You are hereವಚನ ವಿವೇಕ - 11
ವಚನ ವಿವೇಕ - 11
ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
- ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಇಂಥ ಗಮನಾರ್ಹ ವಚನಗಳನ್ನು ಬರೆದಿದ್ದಾಳೆ. ಆಕೆಯ ಸಂಸ್ಕೃತ ಜ್ಞಾನ, ಕನ್ನಡ ಭಾಷೆಯ ಮೇಲಿನ ಪ್ರಭುತ್ವ, ತತ್ತ್ವಜ್ಞಾನದ ಮೇಲಿನ ಹಿಡಿತ ಮತ್ತು ೧೨ನೇ ಶತಮಾನದ ಸಾಮಾಜಿಕ ವೈರುಧ್ಯಗಳನ್ನು ತೀಕ್ಷ್ಣವಾಗಿ ಗ್ರಹಿಸಿ ನಿರ್ಭಿಡೆಯಿಂದ ಹೇಳುವ ಕ್ರಮ ಅಚ್ಚರಿ ಹುಟ್ಟಿಸುವಂಥದ್ದು.
ತ್ರಿವಿಧ ದಾಸೋಹಕ್ಕಾಗಿ ಮತ್ತು ಸ್ವಾವಲಂಬನೆಗಾಗಿ ಕಾಯಕ ಮಾಡದವರು ಭಕ್ತರಲ್ಲ. ಮಾನವ ಕುಲಕ್ಕೆ ಹಾನಿಯುಂಟು ಮಾಡುವ ಯಾವುದೇ ಕೆಲಸಕ್ಕೆ ಕಾಯಕವೆಂದು ಕರೆಯಲಿಕ್ಕಾಗದು. ಕಾಯಕವೆಂಬುದು ಸತ್ಯದ ನೆಲೆಗಟ್ಟಿನ ಮೇಲೆ ಶುದ್ಧವಾಗಿ ಇರುವಂಥದ್ದು. ದೈನಂದಿನ ಬದುಕಿಗಾಗಿ ಮತ್ತು ಲೋಕಹಿತಕ್ಕಾಗಿ ಉತ್ಪಾದನೆಯಲ್ಲಿ ತೊಡಗಿಕೊಳ್ಳುವಂಥ ಕ್ರಿಯೆಯೇ ಕಾಯಕವೆನಿಸುವುದು.
ಹೀಗೆ ಈ ವಚನದ ಮೊದಲಿನ ಎರಡು ಸಾಲುಗಳಲ್ಲಿ ಸೂಚಿಸುವ ಕಾಳವ್ವೆ, ನಂತರದ ಎರಡು ಸಾಲುಗಳಲ್ಲಿ ಈ ಭೌತಿಕ ಜಗತ್ತಿನ ಕಾಯಕಪ್ರಜ್ಞೆಯನ್ನು ತಾತ್ತ್ವಿಕ ಜಗತ್ತಿಗೆ ಏರಿಸುತ್ತಾಳೆ. ‘ಆಸೆ ಎಂಬುದು ಭವದ ಬೀಜ; ನಿರಾಸೆ ಎಂಬದು ನಿತ್ಯ ಮುಕ್ತಿ’ ಎಂದು ಸಾರುತ್ತಾಳೆ. ಐಹಿಕ ಜಗತ್ತಿನ ವಸ್ತುಗಳೆಲ್ಲ ತನಗೆ ಸೇರಬೇಕೆಂಬುದೇ ಆಸೆ. ಇಂಥ ಬಯಕೆಯಿಂದ ಕಾಯಕದಲ್ಲಿ ತೊಡಗಬಾರದು. ಏಕೆಂದರೆ ಆ ಬಯಕೆಯೇ ಭವದ ಬೀಜವಾಗುತ್ತದೆ.
