಯ ಸೋಮಣ್ಣ ಏನನ್ನು ಬಯಸದೆ, ದೇವರನ್ನು ಮತ್ತು ಲೋಕವನ್ನು ಪ್ರೀತಿಸುವುದನ್ನು ಕಲಿಸಿದ್ದಾನೆ. ವೇದಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ? .... ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?" ಎಂದು ಬಸವಣ್ಣನವರು ಬಡವರ ಪರವಾಗಿ ನಿಂತು ಅವರ ಪ್ರತಿಭೆಯನ್ನು ಕೊಂಡಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಾರೆ. "ಕೂಡಲಸಂಗನ ಶರಣರು ಸ್ವತಂತ್ರಧೀರರು" ಎಂದು ಸಾರುತ್ತಾರೆ. ಬಡವರ ಧರ್ಮವನ್ನು ಸ್ಥಾಪಿಸಿ ಅವರೇ ಈ ಭೂಮಿಯ ವಾರಸುದಾರರು ಎಂಬುದನ್ನು ಸಿದ್ಧಪಡಿಸುತ್ತಾರೆ. ಹೀಗೆ ಬಸವಣ್ಣನವರು ಕಾಯಕಜೀವಿಗಳಾದ ಶರಣರೆಲ್ಲರನ್ನು ಸೇರಿಸಿಕೊಂಡು ಮನುಧರ್ಮಕ್ಕೆ ವಿರುದ್ಧವಾದ ಮಾನವಧರ್ಮದ ಸನ್ಮಾರ್ಗವನ್ನು ನಿರ್ಮಿಸುತ್ತಾರೆ.

ಬುದ್ಧನ ತರುವಾಯ ಭಾರತೀಯ ಸಮಾಜವನ್ನು ಬಸವಣ್ಣನವರಷ್ಟು ವೈವಿಧ್ಯಮಯವಾಗಿ ಅಧ್ಯಯನ ಮಾಡಿದಂಥವರು ಇನ್ನೊಬ್ಬರಿಲ್ಲ. ಬಸವಣ್ಣನವರ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಬಹಳೇ ಉಲ್ಬಣಗೊಂಡಿತ್ತು. ಹೀಗಾಗಿ ಸಮಾಜವನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳುವ ಅವಕಾಶ ಬಸವಣ್ಣನವರಿಗೆ ಲಭಿಸಿತು. ತಮ್ಮನ್ನೇ ಲೋಕಕ್ಕೆ ಅರ್ಪಿಸಿಕೊಂಡಿದ್ದ ಮಹಾನುಭಾವಿ ಬಸವಣ್ಣನವರು ಸಕಲ ವೇದಶಾಸ್ತ್ರಪುರಾಣಾಗಮ ಪಾರಂಗತರಾಗಿದ್ದರು. ಮಹಾನ್ ಆಡಳಿತಗಾರರೂ ಆಗಿದ್ದರು. ರಾಜರು ಮತ್ತು ರಾಜಗುರುಗಳು ಸೇರಿ ಯಾವರೀತಿ ಜನಸಾಮಾನ್ಯರ ಸುಲಿಗೆ ಮಾಡುತ್ತಾರೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇಡೀ ದುಡಿಯುವ ವರ್ಗವನ್ನು ಶೋಷಣೆಯಿಂದ ರಕ್ಷಿಸುವ ಪಣತೊಟ್ಟರು. ಶೋಷಣೆಯ ಬಲೆಗೆ ಬಿದ್ದು ಒದ್ದಾಡುವ ಅಸ್ಪೃಶ್ಯರು, ಮಹಿಳೆಯರು ಮತ್ತು ವಿವಿಧ ಕಾಯಕಜೀವಿಗಳನ್ನು ವಿಮೋಚನೆಗೊಳಿಸುವುದು ಅವರ ಬಹುಮುಖ್ಯ ಗುರಿಯಾಯಿತು. ವಿಮೋಚನೆ ಬೇರೆಯವರಿಂದ ಆಗುವುದಿಲ್ಲ. ನಮ್ಮ ವಿಮೋಚನೆಯನ್ನು ನಾವೇ ಮಾಡಿಕೊಳ್ಳಬೇಕು. ಹಾಗೆಂದ ಮಾತ್ರಕ್ಕೆ ವ್ಯಕ್ತಿಗತವಾಗಿ ವಿಮೋಚನೆಗೊಳ್ಳಲಿಕ್ಕಾಗದು. ಶೋಷಣೆಗೆ ಮತ್ತು ಅಪಮಾನಕ್ಕೆ ಒಳಪಟ್ಟ ಜನರೆಲ್ಲ ಸಾತ್ವಿಕವಾಗಿ ಮತ್ತು ತಾತ್ತ್ವಿಕವಾಗಿ ಒಂದಾಗಿ ಸರ್ವಸಮತ್ವದ ಕನಸಿನೊಂದಿಗೆ ಮುನ್ನಡೆದಾಗ ಮಾತ್ರ ಎಲ್ಲ ತೆರನಾದ ಶೋಷಣೆ ಮತ್ತು ಅಪಮಾನಗಳಿಂದ ಮುಕ್ತರಾಗಲು ಸಾಧ್ಯ. ಬಸವಣ್ಣನವರ ದೃಷ್ಟಿಯಲ್ಲಿ ಮುಕ್ತಿ ಎಂದರೆ ಮಾನವ ವಿಮೋಚನೆಯೇ ಆಗಿದೆ.

ಹೊಸ ಧರ್ಮವನ್ನು ಸೃಷ್ಟಿಸುವುದು ಬಸವಣ್ಣನವರ ಉದ್ದೇಶವಾಗಿರಲಿಲ್ಲ. ಹೊಸ ಮಾನವನ ಸೃಷ್ಟಿಯೇ ಅವರ ಉದ್ದೇಶವಾಗಿತ್ತು. ಅವರ ಕಲ್ಪನೆಯೆ ಹೊಸ ಮಾನವ ಯಾವುದೇ ತೆರನಾದ ಶೋಷಣೆಗೆ ಒಳಗಾಗಿರಬಾರದು, ಯಾರನ್ನೂ ಶೋಷಣೆಗೆ ಒಳಪಡಿಸಬಾರದು, ತಾನು ಬೇರೆಯವರಿಗಿಂತ ಮೇಲು ಎಂದು ತಿಳಿದುಕೊಳ್ಳಬಾರದು, ತಾನು ಕೀಳು ಎಂದೂ ತಿಳಿದುಕೊಳ್ಳಬಾರದು, ಆತ ಕಾಯಕಜೀವಿಯಾಗಿರಬೇಕು, ತಾನು ಗಳಿಸಿದ್ದನ್ನು ತಾನೇ ಉಣ್ಣಬಾರದು, ಪರಹಿತ ಪ್ರಜ್ಞೆಯೊಂದಿಗೆ ಹಂಚಿಕೊಂಡು ತಿನ್ನಬೇಕು. ಸರ್ವರೂ ಸರಳ ಸಹಜ ಮತ್ತು ಪವಿತ್ರವಾದ ಬದುಕನ್ನು ಆನಂದಮಯವಾಗಿ ಅನುಭವಿಸಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು.

ವಾಕ್ ಸ್ವಾತಂತ್ರ್ಯದಿಂದ ಸಮಾನತೆ, ಆತ್ಮಗೌರವ, ಮಾನವ ಘನತೆ ಮತ್ತು ಜ್ಞಾನ ಲಭಿಸುವುದೆಂಬುದನ್ನು ಬಸವಣ್ಣನವರು ಕಂಡುಕೊಂಡಿದ್ದರು. ಅಂತೆಯೆ ಅವರು ಯಾರ ಅಭಿಪ್ರಾಯವನ್ನೂ ಹತ್ತಿಕ್ಕಲಿಲ್ಲ. ಯಾರ ಅಭಿಪ್ರಾಯವನ್ನೂ ಕೀಳಾಗಿ ನೋಡಲಿಲ್ಲ. ಪ್ರತಿಯೊಬ್ಬರ ಅಭಿಪ್ರಾಯದಲ್ಲಿನ ಮಹತ್ವವನ್ನು ಅರಿತುಕೊಳ್ಳುವ ತಾಳ್ಮೆ ಮತ್ತು ಶಕ್ತಿಯನ್ನು ಅವರು ಹೊಂದಿದ್ದರು. ಅಂತೆಯ ಬಸವಣ್ಣನವರ ಸಮ್ಮುಖದಲ್ಲಿ ದಲಿತರು, ಹೆಣ್ಣುಮಕ್ಕಳು ಮತ್ತು ಮಕ್ಕಳು ಕೂಡ ನಿರ್ಭಯದಿಂದ ಮಾತನಾಡತೊಡಗಿದರು. ಅವು ಬರಿ ನಿರ್ಭಯದ ಮಾತುಗಳಾಗಿ ಹೊರಹೊಮ್ಮಲಿಲ್ಲ; ಎಚ್ಚರಿಕೆಯ, ಜವಾಬ್ದಾರಿಯ ಮತ್ತು ಆತ್ಮಜ್ಞಾನದ ಮಾತುಗಳಾದವು. ಆ ಮಾತುಗಳಿಗೇ ನಾವು ವಚನಗಳೆಂದು ಕರೆಯುತ್ತೇವೆ. ಮಾತು ಕೊಡುವುದು, ಭಾಷೆ ಕೊಡುವುದು ಮತ್ತು ವಚನ ಕೊಡುವುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗೆ ಕಾಯಕಜೀವಿಗಳು ಸಕಲಜೀವಾತ್ಮರಿಗೆ ಲೇಸಾಗುವ ಮಾತುಗಳನ್ನೇ ಆಡಿದರು. ಈ ಸೂಳ್ನುಡಿಗಳೇ ವಚನಗಳು. ಎಂದೂ ಮಾತನಾಡಲಾರದವರು ಮಾತನಾಡಿದಾಗ ಎಷ್ಟು ಅದ್ಭುತವಾಗಿ ಮಾತನಾಡುತ್ತಾರೆ ಮತ್ತು ಅಂಥವರಿಗೆ ಮಾತನಾಡಲು ಹಚ್ಚುವವರು ಎಂಥ ಅನುಪಮ ವಾಕ್ ಶಕ್ತಿಯನ್ನು ಪಡೆದಿರುತ್ತಾರೆ ಎಂಬುದಕ್ಕೆ ೧೨ನೇ ಶತಮಾನದ ಶರಣರ ವಚನಗಳೇ ಸಾಕ್ಷಿ. ಅಂತೆಯೆ ಅವು ಇಡೀ ವಿಶ್ವದಲ್ಲೇ ಅನನ್ಯವಾಗಿವೆ. ಬದುಕು, ಸಾಹಿತ್ಯ ಮತ್ತು ದರ್ಶನದ ತ್ರಿವೇಣಿಸಂಗಮವಾಗಿವೆ. ಈ ತ್ರಿವೇಣಿಸಂಗಮದಲ್ಲಿ ನಮ್ಮ ಆತ್ಮಗಳು ಮಿಂದೆದ್ದಾಗ ಅವು ಖಂಡಿತವಾಗಿಯೂ ಪವಿತ್ರವಾಗುವವು.

ಬಸವಣ್ಣನವರು ಇದನ್ನೆಲ್ಲ ಹೇಗೆ ಸಾಧಿಸಿದರು ಎಂಬುದು ಜಗತ್ತಿನ ಆಶ್ಚರ್ಯಗಳಲ್ಲಿ ಒಂದಾಗಿದೆ. ಅವರು ಹೊರಲೋಕವನ್ನು ತೀವ್ರವಾಗಿ ಅನುಭವಿಸಿದರು ಮತ್ತು ಒಳಲೋಕವನ್ನು ತೀವ್ರವಾಗಿ ಅನುಭಾವಿಸಿದರು. ಈ ಎರಡೂ ಲೋಕಗಳ ಮೂಲ ಸೆಲೆ ಒಂದೇ ಎಂಬುದನ್ನು ಬಹುಬೇಗ ಅರಿತುಕೊಂಡರು. ಒಳಗೆ ಅನುಭಾವ ನೀಡುವ ಪರವಸ್ತುವಿದೆ; ಹೊರಗೆ ಅನುಭವ ನೀಡುವ ವಸ್ತುವಿದೆ. ಪರವಸ್ತುವಿನಿಂದ ವಸ್ತುವಿನ ನಿರ್ಮಾಣವಾಗಿದೆ. ಆದ್ದರಿಂದ ವಸ್ತು ಒಂದಿಲ್ಲೊಂದು ದಿನ ಪರವಸ್ತುವಿನಲ್ಲಿ ಲಯವಾಗಲೇ ಬೇಕು. ಪರವಸ್ತು ಚೈತನ್ಯಮಯವಾಗಿದೆ. ವಸ್ತು ಭೌತಿಕಮಯವಾಗಿದೆ. ಚೈತನ್ಯದಿಂದ ವಸ್ತುವಿನ ನಿರ್ಮಾಣವಾದ ಕಾರಣ ಚೈತನ್ಯ ಬಿಟ್ಟು ವಸ್ತುವಿಲ್ಲ. ಆದ್ದರಿಂದ ಚೈತನ್ಯಾತ್ಮಕ ಭೌತಿಕವಾದವೇ ನಿಜವಾದ ತತ್ತ್ವಜ್ಞಾನ. ಬಸವಣ್ಣನವರ ಈ ತತ್ತ್ವಜ್ಞಾನ ವಿಶಿಷ್ಟವಾಗಿದೆ. ಪರಿಪೂರ್ಣವಾಗಿದೆ. ಸೃಷ್ಟಿಕರ್ತ ಅದ್ವೈತ. ಸೃಷ್ಟಿ ದ್ವೈತ. ಈ ದ್ವೈತವಾದ ಬ್ರಹ್ಮಾಂಡವೆಂಬ ಸೃಷ್ಟಿಗೆ ಲಯ ಉಂಟಾದಾಗ, ಶೂನ್ಯದಿಂದ ಬಂದ ಅದು ಶೂನ್ಯವನ್ನೇ ಸೇರುವುದು. ಅದ್ವೈತವು ದ್ವೈತ ರೂಪ ತಾಳಿ ಅದ್ವೈತದಲ್ಲೇ ಕೊನೆಗೊಳ್ಳುವುದು. ಇದು ಪರಮಸತ್ಯ. ಈ ಪರಮಸತ್ಯದ ಜೊತೆ ಮಾನವರು ಬದುಕಬೇಕಾದರೆ ತಮ್ಮ ಜಾತಿ, ವರ್ಗ, ವರ್ಣ, ಜ್ಞಾನ ಮತ್ತು ಪದವಿಯ ಅಹಂಕಾರದಿಂದ ಹೊರಬರಬೇಕಾಗುತ್ತದೆ. ಈ ಜಗತ್ತು ಜಾತಿ ಮತ್ತು ವರ್ಗ ಕೇಂದ್ರಿತ ಅಲ್ಲ. ಮಾನವಕೇಂದ್ರಿತವೂ ಅಲ್ಲ. ಸಕಲಜೀವಕೇಂದ್ರಿತವಾದ ಜಗತ್ತಿದು ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸತ್ಯವನ್ನು ಒಪ್ಪಿಕೊಂಡಾಗ ಅದರಂತೆ ನಡೆಯಬೇಕಾಗುತ್ತದೆ. ಹಾಗೆ ನಡೆಯುವುದೆಂದರೆ ಬಸವಣ್ಣನವರು ಹೇಳುವ "ಜೀವಜಾಲದಲ್ಲಿದೆ ಚರಾಚರವೆಲ್ಲ" ಎಂಬ ಜ್ಞಾನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಪ್ರಾಣಿಲೋಕ, ಪಕ್ಷಿಲೋಕ ಮತ್ತು ಸಸ್ಯಲೋಕವಷ್ಟೇ ಅಲ್ಲದೆ ಕಲ್ಲುಮಣ್ಣು, ಖನಿಜ ಪದಾರ್ಥಗಳೂ ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳು ಕೂಡ ಜೀವಜಾಲದ ಒಳಗಡೆ ಬರುತ್ತವೆ. ಇಂದಿನ ಪರಿಸರ ವಿಜ್ಞಾನಿಗಳು ಹೇಳುವ ಲೈಫ್ ವೆಬ್‌ಗೆ ಸಂವಾದಿಯಾದ ಪದವನ್ನು ಬಸವಣ್ಣನವರು ೧೨ನೇ ಶತಮಾನದಲ್ಲೇ ಬಳಸಿದ್ದಾರೆ. ಚೈತನ್ಯಾತ್ಮಕ ಭೌತಿಕವಾದದಲ್ಲಿ ನಂಬಿಕೆಯುಳ್ಳವರು ಜೀವಜಾಲ ಸಮತೋಲನದ ಬಗ್ಗೆ ಕಾಳಜಿ ವಹಿಸಲೇಬೇಕು. ಬಸವಣ್ಣನವರು ಮತ್ತು ಇತರ ಶರಣರು ಪ್ರತಿಯೊಂದರ ಬಗ್ಗೆಯೂ ಕಾಳಜಿ ಹೊಂದಿದ್ದರು. ಈ ಜೀವಜಾಲದ ಪರಿಕಲ್ಪನೆಯಲ್ಲಿ ಎಲ್ಲ ಮಾನವರಷ್ಟೇ ಅಲ್ಲದೆ ಪಶು, ಪಕ್ಷಿ, ಸಸ್ಯ ಮತ್ತು ಕಲ್ಲುಮಣ್ಣು ಕೂಡ ಮಹತ್ವದ ವಸ್ತುಗಳಾಗುತ್ತವೆ. ಏಕೆಂದರೆ ಕಲ್ಲಿನಲ್ಲೂ ಚೈತನ್ಯವಿದೆ. ಪ್ರತಿ ಅಣುವಿನಲ್ಲೂ ಚೈತನ್ಯವಿದೆ. ಇದಕ್ಕೆ ಕಾರ್ಲ್ ಮಾರ್ಕ್ಸ್ "ಮ್ಯಾಟರ್ ಇನ್ ಮೋಷನ್" ಎಂದು ಕರೆದಿದ್ದಾನೆ. ಶರಣರು ಜೀವಾತ್ಮಭಾವದಿಂದ ವಸ್ತುಗಳನ್ನು ನೋಡುತ್ತಾರೆ. ಅಂತೆಯೆ ಸಕಲ ಜೀವಾತ್ಮರಿಗೆ ಲೇಸನೆ ಬಯಸುತ್ತಾರೆ.

ಯಾವುದೇ ತೆರನಾದ ನೈಸರ್ಗಿಕ ಸಂಪತ್ತನ್ನು ಹಾಳು ಮಾಡಬಾರದು. ಜಲಮಾಲಿನ್ಯ ಮಾಡಬಾರದು, ವಾಯುಮಾಲಿನ್ಯ ಮಾಡಬಾರದು. ಅರಣ್ಯನಾಶ ಮಾಡಬಾರದು. ಭೂಮಿಯ ತನ್ನ ಸತ್ವ ಕಳೆದುಕೊಳ್ಳುವಂತೆ ಮಾಡಬಾರದು. ಜಾತಿಸಂಘರ್ಷ, ಕೋಮುಗಲಭೆ, ಭಯೋತ್ಪಾದನೆ, ಯುದ್ಧ ಮುಂತಾದ ಕ್ರೂರ ಕೃತ್ಯಗಳಲ್ಲಿ ತೊಡಗಬಾರದು. ಎಲ್ಲವನ್ನೂ ಎಲ್ಲರನ್ನೂ ಆತ್ಮಸಾಂಗತ್ಯದಿಂದ ಕಾಣಬೇಕು. ಸಂಗ್ರಹಬುದ್ಧಿ ಇರಬಾರದು. ಇಡೀ ಬ್ರಹ್ಮಾಂಡವನ್ನು ದೇವರ ಪ್ರಸಾದವೆಂದು ಭಾವಿಸಬೇಕು. ನಮಗೆ ಬೇಕಾದ ವಸ್ತುಗಳನ್ನೆಲ್ಲ ಪವಿತ್ರಭಾವದಿಂದ ಸ್ವೀಕರಿಸುವ ಮನಸ್ಥಿತಿಯನ್ನು ತಲುಪಬೇಕು. ಒಂದು ಬೊಗಸೆ ನೀರನ್ನು ದೇವರ ಕಾಣಿಕೆ ಎಂದು ಕುಡಿಯುವಾಗ ಅದು ಅಮೃತವೆನಿಸುತ್ತದೆ. ವಿಜ್ಞಾನಿಗಳು ನೀರನ್ನು ೨ಎಚ್೨ + ಓ೨ ಎಂದು ಬೇರ್ಪಡಿಸಬಹುದು. ಆದರೆ ಹೈಡ್ರೋಜನ್ ಮತ್ತು ಆಕ್ಸಿಜನ್ ಕೂಡಿಸಿ ಒಂದು ಬೊಗಸೆ ನೀರನ್ನು ಸೃಷ್ಟಿಸಲಾರರು. ಇದರ ಅರಿವು ಆದಾಗ ನಮಗೆ ನೀರಿನ ಮಹತ್ವ ಗೊತ್ತಾಗುವುದು. ಅದೇ ರೀತಿ ಪ್ರಯೋಗಾಲಯದಲ್ಲಿ ಒಂದು ಜೋಳದ ಕಾಳನ್ನು ಕೂಡ ತಯಾರಿಸಲು ಸಾಧ್ಯವಿಲ್ಲ. ಈ ಭೂಮಿ ರೂಪುಗೊಳ್ಳುವಾಗ ಇದರಲ್ಲಿ ಯಾವುದೇ ಜೀವಿಗಳು ಇರಲಿಲ್ಲ. ತದನಂತರದಲ್ಲಿ ಎಲ್ಲವೂ ಭೂಮಿ ಮತ್ತು ಭೂಮಿಯ ಮೇಲಿನ ನೀರಿನಿಂದ ಉದ್ಭವವಾಗಿವೆ. ಹಾವು, ಕ್ರಿಮಿಕೀಟ, ಚೇಳು, ಹುಲಿ, ಚಿಗರೆ ಮೊದಲು ಮಾಡಿ ಎಲ್ಲ ಜಾತಿ ಜನಾಂಗ ಮತ್ತು ಧರ್ಮಗಳ ಜನರಿಗೆ ಭೂಮಿಯೇ ತಾಯಿಯ ಸ್ಥಾನದಲ್ಲಿದೆ. ಅಂದಮೇಲೆ ಈ ಭೂಮಿಯ ಮೇಲೆ ಸಕಲ ಜೀವಿಗಳಿಗೆ ಮಾನವರಷ್ಟೇ ಹಕ್ಕಿದೆ. ಎಲ್ಲ ಮಾನವರು ಕೂಡ ಮೇಲುಮ ಕೀಳು ಎನ್ನದೆ ಸಮಾನವಾದ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದಲೇ ಶರಣರ ಸಮತಾ ತತ್ತ್ವ ಎಲ್ಲರೀತಿಯಿಂದಲೂ ಶ್ರೇಷ್ಠವಾಗಿದೆ.

ಇಂಥ ಸಮಾಜದಲ್ಲಿ ಯಾರೂ ಏನನ್ನೂ ವೈಯಕ್ತಿಕ ನೆಲೆಯಲ್ಲಿ ಸಂಗ್ರಹ ಮಾಡುವುದಿಲ್ಲ. ಯಾವ ವಸ್ತುವನ್ನೂ ಹಾಳುಮಾಡುವುದಿಲ್ಲ. ಒಂದುವೇಳೆ ಈ ಶರಣಸಮಾಜ ವಿಶ್ವಸಮಾಜವಾದರೆ ವಿಶ್ವದಲ್ಲಿ ಸಾವಿರಾರು ಕೋಟಿ ಜನಸಂಖ್ಯೆಯಾದರೂ ಶಾಂತಿ ಸಮಾಧಾನದಿಂದ ಬದುಕಲು ಸಾಧ್ಯ. ಇಂಥ ಸಮಾಜ ನಿರ್ಮಾಣಕ್ಕಾಗಿಯೇ ಬಸವಣ್ಣನವರು "ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ" ಎಂದು ಹೇಳಿದ್ದಾರೆ. "ಬಟ್ಟೆ (ದಾರಿ)ಯಲ್ಲಿ ಹೊನ್ನ ವಸ್ತ್ರ ಬಿದ್ದಿದ್ದರೆ, ನಾ ಕೈಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ" ಎಂದು ಕಸಗುಡಿಸುವ ಸತ್ಯಕ್ಕ ದೇವರಿಗೆ ಹೇಳುತ್ತಾಳೆ. "ಆಸೆ ಎಂಬುದು ಭವದ ಬೀಜ" ಎಂದು ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ತಿಳಿಸಿದ್ದಾಳೆ. "ಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೇ ಅಯ್ಯಾ" ಎಂದು ಆಯ್ದಕ್ಕಿ ಲಕ್ಕಮ್ಮ, ಹೆಚ್ಚು ಅಕ್ಕಿ ತಂದ ಗಂಡ ಆಯ್ದಕ್ಕಿ ಮಾರಯ್ಯನವರನ್ನು ಪ್ರಶ್ನಿಸುತ್ತಾಳೆ. "ಅರ್ಥವೆಂಬುದೇ ಪಾಪ ಬೇರೆ ಪಾಪವಿಲ್ಲ ಕಂಡಯ್ಯಾ" ಎಂದು ಹಾವಿನಾಳ ಕಲ್ಲಯ್ಯನವರು ಸಾರಿದ್ದಾರೆ. "ಆನೆ ಕುದುರೆ ಭಂಡಾರವಿರ್ದಡೇನೊ? ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ." ಎಂದು ಮೋಳಿಗೆ ಮಾರಯ್ಯನವರು ನುಡಿದಿದ್ದಾರೆ. ಇವರು ಪೂರ್ವಾಶ್ರಮದಲ್ಲಿ ಕಾಶ್ಮೀರದಲ್ಲಿನ ಸವಾಲಾಕ್ಷದ ದೊರೆ ಮಹಾದೇವ ಭೂಪಾಲ ಆಗಿದ್ದರು. ಎಲ್ಲ ಬಿಟ್ಟು ರಾಣಿ ಗಂಗಾದೇವಿ (ಮೋಳಿಗೆ ಮಹಾದೇವಿ) ಜೊತೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕದಲ್ಲಿ ತೃಪ್ತಿ ಪಟ್ಟರು. ಆದರೆ ಸಾಮ್ರಾಜ್ಯಶಾಹಿಗಳು ಸುಲಿಗೆಯನ್ನೇ ಬದುಕಿನ ಮಂತ್ರವಾಗಿಸಿದ್ದಾರೆ. ಸಂಪತ್ತಿಗಾಗಿ ಬಡರಾಷ್ಟ್ರಗಳ ಶೋಷಣೆ ಮಾಡುತ್ತಿದ್ದಾರೆ. ಪ್ರತಿಭಟಿಸಿದ ದೇಶಗಳ ಮೇಲೆ ಯುದ್ಧ ಸಾರುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ಮಾರುವ ಉದ್ದೇಶದಿಂದ ದೇಶ ದೇಶಗಳ ಮಧ್ಯೆ ಯುದ್ಧಕ್ಕಾಗಿ ಪ್ರಚೋದಿಸುತ್ತಿದ್ದಾರೆ. ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವಿನಾಳ ಕಲ್ಲಯ್ಯನವರ ಅರ್ಥವಿರೋಧಿ ಮಾತು ಎಷ್ಟೊಂದು ಅರ್ಥಪೂರ್ಣವಾಗಿ ಧ್ವನಿಸುತ್ತದೆ! "ಅಳುಪಿಲ್ಲದಿರ್ಪುದೇ ವ್ರತ" ಎಂದು ಸೊಡ್ಡಳ ಬಾಚರಸ ಹೇಳಿದ್ದಾನೆ. ಬಯಕೆ ಇಲ್ಲದೆ ಬದುಕುವುದೆ ಆತನ ವ್ರತವಾಗಿತ್ತು. ಹೀಗೆ ಬದುಕುವ ಶರಣರ ಸಮಾಜ ವಿಶ್ವದಾದ್ಯಂತ ಬೆಳೆದಾಗ ಮಾತ್ರ ಈ ಜಗತ್ತು ವಿನಾಶದ ಅಂಚಿನಿಂದ ಪಾರಾಗಲು ಸಾಧ್ಯ.

ಶರಣಸಮಾಜದಲ್ಲಿ ಎಲ್ಲರೂ ಕಾಯಕ ಮಾಡಲೇಬೇಕು. ಕುಳಿತು ಉಣ್ಣುವವರಿಗೆ ಅಲ್ಲಿ ಸ್ಥಾನವಿಲ್ಲ. ಕಾಯಕದಿಂದ ಬಂದು ಸಂಗ್ರಹವಾಗುವುದನ್ನು ಐಶಾರಾಮಿ ಜೀವನಕ್ಕೆ ಬಳಸದೆ ದಾಸೋಹಂ ಭಾವದಿಂದ ಸಮಾಜಕ್ಕಾಗಿ ಸಂಗ್ರಹಿಸುವ ಶಿವನಿಧಿಗೆ ಕೊಡಬೇಕು. ಯಾವುದೇ ಸತ್ಯಶುದ್ಧ ಕಾಯಕದ ಶಿವಶರಣರು ಶರಣಸಂಕುಲದಲ್ಲಿ ಸಮಾನ ಗೌರವ ಹೊಂದಿದವರಾಗಿರುತ್ತಿದ್ದರು. ಅಲ್ಲಿ ಜಾತಿಗಳು ಅಳಿದು ಕಾಯಕಧರ್ಮ ಮಾತ್ರ ಉಳಿದಿತ್ತು. ಇಂದು ಕೂಡ ಸಹಸ್ರಾರು ಜಾತಿ ಉಪಜಾತಿಗಳಿಂದ ತುಂಬಿದ ಭಾರತೀಯ ಸಮಾಜದಲ್ಲಿ ಬಸವಣ್ಣನವರ ಸಮತಾ ಸಮಾಜವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಆದರೆ ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲೇ ಅಂಥದೊಂದು ಸಮಾಜವನ್ನು ನಿರ್ಮಿಸಿ ತೋರಿಸಿ ವಿಶ್ವಕ್ಕೇ ಮಾದರಿಯಾದರು.

