You are hereForums / ಸಾಮಾಜಿಕ ವಿಚಾರಗಳು / ನೈಸರ್ಗಿಕ ವಿಕೋಪ - ಪ್ರಾಪಂಚಿಕ ಪ್ರಲಾಪ
ನೈಸರ್ಗಿಕ ವಿಕೋಪ - ಪ್ರಾಪಂಚಿಕ ಪ್ರಲಾಪ
ಕಳೆದ ಒಂದು ಶತಮಾನದಿಂದಲೂ ಕಂಡು ಕೇಳರಿಯದಿದ್ದ ಜಲಪ್ರಳಯ ಕರ್ನಾಟಕ ಮತ್ತು ಆಂಧ್ರಪ್ರದೇಶಗಳ ಜನತೆಯನ್ನು ಬಾಧಿಸಿದೆ. ಇಡೀ ಉತ್ತರ ಕರ್ನಾಟಕದ ಜನತೆ ಪ್ರವಾಹದ ಭೀತಿಯಿಂದ ತತ್ತರಿಸಿದೆ. ಮಳೆಯನ್ನೇ ಕಾಣದಿದ್ದ ಪ್ರದೇಶಗಳು ದ್ವೀಪಗಳಂತಾಗಿವೆ. ಒಣಗಿ ಬರಡಾಗಿದ್ದ ಭೂಮಿ ನಿಂತ ನೀರಿನ ಹೊಂಡವಾಗಿದೆ. ಪ್ರಕೃತಿಯ ರುದ್ರ ನರ್ತನಕ್ಕೆ ಮನುಜರ ವಸತಿಗಳು ಮಾತ್ರವಲ್ಲದೆ ದೇವರ ಆವಾಸ ಸ್ಥಾನಗಳೂ ಬಲಿಯಾಗಿವೆ. ತುಂಗಭದ್ರೆ, ಮಲಪ್ರಭ, ವರದಾ, ಗೋದಾವರಿ, ಕೃಷ್ಣ ಮುಂತಾದ ನದಿಗಳು ತುಂಬಿ ಹರಿಯುತ್ತಿದ್ದು, ನಾಗಾರ್ಜುನ ಸಾಗರ ಅಣೆಕಟ್ಟು, ತುಂಗಭದ್ರ ಅಣೆಕಟ್ಟು, ಆಲಮಟ್ಟಿ ಜಲಾಶಯಗಳು ಅಪಾಯದ ಅಂಚಿನಿಂದ ಪಾರಾಗಿವೆ. ಆಂಧ್ರದ ಕರ್ನೂಲ್, ಗುಂಟೂರು, ವಿಜಯವಾಡ, ಪ್ರಕಾಶಂ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದರೆ, ಕರ್ನಾಟಕದಲ್ಲಿ ರಾಯಚೂರು, ಬಳ್ಳಾರಿ,, ಗುಲ್ಬರ್ಗ, ಗದಗ ಮುಂತಾದ ೧೬ ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ.
ರಾಜ್ಯದಲ್ಲಿ ೧೯೪ ಜನ ಮೃತಪಟ್ಟಿದ್ದಾರೆ, ೨ ಲಕ್ಷ ೪೦ ಸಾವಿರ ಮನೆಗಳು ಧ್ವಂಸವಾಗಿವೆ, ೫೩೦೦ ಜಾನುವಾರುಗಳು ಮೃತಪಟ್ಟಿವೆ, ೧೫೦೦ ಗ್ರಾಮಗಳು ಮುಳುಗಡೆಯಾಗಿವೆ, ೬ ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. ಒಟ್ಟಾರೆ ೧೬ ಸಾವಿರ ಕೋಟಿ ರೂಗಳ ಹಾನಿ ಉಂಟಾಗಿರಬಹುದೆಂದು ಅಂದಾಜು ಮಾಡಲಾಗಿದೆ. ಪರಿಹಾರ ಕಾರ್ಯಗಳನ್ನು ತಡವಾಗಿಯಾದರೂ ಉತ್ತಮ ರೀತಿಯಲ್ಲಿ ಜಾರಿಗೊಳಿಸಲಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೂಕ್ತ ಕ್ರಮ ಕೈಗೊಂಡಿವೆ. ರಾಜ್ಯದ ಜನತೆಯೂ ತಮ್ಮ ಶಕ್ತಿ ಮೀರಿ ಉದಾರವಾಗಿ ಧನಸಹಾಯ ಮಾಡುತ್ತಿದ್ದಾರೆ. ಪ್ರವಾಹ ಸಂಭವಿಸಿದ ಸಮಯದಲ್ಲಿ ಸಂಘಪರಿವಾರದ ನೇತೃತ್ವದಲ್ಲಿ ಚಿಂತನಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಂತ್ರಿಗಳು ಮತ್ತು ಶಾಸಕರು ಜ್ಞಾನೋದಯವಾದವರಂತೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ದೂಷಿಸುತ್ತಲೇ ಕಾಲಕಳೆಯುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಕೊಂಚ ತಡವಾಗಿಯಾದರೂ ಜನರ ನೋವುಗಳಿಗೆ ಸ್ಪಂದಿಸತೊಡಗಿದ್ದಾರೆ. ವೈಮಾನಿಕ ಸಮೀಕ್ಷೆಯ ಮೂಲಕ ಅಂತರಿಕ್ಷದಿಂದಲೇ ಜನರ ನೋವು-ಅಳಲುಗಳನ್ನು ಅಳೆಯುವ ಮಹಾನ್ ಶಕ್ತಿಯುಳ್ಳ ನಮ್ಮ ಆಳ್ವಿಕರ ಸಾಮರ್ಥ್ಯವನ್ನು ಮೆಚ್ಚಲೇಬೇಕಲ್ಲವೇ ? ಪ್ರವಾಹ ಪೀಡಿತ ಜನ ಹೇಗೆ ತಮ್ಮ ದೈನಂದಿನ ಜೀವನ ಸಾಗಿಸುತ್ತಾರೆ ಎಂದು ತಿಳಿಯಲು ಭೂಸ್ಪರ್ಷದ ಅಗತ್ಯವೇನಿಲ್ಲ ಎಂಬ ಮಹಾನ್ ಸತ್ಯವನ್ನೂ ಈ ದಾರ್ಶನಿಕ ನಾಯಕ ಶಿಖಾಮಣಿಗಳು ನಿರೂಪಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದೇ ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟುಮಾಡುತ್ತದೆ. ಪ್ರತಿ ಪ್ರಯಾಣಕ್ಕೆ ಲಕ್ಷಾಂತರ ರೂಗಳನ್ನು ಖರ್ಚುಮಾಡಬೇಕಾಗುತ್ತದೆ. ಹೆಲಿಕಾಪ್ಟರ್‌ಗೆ ಬಳಸುವ ಇಂಧನ ದುಬಾರಿಯಾಗಿರುತ್ತದೆ. ಆದರೂ ಆಳ್ವಿಕರು ತಮ್ಮ ಕಾಪ್ಟರ್ ಪ್ರೇಮವನ್ನು ತ್ಯಜಿಸುವುದಿಲ್ಲ. ಬಹುಶಃ ವೈಮಾನಿಕ ಸಮೀಕ್ಷೆಗೆ ತಗಲುವ ವೆಚ್ಚದಲ್ಲೇ ಸಾವಿರಾರು ಮಂದಿಗೆ ಪುನರ್ವಸತಿ ಕಲ್ಪಿಸಬಹುದು. ಆದರೆ ಈ ಕಲ್ಪನೆ ಆಳ್ವಿಕರ ಮನದಲ್ಲಿ ಮೂಡಬೇಕಲ್ಲವೇ?
ಪರಿಹಾರ ಮತ್ತು ಮುನ್ನೆಚರಿಕೆ
ಪ್ರವಾಹದಲ್ಲಿ ಮಡಿದ ಪ್ರತಿ ವ್ಯಕ್ತಿಗೆ ಒಂದು ಲಕ್ಷ, ಕುಸಿದ ಮನೆಗಳಿಗೆ ೩೦ ಸಾವಿರ, ಒಂದು ಎಕರೆ ಬೆಳೆ ನಾಶವಾದರೆ ಇಂತಿಷ್ಟು ಪರಿಹಾರ, ಗಾಯಗೊಂಡವರಿಗೆ ೫೦ ಸಾವಿರ, ಮನೆ ಕಳೆದುಕೊಂಡವರಿಗೆ ಇಂತಿಷ್ಟು ಸಾವಿರ ಹೀಗೆ ದರಗಳ ಪಟ್ಟಿಯನ್ನು ನಿರ್ಧರಿಸುವ ಆಳ್ವಿಕರಿಗೆ ಇದಾವುದರ ನೈಜ ಮೌಲ್ಯವೂ ಗಣನೆಗೆ ಬರುವುದಿಲ್ಲ. ಕೋಮು ಗಲಭೆಗಳಾಗಲೀ, ಭಯೋತ್ಪಾದಕ ದಾಳಿಯಾಗಲೀ, ರಾಜಕೀಯ ಸಂಘರ್ಷವಾಗಲೀ, ಜಾತಿ ಗಲಭೆಯಾಗಲೀ ಪರಿಹಾರಗಳ ದರಪಟ್ಟಿ ಸಿದ್ಧವಾಗಿರುತ್ತದೆ. ಒಬ್ಬ ವ್ಯಕ್ತಿಯ ಅಮೂಲ್ಯ ಜೀವಕ್ಕೆ ಒಂದು ಲಕ್ಷ ಮಾತ್ರ ಬೆಲೆ ಎಂದು ನಿರ್ಧರಿಸುವ ಈ ಪರಂಪರೆಯೇ ಆಳ್ವಿಕರ ಮನುಕುಲ ವಿರೋಧಿ ಲಕ್ಷಣಗಳನ್ನು ಜಗಜ್ಜಾಹೀರು ಮಾಡುತ್ತದೆ. ಈ ಪರಿಹಾರ ನಿಧಿ ಬಿಡುಗಡೆಯಾಗಲು ರಾಜಕೀಯ ಪ್ರತಿಷ್ಠೆಯ ತಿಕ್ಕಾಟಗಳು ನಡೆಯಬೇಕು. ಅಧಿಕಾರಶಾಹಿಗಳ ಹಿಡಿತದಿಂದ ಜನತೆಯನ್ನು ತಲುಪುವ ವೇಳೆಗೆ ಈ ಮೊತ್ತದಲ್ಲಿ ಬಹುಪಾಲು ಪ್ರವಾಹದ ಅಲೆಗಳೊಂದಿಗೇ ಕೊಚ್ಚಿಹೋಗಿರಲಿಕ್ಕೂ ಸಾಕು. ಪರಸ್ಪರ ದೋಷಾರೋಪಣೆಯಲ್ಲೇ ಕಾಲಹರಣ ಮಾಡುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನತೆಯ ಅಗತ್ಯತೆಗಳನ್ನು ಗ್ರಹಿಸುವ ವೇಳೆಗೆ ಬಹುಪಾಲು ನೊಂದ ಜನತೆ ಶಿವನ ಪಾದ ಸೇರಿರುತ್ತಾರೆ. ಆದರೆ ಅವರ ಹೆಸರಿನ ಪರಿಹಾರ ಮಾತ್ರ ವಿತರಣೆಯಾಗಿರುತ್ತದೆ.
ಯಾವುದೇ ನಾಗರಿಕ ಸಮಾಜ ಇಂತಹ ವಿಷಮ ಪರಿಸ್ಥಿತಿಯಲ್ಲಿ ತುಂಬು ಹೃದಯದಿಂದ ಜನತೆಯ ನೋವುಗಳಿಗೆ ಸ್ಪಂದಿಸುತ್ತದೆ. ಈ ಬಾರಿಯೂ ಇದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ದೇಣಿಗೆ ಮತ್ತು ಕಾಣಿಕೆ ಸಂಗ್ರಹ ಕಾರ್ಯಗಳು ಸಮರೋಪಾದಿಯಲ್ಲಿ ಸಾಗುತ್ತಿದ್ದು ಕೋಟ್ಯಾಂತರ ರೂಗಳ ಸಂಗ್ರಹವಾಗಿದೆ. ಸಾಮಾನ್ಯ ಜನರೂ ತಮ್ಮ ಕೈಲಾದಷ್ಟು ಹಣ, ವಸ್ತ್ರ ಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ಉದಾರವಾಗಿ ನೀಡುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇದನ್ನು ಸಂಗ್ರಹಿಸಿ ನಿರಾಶ್ರಿತರಿಗೆ ತಲುಪಿಸುತ್ತಿವೆ. ರಾಜಕೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಪ್ರವಾಹ ಅಥವಾ ಭೂಕಂಪದಲ್ಲಿ ನೊಂದ ಜನತೆಗಾಗಿ ಸಾಮಾನ್ಯ ಜನತೆಯಿಂದ ನಿಧಿ ಸಂಗ್ರಹಣೆ ಮಾಡುವ ಸಂದರ್ಭದಲ್ಲಿ ಪಕ್ಷದ, ಸಂಘಟನೆಯ ಬ್ಯಾನರ್‌ಗಳು ಅಗತ್ಯವೇ ಎಂಬ ಗಂಭೀರ ಪ್ರಶ್ನೆ ಎದುರಾಗುತ್ತದೆ. ಎಲ್ಲ ಪಕ್ಷ ಸಂಘಟನೆಗಳ ಕಾರ್ಯಕರ್ತರೂ ಸಮವಸ್ತ್ರಗಳನ್ನು ಧರಿಸಿ ತಮ್ಮ ಅಸ್ಮಿತೆಗಳನ್ನು ಪ್ರದರ್ಶಿಸುವ ಮತ್ತು ಪ್ರತಿಷ್ಟೆಯನ್ನು ಜಾಹೀರು ಪಡಿಸುವ ರೀತಿಯಲ್ಲಿ ನಿಧಿ ಸಂಗ್ರಹಣೆ ಮಾಡುವುದು ದುರದೃಷ್ಟಕರ ಬೆಳವಣಿಗೆಯಾಗಿದೆ. ಜನಪ್ರಿಯತೆ ಗಳಿಸುವ ಮನಸ್ಥಿತಿಯನ್ನು ಈ ಪ್ರಕ್ರಿಯೆಯಲ್ಲೂ ಕಾಣುವುದು ವಿಪರ್ಯಾಸಕರ. ಈ ಸಂದರ್ಭದಲ್ಲಾದರೂ ಪಕ್ಷ ಪ್ರತಿಷ್ಠೆಗಳನ್ನು ಬದಿಗಿಟ್ಟು, ಯಾವುದೇ ಬ್ಯಾನರ್‌ಗಳಿಲ್ಲದೆ ಎಲ್ಲ ರಾಜಕೀಯ ಪಕ್ಷಗಳೂ ಒಂದಾಗಿ ಜನರ ಬಳಿ ಹೋಗಬಾರದೇ ? ಇದು ಶ್ರೀಸಾಮಾನ್ಯನ ಮನದಲ್ಲಿ ಮೂಡುವ ಪ್ರಶ್ನೆ.
