You are hereಮೀಸಲಾತಿಯ ಮೂಲತತ್ತ್ವ

ಮೀಸಲಾತಿಯ ಮೂಲತತ್ತ್ವ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಗುಜರಾತಿನಲ್ಲಿ ಮೀಸಲಾತಿ ವಿರುದ್ಧದ ಹೋರಾಟ ಉಗ್ರರೂಪ ತಾಳಿ ಬೀದಿಗಿಳಿದಿದ್ದರೆ ಉಳಿದ ಕಡೆ ಅದು ಪಿಸುಮಾತಿನ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಮೀಸಲಾತಿ ಪದ್ಧತಿಯ ಟೀಕಾಕಾರರು ಸಾಮಾನ್ಯವಾಗಿ ಮುಂದಿಡುವ ವಾದಗಳು ಎರಡು: ಒಂದು, ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ಸಿಗದೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂಬುದು. ಮತ್ತು ಎರಡು: ಅದಕ್ಷತೆ ಹೆಚ್ಚಿ ದೇಶದ ಪ್ರಗತಿ ಕುಂಠಿತವಾಗುತ್ತದೆ ಎಂಬುದು. ಹೀಗೆ ವಾದಿಸುವಾಗ ಅವರ ಕಲ್ಪನೆಯಲ್ಲಿ ಪ್ರತಿಭೆ ಎಂಬುದು ಪರೀಕ್ಷೆಯಲ್ಲಿ ಗಳಿಸುವ ಅಂಕಗಳ ಮಟ್ಟವನ್ನು ಮೀರಿ ಮುಂದೆ ಹೋಗುವುದಿಲ್ಲ.

ಅವರಿಗೆ ಪಟ್ಟಣಗಳಲ್ಲಿ ಹುಟ್ಟಿ ಬೆಳೆದು ಮನೆ ಶಾಲೆ ಕಾಲೇಜುಗಳ ನಡುವೆ ಲಾಳಿ ಹಾಕುತ್ತಾ ಪಠ್ಯ ಮತ್ತು ನೋಟ್ಸುಗಳ ಹುಳುವಾಗಿ ಶೇ. ೯೦-೯೫ ಅಂಕ ಗಳಿಸುವ ವಿದ್ಯಾರ್ಥಿ ಹಳ್ಳಿಗಾಡಿನಲ್ಲಿ ಹುಟ್ಟಿ ತಂದೆತಾಯಿಯರೊಡನೆ ಹೊಲಗದ್ದೆಗಳಲ್ಲಿ ಕೆಲಸ ಮಾಡುತ್ತಾ ಶಿಕ್ಷಕರೆಂಬುವರು ಇದ್ದಾರೋ ಇಲ್ಲವೋ ಎಂಬಂತಹ ಕೊಳಕು ಶಾಲೆಗಳಲ್ಲಿ ಕಲಿತು ಶೇ. ೬೦-೬೫ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಿಂತ ಪ್ರತಿಭಾ ವಂತನಾಗಿ ಕಾಣಿಸುತ್ತಾನೆ.

ಮುಂದೆ ಒಂದು ದಿನ ಈ ಪ್ರತಿಭಾವಂತ ಉನ್ನತ ಅಧಿಕಾರಿಯಾಗಿ ಯಾರ ಸೇವೆ ಮಾಡಲು ಸನ್ನದ್ಧನಾಗುತ್ತಾನೋ ಅವರ ಪರಿಸರದ ಪರಿಚಯ ವಾಗಲಿ, ಅವರ ಕಷ್ಟಸುಖಗಳ ಪರಿವೆಯಾಗಲಿ ಆತನಿಗಿರುವುದಿರಲಿ, ಅವರೂ ತನ್ನ ಹಾಗೆ ಮಾನವರು, ಅವರನ್ನು ತನ್ನ ಸ್ಥಿತಿಗೆ ತರಲು ಶ್ರಮಿಸಬೇಕಾದುದು ತನ್ನ ಕರ್ತವ್ಯ ಎಂಬ ಕಳಕಳಿಯಾಗಲಿ, ಅವರೊಡನೆ ಏಕಾತ್ಮತೆಯಾಗಲಿ ಆತನಿಗಿರುವುದಿಲ್ಲ. ಆತನ ದೃಷ್ಟಿಯಲ್ಲಿ ಜನ ಅಂದರೆ ತಾನು ಸವಾರಿ ಮಾಡಲು ತಕ್ಕವರು, ಜಾಣ್ಮೆ ಎಂದರೆ ನಯ ನಾಜೋಕಿನಿಂದ ತುಪ್ಪಟ ಸುಲಿಯುವ ಕಲೆ.

ಇನ್ನು ಈ ಪ್ರತಿಭಾವಂತರ ದಕ್ಷತೆಯನ್ನು ಕುರಿತು ಸ್ವಲ್ಪ ವಿಚಾರ ಮಾಡೋಣ, ಪ್ರತಿಭೆಯಿಲ್ಲದವರಿಗೆ ಉನ್ನತ ಸ್ಥಾನಗಳನ್ನು ನೀಡಿದರೆ ಅದಕ್ಷತೆ ಹೆಚ್ಚಿ ದೇಶ ಅಧೋಗತಿಯತ್ತ ಸಾಗುತ್ತದೆಂಬ ಕೂಗು ಈ ವಲಯದಲ್ಲಿ ಮುಂಜಾನೆ ಯಿಂದ ಸಂಜೆಯವರೆಗೆ ಪ್ರತಿಧ್ವನಿಸುತ್ತಲೇ ಇರುತ್ತದೆ. ಯಾವುದೇ ಕಛೇರಿಯಲ್ಲಿ ಏನೋ ಒಂದು ಪ್ರಮಾದವಾದರೆ ಅದಕ್ಕೆ ಕಾರಣ ಮೀಸಲಾತಿಯಿಂದ ನೇಮಕ ಹೊಂದಿದ ಬಡಪಾಯಿ ಎಂದು ಅವನ ಬೆನ್ನಹಿಂದೆ ಪಿಸುಮಾತಿನ ಸುತ್ತೋಲೆ ಸಂಚರಿಸುತ್ತಿರುತ್ತದೆ. ಕಛೇರಿಯಲ್ಲಿ ಅನೇಕರು ಕಷ್ಟಪಟ್ಟು ಒಂದು ಒಳ್ಳೆಯ ಕೆಲಸ ಸಾಧಿಸಿದ್ದರೆ ಅದೆಲ್ಲಾ ಪ್ರತಿಭೆಯಿಂದ ನೇಮಕಗೊಂಡವನ ಲೆಕ್ಕಕ್ಕೆ ಜಮಾ ಆಗುತ್ತದೆ.

ದಕ್ಷತೆಯ ಮಾನದಂಡವನ್ನು ಮುಂದಿಟ್ಟುಕೊಂಡು ವಾದಮಾಡುವ ಪ್ರತಿಭಾವಂತ ಮಿತ್ರರಿಗೆ ನನ್ನದೊಂದು ಪ್ರಶ್ನೆ. ನಮ್ಮ ದೇಶ ಕಳೆದ ನಾಲ್ಕೈದು ಸಾವಿರ ವರ್ಷಗಳ ಇತಿಹಾಸದಲ್ಲಿ ಎಲ್ಲ ಉನ್ನತ ಸ್ಥಾನಗಳೂ ಪ್ರತಿಭಾವಂತರಿಗೇ ಮೀಸಲಾಗಿದ್ದುವಲ್ಲಾ, ಆದರೂ ಈ ದೇಶ ಏಕೆ ಮೌಢ್ಯ, ಅಜ್ಞಾನ ಮತ್ತು ಬಡತನಗಳಿಗೆ ತವರಾಯಿತು? ಏಕೆ ಈ ದೇಶದ ಶೇ. ೮೦ರಷ್ಟು ಜನ ಪಶುಗಳಿಗಿಂತ ಹೀನರೀತಿಯಲ್ಲಿ ಬದುಕಬೇಕಾಯಿತು? ಏಕೆ ಈ ದೇಶದ ಜನರಲ್ಲಿ ದೇಶಾಭಿಮಾನ, ಒಗ್ಗಟ್ಟುಗಳಿಲ್ಲದೆ ಮೇಲಿಂದ ಮೇಲೆ ಪರಕೀಯರ ದಾಳಿಗೆ ತುತ್ತಾಗಬೇಕಾಯಿತು?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಅಷ್ಟೇನೂ ಕಷ್ಟವಲ್ಲ. ಮೊಟ್ಟ ಮೊದಲನೆಯದಾಗಿ ನಮ್ಮ ದೇಶದಲ್ಲಿ ಶ್ರಮ ವಿಭಜನೆಯ ತತ್ವವನ್ನು ತಪ್ಪು ತಳಹದಿಯ ಮೇಲೆ ನಿಲ್ಲಿಸಲಾಯಿತು. ಜ್ಞಾನವೆಂಬುದು ಕೇವಲ ಬುದ್ಧಿಯ ಕೆಲಸ ಎಂದು ಭಾವಿಸಿ ದುಡಿಯುವ ಕೈಗಳಿಂದ ಅದನ್ನು ಬೇರ್ಪಡಿಸಲಾಯಿತು. ವಾಸ್ತವವಾಗಿ ಬುದ್ಧಿಪೂರ್ವಕವಾದ ದುಡಿಮೆಯಿಂದ, ಅಂದರೆ ಪ್ರಯೋಗಗಳಿಂದ ಜ್ಞಾನ ಬೆಳೆಯುತ್ತದೆ. ಒಬ್ಬ ರೈತ ಒಂದು ಬೆಳೆಯನ್ನು ಯಶಸ್ವಿಯಾಗಿ ಬೆಳೆಯ ಬೇಕಾದರೆ ಯಾವ ಬೀಜವನ್ನು ಆರಿಸಿಕೊಳ್ಳಬೇಕು. ಯಾವ ಭೂಮಿಯಲ್ಲಿ ಯಾವ ಋತುಮಾನ ದಲ್ಲಿ ಬಿತ್ತಿ ಎಷ್ಟು ನೀರು ಎಂತಹ ಗೊಬ್ಬರವನ್ನು ಯಾವ ಯಾವ ಕಾಲದಲ್ಲಿ ನೀಡಬೇಕು ಎಂದು ಸತತವಾಗಿ ಪ್ರಯೋಗ ಮಾಡುತ್ತಾ, ತನ್ನ ಬುದ್ಧಿಯನ್ನು ತನ್ನ ದುಡಿಮೆಯ ಸಾಣೆಗೆ ಹಿಡಿಯುತ್ತಾ, ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಹೀಗೆಯೇ ಪ್ರತಿಯೊಂದು ಶಾಖೆಯ ಜ್ಞಾನವೂ ದೈಹಿಕ ಪರಿಶ್ರಮದಿಂದ ಬೆಳೆಯುತ್ತದೆ.

ಪ್ರಪಂಚದ ಉಳಿದೆಡೆಗಳಲ್ಲಿ ಅದು ಬೆಳೆದುದು ಹಾಗೆ. ಆದರೆ ನಮ್ಮ ಪವಿತ್ರ ಭಾರತದಲ್ಲಿ ದೈಹಿಕಶ್ರಮ ಪಾಪಿಗಳಿಗೆ ಮಾತ್ರ ಮೀಸಲಾದ ಕೆಲಸ ಎಂದು ಬೋಧಿಸಲಾಯಿತು, ನಶ್ವರವಾದ ಜಗತ್ತನ್ನು ಕುರಿತು ಮೆದುಳು ಚಿಂತಿಸಬೇಕಾಗಿಲ್ಲ, ಶಾಶ್ವತವಾದ ಆತ್ಮ ಮತ್ತು ಮಾನವನ ಪರಮೋನ್ನತೆ ಗುರಿಯಾದ ಮೋಕ್ಷವನ್ನು ಕುರಿತು ಚಿಂತಿಸುವುದೇ ಬುದ್ಧಿವಂತರ ಕೆಲಸ ಎಂದು ಭಾವಿಸಲಾಯಿತು. ಬುದ್ಧಿಯನ್ನು ದುಡಿಮೆಯಿಂದ ಯಾವಾಗ ಬೇರ್ಪಡಿಸಲಾಯಿತೋ ಆಗಲೇ ಇತ್ತ ಬುದ್ಧಿಯೂ ಅತ್ತ ದುಡಿಮೆಯೂ ತಮ್ಮ ಸತ್ವವನ್ನು ಕಳೆದುಕೊಂಡು ದುರ್ಬಲವಾದುವು.

ಬೇರೆ ಬೇರೆ ವೃತ್ತಿಗಳನ್ನು ಅವಲಂಬಿಸಿರುವ ಜನರು ಎಲ್ಲ ಸಮಾಜಗಳಲ್ಲೂ ಇರುತ್ತಾರೆ. ಕುಂಬಾರ, ಬಡಗಿ, ರೈತ, ಶಿಕ್ಷಕ, ವೈದ್ಯ, ಅಗಸ, ಕ್ಷೌರಿಕ ಇತ್ಯಾದಿ ಕಸಬುದಾರರಿಂದ ಸಮಾಜ ಯಾವ ದೇಶದಲ್ಲಿದೆ? ಆದರೆ ಕಸುಬುಗಳು ಜಾತಿಗಳಾಗಿ ಮಾರ್ಪಟ್ಟಿರುವುದೇ ನಮ್ಮ ಸಮಾಜದ ಒಂದು ವಿಶೇಷ. ಇಂತಹ ಕಸುಬು ಇಂತಹ ಜಾತಿಯವರಿಗೆ ಮೀಸಲು ಎಂದು ಯಾವಾಗ ರೂಢಿಗೆ ಬಂತೋ ಆಗಿನಿಂದಲೇ ನಮ್ಮ ದೇಶದಲ್ಲಿ ಮೀಸಲಾತಿ ಪದ್ಧತಿ ಜಾರಿಗೆ ಬಂತು. ಆದ್ದರಿಂದ ಇಂತಹ ಕಸುಬು ಇಂತಹ ಜಾತಿಗೆ ಮೀಸಲು ಎಂದು ಶಾಸನ ಮಾಡಿದ ಮನುವನ್ನು ಮೀಸಲಾತಿಯ ಜನಕನೆಂದು ಕರೆಯಬಹುದು.

ಅಂದು ಮನುವೇ ಮೊದಲಾದ ಸ್ಮೃತಿಕಾರರು ಕಸುಬುಗಳನ್ನೂ ಜಾತಿ ಗಳನ್ನಾಗಿ ರೂಪಾಂತರಿಸಿ ಒಂದು ಜಾತಿ ಇನ್ನೊಂದಕ್ಕಿಂತ ಕಡಿಮೆ ಎಂದು ಒಂದು ಶ್ರೇಣೀಕೃತ ಸಮಾಜವನ್ನು ನಿರ್ಮಿಸದಿದ್ದರೆ ಇಂದು ಅಂಬೇಡ್ಕರ್ ಅಥವಾ ಇನ್ನೊಬ್ಬರು ಆ ಅಸಮಾನತೆಯನ್ನು ತೊಡೆದುಹಾಕಲು ’ಪರಿಹಾರ ರೂಪದ ತಾರತಮ್ಯ’ (compensatory discrimination) ತತ್ತ್ವಕ್ಕೆ ಶರಣಾಗ ಬೇಕಾಗಿರಲಿಲ್ಲ. ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ವಿಶೇಷ ಸೌಲಭ್ಯವನ್ನೂ ಒದಗಿಸುವ ಅಗತ್ಯವಿರಲಿಲ್ಲ.

ಸಾವಿರಾರು ವರ್ಷಗಳ ಬೋಧನೆ ಮತ್ತು ಅನುಸರಣೆಯಿಂದ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಈ ತಾರತಮ್ಯವನ್ನು ಕಳೆದ ಮೂವತ್ತು ವರ್ಷಗಳಲ್ಲಿ ಪೂರ್ಣ ಅಳಿಸಿಹಾಕುವುದಿರಲಿ, ಆ ಕೆಲಸದ ಬಾಹುಳ್ಯವನ್ನು ಸಹ ಪೂರ್ಣವಾಗಿ ಅಂದಾಜು ಮಾಡಲಾಗಿಲ್ಲ.

ಸಂವಿಧಾನದ ೧೫(೪) ಮತ್ತು ೧೬(೪) ವಿಧಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸುವ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳನ್ನು ಸ್ವಾತಂತ್ರ್ಯಕ್ಕೆ ಮೊದಲೇ ಬ್ರಿಟಿಷರು ಗುರುತಿಸಿ ಪಟ್ಟಿ ಮಾಡಿದ್ದರು. ಆದರೆ ಇತರ ಹಿಂದುಳಿದ ವರ್ಗಗಳನ್ನು ಗುರುತಿಸುವ ಕೆಲಸವೇ ಇನ್ನೂ ಅನೇಕ ರಾಜ್ಯಗಳಲ್ಲಿ ಪೂರ್ಣವಾಗಿಲ್ಲ. ಅದಕ್ಕೆ ಮೊದಲೇ ಮೀಸಲಾತಿಯ ವಿರುದ್ಧ ಚಳವಳಿ ಆರಂಭವಾಗಿದೆ. ಇದಕ್ಕಿಂತ ವಿಪರ್ಯಾಸ ಇನ್ನೊಂದಿಲ್ಲ. ವಾಸ್ತವವಾಗಿ ಕೆಲವು ಹಿಂದುಳಿದ ವರ್ಗಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಜನರಿಗಿಂತ ಯಾವ ರೀತಿಯಿಂದಲೂ ಉತ್ತಮವಾಗಿಲ್ಲ. ಉದಾಹರಣೆಗೆ ಅಗಸ, ಕ್ಷೌರಿಕ, ಕುಂಬಾರ, ನೇಕಾರ ಇತ್ಯಾದಿ ಜನರ ಸ್ಥಿತಿ ಪರಿಶಿಷ್ಟ ಜಾತಿಯವರಷ್ಟೇ ಚಿಂತಾಜನಕವಾಗಿದೆ.

ಸ್ವಾತಂತ್ರ್ಯಾ ನಂತರ ಅವರನ್ನು ಗುರುತಿಸಲು ಮಾಹಿತಿ ಸಹ ನಮಗೆ ಸಿಗದಂತಾಗಿದೆ. ಯಾವ ಯಾವ ಜಾತಿಗಳಲ್ಲಿ ಮೆಟ್ರಿಕ್ ಪಾಸಾದವರೆಷ್ಟು, ಪದವೀಧರರೆಷ್ಟು, ಸರ್ಕಾರಿ ನೌಕರಿಯಲ್ಲಿರುವವರೆಷ್ಟು ಇತ್ಯಾದಿ ಮಾಹಿತಿ ೧೯೪೧ರ ವರೆಗೂ ಜನಗಣತಿಯಲ್ಲಿ ಸಿಗುತ್ತಿತ್ತು. ಆದರೆ ಸ್ವಾತಂತ್ರ್ಯಾ ನಂತರ ನಯವಾಗಿ ಜಾತಿಯ ಅಂಕೆ-ಸಂಖ್ಯೆಗಳನ್ನು ಕೈಬಿಡಲಾಗಿದೆ. ನ್ಯಾಯಾಲಯಗಳು ಸಹ ಒಂದು ವರ್ಗದ ಹಿಂದುಳಿದಿರುವಿಕೆಯನ್ನೂ ಗುರುತಿಸಲು ಇತರ ಆಧಾರಗಳ ಜೊತೆಗೆ; ಜಾತಿ ಒಂದು ಮುಖ್ಯ ಆಧಾರವಾಗಿದೆ ಎಂದು ಘೋಷಿಸಿವೆ. ಕಸುಬು, ವಾಸಸ್ಥಳ, ಆದಾಯ ಇತ್ಯಾದಿಗಳು ಇತರ ಆಧಾರಗಳು.

ಹೀಗಿದ್ದೂ ಜನಗಣತಿಯಲ್ಲಿ ಜಾತಿಯ ಅಂಕಣವನ್ನು ಬಿಟ್ಟಿದ್ದೇಕೆ ಎಂಬುದಕ್ಕೆ ಕೆಲವರು ನೀಡುವ ವಿವರಣೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಹಾಕಿದಂತಿದೆ. ನಮ್ಮ ದೇಶ ’ಸೆಕ್ಯೂಲರ್’ ಆದದ್ದರಿಂದ ಜನಗಣತಿಯಲ್ಲಿ ಜಾತಿ ಅಂಕಣ ಬೇಡವಂತೆ! ’ಸೆಕ್ಯೂಲರ್’ ಅಂದರೆ ’ಧರ್ಮಾತೀತ’ ಎಂದಾಗುತ್ತದೆಯೇ ಹೊರತು ’ ಜಾತ್ಯತೀತ’ ಎಂಬುದು ಸರಿಯಾದ ಅನುವಾದವಾಗುವುದಿಲ್ಲ. ವಾಸ್ತವವಾಗಿ ಧರ್ಮಗಳಿಗೆ ಸಂಬಂಧಿಸಿದ ಎಲ್ಲ ಅಂಕೆ-ಸಂಖ್ಯೆಗಳನ್ನು ಜನಗಣತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷ ಸೌಲಭ್ಯವನ್ನು ಕಲ್ಪಿಸುವ ಅಗತ್ಯವನ್ನು ಒತ್ತಿ ಹೇಳಿದ್ದರೂ ಅವನ್ನು ಗುರುತಿಸಲು ಅಗತ್ಯವಾದ ಜಾತಿವಾರು ಅಂಕೆ ಸಂಖ್ಯೆಗಳನ್ನು ಜನಗಣತಿಯಲ್ಲಿ ದಾಖಲು ಮಾಡಲಾಗುತ್ತಿಲ್ಲ.

ಕೆಲವು ಜಾತಿಗಳು ಶಿಕ್ಷಣ ಮತ್ತು ಸರ್ಕಾರಿ ಸೇವೆಯಲ್ಲಿ ತಮ್ಮ ಗಾತ್ರಕ್ಕೆ ಮೀರಿದ ಪ್ರಮಾಣದಲ್ಲಿ ಆಧಿಪತ್ಯ ವಹಿಸಿರುವುದನ್ನು ಮತ್ತು ಕೆಲವು ಸಂಖ್ಯಾ ಬಾಹುಳ್ಯದ ಜಾತಿಗಳಿಗೆ ಪ್ರಾತಿನಿಧ್ಯವೇ ಇಲ್ಲದಿರುವುದನ್ನು ಮುಚ್ಚಿಡಲೆಂದೇ ಹಾಗೆ ಮಾಡಲಾಗಿದೆ. ಹಾಗಲ್ಲದೆ ಮತ್ತಾವ ಘನ ಉದ್ದೇಶಕ್ಕಾಗಿ ಜಾತಿವಾರು ಮಾಹಿತಿಯನ್ನು ಕೈಬಿಡಲಾಗಿದೆ ಎಂಬದನ್ನು ಯಾರಾದರೂ ತಿಳಿಸಬಲ್ಲರೆ?

