You are hereನನ್ನವಳಿಗೆ

ನನ್ನವಳಿಗೆ


ಕ್ರಾಂತಿಕನ್ಯೆ ಮೋಹಜನ್ಯೆ
ನಿನ್ನ ಮದುವೆ ಆಗುವೆ
ಕ್ರಾಂತಿ ಕಿಡಿಯ ಸಿಡಿಸುವಾಗ
ನಾನು ನಿನ್ನ ತಬ್ಬುವೆ

ಬಡಜನಗಳ ಬಂಡಾಯದಿ
ನಿನಗೆ ಮುತ್ತನೊತ್ತುವೆ
ಕ್ರಾಂತಿಜಯವ ಪಡೆವವರೆಗು
ನಿನ್ನ ಹಿಂದೆ ಸುತ್ತುವೆ

ಧರ್ಮಗುರುವ ಚರ್ಮ ಸುಲಿದು
ಸೀರೆಕುಬುಸ ಹೊಲಿಸುವೆ
ಮೋಸಗಾರ್ರ ಕೊರಳ ಕಡಿದು
ತಲೆಯ ಹಾರ ಹಾಕುವೆ

ಮೂಳೆ ಹಿಡಿದು ನಿನ್ನ ಮುಂದೆ
ಕೋಲುಯ್ಯುವೆ ಕುಣಿಯುವೆ
ವಂಚಕರನು ಗೋರಿಮಾಡಿ
ಹಾಲುಯ್ಯುವೆ ತಣಿಯುವೆ

ಗುಡಿಯಲಿರುವ ವಡವೆ ತಂದು
ನಿನಗೆ ವಡವೆ ಮಾಡುವೆ
ನುಗ್ಗಿತಂದ ಬೆಳ್ಳಿಯಿಂದ
ಕೈಗೆ ಬಳೆಯ ತೊಡಿಸುವೆ

ಹೀರಿದವರ ರಕ್ತದಿಂದ
ಮೈಗೆ ನೀರನುಯ್ಯುವೆ
ಮುದ್ದೆಯಾದ ಹೆಪ್ಪಿನಿಂದ
ಹಣೆಗೆ ಬೊಟ್ಟನಿಕ್ಕುವೆ

ಕೊಬ್ಬಿದವರ ಕರುಳ ಕಿತ್ತು
ಮುಡಿಗೆ ಹೂವ ಮುಡಿಸುವೆ
ಕ್ರಾಂತಿಯಲ್ಲಿ ನಿನ್ನ ಎದೆಗೆ
ನನ್ನ ಎದೆಯ ಒತ್ತುವೆ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು