You are hereನಿನ್ನ ಕಣ್ಣಿನ ಮಾತು
ನಿನ್ನ ಕಣ್ಣಿನ ಮಾತು
ಪ್ರೀತಿ ಎಂಬುದು ಗೆಳತಿ
ಮಿಂಚುಗಳ ಮಾಲೆಯೇನೆ
ಪಾರಿವಾಳದ ಎದೆಗೆ ಗುರಿಯಿಟ್ಟು ಬಿಟ್ಟ
ಬಾಣಗಳ ದಾಳಿಯೇನೆ
ಸೋಂಪು ನಿದ್ದೆಯ ಒಳಗೆ
ಬಿದ್ದ ಬೆಂಕಿಯ ಕೂಗು
ಮೈ ಹಿಡಿದು ಕೈ ಕುಲುಕಿ
ಸುತ್ತ ಕುಣಿಯುವ ಸಾವು
ನೊಂದ ಜೀವಕೆ ತಂಪು ತಾರೆಗಳ
ತೋರಿಸುವ ನಿನ್ನ ಹಾಡು
ಗುಡುಗಾಗಿ ಮೊಳಗುತಿತ್ತು
ಸುಖ ತರುವ ನಿನ್ನ ಮುಖ
ಏನಾಯಿತೋ ಕಾಣೆ
ಏಳು ಲೋಕಗಳಾಚೆ ಇರುವ ಬೆಟ್ಟಗಳಲ್ಲಿ
ಅಡಗಿರುವ ಅರಮನೆಯ
ಗುರುತು ಸಿಗಲಿಲ್ಲ
ಜಾತಿ ಜಾತಿಯ ನಡುವೆ
ನಿಂತ ಸಾಗರದಲ್ಲಿ
ನಮ್ಮ ಪ್ರೀತಿಯ ಹಡಗು ಮುಳುಗಿತಲ್ಲೆ
ತುಂಬೆ ತೆಂಗುಗಳ ಅಂತರವು ಹತ್ತಿರವೆ
ಗುಡಿಯ ಗೋಪುರದೊಡನೆ
ಜೋಪಡಿಯ ಗರಿಗಳಿಗೆ
ನಂಟಾಗಲಿಲ್ಲ
ಒಣ ಮರಳು ಕಾಡಿನಲಿ
ಹೂ ಅರಳಲಿಲ್ಲ
ಚುಕ್ಕೆ ಚಂದಿರ ಹಾಲು
ಚೆಲ್ಲಲಿಲ್ಲ
ಕೂಗಿ ಕುಣಿಯುತ್ತಿದ್ದ
ಕುಡುಗೋಲು ಸುತ್ತಿಗೆಯು
ಉಳ್ಳವರ ಕುತ್ತಿಗೆಯ ಕತ್ತರಿಸಲಿಲ್ಲ
ಸುಟ್ಟ ಹೆಣಗಳ ಸಾಲು ಮೆರವಣಿಗೆ
ಬಂದಾಗ ಪುಟ್ಟ ಕಂದಮ್ಮಗಳ
ಚೀರಾಟಗಳ ನಡುವೆ
ನಿನ್ನ ಕಣ್ಣಿನ ಮಾತು ತಿಳಿಯಲಿಲ್ಲ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page