You are hereForums / ಸಾಮಾಜಿಕ ವಿಚಾರಗಳು / ಅಸ್ತಂಗತವಾದ ಜನಪರ ದನಿ ಬಾಲಗೋಪಾಲ್

ಅಸ್ತಂಗತವಾದ ಜನಪರ ದನಿ ಬಾಲಗೋಪಾಲ್


By DIVAKAR N - Posted on 21 October 2009

ಭಾರತದ ನಾಗರಿಕ ಹಕ್ಕುಗಳ ಹೋರಾಟದ ಪರಂಪರೆಯಲ್ಲಿ ಹಲವಾರು ವ್ಯಕ್ತಿಗಳು ತಮ್ಮ ಜೀವನವನ್ನು ಕಳೆದಿದ್ದಾರೆ. ರಾಜಕೀಯ ಕುಟಿಲತೆಗಳ, ಪ್ರಭುತ್ವದ ದಮನಕಾರಿ ಪ್ರವೃತ್ತಿಯ ಹಾಗೂ ಸಮಾಜದಲ್ಲಿನ ವಿಧ್ವಂಸಕ ಶಕ್ತಿಗಳ ಮನುಕುಲ ವಿರೋಧಿ ಕೃತ್ಯಗಳ ವಿರುದ್ಧ ತಮ್ಮದೇ ಆದ ದನಿ ಎತ್ತುವುದೇ ಅಲ್ಲದೆ ಸಾಮಾನ್ಯ ಜನತೆಗೆ ಮೂಲಭೂತ ಹಕ್ಕುಗಳಿಗಾಗಿ, ನಾಗರಿಕ ಹಕ್ಕುಗಳಿಗಾಗಿ, ಸಾಂವಿಧಾನಿಕ ಹಕ್ಕುಗಳ ಉಳಿವಿಗಾಗಿ ಹೋರಾಡಿರುವ ಈ ಧೀಮಂತ ವ್ಯಕ್ತಿಗಳು ಭಾರತೀಯ ಇತಿಹಾಸದಲ್ಲಿ ಬೆಳಕಿಗೆ ಬಾರದೆ ನಂದಿ ಹೋಗಿರುವುದೇ ಹೆಚ್ಚು. ವಿದೇಶಿ ಆಕ್ರಮಣಕಾರರ ವಿರುದ್ಧ ನಡೆಯುವ ಹೋರಾಟವನ್ನು ಸ್ವಾತಂತ್ರ್ಯ ಹೋರಾಟವೆಂದು ಬಣ್ಣಿಸುವುದರಿಂದ, ಈ ಹೋರಾಟದಲ್ಲಿ ಭಾಗವಹಿಸಿದವರು ಸಾರ್ವತ್ರಿಕವಾಗಿ ಸ್ಮರಣೀಯರಾಗುತ್ತಾರೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಆಳುವ ವರ್ಗಗಳ ಜನ ವಿರೋಧಿ ನೀತಿಗಳ ವಿರುದ್ಧ ಸೆಟೆದು ನಿಂತು, ಜನಸಾಮಾನ್ಯರ ಹಿತಾಸಕ್ತಿಗಳಿಗಾಗಿ ಹೋರಾಡುವವರನ್ನು ಭಿನ್ನ ರೀತಿಯಲ್ಲೇ ಸ್ಮರಿಸಲಾಗುತ್ತದೆ. ಇಂಥವರ ಜೀವನಗಾಥೆಗಳು ಮಾಧ್ಯಮಗಳಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ವಿಜೃಂಭಿತವಾಗದಿರುವುದರಿಂದ, ಇಂತಹ ಅಮೂಲ್ಯ ಜೀವಗಳು ಜನಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದರೂ, ಸಾರ್ವಜನಿಕವಾಗಿ ಬಿಂಬಿತರಾಗುವುದಿಲ್ಲ. ಇಂತಹ ಅಮೂಲ್ಯ ಜೀವವೊಂದು ಇದೀಗ ನಮ್ಮನ್ನು ಅಗಲಿದೆ. ಅಪ್ರತಿಮ ಜನಪರ ಹೊರಾಟಗಾರ ಮತ್ತು ನಾಗರಿಕ ಹಕ್ಕುಗಳ ಪ್ರತಿಪಾದಕ ಡಾ. ಕಂಡದೈ ಬಾಲಗೋಪಾಲ್ ತಮ್ಮ ೫೭ನೆಯ ವಯಸ್ಸಿನಲ್ಲಿ ಅಸ್ತಂಗತರಾಗಿರುವುದು ಭಾರತದ ನಾಗರಿಕ ಹಕ್ಕುಗಳ ಚಳುವಳಿಗೆ ಸಹಿಸಲಾರದ ಪೆಟ್ಟಾಗಿದೆ.

ಹೋರಾಟದ ಹಾದಿ

೧೯೫೨ರಲ್ಲಿ ಅಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಬಾಲಗೋಪಾಲ್ ಗಣಿತಶಾಸ್ತ್ರದಲ್ಲಿ ನುರಿತ ವಿದ್ಯಾರ್ಥಿಯಾಗಿದ್ದರು. ಇದೇ ಶಿಸ್ತಿನಲ್ಲಿ ಡಾಕ್ಟರೇಟ್ ಪದವಿಯನ್ನೂ ಗಳಿಸಿದ್ದರು. ತಮ್ಮ ಉನ್ನತ ಶಿಕ್ಷಣಕ್ಕಾಗಿ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗೆ ತೆರಳಿದ ಬಾಲಗೋಪಾಲ್ ತಾವು ಮಾಡಿದ ಕೆಲಸವನ್ನು ಮತ್ತೊಬ್ಬ ಸಹವರ್ತಿ ತಮ್ಮ ಹೆಸರಿನಲ್ಲಿ ಪ್ರಕಟಿಸಿದ್ದನ್ನು ಕಂಡು ಬೇಸರದಿಂದ ಸಂಸ್ಥೆಯನ್ನು ತ್ಯಜಿಸಿದ್ದರು. ೧೯೮೦ರಲ್ಲಿ ವಾರಂಗಲ್‌ನ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ಉಪನ್ಯಾಸಕರಾಗಿ ಸೇರಿದ ಬಾಲಗೋಪಾಲ್, ಆ ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿದ್ದ ನಕ್ಸಲ್ ಚಳುವಳಿ ಮತ್ತು ನಕ್ಸಲೀಯರ ಎನ್‌ಕೌಂಟರ್ ಪ್ರಕರಣಗಳಿಂದ ಪ್ರಕ್ಷುಬ್ಧವಾಗಿದ್ದರು. ಈ ಅವಧಿಯಲ್ಲಿ ಎನ್‌ಕೌಂಟರ್‌ಗೆ ಬಲಿಯಾದವರಲ್ಲಿ ನಕ್ಸಲೀಯರಿಗಿಂತಲೂ, ನಕ್ಸಲ್ ಚಳುವಳಿಯ ಬಗ್ಗೆ ಒಲವು ಹೊಂದಿದ್ದವರೇ ಹೆಚ್ಚಾಗಿದ್ದರು. ಎನ್‌ಕೌಂಟರ್ ಪ್ರಕರಣಗಳು ದಿನನಿತ್ಯದ ಸುದ್ದಿಗಳಾಗಿದ್ದವು. ನಕ್ಸಲೀಯರಿಗೆ ಆಶ್ರಯ ನೀಡುವವರನ್ನೂ ಪೊಲೀಸರು ಹಿಂಸಿಸುತ್ತಿದ್ದುದು ಸಾಮಾನ್ಯವಾಗಿತ್ತು. ಈ ಪ್ರಕರಣಗಳಲ್ಲಿ ಅನೇಕ ಅಮಾಯಕರು ಕಣ್ಮರೆಯಾಗುತ್ತಿದ್ದುದೂ ಉಂಟು.

ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ನೆಲೆಸಿದ್ದ ಬಾಲಗೋಪಾಲ್ ಸೈದ್ಧಾಂತಿಕವಾಗಿ ಮಾರ್ಕ್ಸ್‌ವಾದದಿಂದ ಪ್ರಭಾವಿತರಾಗಿದ್ದುದು ಅವರ ಭವಿಷ್ಯ ಜೀವನದ ಹಾದಿಯನ್ನು ಸ್ಪಷ್ಟ ದಿಕ್ಕಿನತ್ತ ಕೊಂಡೊಯ್ಯಲು ಪೂರಕವಾಗಿ ಪರಿಣಮಿಸಿತ್ತು. ಹೋರಾಟ, ಸಂಘರ್ಷ ಮತ್ತು ಜನಪರ ಸೇವೆಗಳ ಧ್ಯೇಯಗಳನ್ನು ಸಾಕಾರಗೊಳಿಸಿಕೊಂಡಿದ್ದ ಬಾಲಗೋಪಾಲ್ ತಮ್ಮ ಅಧ್ಯಾಪಕ ವೃತ್ತಿಯನ್ನು ತೊರೆದು ಆಂಧ್ರಪ್ರದೇಶ ನಾಗರಿಕ ಹಕುಗಳ ಸಮಿತಿ (ಎಪಿಸಿಎಲ್‌ಸಿ) ಸ್ಥಾಪಿಸಿದರು. ಅಂದಿನಿಂದಲೇ ಅವರ ಜೀವನದ ಪಯಣ ವಿಭಿನ್ನ ಮಾರ್ಗದಲ್ಲಿ ಚಲಿಸಿತ್ತು. ಬಡ ಮತ್ತು ದಮನಿತ ಜನಸಮುದಾಯಗಳು ಬಾಲಗೋಪಾಲ್ ಅವರಲ್ಲಿ ತಮ್ಮದೇ ಅದ ಪ್ರತಿರೋಧದ ದನಿಯನ್ನು ಕಂಡುಕೊಂಡರು. ನಂತರದ ವರ್ಷಗಳಲ್ಲಿ ಬಾಲಗೋಪಾಲ್ ಅವರು ಕೈಗೆತ್ತಿಕೊಳ್ಳದ ಮಾನವ ಹಕ್ಕು ಉಲ್ಲಂಘನೆಯ ಪ್ರಕರಣಗಳೇ ಇಲ್ಲವೆಂದು ಹೇಳಬಹುದು. ಸರಳಜೀವಿಯಾಗಿದ್ದ ಬಾಲಗೋಪಾಲ್ ಮಾನವ ಹಕ್ಕು ಉಲ್ಲಂಘನೆ ನಡೆದ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ, ನೊಂದ ಜನರನ್ನು ಸಂತೈಸಿ ಅವರಿಗೆ ನ್ಯಾಯ ದೊರಕಿಸಲು ಕಾನೂನು ರೀತ್ಯಾ ಹೋರಾಡುತ್ತಿದ್ದರು. ಬಹುಶಃ ಬಾಲಗೋಪಾಲ್ ಮತ್ತು ಸಹಚರರ ಅವರ ಪರಿಶ್ರಮ ಇಲ್ಲದೆ ಹೋಗಿದ್ದಲ್ಲಿ ನೂರಾರು ಎನ್‌ಕೌಂಟರ್ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರೆಯುತ್ತಿರಲಿಲ್ಲವೆಂದರೆ ಅತಿಶಯೋಕ್ತಿಯಲ್ಲ.

ಬಾಲಗೋಪಾಲ್ ಅವರ ಪ್ರತಿರೋಧದ ದನಿಯನ್ನು, ಜನಪರ ಕಾಳಜಿಯನ್ನು ದಮನಿಸುವ ಕೃತ್ಯಗಳಿಗೇನೂ ಕೊರತೆ ಇರಲಿಲ್ಲ. ಒಮ್ಮೆ ಅವರ ಮೇಲೆ ಮಾರಣಾಂತಿಕ ಹಲ್ಲೆಯೂ ನಡೆದಿತ್ತು. ಪ್ರಜಾಬಂಧು ಎಂಬ ಸಂಘಟನೆ ಒಮ್ಮೆ ಅವರನ್ನು ಅಪಹರಿಸಿ ಮೂರು ದಿನಗಳ ಕಾಲ ಬಂಧನದಲ್ಲಿರಿಸಿತ್ತು. ಅನೇಕ ಬಾರಿ ಬಾಲಗೋಪಾಲ್ ಜೈಲುವಾಸ ಅನುಭವಿಸಿದ್ದರು. ಈ ಸನ್ನಿವೇಶದಲ್ಲಿ ಪ್ರಭುತ್ವ ಹಾಗೂ ಪೊಲೀಸ್ ಇಲಾಖೆಯ ದೃಷ್ಟಿಯಲ್ಲಿ, ಕೆಲವು ವೇಳೆ ಮುಖ್ಯವಾಹಿನಿಯ ಮಾಧ್ಯಮಗಳ ದೃಷ್ಟಿಯಲ್ಲೂ ಸಹ ಬಾಲಗೋಪಾಲ್ ನಕ್ಸಲ್ ಬೆಂಬಲಿಗರೆಂದೇ ಪರಿಗಣಿಸಲ್ಪಟ್ಟಿದ್ದರು. ಆ ಕಾರಣಕ್ಕಾಗಿಯೇ ಸರ್ಕಾರ ಅವರ ಚಲನವಲನಗಳ ಮೇಲೆ ಸದಾ ನಿಗಾ ಇಡುತ್ತಿತ್ತು. ಆದರೆ ೧೯೯೦ರ ದಶಕದ ಮಧ್ಯದಲ್ಲಿ ಬಾಲಗೋಪಾಲ್ ಅವರ ಹೊಸ ಚಿಂತನೆಗಳ ಪರಿಣಾಮವಾಗಿ ಆಂಧ್ರಪ್ರದೇಶದ ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ತೀವ್ರ ಬದಲಾವಣೆಗಳು ಕಾಣತೊಡಗಿದವು. ಈ ಅವಧಿಯಲ್ಲಿ ನಕ್ಸಲೀಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಮಾನ್ಯ ಜನರನ್ನು ಅಪಹರಿಸುವುದು, ಪೊಲೀಸ್ ಸಂವಾಹಕರೆಂದು ಶಂಕಿಸಿ ಅಮಾಯಕರನ್ನು ಕೊಲ್ಲುವುದೂ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ಎಪಿಸಿಎಲ್‌ಸಿ ಸಂಘಟನೆ ನಾಗರಿಕ ಸಮಾಜದ ವಿರುದ್ಧ ಪ್ರಭುತ್ವದ ಹಿಂಸಾತ್ಮಕ ಧೋರಣೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿದ್ದುದನ್ನು ವಿರೋಧಿಸಿದ ಬಾಲಗೋಪಾಲ್, ತಮ್ಮದೇ ಆದ ಮಾನವ ಹಕ್ಕುಗಳ ವೇದಿಕೆಯನ್ನು ಸ್ಥಾಪಿಸಿದರು.

ತದನಂತರದಲ್ಲಿ ಬೀಡಿ ಕಾರ್ಮಿಕರು, ದಲಿತ ಮತ್ತು ಬುಡಕಟ್ಟು ಸಮುದಾಯಗಳು ಬಾಲಗೋಪಾಲ್ ಅವರ ಹೋರಾಟಕ್ಕೆ ಕೇಂದ್ರ ಬಿಂದುವಾದರು. ಬುಡಕಟ್ಟು ಸಮುದಾಯದ ಶೋಷಣೆ, ವರದಕ್ಷಿಣೆಯ ಸಾವುಗಳು, ಮಹಿಳೆಯರ ಮೇಲಿನ ದೌರ್ಜನ್ಯ, ವಿಶೇಷ ಆರ್ಥಿಕ ವಲಯಗಳ ಹೆಸರಿನಲ್ಲಿ ನಡೆಯುತ್ತಿದ್ದ ಭೂಕಬಳಿಕೆ ಮತ್ತು ಕೃಷಿ ಭೂಮಿಯ ಆಕ್ರಮಣ ಇವೇ ಮುಂತಾದ ಹೋರಾಟಗಳಲ್ಲಿ ಬಾಲಗೋಪಾಲ್ ತಮ್ಮನ್ನು ತೊಡಗಿಸಿಕೊಂಡರು. ಇದೇ ಸಮಯದಲ್ಲಿ (೧೯೯೦) ಪ್ರಥಮಬಾರಿ ಕಾಶ್ಮೀರಕ್ಕೂ ಭೇಟಿ ನೀಡಿದ ಬಾಲಗೋಪಾಲ್ ಕಾಶ್ಮೀರದ ಜನತೆಗೆ ತಮ್ಮ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ನೀಡಬೇಕೆಂದು ಪ್ರತಿಪಾದಿಸಿದಾಗ ಇಡೀ ಕಾಶ್ಮೀರವಷ್ಟೇ ಅಲ್ಲದೆ, ಭಾರತ ಸರ್ಕಾರವೂ ಅಚ್ಚರಿಗೊಳಗಾಗಿತ್ತು. ಅಂದಿನಿಂದ ೨೦೦೪ರವರೆಗೂ ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದ ಬಾಲಗೋಪಾಲ್ ಅಲ್ಲಿನ ಮಾನವ ಹಕ್ಕು ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದರು.

ನಂತರ ಛತ್ರಿಸ್‌ಘಡಕ್ಕೂ ಭೇಟಿ ನೀಡಿದ ಬಾಲಗೋಪಾಲ್ ಓರ್ವ ವಕೀಲರಾಗಿ ಅನೇಕ ಮೊಕದ್ದಮೆಗಳನ್ನು ಉಚಿತವಾಗಿ ನಡೆಸಿದ್ದೇ ಅಲ್ಲದ, ಬಾಧಿತ ಬುಡಕಟ್ಟು ಜನಸಮುದಾಯಗಳಿಗೆ ನ್ಯಾಯ ಒದಗಿಸುವುದರಲ್ಲಿ ನಿರತಾಗಿದ್ದರು. ಛತ್ತಿಸ್‌ಘಡದಲ್ಲಿ ಮಾವೊವಾದಿ-ಸರ್ಕಾರದ ಸಂಘರ್ಷದಲ್ಲಿ ಸಿಲುಕಿ ನಲುಗಿ ಹೋಗುತ್ತಿದ್ದ ಸಾಮಾನ್ಯ ಜನತೆಗೆ ಬಾಲಗೋಪಾಲ್ ಆಶಾದಾಯಕ ಸನ್ನಿವೇಶ ಮೂಡಿಸುವುದರಲ್ಲಿ ತೊಡಗಿದ್ದರು. ಪ್ರಾರಂಭಿಕ ಹಂತದಲ್ಲೇ ತಮ್ಮ ಸಾಮಾಜಿಕ ಜೀವನಕ್ಕೆ ಗಣಿತ ಶಾಸ್ತ್ರದ ನಿರರ್ಥಕತೆಯನ್ನು ಅರಿತ ಬಾಲಗೋಪಾಲ್ ಕಾನೂನು ಪದವಿ ಪಡೆದು ಜನಪರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತಾವು ಅನುಸರಿಸಿದ ಮಾರ್ಗಕ್ಕೆ ಮತ್ತು ಸಿದ್ಧಾಂತಕ್ಕೆ ಬದ್ಧರಾಗಿದ್ದ ಬಾಲಗೋಪಾಲ್ ತಮ್ಮ ಸಮಾಜ ಸೇವೆಯನು ವಿಚಾರ ಸಂಕಿರಣಗಳಿಗೆ, ಆವೇಶಭರಿತ ಭಾಷಣಗಳಿಗೆ ಸೀಮಿತಗೊಳಿಸದೆ, ನೇರವಾಗಿ ಪ್ರಭುತ್ವದೊಡನೆ ಸಂಘರ್ಷಕ್ಕಿಳಿದು ಪ್ರಭುತ್ವದಿಂದ ದಮನಕ್ಕೊಳಗಾದ ಜನಸಮುದಾಯಗಳ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿದ್ದರು. ತಮ್ಮ ಅಂತಿಮ ದಿನಗಳಲ್ಲಿ ಮಾವೋವಾದಿಗಳ ಹಿಂಸಾತ್ಮಕ ಮಾರ್ಗವನ್ನು ಖಂಡಿಸಿದ್ದಕ್ಕಾಗಿ ಬಾಲಗೋಪಾಲ್ ನಕ್ಸಲೀಯರ ಟೀಕಾಸ್ತ್ರಗಳನ್ನೂ ಎದುರಿಸಬೇಕಾಯಿತು. ಆದರೆ ಮಾನವ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಬಾಲಗೋಪಾಲ್ ಯಾವುದೇ ರೀತಿಯ ಹಿಂಸಾತ್ಮಕ ಕೃತ್ಯಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಈ ಕಾರಣಕ್ಕಾಗಿ ಅವರು ಹಲವರ ವಿರೋಧವನ್ನೂ ಎದುರಿಸಬೇಕಾಯಿತು.

