You are hereForums / ಸಾಮಾಜಿಕ ವಿಚಾರಗಳು / Supression of Peoples' movements - ಪ್ರತಿರೋಧದ ದನಿ ಅಡಗುವ ಮುನ್ನ
Supression of Peoples' movements - ಪ್ರತಿರೋಧದ ದನಿ ಅಡಗುವ ಮುನ್ನ
ಭಾರತೀಯ ಪ್ರಜಾತಂತ್ರದ ಮಹತ್ತರವಾದ ಅಂಶವೆಂದರೆ ಪ್ರಜೆಗಳಿಗೆ ಲಭ್ಯವಿರುವ ವಾಕ್ ಸ್ವಾತಂತ್ರ್ಯ, ಪ್ರತಿಭಟನೆಯ ಹಕ್ಕು ಮತ್ತು ಸಂಘಟನಾ ಹಕ್ಕುಗಳು. ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ಜಾಗತಿಕ ಮಟ್ಟದಲ್ಲಿ ಸಂಭವಿಸಿದ ಅನೇಕ ಘಟನೆಗಳನ್ನು ಗ್ರಹಿಸಿದ್ದ ದೇಶದ ದಾರ್ಶನಿಕ ನೇತಾರರು ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿರುವ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾದದ್ದೆಂದು ಖ್ಯಾತಿ ಪಡೆದಿದ್ದರೆ, ಅದಕ್ಕೆ ಈ ಮೂರು ಅಂಶಗಳೇ ಕಾರಣ. ತಮ್ಮ ಪ್ರತಿನಿಧಿಗಳನ್ನು ಚುನಾಯಿಸುವ ಹಕ್ಕನ್ನು ನೀಡಿರುವಂತೆಯೇ ಸಂವಿಧಾನವು ಪ್ರಜೆಗಳಿಗೆ ಜನಪ್ರತಿನಿಧಿಗಳ ತಪ್ಪುಗಳನ್ನು ತಿದ್ದುವ ಅವಕಾಶವನ್ನೂ ನೀಡಿದೆ. ಜನಸಾಮಾನ್ಯರ ತುಡಿತಗಳಿಗೆ ಸ್ಪಂದಿಸದ ಪ್ರತಿನಿಧಿಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಅಪ್ರತಿಮ ಸ್ವಾತಂತ್ರ್ಯ ಭಾರತೀಯರಿಗಿದೆ. ಸ್ವತಂತ್ರ ಭಾರತದಲ್ಲಿ ತುರ್ತುಪರಿಸ್ಥಿತಿಯ ಎರಡು ವರ್ಷಗಳನ್ನು ಹೊರತುಪಡಿಸಿದರೆ, ಮತ್ತಾವುದೇ ಕಾಲಘಟ್ಟದಲ್ಲಿ ಪ್ರಜಾತಾಂತ್ರಿಕ ಹಕ್ಕುಗಳನ್ನು ಅಧಿಕೃತವಾಗಿ ದಮನಮಾಡುವ ಪ್ರವೃತ್ತಿ ಕಂಡುಬಂದಿಲ್ಲ.
ಹಾಗೆಂದ ಮಾತ್ರಕ್ಕೆ ಜನರ ಪ್ರತಿರೋಧದ ದನಿಯನ್ನು ದಮನ ಮಾಡಿಯೇ ಇಲ್ಲವೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಟ್ಟಿಗೆ ಭಾರತೀಯ ಪ್ರಜಾತಾಂತ್ರಿಕ ಪ್ರಭುತ್ವ ಬೆಳೆದೂ ಇಲ್ಲ. ಇಂದಿಗೂ ಆಳುವ ವರ್ಗಗಳಲ್ಲಿ ಭಾರತೀಯ ಜನಸಮುದಾಯಗಳ ಪ್ರತಿಭಟನಾ ಸಾಮರ್ಥ್ಯದ ಬಗ್ಗೆ ಭೀತಿ ಎದ್ದುಕಾಣುತ್ತದೆ. ಹಾಗಾಗಿಯೇ ಅನೇಕ ಪ್ರತಿರೋಧದ ದನಿಗಳನ್ನು ಮೊಗ್ಗಿನಲ್ಲೇ ಚಿವುಟಿ ಹಾಕುವ ಪ್ರವೃತ್ತಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವ್ಯಕ್ತವಾಗುತ್ತಿರುತ್ತದೆ. ಪ್ರತಿರೋಧದ ದನಿಗಳು ಹೆಚ್ಚು ಸಂಘಟಿತವಾದಲ್ಲಿ ಪ್ರಭುತ್ವವು ತನ್ನ ನೈಜ, ಉಗ್ರ ಮತ್ತು ಹಿಂಸಾತ್ಮಕ ಸ್ವರೂಪವನ್ನು ತೋರಿರುವುದನ್ನೂ ಕಂಡಿದ್ದೇವೆ. ಲಾಲ್‌ಘಡ್ ಚಳುವಳಿ ಒಂದು ನಿದರ್ಶನವಷ್ಟೆ. ಪ್ರಭುತ್ವದ ಚೌಕಟ್ಟಿನಿಂದ ಹೊರನಿಂತು ಸಾಮಾಜಿಕ ಸನ್ನಿವೇಶದಲ್ಲಿ ಆಲೋಚಿಸಿದಾಗ, ನಾಗರಿಕ ಪ್ರಪಂಚದಲ್ಲಿ ಪ್ರತಿರೋಧದ ದನಿಗಳ ಅಸ್ಮಿತೆ ಏನೆಂಬುದು ಸ್ಪಷ್ಟವಾಗುತ್ತದೆ. ಯಾವುದೇ ಪ್ರಭುತ್ವಕ್ಕೂ ತನ್ನ ಅಸ್ತಿತ್ವದ ಬಗ್ಗೆ ಕಾಳಜಿ ಹೆಚ್ಚಾಗಿರುತ್ತದೆ. ಅಸ್ತಿತ್ವದ ಉಳಿವಿಗಾಗಿಯೇ ಪೊಲೀಸ್, ಕಾನೂನು, ನ್ಯಾಯಾಂಗ, ಕಾರ್‍ಯಾಂಗಗಳು ವ್ಯವಸ್ಥಿತವಾಗಿ ಸಜ್ಜಾಗಿರುತ್ತವೆ. ಅತಿ ದೊಡ್ಡ ಪ್ರಜಾತಂತ್ರವೆಂಬ ಹೆಗ್ಗಳಿಕೆ ಇದ್ದಾಗ್ಯೂ ಭಾರತದಲ್ಲಿ ಅನೇಕ ಸಂದರ್ಭಗಳಲ್ಲಿ ಪ್ರಭುತ್ವ ತನ್ನ ದಮನಕಾರಿ ಪ್ರವೃತ್ತಿಯನ್ನು ಪ್ರದರ್ಶಿಸಿರುವುದುಂಟು. ಕರ್ನಾಟಕದ ಮಟ್ಟಿಗೇ ಹೇಳುವುದಾದರೆ ನರಗುಂದ-ನವಲಗುಂದ ಚಳುವಳಿ ಈ ಪ್ರವೃತ್ತಿಗೆ ಉತ್ತಮ ನಿದರ್ಶನ.
ಪ್ರಸ್ತುತ ಸಂದರ್ಭದಲ್ಲಿ ಪ್ರತಿರೋಧದ ದನಿಗಳನ್ನು ಅಡಗಿಸಲು ಪ್ರಭುತ್ವ ಹಿಂಜರಿದರೂ, ಆಳುವ ವರ್ಗಗಳನ್ನು ಪ್ರತಿನಿಧಿಸುವ ಪಟ್ಟಭದ್ರ ಹಿತಾಸಕ್ತಿಗಳು ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಜಾಲವನ್ನೇ ಹೆಣೆದಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ರಾಜಕೀಯ ಕ್ಷೇತ್ರದ ವಾಣಿಜ್ಯೀಕರಣ ಮತ್ತು ಕಾರ್ಪೋರೇಟ್ ಉದ್ಯಮದ ರಾಜಕಾರಣದ ಪರಿಣಾಮವಾಗಿ, ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವ ಪ್ರಕ್ರಿಯೆ ಮುಕ್ತವಾಗಿ ನಡೆಯುತ್ತಿದೆ. ಪ್ರತಿಯೊಂದು ವಾಣಿಜ್ಯ-ಉದ್ಯಮ-ಔದ್ಯೋಗಿಕ ಕ್ಷೇತ್ರದಲ್ಲೂ ಮಾಫಿಯಾಗಳ ಪ್ರಭಾವ ಹೆಚ್ಚಾಗುತ್ತಿದ್ದು, ಆಳ್ವಿಕರಿಗೆ ಬಂಡವಾಳ ಒದಗಿಸುವ ಎಲ್ಲ ಮಾರ್ಗಗಳ ರಕ್ಷಣೆಯ ಹೊಣೆಗಾರಿಕೆಯನ್ನೂ ಮಾಫಿಯಾಗಳಿಗೆ ನೀಡಲಾಗಿದೆ. ಅರಣ್ಯ ಸಂಪತ್ತನ್ನು ಲೂಟಿ ಮಾಡಲು ಆದಿವಾಸಿಗಳನ್ನು ಉಚ್ಚಾಟಿಸುವುದು, ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳೆಸಲು ಸ್ಲಂಗಳನ್ನು ನಿರ್ನಾಮ ಮಾಡುವುದು, ಸಮುದ್ರ ತೀರಗಳಲ್ಲಿ ಐಷಾರಾಮಿ ರೆಸಾರ್ಟುಗಳ ನಿರ್ಮಾಣಕ್ಕೆ ಮೀನುಗಾರರನ್ನು ಉಚ್ಚಾಟಿಸುವುದು, ಪ್ರವಾಸೋದ್ಯಮ-ನಗರೀಕರಣದ ನೆಪದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳನ್ನು ಹೊಡೆದೋಡಿಸುವುದು, ಇವೆಲ್ಲವೂ ಮಾರುಕಟ್ಟೆ ನಿರ್ದೇಶಿತ ಆಧುನೀಕರಣ ಪ್ರಕ್ರಿಯೆಯ ಪರಿಣಾಮಗಳಾಗಿವೆ.
ಬಳ್ಳಾರಿಯ ಗಣಿ ಮಾಫಿಯಾ ಇಡೀ ಜಿಲ್ಲೆಯನ್ನೇ ಕಲುಷಿತಗೊಳಿಸುವುದೇ ಅಲ್ಲದೆ ಅಕ್ರಮ ವ್ಯಾಪಾರದ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಗಳ ನಷ್ಟ ಉಂಟುಮಾಡುತ್ತಿರುವುದು ಗುಟ್ಟಿನ ಮಾತೇನಲ್ಲ. ದಿನಕ್ಕೆ ನೂರಾರು ಲಾರಿಗಳ ಅದಿರು ಕಳ್ಳಸಾಗಣೆಯಲ್ಲಿ ಹೊರದೇಶಕ್ಕೆ ರಫ್ತಾಗುತ್ತಿದೆ. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತಿದ್ದು, ಮಲೆನಾಡು ಮಳೆಯಿಲ್ಲದ ನಾಡಾಗಿ ಪರಿವರ್ತಿತವಾಗುತ್ತಿದೆ. ರಾಜ್ಯದಲ್ಲಿನ ಬಹುತೇಕ ಕಲ್ಲುಬಂಡೆಗಳು, ಬೆಟ್ಟಗಳು ಗ್ರಾನೈಟ್ ಸಂಸ್ಕೃತಿಗೆ ಬಲಿಯಾಗುತ್ತಿದ್ದು, ಗ್ರಾನೈಟ್ ಮಾಫಿಯಾಗಳ ಹಿಡಿತದಲ್ಲಿವೆ. ಪ್ರವಾಸೋದ್ಯಮದ ಹೆಸರಿನಲ್ಲಿ ಬಹುತೇಕ ಎಲ್ಲ ನದಿ-ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟುಗಳು ತಲೆಎತ್ತಿದ್ದು ನೈಸರ್ಗಿಕ ಅಸಮತೋಲನ ಹೆಚ್ಚಾಗುತ್ತಿದೆ. ಕೈಗಾರಿಕೀಕರಣ ಮತ್ತು ಷಟ್ಪಥ-ಚತುಷ್ಪಥ ರಸ್ತೆಗಳು ಹಾಗು ವಿಶೇಷ ಆರ್ಥಿಕ ವಲಯಗಳಿಗಾಗಿ ಕೃಷಿ ಭೂಮಿಯನ್ನು ಕಬಳಿಸಲಾಗುತ್ತಿದೆ. ನಗರ ವಿಸ್ತರಣೆ ಮತ್ತು ನಗರೀಕರಣ ಪ್ರಕ್ರಿಯೆಗೆ ಗ್ರಾಮೀಣ ಭೂಮಿಯೊಡನೆಯೇ ಗ್ರಾಮೀಣ ಸಂಸ್ಕೃತಿಯೂ ಬಲಿಯಾಗುತ್ತಿದೆ. ಕೈಗಾರಿಕೆಗಳ ಮೇಲೆ ಸೂಕ್ತ ರೀತಿಯ ನಿಯಂತ್ರಣ ಇಲ್ಲವಾಗಿ ಬಹುತೇಕ ನದಿಗಳು, ಕೆರೆಗಳು ಕಲುಷಿತಗೊಂಡು ಜಾನುವಾರುಗಳಿಗೂ ನೀರಿಲ್ಲದ ಪರಿಸ್ಥಿತಿ ಒದಗಿದೆ. ಸಣ್ಣ ಪಟ್ಟಣಗಳಲ್ಲಿರುವ ಕೆರೆಗಳು ಗೃಹ ನಿರ್ಮಾಣದ ತಾಣಗಳಾಗಿದ್ದು ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಿವೆ. ಅನೇಕ ಜೀವರಾಶಿಗಳಿಗೆ, ಪಶುಪಕ್ಷಿಗಳಿಗೆ, ಸಸ್ಯ ಸಂಪತ್ತಿಗೆ ತವರಿನಂತಿರುವ ಬೆಟ್ಟದ ತಪ್ಪಲುಗಳು ಆಧುನಿಕ ರೆಸಾರ್ಟುಗಳಿಗೆ ಬಲಿಯಾಗುತ್ತಿವೆ.
ಈ ಅನಾಹುತಗಳ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಂದು ದಂಧೆ ಮರಳು ಸಾಗಾಣಿಕೆಯಾಗಿದೆ. ಗ್ರಾನೈಟ್ ಸಂಸ್ಕೃತಿಗಿಂತಲೂ ಹೆಚ್ಚು ಅಪಾಯಕಾರಿಯಾದ ಮರಳು ಗಣಿಗಾರಿಕೆ ಕಾವೇರಿ, ಕಪಿಲಾ, ಕಬಿನಿ, ತುಂಗಾ, ಭದ್ರಾ ನದಿಗಳ ತೀರದಲ್ಲಿರುವ ಮರಳನ್ನು ನುಂಗಿಹಾಕುತ್ತಿದ್ದು, ನದಿತೀರಗಳು ಮರಳು ಗಣಿಗಾರಿಕೆಯ ತಾಣಗಳಾಗಿವೆ. ಗೃಹನಿರ್ಮಾಣಕ್ಕೆ ಮರಳಿನ ಅವಶ್ಯಕತೆ ಇರುವುದಾದರೂ, ಸರ್ಕಾರದ ನಿಬಂಧನೆಗಳನ್ನು ಮೀರಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ನಿಯಮವನ್ನು ಉಲ್ಲಂಘಿಸಿ ಅಕ್ರಮ ದಂಧೆ ನಡೆಯುತ್ತಿದೆ. ಕಪಿಲಾ ನದಿ ತೀರದಲ್ಲಿನ ಮರಳು ಗಣಿಗಾರಿಕೆಯನ್ನು ಮುಂದುವರೆಯಲು ಬಿಟ್ಟರೆ ಅನೇಕ ಗ್ರಾಮಗಳು, ಪಟ್ಟಣಗಳು ಮುಳುಗಿಹೋಗುವ ಆತಂಕವನ್ನು ಜನತೆ ಎದುರಿಸುತ್ತಿದ್ದಾರೆ. ಸ್ಥಳೀಯ ಜನತೆಯ ಪ್ರತಿರೋಧದ ನಡುವೆಯೂ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ದಂಧೆಯ ಹಿಂದೆ ಮಾಫಿಯಾ ಮಾತ್ರವಲ್ಲ, ರಾಜಕೀಯ ಹಿತಾಸಕ್ತಿಗಳೂ ಅಡಕವಾಗಿರುವುದು ವರದಿಯಾಗಿದೆ. ಅಧಿಕೃತ ಪರವಾನಗಿ ಪಡೆದು ಗಣಿಗಾರಿಕೆ ನಡೆಸುವ ಉದ್ಯಮಿಗಳೇ ನಿಯಮಕ್ಕೆ ವಿರುದ್ಧವಾಗಿ ಯಂತ್ರಗಳನ್ನು ಉಪಯೋಗಿಸಿ ನದಿದಡದಲ್ಲಿ ಕಂದಕಗಳನ್ನು ನಿರ್ಮಿಸಿರುವುದು ಅಪಾಯದ ಸೂಚನೆಯಾಗಿದೆ. ಮತ್ತೊಂದೆಡೆ ಧರ್ಮ-ಸಂಸ್ಕೃತಿ-ಭಾಷೆಯ ರಕ್ಷಣೆಯ ಹೆಸರಿನಲ್ಲಿ ಕೆಲವು ಸಂಘಟನೆಗಳು ವಿರೋಧಿ ದನಿಗಳನ್ನೇ ಅಲ್ಲದೆ ಅನ್ಯ ಎನಿಸುವ ಎಲ್ಲವನ್ನೂ ನಿರ್ನಾಮ ಮಾಡುವ ಕೈಂಕರ್‍ಯದಲ್ಲಿ ತೊಡಗಿವೆ. ಮಂಗಳೂರಿನ ಪಬ್ ದಾಳಿ, ಕ್ರೈಸ್ತ ಚರ್ಚುಗಳ ಮೇಲಿನ ಆಕ್ರಮಣಗಳು, ವ್ಯಾಲೆಂಟೈನ್ ದಿನದ ಅನಾಹುತಗಳು, ಮಸಿ ಬಳಿಯುವ ಪ್ರಕರಣಗಳು ಈ ಪ್ರವೃತ್ತಿಯನ್ನೇ ತೋರುತ್ತವೆ. ತಿರುವಳ್ಳುವರ್-ಸರ್ವಜ್ಞ ಪ್ರತಿಮೆಗಳು ರಾಜಕೀಯ ಪಕ್ಷಗಳಿಗೆ ಜನಪ್ರಿಯತೆಯ ಅಸ್ತ್ರವಾದರೆ, ಭಾಷಾಭಿಮಾನಿಗಳಿಗೆ ಭಾವನೆಗಳ ಸಂಘರ್ಷದ ಸಂಕೇತವಾಗುತ್ತದೆ.
ಈ ಎಲ್ಲ ಪ್ರವೃತ್ತಿಗಳಿಗೆ ಭಿನ್ನವಾಗಿ ಆಲೋಚಿಸುವ ಮತ್ತು ಈ ಆಕ್ರಮಣಕಾರಿ ಪ್ರವೃತ್ತಿಗಳನ್ನು ವಿರೋಧಿಸುತ್ತಿರುವವರ ಸಂಖ್ಯೆ ಗೌಣ. ಕೆಲವೇ ಪ್ರಗತಿಪರ ಸಂಘಟನೆಗಳು, ಪರಿಸರವಾದಿಗಳು, ಆದಿವಾಸಿ ಸಂಘಟನೆಗಳು ನೈಸರ್ಗಿಕ ಸಂಪತ್ತಿನ ಉಳಿವಿಗಾಗಿ ಹೋರಾಡುತ್ತಿವೆ. ನದಿಗಳನ್ನು ಪೂಜಿಸುವ , ಕಾನನವನ್ನು ಆರಾಧಿಸುವ, ಬೆಟ್ಟಗಳಲ್ಲಿ, ಕಲ್ಲುಬಂಡೆಗಳಲ್ಲಿ ತಮ್ಮ ಭವ್ಯ ಪರಂಪರೆಯ ಐತಿಹ್ಯವನ್ನು ಕಾಣುವ, ಭೂತಾಯಿಯನ್ನು ಆರಾಧಿಸುವ ಪಾರಂಪರಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಸಂಘಟನೆಗಳಿಗೆ ಈ ಅನಾಹುತಗಳು ಅಗೋಚರವಾಗಿಯೇ ಇರುವುದು, ಅಚ್ಚರಿ ಎನಿಸಿದರೂ ಸತ್ಯ. ಸಂಘಟಿತ ರೂಪದಲ್ಲೂ ಈ ವಿನಾಶಕಾರಿ ಪ್ರಕ್ರಿಯೆಗಳಿಗೆ ಸೂಕ್ತ ರೀತಿಯ ಪ್ರತಿರೋಧ ವ್ಯಕ್ತವಾಗದಿರುವುದನ್ನೂ ಕಾಣಬಹುದು. ಆದರೆ ಕೆಲವು ಸಂಘಟನೆಗಳು, ವ್ಯಕ್ತಿಗಳು ತಮ್ಮ ಜೀವ ಪಣ ಇಟ್ಟು ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಹೋರಾಡುತ್ತಿರುವುದನ್ನು ಗಮನಿಸಬೇಕಾಗಿದೆ. ಈ ಸಂಘಟನೆಗಳು ಒಂದೆಡೆಯಿಂದ ಮಾಫಿಯಾಗಳ ಆಕ್ರಮಣಕ್ಕೆ ತುತ್ತಾದರೆ ಮತ್ತೊಂದೆಡೆ ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದ ಸಾರ್ವಜನಿಕರ ದೃಷ್ಟಿಯಲ್ಲಿ ಪ್ರಗತಿ ವಿರೋಧಿಗಳಾಗಿ ಕಾಣುತ್ತಾರೆ.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಹೋರಾಟದಲ್ಲಿ ತೊಡಗಿರುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿರುವುದು, ಮಾನಸಿಕ ಕಿರುಕುಳ ನೀಡುತ್ತಿರುವುದು ಕಂಡುಬರುತ್ತಿದೆ. ನಂಜನಗೂಡಿನಲ್ಲಿ ಡಾ. ಪೂರ್ಣಾನಂದ ಎಂಬ ವ್ಯಕ್ತಿಯನ್ನು ಗಡೀಪಾರು ಮಾಡುವಂತೆ ಮೈಸೂರು ಜಿಲ್ಲಾಪಂಚಾಯತಿಯ ಸಭೆಯಲ್ಲಿ ಜನಪ್ರತಿನಿಧಿಗಳು(?) ತೀರ್ಮಾನಿಸಿದ್ದರು. ಆತನನ್ನು ಬೇರೊಂದು ಊರಿಗೆ ವರ್ಗಾವಣೆ ಮಾಡಲಾಗಿದೆ. ಸರ್ಕಾರಿ ನೌಕರನಾದ್ದರಿಂದ ಆತ ಯಾವುದೇ ಹೋರಾಟಗಳಲ್ಲಿ ಭಾಗವಹಿಸುವಂತಿಲ್ಲ ಎಂಬ ಕಾರಣಕ್ಕಾಗಿ ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ ಅಕ್ರಮ ಮರಳು ಗಣಿಗಾರಿಕೆಯನ್ನು ವಿರೋಧಿಸಿ ಹೋರಾಡುತ್ತಿದ್ದ ಬೊಕ್ಕಳ್ಳಿ ನಂಜುಂಡಸ್ವಾಮಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದುಷ್ಕರ್ಮಿಗಳು ಆತನ ಕೈಕಾಲು ಕಟ್ಟಿಹಾಕಿ, ಮೂರು ಗಂಟೆಗಳಿಗೂ ಹೆಚ್ಚು ಕಾಲ ಚಿತ್ರಹಿಂಸೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ಪಿಯುಸಿಎಲ್ ಸದಸ್ಯರಾದ ಕೃಷ್ಣಪ್ಪ ಎಂಬುವರನ್ನೂ ಅಲ್ಲಿನ ಜಿಲ್ಲಾ ಪಂಚಾಯತಿ ಗಡೀಪಾರು ಮಾಡಲು ನಿರ್ಣಯ ಕೈಗೊಂಡಿದೆ. ಮಂಗಳೂರಿನ ಅಧ್ಯಾಪಕರಾದ ಪಟ್ಟಾಭಿ ಸೋಮಯಾಜಿಯವರು ಸಾಂಸ್ಕೃತಿಕ ಆರಕ್ಷಕರ ದಾಳಿಯನ್ನು ಖಂಡಿಸಿದ್ದಕ್ಕಾಗಿ ಅವರ ಮೇಲೆ ವಿಶ್ವವಿದ್ಯಾಲಯದ ಆಡಳಿತ ವರ್ಗವೇ ಕ್ರಮಕೈಗೊಳ್ಳಲು ಮುಂದಾಗಿದೆ. ಸಾರಾಯಿ ವಿರುದ್ಧ ತಮ್ಮ ಜೀವ ಪಣ ಇಟ್ಟು ಹೋರಾಡಿದ ಎ.ಟಿ. ಬಾಬು ಹಾಡುಹಗಲಲ್ಲೇ ಕೊಲೆಯಾದರೂ ತಪ್ಪಿತಸ್ಥರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಇವೆಲ್ಲವೂ ವರದಿಯಾಗಿರುವ ಪ್ರಕರಣಗಳಷ್ಟೆ.