ಹುಟ್ಟುಸಾವುಗಳ ಸರಪಳಿಗೆ ‘ಭವ’ ಎಂದು ಸಾಂಪ್ರದಾಯಿಕವಾಗಿ ಕರೆಯುತ್ತಾರೆ. ವಚನಕಾರರೆಲ್ಲ ಮರೆವಿನಿಂದ ಬದುಕುವುದಕ್ಕೆ ‘ಭವ’ ಎಂದು ಹೇಳಿದ್ದಾರೆ. ವಚನಕಾರರ ಪ್ರಕಾರ ‘ಭವನಾಶ’ ಎಂದರೆ ಸಾವಲ್ಲ. ಕಾಳವ್ವೆ ಹೇಳುವಂಥ ಆಸೆಯ ನಾಶ. ಇಂಥ ನಿರಾಸೆಯಿಂದ ನಿತ್ಯಮುಕ್ತಿ ಪ್ರಾಪ್ತವಾಗುತ್ತದೆ. ಮರೆವು ಹೋಗಿ ಅರಿವು ಬಂದಾಗ ಮಾನವರ ಭವ ನಾಶವಾಗುತ್ತದೆ. ಆಗ ಅವರು ತಮ್ಮ ಜೀವಿತಾವಧಿಯಲ್ಲೇ ಮುಕ್ತಿ ಪಡೆಯುತ್ತಾರೆ. ಹೀಗೆ ಮುಕ್ತಿಯನ್ನು ಸಂಪಾದಿಸುವುದು ಸರಳವಲ್ಲ ಎಂದೂ ಕಾಳವ್ವೆ ಎಚ್ಚರಿಸುತ್ತಾಳೆ. ತಾವು ಬದುಕಿದ್ದಾಗಲೇ ಮೋಕ್ಷ ಪಡೆಯುವ ಅರಿವನ್ನು ಸಂಪಾದಿಸದವರು ಭವಿಗಳು.
‘ಇಷ್ಟಲಿಂಗ ಧರಿಸದವರು ಭವಿಗಳು’ ಎಂದು ಹೇಳಲಾಗುತ್ತಿದೆ. ಬರಿ ಇಷ್ಟಲಿಂಗ ಧರಿಸಿ ಆ ಇಷ್ಟಲಿಂಗದ ಸರ್ವಸಮಾನತಾ ತತ್ತ್ವವನ್ನು ವ್ರತದ ಹಾಗೆ ಅನುಸರಿಸದವರು ಕೂಡ ಭವಿಗಳೇ ಎಂದು ಕಾಳವ್ವೆ ಹೇಳುತ್ತಾಳೆ. “ವ್ರತ ಹೋದಾಗಲೇ ಇಷ್ಟಲಿಂಗದ ಕಳೆ ನಷ್ಟವವ್ವಾ. ಅವರು ಲಿಂಗವಿದ್ದೂ ಭವಿಗಳು. ಅದು ಹೇಗೆಂದಡೆ ಪ್ರಾಣವಿಲ್ಲದ ದೇಹದಂತೆ.” ಎಂದು ಕಾಳವ್ವೆ ಮತ್ತೊಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾಳೆ. ಇಷ್ಟಲಿಂಗವನ್ನು ಬರಿ ಧರ್ಮದ ಲಾಂಛನವಾಗಿ ಕಾಣದೆ ಜೀವನಮೌಲ್ಯದ ಸಂಕೇತವಾಗಿ ಸ್ವೀಕರಿಸಿ ಆ ಮೌಲ್ಯಗಳ ಪ್ರಕಾರವೇ ಬದುಕುವ ಕ್ರಮವನ್ನು ತಿಳಿಹೇಳುತ್ತಾಳೆ.
ಭಕ್ತನು ಹೇಗಿರಬೇಕು ಎಂಬುದರ ಕುರಿತು ಕಾಳವ್ವೆ ನಿಖರವಾಗಿ ಹೇಳಿದ್ದಾಳೆ. ಭಕ್ತ ಶಬ್ದದ ಸಾಂಪ್ರದಾಯಿಕ ಅರ್ಥದ ಬದಲಿಗೆ ಹೊಸ ಅರ್ಥವನ್ನು ಕೊಡುತ್ತಾಳೆ. ಭಕ್ತನ ವ್ಯಕ್ತಿತ್ವ ಕಾಯಕದ ಮೇಲೆ ನಿಂತಿದೆ ಎಂದು ಸೂಚಿಸುತ್ತಾಳೆ. ಆ ಕಾಯಕವು ಸತ್ಯ ಮತ್ತು ಪಾವಿತ್ರ್ಯದ ಮೇಲೆ ನಿಂತಿದೆ ಎಂಬುದರ ಕಡೆಗೆ ಗಮನ ಸೆಳೆಯುತ್ತಾಳೆ. ಆ ಕಾಯಕದಿಂದ ಬಂದುದರ ಬಗ್ಗೆ ಒಲವು ತೋರಿದರೆ ಅದು ಭವದ ಮೂಲವಾಗುತ್ತದೆ ಎಂದು ಎಚ್ಚರಿಸುತ್ತಾಳೆ. ಶರಣ ಸಂಕುಲ ಮತ್ತು ಒಟ್ಟಾರೆ ಜಿವಸಂಕುಲದ ಬಗೆಗಿನ ದಾಸೋಹ ಪ್ರಜ್ಞೆಯಿಂದ ಕಾಯಕದಿಂದ ಬಂದುದನ್ನು ದೇವರು ಕೊಟ್ಟ ಪ್ರಸಾದವಾಗಿ ಸ್ವೀಕರಿಸಿದರೆ ಭವನಾಶವಾಗಿ ನಿತ್ಯಮುಕ್ತಿಯನ್ನು ಸಂಪಾದಿಸುವ ರಹಸ್ಯವನ್ನು ತಿಳಿಸುತ್ತಾಳೆ. ಆ ಮೂಲಕ ವ್ಯಕ್ತಿಯನ್ನು ವಿಮೋಚನೆಗೊಳಿಸಿ ಸಮೂಹವನ್ನು ರಕ್ಷಿಸುವ ದಾಸೋಹಂಭಾವದ ಮಹತ್ವವನ್ನು ಸಾರುತ್ತಾಳೆ.