ಚಿರಂತನ ಪ್ರತಿರೋಧದ ದನಿ

ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬಾಲಗೋಪಾಲ್ ಅವರನ್ನು ಶ್ಲಾಘಿಸುವ ಸಂದರ್ಭದಲ್ಲಿ ಅವರು ಮಾವೋವಾದಿಗಳ ಅಥವಾ ನಕ್ಸಲೀಯರ ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸಿದ್ದನ್ನೇ ಪ್ರಮುಖವಾಗಿ ಉಲ್ಲೇಖಿಸುತ್ತಾರೆ. ಆದರೆ ಬಾಲಗೋಪಾಲರಂತಹ ಮಾನವತಾವಾದಿಯನ್ನು ಅಷ್ಟು ಸುಲಭವಾಗಿ ವಿಶ್ಲೇಷಿಸಲಾಗುವುದಿಲ್ಲ. ಬಾಲಗೋಪಾಲ್ ಕೇವಲ ಮಾನವ ಹಕ್ಕುಗಳ ಹೋರಾಟಗಾರರಾಗಿರಲಿಲ್ಲ. ಜನಸಮುದಾಯಗಳ ಮೂಲಭೂತ ಹಕ್ಕುಗಳಿಗಾಗಿ ತಮ್ಮ ಅಧ್ಯಾಪಕ ವೃತ್ತಿ ಮತ್ತು ಐಷಾರಾಮಿ ಜೀವನವನ್ನು ತ್ಯಜಿಸಿ, ತಮ್ಮ ಜಾತಿ ನಿರ್ಬಂಧಗಳನ್ನು ತೊಡೆದು, ದಮನಿತ ಜನಸಮುದಾಯಗಳ ದನಿಯಾಗಿ ಹೊಮ್ಮಿದ ಬಾಲಗೋಪಾಲ್ ಓರ್ವ ನಿಷ್ಠಾವಂತ ಹೋರಾಟಗಾರಷ್ಟೇ ಅಲ್ಲದೆ ಉತ್ತಮ ವಾಗ್ಮಿ ಮತ್ತು ಲೇಖಕರೂ ಆಗಿದ್ದರು. ಇಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯಲ್ಲಿ ಅವರ ಅನೇಕ ಕ್ರಾಂತಿಕಾರಿ ಲೇಖನಗಳು ಪ್ರಕಟಗೊಂಡಿದ್ದವು.

ಪ್ರಜಾತಂತ್ರ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಧ್ಯೇಯಗಳನ್ನು ತಮ್ಮ ಸಾಮಾಜಿಕ ಹೋರಾಟಗಳ ಮೂಲಕ ವಿಶ್ಲೇಷಿಸಲು ಯತ್ನಿಸಿದ ಬಾಲಗೋಪಾಲ್‌ಗೆ ಮಾರ್ಕ್ಸ್‌ವಾದವೇ ಮುಖ್ಯ ಪ್ರೇರಣೆಯಾಗಿತ್ತು. ಶ್ರಮಿಕ ಜನತೆಯ ಕ್ರಾಂತಿಕಾರಿ ಹೋರಾಟದಲ್ಲಿ ಕೊನೆಯವರೆಗೂ ನಂಬಿಕೆ ಇರಿಸಿದ್ದ ಬಾಲಗೋಪಾಲ್‌ಗೆ ನಕ್ಸಲೀಯ ಚಳುವಳಿಯ ಮೂಲ ಸ್ವರೂಪ ಹಾಗು ಧ್ಯೇಯೋದ್ದೇಶಗಳಲ್ಲಿ ಪೂರ್ಣ ನಂಬಿಕೆಯಿತ್ತು. ಪ್ರಜಾತಂತ್ರವೆಂದರೆ ಕೇವಲ ಉಳ್ಳವರಿಗಾಗಿರುವ ವ್ಯವಸ್ಥೆಯಲ್ಲ ಬದಲಾಗಿ ದೇಶದ ಉನ್ನತಿಗೆ ಕಾರಣೀಭೂತರಾದ ಉತ್ಪಾದಕೀಯ ಶಕ್ತಿಗಳು, ಶ್ರಮಿಕ ವರ್ಗಗಳು, ದುಡಿಯುವ ವರ್ಗಗಳು ಮತ್ತು ದೇಶದ ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಜನಸಮುದಾಯಗಳಿಗೆ ಸಾಮಾಜಿಕ ಘನತೆ, ಆರ್ಥಿಕ ಸ್ಥಿರತೆ ಹಾಗೂ ಮಾನವೀಯ ನೆಲೆಯನ್ನು ಒದಗಿಸುವುದೇ ನಿಜವಾದ ಪ್ರಜಾತಂತ್ರ ಎಂದು ನಂಬಿದ್ದ ಬಾಲಗೋಪಾಲ್ ತಮ್ಮ ಜೀವನ ಪರ್ಯಂತ ಈ ಧ್ಯೇಯಗಳಿಗಾಗಿಯೇ ಹೋರಾಟದಲ್ಲಿ ನಿರತಾಗಿದ್ದರು.