ಆದರೆ ಈ ಹಲ್ಲೆ, ಆಕ್ರಮಣಗಳ ವಿರುದ್ಧ ಸಾರ್ವಜನಿಕ ವಲಯಗಳಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಚಿಂತನಾರ್ಹ ವಿಷಯವಾಗಿದೆ. ಕೆಲವು ಪ್ರಗತಿಪರ ಸಂಘಟನೆಗಳನ್ನು ಹೊರತುಪಡಿಸಿದಲ್ಲಿ ಪ್ರತಿಭಟನೆಯ ದನಿಗಳೇ ಕೇಳಿಬರುತ್ತಿಲ್ಲ. ಪೊಲೀಸರೂ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಬಲ ಶಕ್ತಿಗಳ ಹಿನ್ನೆಲೆ ಇಲ್ಲದ ಇಂತಹ ವ್ಯಕ್ತಿಗಳನ್ನು ರಕ್ಷಿಸುವವರಾರು ? ಮೇಲೆ ಹೇಳಿದ ವ್ಯಕ್ತಿಗಳು ಸಾರ್ವಜನಿಕ ಹಿತಾಸಕ್ತಿಗಾಗಿ ತಮ್ಮ ಸ್ವಹಿತಾಸಕ್ತಿಗಳನ್ನು ಬದಿಗಿಟ್ಟು ಶ್ರಮಿಸುತ್ತಿರುವುದನ್ನು ನಾಗರಿಕ ಸಮಾಜವೂ ಗಮನಿಸದಿರುವುದು ಆಧುನಿಕ ಸಮಾಜದ ವಿಪರ್ಯಾಸವೆನ್ನಬಹುದೇ ? ಪೂರ್ಣಾನಂದ, ನಂಜುಂಡಸ್ವಾಮಿ, ಕೃಷ್ಣಪ್ಪ ಮತ್ತು ಬಾಬು ಅವರಂತಹ ವ್ಯಕ್ತಿಗಳು ಯಾವುದೇ ಅಸ್ಮಿತೆಗಳನ್ನು ಹೊಂದದ, ಪ್ರಬಲ ಸಂಘಟನಾ ಹಿನ್ನೆಲೆ ಇಲ್ಲದ ಮುಕ್ತ ಜೀವಗಳು. ಆದರೆ ಇವರು ಕೈಗೊಳ್ಳುವ ವಿಷಯಗಳು ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿದ್ದು.