ಮತ್ತೊಂದೆಡೆ ನೊಂದ ನಿರಾಶ್ರಿತ ಜನತೆಗೆ ಆಹಾರವನ್ನು ಒದಗಿಸುವ ಪರಿ ನಿಜಕ್ಕೂ ದಾರುಣ ಎನಿಸುತ್ತದೆ. ಭೂ ಪ್ರದೇಶಗಳು ಜಲಾವೃತವಾಗಿರುವುದರಿಂದ ಹೆಲಿಕಾಪ್ಟರ್‌ಗಳು ನೆಲದ ಮೇಲೆ ಇಳಿಯಲಾಗುವುದಿಲ್ಲವಾದರೂ, ದೊಡ್ಡ ಕಟ್ಟಡಗಳ ಮೇಲೆ ನಿಂತು ಆಹಾರ ಪೊಟ್ಟಣಗಳನ್ನು ವ್ಯವಸ್ಥಿತವಾಗಿ ವಿತರಿಸಬಹುದಲ್ಲವೇ? ಆದರೆ ಅಧಿಕಾರಿಗಳು ಆಹಾರದ ಪೊಟ್ಟಣಗಳನ್ನು ಬಿಸಾಡುತ್ತಾರೆ. ಸಿಕ್ಕವರಿಗೆ ಸೀರುಂಡೆ ಎನ್ನುವಂತೆ ಆಗುತ್ತದೆ. ರಾಜ್ಯ ಸರ್ಕಾರಕ್ಕಂತೂ ತಮ್ಮ ಮನೆ ಆಸ್ತಿಗಳನ್ನು ಕಳೆದುಕೊಂಡ ಸಾಮಾನ್ಯ ಜನತೆಗಿಂತಲೂ ಮಠಾಧೀಶರೇ ಹೆಚ್ಚು ಪ್ರಿಯರಾಗಿರುವುದು ಸ್ಪಷ್ಟವಾಗಿ ನಿರೂಪಿತವಾಗಿದೆ. ಮುಳುಗಡೆಯಾಗಿದ್ದ ಮಂತ್ರಾಲಯದಲ್ಲಿ ಮಠಾಧೀಶರನ್ನು ರಕ್ಷಿಸಲು ಸಚಿವೆಯೊಬ್ಬರು ಖುದ್ದಾಗಿ ಹೆಲಿಕಾಪ್ಟರ್‌ನಲ್ಲಿ ತೆರಳಿ ಅವರನ್ನು ಸ್ವಾಮೀಜಿಯನ್ನು ಪಾರು ಮಾಡಿದ್ದು ನಿದರ್ಶನವಷ್ಟೆ. ಮಂತ್ರಾಲಯದ ವಸತಿ ಗೃಹದಲ್ಲಿ ಎರಡನೆ ಮಹಡಿಯವರೆಗೂ ನೀರು ತುಂಬಿಕೊಂಡಿದ್ದು ಮೇಲ್ಚಾವಣಿಯಲ್ಲಿ ಆಹಾರಕ್ಕಾಗಿ ಹಾತೊರೆಯುತ್ತಿದ್ದ ಜನತೆ ಹೆಲಿಕಾಪ್ಟರ್ ಕಂಡೊಡನೆ ನಮಗೆ ಆಹಾರ ಸಿಗುವುದೆಂಬ ಆಸೆಯಿಂದ ಕೈಚಾಚಿದರಂತೆ. ಆದರೆ ಆ ಹೆಲಿಕಾಪ್ಟರ್ ಸ್ವಾಮೀಜಿಗಳನ್ನು ಎತ್ತಿಕೊಂಡು ಮುನ್ನಡೆಯಿತಂತೆ. ಇದಕ್ಕಿಂತಲೂ ಅಮಾನವೀಯ ದೃಶ್ಯ ಬಹುಶಃ ಗೋಳಿನ ಸಿನಿಮಾಗಳಲ್ಲಿ ಕಾಣಬಹುದೇನೋ?