ದೇಶದ ಜನತೆಯ ವಿರುದ್ಧ ಪ್ರಭುತ್ವ ದಮನಕಾರಿ ನೀತಿಯನ್ನು ಅನುಸರಿಸುವುದು ಮತ್ತು ಬಲಪ್ರಯೋಗ ಮಾಡುವುದನ್ನು ಪ್ರಜಾತಂತ್ರ ವಿರೋಧಿ ಎಂದು ಪರಿಗಣಿಸುತ್ತಿದ್ದ ಬಾಲಗೋಪಾಲ್ ಅವರಿಗೆ ಇತರ ಸಂದರ್ಭಗಳಲ್ಲೂ ಮಾನವ ಹಕ್ಕುಗಳ ಉಲ್ಲಂಘನೆ ಅಪಥ್ಯವಾಗಿದ್ದವು. ಈ ಉಲ್ಲಂಘನೆಗಳಿಗೆ, ಶೋಷಣೆಗಳಿಗೆ ಮತ್ತು ಸಂಘರ್ಷಗಳಿಗೆ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತಿ ಬೇಧ, ಲಿಂಗ ತಾರತಮ್ಯ ಮತ್ತು ಮತೀಯ ಭಾವನೆಗಳೇ ಕಾರಣವೆಂದು ದೃಢವಾಗಿ ನಂಬಿದ್ದ ಬಾಲಗೋಪಾಲ್ ಈ ಸಾಮಾಜಿಕ ಅನಿಷ್ಠಗಳ ವಿರುದ್ಧ ನಿರಂತರವಾದ ಹೋರಾಟ ನಡೆಸಿದ್ದರು. ಶ್ರಮಿಕ ವರ್ಗಗಳಿಗಾಗಿ ಕ್ರಾಂತಿಕಾರಿ ಹೋರಾಟ ನಡೆಸುವ ಮಾವೋವಾದಿಗಳು ತಮ್ಮ ಹಿಂಸಾತ್ಮಕ ಕೃತ್ಯಗಳಿಂದ ಅದೇ ವರ್ಗದ ಜನರನ್ನೇ ಬಲಿಪಶುಗಳನ್ನಾಗಿ ಮಾಡುವುದನ್ನೂ ಬಾಲಗೋಪಾಲ್ ವಿರೋಧಿಸುತ್ತಿದ್ದರು. ಅದೇ ವೇಳೆ ಜನಸಮುದಾಯಗಳ ಕ್ರಾಂತಿಕಾರಿ ಹೋರಾಟಗಳ ಮೂಲಕ ಸ್ವಾತಂತ್ರ್ಯ ಗಳಿಸಿದ ಭಾರತದಲ್ಲಿ ಶ್ರಮಿಕ ವರ್ಗಗಳನ್ನು ನಿರ್ಲಕ್ಷಿಸುವ ಬಂಡವಾಳಶಾಹಿ ವ್ಯವಸ್ಥೆಯನ್ನೂ ತೀವ್ರವಾಗಿ ವಿರೋಧಿಸುತ್ತಿದ್ದರು.