ಈ ರೀತಿ ಪ್ರಗತಿಪರ, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವವರನ್ನು ನಾಗರಿಕ ಸಮಾಜ ಹೇಗೆ ಪರಿಗಣಿಸುತ್ತದೆ ಎಂಬುದೇ ಮೂರ್ತ ಪ್ರಶ್ನೆಯಾಗಿದೆ. ಮತೀಯ, ಸಾಮುದಾಯಿಕ ದೃಷ್ಟಿಕೋನದಿಂದ ಸಮಷ್ಟಿಯನ್ನು ಗ್ರಹಿಸುವ ಕೆಲವು ಸಂಘಟನೆಗಳಿಗೆ, ವ್ಯಕ್ತಿಗಳಿಗೆ ಮತ್ತು ಪಕ್ಷಗಳಿಗೆ ದೊರೆಯುವ ನಾಗರಿಕ ಮನ್ನಣೆ, ಸಮರ್ಥನೆ, ಜನಸಾಮಾನ್ಯರ ದೃಷ್ಟಿಯಿಂದ ಸಮುದಾಯ, ಮತಧರ್ಮಗಳನ್ನು ಗ್ರಹಿಸುವವರಿಗೆ ದೊರೆಯುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಮೇಲೆ ಉಲ್ಲೇಖಿಸಲಾದ ಪ್ರಕರಣಗಳಲ್ಲೇ ವ್ಯಕ್ತಿಗಳು ಹಿಂದೂ, ದಲಿತ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಸಾಮುದಾಯಿಕ ಅಸ್ಮಿತೆಗಳಿಲ್ಲದವರಾಗಿರುತ್ತಾರೆ. ಹಾಗಾಗಿ ಈ ಅಸ್ಮಿತೆಗಳನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಸಂಘಟನೆಗಳು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಮೈಸೂರಿನ ಕೋಮುಗಲಭೆಯ ಸಂದರ್ಭದಲ್ಲಿ ವೈಯ್ಯಕ್ತಿಕ ಕಾರಣಗಳಿಗಾಗಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಕೇಂದ್ರೀಕರಿಸಿ, ಪ್ರಕ್ಷುಬ್ಧ ವಾತಾವರಣ ನಿರ್ಮಿಸಲಾಯಿತು. ಪ್ರಕರಣಕ್ಕೆ ಮತೀಯ ಲೇಪನ ನೀಡಲಾಯಿತು. ರಾಜಕೀಯ ಹಿನ್ನೆಲೆಯುಳ್ಳ ಈ ವ್ಯಕ್ತಿಯ ಚಿಕಿತ್ಸೆಗೆ ಸರ್ಕಾರವೇ ಲಕ್ಷಾಂತರ ರೂಗಳನ್ನು ಖರ್ಚು ಮಾಡಿತು. ಆದರೆ ಇದೇ ಗಲಭೆಯಲ್ಲಿ ಹಲ್ಲೆಗೊಳಗಾದ ಇತರರಿಗೆ ಈವರೆಗೂ ನ್ಯಾಯ ದೊರೆತಿಲ್ಲ. ಬೊಕ್ಕಹಳ್ಳಿ ನಂಜುಂಡಸ್ವಾಮಿಯ ಮೇಲಿನ ಮಾರಣಾಂತಿಕ ಹಲ್ಲೆಗೆ ಮಾನವೀಯ ಲೇಪನವೂ ದೊರೆಯಲಿಲ್ಲ.
ನಾಗರಿಕ ಸಮಾಜದಲ್ಲಿ ಸಾಂಘಿಕ ಅಸ್ಮಿತೆಗಳಿಗೆ ಮಾತ್ರ ಮನ್ನಣೆ, ಗೌರವ ದೊರೆಯುವುದಾದರೆ, ವಿಶ್ವಮಾನವ ಪರಂಪರೆಯನ್ನು ಸಾರುವ ನಾಡಿನಲ್ಲಿ ಮಾನವೀಯತೆಗೆ ಅವಕಾಶ ಮೂಡುವುದೇ ? ಆಳುವ ವರ್ಗಗಳಾಗಲೀ, ಪ್ರಭುತ್ವವಾಗಲೀ ಈ ಬಗ್ಗೆ ಕಾಳಜಿ ವಹಿಸದಿರುವುದು ಸಹಜ, ಸ್ವಾಭಾವಿಕ ಏಕೆಂದರೆ ಇಂತಹ ಹೋರಾಟಗಳು ವ್ಯವಸ್ಥೆಯ ವಿರುದ್ಧವಾಗಿರುತ್ತವೆ. ಆದರೆ ಸಾರ್ವಜನಿಕರ ಸಾಮಾಜಿಕ ಪ್ರಜ್ಞೆ ಏನಾಗಿದೆ ? ಪ್ರತಿರೋಧದ ದನಿಗಳೇ ಅಡಗಿಹೋಗಿದೆಯೇ ಅಥವಾ ಸಮಷ್ಟಿ ಪ್ರಜ್ಞೆ ನಶಿಸುತ್ತಿರುವುದೇ ? ಪ್ರತಿರೋಧದ ದನಿಗಳು ಸಂಪೂರ್ಣವಾಗಿ ಅಡಗುವ ಮುನ್ನ ಎಚ್ಚೆತ್ತುಕೊಳ್ಳುವುದು ನಾಗರಿಕ ಸಮಾಜದ ತುರ್ತು ಅಗತ್ಯತೆ.
ನಾ ದಿವಾಕರ
- Login or register to post comments
- Email this page