You are hereಮನದೊಳಡಗಿದ ಪ್ರೇಮಿಯ ’ಭೂತ’
ಮನದೊಳಡಗಿದ ಪ್ರೇಮಿಯ ’ಭೂತ’
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
’ಭಾನಾಮತಿ’ಯ ಬಗ್ಗೆ ಡಾ|| ಎಚ್ಚೆನ್ ಸಮಿತಿಯ ವೈಜ್ಞಾನಿಕ ವಿಶ್ಲೇಷಣೆ ಪ್ರಕಟವಾದ ಮೇಲೂ ಕೆಲವರ ಮನಸ್ಸಿನ ಆಳದಲ್ಲಿ ಕೆಲವು ಸಂದೇಹಗಳು ಉಳಿದಂತೆ ಕಾಣುತ್ತವೆ. ಭಾನಾಮತಿ ಗುಲ್ಬರ್ಗ ಪ್ರದೇಶಕ್ಕಾಗಲಿ, ಹಳ್ಳಿಗಳಿಗೆ ಮಾತ್ರವಾಗಲಿ ಸೀಮಿತವಾದುದಲ್ಲ. ಭಾರತದ ಎಲ್ಲ ಭಾಗಗಳಲ್ಲೂ, ಹೊರಗೂ ಇಂತಹ ಮನೋವೈಕಲ್ಯದ ಪ್ರಕರಣಗಳು "ಭೂತಚೇಷ್ಟೆ", "ಮಾಟ", "ಅತೀಂದ್ರಿಯ ಶಕ್ತಿ" ಇತ್ಯಾದಿ ಹೆಸರುಗಳಿಂದ ಆಗಾಗ ವರದಿಯಾಗುತ್ತವೆ. ಶ್ರೀಲಂಕಾದಲ್ಲಿ ನಡೆದ ಇಂತಹ ಪ್ರಕರಣವನ್ನೊಂದನ್ನು ಮನೋವಿಜ್ಞಾನಿ ಹಾಗೂ ವಿಚಾರವಾದಿ ಡಾ|| ಕೋವೂರ್ ಹೇಗೆ ವಿಶ್ಲೇಷಿಸಿದರು ಎಂಬುದನ್ನು ಇಲ್ಲಿ ನೋಡಬಹುದು.*
ಶ್ರೀಮತಿ ಮತ್ತು ಶ್ರೀ ರಣಸಿಂಘೆಯರಿಗೆ ಅಂದು ಎಂದಿಲ್ಲದ ಸಂತಸ. ಅವರ ಮಗಳು ಲತಾಳ ಫೋಟೋ ಮತ್ತು ಅವಳು ಶಾಲೆಯ ನೆಟ್‌ಬಾಲ್ ಪಂದ್ಯದ ಕ್ಯಾಪ್ಟನ್ ಆಗಿ ಕೊಲಂಬೋದ ಪ್ರಸಿದ್ಧ ತಂಡವೊಂದರ ವಿರುದ್ಧ ಗಳಿಸಿದ ಭಾರಿ ವಿಜಯದ ವರ್ಣನೆ ಅಂದಿನ ಪತ್ರಿಕೆಗಳಲ್ಲಿ ಎದ್ದು ಕಾಣುವಂತೆ ಪ್ರಕಟವಾಗಿತ್ತು.
ಲತಾಳ ಶಾಲೆಯ ವಿವಿಧ ವಿನೋದಾವಳಿಯ ಟಿಕೆಟ್‌ಗಳು ಹುಡುಗರ ಶಾಲೆಯಲ್ಲಿ ಬಿಸಿಬಿಸಿ ದೋಸೆಯಂತೆ ಖರ್ಚಾದುವು. ಲತಾಳ ಹಾಡು ಮತ್ತು ನೃತ್ಯಗಳು ಶಾಲೆಯ ಹಿರಿಯ ಹುಡುಗರಿಗೆ ರಸದೌತಣವಾಗಿದ್ದವು.
ಮನೆಯಲ್ಲಿ ಅವಳು ತಂದೆಯ ಮುದ್ದಿನ ಮಗಳು. ಸರ್ಕಾರಿ ನೌಕರನಾದ ರಣಸಿಂಘೆಯ ವರಮಾನ ಅಷ್ಟೇನೂ ಹೆಚ್ಚಲ್ಲವಾದರೂ ಅವನು ಲತಾಳಿಗಾಗಿ ಎಷ್ಟಾದರೂ ಖರ್ಚು ಮಾಡಲು ಸಿದ್ಧನಿದ್ದ. ಲತಾಳಿಗೆ ೧೨ ಮತ್ತು ೧೦ ವಯಸ್ಸಿನ ಇಬ್ಬರು ತಂಗಿಯರಿದ್ದರು.
ಎಸ್.ಎಸ್.ಸಿ ಪರೀಕ್ಷಿ ಮುಗಿದ ದಿನದಿಂದಲೇ ಲತಾಳ ಕೆಟ್ಟಕಾಲ ಪ್ರಾರಂಭವಾಯಿತು. ಅನಂತರ ಅವಳು ಅಷ್ಟೊಂದು ಪ್ರೀತಿಸುತ್ತಿದ್ದ ತನ್ನ ಶಾಲೆಗೆ ಭೇಟಿ ಕೊಡುವ ಆಸೆಯನ್ನು ತೋರಿಸಲೇ ಇಲ್ಲ. ಪರೀಕ್ಷೆ ಮುಗಿದ ನಂತರ ಅವಳು ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಳು. ಎಲ್ಲದರಲ್ಲೂ ನಿರಾಸಕ್ತಿ. ತಂದೆ ತಾಯಿಯರು ಮಗಳ ಬಗ್ಗೆ ಕಾತರರಾದರು.
