You are hereಕೋರಿಕೆ

ಕೋರಿಕೆ


ಒಲವರಳಿದ ಆ ದಿನಗಳ ಹೂಗಳೆ
ಕಡಲ ತೀರಗಳೆ ಕಾಡದಿರಿ
ಬೆಳದಿಂಗಳು ತುಳುಕಾಡುವ ಹೊಳೆಗಳೆ
ಹಲವು ಬಣ್ಣಗಳೆ ಕಾಡದಿರಿ

ಇಲ್ಲವಾಗಿರುವ ಮಲ್ಲಿಗೆಯ ಕಂಪೇ
ಕತ್ತಲು ಕಳೆದ ಮಿಂಚಿನ ಹುಳುವೆ
ಒಂದುಗೂಡಿಸಿದ ಸೀಳು ದಾರಿಗಳೆ
ಕಳೆದ ಹಾಡುಗಳೆ ಕಾಡದಿರಿ

ದುಗುಡದ ದುಮ್ಮಾನದೆ ಮನಸೇ
ಅನುಮಾನದ ಬಿಗುಮಾನದ ಕ್ಷಣವೇ
ಎಣಿಸಿದ ಮುಗಿಲಿನ ಚುಕ್ಕೆಯ ಹಿಂಡೇ
ಎದೆಯ ಹಕ್ಕಿಗಳೆ ಕಾಡದಿರಿ

ಜಲವಿಲ್ಲದ ಈ ಭೂಮಿಯ ಮೇಲೆ
ಸಾವು ಹಸಿವುಗಳೆ ಅಲೆಯದಿರಿ
ಬಲವಿಲ್ಲದ ಈ ಬಳ್ಳಿಯ ಮೇಲೆ
ಘೋರ ವೃಕ್ಷಗಳೆ ಎರಗದಿರಿ

ಹಳ್ಳತಿಟ್ಟುಗಳ ಹೊಕ್ಕ ಮುಳ್ಳುಗಳೆ
ನಗೆಯ ಬಗೆಗಳೇ ಕಾಡದಿರಿ
ಬಿರುಗಾಳಿಯ ತಂಗಾಳಿಯ ಪಯಣವೆ
ನೆನಪಿನ ನದಿಗಳೆ ಕಾಡದಿರಿ

ಬಾಳ ರಮ್ಯತೆಯ ಚಿಮ್ಮಿಸಿ ಹಾರುವ
ಹಳದಿ ಚಿಟ್ಟೆಗಳೆ ಕಾಡದಿರಿ
ಯಾವ ಬನದಲ್ಲೂ ಉತ್ತರವಿಲ್ಲದ
ಒಡೆಯದ ಒಗಟೇ ಕಾಡದಿರಿ

ಪ್ರಾಣದ ಹರಣದ ಗಳಿಗೆಯ ಒಳಗೆ
ನೀಲಿ ತಾವರೆಯೆ ಅರಳದಿರಿ
ಎಲ್ಲೆಲ್ಲು ತುಂಬಿದ ನೋವಿನ ಒಳಗೆ
ಗುಲಾಬಿ ವನಗಳೆ ಸುಳಿಯದಿರಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು