You are hereವಚನ ವಿವೇಕ - 8

ವಚನ ವಿವೇಕ - 8


By admin - Posted on 24 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ದೇಹಾರವ ಮಾಡುವಣ್ಣಗಳಿರಾ, ಒಂದು ತುತ್ತು ಆಹಾರವನಿಕ್ಕಿರೆ.
ದೇಹಾರಕ್ಕೆ ಆಹಾರವೆ ನಿಚ್ಚಣಿಗೆ.
ದೇಹಾರವ ಮಾಡುತ್ತ ಆಹಾರವನಿಕ್ಕದಿರ್ದಡೆ,
ಆ ಹರನಿಲ್ಲೆಂದನಂಬಿಗ ಚೌಡಯ್ಯ.
-ಅಂಬಿಗರ ಚೌಡಯ್ಯ

ನಿಜಶರಣ ಅಂಬಿಗರ ಚೌಡಯ್ಯನವರು ನಿಷ್ಠುರ ವಚನಕಾರರು. ಇದ್ದದ್ದನ್ನು ಇದ್ದಹಾಗೆ ಹೇಳುವ ನಿರಂಕುಶಮತಿಗಳು. ಕೆಳವರ್ಗದ ಜನರ ಕಷ್ಟನಷ್ಟಗಳನ್ನು ಅನುಭವಿಸಿದ ಅನುಭಾವಿಗಳು. ಇಹ ಪರಗಳ ಮಧ್ಯೆ ವೈಚಾರಿಕತೆ ತುಂಬಿದವರು. ಏಕದೇವೋಪಾಸನೆಯಲ್ಲಿ ಪರಮನಿಷ್ಠರು. ಆಚಾರ ಹೇಳುತ್ತ ದ್ವಂದ್ವ ಬದುಕನ್ನು ಸಾಗಿಸುವವರ ವಿರುದ್ಧ ಧ್ವನಿ ಎತ್ತಿದವರು. ‘ಭವಸಾಗರವನ್ನು ದಾಟಿಸುವ ಅಂಬಿಗ’ ಎಂಬ ಹೆಗ್ಗಳಿಕೆಯುಳ್ಳವರು.

ಮೇಲಿನ ವಚನ ಅವರ ಜೀವಕಾರುಣ್ಯದ ಪ್ರತೀಕವಾಗಿದೆ. ದಯೆ ಇಲ್ಲದೆ ಬದುಕುವವರಿಗೆ ದೇವರ ಸಂಬಂಧವಿರಲಾರದು ಎಂದು ಅಂಬಿಗರ ಚೌಡಯ್ಯನವರು ಈ ವಚನದಲ್ಲಿ ತಿಳಿಸಿದ್ದಾರೆ. ಬಡಜನರ ಬಗ್ಗೆ ಕಾಳಜಿ ಇಲ್ಲದವರ ದೇವಪೂಜೆ ಡಂಬಾಚಾರದಿಂದ ಕೂಡಿರುತ್ತದೆ. ಅಂತಃಕರಣದಿಂದ ಕೂಡಿದ ಪೂಜೆಯೇ ನಿಜವಾದ ಪೂಜೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ನಿಜವಾದ ಪೂಜೆ. ಅಂತೆಯೆ ಬಡವರಿಗೆ ಸಹಾಯ ಮಾಡಿರಿ ಎಂದು ದೇಹಾರ ಮಾಡುವವರಿಗೆ ಚೌಡಯ್ಯನವರು ಕಳಕಳಿಯಿಂದ ಕೇಳುತ್ತಾರೆ.

ಈ ವಚನದಲ್ಲಿ ಮನವೊಲಿಸುವ ರೀತಿ ಹೃದಯಸ್ಪರ್ಶಿಯಗಿದೆ. ‘ದೇಹಾರ ಮಾಡುವ ಅಣ್ಣಗಳಿರಾ ಒಂದು ತುತ್ತು ಆಹಾರವನಿಕ್ಕಿರೆ’ ಎನ್ನುವಲ್ಲಿ ಭಕ್ತರ ಮೇಲಿರುವ ನೈತಿಕ ಜವಾಬ್ದಾರಿಯನ್ನು ಸೂಚಿಸಲಾಗಿದೆ. ‘ಅಣ್ಣಗಳಿರಾ’ ಮತ್ತು ‘ಒಂದುತುತ್ತು’ ಪದಗಳು ಇಲ್ಲಿ ಬಡವರ ಮೇಲಿರುವ ಕಾಳಜಿಯ ದ್ಯೋತಕವಾಗಿವೆ. ಹಸಿದವರಿಗೆ ಸಹಾಯ ಮಾಡುವುದರ ಮೂಲಕವೇ ಪೂಜೆಯ ತೃಪ್ತಿಯನ್ನು ಪಡೆಯಲು ಸಾಧ್ಯ. ಪರೋಪಕಾರಕ್ಕಾಗಿ ಹಂಬಲಿಸದೆ ಕೇವಲ ಪೂಜೆ ಮಾಡುವವರಿಗೆ ದೇವರೇ ಇಲ್ಲ ಎಂದು ಹೇಳುತ್ತ ಅಂಬಿಗರ ಚೌಡಯ್ಯನವರು ಬಡವರ ಪಕ್ಷಪಾತಿಯಾಗುತ್ತಾರೆ. ವಜ್ರದಷ್ಟು ಕಠಿಣ ನಿಲುವಿನ ಅಂಬಿಗರ ಚೌಡಯ್ಯನವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.

ದೀನದಲಿತರ ಬಗ್ಗೆ ಕರಗದ ಮನಸ್ಸುಗಳ ವಿರುದ್ಧ ಚೌಡಯ್ಯನವರು ದನಿ ಎತ್ತಿದ್ದಾರೆ. ದ್ವಿಮುಖ ನೀತಿಯನ್ನು ವಿರೋಧಿಸಿದ್ದಾರೆ. ‘ಲಿಂಗವೆಂಬೆನೆ ಕಲುಕುಟಿಕನ ಮಗ... ತನ್ನೊಳಗ ನೋಡೆಂದನಂಬಿಗ ಚೌಡಯ್ಯ’ ಎಂದು ಅವರು ಇನ್ನೊಂದು ವಚನದಲ್ಲಿ ತಿಳಿಸಿದ್ದಾರೆ. ತಮ್ಮೊಳಗಿನ ದೇವರನ್ನು ಕಾಣುವ ಶರಣರು ಸಕಲ ಜೀವಾತ್ಮರಲ್ಲಿ ದೇವರನ್ನು ಕಾಣುತ್ತಾರೆ. ಯಾವುದೇ ಜೀವಿ ಹಸಿವಿನಿಂದ ಬಳಲಬಾರದು ಎಂದು ಆಶಿಸುತ್ತಾರೆ.

‘ದೇಹಾರ’ ಎಂದರೆ ಇಷ್ಟಲಿಂಗ ಪೂಜೆ. ಇಷ್ಟಲಿಂಗವು ನಮ್ಮೊಳಗಿನ ದೇವರ ಪ್ರತೀಕವಾಗಿದೆ. ಈ ತತ್ತ್ವವನ್ನು ಬಲವಾಗಿ ನಂಬಿದ್ದರಿಂದಲೇ ಚೌಡಯ್ಯನವರು ತಮ್ಮೊಳಗಿನ ದೇವರ ಬಗ್ಗೆ ಅಚಲವಾದ ನಂಬಿಕೆಯುಳ್ಳವರಾಗಿದ್ದಾರೆ. ಹಾಗೆಯೆ ಕಷ್ಟಕ್ಕೊಳಗಾಗುವ ಕಾಯಕಜೀವಿಗಳಲ್ಲಿಯೂ ನಂಬಿಕೆಯುಳ್ಳವರಾಗಿದ್ದಾರೆ.

ಬಸವಧರ್ಮದಲ್ಲಿ ಎರಡು ಪ್ರಕಾರದ ಲಿಂಗಗಳಿವೆ. ಒಂದು ಇಷ್ಟಲಿಂಗ, ಇನ್ನೊಂದು ಜಂಗಮಲಿಂಗ. ಭಕ್ತನಾದವನು ಇಷ್ಟಲಿಂಗ ಪೂಜೆಯಲ್ಲಿ ತನ್ನೊಳಗಿನ ದೇವರ ಜೊತೆ ಒಂದಾಗುತ್ತಾನೆ. ಇಷ್ಟಲಿಂಗ ಪೂಜೆ ಎಂಬುದು ಅರಿವಿನ ಪೂಜೆ. ನಮ್ಮೊಳಗಿನ ಅರಿವೇ ಗುರು. ಆ ಗುರುವೇ ದೇವರು. ಇಷ್ಟಲಿಂಗವೆಂಬುದು ಆ ಅರಿವಿನ ಕುರುಹು ಮಾತ್ರ. ಇಷ್ಟಲಿಂಗ ಪೂಜಕ ಆ ಕುರುಹನ್ನು ಹಿಡಿದು ತಮ್ಮೊಳಗಿನ sಘನದ ಪೂಜೆಯನ್ನು ಮಾಡಬೇಕಾಗುತ್ತದೆ. ಆ ಘನವೇ ಅರಿವಿನ ರೂಪದಲ್ಲಿ ಇರುತ್ತದೆ. ಅರಿವೆಂದರೆ ಕಣ್ಣಿಗೆ ಕಾಣದ ಪರವಸ್ತು (ದೇವರು) ಮತ್ತು ಆ ಪರವಸ್ತುವನ್ನು ಅನುಭಾವಿಸುವ ಮೂಲಕ ಅದೇ ಆಗಿರುವಂಥ ಸ್ಥಿತಿ. ಇಂಥ ಸ್ಥಿತಿಯಲ್ಲಿ ಮಾನವನ ಒಳಗೆ ಇಡೀ ಜಗತ್ತು ಬಂದು ಸೇರುತ್ತದೆ. ನಂತರ ಆತ ಇಡೀ ಜಗತ್ತಿನಲ್ಲಿ ಒಂದಾಗಿ ಹೋಗುತ್ತಾನೆ. ಎಲ್ಲ ಜೀವಾತ್ಮರಲ್ಲಿ ತನ್ನನ್ನೇ ಕಾಣುತ್ತಾನೆ. ಈ ಅಚಲ ನಂಬಿಕೆಯೊಂದಿಗೆ ಸಕಲಜೀವಾತ್ಮರಿಗೆ ಲೇಸನ್ನೇ ಬಯಸುತ್ತಾನೆ. ಆಗ ಸಹಜವಾಗಿಯೇ ಜೀವಕಾರುಣ್ಯವು ಧರ್ಮದ ಮೂಲವಾಗುತ್ತದೆ.

ಶರಣಧರ್ಮೀಯರು ಬರಿ ಇಷ್ಟಲಿಂಗ ಪೂಜೆ ಮಾಡಿದರಷ್ಟೇ ಸಾಲದು. ಅವರು ಜಂಗಮಲಿಂಗ ಪೂಜೆಯನ್ನೂ ಮಾಡಬೇಕಾಗುತ್ತದೆ. ತನ್ನೊಳಗಿನ ದೇವರ ಜೊತೆ ಒಂದಾಗಿ, ಆ ದೇವರೇ ವಿಶ್ವರೂಪದಲ್ಲಿ ಕಾಣುವ ಜಂಗಮಲಿಂಗ ಸ್ವರೂಪಿಯಾಗಿದ್ದಾನೆ ಎಂಬುದನ್ನು ಇಷ್ಟಲಿಂಗ ಪೂಜೆಯ ಮೂಲಕ ಭಕ್ತನಾದವನು ಅರಿತುಕೊಳ್ಳುತ್ತಾನೆ.

ಜಂಗಮಲಿಂಗಕ್ಕೆ ಐದು ಅರ್ಥಗಳಿವೆ. ೧) ಜಂಗಮ ಎಂದರೆ ಅಳಿವಿಲ್ಲದ್ದು. ಚೈತನ್ಯಕ್ಕೆ ಅಳಿವಿಲ್ಲ. ಆದ್ದರಿಂದ ಜಂಗಮ ಎಂದರೆ ಚೈತನ್ಯ. ಕಣ್ಣಿಗೆ ಕಾಣದ ಈ ಚೈತನ್ಯದಿಂದಲೇ