ಅಸ್ಪೃಶ್ಯರ ಮತ್ತು ಕೆಳವರ್ಗದ ಕಾಯಕಜೀವಿಗಳಲ್ಲಿ ಬದುಕುವ ಸ್ಥೈರ್ಯ ತುಂಬಿ ಭವಿಷ್ಯದ ಬಗ್ಗೆ ಆಶಾಭಾವ ಮೂಡಿಸುವುದಕ್ಕಾಗಿ ಕೆಳಜಾತೀಕರಣಕ್ಕೆ ಒಳಗಾದ ಒಬ್ಬನೇ ಒಬ್ಬ ಮಹಾಪುರುಷನೆಂದರೆ ಬಸವಣ್ಣ. ಅನೇಕ ಮಹಾತ್ಮರು ದಲಿತರಿಗಾಗಿ ಜೀವ ತೆಯ್ದಿದ್ದಾರೆ. ಆದರೆ ಬಸವಣ್ಣನವರ ಹಾಗೆ ಕೆಳಜಾತೀಕರಣಕ್ಕೆ ಒಳಗಾದ ಇನ್ನೊಂದು ಉದಾಹರಣೆ ಇಲ್ಲ. ಬಸವಣ್ಣನವರು ಆರಂಭಿಸಿದ ಸರ್ವಸಮತಾ ಚಳವಳಿ ಅನೇಕ ದೃಷ್ಟಿಯಿಂದ ಅದ್ವಿತೀಯವಾಗಿದೆ. ದಲಿತರು, ಮಹಿಳೆಯರು ಮತ್ತು ಇತರ ಕಾಯಕಜೀವಿಗಳೆಲ್ಲ ಒಂದಾಗಿ ನವಸಮಾಜಕ್ಕೆ ನಾಂದಿ ಹಾಡುವಂಥ ಶರಣಸಂಕುಲವನ್ನು ಸೃಷ್ಟಿಸಿ ಕಾಯಕ ಮತ್ತು ದಾಸೋಹ ಪ್ರಜ್ಞೆಯೊಂದಿಗೆ ಒಂದಾಗಿ ಬದುಕಿದ್ದು ಇಂದಿಗೂ ಮಾರ್ಗದರ್ಶಿಯಾಗಿದೆ. ಪ್ರತಿಯೊಬ್ಬರು ಸಮರತಿ (ಲಿಂಗ ಸಮಾನತೆ) ಸಮಕಳೆ (ಜಾತಿ ಮತ್ತು ವರ್ಣ ಸಮಾನತೆ) ಸಮಸುಖ (ವರ್ಗ ಸಮಾನತೆ) ಅರಿಯಬೇಕೆಂಬುದು ಬಸವಣ್ಣನವರ ಒತ್ತಾಸೆಯಾಗಿದೆ.

೧೨ನೇ ಶತಮಾನದ ಐರೋಪ್ಯ ರಾಷ್ಟ್ರಗಳಲ್ಲಿ ಇಂಥ ಸಮಾನತೆಯ ಕನಸು ಕೂಡ ಬಿದ್ದಿದ್ದಿಲ್ಲ. ಅನುಭವ ಮಂಟಪದಂಥ ಸರ್ವ ಜಾತಿ ಜನಾಂಗಗಳ ಸಮೂಹ ಪ್ರಜ್ಞೆಯ ಸಮಾಜೋ ಧಾರ್ಮಿಕ ಸಂಸತ್ತಿನ ಪ್ರಜ್ಞೆಯೂ ಇರಲಿಲ್ಲ. ಮಹಿಳೆಯರ ಶಿಕ್ಷಣ, ಕೆಳಜಾತಿಗಳ ಶಿಕ್ಷಣ, ಮತ್ತು ವಯಸ್ಕರ ಶಿಕ್ಷಣದ ವಿಚಾರ ಕೂಡ ಹೊಳೆದಿರಲಿಲ್ಲ. ಬಸವಣ್ಣನವರ ನೇತೃತ್ವದಲ್ಲಿ ಪ್ರಜಾಪ್ರಭುತ್ವದ ಈ ಎಲ್ಲಾ ಪ್ರಯೋಗಗಳು ಕಲ್ಯಾಣದಲ್ಲಿ ನಡೆದದ್ದೊಂದು ವಿಶೇಷ.

ಗುಲಾಮಗಿರಿ ಮೊದಲು ಮಾಡಿ ಭಾರತದ ಎಲ್ಲ ದುರಂತಗಳಿಗೆ ಜಾತಿ ವ್ಯವಸ್ಥೆಯೇ ಕಾರಣವಾಗಿದೆ. ಜಾತಿಯನ್ನು ಮೀರಿ ಬಹುಜನರ ಹಿತಕ್ಕಾಗಿ ಚಿಂತಿಸುವ ಕ್ರಮವನ್ನು ಭಗವಾನ ಬುದ್ಧ ೨೬೦೦ ವರ್ಷಗಳ ಹಿಂದೆ ತೋರಿಸಿಕೊಟ್ಟ. ಬಸವಣ್ಣನವರು ೮೫೦ ವರ್ಷಗಳ ಹಿಂದೆ ಅದನ್ನೊಂದು ಚಳವಳಿಯಾಗಿ ರೂಪಿಸಿದರು. ಜಾತಿ ವಿನಾಶ ಮಾಡದೆ ಏನನ್ನೂ ಸಾಧಿಸಲಿಕ್ಕಾಗದು ಎಂಬುದು ಬಸವಣ್ಣನವರ ದೃಢ ನಿರ್ಧಾರವಾಗಿತ್ತು. "ಕುಲಮದಕ್ಕೆ ಹೋರಿ ಜಂಗಮಭೇದವ ಮಾಡುವೆ, ಫಲವೇನು? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ." ಹೀಗೆ ಲಿಂಗಾರ್ಚನೆಯು ಭೇದವನ್ನು ಅಳಿಸಿಹಾಕುವ ಉದ್ದೇಶವನ್ನು ಹೊಂದಿದೆ. "ಕುಲವನರಿಸುವರೆ ಶರಣರಲ್ಲಿ ಜಾತಿಸಂಕರವಾದ ಬಳಿಕ" ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಜಾತ್ಯತೀತ ಮತ್ತು ವರ್ಗರಹಿತ ಸಮಾಜ ನಿರ್ಮಾಣ ಮಾಡುವುದೇ ಬಸವಣ್ಣನವರ ಉದ್ದೇಶವಾಗಿತ್ತು. ಶರಣರು ಇಂಥ ಸುಂದರವಾದ ನವಸಮಾಜದ ನಿರ್ಮಾಣಕ್ಕಾಗಿ ಜೀವ ಸವೆಸಿದರು.

ಎಲ್ಲ ಜಾತಿ ಜನಾಂಗಗಳ ಕಾಯಕಪ್ರತಿಭೆಯೊಂದಿಗೆ ನವಮಾನವನ ಸೃಷ್ಟಿಮಾಡುವ ಕನಸನ್ನು ಬಸವಣ್ಣನವರು ಕಂಡಿದ್ದರು. "ಹೊಲೆಯ ಹೊಲಬಿಗನಾದಡೆ ಅವನ ಹೊರೆಯಲ್ಲಿಪ್ಪುದು ಲೇಸು ಕಂಡಯ್ಯ" ಎಂದು ಬಸವಣ್ಣನವರು ಹೇಳಿದ್ದಾರೆ. ಬದುಕಿನ ದಾರಿ ತೋರಿಸುವ ಶಕ್ತಿ ಅಸ್ಪೃಶ್ಯನಿಗೆ ಇದ್ದಾಗ ಅವನ ಜೊತೆಗಿರಬೇಕು ಎಂದು ಬಸವಣ್ಣನವರು ತಿಳಿಸುತ್ತಾರೆ. "ಭಕ್ತಿ ಇಲ್ಲದ ಬಡವ ನಾನಯ್ಯ. ಕಕ್ಕಯ್ಯನ ಮನೆಯಲ್ಲೂ ಬೇಡಿದೆ. ಚೆನ್ನಯ್ಯನ ಮನೆಯಲ್ಲೂ ಬೇಡಿದೆ." ಎಂದು ಹೇಳುವ ಬಸವಣ್ಣನವರು ಎಲ್ಲ ಜನಜಾತಿಗಳನ್ನು ಸಮಾನವಾಗಿ ಕಂಡು ಅವುಗಳ ಅನುಭವವನ್ನು ಒಟ್ಟಾಗಿಸುತ್ತ ಮೇಲುಕೀಳಿಲ್ಲದ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಅನೇಕ ವಿಧವಾಗಿ ಚಿಂತಿಸಿದರು. ಹೀಗೆ ಎಲ್ಲ ಸ್ತರದ ಜನರ ಪ್ರತಿಭೆ ಮತ್ತು ನೋವಿನ ಅನುಭವವನ್ನು ತಮ್ಮದಾಗಿಸಿಕೊಂಡರು. ಸರ್ವಜನಾಂಗಗಳ ಅನುಭವದ ಸಾರವನ್ನು ತಮ್ಮ ಪ್ರತಿಭೆ ಮತ್ತು ಆತ್ಮಜ್ಞಾನದ ಜೊತೆ ಬೆರೆಸುವುದರ ಮೂಲಕ ಮಹಾನುಭಾವಿಯಾದರು.

"ಜಲ ತಪ್ಪಿದ ಮತ್ಸ್ಯ ಬದುಕೂದೇ ಸೋಜಿಗ. ಗಣತಿಂತಿಣಿಯೊಳಗಿರಿಸೆನ್ನ ಲಿಂಗವೆ" ಎಂದು ಎಲ್ಲಾ ಜನಸಮುದಾಯಗಳ ಜೊತೆಗೆ ಇರುವುದಾಗಿ ಘೋಷಿಸಿದರು. ದೇವಸಹಿತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡೆನಾದಡೆ ನಿಮ್ಮಾಣೆ! ನಿಮ್ಮ ಪುರಾತನರಾಣೆ! ತಲೆದಂಡ! ತಲೆದಂಡ! ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ ನಿಮ್ಮ ರಾಣಿವಾಸದಾಣೆ." ಎಂದು ಬಸವಣ್ಣನವರು ಹೇಳುವಲ್ಲಿ ಯಾವ ಕಾಯಕವೂ ಮೇಲಲ್ಲ, ಯಾವ ಕಾಯಕವೂ ಕೀಳಲ್ಲ ಎಂಬುದನ್ನು ಸೂಚಿಸಿದ್ದಾರೆ. ನಮ್ಮ ಕಾಯಕ ನಿಷ್ಠೆಯೇ ನಮ್ಮನ್ನು ದೇವರಾಗಿಸುವುದು. ಅದಕ್ಕೂ ಮಿಗಿಲಾಗಿಸುವುದು. ಅಂತೆಯೆ "ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ; ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ" ಎಂದು ಬಸವಣ್ಣನವರು ಸಾರಿದ್ದಾರೆ. ಶ್ರೇಣೀಕೃತ ಮನುವಾದಿ ಸಮಾಜದಲ್ಲಿ ಕಟ್ಟಕಡೆಯ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ತನ್ನ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮತ್ತು ಎಲ್ಲ ಜೀವಿಗಳಿಗೆ ಸೇವೆ ಸಲ್ಲಿಸುವ ಹಂಬಲದ ಮೂಲಕ ಎಷ್ಟೊಂದು ವ್ಯಕ್ತಿತ್ವ ವಿಕಸನ ಹೊಂದುತ್ತಾನೆಂದರೆ ಆತ ದೇವರಿಗಿಂತಲೂ ದೊಡ್ಡವನಾಗಿಬಿಡುತ್ತಾನೆ. ಇಂಥ ವ್ಯಕ್ತಿತ್ವವಿಕಸನ ಹೊಂದಿದ್ದ ಮಾದಾರ ಚೆನ್ನಯ್ಯನವರನ್ನು ಬಸವಣ್ಣನವರು ತಮ್ಮ ಆರಾಧ್ಯ ದೇವರಾದ ಕೂಡಲಸಂಗಮದೇವರಿಗಿಂತಲೂ ಮೇಲಿಟ್ಟು ನೋಡುತ್ತಾರೆ. ಹೀಗೆ ಕಟ್ಟಕಡೆಯ ಮನುಷ್ಯನೊಬ್ಬ ಉನ್ನತ ವ್ಯಕ್ತಿತ್ವ ಹೊಂದಿ ದೇವರಿಗಿಂತ ದೊಡ್ಡವನಾದ ಉದಾಹರಣೆ ಜಗತ್ತಿನ ಯಾವ ಧರ್ಮದಲ್ಲೂ ಕಾಣುವುದಿಲ್ಲ. ಇಂಥ ಕಾರಣಗಳಿಂದಲೇ ಬಸವಣ್ಣನವರು ಅದ್ವಿತೀಯರಾಗುತ್ತಾರೆ. ಜಗತ್ತಿನ ಎಲ್ಲ ದಾರ್ಶನಿಕರ ಮಧ್ಯೆ ವಿನಮ್ರ ಭಕ್ತನಾಗಿ ಕಂಗೊಳಿಸುತ್ತಾರೆ.

ಲಿಂಗದೀಕ್ಷೆ ಎಂಬುದು ಭೇದವಿಲ್ಲದ ಸಮಾಜವನ್ನು ಸೃಷ್ಟಿಸುವ ಪ್ರಕ್ರಿಯೆ. "ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ" ಎಂದು ಬಸವಣ್ಣನವರು ಹೇಳುತ್ತಾರೆ. ಲಿಂಗದೀಕ್ಷೆಯು ಕೇವಲ ಜಾತಿಗಳನ್ನಷ್ಟೇ ನಾಶಗೊಳಿಸುವುದಿಲ್ಲ; ಅನೈತಿಕ ಸಂಬಂಧದಿಂದ ಜನಿಸಿದವರಿಗೆ ಅಂಟಿದ ಸಾಮಾಜಿಕ ಕಳಂಕವನ್ನೂ ಹೊಡೆದೋಡಿಸುತ್ತದೆ ಎಂದು ಈ ಮೂಲಕ ಘೋಷಿಸಿದ್ದಾರೆ. ಕೆಳಜಾತಿಗಿಂತಲೂ ಅತೀತರಾಗಿ ಅನೈತಿಕ ಸಂಬಂಧದಿಂದ ಹುಟ್ಟಿದ ಮಕ್ಕಳ ಕಡೆಗೂ ಬಸವಣ್ಣನವರ ಜೀವಕಾರುಣ್ಯ ಹರಿಯುವ ಕ್ರಮ ಹೃದಯಸ್ಪರ್ಶಿಯಾಗಿದೆ. "ಚೆನ್ನಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ" ಎಂದು ಹೇಳುವ ಮೂಲಕ ಬಸವಣ್ಣನವರು ಕೆಳಜಾತಿಯವರೂ ತಿರಸ್ಕರಿಸುವ ಅನೈತಿಕ ಸಂಬಂಧದಿಂದ ಜನಿಸಿದ ಮಗುವಾಗಿ ನಿಂತು ಅಂಥ ಮಕ್ಕಳ ಹಕ್ಕುಗಳ ಪ್ರತಿಪಾದಕರಾಗುತ್ತಾರೆ. "ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ" ಎಂದು ಬಸವಣ್ಣನವರು ಹೇಳುವ ಮೂಲಕ ಬ್ರಾಹ್ಮಣ್ಯದ ಕರ್ಮಗಳಿಂದ ಬಿಡಿಸಿಕೊಂಡು ಕಾಯಕಜೀವಿಗಳಲ್ಲಿ ಒಂದಾಗಿಹೋಗುತ್ತಾರೆ.

ಮೇಲು ಕೀಳು ಸೃಷ್ಟಿಸುವ ಮತ್ತು ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎಂಬ ಯಥಾಸ್ಥಿತಿವಾದವನ್ನು ಪ್ರತಿಪಾದಿಸುವ ಕರ್ಮ ಸಿದ್ಧಾಂತವನ್ನು ಹಾಗೂ ಪುಣ್ಯ ಪಾಪ ಮತು ಸ್ವರ್ಗ ನರಕಗಳನ್ನು ಸೃಷ್ಟಿಸುವ ಮೂಲಕ ಬಹುಪಾಲು ಜನಸಾಮಾನ್ಯರನ್ನು ಅಜ್ಞಾನದಲ್ಲಿಟ್ಟು ಸುಲಿಗೆ ವ್ಯವಸ್ಥೆಯನ್ನು ರೂಪಿಸಿದ ಮನುಧರ್ಮವನ್ನು ಬಸವಣ್ಣನವರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. "ಒಮ್ಮೆ ಶರಣೆಂದಡೆ ಪಾಪ ಕರ್ಮ ಓಡುವವು" ಎಂದು ಧೈರ್ಯ ತುಂಬುತ್ತಾರೆ. "ಮನೆಯೊಳಗೆ ಕತ್ತಲೆ ಹರಿಯದೊಡಾ ಜ್ಯೋತಿಯದೇಕೊ? ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ ಕರ್ಮ ಹರಿಯದೊಡಾ ಪೂಜೆಯದೇಕೊ?" ಎಂದು ಹೇಳುವ ಮೂಲಕ ಇಷ್ಟಲಿಂಗ ಪೂಜೆ ಇರುವುದೇ ಲೋಕದ ಜನರ ಬದುಕನ್ನು ನರಕ ಮಾಡಿದ ಕರ್ಮ ಸಿದ್ಧಾಂತವನ್ನು ಹೊಡೆದೋಡಿಸಲು ಎಂಬುದನ್ನು ಸೂಚಿಸುತ್ತಾರೆ. ಪುಣ್ಯಪಾಪವೆಂಬ ಉಭಯ ಕರ್ಮವನಾರು ಬಲ್ಲರಯ್ಯಾ? ಇವನಾರುಂಬರು? ಕಾಯ ತಾನುಂಬಡೆ ಕಾಯ ತಾ ಮಣ್ಣು, ಜೀವ ತಾನುಂಬಡೆ ಜೀವ ತಾ ಬಯಲು" ಎಂದು ಹೇಳುವ ಮೂಲಕ ಪುಣ್ಯ ಪಾಪಗಳನ್ನು ಅಲ್ಲಗಳೆದಿದ್ದಾರೆ. ಬಸವಣ್ಣನವರ ಪ್ರಕಾರ ಲೋಕಹಿತವನ್ನುಂಟು ಮಾಡುವುದೇ ಪುಣ್ಯ. ಲೋಕಕ್ಕೆ ಹಾನಿಯನ್ನುಂಟು ಮಾಡುವುದೇ ಪಾಪ. ಇನ್ನು ಸ್ವರ್ಗ ನರಕಗಳಂತೂ ಇಲ್ಲವೇ ಇಲ್ಲ. "ಆಚಾರವೇ ಸ್ವರ್ಗ, ಅನಾಚಾರವೇ ನರಕ" ಎಂದು ಬಸವಣ್ಣನವರು ಸ್ವಷ್ಟಪಡಿಸಿದ್ದಾರೆ. ಸ್ವರ್ಗ ನರಕಗಳು ನಮ್ಮ ಸಂಸ್ಕಾರದಲ್ಲಿವೆ. ನಮ್ಮ ಮನಸ್ಸಿನಲ್ಲಿವೆ. ನಮ್ಮ ಸದ್ಭಾವನೆ ನಮ್ಮ ಮನಸ್ಸಿನಲ್ಲೇ ಸ್ವರ್ಗವನ್ನು ಸೃಷ್ಟಿಸುವುದು. ನಮ್ಮ ಕುಟಿಲತನದಿಂದಾಗಿ ನಾವು ನಮ್ಮ ಮನಸ್ಸಿನಲ್ಲೇ ನರಕವನ್ನು ಅನುಭವಿಸುವೆವು.

