You are hereಸುಖದ ಮೂಲ: ಇಂಗರ್‌ಸಾಲ್‌ರ ಒಂದು ಉಪನ್ಯಾಸ

ಸುಖದ ಮೂಲ: ಇಂಗರ್‌ಸಾಲ್‌ರ ಒಂದು ಉಪನ್ಯಾಸ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

(ರಾಬರ್ಟ್ ಜಿ. ಇಂಗರ್‌ಸಾಲ್ (೧೮೩೩-೯೯) ಅಮೆರಿಕದ ವಿಚಾರವಾದಿ, ವಕೀಲ, ವಾಗ್ಮಿ ಮತ್ತು ಸಿವಿಲ್ ಯುದ್ಧದ ಯೋಧ. ಕ್ರಿಶ್ಚಿಯಾನಿಟಿ ಮತ್ತು ಬೈಬಲ್‌ಗಳನ್ನು ವಿನೋದ ಮತ್ತು ಪರಿಹಾಸ್ಯಗಳ ಮೂಲಕ ಟೀಕಿಸುತ್ತಲೇ ಈತ ಮಾನವತಾವಾದವನ್ನು ತನ್ನ ಬರಹ ಮತ್ತು ಉಪನ್ಯಾಸಗಳ ಮೂಲಕ ಬೋಧಿಸಿದ. ಅವನ ’ಲಿಬರ್ಟಿ ಆಫ್ ಮ್ಯಾನ್, ವುಮಾನ್ ಅಂಡ್ ಚೈಲ್ಡ್’ ಎಂಬ ಉಪನ್ಯಾಸದ ಸಂಗ್ರಹಾನುವಾದ ಇಲ್ಲಿದೆ.)

ಮಹಿಳೆಯರೆ ಮತ್ತು ಮಹನೀಯರೆ,

ಈ ಪ್ರಪಂಚ ಎಷ್ಟು ದುಃಖವನ್ನು ಅನುಭವಿಸಿದೆ ಎಂದು ನೆನೆದಾಗ ನನಗೆ ಅಚ್ಚರಿಯಾಗುತ್ತದೆ. ನಮ್ಮ ಪಿತೃಗಳು ಎಷ್ಟು ಕಾಲ ಗುಲಾಮರಾಗಿದ್ದರು ಎಂದು ನೆನೆದಾಗ ನನಗೆ ದಿಗ್ಭ್ರಮೆಯಾಗುತ್ತದೆ. ಈ ಪ್ರಪಂಚ ಸಭ್ಯ ಮನುಷ್ಯರು ವಾಸಿಸಲು ೫೦ ವರ್ಷಗಳಿಂದ ಮಾತ್ರ ತಕ್ಕುದಾಗಿದೆ (ನಗು). ೧೮೦೮ಕ್ಕೆ ಮೊದಲು ಗ್ರೇಟ್ ಬ್ರಿಟನ್‌ನಲ್ಲಿ ಗುಲಾಮರ ಮಾರಾಟ ಕಾನೂನುಬದ್ಧವಾಗಿತ್ತು. ಅಲ್ಲಿಯವರೆಗೆ ಅದರ ನ್ಯಾಯಪೀಠವನ್ನು ಅಲಂಕರಿಸಿದ್ದ ನ್ಯಾಯಮೂರ್ತಿಗಳು ಮತ್ತು ಚರ್ಚಿನ ವೇದಿಕೆಯಿಂದ ವಿಶ್ವಪ್ರೇಮವನ್ನು ಬೋಧಿಸುತ್ತಿದ್ದ ಪಾದ್ರಿಗಳು ಗುಲಾಮರನ್ನು ಸಾಗಿಸುವ ಹಡಗುಗಳಲ್ಲಿ ಪಾಲುದಾರರಾಗಿದ್ದರು; ಕಡಲುಗಳ್ಳತನ ಮತ್ತು ಕೊಲೆಗಡುಕತನದಿಂದ ಬಂದ ಲಾಭದಿಂದ ವೈಭವದ ಜೀವನ ನಡೆಸುತ್ತಿದ್ದರು. ೧೮೦೮ರಲ್ಲಿ ಅಮೆರಿಕ ಇತರ ದೇಶಗಳೊಡನೆ ಗುಲಾಮರ ಮಾರಾಟವನ್ನು ಕಾನೂನು ಬಾಹಿರ ಮಾಡಿತು. ಆದರೆ ಅಮೆರಿಕ ಸಂಯುಕ್ತ ರಾಜ್ಯಗಳೊಂದಿಗೆ ಅದು ಕಾನೂನು ಬದ್ಧವಾಗಿಯೇ ಇತ್ತು. ೨೮ ಆಗಸ್ಟ್ ೧೮೩೩ಕ್ಕೆ ಮೊದಲು ಗ್ರೇಟ್ ಬ್ರಿಟನ್ ತನ್ನ ವಸಾಹತುಗಳಲ್ಲಿ ಗುಲಾಮರ ಮಾರಾಟವನ್ನು ರದ್ದುಪಡಿಸಿರಲಿಲ್ಲ. ೧ ಜನವರಿ ೧೮೬೩ರಲ್ಲಿ ಅಬ್ರಾಹಂ ಲಿಂಕನ್ ತನ್ನ ರಾಷ್ಟ್ರಕ್ಕೆ ಅಂಟಿಕೊಂಡು ಬಂದಿದ್ದ ಕಳಂಕವನ್ನು ತೊಡೆದುಹಾಕುವಲ್ಲಿ ಯಶಸ್ವಿಯಾದ. ನನ್ನ ಪ್ರಕಾರ ಅಮೆರಿಕದ ಅಧ್ಯಕ್ಷರಲ್ಲೆಲ್ಲಾ ಅಬ್ರಾಹಂ ಲಿಂಕನ್ ಒಬ್ಬ ಅತ್ಯಂತ ಮಹಾಪುರುಷ. ಆತನ ಸಮಾಧಿಯ ಮೇಲೆ ಈ ವಾಕ್ಯಗಳನ್ನು ಬರೆದರೆ ಅವು ಯಥಾರ್ಥವಾಗಿರುತ್ತವೆ: "ಪ್ರಪಂಚದ ಇತಿಹಾಸದಲ್ಲೆಲ್ಲಾ ಅನುಪಮ ವ್ಯಕ್ತಿಯಾದ ಆತ ಇಲ್ಲಿ ಮಲಗಿದ್ದಾನೆ. ಅತ್ಯಂತ ನಿರಂಕುಶ ಅಧಿಕಾರ ತನ್ನಲ್ಲಿದ್ದರೂ ಅದನ್ನು ದಯೆ ತೋರಿಸಲಲ್ಲದೆ ಬೇರಾವುದಕ್ಕೂ ಆತ ದುರುಪಯೋಗ ಪಡಿಸಿಕೊಳ್ಳಲಿಲ್ಲ."

ಎಷ್ಟು ದೀರ್ಘಕಾಲ ನಾವು ಗುಲಾಮ ಪದ್ಧತಿಗೆ ಜೋತುಬಿದ್ದಿದ್ದೆವು, ಎಷ್ಟು ದೀರ್ಘಕಾಲ ಗುಲಾಮರ ದುಡಿಮೆಗೆ ಅವರ ಬೆತ್ತಲೆ ಮೈಮೇಲೆ ಬೀಳುತ್ತಿದ್ದ ಚಾಟಿ ಏಟುಗಳೇ ಕಾನೂನುಬದ್ಧ ಪ್ರತಿಫಲವಾಗಿದ್ದುವು ಎಂಬುದನ್ನು ಯೋಚಿಸಿ. ಈ ದೇಶದಲ್ಲಿ ಯೇಸುವಿನ ಶಿಲುಬೆ ನಿರಪರಾಧಿಗಳನ್ನು ಚಾಟಿಯಿಂದ ದಂಡಿಸಲು ಕಟ್ಟುವ ಕಂಬವಾಗಿತ್ತು. ಈ ಪ್ರಪಂಚದ ಕಳೆದ ೫೦ ವರ್ಷಗಳಿಂದ ಮಾತ್ರ ಸಭ್ಯ ಮನುಷ್ಯರ ವಾಸಕ್ಕೆ ಯೋಗ್ಯವಾಗಿದೆ ಎಂಬ ನನ್ನ ಮಾತು ಸತ್ಯವಲ್ಲವೆ, ಈಗಲಾದರೂ ಹೇಳಿ?

ನನ್ನ ದೇಹದಲ್ಲಿರುವ ಪ್ರತಿಯೊಂದು ತೊಟ್ಟು ರಕ್ತದಿಂದಲೂ ನಾನು ಎಲ್ಲ ರೀತಿಯ ದಬ್ಬಾಳಿಕೆಯನ್ನು, ಸರ್ವಾಧಿಕಾರವನ್ನು ದ್ವೇಷಿಸುತ್ತೇನೆ. ನಾನು ಸ್ವಾತಂತ್ರ್ಯವನ್ನು ಪ್ರೀತಿಸುತ್ತೇನೆ. ಹಾಗೆಂದರೇನು? ಇನ್ನೊಬ್ಬರ ಭೌತಿಕ ಸುಖದಲ್ಲಿ ಮಧ್ಯಪ್ರವೇಶ ಮಾಡದೆ ಎನು ಬೇಕಾದರೂ ಮಾಡುವ ಹಕ್ಕು. ವಿಚಾರ ಸ್ವಾತಂತ್ರ್ಯದಲ್ಲಿ ಸರಿಯಾಗಿ ಯೋಚಿಸುವ ಹಕ್ಕಿನ ಜತೆಗೆ ತಪ್ಪಾಗಿ ಯೋಚಿಸುವ ಹಕ್ಕೂ ಸೇರಿದೆ. ಏಕೆ? ಏಕೆಂದರೆ ಸತ್ಯದ ಸಾಕ್ಷಾತ್ಕಾರಕ್ಕೆ ಅದೊಂದೇ ಮಾರ್ಗ. ಏಕೆಂದರೆ ನಮಗೆ ಮೊದಲೆ ಸತ್ಯ ಗೊತ್ತಿದ್ದರೆ ಯೋಚಿಸುವ ಅಗತ್ಯವೇ ಇಲ್ಲ (ನಗು). ಈ ಕೊಠಡಿ ಎಷ್ಟು ಉದ್ದ ಇದೆ ಎಂದು ನೀವು ನನ್ನನ್ನು ಕೇಳುತ್ತೀರಿ. ನಾನು ೧೦೦ ಅಡಿ ಎಂದು ಹೇಳುತ್ತೇನೆ. ಅದು ಒಂದು ಪಕ್ಷ ೧೦೫ ಅಡಿ ಇದ್ದರೆ ನಾನು ಅಪರಾಧ ಮಾಡಿದಂತಾಯಿತೆ? ನಾನು ನನಗೆ ಸಾಧ್ಯವಿದ್ದ ಅತ್ಯುತ್ತಮ ಊಹೆ ಮಾಡಿದೆ (ನಗು). ನೀವು ನನ್ನನ್ನು ಯಾವುದರ ಬಗ್ಗೆಯಾದರೂ ಕೇಳಿರಿ, ನಾನು ಅದನ್ನು ಪ್ರಾಮಾಣಿಕವಾಗಿ ಪರೀಕ್ಷಿಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ಆಗ ನಾನು ಏನು ಹೇಳಬೇಕು? ನನಗೆ ಸರಿ ಎನಿಸಿದ್ದನ್ನೆ ಅಥವಾ ನಿಮಗೆ ಸರಿ ಎನಿಸಿದ್ದನ್ನೆ? (ನಗು).

ಈಗ ನಾನು ಬೈಬಲ್ ಎಂಬ ಪುಸ್ತಕವನ್ನು ಓದಿದೆ ಎಂದು ತಿಳಿಯಿರಿ. ನಾನು ಅದನ್ನು ಓದಿ ಮುಗಿಸಿದಾಗ ಅದನ್ನು ಬರೆದವರು ಮನುಷ್ಯರು ಎಂಬ ತೀರ್ಮಾನಕ್ಕೆ ಬಂದೆ. ಅಲ್ಲಿಗೆ ನನ್ನ ಚರ್ಚಿನ ಒಬ್ಬ ಪಾದ್ರಿ ಬಂದು "ನೀನು ಆ ಪುಸ್ತಕವನ್ನು ಓದಿದೆಯಾ" ಎಂದು ಕೇಳುತ್ತಾನೆ. ನಾನು "ಓದಿದೆ" ಎನ್ನುತ್ತೇನೆ. "ಅದು ಭಗವಂತನ ಸ್ಫೂರ್ತಿಯಿಂದ ರಚಿತವಾದುದು ಎಂದು ತಿಳಿಯುವೆಯಲ್ಲವೆ?" ಎಂದು ಕೇಳುತ್ತಾನೆ. ನನ್ನೊಳಗೆ ನಾನು ಅಂದುಕೊಳ್ಳುತ್ತೇನೆ. ’ಇಲ್ಲ’ ಎಂದು ಹೇಳಿದರೆ ನನ್ನನ್ನು ಈ ಜಿಲ್ಲೆಯಿಂದ ಕಾಂಗ್ರೆಸ್‌ಗೆ ಕಳಿಸುವುದಿಲ್ಲ (ನಗು). ನಾನು ಈಗ ಪ್ರಾಮಾಣಿಕವಾಗಿ ಏನು ಮಾಡಬೇಕು? ಹೇಗೆ ಹೇಳಬೇಕು? "ನಾನು ಅದನ್ನು ಓದಿದೆ. ನಾನು ಅದರ ಬಗ್ಗೆ ಪ್ರಾಮಾಣಿಕವಾಗಿದ್ದೇನೆ. ನಾನು ಅದನ್ನು ನಂಬುವುದಿಲ್ಲ". ಇದು ನನ್ನ ಮನಸ್ಸಿನ ನಿಜವಾದ ಭಾವನೆಯಾಗಿದ್ದಾಗ ಹಾಗೆ ಹೇಳಬೇಕೆ ಅಥವಾ ಸುತ್ತಿ ಬಳಸಿ ಅದನ್ನು ನಂಬುವಂತೆ ನಟಿಸಿ ಆ ಮನುಷ್ಯನ ಗೌರವಕ್ಕೆ ಪಾತ್ರನಾಗಬೇಕೆ? ನನ್ನ ನೀಚ ಹೇಡಿತನವನ್ನು ನಾನೇ ದ್ವೇಷಿಸುವಂತೆ ಆಗಬೇಕೆ? ನಾನು ಬೈಬಲ್‌ನಲ್ಲಿ ನಂಬಿಕೆ ಇರುವ ಹೇಡಿಯಾಗುವುದಕ್ಕಿಂತ ನಂಬಿಕೆ ಇರದ ಪುರುಷನಾಗುತ್ತೇನೆ (ಚಪ್ಪಾಳೆ). ಅಂತಿಮ ತೀರ್ಪಿನ ದಿನ ಎನ್ನುವುದು ಏನಾದರೂ ಇದ್ದರೆ ನಾನು ಅಂದು ಎತ್ತರದ ಸ್ಥಾನದಲ್ಲಿದ್ದು ನನ್ನ ಮೊಕದ್ದಮೆ ಖರ್ಚಿಲ್ಲದೆ ಖುಲಾಸಾಗುವ ಸ್ಥಿತಿಯಲ್ಲಿರುತ್ತೇನೆ (ನಗು). ಇದು ಖಚಿತ. ನಾನು ನನಗೆ ಸರಿ ಎನಿಸಿದ್ದನ್ನು ನಯವಾಗಿ ಆದರೆ ಸ್ಪಷ್ಟವಾಗಿ ಹೇಳುತ್ತೇನೆ. ನಾನು ಅದನ್ನು ಹೇಳಿಯೇ ತೀರುತ್ತೇನೆ.

ಗಂಡಸರೇ ಗುಲಾಮರಾಗಿದ್ದಾಗ ಮಹಿಳೆಯರ ಸ್ಥಿತಿ ಹೇಗಿತ್ತು? ಮಹಿಳೆಯರು ಗುಲಾಮರ ಗುಲಾಮರಾಗಿದ್ದರು. ನನ್ನ ತಿಳುವಳಿಕೆಯ ಪ್ರಕಾರ ಮಹಿಳೆಯರು ತುಚ್ಛ ಗುಲಾಮಸ್ಥಿತಿಯಿಂದ ಮದುವೆಯಂತಹ ಸ್ಥಿತಿಗೆ ಬರಲು ಲಕ್ಷಾಂತರ ಯುಗಗಳೇ ಕಳೆದಿರಬೇಕು. ನಾನು ಮದುವೆಯನ್ನು ಮಾನವರ ಅತ್ಯಂತ ಪವಿತ್ರವಾದ ಸಂಸ್ಥೆಯೆಂದು ಪರಿಗಣಿಸುತ್ತೇನೆ. ಕುಟುಂಬ ಸಂಬಂಧವಿಲ್ಲದೆ ಜೀವಿಸಲು ತಕ್ಕುದಾದ ಬದಲಿ ವ್ಯವಸ್ಥೆ ಇನ್ನೊಂದಿಲ್ಲ. ಪ್ರತಿಯೊಂದು ಒಳ್ಳೆಯ ಸರ್ಕಾರ ಒಳ್ಳೆಯ ಕುಟುಂಬಗಳಿಂದ ಆಗಿದೆ. ಕುಟುಂಬವನ್ನು ನಾಶಮಾಡುವ ಯಾವುದೇ ಕ್ರಮ ಅದು ಶುದ್ಧ ಪೈಶಾಚಿಕವಾದುದು. ನಾನು ಮದುವೆಯಲ್ಲಿ ವಿಶ್ವಾಸವುಳ್ಳವನು. ಮದುವೆ ಎಂಬ ಸಂಸ್ಥೆಯನ್ನು ತಿರಸ್ಕರಿಸುವ ಉದ್ದ ಕೂದಲಿನ ಪುರುಷರ ಮತ್ತು ಮೋಟು ಕೂದಲಿನ ಸ್ತ್ರಿಯರ ಅಭಿಪ್ರಾಯಗಳನ್ನು ನಾನು ಅತ್ಯಂತ ತಿರಸ್ಕಾರದಿಂದ ಕಾಣುತ್ತೇನೆ (ಚಪ್ಪಾಳೆ ಮತ್ತು ನಗು). ನಾನು ಈ ಬಗ್ಗೆ ಬಹಳ ಆಲೋಚನೆ ಮಾಡಿದ್ದೇನೆ ಮತ್ತು ಇಲ್ಲಿ ಹೇಳಲು ಇಷ್ಟಪಡುತ್ತೇನೆ. ಪುರುಷನು ಹೊಂದಿರಬಹುದಾದ ಮಹತ್ವಾಕಾಂಕ್ಷೆ ಯಾವುದೆಂದರೆ: ಒಬ್ಬ ತೇಜಸ್ವಿಯಾದ ಮಹಿಳೆಯ ಪ್ರೇಮಕ್ಕೆ ಅರ್ಹವಾಗುವ ರೀತಿಯಲ್ಲಿ ಬದುಕುವುದು ಮತ್ತು ತನ್ನ ಹೃದಯ ಮತ್ತು ಬುದ್ಧಿಗಳನ್ನು ಉತ್ತಮಪಡಿಸಿಕೊಳ್ಳುವುದಾಗಿದೆ (ಚಪ್ಪಾಳೆ). ಒಬ್ಬ ಹುಡುಗಿಯು ಹೊಂದಿರಬಹುದಾದ ಉತ್ಕಟಾಕಾಂಕ್ಷೆ ಯಾವುದೆಂದರೆ ಒಬ್ಬ ಉಜ್ವಲವಾದ ಪುರುಷನ ಪ್ರೇಮ ಮತ್ತು ಗೌರವಕ್ಕೆ ಪಾತ್ರಳಾಗುವ ರೀತಿಯಲ್ಲಿ ತನ್ನನ್ನು ತಾನು ಸಿದ್ಧಪಡಿಸಿ ಕೊಳ್ಳುವುದಾಗಿದೆ (ಚಪ್ಪಾಳೆ). ಇದು ನನ್ನ ವಿಚಾರ. ಅದನ್ನು ಬಿಟ್ಟು ಜೀವನದಲ್ಲಿ ಬೇರೆ ಯಶಸ್ಸು ಇಲ್ಲ. ನೀವು ವಿಶ್ವದ ಸಾರ್ವಭೌಮರೇ ಆಗಿರಬಹುದು. ಆದರೆ ನೀವು ಒಂದು ಕೋಮಲ ಹೃದಯದ ಸಾರ್ವಭೌಮರಾಗುವುದು ಅದಕ್ಕಿಂತ ಉತ್ತಮ. ಒಬ್ಬ ಒಳ್ಳೆಯ ಮಹಿಳೆಯ ಪ್ರೇಮಕ್ಕೆ ಪಾತ್ರನಾಗಿರುವ ಪುರುಷ ನಿರ್ಗತಿಕನಾಗಿ ಚರಂಡಿಯಲ್ಲಿ ಬಿದ್ದು ಸತ್ತರೂ ಅವನ ಜೀವನ ಯಶಸ್ವಿಯಾಯಿತು ಎಂದು ನಾನು ಭಾವಿಸುತ್ತೇನೆ (ಚಪ್ಪಾಳೆ).

ತುಚ್ಛ ಗುಲಾಮತನದಿಂದ ಮದುವೆಯ ವ್ಯವಸ್ಥೆಗೆ ಬರಲು ಮಾನವನಿಗೆ ಲಕ್ಷಾಂತರ ವರ್ಷಗಳು ಬೇಕಾದವು. ಆದರೆ ಪ್ರತಿಯೊಂದು ಧರ್ಮವು ಪ್ರಪಂಚದ ಕಷ್ಟಕೋಟಲೆಗಳಿಗೆ ಮಹಿಳೆಯಲ್ಲಿ ಅಡಕವಾಗಿರುವ ದೆವ್ವವೇ ಕಾರಣವೆಂದು ಆರೋಪಿಸಿದೆ. ಅದೆಂಥ ಧೀರೋದಾತ್ತ ಸಂಗತಿ! ನಾನು ಎಲ್ಲ ತೊಂದರೆಗಳಿಂದ ಕೂಡಿದ ಈ ಪ್ರಪಂಚದಲ್ಲಿ, ನಾನು ಪ್ರೀತಿಸುವ ಮಹಿಳೆಯೊಡನೆ ವಾಸಿಸಲು ಇಷ್ಟಪಡುತ್ತೇನೆಯೇ ಹೊರತು ಪುರುಷರಲ್ಲದೆ ಬೇರಾರೂ ಇರದ ಸ್ವರ್ಗದಲ್ಲಿ ಇರಲು ಅಲ್ಲ (ನಗು ಮತ್ತು ಚಪ್ಪಾಳೆ).

ಈ ಜಗತ್ತಿನ ಎಲ್ಲ ತೊಂದರೆಗಳಿಗೆ ಮಹಿಳೆಯ ಅಪರಾಧವೇ ಕಾರಣವೆಂದು ಹೆಚ್ಚುಕಡಿಮೆ ಎಲ್ಲ ಧರ್ಮಗಳೂ ಅರೋಪಿಸಿವೆ. ನಾನು ಒಂದು ಪುಸ್ತಕದಲ್ಲಿ ಓದಿದೆ. ಅದರ ಪದಗಳಾಗಲಿ, ಯಥಾರ್ಥ ಭಾಷೆಯಾಗಲಿ ನನಗೆ ನೆನಪಿಲ್ಲ. ಆದರ್ರ್ ಅದರ ಸಾರಾಂಶ ನಾನು ಹೇಳಬಲ್ಲೆ. ದೇವರು ಒಂದು ಪ್ರಪಂಚ ಮತ್ತು ಒಬ್ಬ ಪುರುಷನನ್ನು ಸೃಷ್ಟಿಸಿದ ಅನಂತರ, ಅವನನ್ನು ಒಂದು ತೋಟದಲ್ಲಿ ಬಿಟ್ಟ. ಒಬ್ಬಂಟಿಯಾಗಿದ್ದ ಅವನು ರೈಲಿಗೆ ಕಾಯುತ್ತಿರುವವನಂತೆ ಅತ್ತ ಇತ್ತ ಸುತ್ತಾಡಿದ (ನಗು). ಅವನಿಗೆ ಯಾವುದರಲ್ಲೂ ಆಸಕ್ತಿ ಮೂಡಲಿಲ್ಲ. ಸುದ್ದಿ ಇಲ್ಲ, ಪತ್ರಿಕೆಗಳಿಲ್ಲ, ರಾಜಕೀಯವಿಲ್ಲ, ನೀತಿ ಇಲ್ಲ. ಇನ್ನೂ ದೆವ್ವ ಅವತರಿಸಿರಲಿಲ್ಲವಾದ್ದರಿಂದ ಪ್ರಾಯಶ್ಚಿತ್ತಕ್ಕೆ ಅವಕಾಶವೇ ಇಲ್ಲ (ನಗು). ದೇವರು ಅವನಿಗೊಬ್ಬಳು ಸಂಗಾತಿಯನ್ನು ಸೃಷ್ಟಿಸಲು ತೀರ್ಮಾನಿಸುವವರೆಗೆ ಅವನು ಹಾಗೇ ಸುತ್ತಾಡುತ್ತಿದ್ದ. ಈಗಾಗಲೇ ವಿಶ್ವ ಮತ್ತು ಮಾನವನ ಸೃಷ್ಟಿಗೆ ತನ್ನಲ್ಲಿದ್ದ ಎಲ್ಲ ಶೂನ್ಯವನ್ನೂ ವಿನಿಯೋಗಿಸಿದ್ದರಿಂದ ಮಹಿಳೆಯನ್ನು ಸೃಷ್ಟಿಸಲು ದೇವರು ಪುರುಷನ ಒಂದು ಭಾಗವನ್ನೇ ಅವಲಂಬಿಸಬೇಕಾಯಿತು (ನಗು). ಪುರುಷನಿಗೆ ಗಾಢನಿದ್ರೆ ಬರುವಂತೆ ಮಾಡಿದ ನಂತರ ಅವನ ಒಂದು ಪಕ್ಕೆಲುಬನ್ನು ತೆಗೆದುಕೊಂಡು ಅದರಿಂದ ಮಹಿಳೆಯನ್ನು ಸೃಷ್ಟಿಸಿದ (ನೆನಪಿಡಿ, ನಾನು ಈ ಕಥೆಯನ್ನು ನಿಜವೆಂದು ಹೇಳುತ್ತಿಲ್ಲ). ಅವನಿಗಿದ್ದ ಕಚ್ಚಾ ವಸ್ತುವಿನಿಂದ ಅವನು ಮಾಡಿದ ಕೆಲಸ ಅತ್ಯಂತ ಅದ್ಭುತವಾದುದೆಂದೇ ಹೇಳಬೇಕು (ನಗು). ಆ ಗಂಡಸು ಅವಳನ್ನು ಮೆಚ್ಚಿಕೊಂಡ. ಅವರಿಬ್ಬರು ಸಂಗಾತಿಗಳಾಗಿರಲು ತೊಡಗಿದರು.

ಅವರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದನ್ನು ಮೊದಲೇ ಹೇಳಲಾಗಿತ್ತಾದರೂ ಅವರು ಮಾಡಬಾರದು ಎಂದುದನ್ನೇ ಮಾಡಿದರು (ನಗು). ನಾನು ೧೫ ನಿಮಿಷದಲ್ಲೇ ಅದನ್ನು ಮಾಡುತ್ತಿದ್ದೆ (ನಗು). ಅವರು ಆ ಮರದ ಸೇಬನ್ನು ತಿಂದರು. ಅದಕ್ಕಾಗಿ ಅವರನ್ನು ಆ ತೋಟದಿಂದ ಹೊರತಳ್ಳಲಾಯಿತು(ನಗು). ಅಲ್ಲಿಂದ ದೆವ್ವದ ಆವಿಷ್ಕಾರ ಪ್ರಾರಂಭವಾಯಿತು. ದಡಾರ, ಸಿಡುಬು, ನಾಯಿಕೆಮ್ಮು, ಧನುರ್ವಾಯುಗಳು ಮನುಷ್ಯನ ಮೇಲೆ ದಾಳಿ ಮಾಡಲು ಆರಂಭಿಸಿದವು(ನಗು). ಗುಲಾಬಿಗಳಿಗೆ ಮುಳ್ಳು ಸೇರಿಕೊಂಡುವು. ಸರ್ಪಗಳಿಗೆ ವಿಷಪೂರಿತ ಹಲ್ಲು ಮೂಡಿದವು. ಜನರು ರಾಜಕೀಯ ಮತ್ತು ಧರ್ಮದ ಹೆಸರಿನಲ್ಲಿ ಜಗಳವಾಡಲು ತೊಡಗಿದರು. ಅಲ್ಲಿಂದ ಇಲ್ಲಿಯವರೆಗೆ ಪ್ರಪಂಚ ಅನೇಕ ತೊಂದರೆಗಳಿಗೆ ತವರುಮನೆಯಾಯಿತು. ಪ್ರಪಂಚದ ಎಲ್ಲ ಧರ್ಮಗಳಲ್ಲಿಯೂ ದುಷ್ಟತನದ ಬಗ್ಗೆ ಅಂತಹ ಒಂದು ಕತೆ ಇದ್ದೇ ಇದೆ.

ನಾನು ಅಂಥದೇ ಒಂದು ಕಥೆಯನ್ನು ಇನ್ನೊಂದು ಪುಸ್ತಕದಲ್ಲಿ ಓದಿದೆ. ಅದು ಮೇಲಿನ ಕಥೆಗಿಂತ ೪೦೦೦ ವರ್ಷ ಮೊದಲೇ ಬರೆದುದು ಎಂದು ಹೇಳಲಾಗುತ್ತಿದೆ. ಆದರೆ ಮೇಲಿನ ಕಥೆಯೇ ಮೊದಲು ಬರೆದು ಇದರಿಂದ ಇನ್ನೊಂದು ಕಥೆ ಹುಟ್ಟಿಕೊಂಡಿರಬೇಕು ಎಂದು ವ್ಯಾಖ್ಯಾನಕಾರರು ಅಭಿಪ್ರಾಯಪಡುತ್ತಾರೆ (ನಗು). ಅದೇನೇ ಇರಲಿ ೪೦೦೦ ವರ್ಷಗಳ ಅಂತರದಿಂದ ನಮ್ಮ ನಂಬಿಕೆಗಳು ಗಲಿಬಿಲಿಗೊಳ್ಳಬೇಕಾಗಿಲ್ಲ.

ಈ ಇನ್ನೊಂದು ಕಥೆಯ ಪ್ರಕಾರ ಪರಬ್ರಹ್ಮ ವಿಶ್ವವನ್ನು ಹಾಗೂ ಒಬ್ಬ ಪುರುಷ ಮತ್ತು ಒಬ್ಬಳು ಸ್ತ್ರೀಯನ್ನು ಸೃಷ್ಟಿಸಲು ತೀರ್ಮಾನಿಸಿದ. ಅದರಂತೆ ಆ ಪುರುಷ ಮತ್ತು ಸ್ತ್ರೀಯನ್ನು ಸಿಂಹಳ ದ್ವೀಪದಲ್ಲಿ ಇರಿಸಿದ. ಅದು ಅತ್ಯಂತ ಸುಂದರವಾದ ದ್ವೀಪವಾಗಿತ್ತು. ಆ ಹಕ್ಕಿಗಳು, ಆ ಮರಗಳು, ಆ ಹೂವುಗಳು, ಓಹ್! ಅದೊಂದು ಸ್ವಪ್ನಲೋಕ! ತಂಗಾಳಿಗೆ ಆ ಮರಗಳ ಕೊಂಬೆಗಳಿಂದ ವೀಣಾನಾದ ಹೊರಹೊಮ್ಮುತ್ತಿತ್ತು. ಆ ಇಬ್ಬರು ಅಲ್ಲಿ ಮದುವೆಗೆ ಮುಂಚೆ ಸ್ವಲ್ಪ ಕಾಲ ಸರಸ ಸಲ್ಲಾಪದಲ್ಲಿ ಕಳೆಯಲಿ ಎಂಬುದು ಪರಬ್ರಹ್ಮನ ಇಚ್ಛೆಯಾಗಿತ್ತು. ಇದನ್ನು ನಾನು ಓದಿದಾಗ ಮೇಲಿನ ಕಥೆಗಿಂತಲೂ ಇದು ಸುಂದರ ಹಾಗೂ ಉನ್ನತವಾಗಿ ನನಗೆ ಕಂಡಿತು. ಈ ಎರಡು ಕಥೆಗಳಲ್ಲಿ ಯಾವುದಾದರೂ ನಿಜವಿದ್ದ ಪಕ್ಷದಲ್ಲಿ ಅನಂತರದ ಕಥೆಯೇ ಅದಾಗಿರಲಿ ಎಂದು ನಾನು ಆಶಿಸುತ್ತೇನೆ. ಅಲ್ಲಿ ಕೋಗಿಲೆಗಳ ಕುಹೂ ಕುಹೂ, ಚುಕ್ಕಿಗಳ ಮಿನುಗು, ಹೂಗಳ ಸುಗಂಧದ ಜತೆಗೆ ಅವರು ಸರಸ ಸಲ್ಲಾಪವಾಡುತ್ತಾ ಪ್ರೇಮಪರವಶರಾದರು. ಅವರ ಸಲ್ಲಾಪವನ್ನು ಊಹಿಸಿಕೊಳ್ಳಿ. "ನೀನು ಅವಳನ್ನು ಹೇಗೆ ಸಲಹುತ್ತೀಯ" ಎಂದು ಕೇಳುವ ತಂದೆತಾಯಿಯರಾಗಲಿ, ಅತ್ತೆಮಾವಂದಿರಾಗಲಿ ಚಾಡಿಕಥೆಗಳನ್ನು ಹೆಣೆಯುವ ನೆರೆಹೊರೆಯವರಾಗಲಿ ಯಾರೂ ಅಲ್ಲಿರಲಿಲ್ಲ (ನಗು).