ಇಷ್ಟಕ್ಕೂ ಪ್ರಸ್ತುತ ಪ್ರವಾಹ ಮತ್ತು ಜಲಪ್ರಳಯಕ್ಕೆ ನೈಸರ್ಗಿಕ ವಿಕೋಪವಷ್ಟೇ ಕಾರಣವೆಂದು ಹೇಳುವುದೂ ತಪ್ಪಾಗುತ್ತದೆ. ಎಂದೂ ಕಾಣದ ಪ್ರಮಾಣದಲ್ಲಿ ಮಳೆಯಾಗಿರುವುದು ಸತ್ಯವೇ ಆದರೂ, ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿ, ಚಿಂತನಾ ಬೈಠಕ್‌ಗಳಲ್ಲಿ ನಿರತರಾಗಿದ್ದ ಮಂತ್ರಿ-ಶಾಸಕರಿಗೆ ಹೊಣೆಗಾರಿಕೆ ಇರಲಿಲ್ಲವೇ ? ಇಲಾಖೆಯ ಮುನ್ನೆಚ್ಚರಿಕೆಯನ್ನು ಗಮನಿಸಿ, ತಗ್ಗು ಪ್ರದೇಶಗಳಲ್ಲಿ, ನದಿ ದಂಡೆಗಳಲ್ಲಿ, ಜಲಾನಯನ ಪ್ರದೇಶಗಳಲ್ಲಿ ಜನರಿಗೆ ರಕ್ಷಣೆ ಒದಗಿಸುವ ಕ್ರಮ ಕೈಗೊಂಡಿದ್ದಲ್ಲಿ ಈ ಪ್ರಮಾಣದ ಹಾನಿ ಸಂಭವಿಸುತ್ತಿರಲಿಲ್ಲ. ಇಡೀ ಪ್ರದೇಶ ಜಲಾವೃತವಾದ ಮೇಲೆ ಸೇನಾ ತುಕಡಿಗಳನ್ನು ಕರೆಸುವುದರ ಬದಲು ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಚಿತವಾಗಿಯೇ ನಿಯೋಜಿಸಿದ್ದಲ್ಲಿ ಅನಾಹುತಗಳನ್ನು ತಪ್ಪಿಸಬಹುದಿತ್ತು. ಪ್ರಜಾಂದೋಲನಗಳನ್ನು ಸದೆಬಡಿಯಲು ಸೇನೆಯೊಂದಿಗೆ ಸರ್ವಸನ್ನದ್ಧರಾಗಿರುವ ಸರ್ಕಾರಗಳು ನೈಸರ್ಗಿಕ ಪ್ರಕೋಪಗಳನ್ನು ಎದುರಿಸಲು ಏಕೆ ಸನ್ನದ್ಧವಾಗಿರುವುದಿಲ್ಲ ? ಇದು ಗಂಭೀರವಾಗಿ ಯೋಚಿಸಬೇಕಾದ ವಿಚಾರವಾಗಿದೆ.
ಇನ್ನು ಈ ರೀತಿಯ ಪ್ರವಾಹ ಪರಿಸ್ಥಿತಿಗಳು ಭಾರತಕ್ಕೆ ಹೊಸದೇನೂ ಅಲ್ಲ. ಕೆಲವು ಸಮಾಜ ಶಾಸ್ತ್ರಜ್ಞರ ಅಭಿಪ್ರಾಯದಲ್ಲಿ ಬ್ರಹ್ಮಪುತ್ರ, ಯಮುನಾ ನದಿಗಳ ಅನೇಕ ತಗ್ಗು ಪ್ರದೇಶಗಳಲ್ಲಿ ಭೂಮಾಲೀಕರು ಜಲಪ್ರಳಯಗಳನ್ನು ಸ್ವಾಗತಿಸುತ್ತಾರೆ. ಏಕೆಂದರೆ ಒಮ್ಮೆ ಪ್ರವಾಹದ ನೀರು ಹಿಂದೆ ಸರಿದರೆ, ಆ ಭೂಮಿಯಲ್ಲಿ ಫಲವತ್ತಾದ ಬೆಳೆ ಬೆಳೆಯಬಹುದು. ಇದು ಒಂದು ಮನಸ್ಥಿತಿಯ ದ್ಯೋತಕ. ಮತ್ತೊಂದೆಡೆ ಪ್ರಸ್ತುತ ಪ್ರವಾಹಕ್ಕೆ ಭಾರಿ ಮಳೆ ಮಾತ್ರವೇ ಕಾರಣವೆಂದು ಹೇಳಲಾಗುವುದಿಲ್ಲ. ನೀರಾವರಿ ಒದಗಿಸುವ ಭರದಲ್ಲಿ ಭಾರಿ ಅಣೆಕಟ್ಟುಗಳನ್ನು ಕಟ್ಟಿ ತಗ್ಗು ಪ್ರದೇಶಗಳನ್ನು ಸದಾ ಅಪಾಯದ ಅಂಚಿನಲ್ಲಿರುವಂತೆ ಮಾಡಿರುವ ಪ್ರಗತಿಯ ಮಾರ್ಗವೂ ಇದಕ್ಕೆ ಕಾರಣವಾಗಿದೆ. ನಾಗಾರ್ಜುನ ಸಾಗರ, ಆಲಮಟ್ಟಿಯಂತಹ ಜಲಾಶಯಗಳ ಎತ್ತರವನ್ನು ತಗ್ಗಿಸಿ, ಸಣ್ಣ ನೀರಾವರಿಗೆ ಪೂರಕವಾಗುವಂತೆ ಚಿಕ್ಕ ಚಿಕ್ಕ ಚೆಕ್ ಡ್ಯಾಂಗಳನ್ನು ನಿರ್ಮಿಸಿದ್ದಲ್ಲಿ ಈ ಪ್ರಮಾಣದ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ಪ್ರಗತಿಯನ್ನು ಭಾರಿ ಪ್ರಮಾಣದ ಜಲಾಶಯಗಳ ಮೂಲಕವೇ ವಿಶ್ಲೇಷಿಸುವ ಆಳ್ವಿಕರಿಗೆ ಈ ಆಲೋಚನೆಗಳು ಹೊಳೆಯುವುದೇ ಇಲ್ಲ.