ಲತಾ ಪ್ರತಿನಿತ್ಯ ಬೆಳಿಗ್ಗೆ ತನ್ನ ಫ್ರಾಕನ್ನು ಬದಲಿಸುತ್ತಿದ್ದುದನ್ನು ಅವಳ ತಾಯಿ ಮೂರು ನಾಲ್ಕು ದಿನ ಗಮನಿಸಿದಳು. ಐದನೆಯ ದಿನ ಅವಳು ಹೊಸ ಫ್ರಾಕನ್ನು ಧರಿಸುತ್ತಿದ್ದಾಗ ದಿನವೂ ಫ್ರಾಕನ್ನೇಕೆ ಬದಲಿಸುತ್ತೀ ಎಂದು ತಾಯಿ ಕೇಳಿದಳು. ತೊಟ್ಟುಕೊಂಡ ಫ್ರಾಕು ರಾತ್ರಿ ಹರಿದುಹೋಗಿದೆ ಎಂದು ಲತಾ ಹೇಳಿದಳು. ಮರು ದುನವೂ ಹೊಸ ಫ್ರಾಕನ್ನು ಅವಳು ಧರಿಸುತ್ತಿದ್ದಾಗ ತಾಯಿ ಹಳೆಯ ಫ್ರಾಕು ಎರಡು ಕಡೆ ಹರಿದಿರುವುದನ್ನು ಗಮನಿಸಿದಳು. ಒಂದೆರಡು ವಾರಗಳಲ್ಲಿ ಲತಾಳ ಎಲ್ಲ ಫ್ರಾಕುಗಳೂ ಮುಗಿದುಹೋದುವು. ಎಲ್ಲ ಫ್ರಾಕುಗಳೂ ಪ್ರಮುಖ ಭಾಗದಲ್ಲೇ ಹರಿದುಹೋಗಿದ್ದುವು.
ಫ್ರಾಕುಗಳು ರಾತ್ರಿ ಹೇಗೆ ಹರಿದುವು ಎಂದು ತಂದೆತಾಯಿಯರು ಕೇಳಿದಾಗ ತನಗೆ ಗೊತ್ತಿಲ್ಲದೆ ರಾತ್ರಿ ಹರಿದಿವೆ ಎಂದು ಲತಾ ಹೇಳಿದಳು. ತನ್ನ ಮಗಳು ಅವಲಕ್ಷಣವಾಗಿ ಕಾಣಬಾರದೆಂದು ರಣಸಿಂಘೆ ಮಗಳಿಗೆ ಮತ್ತಷ್ಟು ಹೊಸ ಉಡುಪುಗಳನ್ನು ಹೊಲೆಸಿದ. ಅವುಗಳಿಗೂ ಅದೇ ಗತಿಯಾಯಿತು. ತಾಯಿಗೆ ಮಗಳ ಬಗ್ಗೆ ಸಹಾನುಭೂತಿ ಮುಗಿದು ಒಂದು ದಿನ ಕಪಾಳಮೋಕ್ಷವನ್ನೂ ಕಾಣಿಸಿದಳು.
ಅಂದಿನಿಂದ ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ಮರುದಿನ ಲತಾ ಎದ್ದಾಗ ಅವಳ ಫ್ರಾಕಿನಲ್ಲಿ ದೊಡ್ಡ ರಂಧ್ರಗಳು ಕಂಡವು. ಕತ್ತರಿಯಿಂದ ಅವನ್ನು ಕತ್ತರಿಸಲಾಗಿತ್ತು. ಯಾವ ಭಾಗದಲ್ಲಿ ಮರೆ ಹೆಚ್ಚು ಅವಶ್ಯಕವೋ ಅಲ್ಲಿಯೇ ಈ ಕತ್ತರಿ ಪ್ರಯೋಗ! ಬಟ್ಟೆಗಳೆಲ್ಲಾ ಮುಗಿದ ಮೇಲೆ ಲತಾ ಅವುಗಳನ್ನೇ ತೇಪೆ ಹಾಕಿ ತೊಟ್ಟು ಕೊಳ್ಳಲಾರಂಭಿಸಿದಳು.
ತಂದೆತಾಯಿಯರು ಇದೊಂದು ನಿಗೂಢ ಭೂತಚೇಷ್ಟೆ ಇರಬಹುದೆಂದು ಭಾವಿಸಿ ಒಬ್ಬ ಪ್ರಸಿದ್ಧ ಮಂತ್ರವಾದಿಯನ್ನು ಕಂಡರು. ಅವನು ತನ್ನ ನಾಲ್ವರು ಅನುಯಾಯಿಗಳೊಡನೆ ಒಂದು ದಿನ ಲತಾಳ ಮನೆಗೆ ಬಂದು ಪೂಜೆ ಮಾಡಿ, ಮಂತ್ರ ಹೇಳಿ ಮನೆಯ ಅಂಗಳದಲ್ಲಿ ನಾಲ್ಕು ಬಿಳಿಯ ಶಿಲೆಗಳಂತಹವನ್ನು ಹೂತು ೨೦೦ ರೂಪಾಯಿ ದಕ್ಷಿಣೆಯನ್ನು ಪಡೆದು ಹೊರಟುಹೋದ.
ಇದರಿಂದ ಭೂತಚೇಷ್ಟೆ ನಿಲ್ಲದೆ ಇಮ್ಮಡಿಯಾಯಿತು. ಅಂದಿನಿಂದ ಕತ್ತರಿಯಿಂದ ಬಟ್ಟೆಗಳನ್ನು ಕತ್ತರಿಸದೆ, ಬೆಂಕಿಯಿಂದ ಸುಡಲಾರಂಭಿಸಿತು. ಇದುವರೆಗೂ ಮಲಗಿದ್ದಾಗ ಮಾತ್ರ ಬಟ್ಟೆಗಳು ಕತ್ತರಿಸಲ್ಪಡುತ್ತಿದ್ದುವು.
ಈಗ ನೇತು ಹಾಕಿದ ಬಟ್ಟೆಗಳಲ್ಲೂ ಸುಟ್ಟ ರಂಧ್ರಗಳು ಕಾಣಲಾರಂಭಿಸಿದುವು. ಎರಡನೆ ತಿಂಗಳ ಕೊನೆ ವೇಳೆಗೆ ಲತಾ ರಾತ್ರಿ ಹಗಲು ಚಿಂದಿ ಬಟ್ಟೆಗಳನ್ನು ಮಾತ್ರ ತೊಡುವಂತಾಯಿತು.
