You are hereಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ಉಳ್ಳವರು ಶಿವಾಲಯ ಮಾಡಿಹರು
ನಾನೇನ ಮಾಡುವೆ ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೆ ದೇಗುಲ
ಶಿರ ಹೊನ್ನಕಲಶವಯ್ಯಾ.
ಕೂಡಲಸಂಗಮದೇವ ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
-ಬಸವಣ್ಣ

ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೆ,
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
ಸ್ಥಾವರ ಜಂಗಮ ಒಂದೇ ಎಂದುದು ಕೂಡಲಸಂಗನ ವಚನ.

-ಬಸವಣ್ಣ

ಬಸವಣ್ಣನವರ ಈ ಎರಡೂ ವಚನಗಳು ಒಂದಾಗಿ ಶರಣರ ಚಳವಳಿಯ ಪ್ರಣಾಳಿಕೆಯಂತಾಗಿವೆ. ಈ ವಚನಗಳಲ್ಲಿ ಬರುವ ಸ್ಥಾವರ ಮತ್ತು ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ ಶರಣರ ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ.

ಶರಣರ ತತ್ತ್ವಜ್ಞಾನವು ಅವಿನಾಶವಾದ ಚೈತನ್ಯದ ಕುರಿತು ಮತ್ತು ಚೈತನ್ಯದಿಂದ ಸೃಷ್ಟಿಯಾದರೂ ನಾಶವಾಗುವಂಥ ವಸ್ತುವಿನ ಕುರಿತು ತಿಳಿಸುವ ತತ್ತ್ವಜ್ಞಾನವಾಗಿದೆ. ಈ ವಿನಾಶಮಯವಾದ ವಸ್ತುವಿನಲ್ಲಿ ಅವಿನಾಶ ಚೈತನ್ಯವೂ ಇದೆ. ವಸ್ತು ಎಂಬ ಕಾಣುವ ಚೈತನ್ಯ ನಾಶವಾಗುವಂಥದ್ದಿದ್ದರೂ ಅದು ತನ್ನೊಳಗೆ ಅವಿನಾಶ ಚೈತನ್ಯವನ್ನೂ ಹೊಂದಿದೆ. ವಸ್ತು ನಾಶವಾದಾಗ ಮತ್ತೆ ಚೈತನ್ಯ ರೂಪ ತಾಳಿ ಮೂಲ ಚೈತನ್ಯದಲ್ಲಿ ಲೀನವಾಗುವುದು. ಕಣ್ಣಿಗೆ ಕಾಣುವ ಅಸಂಖ್ಯ ನಕ್ಷತ್ರಗಳು, ಸೂರ್ಯ, ಚಂದ್ರ, ಪೃಥ್ವಿ ಮತ್ತು ಪೃಥ್ವಿಯೊಳಗೆ ಇರುವ ಎಲ್ಲ ವಸ್ತುಗಳು ಮತ್ತು ಜೀವಿಗಳು ತಮ್ಮ ಆಯುಷ್ಯಕ್ಕೆ ತಕ್ಕಂತೆ ಬದುಕಿದ ನಂತರ, ಅಥವಾ ಅದಕ್ಕೂ ಮೊದಲೇ ನಾಶವಾಗಿ ಬಯಲಾಗುತ್ತವೆ. ಅಂದರೆ ತಮ್ಮ ರೂಪವನ್ನು ಕಳೆದುಕೊಂಡು ಮೂಲ ಚೈತನ್ಯದಲ್ಲಿ ಲೀನವಾಗುತ್ತವೆ.

ಶೂನ್ಯದಿಂದ ಸೃಷ್ಟಿಯಾದ ಜಗತ್ತು ಲಯವಾಗುವ ಮೂಲಕ ಶೂನ್ಯದಲ್ಲಿ ಲೀನವಾಗುವುದು. ಚೈತನ್ಯವು ನಿರಂತರ ಸತ್ಯವಾಗಿದೆ. ಆದರೆ ವಸ್ತು ಎಂಬುದು ಒಂದು ಕಾಲಘಟ್ಟದ ಸತ್ಯವಾಗಿದೆ. ಒಂದು ಕಾಲ ಘಟ್ಟದ ಸತ್ಯವೆಂದರೆ ವಾಸ್ತವ. ನಾವು ಬದುಕಿದ್ದೇವೆ ಇದು ಸುಳ್ಳಲ್ಲ ಆದರೆ ವಾಸ್ತವ. ನಾವು ಯಾರೂ ನೂರು ವರ್ಷಗಳ ನಂತರ ಬದುಕಿ ಉಳಿದಿರುವುದಿಲ್ಲ. ಇದು ಸತ್ಯ.

ಕಣ್ಣಿಗೆ ಕಾಣುವಂಥದ್ದೆಲ್ಲ ಒಂದು ದಿನ ನಾಶವಾಗಲೇ ಬೇಕು. ಹೀಗೆ ನಾಶವಾದದ್ದು ತನ್ನ ಮೂಲ ಚೈತನ್ಯಸ್ಥಿತಿಗೆ ಹೋಗಲೇ ಬೇಕು. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಮತ್ತು ಸ್ಥಾವರ ಜಂಗಮ ಒಂದೇ ಎಂದು ಬಸವಣ್ಣನವರು ಎರಡು ಪ್ರಕಾರವಾಗಿ ಹೇಳಿದ್ದನ್ನು ಅರ್ಥೈಸಿಕೊಳ್ಳುವ ಕ್ರಮ ಇದಾಗಿದೆ. ಹೀಗೆ ಸ್ಥಾವರ ವಸ್ತು ಮತ್ತು ಜಂಗಮ ಚೈತನ್ಯ ವಾಸ್ತವದಲ್ಲಿ ಬೇರೆ ಬೇರೆಯಾಗಿರುವಾಗ ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ. ಎಂಬುದರ ಅರ್ಥವಾಗುವುದು. ಆದರೆ ವಸ್ತು ಮತ್ತು ಚೈತನ್ಯಗಳು ಅಂತಿಮ ಸತ್ಯದ ಕ್ಷಣದಲ್ಲಿ ಒಂದಾಗುವಾಗ ಸ್ಥಾವರ ಜಂಗಮ ಒಂದೇ ಎಂಬುದರ ಅರಿವಾಗುವುದು.

ಶರಣರ ತತ್ತ್ವಜ್ಞಾನವು ವಸ್ತು ಮತ್ತು ಚೈತನ್ಯದ ಸಂಬಂಧವನ್ನು ತಿಳಿಸುವ ತತ್ತ್ವಜ್ಞಾನವಾಗಿದೆ. ಈ ತತ್ತ್ವಜ್ಞಾನದ ಮೂಲಕ ಶರಣರು ಜೀವಜಗತ್ತಿಗೆ ನ್ಯಾಯ ಒದಗಿಸುವ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸಿದ್ದು ಮಾನವನ ಇತಿಹಾಸದಲ್ಲಿಯೇ ಅನುಪಮವಾಗಿದೆ.

ವಸ್ತುರೂಪಿ ಜಗತ್ತು, ಚೈತನ್ಯರೂಪಿ ಜಗತ್ತು. ಸ್ಥಾವರದೊಳಗಿನ ಚೈತನ್ಯರೂಪಿ ಜಂಗಮ. ಜಂಗಮದ ಮೇಲಿನ ಜಡರೂಪಿ ಸ್ಥಾವರ. ಮನುವಾದಿಗಳ ಜಡ ಸಂಸ್ಕೃತಿಯಿಂದ ಕೂಡಿದ ಹಳೆಯ ಸಮಾಜ. ಶರಣರ ಚೈತನ್ಯ ಸಂಸ್ಕೃತಿಯಿಂದ ಕೂಡಿದ ಹೊಸ ಸಮಾಜ. ಚೈತನ್ಯದ ಪ್ರತೀಕವಾದ ಅರಿವೆಂಬ ದೇವರು. ಸ್ಥಾವರದ ಪ್ರತೀಕವಾದ ದೇಗುಲಗಳ ದೇವರು. ಹೀಗೆ ಈ ವೈರುಧ್ಯ ಮತ್ತು ವೈಶಿಷ್ಟ್ಯಗಳನ್ನು ಅರಿತುಕೊಳ್ಳದೆ ವಚನಜಗತ್ತನ್ನು ಪ್ರವೇಶಿಸಲಿಕ್ಕಾಗದು.

ಪ್ರತಿ ವಸ್ತು ಚೈತನ್ಯದಿಂದಲೇ ಆಗಿದೆ. ಅಷ್ಟೇ ಅಲ್ಲದೆ ಅದು ತನ್ನೊಳಗೆ ಚೈತನ್ಯವನ್ನೇ ತುಂಬಿಕೊಂಡಿದೆ. ಹೀಗಾಗಿ ಪ್ರತಿ ವಸ್ತು ತನ್ನೊಳಗೇ ಚೈತನ್ಯಶೀಲವಾಗಿದೆ. ಪ್ರತಿ ಅಣುವೂ ಚೈತನ್ಯಮಯವಾಗಿದೆ. ಚೈತನ್ಯವಿಲ್ಲದೆ ವಸ್ತು ಇಲ್ಲ. ವಸ್ತು ಎಂಬುದು ಕಾಣುವ ಚೈತನ್ಯ. ಅದರ ಗರ್ಭದಲ್ಲಿ ಕಾಣದ ಚೈತನ್ಯವಿದೆ. ಚೈತನ್ಯವು ವಿಶ್ವವ್ಯಾಪಿಯಾಗಿದೆ. ಚೈತನ್ಯದಿಂದಲೇ ವಿಶ್ವದ ನಿರ್ಮಾಣವಾಗಿದೆ. ಕಾಣುವ ವಿಶ್ವವು ಒಂದು ದಿನ ನಾಶವಾಗಿ ತನ್ನ ಮೂಲವಾದ ಚೈತನ್ಯದಲ್ಲೇ ಲೀನವಾಗುವುದು.

ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ. ಜಂಗಮ ಎಂದರೆ ಜೀವಜಗತ್ತು, ಜಂಗಮ ಎಂದರೆ ಮಾನವ ಸಮಾಜ. ಜಂಗಮ ಎಂದರೆ, ಮಾನವಕುಲ ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾಭಾವದಿಂದ ಸಾರುತ್ತ ಸಾಗುವ ಶರಣ.

ಹೀಗೆ ವಚನಕಾರರು ತಮ್ಮ ವಚನಗಳಲ್ಲಿ ಒಂದು ಶಬ್ದಕ್ಕೆ ಶಬ್ದಾರ್ಥ, ಲಕ್ಷಣಾರ್ಥ, ಧ್ವನ್ಯರ್ಥ ಮತ್ತು ತತ್ತ್ವಾರ್ಥ ಎಂಬ ಈ ನಾಲ್ಕು ಅರ್ಥಗಳ ಬಳಕೆಯನ್ನು ಮಾಡಿದ್ದಾರೆ. ಒಂದು ಶಬ್ದ ತಾನು ಬಳಕೆಯಾದ ವಚನದ ಸಂದರ್ಭಕ್ಕೆ ತಕ್ಕಂತೆ ಅರ್ಥವನ್ನು ಸ್ಫುರಿಸುತ್ತದೆ. ಅದು ನಾಲ್ಕು ರೀತಿಯ ಅರ್ಥಗಳಲ್ಲಿ ಯಾವ ಅರ್ಥಕ್ಕೆ ಬದ್ಧವಾಗಿದೆ ಎಂಬುದನ್ನು ಕಂಡುಕೊಳ್ಳದೆ ಹೋದರೆ ಅಪಾರ್ಥವಾಗುವ ಸಾಧ್ಯತೆಗಳೇ ಹೆಚ್ಚಿಗಿರುತ್ತವೆ.

ಸ್ಥಾವರ ಶಬ್ದದ ಅರ್ಥವನ್ನು ನಿಘಂಟಿನಲ್ಲಿ ಕೊಡುವ ಶಬ್ದಾರ್ಥದ ಮೂಲಕ ಮಾತ್ರ ಅರ್ಥೈಸಿ ಬಹಳಷ್ಟು ಗೊಂದಲ ಸೃಷ್ಟಿಸಲಾಗಿದೆ. ಸ್ಥಾವರ ಎಂದರೆ ಸ್ಥಾವರಲಿಂಗ ಎಂಬ ಲಕ್ಷಣಾರ್ಥಕ್ಕೆ ವಿಸ್ತರಿಸಿ ಇನ್ನಷ್ಟು ಗೊಂದಲ ಸೃಷ್ಟಿಸಲಾಗಿದೆ. ವಚನಕಾರರು ಒಂದೇ ಶಬ್ದವನ್ನು ವಿವಿಧ ವಚನಗಳಲ್ಲಿ ವಿವಿಧ ಅರ್ಥಗಳ ಹಿನ್ನೆಲೆಯಲ್ಲಿ ಬಳಸಿದ್ದಾರೆ ಎಂಬುದನ್ನು ಮರೆತರೆ ಗೊಂದಲಕ್ಕೀಡಾಗಬೇಕಾಗುವುದು. ಮಾನವ ವಿಮೋಚನೆ, ಮಾನವ ಘನತೆ, ಲಿಂಗಭೇದ, ವರ್ಣಭೇದ, ಜಾತಿಭೇದ ಮತ್ತು ವರ್ಗಭೇದಗಳಿಲ್ಲದ ಸರ್ವಸಮಾನತೆಯ ಭಾವೈಕ್ಯಸಮಾಜ ನಿರ್ಮಾಣ, ಒಬ್ಬನೇ ದೇವರು, ಒಂದೇ ವಿಶ್ವ ಮತ್ತು ಒಂದೇ ಮಾನವ ಜನಾಂಗ ಎಂಬ ಸತ್ಯದ ಪ್ರತಿಪಾದನೆ, ಕಾಯಕ, ಪ್ರಸಾದ ಮತ್ತು ದಾಸೋಹ ತತ್ತ್ವಗಳ ಮೂಲಕ ವಿಶ್ವದಲ್ಲಿ ಶಾಂತಿಸ್ಥಾಪನೆ ಮುಂತಾದವು ಶರಣರ ಉದ್ದೇಶಗಳಾಗಿದ್ದರಿಂದ ಅವರು ವಚನಗಳಲ್ಲಿ ಬಳಸುವ ಶಬ್ದಗಳನ್ನು ಈ ಆದರ್ಶಗಳಿಗೆ ಚ್ಯುತಿ ಬರದಂತೆ ಅರ್ಥೈಸುವುದು ಪ್ರತಿಯೊಬ್ಬರ ನೈತಿಕ ಜವಾಬ್ದಾರಿಯಾಗಿದೆ.

ಎರೆದಡೆ ನನೆಯದು, ಮರೆದಡೆ ಬಾಡದು,
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ.
ಕೂಡಲಸಂಗಮದೇವಾ ಜಂಗಮಕ್ಕೆರೆದಡೆ ಸ್ಥಾವರ ನನೆಯಿತ್ತು.
- ಬಸವಣ್ಣ

ಸಮಾಜದ ಬಗ್ಗೆ ಕಾಳಜಿ ಇಲ್ಲದೆ ಇಷ್ಟಲಿಂಗ ಪೂಜೆ ಮಾಡಿದರೂ ಅದು ಸ್ಥಾವರ ಪೂಜೆಯೇ ಆಗುತ್ತದೆ ಎಂದು ಬಸವಣ್ಣನವರು ಹೇಳುವಲ್ಲಿ ಸ್ಥಾವರದ ತತ್ತ್ವಾರ್ಥವನ್ನು ಸೂಚಿಸಿದ್ದಾರೆ. ಬಸವಣ್ಣನವರು ಈ ವಚನದಲ್ಲಿ ಸ್ಥಾವರ ಎಂದರೆ ಸಾಮಾಜಿಕ ಕಾಳಜಿ ಇಲ್ಲದ್ದು ಮತ್ತು ಜಂಗಮ ಎಂದರೆ ಸ್ವಸ್ಥಸಮಾಜ ಎಂದು ಅರ್ಥೈಸಿದ್ದಾರೆ. ಇಷ್ಟಲಿಂಗಕ್ಕೆ ನೀರೆರೆದರೆ ಅರಳುವುದಿಲ್ಲ. ಮರೆತರೆ ಬಾಡುವುದಿಲ್ಲ. ಇಂಥ ಲಿಂಗಾರ್ಚನೆ ಅರ್ಥಹೀನವಾದುದು. ಇಂಥ ಸಂದರ್ಭದಲ್ಲಿ ಇಷ್ಟಲಿಂಗವು ಸಹಜವಾಗಿಯೇ ಸ್ಥಾವರವಾಗುತ್ತದೆ. ಆದರೆ ಅದೇ ಇಷ್ಟಲಿಂಗ ಪೂಜೆಯನ್ನು ಜಂಗಮದಾಸೋಹದೊಂದಿಗೆ ಮಾಡಿದಾಗ, ಅಂದರೆ ಸಮಾಜಕ್ಕೆ ಸೇವೆ ಎಂಬ ನೀರನ್ನು ಎರೆದಾಗ, ಈಗಾಗಲೇ ಸ್ಥಾವರ ಎಂದು ಕರೆಯಿಸಿಕೊಂಡ ಇಷ್ಟಲಿಂಗವೇ ಅರಳುತ್ತದೆ. ಹಾಗೆ ಅರಳಿದಾಗ ಅದು ಚೈತನ್ಯಮಯವಾಗಿ ಸ್ಥಾವರ ಗುಣವನ್ನು ಕಳೆದುಕೊಳ್ಳುತ್ತದೆ. ಹೀಗೆ ವಚನಕಾರರು ಶಬ್ದಗಳನ್ನು ಅರ್ಥೈಸುವ ಕ್ರಮ ವಿಶಿಷ್ಟವಾಗಿದೆ. ಅವರು ಬಳಸುವ ಶಬ್ದಗಳ ಅರ್ಥ ಆಯಾ ವಚನಗಳಿಗೆ ಬದ್ಧವಾಗಿವೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವುದು ಅವಶ್ಯವಾಗಿದೆ.

ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು;
ನೀರನೊಲ್ಲದು, ಬೋನವ ಬೇಡದು, ಕರೆದಡೆ ಓ ಎನ್ನದು;
ಸ್ಥಾವರ ಪೂಜೆ, ಜಂಗಮದ ಉದಾಸೀನ
ಕೂಡಲಸಂಗಯ್ಯನೊಲ್ಲ ನೋಡಾ.
-ಬಸವಣ್ಣ

ದೇವರ ಕುರುಹು ಆಗಿರುವಂಥ ಲಿಂಗಪೂಜೆಯನ್ನು ಅರಿವಿಲ್ಲದೆ ಮಾಡುತ್ತ ಕೂಡುವುದು ಸ್ಥಾವರ ಪೂಜೆಯಾಗುತ್ತದೆ. ಅದಕ್ಕೆ ನೀರೂ ಬೇಡ, ನೈವೇದ್ಯವೂ ಬೇಡ. ಅದರೆ ಜೊತೆ ಮಾತನಾಡಲಿಕ್ಕಾಗದು. ಆದರೆ ಜಂಗಮವೆಂಬ ಸಮಾಜರೂಪಿಯಾದ ದೇವರು ನಮ್ಮ ಮುಂದೆ ಇದೆ. ಸಮಾಜ ನಮ್ಮ ಕೂಡ ಮಾತನಾಡುತ್ತದೆ. ಅದಕ್ಕೆ ಬೇಕುಬೇಡಗಳಿವೆ. ಅದಕ್ಕೆ ಹಸಿವಾಗುತ್ತದೆ, ನೀರಡಿಕೆಯಾಗುತ್ತದೆ. ಅಂಥ ಸಮಾಜದ ಬಗ್ಗೆ ಉದಾಸೀನ ಭಾವ ತಾಳುವವರ ಬಗ್ಗೆ ದೇವರು ಮೆಚ್ಚುವುದಿಲ್ಲ ಎಂದು ಬಸವಣ್ಣನವರು ಮನವರಿಕೆ ಮಾಡಿಕೊಡುತ್ತಾರೆ.

ದೇವರು ಸರ್ವವ್ಯಾಪಿಯಾಗಿರುವುದರಿಂದ ಸಕಲಜೀವರಾಶಿ ಆನಂದಮಯವಾಗಿ ಇರಬೇಕು ಎಂಬುದು ಶರಣರ ಆಶಯವಾಗಿದೆ. ಅಂತೆಯೆ ದಯೆಯೆ ಶರಣಧರ್ಮದ ಜೀವಾಳವಾಗಿದೆ. ದಯವಿಲ್ಲದ ಧರ್ಮ ಅದೇವುದಯ್ಯಾ ಎಂದು ಬಸವಣ್ಣನವರು ಕೇಳುತ್ತಾರೆ. ಅದೇವುದಯ್ಯಾ ಎಂದರೆ ಅದು ಏನು ಮಾಡುವುದು ಎಂದ ಹಾಗೆ. ಧರ್ಮವು ದಯೆಯನ್ನು ಕಳೆದುಕೊಂಡಾಗ, ಅಂದರೆ ಧರ್ಮವೊಂದರ ಅನುಯಾಯಿಗಳು ಧರ್ಮದ ಮೂಲತತ್ತ್ವವಾದ ದಯೆಯನ್ನು ಮರೆತಾಗ ಮೂಲಭೂತವಾದಿಗಳಾಗುತ್ತಾರೆ, ಮತಾಂಧರಾಗುತ್ತಾರೆ ಮತ್ತು ಕೋಮುವಾದಿಗಳಾಗುತ್ತಾರೆ. ಆಗ ಧರ್ಮದ ಹೆಸರಿನಲ್ಲಿ ಜನಾಂಗ ಹತ್ಯೆಗಳಾಗುತ್ತ ಹಿಂಸೆಯು ಬದುಕಿನ ಭಾಗವಾಗಿಬಿಡುತ್ತದೆ.

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು ಅಲ್ಲಿಯು ಸಲ್ಲರಯ್ಯಾ
ಕೂಡಲಸಂಗಮದೇವಾ.
-ಬಸವಣ್ಣ

ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವೆಂದರೆ ಈ ಪೃಥ್ವಿಯು ದೇವರ ಆನಂದ ಭವನ ಎಂಬ ಅರ್ಥ ಕೊಡುತ್ತದೆ. ಆದ್ದರಿಂದ ಈ ಸುಂದರ ಭೂಲೋಕದ ಎಲ್ಲ ಜೀವಿಗಳು ಸಂತಸದಿಂದ ಒಂದಾಗಿ ಬದುಕುವಂಥ ವಾತಾವರಣ ನಿರ್ಮಿಸುವುದು ಶರಣರ ಬಹುಮುಖ್ಯ ಗುರಿಯಾಗಿತ್ತು.

ಆದರೆ ವಿವಿಧ ಕಾಯಕಜೀವಿಗಳಾದ ಬಡವರು ಎಲ್ಲ ಕಷ್ಟಗಳನ್ನು ಸಹಿಸುತ್ತಲೇ ಉಳ್ಳವರ ಸೇವೆ ಮಾಡುತ್ತ ಬಂದಿದ್ದಾರೆ ಎಂಬುದನ್ನು ಬಸವಣ್ಣನವರು ಸಾಮಾಜಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಗುರುತಿಸಿದ್ದರು. ಉಳ್ಳವರ ದೇವಾಲಯಗಳಲ್ಲಿ ಬಡವರಿಗೆ ಪ್ರವೇಶವಿಲ್ಲದ ಸ್ಥಿತಿ ಉಂಟಾಗಿತ್ತು. ಮನೆಯಲ್ಲಿ ಮನೆಯೊಡೆಯನಿರುವಂತೆ ದೇವರು ಒಳಗೇ ಇರುವಾಗ ಮಾನವರೆಲ್ಲ ನಡೆದಾಡುವ ದೇವಾಲಯಗಳೇ ಆಗುತ್ತಾರೆ. ಒಳಗಿನ ಆತ್ಮಸಾಕ್ಷಿ ಎಂಬ ಅರಿವೇ ಗುರುವಾಗುತ್ತದೆ. ಅದುವೇ ದೇವರಾಗುತ್ತದೆ. ಹೀಗೆ ದೇಹವೇ ದೇವಾಲಯವಾಗುತ್ತದೆ ಮತ್ತು ಒಳಗಿನ ಚೈತನ್ಯವೇ ದೇವರಾಗುವುದು. ಇದು ಬಸವಧರ್ಮ ಅಂದರೆ ಶರಣಧರ್ಮ ಕಂಡುಕೊಂಡ ಸತ್ಯವಾಗಿದೆ.

ಈ ರೀತಿ ಪ್ರತಿಯೊಬ್ಬರೂ ದೇವಾಲಯವಾಗಿ ದೇವರ ಜೊತೆಗೇ ಇರುವಾಗ ಯಾರೂ ದೊಡ್ಡವರಾಗುವುದಿಲ್ಲ. ಯಾರೂ ಚಿಕ್ಕವರಾಗುವುದಿಲ್ಲ. ಉಳ್ಳವರು ಮತ್ತು ಬಡವರ ಮಧ್ಯದ ಅಂತರವು ಮಾನವ ನಿರ್ಮಿತವಾಗಿದೆ. ಕಣ್ಣಿಗೆ ಕಾಣುವ ವಸ್ತುರೂಪಿ ಜಗತ್ತು ನಾಶವಾಗುವಂಥದ್ದು. ಆದ್ದರಿಂದ ಇಂಥ ವಸ್ತುವಿನಿಂದಲೇ ಕೂಡಿದ ಸಂಪತ್ತು ಕೂಡ ನಾಶವಾಗುವಂಥದ್ದು. ಈ ಸಂಪತ್ತನ್ನು ಗಳಿಸಿದ ಉಳ್ಳವರು ಒಂದು ದಿನ ಬಡವರ ಹಾಗೆಯೆ ಸಾಯುವವರು. ಈ ಹಿನ್ನೆಲೆಯಲ್ಲಿ ಕಣ್ಣಿಗೆ ಕಾಣದ ಚೈತನ್ಯರೂಪಿ ಜಗತ್ತೊಂದಿದೆ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು. ಎಂದು ಬಸವಣ್ಣನವರು ಹೇಳಿದ್ದಾರೆ. ಇಲ್ಲಿ ಸಲ್ಲಬೇಕಾದರೆ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಬೇಕು. ದಯೆಯೇ ಧರ್ಮದ ಮೂಲವಾಗಬೇಕು. ಯಾರೂ ಹಸಿವಿನಿಂದ ನರಳದಂಥ ಮತ್ತು ಯಾವುದೇ ರೀತಿಯ ಭೇದಭಾವವಿಲ್ಲದಂಥ ಸಮಾಜ ನಿರ್ಮಾಣ ಮಾಡಬೇಕು. ಆ ಮೂಲಕ ಸರ್ವಸಮತ್ವವನ್ನು ಸಾಧಿಸಬೇಕು. ಹೀಗೆ ಬದುಕುತ್ತ ಇಲ್ಲಿ ಸಲ್ಲುವವರು ಆ ಚೈತನ್ಯರೂಪಿ ಜಗತ್ತಿನಲ್ಲಿಯೂ ಸಲ್ಲಲು ಸಾಧ್ಯವಾಗುತ್ತದೆ. ಆ ಚೈತನ್ಯರೂಪಿ ಜಗತ್ತು ನಮ್ಮೊಳಗಿನ ಚೈತನ್ಯದ ಜೊತೆಗೇ ಇದೆ. ಈ ಸತ್ಯವನ್ನು ತಿಳಿದುಕೊಂಡು ಲೋಕಕಲ್ಯಾಣಕ್ಕಾಗಿ ಬದುಕುವುದನ್ನು ಬಿಟ್ಟು, ಬರಿ ತಾತ್ತ್ವಿಕ ವಾದವಿವಾದದಲ್ಲೇ ಇಡೀ ಜೀವನ ಕಳೆಯುವವರ ಬಗ್ಗೆ ಬಸವಣ್ಣನವರು ವಿಷಾದ ವ್ಯಕ್ತಪಡಿಸುತ್ತಾರೆ.

ದ್ವೈತಾದ್ವೈತವನೋದಿ ಏನ ಮಾಡುವಿರಯ್ಯಾ
ನಮ್ಮ ಶರಣರ ಉರಿಗೆ ಅರಗಾಗಿ ಕರಗದನ್ನಕ್ಕ,
ಸ್ಥಾವರ ಜಂಗಮವೊಂದೆ ಎಂದು ನಂಬದನ್ನಕ್ಕ
ಕೂಡಲಸಂಗಮದೇವಾ
ಬರಿಯ ಮಾತಿನ ಮಾಲೆಯಲೇನಹುದು?
-ಬಸವಣ್ಣ

ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಜೀವಾತ್ಮ ಮತ್ತು ಪರಮಾತ್ಮ ಬೇರೆ ಎಂಬ ದ್ವೈತ ಮತದ ಬಗ್ಗೆಯಾಗಲೀ ಜಿವಾತ್ಮ ಮತ್ತ ಪರಮಾತ್ಮ ಒಂದೇ ಎಂಬ ಅದ್ವೈತ ಮತದ ಬಗ್ಗೆಯಾಗಲೀ ಜೀವನಪರ್ಯಂತ ಓದುತ್ತ, ಚರ್ಚಿಸುತ್ತ ಕಾಲ ಕಳೆದು ಮಾಡುವುದೇನಿದೆ? ಎಲ್ಲ ಭೇದಗಳನ್ನು ನಾಶಮಾಡುವ ಶರಣರ ಜ್ಞಾನಾಗ್ನಿಗೆ ಕರಗಿ ಜೀವಕಾರುಣ್ಯವನ್ನು ಹೊಂದದೆ ಮತ್ತು ಸ್ಥಾವರ ಜಂಗಮ ಒಂದೇ ಎಂಬ ಸತ್ಯವನ್ನು ನಂಬದೆ ಬರಿ ವಾದವಿವಾದ ಮಾಡುವುದರಲ್ಲೇನಿದೆ? ಎಂದು ಬಸವಣ್ಣನವರು ಕೇಳುತ್ತಾರೆ.

ಬೀಜದಲ್ಲಿ ವೃಕ್ಷ ಇರುವ ಹಾಗೆ ನಮ್ಮೊಳಗೇ ಪರಮಾತ್ಮನಿದ್ದಾನೆ. ನಾವು ದಾಸೋಹಂ ಭಾವದಿಂದ ಇಡೀ ಲೋಕಕ್ಕೆ ಹಿತವನ್ನು ಬಯಸುತ್ತ ಹೋದಾಗ ನಮ್ಮ ವ್ಯಕ್ತಿತ್ವವಿಕಸನ ಆಗತೊಡಗುತ್ತದೆ. ಆಗ ನಮ್ಮೊಳಗಿನ ದೇವರು ನಮ್ಮ ಅನುಭಾವಕ್ಕೆ ಬರತೊಡಗುತ್ತಾನೆ. ಈ ಅನುಭಾವವು ನಮ್ಮನ್ನು ದೇವರೊಡನೆ ಐಕ್ಯಸ್ಥಿತಿಗೆ ಒಯ್ಯುವುದು. ಹೀಗೆ ಐಕ್ಯಸ್ಥಿತಿಯನ್ನು ತಲುಪುವುದೇ ಲಿಂಗಾಂಗ ಸಾಮರಸ್ಯ. ನಾವು ನಮ್ಮೊಳಗಿನ ಚೈತನ್ಯದ ಜೊತೆ ಒಂದಾಗಿ ಲಿಂಗಾಂಗ ಸಾಮರಸ್ಯ ಸಾಧಿಸುವುದೇ ಶಿವಯೋಗದ ಫಲ.

ನಮ್ಮೊಳಗೆ ಇರುವ ದೇವರು ಇಡೀ ವಿಶ್ವದ ತುಂಬ ಇದ್ದಾನೆ ಎಂಬುದರ ಬಗ್ಗೆ ಬಸವಣ್ಣನವರು ನಮ್ಮನ್ನು ಎಚ್ಚರಿಸುತ್ತಾರೆ. ಜಂಗಮವ ನೋಡಿರೆ, ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ. ಎಂದು ತಿಳಿಸುತ್ತಾರೆ. ಹೀಗೆ ಎಲ್ಲೆಲ್ಲಿಯೂ ದೇವರೇ ತುಂಬಿರುವುದರಿಂದ ಲೋಕಸೇವೆ ಎಂಬುದು ದೇವಸೇವೆಯೇ ಆಗುತ್ತದೆ.

ಸ್ಥಾವರ ಜಂಗಮವೆಂಬ ಉಭಯ ಪಕ್ಷ ಒಂದೆ;
ಆವ ಮುಖದಲಿ ಬಂದಡೂ ತೃಪ್ತಿಯೊಂದೆ,
ಕೂಡಲಸಂಗಮದೇವರ ಆಪ್ಯಾಯನವೊಂದೆ.
-ಬಸವಣ್ಣ
ಸ್ಥಾವರ ಎಂಬುದು ತೋರಿಕೆಗೆ ಇರುವಂಥದ್ದು. ಅದು ಕೂಡ ನಿಜವಾದ ಅರ್ಥದಲ್ಲಿ ಜಂಗಮವೇ ಆಗಿದೆ. ಅಂದರೆ ಚೈತನ್ಯಮಯವೇ ಆಗಿದೆ. ಆದ್ದರಿಂದ ದೇವರು ಸ್ಥಾವರ ಸೇವೆ ಮತ್ತು ಜಂಗಮ ಸೇವೆ ಹೀಗೆ ಯಾವುದೇ ರೀತಿಯಿಂದ ನಮ್ಮ ಸೇವೆ ಸಂದರೂ ಒಂದೇ ರೀತಿಯ ಸಂತೃಪ್ತಿ ವ್ಯಕ್ತಪಡಿಸುತ್ತಾನೆ. ಇಷ್ಟಲಿಂಗ ಪೂಜೆ ಎಂಬ ಶಿವಯೋಗ ಇರುವುದೇ ಈ ಸತ್ಯವನ್ನು ಅರಿಯುವುದಕ್ಕಾಗಿ. ಲಿಂಗತತ್ತ್ವದಲ್ಲಿ ಬೀಜಸ್ವರೂಪವಾಗಿರುವ ಶಿವಶಕ್ತಿ, ಜಂಗಮದಲ್ಲಿ ಮೊಳಕೆಯೊಡೆಯುತ್ತದೆ. ಆ ಮೂಲಕ ಬೆಳೆಯುತ್ತದೆ.

ಅಂತರಂಗದೊಳಗಿರ್ದ ನಿರವಯಲಿಂಗವನು ಸಾವಯಲಿಂಗವ ಮಾಡಿ,
ಶ್ರೀಗುರುಸ್ವಾಮಿ ಕರಸ್ಥಲಕ್ಕೆ ತಂದುಕೊಟ್ಟನಾಗಿ,
ಆ ಇಷ್ಟಲಿಂಗವೇ ಅಂತರಂಗವನಾವರಿಸಿ
ಅಂತರಂಗದ ಕರಣಂಗಳೇ ಕಿರಣಂಗಳಾಗಿ
ಬೆಳಗುವ ಚಿದಂಶವೇ ಪ್ರಾಣಲಿಂಗವು,
ಆ ಮೂಲ ಚೈತನ್ಯವೇ ಭಾವಲಿಂಗವು,
ಇದನರಿದು ನೋಡುವ ನೋಟ ಭಾವಪೂರ್ಣವಾಗಿ
ತಾನುತಾನಾದಲ್ಲದೆ ಇದಿರಿಟ್ಟು ತೋರುವುದಿಲ್ಲವಾಗಿ
ಅಖಂಡ ಪರಿಪೂರ್ಣವಪ್ಪ ನಿಜವು ತಾನೆ, ಕೂಡಲಸಂಗಮದೇವ.
-ಬಸವಣ್ಣ

ಚೈತನ್ಯಸ್ವರೂಪವಾಗಿ ನಮ್ಮೊಳಗೇ ಇರುವ ದೇವರು ಇಷ್ಟಲಿಂಗ ರೂಪದಲ್ಲಿ ಕರಸ್ಥಲಕ್ಕೆ ಬರುತ್ತಾನೆ. ನಂತರ ಆ ಇಷ್ಟಲಿಂಗವೇ ಅಂತರಂಗವನ್ನೆಲ್ಲ ಆವರಿಸುವುದು. ಆಗ ನಮ್ಮೊಳಗಿನ ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ಕರಣಚತುಷ್ಟಯಗಳೇ ಅರಿವಿನ ಕಿರಣಗಳಾಗಿ ಬೆಳಗುತ್ತವೆ. ಆ ಬೆಳಗುವ ಚಿತ್ ಅಂಶವೇ ಪ್ರಾಣಲಿಂಗ. ನಮ್ಮೊಳಗಿನ ಮೂಲ ಚೈತನ್ಯವೇ ಭಾವಲಿಂಗ. ಇದನ್ನೆಲ್ಲ ಅರಿತುಕೊಂಡು ಇಷ್ಟಲಿಂಗದಲ್ಲಿ ದೃಷ್ಟಿಯು ನೆಟ್ಟಾಗ, ಆ ನೋಟ ಭಾವಪೂರ್ಣವಾಗುವುದು. ಹೀಗೆ ನಾವು ನಮ್ಮ ಚೈತನ್ಯದ ಜೊತೆ ಸಾಮರಸ್ಯ ಹೊಂದುವುದೇ ಲಿಂಗಾಂಗ ಸಾಮರಸ್ಯ.

ಇಷ್ಟಲಿಂಗ ಪೂಜಕ ತನ್ನೊಳಗೆ ಪ್ರವೇಶಿಸಿ ತನ್ನ ಚೈತನ್ಯದೊಂದಿಗೆ ಒಂದಾಗದೆ ಹೋದರೆ ಲಿಂಗಪೂಜೆ ಬರಿ ಆಚರಣೆಯಾಗುವುದು. ದೇವರು ಪರಿಪೂರ್ಣ ಸತ್ಯವಾಗಿರುವುದರಿಂದ ನಮ್ಮೊಳಗಿನ ದೇವರ ಜೊತೆ ಸಾಮರಸ್ಯ ಸಾಧಿಸುವ ಕ್ರಮವನ್ನು ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ.

ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.
ನೀನಲ್ಲದೆ ಮತ್ತಾರೂ ಇಲ್ಲಯ್ಯಾ.
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು.
-ಬಸವಣ್ಣ

ಈ ವಚನದಲ್ಲಿ ಬಸವಣ್ಣನವರು ವಿಶ್ವವ್ಯಾಪಿಯಾಗಿರುವ ದೇವರ ಬಗ್ಗೆ ತಿಳಿಸುತ್ತಾರೆ. ತಂದೆ, ತಾಯಿ, ಬಂಧು, ಬಳಗದಲ್ಲಿ ದೇವರನ್ನು ಕಾಣುತ್ತಾರೆ. ಕೊನೆಗೆ ಎಲ್ಲರಲ್ಲಿಯೂ ದೇವರನ್ನೇ ಕಾಣುತ್ತಾರೆ. ಎಂಥದೆ ಪ್ರಸಂಗದಲ್ಲಿ ಈ ಸತ್ಯವನ್ನೇ ನಂಬುವುದಾಗಿ ತಿಳಿಸುತ್ತಾರೆ.

