You are hereಹಂಬಲ

ಹಂಬಲ


ದಟ್ಟ ಕಾಡುಗಳಲ್ಲಿ
ಅಲೆವ ಚಿರತೆಗಳೆ
ಮರಮರದ ಟೊಂಗೆಯ
ಉರಿವ ಕಿಚ್ಚುಗಳೆ

ಅಪರೂಪಕ್ಕೊಮ್ಮೆ ಅವತರಿಸಿ ಬರುವ
ಮುಗಿಲ ತುಣುಕುಗಳೆ
ಕೊಚ್ಚೆ ಕಸಕಡ್ಡಿಯನು ಕೊಚ್ಚಿ ಹಾಕಲು ಹೊರಟ
ಪುಟ್ಟ ಹಳ್ಳಗಳೆ

ಜನರ ಎದೆಗಳ ಮೇಲೆ ಕುಣಿವ ಬೂಟಿನ ಎದುರು
ಸಿಡಿದ ಮಾತುಗಳೆ
ಮುರುಕು ಜೋಪಡಿಯಲ್ಲಿ ಮುದುಡಿ ಬಿದ್ದಿರುವ
ಹಲವು ಚೂರಿಗಳೆ

ಬನಬನದ ಮೊಗ್ಗುಗಳು ಹೂವಾಗಲಿ
ಜನಮನದ ಕನಸುಗಳು ನಿಜವಾಗಲಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು