You are hereಆಚಾರವೇ ಸ್ವರ್ಗ
ಆಚಾರವೇ ಸ್ವರ್ಗ
ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು
ಬಸವಧರ್ಮದಲ್ಲಿ ಸ್ವರ್ಗ ನರಕಗಳು ಮಾನವರ ಮಾನಸಿಕ ಸ್ಥಿತಿಗಳು. ನಮ್ಮ ಮನಸ್ಥಿತಿಯೇ ನಮಗೆ ಸ್ವರ್ಗದ ಆನಂದವನ್ನು ಇಲ್ಲವೆ ನರಕದ ದುಃಖವನ್ನು ಕೊಡಬಲ್ಲುದು. ಸ್ವರ್ಗ ನರಕಗಳು ಹೊರಗೆಲ್ಲೂ ಇಲ್ಲ. ಅವು ನಮ್ಮೊಳಗೇ ಇವೆ. ನಮ್ಮ ಸ್ವರ್ಗವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ನರಕವನ್ನು ಕೂಡ ನಾವೇ ಸೃಷ್ಟಿಸಿಕೊಳ್ಳುತ್ತೇವೆ.
ನಮ್ಮ ಆಚಾರಗಳು, ಅಂದರೆ ಒಳ್ಳೆಯ ನಡವಳಿಕೆಗಳು ನಮಗೆ ಸ್ವರ್ಗದ ಸುಖವನ್ನು ಕೊಡುತ್ತವೆ. ನಮ್ಮ ಅನಾಚಾರಗಳು, ಅಂದರೆ ಕೆಟ್ಟ ನಡವಳಿಕೆಗಳು ನರಕದ ದುಃಖವನ್ನು ಸೃಷ್ಟಿಸುತ್ತವೆ. ಅಂತೆಯೆ ಬಸವಣ್ಣನವರು "ಆಚಾರವೇ ಸ್ವರ್ಗ, ಅನಾಚಾರವೇ ನರಕ" ಎಂದು ತಿಳಿಸಿದ್ದಾರೆ.
"ಅಯ್ಯಾ ಎಂದಡೆ ಸ್ವರ್ಗ ಎಲವೋ ಎಂದಡೆ ನರಕ" ಎಂದು ಬಸವಣ್ಣನವರು ಹೇಳಿದ್ದಾರೆ. ನಾವು ಬೇರೆಯವರೊಡನೆ ವ್ಯವಹರಿಸುವ ಕ್ರಮದಲ್ಲೇ ಸ್ವರ್ಗ ನರಕಗಳ ನಿರ್ಮಾಣವಾಗುವುದು. ನಮ್ಮ ನಾಗರಿಕ ವರ್ತನೆ ನಮ್ಮೊಳಗೆ ಸ್ವರ್ಗವನ್ನು ಸೃಷ್ಟಿಸಿದರೆ ಅನಾಗರಿಕ ವರ್ತನೆ ಮನಸ್ಸಿನಲ್ಲೇ ನರಕದ ವಾತಾವರಣ ನಿರ್ಮಾಣ ಮಾಡುವುದು.
"ಹಿರಿಯತನವಾವುದೆಂದಡೆ ಗುಣಜ್ಞಾನ, ಆಚಾರಧರ್ಮ; ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ" ಎಂದು ಬಸವಣ್ಣನವರು ತಿಳಿಸಿದ್ದಾರೆ. ದುರ್ಗಣಗಳಿಂದ ಕೂಡಿರುವಂಥದ್ದು ಜ್ಞಾನವಲ್ಲ. ವಿಶ್ವವಿನಾಶ ಮಾಡುವಂಥದ್ದು ಜ್ಞಾನವಲ್ಲ. ಮಾನವೀಯತೆಯನ್ನು ಉಳಿಸಿ ಬೆಳೆಸುವ ಜ್ಞಾನವೇ ಗುಣಜ್ಞಾನ. ಇಂಥ ಜ್ಞಾನವೇ ಆಚಾರಕ್ಕೆ ನಾಂದಿ. ಸದ್ವರ್ತನೆಗೆ ಮೂಲವಾದ ಆಚಾರವೇ ಧರ್ಮ. ಈ ಹಿನ್ನೆಲೆಯಲ್ಲಿ ಬಸವಣ್ಣನವರ ಲಿಂಗವಂತ ಧರ್ಮವು ಆಚಾರಧರ್ಮವಾಗಿದೆ.