ಈಗ ಲತಾ ಸದಾ ರೂಮಿನೊಳಗೆ ಬಂದಿ. ಅವಳ ಊಟವೂ ಅಲ್ಲೇ ಆಗುತ್ತಿತ್ತು. ದಿನಾ ಸ್ನಾನ ಮಾಡುವುದನ್ನೂ ಬಿಟ್ಟಿದ್ದಳು. ಕಕ್ಕಸಿಗೆ ಹೋಗುವಾಗ ಮಾತ್ರ ರೂಮು ಬಿಟ್ಟು ಹೊರಗೆ ಬರುತ್ತಿದ್ದಳು. ಕತ್ತರಿ, ಚಾಕು, ಕಡ್ಡಿಪೆಟ್ಟಿಗೆ ಇತ್ಯಾದಿ ಲತಾಗೆ ಸಿಗದಂತೆ ತಾಯಿ ಎಚ್ಚರ ವಹಿಸಿದ್ದಳು.
ಈ ಘಟ್ಟದಲ್ಲಿ ರಣಸಿಂಘೆ ಒಬ್ಬ "ಅಂಜನ" ನೋಡುವವನನ್ನು ಕಂಡ. ಅವನು ಲತಾಳ ಸೋದರ ಮಾವನ ಪ್ರೇತಾತ್ಮವೇ ಇದಕ್ಕೆಲ್ಲಾ ಕಾರಣ ಎಂದು ಹೇಳಿದ. ತನ್ನ ಸೋದರನಾರೂ ಸತ್ತಿಲ್ಲವೆಂದು ಶ್ರೀಮತಿ ರಣಸಿಂಘೆ ಪ್ರತಿಭಟಿಸಿದಳು. ಅಲ್ಲದೆ ತಮ್ಮನೊಬ್ಬನು ಅಂತಹ ಕೆಲಸ ಮಾಡುತ್ತಾನೆಂಬುದೇ ಅವಳಿಗೆ ಹಿಡಿಸಲಿಲ್ಲ.
ಇದುವರೆಗೂ ಲತಾ ತನ್ನ ಉಡುಪು ರಾತ್ರಿ ಹೇಗೆ ಹರಿಯುತ್ತದೆ ಎಂಬುದರ ಬಗ್ಗೆ ಮೌನವಾಗಿದ್ದಳು. ಈಗ, ಒಂದು ಭೂತ ತನ್ನಲ್ಲಿಗೆ ಬಂದು ತನ್ನೊಡನೆ ಹೋರಾಡಿ ಬಟ್ಟೆ ಹರಿದು, ಕತ್ತರಿಸಿ, ಸುಟ್ಟು ಹೋಗುತ್ತದೆಂದು ಹೇಳಲು ಪ್ರಾರಂಭಿಸಿದಳು.
ಒಂದು ಮುಂಜಾನೆ ಎದ್ದವಳೇ ಲತಾ ಗಟ್ಟಿಯಾಗಿ ಅಳಲಾರಂಭಿಸಿದಳು. ತಂದೆತಾಯಿಯರು ಅವಳ ಕೋಣೆಗೆ ಹೋದಾಗ ಲತಾಳ ಜಡೆಯು ಕತ್ತರಿಸಿ ಹಾಸಿಗೆ ಮತ್ತು ಕೋಣೆಯೊಳಗೆಲ್ಲಾ ಚೆಲ್ಲಾಡಿತ್ತು. ಅದನ್ನು ಕಂಡು ತಾಯಿ ಗೊಳೋ ಎಂದು ಅತ್ತಳು. ಹಿಂದಿನ ರಾತ್ರಿ ಭೂತ ಎರಡು ಸಾರಿ ಬಂದಿತ್ತು. ಮೊದಲನೆಯ ಸಾರಿ ಬಂದಾಗ ತನ್ನ ದೇಹವನ್ನೆಲ್ಲ ಪರಚಿ ಕಚ್ಚಿತು, ಎರಡನೆಯ ಸಾರಿ ಬಂದು ತನ್ನ ಕೂದಲನ್ನು ಕತ್ತರಿಸಿ ಹಾಕಿತು ಎಂದು ಲತಾ ಹೇಳಿದಳು.
ಪರಿಸ್ಥಿತಿ ದಿನೇದಿನೇ ಅಧೋಗತಿಗೆ ಇಳಿಯುತ್ತಿದ್ದಂತೆ ರಣಸಿಂಘೆ ತನ್ನ ಭಾವ ಪರೇರರಿಗೆ ಪತ್ರ ಬರೆದು ಪಿಲಿಯಾಂಡಾಲದ ಮಾಟ ಬಿಡಿಸುವ ಪದ್ಧತಿ ಪೂಜಾರಿಯನ್ನು ಕರೆತರಲು ಕೇಳಿಕೊಂಡ.
ಪೂಜಾರಿ ಬರುವ ದಿನ ಗೊತ್ತಾಯಿತು. ತಾಯಿ ಮಗಳಿಗೆ ಅಂದು ಬಲವಂತವಾಗಿ ಸ್ನಾನ ಮಾಡಿಸಲು ನಿಶ್ಚಯಿಸಿದಳು, ಲತಾಳು ಪ್ರತಿಭಟಿಸಿದರೂ ಬಿಡದೆ ತಾಯಿ ಮಗಳನ್ನು ಸ್ನಾನದ ಮನೆಗೆ ಕೊಂಡೊಯ್ದಳು. ಹರಿದ ಬಟ್ಟೆಗಳನ್ನು ಕಳಚಲು ಒತ್ತಾಯಿಸಿದಳು. ಬಟ್ಟೆ ಕಳಚಿದಾಗ ಲತಾಳ ಎದೆ ಮತ್ತು ತೊಡೆಗಳ ಮೇಲೆ ಪರಚಿದ ಗೆರೆಗಳನ್ನು ಕಂಡು ತಾಯಿಗೆ ಅಳು ತಡೆಯದಾಯಿತು. ಕೆಲವು ಕಡೆ ರಕ್ತ ಹೆಪ್ಪುಗಟ್ಟಿರುವುದು ಕಾಣಿಸುತ್ತಿತ್ತು. ಲತಾಳ ಬಲ ತೋಳಿನ ಮೇಲೆ ಕಚ್ಚಿದ ಸ್ಪಷ್ಟ ಗುರುತು ಇತ್ತು.