ಬ್ರಿಟೀಷರು ಜಾತಿವಾರು ಜನಗಣತಿಯನ್ನು ತೆಗೆದುಕೊಳ್ಳುತ್ತಿದ್ದರಿಂದಲೇ ನಮ್ಮ ಸಮಾಜದಲ್ಲಿ ಅಸಮಾನತೆ ಯಾವ ಪ್ರಮಾಣದಲ್ಲಿದೆ ಎಂಬುದು ಬೆಳಕಿಗೆ ಬಂದುದು. ಈಗಲೂ ಹಿಂದುಳಿದ ವರ್ಗಗಳ ಸಮಿತಿಗಳು ೧೯೪೧ರ ಜನಗಣತಿಯ ಜಾತಿವಾರು ಅಂಕೆ-ಸಂಖ್ಯೆಗಳನ್ನೆ ಮುಂದಕ್ಕೆ ಚಾಚಿ ಈಗಿನ ಅಂಕೆ-ಸಂಖ್ಯೆಗಳನ್ನು ಅಂದಾಜು ಮಾಡುತ್ತವೆ. ಮುಂದಕ್ಕೆ ಚಾಚಿ ಅಂದಾಜು ಮಾಡುವುದಕ್ಕಿಂತ ವಾಸ್ತವಿಕ ಅಂಕೆ-ಸಂಖ್ಯೆಗಳನ್ನೇ ಏಕೆ ಸಂಗ್ರಹಿಸಬಾರದು?

ದಕ್ಷತೆಯನ್ನು ಕುರಿತು ಇಷ್ಟು ವಿಸ್ತಾರವಾಗಿ ಹೇಳುವ ಉದ್ದೇಶವಿಷ್ಟೆ. ಒಂದು ದೇಶದ ಜನರಿಗೆ ತಮ್ಮ ದೇಶದ ಭವಿಷ್ಯದ ನಿರ್ಧಾರಗಳಲ್ಲಿ ಸಮಾನ ತಳಹದಿಯ ಮೇಲೆ ಸಹಭಾಗಿಗಳಾಗುವ ಅವಕಾಶ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲಿಯವರೆಗೆ ಆ ದೇಶದ ಏಳಿಗೆ ಕೇವಲ ಕನಸಿನ ಮಾತಾಗುತ್ತದೆ. ನಾವು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಅವರಿಂದ ಸ್ವಾತಂತ್ರ್ಯ ಪಡೆದದ್ದಾದರೂ ಏಕೆ? ಅವರಲ್ಲಿ ದಕ್ಷತೆಯ ಅಭಾವವಿತ್ತು ಎಂಬ ಕಾರಣಕ್ಕಾಗಿಯೇ? ಖಂಡಿತ ಅಲ್ಲ. ನಮ್ಮ ಆಗುಹೋಗುಗಳನ್ನು ನಾವೇ ತೀರ್ಮಾನಿಸಿಕೊಳ್ಳಬೇಕು ಎಂಬ ಹಂಬಲದಿಂದ ನಾವು ಸ್ವಾತಂತ್ರ್ಯ ಬಯಸಿದೆವು.

ಸಾವಿರಾರು ವರ್ಷಗಳು ನಮ್ಮನ್ನು ಗುಲಾಮರನ್ನಾಗಿ ಮಾಡಿದ ಪ್ರತಿಭಾವಂತರ ದಕ್ಷತೆಯಾಗಲಿ, ನಮ್ಮನ್ನಾಳಿದ ಪರಕೀಯರ ದಕ್ಷತೆಯಾಗಲಿ ನಮ್ಮನ್ನು ಪ್ರಗತಿಯತ್ತ ಕೊಂಡೊಯ್ಯಲಿಲ್ಲ. ನಮ್ಮ ನಿಜವಾದ ಪ್ರಗತಿ ಸಮಾನತೆಯ ಪಾತಳಿಯ ಮೇಲೆ ನಿಂತ ನಮ್ಮೆಲ್ಲರ ಸಹಭಾಗಿತ್ವದಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ನಾವು ಸಂಪತ್ತನ್ನು ದೋಚುವುದರಲ್ಲಿದಕ್ಷರಾದ ಬ್ರಿಟಿಷರಿಂದ ಬಿಡುಗಡೆ ಪಡೆದುದು. ಅದಕ್ಕಾಗಿಯೇ ನಾವು ದುಡಿಯುವ ಜನರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿ ಕಂಡು, ಸದಾ ಅವರನ್ನು ಸುಲಿಯುವುದರಲ್ಲಿ ನಿಷ್ಣಾತರಾದ ಪ್ರತಿಭಾವಂತರಿಂದ ಬಿಡುಗಡೆ ಪಡೆಯಬೇಕಾಗಿರುವುದು.

ದಕ್ಷಿಣ ಭಾರತದಲ್ಲಿ ಹಿಂದುಳಿದ ವರ್ಗಗಳ ಚಳವಳಿ ಬಹಳ ಹಿಂದೆಯೇ ಪ್ರಾರಂಭವಾಯಿತು. ತಮಿಳುನಾಡಿನಲ್ಲಿ ಆರಂಭವಾದ ಜಸ್ಟಿಸ್ ಪಾರ್ಟಿಯ ಪ್ರಭಾವ ಮೈಸೂರು ಸಂಸ್ಥಾನದ ಮೇಲೂ ಆಯಿತು. ೧೯೧೮ರಷ್ಟು ಹಿಂದೆಯೇ ಮೈಸೂರು ಸರ್ಕಾರದ ಸೇವೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ವಿಲ್ಲದಿರುವುದನ್ನೂ ಗಮನಿಸಿ ಆ ಬಗ್ಗೆ ವರದಿ ಸಲ್ಲಿಸಲು ಆಗ ಮುಖ್ಯ ನ್ಯಾಯಾಧೀಶರಾಗಿದ್ದ ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಮಿಲ್ಲರ್ ಸಮಿತಿಯ ವರದಿಯನ್ನು, ಬ್ರಾಹ್ಮಣವರ್ಗ ಹೊರತುಪಡಿಸಿ, ಉಳಿದವರೆಲ್ಲಾ ಸ್ವಾಗತಿಸಿದರು. ಆಗ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ಆ ವರದಿಯನ್ನು ವಿರೋಧಿಸಿ ತಮ್ಮ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿದರು.

ಸ್ವತಂತ್ರ್ಯಾ ನಂತರ ಕರ್ನಾಟಕದಲ್ಲಿ ನಾಗನಗೌಡ ಸಮಿತಿ, ಹಾವನೂರು ಸಮಿತಿಗಳು ವರದಿಗಳನ್ನು ಸಲ್ಲಿಸಿವೆ. ಈಗ ವೆಂಕಟಸ್ವಾಮಿ ಸಮಿತಿ ಈ ಸಮಸ್ಯೆಯನ್ನು ಮರುಪರಿಶೀಲನೆ ಮಾಡುತ್ತಿದೆ. ಕರ್ನಾಟಕ ಪರಿಶಿಷ್ಟ ಜಾತಿ, ಬುಡಕಟ್ಟು ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಒಟ್ಟು ಶೇ. ೬೮ ರಷ್ಟು ಮೀಸಲಾತಿ ಸೌಲಭ್ಯ ನೀಡಲಾಗುತ್ತಿದೆ. ಮೀಸಲಾತಿಯ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. (ಕೆಳಗಿನ ಪಟ್ಟಿ ನೋಡಿ)
ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ
ಮೇಘಾಲಯ ಶೇ. ೯೮.
ತಮಿಳುನಾಡು ಶೇ. ೬೮.
ಕರ್ನಾಟಕ ಶೇ. ೬೮.
ಮಧ್ಯಪ್ರದೇಶ ಶೇ. ೫೮.
ಬಿಹಾರ ಶೇ. ೫೮.
ಜಮ್ಮು ಮತ್ತು ಕಾಶ್ಮೀರ ಶೇ. ೫೦.
ಕೇರಳ ಶೇ. ೫೦.
ಪಂಜಾಬ್ ಶೇ. ೫೦.
ನಾಗಾಲ್ಯಾಂಡ್ ಶೇ. ೪೫.
ಅರುಣಾಚಲಪ್ರದೇಶ್ ಶೇ. ೪೩.
ಗುಜರಾತ್ ಶೇ. ೩೧.

ಮೇಘಾಲಯ, ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಮೀಸಲಾತಿ ಪ್ರಮಾಣ ಅತಿ ಹೆಚ್ಚಾಗಿದ್ದರೆ, ಗುಜರಾತಿನಲ್ಲಿ ಅತಿ ಕಡಿಮೆ ಇದೆ. ಈಗ ಗುಜರಾತಿನಲ್ಲಿ ಆ ಪ್ರಮಾಣವನ್ನು ಶೇ. ೩೧ ರಿಂದ ೪೯ಕ್ಕೆ ಏರಿಸಿದ್ದರಿಂದ ಮೀಸಲಾತಿ ವಿರುದ್ಧ ಚಳವಳಿ ಪ್ರಾರಂಭವಾಗಿದೆ. ತಾತ್ಕಾಲಿಕವಾಗಿ ಈ ವರ್ಷ ಏರಿಕೆಯ ಪ್ರಮಾಣ ಜಾರಿಗೆ ತರುವುದನ್ನು ರದ್ದುಪಡಿಸಿದ್ದರೂ ಗಲಭೆಗಳು ಮುಂದುವರಿಯುತ್ತಲೇ ಇವೆ.

ವಿಚಿತ್ರದ ಸಂಗತಿ ಎಂದರೆ ಗುಜರಾತಿನಲ್ಲಿ ಇದುವರೆಗೆ ಹಳೆಯ ಪ್ರಮಾಣದಲ್ಲೂ ಮೀಸಲಾತಿ ಸ್ಥಾನಗಳನ್ನು ಪೂರ್ಣ ಭರ್ತಿಮಾಡಲಾಗಿಲ್ಲ. ಉದಾಹರಣೆಗೆ ವೈದ್ಯಕೀಯ ಶಿಕ್ಷಣದಲ್ಲಿ ಶೇ. ೧೧ರಿಂದ ಶೇ. ೧೭ರಷ್ಟು ಸ್ಥಾನಗಳು ಮಾತ್ರ ಭರ್ತಿಯಾಗಿದೆ. ಇಂಜನಿಯರಿಂಗ್ ಕಾಲೇಜುಗಳಲ್ಲಿ ಆ ಪ್ರಮಾಣ ಶೇ. ೧೨ನ್ನು ದಾಟಿಲ್ಲ.

ಮೀಸಲಾತಿ ಸೌಲಭ್ಯ ಅನೇಕ ವೇಳೆ ಕಾಗದದಲ್ಲಿ ಮಾತ್ರ ಕಂಡುಬರುತ್ತದೆ. ವಾಸ್ತವವಾಗಿ ಆ ಸೌಲಭ್ಯ ಪೂರ್ಣಪ್ರಮಾಣದಲ್ಲಿ ಹಿಂದುಳಿದವರಿಗೆ ತಲುಪುವುದೇ ಇಲ್ಲ. ಕರ್ನಾಟಕದಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಪಡೆಯುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಶೇ.೬೫ಕ್ಕಿಂತ ಹೆಚ್ಚು ಅಂಕಗಳಿಸಿರುತ್ತಾರೆ. ಆದರೆ ಗುಜರಾತಿನಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳು ಪೂರ್ಣ ಪ್ರಮಾಣದಲ್ಲಿ ಬರದೆ ಆ ಸೀಟುಗಳನ್ನು ಇತರರಿಗೆ ನೀಡಲಾಗುತ್ತಿದೆ.

ಮೀಸಲಾತಿ ಒಂದು ಶಾಶ್ವತ ವ್ಯವಸ್ಥೆ ಅಲ್ಲ. ಸಮಾಜದಲ್ಲಿರುವ ಅಸಮಾನತೆಯನ್ನೂ ತೊಡೆದುಹಾಕಲು ಮಾಡಿಕೊಂಡ ಒಂದು ತಾತ್ಕಾಲಿಕ ಏರ್ಪಾಡು. ಸಮಾಜದ ಎಲ್ಲ ವರ್ಗಗಳವರು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಾಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಹಿಂದುಳಿದವರು ಎಂದು ಎನ್ನಿಸಿಕೊಂಡವರು ಸಮಾನ ಪ್ರಮಾಣದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಪ್ರಾತಿನಿಧ್ಯ ಪಡೆಯುವವರೆಗೆ ಈ ಪದ್ಧತಿ ಮುಂದುವರಿಯಬೇಕಾದುದು ಅಗತ್ಯ.

ಸಮಾಜದಲ್ಲಿ ಸಮತೋಲನ ಏರ್ಪಡಬೇಕಾದರೆ ಮುಂದುವರಿದವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹಿಂದುಳಿದವರು ತಮ್ಮ ಸ್ಥಿತಿಗತಿಗಳನ್ನು ಉತ್ತಮ ಪಡಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಸಮಾನತೆ ಇಲ್ಲದೆ ಶಾಂತಿ ಮತ್ತು ಸಮೃದ್ಧಿಗಳನ್ನು ಸಾಧಿಸಲಾಗುವುದಿಲ್ಲವೆಂಬುದನ್ನೂ ನಾವು ಮನಗಾಣಬೇಕು. ಸಮಾಜದಲ್ಲಿ ಸಮಾನತೆಯ ಸ್ಥಾಪನೆಯೇ ಮೀಸಲಾತಿಯ ಗುರಿ. ಇಂದಿನ ಐತಿಹಾಸಿಕ ಸಂದರ್ಭದಲ್ಲಿ ಮೀಸಲಾತಿಯ ವಿರೋಧಿಗಳು ಸಮಾನತೆಯ ವಿರೋಧಿಗಳು ಸಮಾನತೆಯ ವಿರೋಧಿಗಳಾಗುತ್ತಾರೆ. ಈ ಸತ್ಯವನ್ನು ಹಿಂದುಳಿದವರು ಮತ್ತು ಮುಂದುವರಿದವರು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.

(ಈ ವಿಚಾರಗಳನ್ನು ಮಾರ್ಚ್ ೩೧, ೧೯೮೫ರಂದು ಚಿತ್ರದುರ್ಗದ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ದಲಿತ ಸಂಘರ್ಷ ಸಮಿತಿಗಳು ಸೇರಿ ಏರ್ಪಡಿಸಿದ್ದ ’ಮೀಸಲಾತಿ ಏಕೆ?’ ಎಂಬ ವಿಚಾರ ಸಂಕಿರಣದಲ್ಲಿ ಮೊದಲು ಮಂಡಿಸಲಾಗಿತ್ತು.)