ತಾಮಸ, ರಾಜಸ ಮತ್ತು ಸಾತ್ವಿಕಗಳೆಂಬ ಮೂರು ಗುಣಗಳಿವೆ. ತಾಮಸ ಗುಣಕ್ಕೆ ತಮೋಗುಣ ಎಂದು ಕರೆಯುತ್ತಾರೆ. ಅಜ್ಞಾನ, ಮೋಹ, ನಿದ್ರೆ, ಚಾಪಲ್ಯ, ಹೀನವೃತ್ತಿ, ಪಾಪಕೃತ್ಯ, ಪರನಿಂದೆ, ಪರಹಿಂಸೆ ಎಂಬ ಎಂಟು ತಮೋಗುಣಗಳಿವೆ. ತಮ ಎಂದರೆ ಅಂಧಕಾರ. ಈ ಗುಣಗಳಿಂದ ನಮ್ಮ ಮನಸ್ಸಿನಲ್ಲಿ ಅಂಧಕಾರ ಆವರಿಸುತ್ತದೆ. ಆಗ ನಮಗೆ ಬದುಕಿನ ಒಳ್ಳೆಯದರ ಅರಿವಾಗುವುದಿಲ್ಲ.
ರಾಜಸ ಗುಣಕ್ಕೆ ರಜೋಗುಣ ಎಂದೂ ಕರೆಯುತ್ತಾರೆ. ಗರ್ವ, ಕ್ರೋಧ, ಅಹಂಕಾರ, ಕಾಮನೆಗಳು, ಅಪ್ರಿಯ ವಚನ, ಮೋಸ, ಮತ್ಸರ ಎಂಬ ಎಂಟು ರಜೋಗುಣಗಳಿವೆ. ರಜ ಎಂದರೆ ಧೂಳು. ಈ ಗುಣಗಳು ನಮ್ಮ ಮನಸ್ಸಿನಲ್ಲಿ ಧೂಳು ಸೃಷ್ಟಿಸುತ್ತವೆ. ಆಗ ನಾವು ಬದುಕಿನ ಒಳ್ಳೆಯದನ್ನು ಕಾಣುವ ಅವಕಾಶವನ್ನು ಕಳೆದುಕೊಳ್ಳುತ್ತೇವೆ.
ಸತ್ಯ, ಜ್ಞಾನ, ತಪ, ಮೌನ, ಹರುಷ, ಶಮೆ (ಮನೋನಿಗ್ರಹ), ವಿವೇಕ, ಸಾಹಸ, ನಿಶ್ಚಯ, ಧೈರ್ಯ ಎಂಬ ಎಂಟು ಗುಣಗಳು ಸಾತ್ವಿಕ ಗುಣಗಳು. ಮಾನವೀಯ ಸತ್ವದಿಂದ ಕೂಡಿದ ಗುಣವೇ ಸಾತ್ವಿಕ ಗುಣ. ದೇವರು "ಸಾತ್ವಿಕರಲ್ಲದವರನೊಲ್ಲನು" ಎಂದು ಬಸವಣ್ಣನವರು ತಿಳಿಸಿದ್ದಾರೆ.
ತ್ರಿವಿಧ ಆಚಾರ: ಸಾತ್ವಿಕ ಗುಣಜ್ಞಾನದೊಂದಿಗೆ ಶರಣರು ಬಸವಧರ್ಮ ಎಂಬ ಆಚಾರಧರ್ಮದ ಸಾಧನೆ ಮಾಡಿದ್ದಾರೆ. ಸದಾಚಾರ, ನಿಯತಾಚಾರ ಮತ್ತು ಗಣಾಚಾರ ಎಂಬುವು ಆಚಾರಧರ್ಮದ ಮೂರು ಅಂಗಗಳಾಗಿವೆ. ಇವುಗಳಿಗೆ ತ್ರಿವಿಧ ಆಚಾರಗಳೆಂದು ಕರೆಯುತ್ತಾರೆ. ಸರ್ವ ಜನರಿಗೆ ಒಪ್ಪುವಂಥದ್ದೇ ಸದಾಚಾರ. ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗುವಂಥ ನಿಯಮಗಳನ್ನು ಪಾಲಿಸುವುದೇ ನಿಯತಾಚಾರ. ಶಿವನಿಂದೆಯನ್ನು ಕೇಳದಿರುವುದೇ ಗಣಾಚಾರ.
ಬಹಿರಂಗ ಶುದ್ಧಿಯ ಪಂಚಾಚಾರ: ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಎಂಬ ಪಂಚಾಚಾರಗಳಿವೆ. ದೇವರು ಒಬ್ಬನೇ ಎಂಬ ಭಾವದೊಂದಿಗೆ ಇಷ್ಟಲಿಂಗ ಪೂಜೆ ಮಾಡುವುದು ಲಿಂಗಾಚಾರ. ಸತ್ಯಶುದ್ಧ ಕಾಯಕ ಮಾಡುವದರ ಮೂಲಕ ಗುರು ಲಿಂಗ ಜಂಗಮಕ್ಕೆ ದಾಸೋಹಂಭಾವದಿಂದ ನೀಡಿ ಸಂತೃಪ್ತ ಜಿವನ ಸಾಗಿಸುವುದು ಸದಾಚಾರ. ಇಷ್ಟಲಿಂಗ ಧರಿಸಿದವರಲ್ಲಿ ಕುಲಗೋತ್ರಗಳನ್ನು ಹುಡುಕದೆ ಶಿವನೆಂದು ಭಾವಿಸುವುದು ಶಿವಾಚಾರ. ಶಿವನಿಂದೆ ಕೇಳದಿರುವುದು ಗಣಾಚಾರ. ಶರಣರ ಮುಂದೆ ತಾನು ಕಿರಿಯ ಎಂದು ಭಾವಿಸುವುದು ಭೃತ್ಯಾಚಾರ.