ಮತ್ತೊಂದೆಡೆ ನೈಸರ್ಗಿಕವಾಗಿ ನೀರನ್ನು ಹೀರಿಕೊಳ್ಳುವ ಗುಣ ಭೂಮಿಗಿರುತ್ತದೆ. ಕೆರೆಗಳು ಈ ಮಹತ್ತರ ಕಾರ್ಯವನ್ನು ನಿರ್ವಹಿಸುತ್ತವೆ. ಆದರೆ ನಗರೀಕರಣ ಪ್ರಕ್ರಿಯೆಗೆ ಬಲಿಯಾಗಿ ಬಹುತೇಕ ಎಲ್ಲ ಕೆರೆಗಳೂ ಕಾಂಕ್ರೀಟ್ ಕಾಡುಗಳಾಗಿವೆ. ಸಣ್ಣ ಪುಟ್ಟ ರೈತರಿಗೆ ನೀರಾವರಿಗೆ ಸಹಾಯಕವಾಗುತ್ತಿದ್ದ ಕೆರೆಗಳನ್ನು ಕಬಳಿಸಿದ ರಿಯಲ್ ಎಸ್ಟೇಟ್ ಉದ್ಯಮ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಜನರನ್ನು ಬೀದಿಪಾಲು ಮಾಡಿರುವುದು ನಮ್ಮ ಕಣ್ಣ ಮುಂದಿರುವ ಕಟು ಸತ್ಯ. ಅಳಿದುಳಿದಿರುವ ಕೆಲವೇ ಕೆರೆಗಳಲ್ಲಿ ಹೂಳು ತೆಗೆದು ದಶಕಗಳೇ ಕಳೆದಿವೆ. ಮಳೆ ನೀರನ್ನು ಹೀರಿಕೊಳ್ಳಲು ಅಗತ್ಯವಾದ ಅರಣ್ಯ ಸಂಪತ್ತು ಬರಿದಾಗಿದೆ, ಕೆರೆಗಳು ಬತ್ತಿಹೋಗಿವೆ, ಬಾವಿ ಕುಂಟೆಗಳು ನಿಶ್ಯೇಷವಾಗಿವೆ. ಹಾಗಾಗಿ ಭಾರಿ ಮಳೆ ಬಂದಾಗಲೆಲ್ಲಾ ನೀರು ಭೂಮಿಯ ಮೇಲ್ಬಾಗದಲ್ಲೇ ಹರಿಯುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ತುಂಗಭದ್ರ ಜಲಾಶಯದಲ್ಲಿ ೪೦ ಅಡಿ ಹೂಳು ತುಂಬಿದ್ದು ಜಲಾಶಯ ಶೀಘ್ರವಾಗಿ ಭರ್ತಿಯಾಗುತ್ತದೆ. ಅನ್ಯ ಜಲಾಶಯಗಳ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.