ಹೀಗೆ ಬಸವಣ್ಣನವರು ಮಾನವರನ್ನು ಎಲ್ಲ ರೀತಿಯ ಮೂಢನಂಬಿಕೆ ಮತ್ತು ಧಾರ್ಮಿಕ ಕಂದಾಚಾರದಿಂದ ಹೊರತಂದು ವಿಮೋಚನೆಗೊಳಿಸುತ್ತಾರೆ. ಪ್ರತಿಯೊಂದು ಧರ್ಮವು ಕರ್ಮಕಾಂಡ ಮತ್ತು ಜ್ಞಾನಕಾಂಡಗಳನ್ನು ಹೊಂದಿರುತ್ತದೆ. ಕರ್ಮಕಾಂಡವು ದೈನಂದಿನ ಆಚರಣೆಗೆ ಸಂಬಂಧಿಸಿದ್ದು. ಜ್ಞಾನಕಾಂಡವು ಧರ್ಮದ ಸಾರವಾಗಿದ್ದು ವಿಶ್ವಮಾನ್ಯವಾದುದು. ಜ್ಞಾನಕಾಂಡವು ಬೆಳೆದುನಿಂತ ಹೊಲವಾದರೆ ಕರ್ಮಕಾಂಡವು ಅದನ್ನು ರಕ್ಷಿಸುವುದಕ್ಕಾಗಿ ಇರುವ ಬೇಲಿ. ಆದರೆ ಬೇಲಿಯೇ ಎದ್ದು ಹೊಲ ಮೆಯ್ದಂತೆ ಧರ್ಮದ ಕರ್ಮಕಾಂಡವು ಜ್ಞಾನಕಾಂಡವನ್ನು ಮೆಯ್ಯತ್ತಿದೆ. ಹೀಗಾಗಿ ಧರ್ಮಗಳು ಕೊಲೆಗಡುಕರ ಮನೆಗಳಂತಾಗುತ್ತಿವೆ. ಜ್ಞಾನಕಾಂಡದ ಕರುಣೆ, ಪ್ರೀತಿ, ನಿರಹಂಕಾರ, ಪರೋಪಕಾರ, ಸಮತ್ವಪ್ರಜ್ಞೆ ಮತ್ತು ಭಕ್ತಿಭಾವ ಮಾಯವಾಗಿ ಜಾತಿಸಂಘರ್ಷ, ಕೋಮುಗಲಭೆ, ಭಯೋತ್ಪಾದನೆ ಮತ್ತು ಯುದ್ಧಗಳು ಹೆಚ್ಚುತ್ತಿವೆ. ಜ್ಞಾನಕಾಂಡವೇ ಪ್ರಧಾನವಾಗಿರುವ ಶರಣಧರ್ಮವು ಈ ಎಲ್ಲ ಅನಿಷ್ಟಗಳಿಗೆ ಮದ್ದಾಗಿದೆ. "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ." ಎಂದು ಹೇಳುವ ಮೂಲಕ ಬಸವಣ್ಣನವರು ಜ್ಞಾನಕಾಂಡವನ್ನು ಎತ್ತಿಹಿಡಿದಿದ್ದಾರೆ. ಅಂತೆಯೆ ಅವರು ಜಗಜ್ಜ್ಯೋತಿಯಾಗಿದ್ದಾರೆ. ಈ ಜ್ಯೋತಿ ಜಗತ್ತನ್ನು ಬೆಳಗುವಂಥ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಸರ್ವಸಮತ್ವದ ಸಮಾಜ ನಿರ್ಮಾಣಕ್ಕಾಗಿ ನವಮಾನವ ಸೃಷ್ಟಿಯ ಘನೋದ್ದೇಶವನ್ನು ಶರಣಧರ್ಮ ಹೊಂದಿದೆ. ಈ ಉದ್ದೇಶದ ಈಡೇರಿಕೆಗಾಗಿ ವೈಜ್ಞಾನಿಕ ಮನೋಭಾವದಿಂದ ಕೂಡಿದ ಹೊಸ ಜೀವನವಿಧಾನ, ಹೊಸ ಆರ್ಥಿಕ ನೀತಿ, ಹೊಸ ಸಾಮಾಜಿಕ ನಿಯಮಗಳು, ಹೊಸ ಜೀವನ ಮೌಲ್ಯಗಳು, ಹೊಸ ಸಾಮಾಜಿಕ ಸಂಬಂಧಗಳು, ಹೊಸ ದೇವರು (ಅಂದರೆ ಸೃಷ್ಟಿಕರ್ತನಾದ ಮೂಲದೇವರು. ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣು, ಅನಾದಿ ಮತ್ತು ಅನಂತವಾದ ದೇವರು) ಹೀಗೆ ಈ ಎಲ್ಲ ಸತ್ವಗಳಿಂದ ಕೂಡಿದ ಸನ್ಮಾರ್ಗವೊಂದರ ಸೃಷ್ಟಿಯಾಂಯಿತು. ಆ ಸನ್ಮಾರ್ಗ ಸಹಜವಾಗಿಯೇ ಜೀವನಧರ್ಮವಾಗಿ ರೂಪುಗೊಂಡಿತು. ಚಾತರ್ವರ್ಣ್ಯವನ್ನು ಪ್ರತಿಪಾದಿಸುವ ಮನುಧರ್ಮಕ್ಕೆ ಮತ್ತು ಮನುಧರ್ಮದ ಸಂರಕ್ಷಣೆಗಾಗಿ ಇರುವ ರಾಜಧರ್ಮಕ್ಕೆ ಈ ಜೀವನಧರ್ಮ ವಿರುದ್ಧವಾಗಿತ್ತು. ಒಬ್ಬನೇ ದೇವರು, ಒಂದೇ ಭೂಮಿ ಮತ್ತು ಒಂದೇ ಮಾನವಜನಾಂಗವೆಂದು ಸಾರುವ ಈ ಮಾನವಧರ್ಮ ಸಕಲಜೀವಾತ್ಮರಿಗೆ ಲೇಸನೇ ಬಯಸಿತು. ಆದರೆ ಈ ಮಾನವಧರ್ಮವನ್ನು ಮತ್ತು ಈ ಧರ್ಮದ ಅನುಯಾಯಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಕೆಂಗಣ್ಣಿನಿಂದ ನೋಡತೊಡಗಿದವು. ಮನುವಾದಿ ಧಾರ್ಮಿಕ ಮತ್ತು ರಾಜಕೀಯ ಪಟ್ಟಭದ್ರರಿಗೆ ಒಳ್ಳೆಯದನ್ನು ನೋಡುವ ತಾಳ್ಮೆ ಇರಲಿಲ್ಲ. ಏಕೆಂದರೆ ಸುಲಿಗೆ ಸಮಾಜದಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುವಂಥ ಪರಾವಲಂಬಿ ಜೀವಿಗಳು ಅವರು. ಧರ್ಮದ ಹೆಸರಿನಲ್ಲಿ ನಿರಂತರ ಶೋಷಣೆ ನಡೆದರೆ ಮಾತ್ರ ಅವರು ವಿಜೃಂಭಿಸಬಲ್ಲರು. ಅಂತೆಯೆ ಸುಲಿಗೆ ವ್ಯವಸ್ಥೆ ಮೇಲೆಯೆ ಧರ್ಮವನ್ನೂ ರಾಜ್ಯವನ್ನೂ ಕಟ್ಟುವುದಕ್ಕಾಗಿ ಷಡ್ಯಂತ್ರವನ್ನು ರೂಪಿಸುತ್ತ ಸಮಾಜದ ಮೇಲೆ ಹಿಡಿತ ಸಾಧಿಸುತ್ತಲೇ ಬಂದರು.

ಈ ಪರಾವಲಂಬಿಗಳು ದೇವರು, ಧರ್ಮ ಮತ್ತು ರಾಜಧರ್ಮದ ಹೆಸರಿನಲ್ಲಿ ನಿರಂತರ ಶೋಷಣೆಯನ್ನೇ ತಮ್ಮ ದೈನಂದಿನ ಕಾರ್ಯಚಟುವಟಿಕೆಯಾಗಿಸಿಕೊಂಡರು. ವರ್ಗಭೇದ, ವರ್ಣಭೇದ, ಜಾತಿಭೇದ, ಲಿಂಗಭೇದ, ಭಾಷಾಭೇದ, ದೇವಭೇದ, ಸಂಸ್ಕಾರಭೇದ- ಹೀಗೆ ಎಲ್ಲರೀತಿಯ ಭೇದಭಾವದಿಂದ ಕೂಡಿದ ಸಮಾಜವನ್ನು ಸೃಷ್ಟಿಸಿದರು.

ಶರಣರು ಈ ಪಟ್ಟಭದ್ರ ಹಿತಾಸಕ್ತಿಗಳ ಮತ್ತು ಯಥಾಸ್ಥಿತಿವಾದಿಗಳ ಅಸತ್ಯದ ನಿಲುವನ್ನು ಖಂಡಿಸಿದರು. ಮನುವಾದಿಗಳಿಗೆ ದೊಡ್ಡ ಸವಾಲಾದರು. ಜನಸಮುದಾಯದ ಮಧ್ಯೆ ಅಸಮಾನತೆಯ ಕಂದರಗಳನ್ನು ಸೃಷ್ಟಿಸಿದ ಮನುವಾದಿ ವೈದಿಕ ವ್ಯವಸ್ಥೆಯ ವಿರುದ್ಧ ಶರಣರು ತಾತ್ತ್ವಿಕ ನೆಲೆಯಲ್ಲಿ ಮತ್ತು ಅಹಿಂಸಾ ಮಾರ್ಗದಲ್ಲಿ ಸ್ಪಷ್ಟವಾದಿಗಳಾಗಿ ಹೋರಾಡಿದರು. ಈ ಹೋರಾಟವು ಜ್ಞಾನ ಮತ್ತು ಕ್ರಿಯೆಗಳಿಂದ ಕೂಡಿದ ಜೀವಕೇಂದ್ರಿತ ಪ್ರಜ್ಞೆಯ ಮಾನವತಾವಾದಿ ಹೋರಾಟವಾಗಿತ್ತು. ಸ್ವಾವಲಂಬನೆಯ ಹೋರಾಟವಾಗಿತ್ತು. ಮಾನವಘನತೆಯನ್ನು ಎತ್ತಿಹಿಡಿಯುತ್ತ ತಮ್ಮೊಳಗಿನ ಮಹಾಘನವನ್ನು ಅರಿಯುವ ಹೋರಾಟವಾಗಿತ್ತು. ವಸ್ತುಜಗತ್ತಿನ ಅನುಭವ ಮತ್ತು ಪರವಸ್ತು ಜಗತ್ತಿನ ಅನುಭಾವವನ್ನು ಒಟ್ಟಿಗೆ ಪಡೆಯುವ ಹೋರಾಟವಾಗಿತ್ತು. ಒಟ್ಟಾರೆ ಬದುಕಿನ ಸಾಕ್ಷಾತ್ಕಾರದ ಹೋರಾಟವಾಗಿತ್ತು. ಹಳೆಯ ಅಮಾನುಷ ವ್ಯವಸ್ಥೆಯನ್ನು ಸದ್ದುಗದ್ದಲವಿಲ್ಲದೆ ನಿರ್ನಾಮ ಮಾಡುತ್ತ ಹೊಸ ಮಾನವೀಯ ವ್ಯವಸ್ಥೆಯೊಂದನ್ನು ಜಾರಿಗೊಳಿಸುವಂಥ ಘನೋದ್ದೇಶದ ನಿರ್ಣಾಯಕ ಹೋರಾಟ ಇದಾಗಿತ್ತು. ಅಂತೆಯೆ ಈ ಅನನ್ಯ ಹೋರಾಟದಲ್ಲಿ ಮೇಲ್ಜಾತಿಯ ಸಂವೇದನಾಶೀಲರು ಮತ್ತು ಕೆಳಜಾತಿಗಳ ಕಾಯಕಜೀವಿಗಳು ಸೇರಿ ಬಸವಾದಿ ಪ್ರಮಥರ ಸಾಮೂಹಿಕ ನಾಯಕತ್ವದಲ್ಲಿ ಅಹಂಕಾರದ ಜೀವನಕ್ರಮಕ್ಕೆ ವಿರುದ್ಧವಾದ ಮತ್ತು ಸದಾಚಾರದಿಂದ ಕೂಡಿದ ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವದ ಜೀವನ ಕ್ರಮವನ್ನು ಅಳವಡಿಸಿಕೊಂಡರು. ಒಳ್ಳೆಯದನ್ನೇ ಉತ್ಪಾದಿಸುವುದು, ಉತ್ಪಾದಿಸಿದ್ದನ್ನು ದೇವರ ಪ್ರಸಾದವೆಂದು ತಿಳಿಯುವುದು. ನಿರಹಂಕಾರ ಭಾವದಿಂದ ಕೂಡಿದ ದಾಸೋಹ ಪ್ರಜ್ಞೆಯೊಂದಿಗೆ ಆ ಉತ್ಪನ್ನದ ಮಿಗುತಾಯವನ್ನು ಸಮಾಜಕ್ಕೆ ಬಳಸುವುದು. ಆ ಮೂಲಕ ಸಮಾಜದಲ್ಲಿ ಆರ್ಥಿಕ ಸಮತೋಲನವನ್ನು ಕಾಪಾಡಿ ಭಾವೈಕ್ಯವನ್ನು ಸಾಧಿಸುವುದು ಶರಣರ ಉದ್ದೇಶವಾಗಿತ್ತು. ಹೀಗೆ ಶರಣರು ಮನುಧರ್ಮದ ಸಮಾಜದೊಳಗೆ ತಮ್ಮದೇ ಆದ ಮಾನವಧರ್ಮದ ಸಮಾಜವನ್ನು ಕಟ್ಟಿದರು.

