You are hereವೇದಾಂತ ರೆಜಿಮೆಂಟ್

ವೇದಾಂತ ರೆಜಿಮೆಂಟ್


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಬ್ರಿಟಿಷರು ಸುಮಾರು ಇನ್ನೂರು ವರ್ಷ ಭಾರತವನ್ನಾಳಿದರು. ಭಾರತೀಯರ ಸಮ್ಮತಿಯಿಂದಲೇ ಅವರು ಅಷ್ಟುಕಾಲ ಆಳಲು ಸಾಧ್ಯವಾಯಿತು. ೧೯೩೦ರ ಸುಮಾರಿನಲ್ಲಿ ಭಾರತದ ಜನಸಂಖ್ಯೆ ೩೫ ಕೋಟಿ ಇದ್ದಾಗ ಬ್ರಿಟಿಷ್ ಸೈನಿಕರ ಸಂಖ್ಯೆ ೫೫ ಸಾವಿರದಿಂದ ೬೦ ಸಾವಿರ ಮಾತ್ರ ಇತ್ತು. ಒಂದು ಕಾಲಕ್ಕೆ ಆ ಸಂಖ್ಯೆ ಕೇವಲ ೧೫ ಸಾವಿರದಷ್ಟು ಕಿರಿದಾಗಿತ್ತು. ೧೫ ಲಕ್ಷ ಜನಸಂಖ್ಯೆಯ ಒಂದು ಜಿಲ್ಲೆಯನ್ನು ಕೇವಲ ಇಬ್ಬರು ಮೂವರು ಬ್ರಿಟಿಷ್ ಅಧಿಕಾರಿಗಳು ತಮ್ಮ ಅಂಕೆಯಲ್ಲಿಟ್ಟುಕೊಂಡು ಆಡಳಿತ ನಡೆಸಿದರು. ಅದು ಹೇಗೆ ಸಾಧ್ಯವಾಯಿತು?

ಅದಕ್ಕೆ ಅನೇಕ ರಾಜಕೀಯ ಕಾರಣಗಳಿರಬಹುದಾದರೂ ಅಷ್ಟೇ ಮಹತ್ತರವಾದ ಒಂದು ಸಾಂಸ್ಕೃತಿಕ ಕಾರಣವನ್ನು ನಿರಂಜನ್‌ಧರ್ ತಮ್ಮ "ವೇದಾಂತ ಮತ್ತು ಬಂಗಾಳದ ಪುನರುಜ್ಜೀವನ" ಎಂಬ ಕೃತಿಯಲ್ಲಿ ಗುರುತಿಸಿದ್ದಾರೆ. "ಕೋಲ್ ಬ್ರೂಕ್ ಮತ್ತು ಮ್ಯಾಕ್ಸ್ ಮುಲ್ಲರ್ ಅವರು ಅನೇಕ ಸೈನಿಕ ದಳಗಳಿಗಿಂತ ಹೆಚ್ಚು ಮೌಲಿಕವಾದ ಸೇವೆಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಿದ್ದಾರೆ" ಎಂದು ಆಗ ಭಾರತದ "ಸೆಕ್ರಟರಿ ಆಫ್ ಸ್ಟೇಟ್" ಆಗಿದ್ದ ಲಾರ್ಡ್ ಡರ್ಬಿ ಹೇಳಿರುವ ಮಾತಿನಲ್ಲಿ ವಿಶೇಷ ಅರ್ಥವಿದೆ.