ಒಂದೇ ವಸ್ತು ತನ್ನ ಲೀಲೆಯಿಂದ
ಪರಮಾತ್ಮ ಜೀವಾತ್ಮನಾಯಿತ್ತು.
ಆ ಪರಮಾತ್ಮನೇ ಲಿಂಗ, ಜೀವಾತ್ಮನೇ ಅಂಗ, ಸಂಗವೇ ಏಕಾತ್ಮ.
ತತ್ ಪದವೇ ಪರಮಾತ್ಮ, ತ್ವಂ ಪದವೇ ಜೀವಾತ್ಮ,
ಅಸಿ ಪದವೇ ತಾದಾತ್ಮ್ಯವಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
-ಉರಿಲಿಂಗಪೆದ್ದಿ

ಪರಮಾತ್ಮನಿಗೂ ಜೀವಾತ್ಮನಿಗೂ ಮೂಲವಾಗಿ ಒಂದೇ ವಸ್ತು ಇದೆ ಎಂದು ಉರಿಲಿಂಗಪೆದ್ದಿ ಹೇಳುತ್ತಾರೆ. ಆ ವಸ್ತು ತನ್ನ ಲೀಲೆಯಿಂದ ಲಿಂಗ ಮತ್ತು ಅಂಗ ಆಗುತ್ತದೆ. ಲಿಂಗ ಪರಮಾತ್ಮನಾದರೆ ಅಂಗ ಜೀವಾತ್ಮನಾಗುತ್ತಾನೆ. ಲಿಂಗವು ಜಂಗಮವಾದರೆ ಅಂಗವು ಸ್ಥಾವರವಾಗುತ್ತದೆ. ಲಿಂಗ ಅವಿನಾಶ, ಅಂಗ ನಾಶವಾಗುವಂಥದ್ದು. ಆದರೆ ತತ್ತ್ವಮಸಿ ಅಂದರೆ ಅದು ನಾವೇ ಆಗಿರುವುದರಿಂದ ನಾಶಹೊಂದಿದರೂ ಚೈತನ್ಯದ ಜೊತೆಯೇ ಒಂದಾಗುತ್ತೇವೆ. ಉರಿಲಿಂಗಪೆದ್ದಿಗಳು ಹೇಳುವ ತಾದಾತ್ಮ್ಯವೇ ಲಿಂಗಾಂಗ ಸಾಮರಸ್ಯ.

ಈ ರೀತಿಯ ಲಿಂಗಾಂಗ ಸಾಮರಸ್ಯ ನಮ್ಮೊಳಗಿನ ಚೈತನ್ಯದ ಕುರುಹಾದ ಇಷ್ಟಲಿಂಗದಿಂದ ಸಾಧ್ಯ ಹೊರತಾಗಿ ಸ್ಥಾವರಲಿಂಗದಿಂದ ಸಾಧ್ಯವಾಗದು. ಅಂತೆಯೆ ಅಲ್ಲಮಪ್ರಭುಗಳು ಹೀಗೆ ಹೇಳುತ್ತಾರೆ:

ಕಲ್ಲ ಮನೆಯ ಮಾಡಿ, ಕಲ್ಲದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದಡೆ ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ.
-ಅಲ್ಲಮಪ್ರಭು

ಸ್ಥಾವರಲಿಂಗದ ಮೂಲಕ ಲಿಂಗಾಂಗ ಸಾಮರಸ್ಯವನ್ನು ಸಾಧಿಸಲಿಕ್ಕಾಗದು. ಕಲ್ಲಿನಿಂದ ಗುಡಿಯ ಕಟ್ಟಿ, ಕಲ್ಲಿನಿಂದಲೇ ಲಿಂಗವನ್ನು ಕಡೆದು, ಅದನ್ನು ಕಲ್ಲಮೇಲೆ ಇಟ್ಟು ಪೂಜಿಸುವುದನ್ನು ಅಲ್ಲಮಪ್ರಭುಗಳು ವಿರೋಧಿಸುತ್ತಾರೆ. ಇದನ್ನು ದೇವರೆಂದು ತಿಳಿದರೆ ನಮ್ಮ ಒಳಗಿರುವ ಮತ್ತು ವಿಶ್ವವ್ಯಾಪಿಯಾಗಿರುವ ದೇವರು ಎಲ್ಲಿಗೆ ಹೋದರು? ಎಂದು ಪ್ರಶ್ನಿಸುತ್ತಾರೆ. ಆದ್ದರಿಂದ ಲಿಂಗ ಪ್ರತಿಷ್ಠೆ ಮಾಡಿದವರಿಗೆ ನಾಯಕನರಕ ಎಂದು ತಿಳಿಸುತ್ತಾರೆ.

ನಮ್ಮ ಒಳಜಗತ್ತು ಮತ್ತು ಹೊರಜಗತ್ತುಗಳಲ್ಲಿ ದೇವರು ವ್ಯಾಪಿಸಿರುವುದರಿಂದ. ಅಲ್ಲದೆ ಸಕಲಜೀವಾತ್ಮರಲ್ಲಿ ದೇವರೇ ಇರುವುದರಿಂದ. ಅಂಥ ದೇವರ ಜೊತೆ ಸಾಮರಸ್ಯ ಸಾಧಿಸಲು ಇಷ್ಟಲಿಂಗದ ಅವಶ್ಯಕತೆಯನ್ನು ಶರಣರು ಮನಗಂಡಿದ್ದರು. ಈ ಕಾರಣದಿಂದಲೇ ಅವರು ಸ್ಥಾವರಲಿಂಗ ಮತ್ತು ಮೂರ್ತಿಪೂಜೆಯನ್ನು ನಿರಾಕರಿಸಿದರು.

ತನು ನಿಮ್ಮದೆಂಬೆ, ಮನ ನಿಮ್ಮದೆಂಬೆ, ಧನ ನಿಮ್ಮದೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಲಿಂಗ ಜಂಗಮವೆಂಬೆ, ಜಂಗಮ ಲಿಂಗವೆಂಬೆ,
ಮತ್ತೆಯೂ ವಂಚನೆ ಮಾಣದಯ್ಯಾ.
ಒಡಲೊಡವೆ, ಹಡೆದರ್ಥ ನಿಮ್ಮದೆಂದರಿಯದೆ
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವಾ.
-ಬಸವಣ್ಣ

ಎಲ್ಲವೂ ದೇವರದೇ ಆಗಿದೆ. ನಮ್ಮ ಸಂಪತ್ತಷ್ಟೇ ಅಲ್ಲ, ನಮ್ಮ ದೇಹವೂ ದೇವರದೇ ಆಗಿದೆ. ಇದನ್ನು ಅರಿಯದೆ ಜನ ಸ್ವಾರ್ಥಿಗಳಾಗಿ ಶೋಷಣೆಯಲ್ಲಿ ಮತ್ತು ಯುದ್ಧದಲ್ಲಿ ತೊಡಗುತ್ತಾರೆ. ಜನರು ದೇವರಲ್ಲಿ ಸಕಲಜೀವಾತ್ಮರನ್ನು ಮತ್ತು ಸಕಲಜೀವಾತ್ಮರಲ್ಲಿ ದೇವರನ್ನು ಕಾಣುವ ಮನಸ್ಥಿತಿಯನ್ನು ಹೊಂದದೆ ಹೋದರೆ ಸ್ವಾರ್ಥವು ಹೆಚ್ಚಾಗುತ್ತ ಇಡೀ ಜಗತ್ತೇ ರಣರಂಗವಾಗಿ ವಿನಾಶದ ಅಂಚಿಗೆ ಹೋಗುವುದು. ಅಂತಃಕರಣವೊಂದೇ ಈ ಜಗತ್ತನ್ನು ಕಾಪಾಡಬಲ್ಲುದು ಎಂಬುದು ಶರಣರ ದೃಢನಿಲವಾಗಿದೆ. ಶರಣರು ಕಂಡುಕೊಂಡ ಸತ್ಯವನ್ನು ಅರಿಯದೆ ಹೋದರೆ. ಮಾನವರು ಸ್ವಾರ್ಥದಿಂದ ಕಂಡದ್ದೆಲ್ಲ ಸ್ಥಾವರವಾಗುತ್ತ ಜಗತ್ತು ವಿನಾಸದ ಅಂಚಿಗೆ ಸರಿಯುವುದು.

ಜಲವ ತಪ್ಪಿದ ಮತ್ಸ್ಯ ಬದಕೂದೇ ಸೋಜಿಗ.
ಗಣತಿಂಥಿಣಿಯೊಳಗಿರಿಸೆನ್ನ ಲಿಂಗವೆ.
ಶಿವ ಶಿವಾ, ಕೂಡಲಸಂಗಮದೇವಾ,
ಸೆರಗೊಡ್ಡಿ ಬೇಡುವೆನು.
- ಬಸವಣ್ಣ

ನೀರಿಲ್ಲದೆ ಮೀನುಗಳು ಬದುಕಲಾರವು. ಹಾಗೆಯೆ ಜನಸಮುದಾಯವಿಲ್ಲದೆ ಶರಣರು ಬದುಕಲಾರರು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ. ಲೋಕಕಲ್ಯಾಣವೇ ಅವರ ಗುರಿಯಾಗಿದ್ದರಿಂದ ಅವರು ಜನಸಮುದಾಯದಲ್ಲೇ ದೇವರನ್ನು ಕಂಡರು. ಇಡೀ ಸಮಾಜಕ್ಕೆ ಜಂಗಮಲಿಂಗವೆಂದು ಕರೆದರು.

ಇಷ್ಟಲಿಂಗದ ಮೂಲಕ ಬರಿ ಒಳಜಗತ್ತನ್ನು ಅರಿತುಕೊಳ್ಳುವುದರಲ್ಲೇ ತೃಪ್ತಿಪಡದೆ ಜಂಗಮಲಿಂಗವೆಂಬ ಹೊರಜಗತ್ತಿನ ಸೇವೆ ಮಾಡುವ ವಿಶಾಲ ಮನೋಭಾವವನ್ನು ಪಡೆದುಕೊಂಡರು. ಇದಕ್ಕೆ ಬಸವಣ್ಣನವರು ಉಭಯಕುಳ ಎಂದು ಕರೆದಿದ್ದಾರೆ. ಉಭಯಕುಳ ಎಂದರೆ ಇಷ್ಟಲಿಂಗ ಪೂಜೆ ಮತ್ತು ಜಂಗಮದಾಸೋಹ.

ಅದ್ವೈತವ ಅಂತರಂಗದಲ್ಲಿ ಅರಿದು
ಹೊರಗೆ ದಾಸೋಹವ ಮಾಡದಿರ್ದಡೆ
ಎಂತಯ್ಯ ಉಭಯ ಸಂದೇಹದಲ್ಲಿ ನಿಜವಪ್ಪುದು.
-ಬಸವಣ್ಣ

ದೇವರು ಮತ್ತು ಜೀವಜಗತ್ತಿನ ಮಧ್ಯೆ ಅಭೇದ್ಯವಿದೆ ಎಂದು ತಿಳಿದುಕೊಂಡ ಮೇಲೆ ದಾಸೋಹದ ಮೂಲಕ ಲೋಕಸೇವೆ ಮಾಡದಿದ್ದರೆ ಅರಿತುಕೊಂಡ ಜ್ಞಾನ ನಿರರ್ಥಕ ಎಂದು ಬಸವಣ್ಣನವರು ತಿಳಿಸಿದ್ದಾರೆ. ದಾಸೋಹಂಭಾವದಿಂದ ಲೋಕಸೇವೆ ಮಾಡಬೇಕಾದರೆ ಮೊದಲಿಗೆ ಕಾಯಕ ಮಾಡಬೇಕಾಗುತ್ತದೆ. ಕಾಯಕದಿಂದ ಬಂದುದನ್ನು ದೇವರು ಕೊಟ್ಟ ಪ್ರಸಾದವೆಂದು ಸ್ವೀಕರಿಸಬೇಕಾಗುತ್ತದೆ. ಹಾಗೆ ಬಂದುದರಲ್ಲಿ ಸಮಾಜರೂಪಿ ದೇವರೆಂಬ ಜಂಗಮಲಿಂಗಕ್ಕೆ ಅರ್ಪಿಸಬೇಕಾಗುತ್ತದೆ. ಇದುವೆ ಜಂಗಮದಾಸೋಹ. ಈ ಜಂಗಮದಾಸೋಹವೇ ಸಮಾಜಸೇವೆ.

ಶರಣರಲ್ಲಿ ಸಮಾಜಸೇವೆ ಎಂಬ ಜಂಗಮದಾಸೋಹಕ್ಕೆ ಬಹಳ ಮಹತ್ವವಿದೆ. ಅದಕ್ಕಾಗಿ ಕಾಯಕದಲ್ಲಿ ನಿರತವಾಗುವುದಕ್ಕೆ ಇನ್ನೂ ಹೆಚ್ಚಿನ ಮಹತ್ವವಿದೆ.