ಭಾರತೀಯ ಪ್ರಭುತ್ವದ ಬಂಡವಾಳಿಗರ ಪರ ನೀತಿ ಹಾಗೂ ಜನವಿರೋಧಿ ನಿಲುವುಗಳನ್ನು ಉಗ್ರವಾಗಿ ಖಂಡಿಸುತ್ತಿದ್ದ ಬಾಲಗೋಪಾಲ್ ಕ್ರಾಂತಿಕಾರಿ ಹೋರಾಟದಲ್ಲಿ ಅಪಾರ ನಂಬಿಕೆ ಇರಿಸಿದ್ದರು. ಯಾವುದೇ ರಾಜಕೀಯ ಪಕ್ಷಕ್ಕೆ ತಮ್ಮ ನಿಷ್ಠೆಯನ್ನು ತೋರದೆಯೇ ಮೂರು ದಶಕಗಳ ಕಾಲ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಗೋಪಾಲ್ ಅವರ ಕ್ರಾಂತಿಯ ಪರಿಕಲ್ಪನೆ ಮಾರ್ಕ್ಸ್-ಲೆನಿನ್-ಮಾವೋ ಅವರ ಚಿಂತನೆಗಳಿಂದ ಪ್ರೇರಿತವಾಗಿದ್ದು, ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲೇ ಇದನ್ನು ಸಾಧಿಸಲು ಸಾಧ್ಯ ಎಂಬ ವಿಶ್ವಾಸವನ್ನು ಹೊಂದಿದ್ದರು. ತಮ್ಮ ಪ್ರಭುತ್ವ ವಿರೋಧಿ ನಿಲುವುಗಳಿಗಾಗಿ, ಕ್ರಾಂತಿಕಾರಿ ಚಿಂತನೆಗಳಿಗಾಗಿ ಸದಾ ಆಳ್ವಿಕರ ಅವಕೃಪೆಗೆ ಗುರಿಯಾಗಿದ್ದ ಬಾಲಗೋಪಾಲ್ ಕೇವಲ ಆಂಧ್ರಪ್ರದೇಶದಲ್ಲಷ್ಟೇ ಅಲ್ಲದೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ತಮ್ಮ ಛಾಪನ್ನು ಮೂಡಿಸಿದ್ದರು.

ಜನಸಮುದಾಯಗಳ ಕ್ರಾಂತಿಕಾರಿ ಹೋರಾಟಗಳನ್ನು ಬೆಂಬಲಿಸುತ್ತಲೇ ಅತಾರ್ಕಿಕ ಹಿಂಸಾತ್ಮಕ ಹೋರಾಟಗಳನ್ನು ವಿರೋಧಿಸುತ್ತಿದ್ದ ಬಾಲಗೋಪಾಲ್ ಮಾನವೀಯ ಸಂವೇದನೆಗಳಿಗೆ ಶೀಘ್ರವಾಗಿ ಸ್ಪಂದಿಸುತ್ತಿದ್ದರು. ಭಾರತದ ಮಾನವ ಹಕ್ಕುಗಳ ಚಳುವಳಿಗೆ ಮಾತ್ರವಲ್ಲದೆ ಅನೇಕ ಕ್ರಾಂತಿಕಾರಿ ಹೋರಾಟಗಳಿಗೆ, ಜನಪರ ಹೋರಾಟಗಳಿಗೆ ಸ್ಫೂರ್ತಿ ನೀಡುತ್ತಿದ್ದ ಬಾಲಗೋಪಾಲ್ ಇಂದು ನಮ್ಮೊಡನಿಲ್ಲದಿರುವುದು, ದಮನಿತ ಜನರ ದನಿಯೊಂದು ಅಸ್ತಂಗತವಾದಂತಾಗಿದೆ. ಬಾಲಗೋಪಾಲ್ ಮರೆಯಾಗಿದ್ದಾರೆ ಆದರೆ ಅವರು ಪ್ರತಿಪಾದಿಸಿದ ಚಿಂತನೆಗಳು, ಅನುಸರಿಸಿದ ಮಾರ್ಗಗಳು, ಬೋಧಿಸಿದ ಧ್ಯೇಯೋದ್ದೇಶಗಳು ಹಾಗೂ ಕೈಗೊಂಡ ಅನೇಕ ಜನಪರ ಕಾರ್ಯಕ್ರಮಗಳು ದೇಶದ ಜನಪರ ಹೋರಾಟದ ಪರಂಪರೆಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಮಾನವ ಹಕ್ಕುಗಳ ರಕ್ಷಣೆಗಾಗಿ ಪಣತೊಟ್ಟು ಹೋರಾಡುವುದೇ ಬಾಲಗೋಪಾಲ್ ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.

ನಾ ದಿವಾಕರ.