ಇನು ನಗರ ಪಟ್ಟಣಗಳಲ್ಲಿ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದರಿಂದ ಅಲ್ಪ ಪ್ರಮಾಣದ ಮಳೆ ಬಂದರೆ ರಸ್ತೆಯಲ್ಲಿ ನದಿ ಹರಿಯುತ್ತದೆ. ಬಡಾವಣೆಗಳನ್ನು ನಿರ್ಮಿಸುವ ಭರದಲ್ಲಿ ಬೆಟ್ಟ ಗುಡ್ಡ ಪ್ರದೇಶಗಳನ್ನು ಸಮತಟ್ಟು ಮಾಡದೆ ನಿರ್ಮಿಸುವುದರಿಂದಲೂ ತಗ್ಗಿನ ಪ್ರದೇಶದ ಮನೆಗಳು ಶೀಘ್ರ ಜಲಾವೃತವಾಗುತ್ತವೆ. ಬೆಂಗಳೂರಿನಲ್ಲೂ ಈ ಸಮಸ್ಯೆ ಪ್ರತಿ ವರ್ಷ ತಲೆದೋರುತ್ತದೆ. ಉತ್ತರ ಕರ್ನಾಟಕದಲ್ಲಿ ಆದಂತೆ ೫೦ ಸೆಂಟಿಮೀಟರ್ ಮಳೆ ಬೆಂಗಳೂರು ಅಥವಾ ಮೈಸೂರಿನಲ್ಲಿ ಸುರಿದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದೂ ಅಸಾಧ್ಯ . ಬಹುತೇಕ ಕೃಷಿ ಭೂಮಿ ಮತ್ತು ಕೆರೆ ಕುಂಟೆಗಳು ಬಿಎಂಐಸಿ ಕಾರಿಡಾರ್ ಮತ್ತು ರಿಯಲ್ ಎಸ್ಟೇಟಿಗೆ ಬಲಿಯಾಗಿರುವ ಈ ಪ್ರದೇಶದಲ್ಲಿ ನೀರನ್ನು ಹೀರಿಕೊಳ್ಳುವ ಸೆಲೆಗಳೇ ಬತ್ತಿಹೋಗಿವೆ. ಕೃಷ್ಣರಾಜ ಸಾಗರ ಜಲಾಶಯದಲ್ಲೂ ೩೦ ಅಡಿಗಳಷ್ಟು ಹೂಳು ತುಂಬಿಕೊಂಡಿದೆ. ಈ ಸಮಸ್ಯೆಗಳನ್ನು ಪರಿಹರಿಸುವತ್ತ ಯಾವುದೇ ಸರ್ಕಾರ ಗಮನ ಹರಿಸುತ್ತಿಲ್ಲ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ನೈಸರ್ಗಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಆಳ್ವಿಕರು ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪರಿಸ್ಥಿತಿ ಕೈಮೀರಿ ಹೋದ ನಂತರದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸದೆ ಹೋದಲ್ಲಿ, ಸರ್ಕಾರದ ಪ್ರಯತ್ನಗಳೆಲ್ಲವೂ ಅಸಂಬದ್ಧ ಪ್ರಲಾಪವಾಗುತ್ತದೆ. ಮಾನವ ಸಮಾಜ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಬೇಕೇ ಹೊರತು, ವಿಧ್ವಂಸಕರಾಗಿ ಪರಿಣಮಿಸಬಾರದು. ಆಧುನಿಕತೆ, ಪ್ರಗತಿ, ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ನಾಮ ಮಾಡುತ್ತಿರುವ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪವನ್ನು ಎದುರಿಸಲು ಸಾಮರ್ಥ್ಯವಿಲ್ಲದಿರುವುದು ಸ್ಪಷ್ಟವಾಗಿದೆ. ಅಮೆರಿಕದ ಕತ್ರಿನಾ ತೂಫಾನಿನ ಸಂದರ್ಭದಲ್ಲೂ ಇದು ನಿರೂಪಿತವಾಗಿದೆ. ಇನ್ನಾದರೂ ಆಳ್ವಿಕರು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಾಗಿದೆ.
ನಾ ದಿವಾಕರ
- Login or register to post comments
- Email this page