೧೨ನೇ ಶತಮಾನದಲ್ಲಿ ಆಂಧ್ರಪ್ರದೇಶದಿಂದ ಮಹಾರಾಷ್ಟ್ರದ ನಾಂದೇಡದ ಬಳಿಯ ಕಂಧಾರಕ್ಕೆ ಗಂಡ ಪೆದ್ದಣ್ಣನ ಜೊತೆ ಬಂದವಳು ಕಾಳವ್ವೆ. ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಕಾಯಕದ ಗಂಧವೇ ಇಲ್ಲದಂತೆ ಗಂಡ ಪೆದ್ದಣ್ಣ ಬದುಕುತ್ತಿದ್ದ. ನಂತರ ಕಂಧಾರದ ಶರಣ ಉರಿಲಿಂಗದೇವರ ಪ್ರಭಾವಕ್ಕೆ ಒಳಗಾದ. ಕಾಯಕ ಮತ್ತು ಇಷ್ಟಲಿಂಗದ ಮಹತ್ವವನ್ನು ಅರಿತ. ಬಹಳ ಏಕಾಗ್ರತೆಯಿಂದ ಸಂಸ್ಕೃತ ಮತ್ತು ಕನ್ನಡದಲ್ಲಿ ವಿದ್ಯೆಯನ್ನು ಸಂಪಾದಿಸಿದ. ಪೆದ್ದಣ್ಣನ ವ್ಯಕ್ತಿತ್ವ ವಿಕಸನವಾದಾಗ, ಆತ ಗುರುವಿನ ಹಾಗೆಯೆ ವಚನಕಾರನಾಗಿ ಉರಿಲಿಂಗಪೆದ್ದಿಯಾದ. ಕಾಳವ್ವೆ ಕೂಡ ಗಂಡನ ಬದಲಾವಣೆಗೆ ಸ್ಪಂದಿಸುತ್ತ ಮಹತ್ವದ್ದನ್ನೇ ಸಂಪಾದಿಸಿದಳು. ಈ ದಲಿತ ಮೂಲದ ದಂಪತಿಯ ಆಳವಾದ ಭಾಷಾಜ್ಞಾನ ಮತ್ತು ಶರಣ ತತ್ತ್ವಜ್ಞಾನದಿಂದ ಕೂಡಿದ ವಚನಗಳು ಮನಸೂರೆಗೊಳ್ಳುತ್ತವೆ.
ಮಾನವರಿಗೆ ಮಾನವೀಯ ವಾತಾವರಣ ಸಿಕ್ಕಾಗ ಅವರು ಎಷ್ಟೊಂದು ಎತ್ತರಕ್ಕೆ ಏರಬಲ್ಲರು ಎಂಬುದಕ್ಕೆ ಈ ದಂಪತಿಯ ಸಾಧನೆಯೆ ಸಾಕ್ಷಿಯಾಗಿದೆ. ಇದುವೆ ವಚನ ಚಳವಳಿಯ ಬಹುದೊಡ್ಡ ಸಾಧನೆ. ವಚನಕಾರರಲ್ಲಿ ಬಹುಪಾಲು ಮಂದಿ ಇಂಥ ಹಿನ್ನೆಲೆಯಿಂದಲೇ ಬಂದವರು. ಇವರೆಲ್ಲ ಕಾಯಕನಿಷ್ಠೆಯಿಂದ ಬದುಕಿದರು. ಅಂದರೆ ಆರ್ಥಿಕವಾಗಿ ಸ್ವಾವಲಂಬಿಯಾದರು. ಶರಣ ಸಂಕುಲದಲ್ಲಿ ಕಾಯಕದ ಅನುಭವವನ್ನು ಹಂಚಿಕೊಂಡು ಅನುಭಾವಿಗಳಾದರು. ಅಂದರೆ ಆಧ್ಯಾತ್ಮಿಕವಾಗಿ ಸ್ವಾವಲಂಬಿಗಳಾದರು. ಶರಣ ಸಂಕುಲದ ಶ್ರೀರಕ್ಷೆಯಲ್ಲಿ ಕಾಯಕಜೀವಿಗಳೆಲ್ಲ ಹೀಗೆ ಸ್ವಾವಲಂಬಿಗಳಾಗುತ್ತ ಜಾತಿ ಮತಗಳಿಂದ ಹೊರಬಂದು ಒಂದಾಗಿ ಬದುಕುವುದನ್ನು ಕಲಿತರು. ಆ ಮೂಲಕ ವರ್ಣಾಶ್ರಮ ಪದ್ಧತಿಯಿಂದ ಕೂಡಿದ ಮನಧರ್ಮದಿಂದ ಮುಕ್ತರಾದರು. ಆ ಧರ್ಮ ರೂಪಿಸಿದ ಮೇಲುಕೀಳಿನ ಸಮಾಜದಿಂದ ಮತ್ತು ಅಂಥ ಅಸಮಾನತೆಯ ಸಮಾಜ ಉಂಟುಮಾಡಿದ ಶೋಷಣೆಯ ಅರ್ಥವ್ಯವಸ್ಥೆಯಿಂದ ಕಾಯಕಜೀವಿಗಳೆಲ್ಲ ವಿಮೋಚನೆಗೊಂಡರು. ಕಾಯಕನಿಷ್ಠರಾಗುತ್ತಲೇ ಐಹಿಕ ಆಸೆಗಳಿಂದ ಹೊರಬರುವ ಮೂಲಕ ನಿತ್ಯಮುಕ್ತರಾಗಿ ಶರಣರಾದರು. ಅಂದರೆ ನಿಜಮಾನವರಾಗಿ ದೈನಂದಿನ ಬದುಕು ಮತ್ತು ಆಧ್ಯಾತ್ಮಿಕ ಬದುಕಿನ ಆನಂದವನ್ನು ಏಕಕಾಲಕ್ಕೇ ಪಡೆದರು.
ಇಂಥ ಬದುಕು ಸುಲಭಸಾಧ್ಯವಲ್ಲ ಎಂಬುದರ ಕುರಿತು ತಿಳಿಸುವ ಕಾಳವ್ವೆಯ ಜೀವನಾನುಭವ ಅಚ್ಚರಿ ಹುಟ್ಟಿಸುವಂಥದ್ದು. ಜನ ಮನೆಯಲ್ಲಿ ತಮ್ಮ ಧರ್ಮಗ್ರಂಥ ಇಟ್ಟುಕೊಳ್ಳುವುದು ಸುಲಭ. ಆದರೆ ಅದನ್ನು ಮನದಲ್ಲಿ ತಂದಿಟ್ಟುಕೊಳ್ಳುವುದು ಕಠಿಣ ಎಂದು ಕಾಳವ್ವೆ ಸೂಚಿಸುತ್ತಾಳೆ. ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಎಂದರೆ ಸೈದ್ಧಾಂತಿಕ ಬದುಕು ಸರಳವಲ್ಲ ಎಂದ ಹಾಗೆ. ಇಲ್ಲಿ ಉರಿಲಿಂಗಪೆದ್ದಿಗಳರಸ ಎಂಬ ದೇವರು ಸಿದ್ಧಾಂತವಾಗಿ ನಿಲ್ಲುತ್ತಾನೆ. ಇಂಥ ಸೈದ್ಧಾಂತಿಕ ಬದುಕನ್ನು ವ್ರತವಾಗಿ ಸ್ವೀಕರಿಸಿದಾಗ ಮಾತ್ರ ನಿತ್ಯಮುಕ್ತರಾಗಿ ಲೋಕದ ಹಿತ ಕಾಪಾಡಲು ಸಾಧ್ಯ. ಹೀಗೆ ಕಾಳವ್ವೆ ನಮ್ಮ ಮನಸ್ಸಿನಲ್ಲಿ ನಿಂತು ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಇರುತ್ತಾಳೆ.
- Login or register to post comments
- Email this page