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು;
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
-ಆಯ್ದಕ್ಕಿ ಮಾರಯ್ಯ

ಧರ್ಮ ಇರುವುದು ಲೋಕಕಲ್ಯಾಣಕ್ಕಾಗಿ. ಲೋಕಸೇವೆ ಮಾಡದೆ ಬರಿ ಪೂಜೆ ಮಾಡುವುದು ನಿರರ್ಥಕ. ಲೋಕಸೇವೆ ಮಾಡಬಯಸುವವರು ಕಾಯಕದ ಮೂಲಕ ಸಂಪಾದನೆ ಮಾಡಬೇಕು. ಇಂಥ ಸದುದ್ದೇಶದ ಕಾಯಕದಲ್ಲೇ ದೇವರಿರುತ್ತಾನೆ ಎಂದು ಆಯ್ದಕ್ಕಿ ಮಾರಯ್ಯ ಹೇಳುತ್ತಾರೆ.

ಲಿಂಗವ ಪೂಜಿಸುತ್ತ ಜಂಗಮದ ಮುಖವ ನೋಡುತ್ತಿಪ್ಪ
ಸುಖವ ಕೊಡು, ಕಂಡಾ ಲಿಂಗವೆ,
ಪರಮ ಸುಖವ ಕೊಡು, ಕಂಡಾ ಲಿಂಗವೆ.
ಕೂಡಲಸಂಗಮದೇವಾ ಇದೇ ವರವ ನಿಮ್ಮಲ್ಲಿ ಬೇಡುವೆ.
-ಬಸವಣ್ಣ

ಲಿಂಗಪೂಜೆ ಮತ್ತು ಸಮಾಜವೆಂಬ ಜಂಗಮದ ಸೇವೆಯನ್ನು ಏಕಕಾಲಕ್ಕೆ ಮಾಡಬೇಕು. ಆ ಸಮಾಜಸೇವೆಯಲ್ಲಿ ಪರಮ ಸುಖವನ್ನು ಅನುಭವಿಸಬೇಕು ಎಂಬುದು ಬಸವಣ್ಣನವರ ಆಶಯವಾಗಿತ್ತು. ಬಸವಣ್ಣನವರಾಗಲೀ ಇತರ ಶರಣರಾಗಲೀ ದೇವರಲ್ಲಿ ಮುಕ್ತಿಯನ್ನು ಬಯಸಲಿಲ್ಲ. ಅಂಥ ಮುಕ್ತಿಯಲ್ಲಿ ಅವರಿಗೆ ನಂಬಿಕೆಯೂ ಇರಲಿಲ್ಲ. ಅವರು ಲಿಂಗಾಂಗ ಸಾಮರಸ್ಯದಲ್ಲೇ ಮುಕ್ತಿಯನ್ನು ಕಾಣುತ್ತಿದ್ದರು. ಸಕಲ ಜೀವಕೋಟಿ ಆನಂದದಿಂದ ಬದುಕಬೇಕು ಎಂಬುದೇ ಅವರ ತೀವ್ರತೆಯಾಗಿತ್ತು. ಅವರಿಗೆ ಸಾಮೂಹಿಕ ಬದುಕಿನ ಬಗ್ಗೆ ಕಾಳಜಿಯೂ ಮತ್ತು ಸ್ವಾರ್ಥದ ಬದುಕಿನ ಬಗ್ಗೆ ಹೇಸಿಕೆಯೂ ಇತ್ತು. ಅಂತೆಯೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಆಸೆ ಎಂಬುದು ಭವದ ಬೀಜ; ನಿರಾಸೆ ಎಂಬುದು ನಿತ್ಯ ಮುಕ್ತಿ ಎಂದು ಹೇಳುತ್ತಾಳೆ.

ಕಲ್ಲನಾಗರ ಕಂಡಡೆ ಹಾಲೆನೆರೆಯೆಂಬರು,
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ,
ಉಂಬ ಜಂಗಮ ಬಂದಡೆ ನಡೆಯೆಂಬರು.
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ.
-ಬಸವಣ್ಣ

ಬಸವಣ್ಣನವರು ಈ ವಚನದಲ್ಲಿ ಇಷ್ಟಲಿಂಗತತ್ತ್ವ ಪ್ರಚಾರ ಮಾಡುವ ಶರಣರಿಗೆ ಜಂಗಮ ಎಂದು ಕರೆದಿದ್ದಾರೆ. ಬಂದ ಜಂಗಮನಿಗೆ ಉಣಲು ಕೊಡದಿದ್ದಾಗ ಆತ ಯಾವ ಲಿಂಗತತ್ತ್ವ ಪ್ರಚಾರ ಮಾಡುತ್ತಾನೆಯೋ ಆ ಲಿಂಗ ಉಣ್ಣದ ಲಿಂಗವೆಂದು ಕರೆಯಿಸಿಕೊಳ್ಳುವುದರ ಮೂಲಕ ಸ್ಥಾವರ ಗುಣವನ್ನು ಹೊಂದುತ್ತದೆ. ಮನುಷ್ಯರು ತಮ್ಮ ಕ್ರಿಯೆಯ ಮೂಲಕ ಒಂದು ತತ್ತ್ವವನ್ನು ಜೀವಂತವಿಟ್ಟಾಗ ಮಾತ್ರ ಅದು ಚಲನಶೀಲ ಗುಣವನ್ನು ಹೊಂದುತ್ತದೆ. ಇಲ್ಲದಿದ್ದರೆ ಸ್ಥಾವರವಾಗಿ ಉಳಿಯುತ್ತದೆ. ಇದು ಜೀವಕೇಂದ್ರಿತ ಚಿಂತನೆಯಾಗಿದೆ. ಬಸವಣ್ಣನವರ ಪ್ರಕಾರ ಯಾವುದು ಜೀವಕೇಂದ್ರಿತ ಚಿಂತನೆಯೊ ಅದು ಮಾತ್ರ ಜಂಗಮ. ಇದು ಅಳಿವಿಲ್ಲದು. ಯಾವುದು ವಸ್ತುಕೇಂದ್ರಿತ ಚಿಂತನೆಯೊ ಅದು ಸ್ಥಾವರ. ಅದು ನಾಶವಾಗುವಂಥದ್ದು. ಮನುಷ್ಯನನ್ನು ಕಡೆಗಣಿಸಿ ಧನವನ್ನೇ ಪ್ರಧಾನವಾಗಿರಿಸಿಕೊಳ್ಳುವ ಸಮಾಜ ಕೂಡ ಸ್ಥಾವರ ಸಮಾಜವೇ ಆಗುತ್ತದೆ. ಅದಕ್ಕೆ ಅಳಿವು ಉಂಟು. ಸಕಲಜೀವಾತ್ಮರನ್ನು ಪ್ರಧಾನವಾಗಿರಿಸಿಕೊಳ್ಳುವ ಸಮಾಜ ಮಾತ್ರ ಜಂಗಮ ಸಮಾಜವಾಗಿರುತ್ತದೆ. ಇಂಥ ಸಮಾಜಕ್ಕೆ ಅಳಿವು ಇಲ್ಲ. ಎಲ್ಲ ಜೀವಿಗಳಲ್ಲಿ ದೇವರು ಇರುವುದರಿಂದ ಎಲ್ಲವೂ ಸುಖವಾಗಿರಬೇಕು ಎಂದು ಬಸವಣ್ಣ ಹೇಳುತ್ತಾರೆ.

ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ,
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ,
ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ.
ಇಂತೀ ತ್ರಿವಿಧ ಗುಣವನರಿದಾತನು
ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.
-ಬಸವಣ್ಣ

ತನ್ನೆಲ್ಲ ತೀವ್ರತೆಯನ್ನು ಲಿಂಗದ ಕಡೆಗೆ ಹರಿಬಿಟ್ಟವನಿಗೆ ದೈಹಿಕ ಆಸೆಗಳಿರುವುದಿಲ್ಲ. ಅದೇ ರೀತಿ ಸಮಾಜದ ಕಡೆಗೆ ಆಸಕ್ತನಾದವನು ಧನಮೋಹಿಯಾಗಿರುವುದಿಲ್ಲ. ಪ್ರಸಾದದ ಕಡೆಗೆ ವಾಲಿದವನಿಗೆ ಮನೋವಿಕಾರವಿರುವುದಿಲ್ಲ. ಹೀಗೆ ದೈಹಿಕ, ಆರ್ಥಿಕ ಮತ್ತು ಮಾನಸಿಕ ವಿಕಾರಕ್ಕೆ ಒಳಗಾಗದವನು ಲಿಂಗ ಜಂಗಮ ಪ್ರಸಾದದ ಮಹತ್ವವನ್ನು ಅರಿತು ಲಿಂಗಾಂಗ ಸಾಮರಸ್ಯದೊಂದಿಗೆ ಆನಂದಮಯನಾಗಿರುತ್ತಾನೆ.

ನಿತ್ಯ ನಿರಂಜನ ಪರಂಜ್ಯೋತಿವಸ್ತು
ಉಪದೇಶವ ಕೊಟ್ಟು ಗುರುವಾದ,
ಕರಸ್ಥಲಕ್ಕೆ ಬಂದು ಲಿಂಗವಾದ,
ಹಸರವಾದ ಪ್ರಪಂಚನಳಿದು ದಾಸೋಹವ ಮಾಡಿಸಿಕೊಂಡು ಜಂಗಮವಾದ.
ಇಂತೀ ಗುರುಲಿಂಗಜಂಗಮ ಒಂದೆಯಲ್ಲದೆ ಭಿನ್ನವಿಲ್ಲ.
ಈ ಮೂರಕ್ಕೆ ಮೂರನಿತ್ತು ಮೂರನೊಂದ ಮಾಡಬಲ್ಲಡೆ,
ಆತ ಪ್ರಸಾದಕಾಯನಯ್ಯಾ ಕೂಡಲಸಂಗಮದೇವಾ.
-ಬಸವಣ್ಣ

ಬಸವಣ್ಣನವರು ದೇವರನ್ನು ಮಹಾಪ್ರಕಾಶ ಎಂದು ಕರೆದಿದ್ದಾರೆ. ಅಂಥ ದೇವರೇ ಅರಿವು ಕೊಟ್ಟು ಗುರುವಾದ. ಕರಸ್ಥಲಕ್ಕೆ ಬಂದು ಇಷ್ಟಲಿಂಗವಾದ. ವಿಶಾಲವಾದ ಪ್ರಪಂಚದಲ್ಲಿ ದಾಸೋಹವ ಮಾಡಿಸಿಕೊಂಡು, ಅಂದರೆ ವಸ್ತುಮೋಹವನ್ನು ಅಳಿಸಿ ಜಂಗಮವಾದ ಎಂದು ಹೇಳುತ್ತಾರೆ. ಆದ್ದರಿಂದ ಲೋಕಸೇವೆ ಸಹಜವಾಗಿಯೇ ದೇವರ ಸೇವೆಯಾಗುತ್ತದೆ. ಅಷ್ಟೇ ಅಲ್ಲದೆ ಗುರು, ಲಿಂಗ ಮತ್ತು ಜಂಗಮದ ಮಧ್ಯೆ ಅಭೇದ್ಯ ಕಲ್ಪಿಸುವುದರ ಮೂಲಕ ಬಸವಣ್ಣನವರು ಗುರುವೆಂಬ ಜ್ಞಾನ, ಲಿಂಗವೆಂಬ ನೀತಿ ಮತ್ತು ಜಂಗಮವೆಂಬ ಸಮಾಜದ ಮಧ್ಯದ ಘನ ಸಂಬಂಧದ ಅರಿವು ಮೂಡಿಸುತ್ತಾರೆ.

ಶಿವಭಕ್ತರೇ ಅಧಿಕರು ನೋಡಯ್ಯಾ
ಇದಕ್ಕೆ ಅಧಿಕವಾಗಿ ಜಂಗಮವ ಕಂಡೆ.
ಈ ದ್ವಿವಿಧವನೊಂದೆ ಎಂದು ನಂಬಿದೆ
ಕೂಡಲಸಂಗಮದೇವಾ.
-ಬಸವಣ್ಣ

ಇಂಥ ಪರಿಜ್ಞಾನವುಳ್ಳ ಶಿವಭಕ್ತರು ಶ್ರೇಷ್ಠರು ಎಂದು ಬಸವಣ್ಣನವರು ಹೇಳುತ್ತಾರೆ. ಆದರೆ ಮಾನವ ಸಮಾಜವೆಂಬ ಜಂಗಮವು ಶರಣಸಂಕುಲಕ್ಕಿಂತ ಶ್ರೇಷ್ಠ ಎಂದು ಸಾರುವ ಮೂಲಕ ಮಾನವಕುಲದ ಘನತೆಯನ್ನು ಎತ್ತಿಹಿಡಿಯುತ್ತಾರೆ. ನಂತರ ಶಿವಭಕ್ತರ ಸರ್ವಸಮತ್ವದ ನವಸಮಾಜ ಮತ್ತು ಇಡೀ ಮಾನವ ಸಮಾಜವನ್ನು ಒಂದೇ ತೆರನಾಗಿ ನೋಡುತ್ತಾರೆ. ಹೀಗೆ ಮಾನವ ಏಕತೆಯನ್ನು ಸಾಧಿಸುವುದರ ಮೂಲಕ ಭೂಲೋಕದ ಮಹತ್ವವನ್ನು ಸಾರುತ್ತಾರೆ.

ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ?
ಎನ್ನೊಳಗಿದ್ದು ನಿನ್ನ ತೋರಲಿಕೆ ನೀನೇ ರೂಪಾದೆ.
ಇನ್ನು ಜಂಗಮವೇ ಲಿಂಗವೆಂದು ನಂಬಿದೆ ಕೂಡಲಸಂಗಮದೇವಾ.
-ಬಸವಣ್ಣ

ಬಸವಣ್ಣನವರು ಭೂಲೋಕಕ್ಕೆ ಮಹತ್ವ ಕೊಡಲು ಕಾರಣವಿದೆ. ನಮ್ಮೊಳಗಿನ ದೇವರು ತನ್ನ ರೂಪ ತೋರಿಸಲು ವಿಶ್ವದ ವಿರಾಟ್ ದರ್ಶನ ಮಾಡಿಸಿದ. ಅದುವೇ ದೇವರ ಜಂಗಮರೂಪ. ಆದ್ದರಿಂದ ಜಂಗಮವನ್ನೇ ಲಿಂಗವೆಂದು ನಂಬಿರುವುದಾಗಿ ಬಸವಣ್ಣನವರು ಹೇಳಿದ್ದಾರೆ. ಭಿತ್ತಿ ಇಲ್ಲದೆ ಬರೆಯಬಹುದೆ ಚಿತ್ತಾರವ?
ಬಿತ್ತಿ ಬೆಳೆಯಬಹುದೇ ಧರೆಯಿಲ್ಲದೆ? ಎಂದು ಪ್ರಶ್ನಿಸುವ ಮೂಲಕ, ವಸ್ತುವಿನ ಸಹಾಯವಿಲ್ಲದೆ ಚೈತನ್ಯದ ಅರಿವಾಗುವುದಿಲ್ಲ ಎಂದು ಇನ್ನೊಂದು ವಚನದಲ್ಲಿ ಸೂಚಿಸಿದ್ದಾರೆ.

ಉದಯದ ಮಾಗಿಯ ಬಿಸಿಲು ಅಂಗಕ್ಕೆ ಹಿತವಾಯಿತ್ತು;
ಮಧ್ಯಾಹ್ನದ ಬಿಸಿಲು ಅಂಗಕ್ಕೆ ಕರಕಠಿಣವಾಯಿತ್ತು;
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು;
ಕಡೆಯಲ್ಲಿ ಜಂಗಮಭಕ್ತಿ ಕಠಿಣವಾಯಿತ್ತು;
ಇದು ಕಾರಣ ಕೂಡಲಸಂಗಮದೇವನವರ ಬಲ್ಲನಾಗಿ ಒಲ್ಲನಯ್ಯಾ.
-ಬಸವಣ್ಣ

ಈ ಕಾರಣದಿಂದಲೇ ಬಸವಣ್ಣನವರು ಲಿಂಗಭಕ್ತಿ ಮತ್ತು ಜಂಗಮಭಕ್ತಿಯ ಮಧ್ಯೆ ಭೇದ ಮಾಡುವುದನ್ನು ಸಹಿಸುವುದಿಲ್ಲ. ಲಿಂಗಭಕ್ತಿಯು ಚಳಿಗಾಲದ ಮುಂಜಾವಿನ ಹಾಗೆ ಹಿತಕರವೆನಿಸುವುದು. ಆದರೆ ಚಳಿಗಾಲದ ಮಧ್ಯಾಹ್ನ ಅಸಹನೀಯವಾಗಿರುತ್ತದೆ. ಜಂಗಮಭಕ್ತಿ ಎಂಬುದು ಚಳಿಗಾಲದ ಮಧ್ಯಾಹ್ನದ ಹಾಗೆ. ಏಕೆಂದರೆ ಜಂಗಮಭಕ್ತಿ ಎಂಬ ಸಮಾಜಸೇವೆ ಮಾಡುವುದಕ್ಕಾಗಿ ಕಾಯಕ ಮಾಡಬೇಕು. ಕಾಯಕದಿಂದ ಬಂದುದನ್ನು ಬಳಸಿಕೊಂಡು ಮನಃಪೂರ್ವಕವಾಗಿ ಪರೋಪಕಾರ ಮಾಡಬೇಕು. ಹಾಗೆ ಮಾಡಿದ ಜನಸೇವೆಯನ್ನು ಭಕ್ತಿ ಎಂದು ಭಾವಿಸಬೇಕು. ಹೀಗೆ ಭಕ್ತನಾದವನು ಸಮಾಜಮುಖಿಯಾಗಿರಬೇಕು. ಭಕ್ತ ಸಮಾಜಮುಖಿಯಾಗದಿದ್ದರೆ ದೇವರು ಮೆಚ್ಚುವುದಿಲ್ಲ ಎಂದು ಹೇಳುವುದರ ಮೂಲಕ ಬಸವಣ್ಣನವರು ಸಮಾಜದ ಬಗೆಗಿನ ತಮ್ಮ ಅದಮ್ಯ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಲಿಂಗವೆಂತಿಪ್ಪುದೆಂದರಿಯೆನು,
ಲಿಂಗದ ನಿಲವೆಂತುಂಟೆಂಬುದನ್ನರಿಯೆನು,
ಲಿಂಗಾರ್ಚನೆಯ ಮಾತು ಎನಗೇಕಯ್ಯಾ?
ಜಂಗಮಲಿಂಗವಾಗಿ ಬಂದು ನೀವಿರುತ್ತಿರಲು,
ಸ್ಥಾವರಕ್ಕೆ ಮೆಚ್ಚಿ ಮರುಳಾದೆನು.
ಎನ್ನ ತಪ್ಪನೆ ಎಣಿಸಿಹೆನೆಂದಡೆ ಕಡೆಯಿಲ್ಲ.
-ಬಸವಣ್ಣ
ಸಮಾಜಮುಖಿಯಾಗಿ ಸಕಲಜೀವಾತ್ಮರ ಸೇವೆಗಾಗಿ ಹಾತೊರೆಯುವವನು ಮಾತ್ರ ಸಮಾಜವನ್ನು ಜಂಗಮಲಿಂಗವಾಗಿ ಕಾಣಲು ಸಾಧ್ಯ. ಹೀಗೆ ನಾವು ಕ್ರಿಯಾಶೀಲವಾಗದಿದ್ದರೆ ದೇವರ ಪ್ರತೀಕವಾದ ಲಿಂಗ ಬರಿ ಸ್ಥಾವರವಾಗಿ ಉಳಿಯುತ್ತದೆ. ಅಂಥ ಲಿಂಗಪೂಜೆಯ ವಿಚಾರ ತಮಗೆ ಬೇಡ ಎಂದು ಬಸವಣ್ಣನವರು ತಿಳಿಸುವ ಮೂಲಕ ಸಕಲಜೀವಿಗಳೊಳಗೆ ಇರುವ ದೇವರ ಬಗ್ಗೆ ಪ್ರಜ್ಞೆ ಮೂಡಿಸುತ್ತಾರೆ.

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ,
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ,
ಜಂಗಮವಾಪ್ಯಾಯನವಾದಡೆ ಲಿಂಗಸಂತುಷ್ಟಿಯಹುದಯ್ಯಾ.
-ಬಸವಣ್ಣ

ಸಕಲಜೀವಿಗಳು ಸಂತೃಪ್ತಿ ಹೊಂದಿದಾಗ ಮಾತ್ರ ದೇವರು ಸಂತೃಪ್ತನಾಗುವನು. ಕಬ್ಬಿಣ ಕಾದಾಗ ಮಾತ್ರ ನೀರು ಕುಡಿಯುವುದು. ಭೂಮಿಯ ಜೊತೆ ಇದ್ದಾಗ ಮಾತ್ರ ಮರ ನೀರು ಕುಡಿಯುವುದು. ಅದೇ ರೀತಿ ಜೀವಜಗತ್ತಿನ ಜೊತೆ ಇದ್ದಾಗ ಮಾತ್ರ ದೇವರು ಸಂತಸಪಡುವನು. ಇಲ್ಲದಿದ್ದರೆ ಆತ ಕೇವಲ ಸ್ಥಾವರವಾಗಿ ಉಳಿಯುವನು.

ಮಾಡಿದೆನೆಂಬುದು ಮನದಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ.
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ
ಬೇಡಿತ್ತನೀವನು ಕೂಡಲಸಂಗಮದೇವ.
-ಬಸವಣ್ಣ

ಸಮಾಜಕ್ಕಾಗಿ ನಿಭಾಯಿಸಿದ ಕರ್ತವ್ಯವನ್ನು ಕನಸು ಮನಸಿನಲ್ಲಿ ಕೂಡ ನೆನಪಿಸಿಕೊಳ್ಳಬಾರದು. ಪರೋಪಕಾರ ಮಾಡಿದ್ದನ್ನು ಮತ್ತು ಧರ್ಮಕಾರ್ಯಗಳಿಗಾಗಿ ಮಾಡಿದ್ದನ್ನು ನೆನಪಿಸಿಕೊಂಡರೆ ಶಿವನ ಡಂಗುರ ಹೀಯಾಳಿಸಿ ಕಾಡುವುದು ಎಂದು ಬಸವಣ್ಣನವರು ಹೇಳುವುದರ ಮೂಲಕ ನಮ್ಮನ್ನು ಎಚ್ಚರಿಸುತ್ತಾರೆ. ಇದಕ್ಕೇ ದಾಸೋಹಂಭಾವ ಎನ್ನುವರು. ದಾನ ಕೊಡುವವರ ಮುಂದೆ ದಾನ ಪಡೆಯುವವರು ದೈನ್ಯಭಾವದವರಾಗಿತ್ತಾರೆ. ಆದರೆ ದಾಸೋಹಿಗಳು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವಾಗ ಅವರ ಮನಸ್ಸಿಗೆ ನೋವಾಗದಂತೆ ವಿನಮ್ರವಾಗಿ ಕೊಡುವರು. ಅಲ್ಲದೆ ಹಾಗೆ ಕೊಟ್ಟಿದ್ದನ್ನು ಅವರು ಎಂದೂ ನೆನಪಿಸಿಕೊಳ್ಳುವುದಿಲ್ಲ. ಹೀಗೆ ಸಮಾಜವೆಂಬ ಜಂಗಮದ ಬಗ್ಗೆ ಬಸವಣ್ಣನವರು ಎಲ್ಲ ರೀತಿಯಿಂದಲೂ ಕಾಳಜಿ ವಹಿಸುತ್ತಾರೆ.
ಬಸವಣ್ಣನವರ ದೃಷ್ಟಿಯಲ್ಲಿ ಸ್ವರ್ಗನರಕಗಳೇ ಇಲ್ಲ. ಆಚಾರವೇ ಸ್ವರ್ಗ, ಅನಾಚಾರವೇ ನರಕ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಕೈಲಾಸವೆಂಬುದೇನೋ ಪೃಥಿಯ ಮೇಲೊಂದು ಮೊರಡಿ ಎಂದು ಹೇಳುತ್ತಾರೆ. ಈ ಪೃಥ್ವಿ ನೀರಿನಿಂದ, ಹಸಿರಿನಿಂದ, ಸುವಾಸನೆ ಬೀರುವ ಹೂಗಳಿಂದ, ರುಚಿಯಾದ ಫಲಗಳಿಂದ, ಪಕ್ಷಿಗಳ ಇಂಚರದಿಂದ ಕೂಡಿದೆ. ಇಂಥ ಅನೇಕ ಸುಖದ ಸಂಪತ್ತನ್ನು ಈ ಪೃಥ್ವಿ ಹೊಂದಿದೆ. ಆದರೆ ಕೈಲಾಸವು ಒಣಭೂಮಿ ಎಂದು ಬಸವಣ್ಣನವರು ತಿಳಿಸುತ್ತಾರೆ. ಹೀಗೆ ಈ ಭೂಮಿಯ ಬಗ್ಗೆ ಗೌರವ ಮೂಡಿಸುತ್ತಾರೆ.