ಕಣ್ಣಿಗೆ ಕಾಣುವ ವಸ್ತುರೂಪಿ ಜಗತ್ತಿನ ಸೃಷ್ಟಿಯಾಗಿದೆ. ವಸ್ತುರೂಪಿ ಜಗತ್ತಿನ ಪ್ರತಿ ಕಣದಲ್ಲೂ ಈ ಚೈತನ್ಯವು ಚಲನಶೀಲವಾಗಿ ಇದೆ. ಸ್ಥಾವರದ ಒಳಗಿನ ಚೈತನ್ಯವೇ ದೇವರು. ಹೀಗೆ ದೇವರು ಚಲನಶೀಲವಾದುದು. ಆದ್ದರಿಂದ ಜಂಗಮಲಿಂಗ ಎಂದರೆ ಚೈತನ್ಯರೂಪಿ ಚಲನಶೀಲ ದೇವರು. ೨) ಜಂಗಮಲಿಂಗ ಎಂದರೆ ಕಣ್ಣಿಗೆ ಕಾಣುವ ವಿಶ್ವ. ಇದರೊಳಗೂ ದೇವರು ಚೈತನ್ಯರೂಪವಾಗಿ ಇರುವುದರಿಂದ ಇಡೀ ವಿಶ್ವವನ್ನೇ ದೇವರು ಎಂದು ಭಾವಿಸುವುದು. ೩) ಜಂಗಮಲಿಂಗ ಎಂದರೆ ಸಕಲಜೀವಾತ್ಮರು. ಸಕಲಜೀವಾತ್ಮರಲ್ಲಿ ದೇವರು ಚೈತನ್ಯಸ್ವರೂಪದಲ್ಲಿ ಇರುವುದರಿಂದ ಸಕಲಜೀವಾತ್ಮರನ್ನು ದೇವರು ಎಂದು ಭಾವಿಸುವುದು. ೪) ಜಂಗಮಲಿಂಗ ಎಂದರೆ ಸಮಾಜ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೊಳಗೆ ದೇವರಿದ್ದಾನೆ ಎಂದು ಭಾವಿಸುವುದು. ಆದ್ದರಿಂದ ಯಾವ ವ್ಯಕ್ತಿಯೂ ಹಸಿವಿನಿಂದ ಬಳಲಬಾರದು ಎಂಬ ಸಾಮಾಜಿಕ ಕಾಳಜಿಯನ್ನು ಹೊಂದುವುದು. ೫) ಈ ಸರ್ವಸಮತ್ವದ ತತ್ತ್ವವನ್ನು ಸಂಪೂರ್ಣ ಸಮರ್ಪಣಾಭಾವದಿಂದ ಸಾರುವವನೇ ಜಂಗಮ. ಆದ್ದರಿಂದ ಆತನೂ ದೇವಸ್ವರೂಪನೇ ಆಗುತ್ತಾನೆ.

ಈ ವಚನದಲ್ಲಿ ಅಂಬಿಗರ ಚೌಡಯ್ಯನವರು ಯಾರಿಗೆ ಆಹಾರ ಕೊಡಬೇಕು ಎಂಬುದನ್ನು ಹೇಳಿಲ್ಲ. ಇಲ್ಲಿ ಆಹಾರವು ಸಾಮಾಜಿಕ ಕಾಳಜಿ ಎಂಬ ಅರ್ಥವನ್ನು ಸ್ಫುರಿಸುತ್ತದೆ. ಆಹಾರವನಿಕ್ಕಿರೆ ಎಂದರೆ ಸಾಮಾಜಿಕ ಕಾಳಜಿಯಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿರಿ ಎಂಬ ಮನವಿ. ಹೀಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ಜಂಗಮಲಿಂಗ ಪೂಜೆ. ಸಮಾಜ ಎಂಬ ದೇವರ ಪೂಜೆ. ಅದುವೇ ಸಮಾಜಸೇವೆ. ದೇಹಾರಕ್ಕೆ ಆಹಾರವೇ ನಿಚ್ಚಣಿಗೆ ಎಂದರೆ ದೇವಪೂಜೆಗೆ ಸಮಾಜಸೇವೆಯೇ ಮೂಲ. ಸಮಾಜಸೇವೆಯೇ ನಮ್ಮನ್ನು ದೇವರ ಎತ್ತರಕ್ಕೆ ಒಯ್ದು ದೇವರ ಬಳಿ ತಲುಪಿಸುವ ಏಣಿ. ಇಂಥ ಸಮಾಜಸೇವಾ ಭಾವಕ್ಕೆ ದಾಸೋಹಂಭಾವ ಎನ್ನುತ್ತಾರೆ. ಸಮಾಜವೆಂಬ ಜಂಗಮಲಿಂಗದ ಪೂಜೆ ಮಾಡಬೇಕಾದರೆ, ಮೊದಲು ಕಾಯಕದಲ್ಲಿ ನಿರತರಾಗಬೇಕು. ಕಾಯಕದಿಂದ ಬಂದುದರಲ್ಲಿ ಒಂದು ಭಾಗವನ್ನು ದಾಸೋಹಕ್ಕಾಗಿ ಅಂದರೆ ಸಮಾಜಸೇವೆಗಾಗಿ ಬಳಸಬೇಕು. ಹೀಗೆ ಸಮಾಜಸೇವೆಯೇ ಜಂಗಮಲಿಂಗ ಪೂಜೆ ಆಗುತ್ತದೆ. ಬರಿ ಇಷ್ಟಲಿಂಗ ಪೂಜೆ ಮಾಡುತ್ತ ಸಮಾಜಸೇವೆ ಎಂಬ ಜಂಗಮಲಿಂಗ ಪೂಜೆ ಮಾಡದಿದ್ದರೆ ಆ ದೇವರು ಒಲಿಯುವುದಿಲ್ಲ ಎಂದ ಅಂಬಿಗರ ಚೌಡಯ್ಯನವರು ತಿಳಿಸುತ್ತಾರೆ.