ಪೂಜಾರಿಯನ್ನು ಸ್ವಾಗತಿಸಲು ವಿಶೇಷ ಸಿದ್ಧತೆ ನಡೆದಿತ್ತು. ಹೊಸದಾಗಿ ಹೊಲಿಸಿ ತರಿಸಿದ ಉಡುಪನ್ನು ಲತಾ ತೊಟ್ಟಿದ್ದಳು. ಬಹು ದೀರ್ಘವಾದ ಪೂಜೆ, ಮಂತ್ರ ಇತ್ಯಾದಿ ಆದಮೇಲೆ ಪೂಜಾರಿ ಲತಾಳ ಕತ್ತು ಮತ್ತು ಕಾಲಿಗೆ ಮಂತ್ರಿಸಿದ ದಾರಗಳನ್ನು ಕಟ್ಟಿದ. "ವಿಷ್ಣು ರಾಜ ತೈಲ" ಎಂಬ ಎಣ್ಣೆಯ ಹನಿಗಳಿಂದ ಕೂಡಿದ ಒಂದು "ಯಂತ್ರ"ವನ್ನು ಲತಾಳ ತೋಳಿಗೆ ಬಿಗಿದ. ಅವನ ದಕ್ಷಿಣೆ ಮತ್ತು ರುಷುವತ್ತುಗಳನ್ನು ಪಡೆದು ಪೂಜಾರಿ ಹೊರಟುಹೋದ.
ಯಂತ್ರ ಮಂತ್ರಗಳು ಮತ್ತು ದಾರಗಳ ದಾರಣೆಯ ನಂತರ ಎರಡು ದಿನ ಏನೂ ತೊಂದರೆಯಾಗಲಿಲ್ಲ. ಮೂರನೆಯ ದಿನ ಮುಮ್ಮಡಿ ತೀವ್ರವಾಗಿ ತೊಂದರೆ ಶುರುವಾಯಿತು.
ಈ ಸಾರಿ ಪರೇರ ತನ್ನ ಭಾವನಿಗೆ ಡಾ|| ಅಬ್ರಾಹಂ ಟಿ. ಕೋವೂರರ ಹೆಸರು ವಿಳಾಸಗಳನ್ನು ಒದಗಿಸಿ, ಅವರನ್ನು ಭೇಟಿಯಾಗುವಂತೆ ಸಲಹೆ ಮಾಡಿದ. ರಣಸಿಂಘೆ ಒಂದು ದಿನ ಡಾ|| ಕೋವೂರರನ್ನು ಭೇಟಿಯಾಗಿ ತನ್ನ ಮಗಳ ಪ್ರಸ್ತುತ ತೊಂದರೆ ಮತ್ತು ಹಿಂದಿನ ಚರಿತ್ರೆಯನ್ನು ವಿವರಿಸಿದ. ಡಾ|| ಕೋವೂರರು ತಮ್ಮ ಶ್ರೀಮತಿಯೊಡನೆ ಒಂದು ಭಾನುವಾರ ಮುಂಜಾನೆ ೧೧ ಕ್ಕೆ ಪಡುಕ್ಕಾದ " ಲತಾ ನಿವಾಸ" ಕ್ಕೆ ಭೇಟಿ ನೀಡಿದರು. ಔಪಚಾರಿಕವಾಗಿ ಕಾಲಹರಣ ಮಾಡದೆ ಅವರಿಬ್ಬರೂ ಲತಾಳ ಕೋಣೆಯನ್ನು ಪ್ರವೇಶಿಸಿದರು; ಎರಡು ಕುರ್ಚಿಗಳಲ್ಲಿ ಕುಳಿತರು. ಲತಾ ತನ್ನ ಹಾಸಿಗೆಯ ಮೇಲೆ ಕುಳಿತಿದ್ದಳು. ಲತಾಳನ್ನು ಬಿಟ್ಟು ಉಳಿದವರೆಲ್ಲ ರೂಮಿನಿಂದ ಹೊರೆಗೆ ಹೋಗಲು ಕೋವೂರ್ ದಂಪತಿಗಳು ಕೇಳಿಕೊಂಡರು.
ಲತಾ ಹೊಸ ಫ್ರಾಕು ತೊಟ್ಟುಕೊಂಡಿದ್ದಳು. ಹರಿದ ಫ್ರಾಕುಗಳನ್ನು ತೋರಿಸು ಎಂದು ಶ್ರೀಮತಿ ಕೋವೂರ್ ಲತಾಳನ್ನು ಕೇಳಿದರು. ಲತಾ ಒಂದು ಕಬೋರ್ಡಿನಿಂದ ಒಂದು ರಾಶಿ ಬಟ್ಟೆಯನ್ನು ಹೊರಗೆಳೆದಳು. ಅಲ್ಲಿ ಸುಮಾರು ಹದಿನೈದು ಫ್ರಾಕುಗಳಿದ್ದುವು. ಎಲ್ಲಾ ತುಂಬಾ ಹರಿದಿದ್ದುವು. ಐದು ಸುಟ್ಟಿದ್ದುವು. ಸುಮಾರು ಹನ್ನೊಂದಕ್ಕೆ ತೇಪೆ ಹಾಕಲಾಗಿತ್ತು. ರಂಧ್ರಗಳು ಮತ್ತು ಹರಿತಗಳು ಮುಂಭಾಗದಲ್ಲಿ ಮಾತ್ರ ಕಾಣುತ್ತಿದ್ದುವು.
ಡಾ|| ಕೋವೂರರ ಕೋರಿಕೆಯಂತೆ ಅವರ ಹೆಂಡತಿ ಲತಾಳನ್ನು ಪ್ರತ್ಯೇಕವಾಗಿ ಪರೀಕ್ಷೆ ಮಾಡಿದರು. ಅವರು ಲತಾಳ ದೇಹದ ಮೇಲೆ ಕಂಡದ್ದನ್ನು ಡಾ|| ಕೋವೂರರಿಗೆ ವಿವರಿಸಿದರು. ಅವಳ ಎದೆಯ ಮೇಲೆ ಐದು ಪರಚಿದ ಗೆರೆಗಳು, ಎಲ್ಲವೂ ಎಡಗಡೆ ಇದ್ದುವು. ಅವಳ ತೊಡೆಯ ಒಳಭಾಗದಲ್ಲಿ ಪರಚಿದ ಎರಡು ಗೆರೆಗಳು ಕಾಣುತ್ತಿದ್ದುವು. ಕಂಕುಳಿಂದ ನಾಲ್ಕು ಅಂಗುಲ ಕೆಳಗೆ ಬಲತೋಳ ಮೇಲೆ ಕಚ್ಚಿದ ಗುರುತು ಎದ್ದು ಕಾಣುತ್ತಿತ್ತು. ಹೊರ ಸಾಲಿನ ಹಲ್ಲಿನ ಗುರುತಿನ ನಡುವೆ ಒಂದು ಸಣ್ಣ ಸಂದು ಇತ್ತು.