ಅಂತರಂಗ ಶುದ್ಧಿಯ ಸಪ್ತಾಚಾರ: ಕ್ರಿಯಾಚಾರ, ಜ್ಞಾನಾಚಾರ, ಭಾವಾಚಾರ, ಸತ್ಯಾಚಾರ, ನಿತ್ಯಾಚಾರ, ಧರ್ಮಾಚಾರ, ಸರ್ವಾಚಾರ ಸಂಪತ್ತಿನ ಆಚಾರ ಎಂಬುವು ಸಪ್ತಾಚಾರಗಳು. ಜ್ಞಾನವೆಂಬ ಗುರುವಿನ, ಧರ್ಮವೆಂಬ ಲಿಂಗದ ಮತ್ತು ಸಮಾಜವೆಂಬ ಜಂಗಮದ ಆರಾಧನೆ ಮಾಡುವುದೇ ಕ್ರಿಯಾಚಾರ. ವಚನಗಳನ್ನು ಅರಿತುಕೊಂಡು ಆಚರಿಸುವುದು ಜ್ಞಾನಾಚಾರ. ಕಾಮ, ಕ್ರೋಧ, ಮದ, ಮತ್ಸರ, ಲೋಭ ಮತ್ತು ಮೋಹದಿಂದ ದೂರಾಗಿ ಬದುಕುವುದು ಭಾವಾಚಾರ. ನುಡಿದಂತೆ ನಡೆಯುವುದು ಸತ್ಯಾಚಾರ. ಪಾಲಿಗೆ ಬಂದುದು ಪಂಚಾಮೃತ ಎಂದು ಬದುಕುವುದು ನಿತ್ಯಾಚಾರ. ಭಕ್ತಿಭಾವ ತಾಳುವುದು ಧರ್ಮಾಚಾರ. ಷಟ್‌ಸ್ಥಲ ಮಾರ್ಗದಲ್ಲಿ ನಡೆಯುವುದು ಸರ್ವಾಚಾರ ಸಂಪತ್ತಿನ ಆಚಾರ.
ಐವತ್ತು ಆಚಾರ: ಇಷ್ಟಲಿಂಗ ಸಂಬಂಧವಾದ ಆಚಾರಗಳಿಂದ ನಮ್ಮ ಕಾಯವನ್ನೇ ಕೈಲಾಸ ಮಾಡಿಕೊಳ್ಳಬಹುದು. ಚನ್ನಬಸವಣ್ಣನವರು ಇಷ್ಟಲಿಂಗ ದೀಕ್ಷೆ ನೀಡುವ ಸಂದರ್ಭದಲ್ಲಿ ಸಿದ್ಧರಾಮರಿಗೆ ೫೦ ಬಗೆಯ ಆಚಾರಗಳನ್ನು ಬೋಧಿಸಿದ್ದಾರೆ.
೧. ಪರಸ್ತ್ರೀಯನ್ನು ಬಯಸದೆ ಇರುವುದು. ೨. ಪರಧನವನ್ನು ಅಪಹರಿಸದಿರುವುದು. ೩. ಹುಸಿಯ ನಡಿಯದಿರುವುದು. ೪. ವಿಶ್ವಾಸಘಾತ ಮಡದಿರುವುದು. ೫. ಪ್ರಾಣಿಹಿಂಸೆಯ ಮಡದಿರುವುದು. ೬. ಶರಣಸಂಕುಲವನ್ನು ಸಂತೋಷದಲ್ಲಿಡುವುದು. ೭. ಸ್ವೀಕರಿಸಿದ ನೇಮವನ್ನು ಬಿಡದಿರುವುದು. ೮. ಷಟ್‌ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತ. ೯. ಕೆಟ್ಟವರ ಸಹವಾಸ ಮಡದಿರುವುದು. ೧೦. ಸಜ್ಜನರ ಸಂಗವನ್ನು ಬಿಡದಿರುವುದು. ೧೧. ಅನ್ಯದೇವತಾ ಭಜನೆಗೆ ವಿಮುಖವಾಗಿರುವುದು. ೧೨. ಶಿವನೊಬ್ಬನೇ ಪರಮತ್ಮ ಎಂಬುದನ್ನು ಮನದಲ್ಲಿ ತುಂಬಿಕೊಳ್ಳುವುದು. ೧೩. ಶಿವ ಮತ್ತು ಶಿವಗಣಗಳ ಮಧ್ಯೆ ಭೇದ ಮಡದಿರುವುದು. ೧೪. ಸಕಲಜೀವಿಗಳ ಹಿತ ಬಯಸುವುದು. ೧೫. ಸರ್ವರಿಗೂ ಹಿತಮಡುವುದು. ೧೬. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಡುವುದು. ೧೭. ಸರ್ವ ಅವಯವವ ಸ್ವಚ್ಛಗೊಳಿಸುವುದು. ೧೮. ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಡದಿರುವುದು. ೧೯. ಪ್ರಣವಮುದ್ರೆಯಿಲ್ಲದ ವಸ್ತ್ರವ ಹೊದಿಯದಿರುವುದು. ೨೦. ಹುಟ್ಟಿದ ಶಿಶುವಿಗೆ ಲಿಂಗಧಾರಣೆ ಮಡದೆ ತಾಯ ಮೊಲೆಹಾಲ ಜೇನುತುಪ್ಪ ಮುಟ್ಟಿಸದಿರುವುದು. ೨೧. ವಚನಭ್ರಷ್ಟ ಆಗದೆ ಇರುವುದು. ೨೨. ಸತ್ಯವ ನುಡಿದು ತಪ್ಪದಿರುವುದು. ೨೩. ಹಸುಗಳನ್ನು ಕಟ್ಟಿ ರಕ್ಷಿಸುವುದು. ೨೪. ಹಸುಗಳಿಗೆ ಲಿಂಗೆಮುದ್ರೆ ಹಾಕಿ ಹಾಲು ಕರೆಯುವುದು. ೨೫. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಡುವುದು. ೨೬. ಪಾದೋದಕದೊಡನೆ ಆ ಭಸ್ಮದ ರಾಶಿಯ ಉಂಡಿಯ ಕಟ್ಟುವುದು. ೨೭. ವಿಧಿಯರಿತು, ಸ್ಥಾನವರಿತು ರುದ್ರಾಕ್ಷಿಗಳ ಧರಿಸುವುದು. ೨೮. ಶಿವಾನುಭವವ ಶಾಸ್ತ್ರವ ವಿಚಾರಿಸುವುದು. ೨೯. ಮನ ನೋಯಿಸದೆ ಮಾತನಾಡುವುದು. ೩೦. ಲಿಂಗದ ಕಲೆ ಅರಿತು ಲಿಂಗಪೂಜೆ ಮಡುವುದು. ೩೧. ಗುರುಮುಖದಿಂದ ತಾನಾರು ತನ್ನ ನಿಜವೇನೆಂದು ಬೆಸಗೊಳ್ಳುವುದು. ೩೨. ಷಡ್ವರ್ಗಂಗಳ ಮೆಟ್ಟಿ ಷಟ್‌ಸ್ಥಲವನಿಂಬುಗೊಳ್ಳುವುದು. ೩೩. ಅವಿಚ್ಛಿನ್ನವಾಗಿ ಅಂಗ್ರಯದಲ್ಲಿ ಮನ ಓಕರಿಸಿಕೊಳ್ಳುವುದು. ೩೪. ಲಿಂಗದಲ್ಲಿ ಶಿಲೆಯ ಭಾವ ಅರಿಸದೆ ಇರುವುದು. ೩೫ ಜಂಗಮದಲ್ಲಿ ಕುಲವನರಿಸದಿರುವುದು. ೩೬. ವಿಭೂತಿಯ ಮಣ್ಬದಿಹುದು. ೩೭. ರುದ್ರಾಕ್ಷಿಯ ಶುದ್ಧ ಮಡಿ ಮಣಿಗಳ ಧರಿಸುವುದು. ೩೮. ಪಾದೋದಕದಲ್ಲಿ ಉಚ್ಛಿಷ್ಟವಳಿದುದು. ೩೯. ಪ್ರಸಾದದಲ್ಲಿ ರುಚಿಯ ನೋಡದಿರುವುದು. ೪೦. ಕುತ್ಸಿತ ಕಲ್ಪನೆಯ ಮಡದಿರುವುದು. ೪೧. ಲಿಂಗಾರ್ಚನ ವಿರಹಿತ ಭೋಜನ ಮಡದಿರುವುದು. ೪೨. ಐಕ್ಯರ ಸಮಧಿಗೊಳಿಸಿ ತಾನು ಲಿಂಗಪೂಜೆಯ ಮಡುವುದು. ೪೩. ಲಿಂಗದ್ರೋಹ ಕೇಳಿ ಪ್ರಾಣಬಿಡುವುದು. ೪೪. ಜಂಗಮದ್ರೋಹ ಕೇಳಿ ಐಕ್ಯನಾಗುವುದು. ೪೫. ಲಿಂಗದ್ರೋಹಿಯ ಪ್ರಾಣವ ಭೇದಿಸುವುದು. ೪೬. ಜಂಗಮದ್ರೋಹಿಯ ಶಿರವನೀಡಾಡುವುದು. ೪೭. ಅಷ್ಟಾವರಣ ಸಂಗವ ಮಡುವ ಭೇದವ ತಿಳಿವುದು. ೪೮. ತಾನಾರು ಲಿಂಗವಾರು ಎಂಬ ಭೇದವಿಲ್ಲದಿರುವುದು. ೪೯. ತನ್ನ ನಿಜವಿಚಾರವ ತಾ ಮರೆಯದೆ ಷಟ್‌ಸ್ಥಲದವರಿಗೆ ಅರುಹಿ ತನ್ನಂತೆ ಮಡುವುದು.