ಭಾರತೀಯ ಸಂಸ್ಕೃತಿಯ ಘನ ವಿದ್ವಾಂಸರೆಂದು ಪ್ರಸಿದ್ಧರಾದ ಆ ಇಬ್ಬರು ಮಹನೀಯರು-ಭಾರತಕ್ಕಲ್ಲ, ಭಾರತ ಸರ್ಕಾರಕ್ಕೆ-ಸಲ್ಲಿಸಿದ ಅಂತಹ ಅಪೂರ್ವ ಸೇವೆ ಯಾವುದು? ಅವರು ಭಾರತೀಯ ತತ್ತ್ವಶಾಸ್ತ್ರದ ಪರಂಪರೆಯಲ್ಲಿ ಎದ್ದು ಕಾಣುವ ಎರಡು ಪರಸ್ಪರ ವಿರುದ್ಧ ಪ್ರವೃತ್ತಿಗಳಾದ ಭಾವನಾವಾದ (ಐಡಿಯಾಲಿಸಮ್) ಮತ್ತು ಭೌತವಾದ (ಮೆಟೀರಿಯಲಿಸಂ)ಗಳಲ್ಲಿ ಕೊನೆಯದನ್ನು ಬದಿಗೊತ್ತಿ ಮೊದಲನೆಯದನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ಯಶಸ್ವಿಯಾದರು. ವೇದಾಂತ, ನಿಜವಾದ ಭಾರತೀಯ ಪರಂಪರೆಯನ್ನು ಪ್ರತಿನಿಧಿಸುತ್ತದೆ ಎಂದು ಕೋಲ್ ಬ್ರೂಕ್ ತನ್ನ ’ವೇದಗಳು ಅಥವಾ ಹಿಂದುಗಳ ಪವಿತ್ರ ರಚನೆಗಳನ್ನು ಕುರಿತ ಪ್ರಬಂಧ’ ಎಂಬ ಪುಸ್ತಕದಲ್ಲಿ ಪ್ರತಿಪಾದಿಸಿದ. ಜನರ ಆಶೋತ್ತರಗಳನ್ನು ತಣಿಸಬಲ್ಲ ಇತರ ಸಿದ್ಧಾಂತಗಳೆಲ್ಲ ಹೊರಗಿನಿಂದ ಬಂದು ಸೇರಿದವು. ಅವು ಭಾರತಕ್ಕೆ ಪ್ರಸ್ತುತವಲ್ಲ ಎಂದು ಸಾರಿದ. ಭೌತವಾದದ ಪರಿಚಯ ಅವನಿಗಿದ್ದರೂ ಅದನ್ನು ಕಡೆಗಣಿಸಿ, ವೇದಾಂತವನ್ನು ಎತ್ತಿ ಹಿಡಿದು ಅದನ್ನು ಉನ್ನತ ಪೀಠದಲ್ಲಿ ಕೂಡಿಸಿದ.

"ಪ್ರಾಚ್ಯದ ಪವಿತ್ರ ಪುಸ್ತಕಗಳು" ಎಂಬ ಮಾಲೆಯಲ್ಲಿ ಮ್ಯಾಕ್ಸ್ ಮುಲ್ಲರ್ ೫೦ ಸಂಪುಟಗಳ ಧಾರ್ಮಿಕ ಸಾಹಿತ್ಯವನ್ನು ಭಾಷಾಂತರ ಮಾಡಿಸಿ, ಸಂಪಾದಿಸಿ, ಪ್ರಚುರ ಪಡಿಸಿದ. ವೇದಾಂತಕ್ಕೆ ಆಧಾರವಾದ ಉಪನಿಷತ್ತುಗಳ ಮಾತುಗಳು ವಾಸ್ತವವಾಗಿ ತತ್ತ್ವ ಶಾಸ್ತ್ರ ಎಂಬ ಹೆಸರಿಗೆ ಅರ್ಹವೇ ಅಲ್ಲ. ಅವುಗಳಲ್ಲಿರುವುದು ತಾತ್ತ್ವಿಕ ಹಾಡುಗಳೇ ಹೊರತು ಕ್ರಮಬದ್ಧ ಸಿದ್ಧಾಂತಗಳಲ್ಲ ಎಂದು ಅವನು ಭಾವಿಸಿದ್ದರೂ ಅವುಗಳ ಸಂಪಾದನೆ ಮತ್ತು ಪ್ರಕಟಣೆಗಾಗಿ ತನ್ನ ಜೀವನವನ್ನೇ ಸವೆಸಿದ.

ಹಾಗಾದರೆ ವೇದಾಂತದ ತಿರುಳೇನು? ಅನೇಕ ಸೈನಿಕ ರೆಜಿಮೆಂಟುಗಳನ್ನು ಮೀರಿಸುವ ಶಕ್ತಿ ಅದರಲ್ಲೇನಿದೆ? ತರ್ಕಕ್ಕೆ ಒಳಗಾಗದ ನಾಲ್ಕು ಸಿದ್ಧಾಂತಗಳು ವೇದಾಂತದ ಜೀವಾಳವಾಗಿವೆ: ೧. ತರ್ಕ, ವೈಚಾರಿಕತೆಯಿಂದ ಸತ್ಯಾನ್ವೇಷಣೆ ಸಾಧ್ಯವಿಲ್ಲ. ೨. ಜೀವನವೇ ಒಂದು ಬಂಧನ ಅಥವಾ ಮಾಯೆ, ಅದರಿಂದ ಬಿಡುಗಡೆ ಹೊಂದುವುದೇ ಮನುಷ್ಯ ಜನ್ಮದ ಗುರಿ. ೩. ತನ್ನ ಹಿಂದಿನ ಜನ್ಮದ ಕರ್ಮಾನುಸಾರ ಮನುಷ್ಯ ಈ ಜನ್ಮದಲ್ಲಿ ಸುಖದುಃಖಗಳನ್ನು ಪಡೆಯುತ್ತಾನೆ ಮತ್ತು ೪. ಈ ಜನ್ಮದಲ್ಲಿ ಜಾತಿ ನಿಯಮಗಳನ್ನು ಅಂದರೆ ಮನುಷ್ಯರೆಲ್ಲ ಒಂದೇ ಅಲ್ಲ, ಅವರಲ್ಲಿ ಮೇಲು ಕೀಳುಗಳುಂಟು, ಮೇಲಿನ ಕೆಲವರ ಸುಖಕ್ಕಾಗಿ ಕೆಳಗಿನ ಅನೇಕರು ದುಡಿಯುವುದೇ ಧರ್ಮ ಎಂದು-ಒಪ್ಪಿಕೊಂಡು ಅದರಂತೆ ನಡೆದರೆ ಮುಂದಿನ ಜನ್ಮದಲ್ಲಿ ಆ ವ್ಯಕ್ತಿ ಉತ್ತಮ ಸ್ಥಿತಿಯನ್ನು ಪಡೆಯುತ್ತಾನೆ. ಇವೇ ವೇದಾಂತದ ಸಿದ್ಧಾಂತಗಳು.

ಭಾರತೀಯರ ಪಾಲಿಗೆ ಆತ್ಮಹತ್ಯಾಕಾರಕವಾದ ಈ ನಂಬಿಕೆಗಳು ಪಾಶ್ಚಾತ್ಯರಿಗೆ ವರವಾಗಿ ಪರಿಣಮಿಸಿದ್ದರೆ ಆಶ್ಚರ್ಯವಿಲ್ಲ. ಅವನ್ನು ಕಂಡುಹಿಡಿದ ಕೋಲ್‌ಬ್ರೂಕ್ ಮತ್ತು ಮ್ಯಾಕ್ಸ್‌ಮುಲ್ಲರ್ ಅಂದು ಭಾರತದ "ಸೆಕ್ರಟರಿ ಆಫ್ ಸ್ಟೇಟ್" ಆಗಿದ್ದ ಲಾರ್ಡ್‌ಡರ್ಬಿಗೆ ವಿನೂತನ ಸಮ್ಮೋಹನಾಸ್ತ್ರಗಳನ್ನು ನೀಡಿದ ದೇವತೆಗಳಂತೆ ಕಂಡಿರಬೇಕು. ಭಾರತೀಯರನ್ನು ತಮ್ಮ ದಾಸ್ಯದಲ್ಲಿ ಮುಂದುವರಿಸಿ ಕೊಂಡು ಹೋಗಲು ಪಾಶ್ಚಾತ್ಯರಿಗೆ ಇವಕ್ಕಿಂತ ಪ್ರಬಲ ಅಸ್ತ್ರಗಳು ಮತ್ತೆಲ್ಲೂ ದೊರೆಯುತ್ತಿರಲಿಲ್ಲ.