ಲತಾಳನ್ನು ಅವಳ ಹಾಸಿಗೆಯ ಮೇಲೆ ಅಂಗಾತ ಮಲಗಿ ಪೂರ್ಣ ವಿಶ್ರಾಂತಿ ಪಡೆಯಲು ಡಾ|| ಕೋವೂರ್ ಅಪ್ಪಣೆ ಮಾಡಿದರು. ಅವರು ಗಡುಸು ಧ್ವನಿಯಲ್ಲಿ ಒಂದಾದ ಮೇಲೊಂದು ಪ್ರಶ್ನೆ ಹಾಕಿ ಸರಸರನೆ ಉತ್ತರ ಹೇಳಲು ಲತಾಳಿಗೆ ಆಜ್ಞಾಪಿಸಿದರು. ಒಂದು ಗಂಟೆಯ ಕಾಲ ನಡೆಸಿದ ತೀವ್ರ ಪ್ರಶ್ನೋತ್ತರಗಳ ಪರಿಣಾಮವಾಗಿ ಅವರು ಈ ಕೆಳಗಿನ ಸಂಗತಿಗಳನ್ನು ಸಂಗ್ರಹಿಸಿದರು. ಅದನ್ನು ಅವಳ ಮಾತಿನಲ್ಲೇ ಮುಂದೆ ಕೊಡಲಾಗಿದೆ:-
"ನಾನು ನಿದ್ದೆ ಹೋದಾಗ ಒಬ್ಬ ಬಲಶಾಲಿ ತರುಣ ನನ್ನ ಬಳಿಗೆ ಬರುತ್ತಾನೆ. ಅವನು ನನ್ನ ಮೈಸವರಿ ನನ್ನನ್ನು ಮುದ್ದಾಡುತ್ತಾನೆ. ಆಗ ನನಗೆ ಎಚ್ಚರವಾಗುತ್ತದೆ. ಅವನು ನನಗೆ ಚಾಕಲೇಟ್, ಸಿಹಿ ತಿಂಡಿ ಮತ್ತು ಸೆಂಟುಗಳನ್ನು ಕಾಣಿಕೆಯಾಗಿ ತರುತ್ತಾನೆ. ಕೆಲವು ಕ್ಷಣಗಳ ನಂತರ ಅವನು ಬಾಗಿಲ ಹೊರಗೆ ಕಾಯುತ್ತಿರುವ ಕಾರಿನ ಬಳಿಗೆ ಅವನೊಡನೆ ಹೋಗಲು ನನ್ನನ್ನು ಪುಸಲಾಯಿಸುತ್ತಾನೆ. ನಾನು ಅವನೊಡನೆ ಹೋಗಲು ತಿರಸ್ಕರಿಸಿದಾಗ ನನ್ನೊಡನೆ ಹೋರಾಡುತ್ತಾನೆ. ಸೆಣಸಾಟದಲ್ಲಿ ನನ್ನ ಬಟ್ಟೆಗಳು ಹರಿಯುತ್ತವೆ. ಕೆಲವು ಸಾರಿ ಅವನು ತುಂಬಾ ಕೋಪಗೊಂಡು ನನ್ನನ್ನು ಕಚ್ಚುತ್ತಾನೆ.
" ಅವನ ಉಗುರುಗಳು ತುಂಬಾ ಚೂಪಾಗಿವೆ. ಅವುಗಳಿಂದ ನನ್ನನ್ನು ಪರಚುತ್ತಾನೆ. ಅವನು ನನ್ನ ಬಟ್ಟೆಗಳನ್ನು ಹರಿಯುವುದನ್ನು ನಾನು ತಡೆದರೆ ಅವುಗಳಲ್ಲಿ ರಂಧ್ರಗಳನ್ನು ಕತ್ತರಿಸುತ್ತಾನೆ.
"ನನ್ನೊಡನೆ ಹೋರಾಡಲು ಪ್ರಾರಂಭಿಸಿದಾಗ ಅವನು ದೊಡ್ಡ ರಾಕ್ಷಸನಂತೆ ಬೆಳೆದು ನನ್ನನ್ನು ಅವನ ತೋಳಿನಲ್ಲಿ ಎತ್ತಿಹಿಡಿಯುತ್ತಾನೆ. ನಾನು ಒದ್ದಾಡಿದಾಗ ನನ್ನನ್ನು ನೆಲಕ್ಕೆ ಬೀಳಿಸುತ್ತಾನೆ. ಒಂದು ದಿನ ಕತ್ತರಿಯಿಂದ ನನ್ನ ಕೂದಲನ್ನು ಕತ್ತರಿಸಿದ."
ಅವನಂತಹವನನ್ನು ಈ ಮೊದಲು ಎಲ್ಲಿಯಾದರೂ ನೋಡಿದ್ದೀಯಾ ಎಂದು ಲತಾಳನ್ನು ಡಾ|| ಕೋವೂರ್ ಕೇಳಿದಾಗ ಅವಳು ಹೇಳಿದಳು. "ಹೌದು, ಅವನು ಲಿಯೋನೆಲ್‌ನ ಹಾಗೇ ಇದ್ದಾನೆ. ಅವನು ಹುಡುಗರ ಶಾಲೆಯ ಫುಟ್‌ಬಾಲ್ ಕ್ಯಾಪ್ಟನ್. ನಾನು ಶಾಲೆಗೆ ಹೋಗುವಾಗ, ಬರುವಾಗ ಅವನನ್ನು ಭೇಟಿಯಾಗುತ್ತಿದ್ದೆ. ಪಾಪ, ಮೂರುತಿಂಗಳ ಹಿಂದೆ ಕಾರು ಅಪಘಾತದಲ್ಲಿ ಅವನು ಸತ್ತು ಹೋದ. ತುಂಬಾ ಒಳ್ಳೆಯವನು. ನಮ್ಮ ನೆಟ್-ಬಾಲ್ ತಂಡ ಪಂದ್ಯಕ್ಕಾಗಿ ಹೊರೆಗೆ ಹೋದಾಗಲೆಲ್ಲ ಅವನು ಅಲ್ಲಿಗೆ ಬಂದು ನಮ್ಮನ್ನು ಹುರಿದುಂಬಿಸುತ್ತಿದ್ದ." ಇದನ್ನು ಹೇಳುತ್ತಿದ್ದಾಗ ಲತಾಳ ಕೆನ್ನೆಮೇಲೆ ಇಳಿಯುತ್ತಿದ್ದ ಕಣ್ಣೀರನ್ನು ಡಾ|| ಕೋವೂರ್ ಕಂಡರು.