೫೦. ಈ ಎಲ್ಲ ಆಚಾರಗಳನ್ನು ಕಡೆಮುಟ್ಟಿಸುವುದು.
ಈ ಆಚಾರಗಳಲ್ಲಿ ಬರುವ ಸೀಳುವುದು, ಪ್ರಾಣಬಿಡುವುದು, ಪ್ರಾಣವ ಭೇದಿಸುವುದು, ಐಕ್ಯನಾಗುವುದು, ಶಿರವನೀಡಾಡುವುದು ಮುಂತಾದ ಆಚಾರಗಳನ್ನು ಶಾಬ್ದಿಕವಾಗಿ ಅರ್ಥೈಸದೆ ಅವುಗಳ ಲಕ್ಷಣಾರ್ಥವನ್ನು ಗ್ರಹಿಸಬೇಕು. ಹೊಸಧರ್ಮ ಅಥವಾ ಜೀವನವಿಧಾನವೊಂದು ರೂಪುಗೊಳ್ಳುವ ಸಂದರ್ಭದಲ್ಲಿ ಅದರ ಅನುಯಾಯಿಗಳು ಅಲ್ಪಸಂಖ್ಯಾತರಾಗಿರುತ್ತಾರೆ. ಬಹುಸಂಖ್ಯಾತರ ದಬ್ಬಾಳಿಕೆಯನ್ನು ಎದುರಿಸುವ ಮಾನಸಿಕ ಸ್ಥಿತಿಯನ್ನು ಹೊಂದುವ ಸಂದರ್ಭದಲ್ಲಿ ಸ್ವರಕ್ಷಣೆಗಾಗಿ ಇಂಥ ಶಬ್ದಗಳ ಬಳಕೆಯಾಗುತ್ತವೆ. ಮರಿಗಳನ್ನು ತಿನ್ನಲು ರಣಹದ್ದು ಬಂದಾಗ ಕೋಳಿ ತನ್ನ ಮರಿಗಳನ್ನೆಲ್ಲ ರೆಕ್ಕೆಗಳಲ್ಲಿ ಅಡಗಿಸಿಕೊಂಡು ವೀರೋಚಿತ ಧ್ವನಿ ಹೊರಡಿಸಿ, ಅಂಜಿಸಿ ತನ್ನ ಮರಿಗಳನ್ನು ಕಾಪಾಡುವಂತೆ ಶರಣರು ತಮ್ಮ ತತ್ತ್ವಗಳ ರಕ್ಷಣೆ ಮಾಡಿದರು. ತಮ್ಮ ಐಡೆಂಟಿಟಿಗಾಗಿ ಅವರು ಪರದೈವವನ್ನೂ ಒಲ್ಲೆ ಎಂದರು. ದೇವನೊಬ್ಬ ನಾಮ ಹಲವು ಎಂಬ ಸತ್ಯ ಅವರಿಗೆ ಗೊತ್ತಿತ್ತು. ಆದರೆ ತತ್ತ್ವದ ಆಚರಣೆಗೆ ಅಡ್ಡಬರುವ ಬಹುದೇವೋಪಾಸನೆ ಮತ್ತು ಮೂರ್ತಿಪೂಜೆಗಳನ್ನು ತಿರಸ್ಕರಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಬಹುದೇವೋಪಾಸಕರ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಮತ್ತು ಆತ್ಮರಕ್ಷಣೆಗಾಗಿ ಶರಣರು ಪ್ರತಿಪಾದಿಸುವ ಗಣಾಚಾರ ಕಾರ್ಲ್ ಮಾರ್ಕ್ಸ್ ಹೇಳಿದ ವರ್ಗಹೋರಾಟದ ಪರಿಕಲ್ಪನೆಯನ್ನು ಹೊಂದಿದೆ. ಗುರುವಿನಲ್ಲಿ ಸದಾಚಾರ, ಲಿಂಗದಲ್ಲಿ ಶಿವಾಚಾರ, ಜಂಗಮದಲ್ಲಿ ಸಮಯಚಾರ ಇಂತೀ ತ್ರಿವಿಧಾಚಾರ ಸಂಬಂಧವಾದ ಬಳಿಕ ತನ್ನ ಶೀಲಕ್ಕೆ ಶೀಲ ಸಮನಾಗದವರ ಮನೆಯ ಅನುಸರಿಸಿ ನಡೆದಡೆ ಕೂಡಲಚೆನ್ನಸಂಗನ ಶರಣ ಪೂರ್ಣಾಚಾರಿ ಬಸವಣ್ಣ ಮೆಚ್ಚನಯ ಎಂದು ಚನ್ನಬಸವಣ್ಣ ಹೇಳುತ್ತಾರೆ. ಹೀಗೆ ಬಸವಧರ್ಮದಲ್ಲಿ ಆಚಾರವೇ ಲಿಂಗರೂಪ ಹೊಂದುವುದು.