ಇಂದಿಗೂ ಸಹ ಆ ವೇದಾಂತ, ಭಾರತದ ಆಡಳಿತ ವರ್ಗಗಳಿಗೆ ಅನೇಕ ಸೈನಿಕ ದಳಗಳಿಗಿಂತ ಮಿಗಿಲಾದ ಸೇವೆಯನ್ನು ಸಲ್ಲಿಸುತ್ತಲೇ ಇದೆ. ಆ ಸೈನ್ಯದಲ್ಲಿ ದಳಪತಿಗಳು, ದಂಡನಾಯಕರು, ಅತಿರಥಮಹಾರಥರು ಯಾರೆಂದರೆ ಮಠಾಧಿಪತಿಗಳು, ಜಗದ್ಗುರುಗಳು ಹಾಗೂ ಬಾಬಾ ಬ್ರಹ್ಮಚಾರಿಗಳು. ಅಂದು ಕೋಲ್‌ಬ್ರೂಕ್ ಮತ್ತು ಮ್ಯಾಕ್ಸ್ ಮುಲ್ಲರ್‌ಗಳಿಗೆ ಡರ್ಬಿ ನೀಡಿದ ಗೌರವದ ಉದ್ದೇಶ, ಇಂದು ಭಾರತದ ಪ್ರಧಾನಮಂತ್ರಿ, ರಾಷ್ಟ್ರಪತಿಗಳು ತಿರುಪತಿಗೆ ಪ್ರದಕ್ಷಿಣೆ ಹಾಕುವುದು ಶಂಕರಾಚಾರ್ಯರಿಗೆ ಸಾಷ್ಟಾಂಗ ಮಾಡುವುದು ಇತ್ಯಾದಿಗಳ ಉದ್ದೇಶ ಒಂದೇ ಅಲ್ಲವೆ?

ಮನುಷ್ಯ ಮನುಷ್ಯರಲ್ಲಿ ಅಂತರಗಳನ್ನು ಹುಟ್ಟುಹಾಕಿ, ಬಹುಜನರನ್ನು ತುಳಿದು ಸುಲಿಗೆ ಮಾಡುವ ಸಲುವಾಗಿಯೇ ಮೇಲು ವರ್ಗದ ಸ್ವಾರ್ಥಿಗಳು ವೇದಾಂತವನ್ನು ಸೃಷ್ಟಿಸಿದರು. ನಮಗೆ ಇಂದು ಬೇಕಾಗಿರುವುದು ವೇದಾಂತ ನೀಡುವ ಮುಕ್ತಿಯಲ್ಲ. ವೇದಾಂತದಿಂದ ಮುಕ್ತಿ ಎಂಬುದನ್ನು ನಾವು ಎಷ್ಟು ಬೇಗ ಅರ್ಥ ಮಾಡಿಕೊಂಡರೆ ಅಷ್ಟು ಒಳ್ಳೆಯದು. ಆಧುನಿಕ ಜಗತ್ತಿನಲ್ಲಿ ಸರೀಕ ರಾಷ್ಟ್ರಗಳೊಡನೆ ಸರೀಕವಾಗಿ ಬಾಳಲು ಇಂದು ನಮಗೆ ಜಾತ್ಯತೀತ, ಮಾನವೀಯ ಹಾಗೂ ವೈಜ್ಞಾನಿಕ ಸಿದ್ಧಾಂತಗಳು ಅತ್ಯಾವಶ್ಶಕ. ಪ್ರಚಲಿತ ಸವಾಲುಗಳನ್ನು ಎದುರಿಸಲು ನಮಗೆ ಇಂದು ಬೇಕಾಗಿರುವುದು ಸ್ವತಂತ್ರ, ಧೀಮಂತ ಹಾಗೂ ಕ್ರಿಯಾಶೀಲ ವಿಚಾರಗಳೇ ಹೊರತು ಪಲಾಯನ ಸೂತ್ರಗಳಲ್ಲ.