ಬಟ್ಟೆಗಳು ಹರಿಯುವುದು, ರಂಧ್ರಗಳನ್ನು ಕತ್ತರಿಸುವುದು, ತನ್ನ ಕೂದಲನ್ನೇ ಕತ್ತರಿಸಿಕೊಳ್ಳುವುದು, ತನ್ನ ಉಡುಪುಗಳನ್ನು ಸುಡುವುದು, ತನ್ನ ದೇಹವನ್ನು ಪರಚಿಕೊಳ್ಳುವುದು, ಕಚ್ಚಿಕೊಳ್ಳುವುದು ಇತ್ಯಾದಿ ಎಲ್ಲಾ ಘಟನೆಗಳಿಗೆ ತಾನೇ ಜವಾಬ್ದಾರಳೆಂದು, ಬಹು-ಸೂಚಕ ವಶೀಕರಣ ಸ್ಥಿತಿ (hetero-suggestive spell) ಯಲ್ಲಿದ್ದಾಗ, ಲತಾ ಒಪ್ಪಿಕೊಂಡಳು. ಅದೇ ಸ್ಥಿತಿಯಲ್ಲಿದ್ದಾಗ ಅಂತಹ ಕೃತ್ಯಗಳನ್ನು ಇನ್ನು ಮುಂದೆ ಮಾಡುವುದಿಲ್ಲವೆಂದು ಅವಳಿಂದ ಡಾ|| ಕೋವೂರ್ ಭಾಷೆ ಪಡೆದರು.
ಲತಾಳ ಕೋಣೆಯಿಂದ ಅವರು ಒಂದು ಗಂಟೆ ಹತ್ತು ನಿಮಿಷಗಳ ನಂತರ ಹೊರಬಂದರು, ಶ್ರೀ ರಣಸಿಂಘೆಯೊಡನೆ ಕೋವೂರ್ ದಂಪತಿಗಳು ಊಟಕ್ಕೆ ಕುಳಿತಾಗ ಶ್ರೀಮತಿ ರಣಸಿಂಘೆ ಅವರಿಗೆ ಬಡಿಸಿದಳು. ಊಟ ಮಾಡುತ್ತಾ ಡಾ|| ಕೋವೂರ್ ತೊಂದರೆಯ ಕಾರಣವನ್ನು ಸ್ಥೂಲವಾಗಿ ಹೇಳಿದರು. ಲತಾಳನ್ನು ಯೋಗ್ಯನಾದ ಒಬ್ಬ ಯುವಕನಿಗೆ, ಸಾಧ್ಯವಾದರೆ ಒಬ್ಬ ಕ್ರೀಡಾಪಟುವಿಗೆ, ಕೊಟ್ಟು ಮದುವೆ ಮಾಡುವಂತೆ ರಣಸಿಂಘೆಗೆ ಸಲಹೆ ಮಾಡಿದರು.
ಇಂದು ಲತಾ ಮದುವೆಯಾಗಿ ಎರಡು ಮುದ್ದು ಮಕ್ಕಳ - ಒಂದು ಗಂಡು, ಒಂದು ಹೆಣ್ಣು-ತಾಯಿಯಾಗಿ ಸುಖವಾಗಿದ್ದಾಳೆ.
ಲತಾಳ ವರ್ತನೆಯನ್ನು ಕುರಿತು ಒಂದು ಸಮಾಧಾನಕರ ವಿವರಣೆಯನ್ನು ಕೊಡುತ್ತೀರಾ ಎಂಬ ಒಬ್ಬ ಪತ್ರಿಕಾ ವರದಿಗಾರ ಡಾ|| ಕೋವೂರ್‌ರನ್ನು ಕೇಳಿದಾಗ ಅವರು ಹೇಳಿದರು.
"ಆ ನಿಗೂಢ ಕೃತ್ಯಗಳಿಗೆ ಹೊಣೆಗಾರಿಕೆಯನ್ನು ಲತಾ ಒಪ್ಪಿಕೊಳ್ಳದಿದ್ದರೂ ಅಲ್ಲಿ ದೊರೆತ ಸಾಕ್ಷ್ಯಗಳಿಂದ ಅವಳೇ ಆ ಕೆಲಸ ಮಾಡುತ್ತಿದ್ದಳೆಂದು ನಾನು ತೀರ್‍ಮಾನಿಸುತ್ತಿದ್ದೆ. ಅವಳು ಬಲಗೈ ಪ್ರಧಾನ ವ್ಯಕ್ತಿಯಾದ್ದರಿಂದ ಪರಚಿದ ಎಲ್ಲ ಗಾಯಗಳು ಅವಳ ಎದೆಯ ಎಡಭಾಗದಲ್ಲಿ ಮಾತ್ರ ಕಾಣಿಸಿಕೊಂಡಿವೆ. ಭೂತ ಆ ಕೆಲಸ ಮಾಡುತ್ತಿದ್ದರೆ, ಒಂದೆರಡಾದರೂ ಬಲಗಡೆ ಸಹ ಇರಬೇಕಾಗಿತ್ತು. ಅವಳ ಹಲ್ಲುಗಳ ಮೇಲ್ಪಂಕ್ತಿಯ ನಡುವಿನ ಸಂದು ಬಲತೋಳಿನ ಮೇಲೆ ಮುದ್ರೆಯೊತ್ತಿದೆ. ಫ್ರಾಕಿನ ಎದೆಯ ಎಡ ಉಬ್ಬಿನ ಮೇಲೆ ಮಾತ್ರ ರಂಧ್ರಗಳಿವೆ, ಏಕೆಂದರೆ ಅವುಗಳನ್ನು ಮಾಡಲು ಅವಳ ಬಲಗೈಯನ್ನು ಉಪಯೋಗಿಸುತ್ತಿದ್ದಳು.