ಆಚಾರ ಶಿವಾಚಾರವೆಂದರಿಯದ ಕಾರಣ ಷಡುದರುಶನಂಗಳೆ ತಮತಮಗೆ ಶರಣನೆನುತ್ತಿದ್ದವು ಎಂದು ಬಸವಣ್ಣನವರು ತಿಳಿಸಿದ್ದಾರೆ. ಹೀಗೆ ಹೇಳುವ ಮೂಲಕ ಇಷ್ಟಲಿಂಗಕ್ಕೂ ಆಚಾರಕ್ಕೂ ಸಂಬಂಧವನ್ನು ಕಲ್ಪಿಸಿದ್ದಾರೆ. ಇಷ್ಟಲಿಂಗ ಸಂಬಂಧವಾದ ಸತ್ಕ್ರಿಯಾಚಾರವದು. ಇಷ್ಟಲಿಂಗತತ್ತ್ವದಿಂದ ಮೂಡಿದ ಅರಿವಿನಿಂದ ಶರಣರ ಆಚಾರ ಮಾರ್ಗ ಸೃಷ್ಟಿಯಾಗಿದೆ. ಅರಿವು ಎಂದರೆ ಅತ್ಯುನ್ನತ ಪ್ರಜ್ಞೆ. ಪ್ರಜ್ಞೆ ಎಂಬುದು ವಸ್ತುವಿನ ಅನುಭವದಿಂದ ಬರುವಂಥದ್ದು. ಅರಿವು ಎಂಬುದು ಪರವಸ್ತುವಿನ ಅನುಭಾವದಿಂದ ಬರುವಂಥದ್ದು.
ಆ ಪರವಸ್ತುವಿನ ಅನುಭಾವದೆಡೆಗೆ ಒಯ್ಯುವಂಥದ್ದು ಮತ್ತು ಆ ಪರವಸ್ತುವೆಂಬ ಚೈತನ್ಯ ವಿಶ್ವದ ಕಣಕಣಗಳಲ್ಲಿ ವ್ಯಾಪಿಸಿ ಚರಾಚರವನ್ನೆಲ್ಲ ಜೀವಜಾಲದಲ್ಲಿ ಒಂದುಮಾಡಿದೆ ಎಂಬ ಸತ್ಯವನ್ನು ಸಾರುವಂಥದ್ದು ಇಷ್ಟಲಿಂಗ. ವಸ್ತುವಿನ ಅನುಭವದಿಂದ ಬರುವ ಪ್ರಜ್ಞೆಯೆ ಪರವಸ್ತುವಿನ ಅನುಭಾವದಿಂದ ಬರುವ ಅರಿವೆಗೆ ಮೂಲವಾಗಿದೆ. ಆದ್ದರಿಂದ ವಸ್ತು ಜಗತ್ತಿಗೂ ಪರವಸ್ತು ಜಗತ್ತಿಗೂ ಅವಿನಾಭಾವ ಸಂಬಂಧವಿದೆ.
ಅರಿವ ಅರಿಯ ಹೇಳಿ ಸದ್ಗುರುನಾಥ ಕುರುಹ ಕೈಯಲ್ಲಿ ಕೊಟ್ಟನು ಎಂದು ಚೆನ್ನಬಸವಣ್ಣನವರು ಇಷ್ಟಲಿಂಗ ಅರಿವನ್ನು ಪಡೆಯುವ ಸಾಧನ ಎಂದು ಸೂಚಿಸುತ್ತಾರೆ. ಅರಿವನ್ನು ಪಡೆಯುವುದಕ್ಕಾಗಿಯೇ ಬಸವಣ್ಣನವರು ಕುರುಹು ಆದಂಥ ಇಷ್ಟಲಿಂಗವನ್ನು ಕೊಟ್ಟರು ಎಂದು ತಿಳಿಸುತ್ತಾರೆ. ತನ್ನ ಅರುಹನೆ ಮರೆದು ಕುರುಹನೆ ಪೂಜಿಸುವ ನರಗುರಿಗಳ ನೋಡಾ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ. ಅರಿವು ಕಣ್ದೆರೆಯದವರಲ್ಲಿ ಆರತಿಯನೊಯಯ ನೀನು ಎಂದು ಅಕ್ಕ ಹೇಳುತ್ತಾಳೆ. ಲಿಂಗದಲ್ಲಿ ಅಳವಟ್ಟಿಪ್ಪ ಆಚಾರವೇ ಲಿಂಗ; ಆಚಾರವಿಲ್ಲದ ಶರಣರಿಗೆ ಲಿಂಗವಿಲ್ಲ ಎಂದು ಪ್ರಭುದೇವರು ತಿಳಿಸುವ ಮೂಲಕ ಲಿಂಗವೆಂಬದು ಆಚಾರದ ಉಗಮಸ್ಥಾನವೆಂದು ಮನವರಿಕೆ ಮಾಡಿಕೊಡುತ್ತಾರೆ. ‘ಅಂತರಂಗದ ಅರಿವಿಗೆ ಆಚಾರವೇ ಕಾಯ’ ಎಂದು ಪ್ರಭುದೇವರು ಹೇಳುವ ಮೂಲಕ ಅರಿವಿನ ಕ್ರಿಯಾರೂಪವೇ ಆಚಾರವೆನ್ನುತ್ತಾರೆ. ಅರಿವು ಬಾಹ್ಯದಲ್ಲಿ ಇಷ್ಟಲಿಂಗ, ಅರಿವು ಅಂತರಂಗದಲ್ಲಿ ಪ್ರಾಣಲಿಂಗ, ಅರಿವು ಭಾವದಲ್ಲಿ ಆತ್ಮಲಿಂಗ ಎಂದು ಸಿದ್ಧರಾಮರು ಅರಿವೇ ದೇವರು ಎಂದು ಹೇಳುತ್ತಾರೆ. ಆಚಾರವೆಂಬುದನ್ನು ಶರಣರು ಸಂಪ್ರದಾಯ ಅಥವಾ ಪದ್ಧತಿ ಎಂಬ ಅರ್ಥದಲ್ಲಿ ತಿಳಿಸದೆ ಮನುಷ್ಯನ ಐಹಿಕ ಹಾಗೂ ಪಾರಲೌಕಿಕ ಕ್ರಿಯೆಗಳಿಗೆ ಸಾಧನವಾದ ಸನ್ನಡತೆ ಎಂದಿದ್ದಾರೆ. ನಮ್ಮ ಒಳಜಗತ್ತಿನ ಅರಿವು ಹೊರ ಜಗತ್ತಿನ ಆಚರಣೆಯಲ್ಲಿರಬೇಕು ಎಂಬುದು ಶರಣ ಸಂಕುಲದ ಆಶಯವಾಗಿದೆ.
ಅನುಭಾವದ ಮೂಲಕ ಯಾವುದನ್ನು ಶರಣರು ಪವಿತ್ರ ಎಂದು ಭಾವಿಸಿದರೊ ಅದನ್ನು ಈ ಲೌಕಿಕದಲ್ಲಿ ಅನುಷ್ಠಾನಗೊಳಿಸಲು ಯತ್ನಿಸಿದರು. ಅರಿವನ್ನು ಆಚಾರಗೊಳಿಸದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುದು ಶರಣರ ದೃಢನಿರ್ಧಾರವಾಗಿತ್ತು. ಭೌತಿಕ ಜಗತ್ತಿನಲ್ಲಿ ಪಾವಿತ್ರ್ಯವನ್ನು ಅಂದರೆ ಸರ್ವವಿಧದ ಸಮಾನತೆಯನ್ನು ಸಾಧಿಸದೆ ಒಣ ತತ್ತ್ವಜ್ಞಾನದ ಮಾತನಾಡುವುದು ನಿರರ್ಥಕ ಎಂಬುದನ್ನು ಲೋಕದ ಜನರಿಗೆ ತಿಳಿಹೇಳಿದರು. ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಲೌಕಿಕ ವ್ಯವಸ್ಥೆ ಮಾಡದೆ ಘನವಾದುದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಸಾರಿದರು. ಹೀಗೆ ಲೌಕಿಕ ಪ್ರಜ್ಞೆ ಮತ್ತು ಅಲೌಕಿಕ ಅರಿವಿನ ಮಧ್ಯೆ ಸಾಮರಸ್ಯವನ್ನು ಕಂಡುಕೊಳ್ಳುವ ಮೂಲಕ ಇಡೀ ವಿಶ್ವವನ್ನೇ ಜಂಗಮಲಿಂಗವೆಂದು ಕರೆದರು. ಸಮಷ್ಟಿಯಲ್ಲೇ ದೇವರನ್ನು ಕಂಡರು. ದಾಸೋಹದ ಮೂಲಕ ಸಮೂಹಕ್ಕೆ ಸೇವೆ ಸಲ್ಲಿಸುವುದೇ ಬಹುದೊಡ್ಡ ಪೂಜೆ ಎಂದು ಭಾವಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದರು. ಈ ರೀತಿಯಲ್ಲಿ ಸಮತಾ ಸಮಾಜಕ್ಕೆ ನಾಂದಿ ಹಾಡಿದರು.
ಅಂಗದಲ್ಲಿ ಆಚಾರವ ತೋರಿದ;
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;
ಆ ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.