ಭೇರುಂಡನ ಪಕ್ಷಿಗೆ ದೇಹ ಒಂದೇ,
ತಲೆ ಎರಡರ ನಡುವೆ ಕನ್ನವಡ ಕಟ್ಟಿ
ಒಂದು ತಲೆಯಲ್ಲಿ ಹಾಲನೆರೆದು,
ಒಂದು ತಲೆಯಲ್ಲಿ ವಿಷವನೆರೆದಡೆ
ದೇಹವೊಂದೇ ವಿಷ ಬಿಡುವುದೇ ಅಯ್ಯಾ?
ಲಿಂಗದಲ್ಲಿ ಪೂಜೆಯ ಮಾಡಿ ಜಂಗಮದಲ್ಲಿ
ನಿಂದೆಯ ಮಾಡಿದಡೆ
ನಾ ಬೆಂದೆ ಕಾಣಾ, ಕೂಡಲಸಂಗಮದೇವಾ.
-ಬಸವಣ್ಣ
ಎಂದು ಹೇಳುವ ಮೂಲಕ ಬಸವಣ್ಣನವರು ಇಷ್ಟಲಿಂಗ ಮತ್ತು ಸಮಾಜದ ಮೂಲ ಒಂದೇ ಎಂದು ತಿಳಿಸುತ್ತಾರೆ. ಗಂಡಭೇರುಂಡ ಎಂಬ ಕಾಲ್ಪನಿಕ ಪಕ್ಷಿಗೆ ಎರಡು ತಲೆಗಳಿವೆ. ಅವುಗಳ ಮಧ್ಯೆ ಪರದೆಯನ್ನು ಕಟ್ಟಿದ ನಂತರ ಒಂದು ಬಾಯಲ್ಲಿ ಹಾಲನ್ನು ಹಾಕಿ, ಇನ್ನೊಂದು ಬಾಯಲ್ಲಿ ವಿಷವನ್ನು ಹಾಕಿದಾಗ ಆ ಹಾಲು ಮತ್ತು ವಿಷ ಕೂಡಿಯೇ ಆ ಪಕ್ಷಿಯ ಜಠರ ಸೇರುವುದರಿಂದ ಅದು ಸಾಯದೆ ಗತ್ಯಂತರವಿಲ್ಲ. ಇಷ್ಟಲಿಂಗ ಪೂಜೆಯು ಹಾಲಿನಂತೆ ಇದ್ದರೆ, ಸಮಾಜವೆಂಬ ಜಂಗಮದೇವರ ಬಗ್ಗೆ ತೋರುವ ತಿರಸ್ಕಾರ ವಿಷದಂತಾಗುವುದು. ಪೂಜೆ ಮತ್ತು ತಿರಸ್ಕಾರ ಕೊನೆಯಲ್ಲಿ ದೇವರಿಗೇ ತಲುಪುವುದರಿಂದ ಆ ದೇವರು ಆಗ ದೇವರಾಗಿ ಉಳಿಯಲು ಸಾಧ್ಯವಿಲ್ಲ. ಅಂದರೆ ಸಮಾಜ ಬಿಟ್ಟು ದೇವರು ಇಲ್ಲವೇ ಇಲ್ಲ ಎಂಬುದು ಬಸವಣ್ಣನವರ ಅಚಲ ನಂಬಿಕೆಯಾಗಿದೆ. ಈ ರೀತಿಯಲ್ಲಿ ಬಸವಾದಿ ಪ್ರಮಥರು ನಮ್ಮಲ್ಲಿ ಈ ಭೂಮಿಯ ಬಗ್ಗೆ ಗಾಢವಾದ ನಂಬಿಕೆ ಬೆಳೆಯುವ ಹಾಗೆ ಮಾಡಿ ಬದುಕನ್ನು ಸಹ್ಯಗೊಳಿಸುತ್ತಾರೆ.

ಬಯಲ ರೂಪ ಮಾಡುವಾತನೆ ಶರಣನು,
ಆ ರೂಪ ಬಯಲು ಮಾಡಬಲ್ಲಾತನೆ ಲಿಂಗಾನುಭಾವಿ.
ಬಯಲ ರೂಪ ಮಾಡಲರಿಯದಿದ್ದಡೆ ಎಂತು ಶರಣನೆಂಬೆ?
ಆ ರೂಪ ಬಯಲು ಮಾಡಲರಿಯದಿದ್ದಡೆ ಎಂತು ಲಿಂಗಾನುಭಾವಿಯೆಂಬೆ?
ಈ ಉಭಯ ಒಂದಾದಡೆ ನಿಮ್ಮಲ್ಲಿ ತೆರಹುಂಟೆ
ಕೂಡಲಸಂಗಮದೇವಾ.
-ಬಸವಣ್ಣ

ದೇವರು ಬಯಲು ಆದರೆ ವಿಶ್ವ ಆತನ ರೂಪ. ಆ ಬಯಲುದೇವನನ್ನು ವಿಶ್ವ ರೂಪದಲ್ಲಿ ನೋಡುವಾತನೇ ಶರಣ. ಇದು ಆತನ ಸಾಮಾಜಿಕ ಪ್ರಜ್ಞೆಯ ಪ್ರತೀಕವಾಗಿದೆ. ಆ ರೂಪ ಒಂದಿಲ್ಲೊಂದು ದಿನ ಬಯಲಾಗುತ್ತದೆ ಎಂಬ ಸತ್ಯವನ್ನು ಅರಿತವನೇ ಲಿಂಗಾನುಭಾವಿ. ಹೀಗೆ ಬಯಲನ್ನು ರೂಪ ಮಾಡಿ ನೋಡುವ ಪ್ರಜ್ಞೆ ಭೌತಿಕ ಜಗತ್ತಿಗೆ ಸಂಬಂಧಿಸಿದ್ದರೆ, ರೂಪವನ್ನು ಬಯಲು ಮಾಡುವ ಅರಿವು ಆತ್ಮಿಕ ಜಗತ್ತಿಗೆ ಸಂಬಂಧಿಸಿದೆ. ಶರಣರು ಲೌಕಿಕದಲ್ಲಿ ಅನುಭವಿಯಾಗುತ್ತಾರೆ; ಆತ್ಮಿಕದಲ್ಲಿ ಅನುಭಾವಿಯಾಗುತ್ತಾರೆ. ಅನುಭವ ನೀಡುವ ಭೌತಿಕ ಜಗತ್ತು ಮತ್ತು ಅನುಭಾವ ನೀಡುವ ಆತ್ಮಿಕ ಜಗತ್ತು ಶರಣರಿಗೆ ಸಮವಾಗಿ ಪ್ರಮುಖವಾಗುತ್ತವೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬ ಸತ್ಯವನ್ನು ಬಸವಾದಿ ಶರಣರು ಸಾರಿದ್ದಾರೆ.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ;
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ;
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ;
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮದೇವಯ್ಯಾ.
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
-ಬಸವಣ್ಣ

ಇಂಥ ವಿರಾಟ್ ಲಿಂಗದ ಬಳಿ ನಮಗೆ ಹೋಗಲಿಕ್ಕಾಗದು. ಅದನ್ನು ನೋಡಲಿಕ್ಕಾಗದು. ಅದನ್ನು ಯಾವುದರ ಜೊತೆಗೂ ಹೋಲಿಸಲಿಕ್ಕಾಗದು. ಇಂಥ ಲಿಂಗವು ಕರಸ್ಥಲಕ್ಕೆ ಬಂದು ಅರ್ಧ ಬೊಗಸೆಯಾಯಿತು ಎಂದು ಬಸವಣ್ಣನವರು ತಿಳಿಸುವಲ್ಲಿ ದೇವರ ನಿರಾಕಾರ ಸ್ವರೂಪವನ್ನು ಒತ್ತಿ ಹೇಳುತ್ತಾರೆ. ಆ ನಿರಾಕಾರ ಸ್ವರೂಪವು ಲಿಂಗದ ಸಂಕೇತದಲ್ಲಿ ನಮ್ಮ ಕರಸ್ಥಲದಲ್ಲಿದೆ ಎಂದು ತಿಳಿಸುತ್ತಾರೆ. ಅವರು ಹೀಗೆ ಹೇಳುವಾಗ ಇಡೀ ಬ್ರಹ್ಮಾಂಡ ದರ್ಶನ ಮಾಡಿಸುತ್ತಾರೆ. ಆ ಮೂಲಕ ಇಹದ ಮಹತ್ವವನ್ನು ಸಾರುತ್ತಾರೆ. ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಸ್ಥಾವರ ದೈವಕ್ಕೆರಗಲಾಗದು. ಎಂದು ದೃಢನಿರ್ಧಾರದಿಮದ ತಿಳಿಸುತ್ತಾರೆ. ಏಕೆಂದರೆ ಇಷ್ಟಲಿಂಗವು ದೇವರ ನಿರಾಕಾರ ಮತ್ತು ವಿಶ್ವವ್ಯಾಪಿಯಾದ ಸಾಕಾರ ರೂಪದ ಸಂಕೇತವಾಗಿದೆ. ಇಂಥ ಇಷ್ಟಲಿಂಗವು ಮೂಲ ಚೈತನ್ಯದ ಅರಿವನ್ನು ಮತ್ತು ವಿಶ್ವಪ್ರಜ್ಞೆಯನ್ನು ಏಕಕಾಲಕ್ಕೆ ನೀಡಿ ನಮ್ಮನ್ನು ಸಹಜವಾಗಿಯೇ ವಿಶ್ವಮಾನವರನ್ನಾಗಿ ಮಾಡುತ್ತದೆ. ಹೀಗೆ ಸ್ಥಾವರ ಜಂಗಮದ ಮಧ್ಯೆ ಅದ್ವೈತವನ್ನು ಸಾಧಿಸುವುದರ ಮೂಲಕ ಜಗತ್ತು ಮಿಥ್ಯೆ ಎಂಬ ತತ್ತ್ವವನ್ನು ಅಲ್ಲಗಳೆದು ಬದುಕಿನ ಮಹತ್ವವನ್ನು ಬಸವಣ್ಣನವರು ಸಾರಿದ್ದಾರೆ.

ಸ್ಥಾವರ ಜಂಗಮ ಒಂದೆಂಬರು ನೀವು ಕೇಳಿರೆ
ಸ್ಥಾವರವೇ ಲಿಂಗ ಜಂಗಮವೇ ಭಕ್ತ.
ಪೂಜಿಸುವುದು ಲಿಂಗ ಪೂಜೆಗೊಂಬುದು ಜಂಗಮ
ಸ್ಥಾವರ ಜಂಗಮ ಒಂದಾದ ಕಾರಣ ಜಂಗಮವೆನಿಸಿತ್ತು.
ದೇವ ಭಕ್ತ ಒಂದಾದ ಕಾರಣ ಸ್ಥಾವರವೆನಿಸಿತ್ತು.
ಸ್ಥಾವರವೇ ಘಟವು ಜಂಗಮವೇ ಪ್ರಾಣವು.
ಇದು ಕಾರಣ ಕೂಡಲಚೆನ್ನಸಂಗ ನಿಮ್ಮ ಶರಣ ಸ್ವತಂತ್ರ.
-ಚನ್ನಬಸವಣ್ಣ

ಸ್ಥಾವರವೇ ಘಟವು ಜಂಗಮವೇ ಪ್ರಾಣವು ಎಂದು ಚನ್ನಬಸವಣ್ಣನವರು ಬರೆಯುವುದರ ಮೂಲಕ ಕಣ್ಣಿಗೆ ಕಾಣುವುದೆಲ್ಲವೂ ಸ್ಥಾವರ; ಅದರೊಳಗಿನ ಚೈತನ್ಯವೇ ಜಂಗಮ ಎಂಬ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. ಘಟ ಅಂದರೆ ದೇಹ. ದೇಹವು ಸ್ಥಾವರವಾಗಿದ್ದು, ಪ್ರಾಣವು ಜಂಗಮವಾದಾಗ ಸ್ಥಾವರ ವಸ್ತುವಿನೊಳಗೆ ಚೈತನ್ಯವೆಂಬ ಜಂಗಮವಿದೆ ಎಂಬರ್ಥ ಹೊರಹೊಮ್ಮುವುದು. ಕಣ್ಣಿಗೆ ಕಾಣುವ ಲಿಂಗ ಸ್ಥಾವರವಾಗಿದೆ. ಪೂಜೆ ಮಾಡುವ ಭಕ್ತನ ಚೈತನ್ಯವೇ ಜಂಗಮವಾಗಿದೆ. ಸ್ಥಾವರದ ಪೂಜೆ ಮಾಡುವಾಗ ಚೈತನ್ಯರೂಪಿ ಜಂಗಮವೇ ಪೂಜೆಗೊಳ್ಳುತ್ತದೆ. ಸ್ಥಾವರದೊಳಗೆ ಚೈತನ್ಯ ಇದ್ದೇ ಇರುವುದರಿಂದ ನಿಜವಾದ ಅರ್ಥದಲ್ಲಿ ಆ ಸ್ಥಾವರವೂ ಜಂಗಮವೇ ಆಗುತ್ತದೆ. ಆದರೆ ಭಕ್ತನಾದವನು ಇದನ್ನೆಲ್ಲ ಅರಿತುಕೊಳ್ಳದೆ ಸ್ಥಾವರವನ್ನೇ ಧ್ಯಾನಿಸಿದಾಗ ತತ್ತ್ವಾರ್ಥದ ಪ್ರಕಾರ ಸ್ಥಾವರನೇ ಆಗಿ ಜಡಸಂಸ್ಕೃತಿಯ ಭಾಗವಾಗಿ ಹೋಗುತ್ತಾನೆ. ಶರಣರ ಚೈತನ್ಯ ಸಂಸ್ಕೃತಿಯೊಂದಿಗೆ ಜನ ಸಮುದಾಯ ಬೆಳೆದಾಗ ಇಡೀ ವಿಶ್ವವನ್ನು ಒಳಗೊಂಡ ಜಂಗಮಪ್ರಜ್ಞೆ ಜಾಗೃತವಾಗುವುದು. ನಶ್ವರ ಸ್ಥಾವರ ಹೊರನೋಟದ್ದು; ಈಶ್ವರ ಜಂಗಮ ಒಳನೋಟದ್ದು ಎಂಬ ಅರ್ಥ ವಚನಸಾಹಿತ್ಯದಲ್ಲಿ ಪ್ರಧಾನವಾಗಿದೆ. ವಸ್ತು ಹೊರನೋಟಕ್ಕೆ ದಕ್ಕಿದರೆ ಚೈತನ್ಯ ಒಳನೋಟಕ್ಕೆ ದಕ್ಕುತ್ತದೆ.