"ಎರಡು ತಿಂಗಳ ಕಾಲ ಭೂತವೇ ಆ ಕೆಲಸ ಮಾಡುತ್ತದೆಂದು ಅವಳು ವಾದಿಸಿದ್ದಳು, ಏಕೆಂದರೆ ಅವಳು ಹಾಗೇ ನಂಬಿದ್ದಳು. ಅವಳು ಅನೇಕರ ಹಾಗೆ ಚಿಕ್ಕಂದಿನಲ್ಲಿ ಅರ್ಥಹೀನ ದೆವ್ವ ಭೂತಗಳ ಕಥೆಗಳನ್ನು ಕೇಳಿ ಬೆಳೆದಿದ್ದಳು. ಅಂತಹ ವಿಚಾರಗಳನ್ನು ಸುಪ್ತಪ್ರಜ್ಞೆಯಲ್ಲಿ ಉಳ್ಳ ವ್ಯಕ್ತಿಗಳಿಗೆ ಅಂತಹ ಮಿಥ್ಯಾಕಲ್ಪನೆ (hallucination) ಗಳ ಅನುಭವ ಅಸಾಮಾನ್ಯವೇನೂ ಅಲ್ಲ. ಅಲ್ಲದೆ, ಆ ವೇಳೆಯಲ್ಲಿ ಆಲೋಚನೆ ಮತ್ತು ಕೃತ್ಯಗಳಿಗೆ ಸಂಬಂಧ ಕಡಿದುಹೋದ ಸ್ಕಿಜೊಫ್ರೇನಿಯಾ (ಒಡಕು ವ್ಯಕ್ತಿತ್ವ, schizophrenia) ಎಂಬ ಮನೋರೋಗದಿಂದ ಅವಳು ನರಳುತ್ತಿದ್ದುದರಿಂದ ತಾನು ಬೇರೆ ವ್ಯಕ್ತಿಯಾಗಿ ಮಾಡುತ್ತಿದ್ದ ಕೃತ್ಯವನ್ನು ತನ್ನ ಜಾಗೃತ ನೆನಪಿಗೆ ತಂದು ಕೊಳ್ಳಲು ಅಸಮರ್ಥಳಾಗಿದ್ದಳು.
"ಹಾಗಾದರೆ ಅವಳು ಸ್ಕಿಜೊಫ್ರೆನಿಕ್ ಆಗಲು ಕಾರಣವೇನು? ಅದು ಲೈಂಗಿಕ ಹತಾಶೆಯ ಪರಿಣಾಮವೆಂದು ನನಗೆ ಕಾಣುತ್ತದೆ. ಅವಳು ಬಹುಶಃ ಅತಿ ಕ್ರಿಯಾಶಾಲಿ ಲೈಂಗಿಕ ಗ್ರಂಥಿಗಳಿಂದ ಕೂಡಿದ ಹರೆಯದ ಹೊಸ್ತಿಲಲ್ಲಿರುವ ಒಬ್ಬ ಆರೋಗ್ಯವಂತ ಹುಡುಗಿಯಾಗಿದ್ದಳು. ಗಂಡು ಹುಡುಗರ ಸಹವಾಸವಿಲ್ಲದ ಒಂದು ಸಂಕೋಚ ಸ್ವಭಾವದ ಕುಟುಂಬದಲ್ಲಿ ಅವಳು ಬೆಳೆದಿದ್ದಳು. ಅವಳಿಗೆ ಸೋದರರು ಇದ್ದಿದ್ದರೆ ಅವರನ್ನು ಭೇಟಿಯಾಗಲು ಬರುತ್ತಿದ್ದ ಗೆಳೆಯರನ್ನು ಭೇಟಿಯಾಗುವ ಅವಕಾಶವಾದರೂ ಅವಳಿಗಿರುತ್ತಿತ್ತು.
"ಬಹುಶಃ ಫುಟ್‌ಬಾಲ್ ಕ್ಯಾಪ್ಟನ್ ತರುಣ ಲಿಯೋನೆಲ್ ಒಬ್ಬನೊಡನೆ ಮಾತ್ರ ಮುಕ್ತವಾಗಿ ಮಾತಾಡುವ ಅವಕಾಶ ಅವಳಿಗೆ ದೊರೆತಿತ್ತು. ಅವರೀರ್ವರೂ ಲೈಂಗಿಕವಾಗಿ ಆಕರ್ಷಿತರಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಕ್ರೀಡೆಗಳಲ್ಲಿ ಅವರಿಗಿದ್ದ ಸಮಾನ ಆಸಕ್ತಿ ಅವರೀರ್ವರ ಆಕರ್ಷಣೆಗೆ ಕಾರಣವಾಗಿರಬಹುದು. ಲತಾಳ ಕ್ಯಾಪ್ಟನ್ ಷಿಪ್ನಲ್ಲಿ ಆಡುತ್ತಿದ್ದ ಎಲ್ಲ ನೆಟ್ ಬಾಲ್‌ಪಂದ್ಯಗಳಿಗೆ ಲಿಯೋನೆಲ್ ಹಾಜರಾಗುತ್ತಿದ್ದ. ಲತಾಳ ಕ್ರೀಡಾ ಪ್ರತಿಭೆಯ ಪ್ರದರ್ಶನವನ್ನು ವೀಕ್ಷಿಸಿ ಅವನು ತುಂಬಾ ಖುಷಿ ಪಡುತ್ತಿದ್ದ ಎಂಬುದು ಸ್ಪಷ್ಟವಿದೆ.