ವಚನ ಚಳವಳಿಯ ಸೃಷ್ಟಿಯಾದ ಇಷ್ಟಲಿಂಗವನ್ನು ಧರಿಸಿದವರೆಲ್ಲ ಸಮಾನ ಗೌರವ ಹೊಂದಿದವರಾದರು. ಅವರು ಹೆಣ್ಣು ಗಂಡಿನ ಮಧ್ಯೆ, ಬಡವ ಶ್ರೀಮಂತರ ಮಧ್ಯೆ, ಹಳ್ಳಿಗರ ಮತ್ತು ನಗರವಾಸಿಗಳ ಮಧ್ಯೆ, ಸಾಕ್ಷರರು ಮತ್ತು ನಿರಕ್ಷರಿಗಳ ಮಧ್ಯೆ, ಪಂಡಿತರು ಮತ್ತು ಪಾಮರರ ಮಧ್ಯೆ, ಅಸ್ಪೃಶ್ಯರು ಮತ್ತು ಸವರ್ಣೀಯರ ಮಧ್ಯೆ ಹಾಗೂ ಕಾಯಕಜೀವಿಗಳ ಮಧ್ಯೆ ಭೇದ ಎಣಿಸಲಿಲ್ಲ. ಜಾತಿ ಸಂಕರಗೊಂಡು ನಿರ್ಮಾಣವಾದ ಶರಣಸಂಕುಲದಲ್ಲಿ ಪ್ರಧಾನಿ ಪದವಿಯ ಬಸವಣ್ಣನವರೂ ಸಮಗಾರ ಹರಳಯ್ಯನವರೂ ಸರಿಸಮಾನವಾಗೇ ಇದ್ದರು. ಪ್ರಧಾನಮಂತ್ರಿಯ ಕಾಯಕಕ್ಕೂ ಕಸಗುಡಿಸುವ ಕಾಯಕಕ್ಕೂ ಒಂದೇ ಜವಾಬ್ದಾರಿ ಇತ್ತು. ಅದೇನೆಂದರೆ ಸಮಾಜವನ್ನು ಸ್ವಚ್ಛಗೊಳಿಸುತ್ತ ವ್ಯಕ್ತಿತ್ವವಿಕಸನಗೊಳಿಸಿಕೊಳ್ಳುವುದು. ಹಿಂಸೆ ಮತ್ತು ಅಸಮಾನತೆಯನ್ನು ಸಂಕೇತಿಸುವ ಶಸ್ತ್ರಗಳಂತೆ ಇರುವ ಶಾಸ್ತ್ರಗಳನ್ನು ತಿರಸ್ಕರಿಸಿ ಅನುಭವ ಮೂಲದ ಜೀವನದರ್ಶನ (ಅನುಭಾವ) ಪಡೆಯುವುದು. ಇಂಥ ಸಮಾಜದಲ್ಲಿ ವ್ಯಕ್ತಿಗಳು ಶ್ರೀಮಂತರಾಗುತ್ತಿರಲಿಲ್ಲ. ಆದರೆ ಬದುಕು ಶ್ರೀಮಂತವಾಗುತ್ತಿತ್ತು. ಈ ಶ್ರೀಮಂತ ಬದುಕಿನಲ್ಲಿ ವಸ್ತುಮೋಹ ಇರುತ್ತಿರಲಿಲ್ಲ. ಕೀಳರಿಮೆಗೆ ಇಲ್ಲಿ ಸ್ಥಾನವಿರಲಿಲ್ಲ. ಕಾಯಕದ ಆನಂದದಲ್ಲಿ ಜೀವನದರ್ಶನವಾಗುತ್ತಿತ್ತು. ಜೀವಕಾರುಣ್ಯದ ಮನಸ್ಥಿತಿ ನಿರ್ಮಾಣವಾಗುತ್ತಿತ್ತು. ಯುದ್ಧ, ಆತಂಕ, ಶೋಷಣೆ, ಅಸಮಾನತೆ ಹೀಗೆ ಎಲ್ಲ ಅನಿಷ್ಟಗಳು ನಿರ್ನಾಮವಾಗಿ ಶರಣರ ನವಮಾನವ ಸಮಾಜದ ಉದಯವಾಯಿತು. ಶೋಷಣೆಯ ಸಾಧನವಾದ ಯಾವುದೇ ದೇವರು ಅಥವಾ ೩೩ ಕೋಟಿ ದೇವತೆಗಳು ಈ ಧರ್ಮದ ಮೂಲವಾಗಲಿಲ್ಲ. ದೇವರ ಮೂಲರೂಪವಾದ ದಯೆ ಧರ್ಮದ ಮೂಲವಾಯಿತು. "ಧಯವಿಲ್ಲದ ಧರ್ಮ ಅದೇವುದಯ್ಯಾ" (ದಯವಿಲ್ಲದ ಧರ್ಮ ಅದೇನು ಮಾಡುವುದಯ್ಯಾ) ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ.

ಪಟ್ಟಭದ್ರ ಹಿತಾಸಕ್ತಿಗಳಿಗೆ ಇದು ಸಹಿಸಲಸಾಧ್ಯವಾಯಿತು. ಮನುಧರ್ಮದ ಭಯೋತ್ಪಾದಕರು ಮತ್ತು ಬಿಜ್ಜಳನ ರಾಜ್ಯಶಕ್ತಿಯ ಭಯೋತ್ಪಾದಕರು ಜೊತೆಗೂಡಿ ಶರಣರ ಚಳವಳಿಯನ್ನು ಹತ್ತಿಕ್ಕಲು ಹೊಂಚುಹಾಕಿದರು. ಕೆಳಜಾತಿಯಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳು ಶೂನ್ಯಸಿಂಹಾಸನದಲ್ಲಿ ವಿರಾಜಮಾನರಾದಾಗ ಮನುಧರ್ಮ ಸಿಂಹಾಸನ ಮತ್ತು ರಾಜಸಿಂಹಾಸನ ಅಲುಗಾಡತೊಡಗಿದವು. ಇನ್ನು ಕಾಯಕಜೀವಿಗಳ ರಾಜ್ಯ ಸ್ಥಾಪನೆಯಾಗುವುದರಲ್ಲಿ ಸಂಶಯವಿಲ್ಲ ಎಂಬ ಭಾವ ಮನುವಾದಿಗಳಲ್ಲಿ ಮೂಡಿತು. ಕೆಳಜಾತಿಯವರು ಸಿಂಹಾಸನ ಏರುವುದು ತಮ್ಮ ಸಮಾಜ ಹಾಳಾಗುವುದರ ಮುನ್ಸೂಚನೆ ಎಂದು ಅವರು ಭಾವಿಸಿದರು. ಒಮ್ಮೆ ಕಾಯಕಜೀವಿಗಳು ನಿರ್ಣಾಯಕ ಘಟ್ಟ ತಲುಪಿದರೆ ತಮ್ಮ ಐಶಾರಾಮಿ ಬದುಕು ಕೊನೆಗೊಳ್ಳುವುದರಲ್ಲಿ ಸಂಶಯವಿಲ್ಲ ಎಂಬ ಲೆಕ್ಕಾಚಾರ ಅವರದಾಗಿತ್ತು. ಬಿಜ್ಜಳನ ಮೇಲೆ ಹಿಡಿತ ಸಾಧಿಸತೊಡಗಿದರು. ಹೀಗೇ ಮುಂದುವರಿದರೆ ಶರಣರು ಅನಾಯಾಸವಾಗಿ ಕಲ್ಯಾಣವನ್ನು ಆಳತೊಡಗುತ್ತಾರೆ ಎಂದು ಬಿಜ್ಜಳನ ಮಗ ರಾಯಮುರಾರಿ ಸೋವಿದೇವನ ಕಿವಿ ಚುಚ್ಚಿದರು. ಸೋವಿದೇವ ತನ್ನ ಸಾಮ್ರಾಜ್ಯವನ್ನು ಕಳೆದುಕೊಳ್ಳಬಾರದು ಎಂದು ಪರಿಪರಿಯಿಂದ ಹೇಳಿದರು. ಅವನನ್ನು ಬಿಜ್ಜಳನ ಮೇಲೆ ಕೂಡ ಎತ್ತಿಕಟ್ಟುವಲ್ಲಿ ಯಶಸ್ಸನ್ನು ಸಾಧಿಸಿದರು. ಹೀಗೆ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಬಿಜ್ಜಳನ ಅರಮನೆಯನ್ನು ಗೊಂದಲದ ಗೂಡಾಗಿಸಿದರು. ತಂದೆ ಮಗನ ಮಧ್ಯೆ ವಿರಸ ತಂದಿಟ್ಟರು.

ಏತನ್ಮಧ್ಯೆ ಬ್ರಾಹ್ಮಣ ಮಧುವರಸರ ಮಗಳು ಮತ್ತು ಸಮಗಾರ ಹರಳಯ್ಯನವರ ಮಗನ ಜೊತೆಗಿನ ವಿವಾಹ ಧರ್ಮವಿರೋಧಿ ಎಂದು ಸಾರಿದರು. ಅದು ಖಂಡಿತವಾಗಿಯೂ ಮನುಧರ್ಮಕ್ಕೆ ವಿರುದ್ಧವಾದುದೇ ಆಗಿತ್ತು. ಆದರೆ ಶರಣಧರ್ಮದ ಪ್ರಕಾರ ಅದು ಆದರ್ಶವಾಗಿತ್ತು. ಏಕೆಂದರೆ ಶರಣಧರ್ಮವನ್ನು ಸ್ವೀಕರಿಸಿದ ಮೇಲೆ ಮಧುವರಸರು ಬ್ರಾಹ್ಮಣ್ಯವನ್ನು ಕಳೆದುಕೊಂಡರು. ಹರಳಯ್ಯನವರು ಕೆಳಜಾತಿ ಮನೋಭಾವದಿಂದ ಹೊರಬಂದರು. ಅವರಿಬ್ಬರೂ ಶರಣರಾಗಿದ್ದರಿಂದ ಅವರಲ್ಲಿ ಯಾವುದೇ ಭೇದಭಾವ ಇರಲಿಲ್ಲ. ಅವರ ಮಕ್ಕಳ ಮದುವೆ ಶರಣಧರ್ಮದ ಪ್ರಕಾರ ಆಗಿತ್ತು. ಆದರೆ ಮನುವಾದಿಗಳು ಆ ಮದುವೆಯನ್ನು ಮನುಧರ್ಮದ ಪ್ರಕಾರ ನೋಡಿದರು. ವರ್ಣಾಶ್ರಮ ವ್ಯವಸ್ಥೆಯನ್ನು ಕಾಪಾಡುವುದು ರಾಜನ ಧರ್ಮ ಎಂದು ಬಿಜ್ಜಳನಿಗೆ ತಿಳಿಸಿದರು. ರಾಜಧರ್ಮ ಪಾಲಿಸದಿದ್ದರೆ ಸಮಾಜ ಸರ್ವನಾಶವಾಗುವುದೆಂದು ಬಿಜ್ಜಳನಿಗೆ ಎಚ್ಚರಿಕೆ ನೀಡಿದರು. ಬಿಜ್ಜಳ ದೊರೆ ಮಧುವರಸ ಮತ್ತು ಹರಳಯ್ಯನವರಿಗೆ ಎಳೆಹೂಟಿ ಶಿಕ್ಷೆ ಕೊಡುವಹಾಗೆ ನೋಡಿಕೊಂಡರು. ಕಲ್ಯಾಣ ಪ್ರಕ್ಷುಬ್ಧವಾಯಿತು. ಮನುಧರ್ಮದ ಭಯೋತ್ಪಾದಕರು ಶರಣರ ಕಗ್ಗೊಲೆಯಲ್ಲಿ ತೊಡಗಿದರು. ಶರಣರ ಬಹುಪಾಲು ವಚನಸಾಹಿತ್ಯ ಬೆಂಕಿಗೆ ಆಹುತಿಯಾಯಿತು. ಕಲ್ಯಾಣದಲ್ಲಿ ಸಹಸ್ರ ಸಹಸ್ರ ನಿಶ್ಶಸ್ತ್ರ ಶರಣರನ್ನು ಕೊಲ್ಲಲಾಯಿತು. ಕಲ್ಯಾಣವನ್ನು ಮನುವಾದಿ ಭಯೋತ್ಪಾದಕರು ಹಾಳುಗೆಡಹಿದರು. ಅಳಿದುಳಿದ ಶರಣರು ದಿಕ್ಕಾಪಾಲಾಗಿ ಹೋದರು. ಚೆನ್ನಬಸವಣ್ಣನವರು, ಅಕ್ಕನಾಗಮ್ಮ, ಗಂಗಾಂಬಿಕೆ, ಮಡಿವಾಳ ಮಾಚಿದೇವ ಕಿನ್ನರಿ ಬ್ರಹ್ಮಯ್ಯ ಮುಂತಾದ ಶರಣ ಶರಣೆಯರ ಸಾಹಸದಿಂದ ಒಂದಿಷ್ಟು ವಚನಸಾಹಿತ್ಯದ ರಕ್ಷಣೆಯಾಯಿತು. ಅವರಲ್ಲಿ ಅನೇಕರು ಕಲ್ಯಾಣದಿಂದ ಉಳವಿ ತಲುಪುವುದರೊಳಗೆ ಹುತಾತ್ಮರಾದರು. ಹೀಗೆ ವಚನ ರಕ್ಷಣೆಗಾಗಿ ಶರಣರು ಜೀವದ ಹಂಗುದೊರೆದು ಹೋರಾಡಬೇಕಾಯಿತು. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಕಟ್ಟಿದ ಕಲ್ಯಾಣವನ್ನೇ ತೊರೆಯಬೇಕಾಯಿತು. ಕನ್ನಡದ ನೆಲದಲ್ಲಿ ೧೨ನೇ ಶತಮಾನದಲ್ಲಿ ಈ ಮನುವಾದಿಗಳ ಭಯೋತ್ಪಾದನೆಯ ಅಟ್ಟಹಾಸ ಇಂದಿಗೂ ಭಯಂಕರ ಕರಾಳ ನೆನಪಾಗಿ ಕಾಡುತ್ತಿದೆ.

ಯಾವುದೇ ಧರ್ಮದ ಜನರು ತಮ್ಮ ಧರ್ಮದ ಕರ್ಮಕಾಂಡವನ್ನೇ ಮೂಲಭೂತವಾಗಿ ನಂಬಿ ಅದರ ಜ್ಞಾನಕಾಂಡವನ್ನು ಮರೆತಾಗ ಕೋಮುವಾದಿಗಳಾಗುತ್ತಾರೆ. ನಂತರ ಅವಕಾಶ ಸಿಕ್ಕಾಗ ಭಯೋತ್ಪಾದಕರೂ ಆಗುತ್ತಾರೆ. ಧರ್ಮದ ಹೆಸರಿನಲ್ಲಿ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳುತ್ತಾರೆ. ಬಸವಣ್ಣನವರ ದಯಾಮೂಲದ ಧರ್ಮವು ವಿಶ್ವಪ್ರೇಮದಿಂದ ಕೂಡಿದ ಸರ್ವಸಮತ್ವದ ಅರಿವಿನ ಧರ್ಮವಾಗಿದೆ. ದಯವಿಲ್ಲದ ಧರ್ಮ ಏನು ಮಾಡುವುದಯ್ಯಾ ಎಂದು ಬಸವಣ್ಣನವರು ಕೇಳಿದ್ದು ಅರ್ಥಗರ್ಭಿತವಾಗಿದೆ. ದಯವಿಲ್ಲದ ಧರ್ಮವು ಮೂಲಭೂತವಾದವನ್ನು ಸೃಷ್ಟಿಸುವುದು. ಆ ಮೂಲಕ ಕೋಮುವಾದವನ್ನು ಬೆಳೆಸುವುದು. ನಂತರ ಭಯೊತ್ಪಾದನೆಯಲ್ಲಿ ತನ್ನ ಕರಾಳ ಸ್ವರೂಪವನ್ನು ಬಹಿರಂಗಪಡಿಸುವುದು. ಭಯೋತ್ಪಾದನೆ ಎಂಬುದು ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಗೊಂದಲದಲ್ಲಿ ಜನ್ಮತಾಳುವಂಥದ್ದು. ಕೈಮೀರಿ ಹೋಗುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಜ್ಞಾನದ ಮೇಲಿನ ಹಿಡಿತವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಬಯಸುವ ಒಂದು ವರ್ಗ, ಧರ್ಮ ಅಥವಾ ಕೋಮಿನ ಉದ್ದೇಶವು ಕ್ರೌರ್ಯಕ್ಕೆ ತಿರುಗಿದಾದ ಭಿನ್ನಮತೀಯರನ್ನು ಸದೆಬಡೆಯುವಲ್ಲಿ ಭಯೊತ್ಪಾದನೆಯೇ ಅತ್ಯುತ್ತಮ ವಿಧಾನವಾಗಿ ಕಾಣುತ್ತದೆ. ಅಧಿಕಾರವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ತೀವ್ರತೆಯಲಿ, ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಹಪಾಹಪಿಯಲ್ಲಿ ಮತ್ತು ಸ್ವರೂಪಗೊಂದಲದಿಂದ ಹೊರಬರುವ ಗಡಿಬಿಡಿಯಲ್ಲಿ ದುಷ್ಟಶಕ್ತಿಗಳು ಧರ್ಮದ ಹೆಸರಿನಲ್ಲಿ ರಾಜಕೀಯ ಶಕ್ತಿಯಾಗಿ ಬೆಳೆಯುವ ದುರಾಸೆಯೊಂದಿಗೆ ಭಯೋತ್ಪಾದನೆಗೆ ಇಳಿಯುತ್ತವೆ. ಇಂಥ ಮಹತ್ವಾಕಾಂಕ್ಷೆ ಭಯೊತ್ಪಾದನೆಗೆ ಮುಖ್ಯ ಕಾರಣವಾಗಿದೆ. ಒಂದು ದೇಶದ ಮೇಲೆ ಇನ್ನೊಂದು ದೇಶ ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಒಂದು ಕೋಮಿನ ಮೇಲೆ ಇನ್ನೊಂದು ಕೋಮು ಹಿಡಿತವನ್ನು ಸಾಧಿಸಲು ತೀವ್ರವಾಗಿ ಯತ್ನಿಸುತ್ತಿರುವಾಗ ಭಯೋತ್ಪಾದನೆ ತಲೆದೋರುತ್ತದೆ. ಅನೇಕಬಾರಿ ಈ ಭಯೋತ್ಪಾದನೆ ಯುದ್ಧದಲ್ಲಿ ಅವಸಾನಗೊಳ್ಳುವುದು.

೧೨ನೇ ಶತಮಾನದಲ್ಲಿ ಶರಣಸಂಕುಲ ಕ್ರೌರ್ಯಕ್ಕೆ ಬಲಿಯಾದುದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಬೇಕಿದೆ. ಅದೇರೀತಿ ದೇಶದಲ್ಲಿ ಮತ್ತು ಜಗತ್ತಿನಲ್ಲಿ ನಮ್ಮ ಕಾಲಘಟ್ಟದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಘಟನೆಗಳ ಹಿಂದೆ ಸಾಮ್ರಾಜ್ಯಶಾಹಿಗಳು ಮೊದಲು ಮಾಡಿ ಎಂಥೆಂಥವರು ಇದ್ದಾರೆಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಶರಣ ಸಮಾಜವನ್ನು ಮತ್ತೆ ಪಡೆಯುವುದರ ಮೂಲಕ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿ ಕೊಡಬೇಕಿದೆ.