ಕವಿತ್ವ ಸಾಧಕರೆಲ್ಲರೂ ಕಳವಳಿಸಿ ಹೋದರು.
ವಿದ್ಯಾಸಾಧಕರೆಲ್ಲರೂ ಬುದ್ಧಿಗೆಟ್ಟರು.
ತತ್ತ್ವಸಾಧಕರೆಲ್ಲರು ಭಕ್ತಿಹೀನರಾದರು.
ಲಿಂಗಸಾಧಕರೆಲ್ಲರೂ ಭೂಭಾರಕರಾದರು.
ಕೂಡಲಚನ್ನಸಂಗಮದೇವಯ್ಯಾ
ನಿಮ್ಮ ಬಸವಣ್ಣ ಜಂಗಮಸಾಧಕನಾಗಿ ಸ್ವಯಂ ಲಿಂಗವಾದನು.
-ಚನ್ನಬಸವಣ್ಣ

ವಸ್ತುವಿನೊಳಗಿನ ಚೈತನ್ಯವನ್ನು ಅರಿಯದ ಕವಿಗಳು, ಪಂಡಿತರು, ತತ್ತ್ವಜ್ಞಾನಿಗಳು ಮತ್ತು ಲಿಂಗಸಾಧಕರು ಕೂಡ ನಿರರ್ಥಕ ಬದುಕನ್ನು ಸಾಗಿಸಿದರು ಎಂದು ಚನ್ನಬಸವಣ್ಣನವರು ಕಳವಳ ವ್ಯಕ್ತಪಡಿಸುತ್ತಾರೆ. ಆದರೆ ಬಸವಣ್ಣನವರು ಈ ರಹಸ್ಯವನ್ನು ಅರಿತು ಜಂಗಮಸಾಧಕರಾದರು, ಅಂದರೆ ಬೀಜದಲ್ಲಿ ವೃಕ್ಷವಿರುವಂತೆ ಸಕಲ ಜೀವಾತ್ಮರಲ್ಲಿ ದೇವರಿದ್ದಾನೆ ಎಂಬ ಭಾವದೊಂದಿಗೆ ಸೇವಾಧರ್ಮದೊಂದಿಗೆ ಪಶು, ಪಕ್ಷಿ ಮತ್ತು ಇಡೀ ಮಾನವ ಕುಲಕ್ಕೆ ಮಂಗಲಮಯವಾದ ಬದುಕನ್ನು ಬಯಸುತ್ತ ಜೀವಸವೆಸಿ ಜಗಜ್ಜ್ಯೋತಿಯಾದ ಬಸವಣ್ಣನವರು ದೈವತ್ವಕ್ಕೇರಿದರು ಎಂದು ಚನ್ನಬಸವಣ್ಣನವರು ಕೊಂಡಾಡಿದ್ದಾರೆ. ಎನ್ನ ಲಿಂಗವ್ಯಸನಿ ಜಂಗಮಪ್ರೇಮಿ ಎಂದೆನಿಸಯ್ಯಾ. ಎಂದು ದೇವರಲ್ಲಿ ಬಸವಣ್ಣನವರು ಕೇಳಿಕೊಂಡಿದ್ದು ತುಂಬ ಸಮಂಜಸವಾಗಿದೆ.

ನಿರೂಪ ಕಾಣಬಾರದು, ಪೂಜಿಸುವ ಪರಿಯೆಂತಯ್ಯಾ
ರೂಪಿಂಗೆ ಕೇಡುಂಟು ಪೂಜಿಸುವ ಪರಿ ಇನ್ನೆಂತಯ್ಯಾ
ಸಕಲ ನಿಃಕಲವು ಪೂಜೆಗೆ ಕಾರಣವಲ್ಲ
ಇನ್ನೆಂತಯ್ಯಾ ಲಿಂಗವಂತರಿಗೆ ಪೂಜಿಸುವ ಪರಿ.
ಲಿಂಗದ ಪರಿ ಇನ್ನೆಂತಯ್ಯಾ
ಗುಹೇಶ್ವರಯ್ಯಾ ಅರಿಯಬಾರದ ಲಿಂಗವ
ಅರಿವಂತೆ ಮಾಡಿಕೊಟ್ಟನು ಶ್ರೀಗುರು.
-ಅಲ್ಲಮಪ್ರಭು

ಎಂದು ಅಲ್ಲಮಪ್ರಭುಗಳು ಹೇಳುವಲ್ಲಿ ಬಸವಣ್ಣನವರ ಮಹತ್ವ ಎದ್ದು ಕಾಣುತ್ತದೆ. ರೂಪಿಲ್ಲದುದನ್ನು ಅದು ಹೇಗೆ ಪೂಜಿಸಬೇಕು ಎಂದು ಅಲ್ಲಮಪ್ರಭುಗಳು ಕೇಳುತ್ತಾರೆ. ರೂಪಿರುವ ಎಲ್ಲವೂ ನಶ್ವರವಾಗುವಂಥವು. ಆದ್ದರಿಂದ ಅವುಗಳನ್ನು ಅದು ಹೇಗೆ ಪೂಜಿಸಬೇಕು ಎಂದು ಮತ್ತೆ ಪ್ರಶ್ನಿಸುತ್ತಾರೆ. ಪರಿಪೂರ್ಣವಾದ ಮತ್ತು ಕಳಂಕರಹಿತ ಪರಮಾತ್ಮನನ್ನು ಲಿಂಗವಂತರು ಅದು ಹೇಗೆ ಪೂಜಿಸಲು ಸಾಧ್ಯ ಎಂದು ಅಲ್ಲಮಪ್ರಭುಗಳು ದೇವರನ್ನು ಕೇಳುತ್ತಲೇ, ಅರಿಯಬಾರದ ಲಿಂಗವ ಅರಿವಂತೆ ಮಾಡಿಕೊಟ್ಟನು ಶ್ರೀಗುರು ಎಂದು ಬಸವಣ್ಣನವರನ್ನು ಕೊಂಡಾಡುತ್ತಾರೆ. ಮಹಾಮಹಿಮ ಸಂಗನಬಸವಣ್ಣ ಎನಗೂ ಗುರು ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರಾ. ಎಂದು ಅಲ್ಲಮಪ್ರಭುಗಳು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ.

ಬಸವಣ್ಣನವರ ಕಾಲದಲ್ಲಿ ಅನೇಕ ದೊಡ್ಡ ದೊಡ್ಡ ಪೀಠಾಧಿಪತಿಗಳು ರಾಜಗುರುಗಳಾಗಿದ್ದರು. ರಾಜಪೂಜಿತರಾದ ಅವರು ಧರ್ಮದ ಚಕ್ರವರ್ತಿಗಳ ಹಾಗೆ ಇದ್ದರು. ಅವರಿಗೂ ರಾಜನ ಹಾಗೆ ಕಿರೀಟ, ಸಿಂಹಾಸನ, ವಂದಿಮಾಗಧರು, ಸೇವಾಪರಿವಾರ ಮುಂತಾದ ರಾಜವೈಭವಗಳು ಇದ್ದವು. ಬಸವಣ್ಣನವರು ತಮ್ಮ ದಾಸೋಹ ಧರ್ಮದ ಮೂಲಕ ಜನಸಾಗರವನ್ನು ಸತ್ಯದ ಕಡೆಗೆ ಆಕರ್ಷಿಸುತ್ತ ಮೌನಕ್ರಾಂತಿ ಮಾಡಿ ಇಂಥ ಐಷಾರಾಮಿ ಪೀಠಾಧಿಪತಿಗಳ ಬದುಕಿಗೆ ಸಂಚಕಾರ ಒಡ್ಡಿದರು. ಈ ಸೂಕ್ಷ್ಮತೆಯನ್ನು ಗ್ರಹಿಸಿದ ಅಲ್ಲಮಪ್ರಭುಗಳು ಹೀಗೆ ಹೇಳುತ್ತಾರೆ:

ಕುಂಡಲಿಗನ ಕೀಟದಂತೆ ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣ.
ಜಲದೊಳಗಣ ತಾವರೆಯಂತೆ ಹೊದ್ದಿ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣ.
ಜಲದಿಂದಾದ ಮೌಕ್ತಿಕದಂತೆ ಜಲವು ತಾನಾಗದಂತಿದ್ದೆಯಲ್ಲಾ ಬಸವಣ್ಣ.
ಗುಹೇಶ್ವರಲಿಂಗದಾಣತಿವಿಡಿದು, ತನುಗುಣಮತ್ತರಾಗಿದ್ದ
ಐಶ್ವರ್ಯಾಂಧಕರ ಮತವನೇನ ಮಾಡಿ ಬಂದೆಯೈ ಸಂಗನಬಸವಣ್ಣ.
-ಅಲ್ಲಮಪ್ರಭು

ಇಂದ್ರಿಯ ವಿಕಾರಗಳಿಗೆ ಒಳಗಾಗಿ ಮತ್ತು ಐಶ್ವರ್ಯಮದದಿಂದಾಗಿ ಒಳ್ಳೆಯದರ ಕಡೆಗೆ ಗಮನ ಹರಿಸದವರ ಮತವನ್ನು ಏನ ಮಾಡಿ ಬಂದೆ ಬಸವಣ್ಣ ಎಂದು ಅಲ್ಲಮಪ್ರಭುಗಳು ಹರ್ಷ ವ್ಯಕ್ತಪಡಿಸುತ್ತಾರೆ. ಹೀಗೆ ಬಸವಣ್ಣನವರು ದೇವರ ಆಜ್ಞೆಯ ಪ್ರಕಾರ ಆ ಐಹಿಕ ಆಸೆಗಳಿಂದ ತುಂಬಿದ್ದ ಜಡಧಾರ್ಮಿಕ ವ್ಯವಸ್ಥೆಯನ್ನು ನಿರ್ನಾಮಗೊಳಿಸಿ, ಮಾನವೀಯ ವ್ಯವಸ್ಥೆಯನ್ನು ಜಾರಿಗೊಳಿಸಿದರು ಎಂದು ಅಲ್ಲಮಪ್ರಭುಗಳು ತಿಳಿಸುತ್ತಾರೆ.

ಬಸವಣ್ಣನವರ ಪ್ರಕಾರ ಕಣ್ಣಿಗೆ ಕಾಣುವ ವಸ್ತುಗಳೆಲ್ಲ ಸ್ಥಾವರ. ಒಳಗಣ್ಣಿಗೆ ಕಾಣವ ಚೈತನ್ಯ ಮಾತ್ರ ಜಂಗಮ. ಆ ಚೈತನ್ಯವೇ ದೇವರು. ಅದಿಲ್ಲದೆ ವಸ್ತುವಿಲ್ಲ. ವಸ್ತು ನಾಶವಾದರೂ ಅದರೊಳಗಿನ ಚೈತನ್ಯ ನಾಶವಾಗುವುದಿಲ್ಲ. ಶಬ್ದವೇಗದಿಂದ ಚಲಿಸುವ ವಿಮಾನವೂ ಸ್ಥಾವರವೇ! ಅದರೊಳಗಿನ ಚಲನಶಕ್ತಿ ಮಾತ್ರ ಜಂಗಮ!! ಇದೇ ಬಸವಾದಿ ಪ್ರಮಥರು ಕಂಡುಹಿಡಿದ ರಹಸ್ಯ.

ವೈಜ್ಞಾನಿಕ ಮನೋಭಾವದ ಬಸವಣ್ಣನವರು ಈ ರೀತಿಯಲ್ಲಿ ಸ್ಥಾವರ ಮತ್ತು ಜಂಗಮದ ರಹಸ್ಯವನ್ನು ಬಿಡಿಸಿದರು. ಚೈತನ್ಯಾತ್ಮಕ ಭೌತಿಕವಾದ ಎಂಬ ತತ್ತ್ವಜ್ಞಾನದ ಹರಿಕಾರರಾದರು. ಆ ಮೂಲಕ ಸರ್ವಸಮತ್ವದಿಂದ ಕೂಡಿದ ಸಾಮಾಜಿಕ ವ್ಯವಸ್ಥೆ ತರಲು ಹೋರಾಡಿದರು. ಹೀಗೆ ಲೋಕಕಲ್ಯಾಣಕ್ಕಾಗಿ ಶ್ರಮಿಸಿ ಜಗಜ್ಜ್ಯೋತಿಯಾದರು.