"ಮೂರು ತಿಂಗಳ ಹಿಂದೆ ಘಟಿಸಿದ ಲಿಯೋನೆಲ್‌ನ ಸಾವು ಲತಾಳ ಮನಸ್ಸಿನ ಮೇಲೆ ಒಂದು ದೊಡ್ಡ ಅಘಾತವನ್ನು ಉಂಟುಮಾಡಿತು. ಅವಳಿಗೆ ಅದೊಂದು ತುಂಬಲಾರದ ಮೈಯಕ್ತಿಕ ನಷ್ಟ. ಮೊದಲನೆಯ ತಿಂಗಳಲ್ಲಿ ಅವಳು ಅದರ ಬಗ್ಗೆ ಚಿಂತಿಸಲು ಸಮಯವಿರಲಿಲ್ಲ. ಏಕೆಂದರೆ ಅವಳು ಆಗ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತಲ್ಲೀನಳಾಗಿದ್ದಳು. ಪರೀಕ್ಷೆ ಮುಗಿದ ದಿನದಿಂದಲೇ ಲಿಯೋನೆಲ್‌ನ ಯೋಚನೆ ಅವಳ ಸುಪ್ತ ಪ್ರಜ್ಞೆಯನ್ನು ಬಾಧಿಸತೊಡಗಿತು. ಅದರಿಂದ ಅವಳು ವಿಷಣ್ಣಳಾದಳು.
ಲಿಯೋನೆಲ್‌ನ ಮಿಥ್ಯಾ ಕಲ್ಪನೆಯ ಚಿತ್ರವೇ ಅವಳ ಬಳಿಗೆ ರಾತ್ರಿ ಬರುತ್ತಿದ್ದ ಬಲಶಾಲಿ ಯುವಕ. ಅವನು ಮೈಸವರುವುದು, ಮುದ್ದಾಡುವುದು, ಅತ್ಯಾಚಾರಕ್ಕೆಳಸುವುದು, ಉಡುಗೊರೆಗಳನ್ನು ತರುವುದು, ತನ್ನೊಡನೆ ಹೋಗಲು ಕರೆಯುವುದು, ಅವನ ತೋಳುಗಳಲ್ಲಿ ಅವಳನ್ನು ಎತ್ತಿಕೊಳ್ಳುವುದು ಇತ್ಯಾದಿ ನಿಜವಾಗಿಯೂ ಅವಳ ಆಸೆ-ಪೂರೈಕೆಗಳು (Wish-fulfilment).
"ಅವಳು ಕೂದಲನ್ನು ಮೊಟಕಾಗಿ ಕತ್ತರಿಸುವುದು ಸಹ ಅವಳು ತನ್ನ ಪ್ರೇಮಿಯ ಎದಿರು ಹೆಚ್ಚು ಅಂದದ ಶೈಲಿಯಲ್ಲಿ ಕಾಣಿಸಿಕೊಳ್ಳುವ ಅವಳ ಸುಪ್ತ ಬಯಕೆಯ ಪರಿಣಾಮ. ಅವಳ ದೇಹದ ಕೆಲವು ಭಾಗಗಳು ಕಾಣುವಂತೆ ಫ್ರಾಕನ್ನು ಹರಿಯುವುದು ಮತ್ತು ಕತ್ತರಿಸುವುದು ಪ್ರದರ್ಶನತನದ (Exhibitionism) ಒಂದು ಅಭಿವ್ಯಕ್ತಿ. ಸ್ವತಃ ದೇಹವನ್ನು ಪರಚಿಕೊಂಡು (Masochismನ ಒಂದು ಛಾಯೆ) ತನ್ನ ಪ್ರೇಮಿಯು ಮಾಡಿದನೆಂದು ಕಲ್ಪಿಸಿಕೊಳ್ಳಲಾದ ಅಂತಹ ಪರಚುವಿಕೆ, ಕಚ್ಚುವಿಕೆಗಳಿಂದ ಅವಳು ಸಂತೋಷ ಪಡೆಯುತ್ತಿದ್ದಳು. ಸೆಣಸಾಟದ ಸಮಯದಲ್ಲಿ ವ್ಯಕ್ತಿಯು ರಾಕ್ಷಸನಂತೆ ಬೆಳೆಯುತ್ತಾನೆ ಎಂಬುದು ಪೌರುಷತ್ವದಿಂದ ಕೂಡಿದ ದೃಢಕಾಯದ ವ್ಯಕ್ತಿಯ ಬಗ್ಗೆ ಅವಳಿಗೆ ಅಂಧಶ್ರದ್ಧೆ (fetisr) ಇತ್ತು ಎಂಬ ನನ್ನ ದೃಷ್ಟಿಯನ್ನು ದೃಢಪಡಿಸುತ್ತದೆ. ಅದಕ್ಕಾಗಿಯೇ ನಾನು ಅವಳ ತಂದೆಗೆ ಒಬ್ಬ ಕ್ರೀಡಾಪಟುವನ್ನು ಗಂಡನನ್ನಾಗಿ ಆರಿಸಲು ಸಲಹೆ ಮಾಡಿದೆ.
"ಈ ಪ್ರಕರಣದ ಎಲ್ಲ ಘಟನೆಗಳು ಸತ್ಯಾಂಶಗಳಾಗಿದ್ದು, ಲತಾ ಮತ್ತು ಅವಳ ಪತಿಗೆ ಮಾತುಕೊಟ್ಟಂತೆ, ವ್ಯಕ್ತಿಗಳ ಮತ್ತು ಸ್ಥಳಗಳ ಹೆಸರುಗಳು ಮಾತ್ರ ಕಾಲ್ಪನಿಕವಾಗಿವೆ."
ಆಧಾರ: ಡಾ|| ಅಬ್ರಾಹಂ ಟಿ. ಕೋವೂರರ "ಬಿಗಾನ್ ಗಾಡ್ ಮೆನ್"
*ಭಾನಾಮತಿ ಮೂಢನಂಬಿಕೆಯೆ ಅಥವಾ ಮನೋವೈಕಲ್ಯವೇ? ಹಲವು ಕಡೆ ಹಲವಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ "ಅತೀಂದ್ರಿಯ ಶಕ್ತಿ"ಯ ಗುಟ್ಟು ಒಡೆಯಲು ವಿಜ್ಞಾನಿಗಳು, ವಿಚಾರವಾದಿಗಳು ಸತತ ಯತ್ನ ನಡೆಸಿದ್ದಾರೆ. ದುರ್ಬಲ ಮನಸ್ಸು ಇಂಥ ಶಕ್ತಿಗಳನ್ನು ಸೃಷ್ಟಿಸಬಲ್ಲುದು ಎಂಬುದಕ್ಕೆ ದೃಷ್ಟಾಂತ ಶ್ರೀಲಂಕಾದ ಪ್ರಕರಣ.
- Login or register to post comments
- Email this page