ಎಂದು ಅಕ್ಕಮಹಾದೇವಿ ಹೇಳುತ್ತಾಳೆ. ನಮ್ಮ ಕ್ರಿಯೆಯಲ್ಲಿ ಆಚಾರವಿರಬೇಕು. ಆ ಆಚಾರಕ್ಕೆ ಲಿಂಗತತ್ತ್ವವಿರಬೇಕು. ಇಂಥ ಅರಿವು ನಮ್ಮ ಪ್ರಾಣದೊಳಗೆ ನೆಲೆನಿಂತಿರಬೇಕು. ಈ ಅರಿವು ನಮ್ಮ ವ್ಯಕ್ತಿತ್ವವನ್ನು ವಿಶ್ವವ್ಯಾಪಿಯಾಗಿಸಬೇಕು. ಆ ಮೂಲಕ ಸಕಲವೂ ನಮ್ಮೊಳಗಿನ ಭಾಗವೇ ಎಂಬುವಂತೆ ಬದುಕಬೇಕು. ಇಂಥ ಚೆನ್ನಮಲ್ಲಿಕಾರ್ಜುನ ದೇವರು) ಎಂಬ ಲಿಂಗತತ್ತ್ವವನ್ನು ಸೃಷ್ಟಿಸಿದ ಸಂಗನಬಸವಣ್ಣನು ತನಗೆ ಈ ರಹಸ್ಯವನ್ನು ಅರುಹಿದ ಎಂದು ಅಕ್ಕ ಹೇಳುವಾಗ ಅರಿವು ಮತ್ತು ಆಚಾರದ ವಿಶಾಲಾರ್ಥ ನಮ್ಮ ಮನದಲ್ಲಿ ಮೂಡುವುದು.
ಷಟ್ಸ್ಥಲ: ಭಕ್ತನು ಇಷ್ಟಲಿಂಗದ ಮೂಲಕ ಶಿವಯೋಗದೊಂದಿಗೆ ಸಾಧಿಸಬೇಕಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಎಂಬ ಮುಕ್ತಿಮಾರ್ಗದ ಆರು ಹಂತಗಳು.
ಗುರು ಲಿಂಗ ಜಂಗಮದಲ್ಲಿ ಅಚಲವಾದ ಶ್ರದ್ಧೆಯನ್ನು ತೋರುವ ಮೂಲಕ ವ್ಯಕ್ತಿಯು ಭಕ್ತನಾಗಿ ಷಟ್ಸ್ಥಲದ ಮೊದಲ ಸ್ಥಲವಾದ ಭಕ್ತಸ್ಥಲವನ್ನು ಹೊಂದುವನು. ನಂತರ ಪರಮಾತ್ಮನಲ್ಲಿನ ನಿಷ್ಠೆಯನ್ನು ವೃದ್ಧಿಗೊಳಿಸಿ ಸದಾಚಾರಿಯಾದ ಭಕ್ತನು ಮಹೇಶಸ್ಥಲವನ್ನು ತಲುಪುವನು. ಪ್ರತಿಯೊಂದು ವಸ್ತುವನ್ನೂ ಲಿಂಗಾರ್ಪಿತ ಮಾಡಿ ಪ್ರಸಾದ ರೂಪದಲ್ಲಿ ಸ್ವೀಕರಿಸುವ ಭಕ್ತನು ಮಹೇಶಸ್ಥಲದಿಂದ ಪ್ರಸಾದಸ್ಥಲವನ್ನು ತಲುಪಿ ಪ್ರಸಾದಿಯಾಗುವನು. ಎಲ್ಲ ತೆರನಾದ ಮೋಹಗಳಿಂದ ಮುಕ್ತನಾಗಿ ತನ್ನ ಪ್ರಾಣವನ್ನೇ ಲಿಂಗವಾಗಿಸಿ ಕೊಂಡ ಭಕ್ತ ಲಿಂಗವ್ಯಸನಿಯಾಗಿ ಪ್ರಾಣಲಿಂಗಿಸ್ಥಲವನ್ನು ಹೊಂದಿ ಪ್ರಾಣಲಿಂಗಿಯಾಗುವನು. ಪ್ರಾಣಲಿಂಗಿಸ್ಥಲವನ್ನು ತಲುಪಿದ ಭಕ್ತನು ಮೋಕ್ಷದ ಹಂಗುಹರಿದು ತನ್ನ ಕಾಯವನ್ನೇ ಕೈಲಾಸ ಮಾಡಿಕೊಂಡು ಸರ್ವಾರ್ಪಣಭಾವದೊಂದಿಗೆ ಲಿಂಗಸಂಬಂಧಹೊಂದಿ ಶರಣನಾಗುವ ಹಂತಕ್ಕೆ ಶರಣಸ್ಥಲ ಎಂದು ಕರೆಯುವರು. ಶರಣಸ್ಥಲವನ್ನು ತಲುಪಿದ ಭಕ್ತನು ಲಿಂಗಾಂಗಸಾಮರಸ್ಯವನ್ನು ಹೊಂದಿ ಕೊನೆಯ ಸ್ಥಲವಾದ ಐಕ್ಯಸ್ಥಲಕ್ಕೇರುವನು. ಆ ಮೂಲಕ ಜೀವಿತಾವಧಿಯಲ್ಲೇ ಲಿಂಗೈಕ್ಯನಾಗಿ ಮುಕ್ತಿಯನ್ನು ಸಂಪಾದಿಸುವನು.
- Login or register to post comments
- Email this page