ಪರಬ್ರಹ್ಮ ಅವರಿಬ್ಬರ ಮದುವೆ ಮಾಡಿದ ನಂತರ ಅವರಿಗೆ ಹೀಗೆ ಹೇಳಿದ: "ನೀವು ಈ ದ್ವೀಪದಲ್ಲಿಯೇ ವಾಸಿಸಬೇಕು. ಇದನ್ನೆಂದೂ ಬಿಟ್ಟು ಹೋಗಕೂಡದು." ಸ್ವಲ್ಪ ಕಾಲದ ನಂತರ ಗಂಡಸು-ಅವನ ಹೆಸರು ಅಮೊಂಡ್-ತನ್ನ ಹೆಂಡತಿ ಹೇವಳಿಗೆ "ನಾನು ಸ್ವಲ್ಪ ಅತ್ತ ಇತ್ತ ಸುತ್ತಾಡುತ್ತೇನೆ" ಎಂದು ಹೇಳಿ ಉತ್ತರದ ಕಡೆಗೆ ಹೊರಟ. ಅಲ್ಲಿ ಕಿರಿದಾದ ಭೂಭಾಗವೊಂದು ಮುಖ್ಯ ಭೂಭಾಗವನ್ನು ದ್ವೀಪದೊಡನೆ ಒಟ್ಟುಗೂಡಿಸುವುದು ಕಂಡಿತು. ಆಗ ನಮ್ಮೊಡನೆ ಚೆಲ್ಲಾಟವಾಡುವ ದೆವ್ವ ಒಂದು ಬಿಸಿಲು ಕುದುರೆಯನ್ನು ನಿರ್ಮಿಸಿತು. ಅವನು ಮುಖ್ಯ ಭೂಭಾಗದ ಕಡೆಗೆ ನೋಡಿದ. ಅಲ್ಲಿ ಸುಂದರ ಗಿರಿಕಂದರಗಳು, ಬೆಳ್ಳಿಯಿಂದ ಆವೃತವಾದ ಪರ್ವತ ಶ್ರೇಣಿಗಳು ಮುಂತಾದುವನ್ನು ಕಂಡಕೂಡಲೆ ಅವನು ಹೇವಳ ಬಳಿಗೆ ಬಂದು "ಆ ದೇಶ ಇದಕ್ಕಿಂತ ಸಾವಿರಪಾಲು ಚೆನ್ನಾಗಿದೆ. ನಾವು ಅಲ್ಲಿಗೆ ವಲಸೆ ಹೋಗೋಣ" ಎಂದ. ಅವಳು ಎಲ್ಲ ಕಾಲದ ಮಹಿಳೆಯರಂತೆ "ಇಲ್ಲಿ ಎಲ್ಲ ಚೆನ್ನಾಗಿದೆ. ನಮಗೆ ಬೇಕಾದುದೆಲ್ಲಾ ಇದೆ. ಇಲ್ಲೇ ಇದ್ದುಬಿಡೋಣ" ಎಂದಳು. ಆದರೆ ಅವನು ಹೇಳಿದ: "ಇಲ್ಲ ನಾವು ಹೋಗೋಣ." ಕೊನೆಗೆ ಅವಳು ಸಮ್ಮತಿಸಿದಳು. ಅವರು ಕಿರಿದಾದ ಭೂಭಾಗಕ್ಕೆ ಬಂದಾಗ ಅವನು ಅವಳನ್ನು ಬೆನ್ನಮೇಲೆ ಹೊತ್ತುಕೊಂಡು ಮುಂದೆ ನಡೆದ. ಅವರು ಮುಖ್ಯ ಭೂಭಾಗದ ಮೇಲೆ ಕಾಲಿಟ್ಟ ಕೂಡಲೆ ಒಂದು ಸಿಡಿಲೆರಗಿತು. ಹಿಂತಿರುಗಿ ನೋಡಿದಾಗ ಕಿರಿದಾದ ಭೂಭಾಗ ಸಮುದ್ರದೊಳಗೆ ಮುಳುಗಿಹೋಗಿತ್ತು. ಅಲ್ಲಲ್ಲಿ ಬಂಡೆಗಲ್ಲುಗಳು ಮಾತ್ರ ಎದ್ದು ಕಾಣುತ್ತಿದ್ದವು. ಬಿಸಿಲು ಕುದುರೆ ಮಾಯವಾಗಿತ್ತು. ಅವರನ್ನು ಶಪಿಸುವ ಒಂದು ಧ್ವನಿ ಕೇಳಿಸಿತು. ಆಗ ಆ ಗಂಡಸು-"ಅವಳನ್ನು ನಾನು ಆಗಿನಿಂದ ಮೆಚ್ಚಿಕೊಂಡಿದ್ದೇನೆ. ನನಗೆ ಶಾಪಕೊಡು, ಅವಳಿಗೆ ಶಾಪಕೊಡಬೇಡ. ಅದು ನನ್ನ ತಪ್ಪು, ಅವಳದಲ್ಲ" ಎಂದ. ಪ್ರಪಂಚ ಉಗಮವಾದದ್ದು ಅಂತಹ ಮನುಷ್ಯನಿಂದ (ಚಪ್ಪಾಳೆ). ಪರಬ್ರಹ್ಮ ಹೇಳಿದ "ಅಗಲಿ ನಾನು ಅವಳನ್ನು ಉಳಿಸುತ್ತೇನೆ, ನಿನ್ನನ್ನಲ್ಲ." ಅವಳು ಅತ್ಯಂತ ಪ್ರೇಮಕಾತರಳಾಗಿ ಆರ್ದ್ರಹೃದಯದಿಂದ ಹೇಳಿದಳು "ನೀನು ಅವನನ್ನು ಉಳಿಸಲಾಗದಿದ್ದರೆ ನನ್ನನ್ನೂ ಉಳಿಸಬೇಡ. ಅವನನ್ನು ಬಿಟ್ಟು ನಾನು ಜೀವಿಸಲಾರೆ. ನಾನು ಅವನನ್ನು ಪ್ರೀತಿಸುತ್ತೇನೆ." ಆಗ ಬ್ರಹ್ಮ ಹೇಳಿದ "ನಾನು ನಿಮ್ಮಿಬ್ಬರನ್ನೂ ಉಳಿಸುತ್ತೇನೆ ಮತ್ತು ನಿಮ್ಮ ಬೆಳವಣಿಗೆಯನ್ನು ಗಮನಿಸುತ್ತೇನೆ." ಇದನ್ನು ಓದಿದಾಗಿನಿಂದ ನಾನು ಪರಬ್ರಹ್ಮನನ್ನು ಬಹುವಾಗಿ ಇಷ್ಟಪಡುತ್ತೇನೆ. ಎರಡು ಕಥೆಗಳಲ್ಲಿ ಇದು ಉತ್ತಮವಾದುದಲ್ಲದೆ? (ಚಪ್ಪಾಳೆ).

ಅದೇ ಪುಸ್ತಕದಿಂದ ನಾನು ಈ ವಿಧರ್ಮೀಯರ-ಯಾರನ್ನು ನಾವು ಸೈನಿಕರು ಮತ್ತು ಪಾದ್ರಿಗಳ ಮೂಲಕ ಮತಾಂತರಗೊಳಿಸಬೇಕೆಂದು ಪ್ರಯತ್ನಿಸುವೆವೋ ಅವರ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಈ ಪುಸ್ತಕದಲ್ಲಿ ಹೇಳಿದೆ: "ಪುರುಷ ಅಂದರೆ ಪರಾಕ್ರಮ, ಸ್ತ್ರೀ ಅಂದರೆ ಸೌಂದರ್ಯ, ಪುರುಷ ಅಂದರೆ ಧೈರ್ಯ, ಸ್ತ್ರೀ ಅಂದರೆ ಪ್ರೇಮ. ಒಬ್ಬ ಪುರುಷನು ಒಬ್ಬಳು ಸ್ತ್ರೀಯನ್ನು ಪ್ರೀತಿಸಿದಾಗ ಮತ್ತು ಒಬ್ಬಳು ಒಬ್ಬ ಪುರುಷನನ್ನು ಪ್ರೀತಿಸಿದಾಗ ದೇವತೆಗಳು ಸ್ವರ್ಗವನ್ನು ಬಿಟ್ಟು ಬಂದು ಅಂತಹ ಮನೆಯಲ್ಲಿ ಸಂತಸದಿಂದ ಹಾಡತೊಡಗುತ್ತಾರೆ." ಇಂತಹ ಜನರನ್ನು ನಾವು ಮತಾಂತರ ಗೊಳಿಸಲು ಪ್ರಯತ್ನಿಸುತ್ತೇವೆ. ಯೋಚಿಸಿ, ಇದನ್ನು ಓದಿದಾಗ ನಾನು ಹೇಳತೊಡಗಿದೆ; "ಪ್ರೇಮ ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ, ಉದಾತ್ತಗುಣ ನಮಗೆ ಮಾತ್ರ ಮೀಸಲಾಗಿಲ್ಲ". ಎಲ್ಲ ಕಾಲದಲ್ಲೂ ಕೆಲವರು ಉದಾತ್ತ ಮತ್ತು ಕೋಮಲ ಜೀವಿಗಳು ಅವರ ಸಮಕಾಲೀನರಿಗಿಂತ ಉನ್ನತ ಸ್ಥಾನಕ್ಕೆ ಏರಿದವರಾಗಿರುತ್ತಾರೆ.

ಸ್ನೇಹಿತರೆ, ಮಹಿಳೆ ಪುರುಷನಿಗೆ ಸಮಾನಳೆಂದು ನಾನು ನಂಬುತ್ತೇನೆ. ನನಗಿರುವ ಎಲ್ಲ ಹಕ್ಕುಗಳೂ ಅವಳಿಗಿದೆ. ಇನ್ನೂ ಒಂದು ಹಕ್ಕು ಅವಳಿಗೆ ಹೆಚ್ಚಾಗಿದೆ. ಅವಳು ತನ್ನ ರಕ್ಷಣೆಯನ್ನು ಪಡೆಯುವ ಹಕ್ಕು ಅದಾಗಿದೆ. ಇದು ನನ್ನ ಸಿದ್ಧಾಂತ. ನೀವು ಅವಳನ್ನು ಮದುವೆಯಾಗದ್ದೀರಿ. ನೀವು ಪ್ರೀತಿಸುವ ಹೆಣ್ಣನ್ನು ಸುಖಪಡಿಸಿ, ನೀವು ಪ್ರೀತಿಸುವ ಗಂಡಸನ್ನು ಸುಖಪಡಿಸಿ. ಯಾರು ತಮಗಾಗಿ ಮದುವೆಯಾಗುತ್ತಾರೋ ಅವರು ತಪ್ಪು ಮಾಡುತ್ತಾರೆ. ಯಾರು ಹೆಣ್ಣನ್ನು ಪ್ರೀತಿಸಿ ’ಅವಳನ್ನು ಸುಖಪಡಿಸುತ್ತೇನೆ’ ಎಂದು ಹೇಳುತ್ತಾರೋ ಅವರು ತಪ್ಪು ಮಾಡವುದಿಲ್ಲ. ಹಾಗೆಯೇ ಯಾವ ಮಹಿಳೆ ’ಅವನನ್ನು ನಾನು ಸುಖ ಪಡಿಸುತ್ತೇನೆ’ ಎಂದು ಹೇಳುವಳೋ ಅವಳು ತಪ್ಪು ಮಾಡುವುದಿಲ್ಲ. ಸುಖ ಪಡೆಯಲು ಇರುವುದೊಂದೇ ದಾರಿ; ಅದು ಇನ್ನೊಬ್ಬರನ್ನು ಸುಖಪಡಿಸುವುದು.

ಯಾರು ತನ್ನನ್ನು ತಾನೆ ಕುಟುಂಬದ ಮುಖ್ಯಸ್ಥ, ಕುಟುಂಬದ ’ಬಾಸ್’ ಎಂದು ಭಾವಿಸುತ್ತಾನೋ ಅಂಥವನನ್ನು ಕಂಡರೆ ನನಗೆ ಅಸಹ್ಯವಾಗುತ್ತದೆ (ನಗು). ನವದಂಪತಿಗಳು ಸರಸಸಲ್ಲಾಪವಾಡುತ್ತಾ ಬೆಳದಿಂಗಳಲ್ಲಿ ವಿಹರಿಸುವುದನ್ನು, ಹಕ್ಕಿಯೊಂದು ಸುಖದ ದುಃಖದ ಹಾಡನ್ನು ಹಾಡುವುದನ್ನು ಕಲ್ಪಿಸಿಕೊಳ್ಳಿ. ಈಗ ನಾವು ತೀರ್ಮಾನಿಸೋಣ, ಯಾರು ’ಬಾಸ್’ ಎಂಬುದನ್ನು (ನಗು). ನಾನು ಹೇಳುತ್ತೇನೆ: ಅದೊಂದು ಕೆಟ್ಟಪದ ಮತ್ತು ಕೆಟ್ಟ ಭಾವನೆ. ಬಾಸ್ ಆದವನು, ಕುಟುಂಬವನ್ನು ಆಳುವಾತ, ಮಾತನಾಡಲು ಬಾಯಿ ತೆರೆದ ಕೂಡಲೆ ಎಲ್ಲರೂ ನಿಶ್ಚಲರಾಗಿ ಅವನು ಘನವಾದ ವಿಚಾರವನ್ನು ಆಲಿಸಬೇಕು. ನಾನು ಅಂಥವನನ್ನು ಇಷ್ಟಪಡುವುದಿಲ್ಲ, ದಿನದ ಹೊಂಬೆಳಗನ್ನು ಕೊಲೆ ಮಾಡಲು, ಜೀವನದ ಸಂತಸವನ್ನು ದಮನ ಮಾಡಲು ಆತನಿಗೇನು ಹಕ್ಕಿದೆ? ನೀವು ಮನೆಗೆ ಹೋದಾಗ ಅಲ್ಲಿ ಬೆಳಕು ಇರುವುದನ್ನು ನೀವು ಅನುಭವಿಸಬೇಕು. ಅಲ್ಲಿ ಕತ್ತಲಿದ್ದರೆ ಕಿಟಕಿ ಬಾಗಿಲುಗಳಿಂದ ಬೆಳಕು ಚಿಮ್ಮಬೇಕು.

ಇನ್ನೊಂದು ವಿಷಯ ನಿಮಗೆ ಗೊತ್ತೆ? ನಾನು ಜಿಪುಣ ವ್ಯಕ್ತಿಯನ್ನು ಇಷ್ಟಪಡುವುದಿಲ್ಲ. ಕೆಲವು ಮಹನೀಯರು ತಮ್ಮ ಹೆಂಡತಿಯರನ್ನು ಹೃದಯ ಮತ್ತು ಮನಸ್ಸುಗಳಿಂದ ನಂಬುತ್ತಾರೆ. ಆದರೆ ಅವರ ಪಾಸುಬುಕ್ಕಿನಿಂದಲ್ಲ, ಒಂದು ಡಾಲರಿನಿಂದಲ್ಲ. ನಿಮ್ಮ ಹೆಂಡತಿ ಭಿಕ್ಷುಕಿಯಾಗಿರುವುದನ್ನು ಊಹಿಸಿಕೊಳ್ಳಿ! ಅವಳು ಪ್ರತಿನಿತ್ಯ ಒಂದು ಅಥವಾ ಎರಡು ಡಾಲರಿಗೆ ನಿಮ್ಮ ಬಳಿ ಕೈಚಾಚಿ ನಿಲ್ಲುವುದನ್ನು ಊಹಿಸಿಕೊಳ್ಳಿ! "ನಾನು ಕಳೆದ ವಾರ ಕೊಟ್ಟ ಡಾಲರ್ ಏನು ಮಾಡಿದೆ?" ನಿಮ್ಮ ಎದುರು ಭಯದಿಂದ ಕಂಗಾಲಾಗಿ ನಿಂತ ಹೆಂಡತಿಯನ್ನು ಊಹಿಸಿಕೊಳ್ಳಿ! ಭಿಕ್ಷುಕಿಯೂ, ಹೇಡಿಯೂ ಆದ ತಾಯಿಯಿಂದ ಎಂತಹ ಮಕ್ಕಳನ್ನು ನೀವು ನಿರೀಕ್ಷಿಸುತ್ತೀರಿ, ಯೋಚಿಸಿ! ನಿಮ್ಮ ಹತ್ತಿರ ಒಂದು ಡಾಲರ್ ಮಾತ್ರ ಇದೆ. ಅದನ್ನು ನೀವು ಖರ್ಚು ಮಾಡಬೇಕು ಎಂದು ಕಲ್ಪಿಸಿಕೊಳ್ಳಿ. ಅದನ್ನು ರಾಜನಂತೆ ಖರ್ಚುಮಾಡಿ (ನಗು). ಅದೊಂದು ಒಣಗಿದ ಎಲೆ, ನೀವು ಒಂದು ಕಾಡಿನ ಒಡೆಯರು ಎಂಬಂತೆ ಖರ್ಚು ಮಾಡಿ. ಅದನ್ನು ಖರ್ಚು ಮಾಡಬೇಕಾದ ರೀತಿ ಅದು. ನಾನು ಭಿಕ್ಷುಕನಾಗಿ ನನ್ನ ಕೊನೆಯ ಡಾಲರನ್ನು ರಾಜನಂತೆ ಖರ್ಚುಮಾಡಲು ಇಷ್ಟಪಡುತ್ತೇನೆಯೇ ಹೊರತು, ರಾಜನಾಗಿದ್ದು ನನ್ನ ಹಣವನ್ನು ಭಿಕ್ಷುಕನಂತೆ ಖರ್ಚುಮಾಡಲು ಅಲ್ಲ (ಚಪ್ಪಾಳೆ). ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸಾಧ್ಯವಾದ ಅತ್ಯುತ್ತಮವಾದದ್ದನ್ನು ಕೊಳ್ಳಿರಿ, ನೀವು ಸ್ವತಃ ಎಷ್ಟು ಸಾಧ್ಯವೋ ಅಷ್ಟ ಚೆನ್ನಾಗಿ ಕಾಣಲು ಯತ್ನಿಸಿ. ನಿಮ್ಮ ಪ್ರಣಯದ ದಿನಗಳಲ್ಲಿ ನೀವು ಹೇಗೆ ಕಾಣುತ್ತಿದ್ದಿರಿ ಯೋಚಿಸಿ. ನೀವು ಎಷ್ಟು ಅಸಡ್ಡಾಳವಾಗಿ ಕಂಡರೂ ನಿಮ್ಮ ಹೆಂಡತಿ ನಿಮ್ಮನ್ನು ಪ್ರೀತಿಸಬೇಕೆಂದು ನಿರೀಕ್ಷಿಸುವುದು ನಿಮ್ಮ ದುರಹಂಕಾರವಲ್ಲವೆ, ಯೋಚಿಸಿ. ನೀವು ನಿಮಗೆ ಸಾಧ್ಯವಿರುವಷ್ಟು ಪ್ರಯತ್ನಿಸಿದರೆ ಎಂತಹ ಮಹಿಳೆಯಾದರೂ ಸದಾ ನಿಮ್ಮ ನಂಬಿಕೆಗೆ ತಕ್ಕವಳಾಗಿರುತ್ತಾಳೆ.

ಕೆಲವರು ಹೇಳುತ್ತಾರೆ: "ನಿಮ್ಮ ಸಿದ್ಧಾಂತ ಶ್ರೀಮಂತರಿಗೆ ಅಮೋಘವಾಗಿದೆ, ಬಡವರಿಗಲ್ಲ" ಎಂದು. ನಾನು ಹೇಳುತ್ತೇನೆ, ಸರಾಸರಿ ಹೇಳುವುದಾದರೆ ಬಡವರ ಮನೆಗಳಲ್ಲಿ ಶ್ರೀಮಂತರ ಅರಮನೆಗಳಲ್ಲಿರುವುದಕ್ಕಿಂತ ಹೆಚ್ಚು ಪ್ರೇಮವಿದೆ. ಪ್ರೀತಿ ಇರುವ ಸಾಮಾನ್ಯ ಗುಡಿಸಲು ದೇವರು ಇರಲು ಯೋಗ್ಯವಾದುದು. ಪ್ರೀತಿ ಇರದ ಅರಮನೆ ಕಾಡುಮೃಗಗಳು ವಾಸಿಸಲು ತಕ್ಕ ನೆಲೆ. ಇದು ನನ್ನ ಸಿದ್ಧಾಂತ. ನೀವು ಇನ್ನೊಬ್ಬರಿಗೆ ಸಹಾಯ ಮಾಡಲಾರದಷ್ಟು ಬಡವರಲ್ಲ. ಒಳ್ಳೆಯ ಸ್ವಭಾವ ಪ್ರಪಂಚದಲ್ಲಿ ದೊರೆಯುವ ಅತ್ಯಂತ ಅಗ್ಗದ ವಸ್ತು. ಕೊಡುವ ಮತ್ತು ಪಡೆಯುವ ಇಬ್ಬರಿಗೂ ಸಮಾನವಾಗಿ ಲಾಭದಾಯಕವಾದುದು ಪ್ರೇಮ ಒಂದೇ (ಚಪ್ಪಾಳೆ).

ಮಹಿಳೆಯರು ಗುಲಾಮರಾಗಿದ್ದರೆ, ಇನ್ನು ಮಕ್ಕಳ ಬಗ್ಗೆ ನಾನು ಏನು ಹೇಳಲಿ? ತಮ್ಮ ತಂದೆಯ ಹೆಜ್ಜೆ ಸಪ್ಪಳವನ್ನು ಕೇಳಿ ಬಿಳಿಚಿಕೊಳ್ಳುವ ಮಕ್ಕಳು, ತಮ್ಮ ತಾಯಿಯ ಬಾಯಿಯಿಂದ ತಮ್ಮ ಹೆಸರನ್ನು ಕೇಳಿದ ಕೂಡಲೆ ಓಡಿಹೋಗುವ ಚಿಕ್ಕಮಕ್ಕಳು, ಬಡವರ ಮಕ್ಕಳು, ತಂದೆತಾಯಿಯರ ತಪ್ಪಿನಿಂದ ಹುಟ್ಟಿದ ಮಕ್ಕಳು, ಕ್ರೌರ್‍ಯಕ್ಕೊಳಗಾದ ಮಕ್ಕಳು-ಇವರ ಬಗ್ಗೆ ನನ್ನ ಹೃದಯ ಪರಿತಪಿಸುತ್ತದೆ. ನಮಗಿರುವ ಹಕ್ಕುಗಳೇ ಮಕ್ಕಳಿಗೂ ಇವೆ. ಅವರನ್ನು ನಾವು ಮಾನವಜೀವಿಗಳನ್ನಾಗಿ ಪರಿಗಣಿಸಬೇಕು. ಪ್ರೀತಿ, ಅನುಕಂಪ ಮತ್ತು ಕೋಮಲಭಾವದಿಂದ ಸಲಹಬೇಕು; ಕ್ರೌರ್‍ಯದಿಂದಲ್ಲ. ನಿಮ್ಮ ಚಿಕ್ಕಮಗು ಒಂದು ಸುಳ್ಳು ಹೇಳಿದರೆ ಪ್ರಪಂಚವೇ ಪ್ರಳಯವಾದಂತೆ ಅವನತ್ತ ಧಾವಿಸಬೇಡಿ. ಅವನೊಡನೆ ಪ್ರಾಮಾಣಿಕವಾಗಿ ವರ್ತಿಸಿ. ನಿಮಗಿದು ತಿಳಿದಿದೆಯೆ? ದರ್ಪದಿಂದ ಕೂಡಿದ ತಂದೆಗೆ ಸುಳ್ಳು ಹೇಳುವ ಮಕ್ಕಳಿರುತ್ತಾರೆ. ಒಂದು ಕಡೆ ದರ್ಪ, ಇನ್ನೊಂದು ಕಡೆ ದೌರ್ಬಲ್ಯ ಇವುಗಳ ನಡುವೆ ಸಳ್ಳು ಜನಿಸುತ್ತದೆ. ನೀವು ಚಿಕ್ಕಮಗುವಿನ ಕಡೆ ಬೆತ್ತ ಹಿಡಿದು ಧಾವಿಸಿದರೆ ಅವನು ಸಹಜವಾಗಿ ಸುಳ್ಳು ಹೇಳುತ್ತಾನೆ. ನಿಮ್ಮ ಮಕ್ಕಳಲ್ಲಿ ಒಬ್ಬನು ಸುಳ್ಳು ಹೇಳಿದಾಗ ಅವನೊಡನೆ ನೀವು ಪ್ರಾಮಾಣಿಕವಾಗಿ ನಡೆದುಕೊಳ್ಳಿ. ನೀವು ಅಂತಹ ನೂರಾರು ಸುಳ್ಳು ಹೇಳಿರುವುದಾಗಿ ಅವನಿಗೆ ತಿಳಿಸಿ (ನಗು). "ಅದು ಉತ್ತಮ ಮಾರ್ಗವಲ್ಲ" ಪ್ರಾಮಣಿಕತೆ ಅತ್ಯುತ್ತಮ ಮಾರ್ಗ, ನಾನು ಎರಡನ್ನೂ ಪ್ರಯತ್ನಿಸಿದ್ದೇನೆ" ಎಂದು ಅವನಿಗೆ ತಿಳಿಸಿ.

ನಿಮ್ಮ ಮಗು ಒಂದುತಪ್ಪು ಮಾಡಿದಾಗ ಅವನನ್ನು ನಿಮ್ಮ ತೋಳುಗಳಿಂದ ತಬ್ಬಿಕೊಳ್ಳಿ. ನಿಮ್ಮ ಎದೆಬಡಿತವು ಅವನ ಎದೆಬಡಿತದೊಡನೆ ಮಿಡಿಯುವುದನ್ನು ಅವನು ಅನುಭವಿಸಲಿ. ನೀವು ಪ್ರಾಮಾಣಿಕವಾಗಿ ಅವನನ್ನು ಪ್ರೀತಿಸುತ್ತೀರಿ ಎಂಬುದು ಅವನಿಗೆ ತಿಳಿಯಲಿ. ಕೆಲವು ಒಳ್ಳೆಯ ಕ್ರಿಶ್ಚಿಯನ್ನರು ತಮ್ಮ ಮಗು ತಪ್ಪು ಮಾಡಿದಾಗ ಅವನನ್ನು ಮನೆಯಿಂದ ಹೊರಗೆ ತಳ್ಳಿ "ಇನ್ನೆಂದೂ ಈ ಮನೆಯೊಳಗೆ ಕಾಲಿಡಬೇಡ" ಎಂದು ಅಬ್ಬರಿಸುತ್ತಾರೆ. ಯೋಚಿಸಿ, ಅಮೇಲೆ ಅವರೇ ಮಂಡಿಯೂರಿ ತಾವು ಮನೆಯಿಂದ ಹೊರದೂಡಿದ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ದೇವರಲ್ಲಿ ಮೊರೆ ಇಡುತ್ತಾರೆ. ನಾನೆಂದೂ ನನ್ನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ದೇವರನ್ನು ಬೇಡುವುದಿಲ್ಲ. ನನಗೆ ಸಾಧ್ಯವಾದ ಮಟ್ಟಿಗೆ ನಾನೇ ಆ ಕೆಲಸ ಮಾಡದೆ ದೇವರ ಮೇಲೆ ಆ ಹೊರೆ ಹೊರಿಸುವುದಿಲ್ಲ (ನಗು). ನಾನು ನನ್ನ ಮಕ್ಕಳಿಗೆ ಏನು ಹೇಳುತ್ತೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ: "ನೀವು ಎಲ್ಲಿ ಬೇಕಾದರೂ ಹೋಗಿ, ಏನಾದರೂ ಅಪರಾಧ ಮಾಡಿ, ಎಷ್ಟೇ ಆಳವಾದ ಪ್ರಪಾತಕ್ಕೆ ನೀವು ಬೀಳಿರಿ, ನನ್ನ ಮನೆಯ ಬಾಗಿಲು, ನನ್ನ ತೋಳು, ನನ್ನ ಹೃದಯ ನಿಮಗಾಗಿ ಸದಾ ತೆರೆದಿರುತ್ತದೆ. ನಾನು ಜೀವಿಸಿರುವವರೆಗೂ ನಿಮಗೆ ಇಂತಹ ಇನ್ನೊಬ್ಬ ಸ್ನೇಹಿತ ಸಿಗುವುದಿಲ್ಲ."

ನಿಮ್ಮಲ್ಲಿ ಯಾರಾದರೂ ನನ್ನ ಈ ಮಾತನ್ನು ಕೇಳಿದ ಮೇಲೆಯೂ ಮಗುವನ್ನು ಹೊಡೆಯುವ ನಿರೀಕ್ಷೆ ಇದ್ದರೆ, ಕೆಟ್ಟ ಕೋಪದಿಂದ ಸಿಟ್ಟಾದ ನಿಮ್ಮ ಮುಖ, ನೀರು ತುಳುಕುವ ಕಣ್ಣುಗಳು ಮತ್ತು ಹೆದರಿಕೆಯಿಂದ ನಡುಗುವ ಗಲ್ಲದಿಂದ ಕೂಡಿದ ನಿಮ್ಮ ಮಗುವಿನ ಮುಖ ನಿಮ್ಮ ಕಲ್ಪನೆಯ ಕಣ್ಣ ಮುಂದೆ ಬರಲಿ. ಈಗ ಯೋಚಿಸಿ. ನಾನು ಹೇಳುತ್ತೇನೆ, ಇದು ತಪ್ಪು, ಮಕ್ಕಳನ್ನು ಬೆಳೆಸುವ ವಿಧಾನ ಇದಲ್ಲ. ನಿಮ್ಮ ಮನೆಯನ್ನು ಸುಖಮಯವನ್ನಾಗಿ ಮಾಡಿ. ಅವರೊಡನೆ ಪ್ರಾಮಾಣಿಕವಾಗಿರಿ. ಅವರಿಗೆ ಸ್ವಲ್ಪ ಸ್ವಾತಂತ್ರ್ಯ ಕೊಡಿ. ಆಗ ನೀವು ಅವರನ್ನು ಮನೆಯಿಂದ ಹೊರದೂಡುವ ಅವಕಾಶ ಬರುವುದಿಲ್ಲ. ಅವರು ಅಲ್ಲಿಯೇ ಇರಲು ಇಷ್ಟಪಡುತ್ತಾರೆ. ಮನೆಯನ್ನು ಸಂತೋಷದಾಯಕವನ್ನಾಗಿ ಮಾಡುತ್ತಾರೆ.

ಸ್ನೇಹಿತರೆ ನನ್ನ ವಿಚಾರಗಳು ಅದ್ಭುತವಾದುವೇನೂ ಅಲ್ಲ. ಆದರೆ ಅವು ನನ್ನ ಪ್ರಾಮಾಣಿಕ ವಿಚಾರಗಳು. ಇಂದಿನ ಪ್ರತಿಯೊಂದು ಮತ ಸಿದ್ಧಾಂತಗಳು ಸಂಕೋಲೆ ಮತ್ತು ಚಾಟಿಗಳನ್ನು ಪ್ರಮುಖವಾಗಿ ಹೊಂದಿವೆ. ಅವು ನನಗೆ ಇಷ್ಟವಿಲ್ಲ. ಸ್ವತಂತ್ರ ದುಡಿಮೆ ನಮಗೆ ಸಂಪತ್ತನ್ನು ನೀಡುತ್ತದೆ. ಆದರೆ ಹೇಗೆ? ಸ್ವತಂತ್ರ ಮೆದುಳು ಸ್ವತಂತ್ರ ಕೈಯೊಡನೆ ಪಾಲುದಾರನಾಗುತ್ತದೆ. ಅದಕ್ಕಾಗಿ, ಒಬ್ಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಕ್ಕಳಿಗಾಗಿ ದುಡಿಯುವಾಗ ಹೆಚ್ಚು ಕೆಲಸವನ್ನು ಕಡಿಮೆ ವೇಳೆಯಲ್ಲಿ ಮಾಡುವುದು ಹೇಗೆಂಬುದು ಸ್ವಾತಂತ್ರ್ಯದ ಸಮಸ್ಯೆಯಾಗುತ್ತದೆ. ಆದರೆ ಹೆಚ್ಚು ವೇಳೆಯಲ್ಲಿ ಅತ್ಯಂತ ಕಡಿಮೆ ಕೆಲಸ ಮಾಡುವುದು ಹೇಗೆಂಬುದು ಗುಲಾಮ ಪದ್ಧತಿಯ ಸಮಸ್ಯೆ. ಗುಲಾಮಗಿರಿಯೇ ಬಡತನ, ಸ್ವಾತಂತ್ರ್ಯವೇ ಸಂಪತ್ತು. ವೈಚಾರಿಕತೆಗೂ ಅದು ಅನ್ವಯವಾಗುತ್ತದೆ. ಮುಕ್ತ ವಿಚಾರವು ನಮಗೆ ಸತ್ಯವನ್ನು ಒದಗಿಸುತ್ತದೆ. ಗುಲಾಮ ಪದ್ಧತಿಯನ್ನು ಪೋಷಿಸುವ ಒಡೆಯನಿಗೂ ಗುಲಾಮರಿಗೂ ಇರುವಂತಹ ಸಂಬಂಧವೇ ಮುಕ್ತ ವಿಚಾರವನ್ನು ವಿರೋಧಿಸುವ ವ್ಯಕ್ತಿಗೂ ಅವನ ಆಳ್ವಿಕೆಯ ಪ್ರಜೆಗಳಿಗೂ ಇರುತ್ತದೆ. ಮುಕ್ತವಿಚಾರವು ನಮಗೆ ಸಂಪತ್ತನ್ನು ನೀಡುತ್ತದೆ. ಮುಕ್ತ ವಿಚಾರವಂತಿಕೆಯ ಒಂದು ತಲೆಮಾರು ಸಹ ಇನ್ನು ಕಳೆದಿಲ್ಲ. ಭವಿಷ್ಯತ್ತಿನಲ್ಲಿ ಏನಿದೆಯೋ ನನಗೆ ತಿಳಿಯದು. ಆದರೆ ಪುರುಷ, ಸ್ತ್ರೀ ಮತ್ತು ಮಗುವಿನ ಸ್ವಾತಂತ್ರ್ಯಕ್ಕೆ ಮಿಗಿಲಾದುದು ಇನ್ನೊಂದು ಇರಲಾರದು ಎಂದು ನಾನು ಭಾವಿಸುತ್ತೇನೆ.