You are hereಕನವರಿಕೆ
ಕನವರಿಕೆ
ಭೂಮಿ ಆಕಾಶಗಳ ಅಂತರ ಅಳಿದು
ನಕ್ಷತ್ರದ ಗೊಂಚಲಿಳಿಯಲೆಂದು
ಅಡವಿಯ ನಿದ್ದೆಯಲಿ ನದಿ ಬಳುಕುವುದನ್ನು
ಸದಾ ನೋಡಲೆಂದು
ಅಪರಿಚಿತ ಕಣಿವೆಗಳಲ್ಲಿ ಪ್ರೀತಿಯ ಪ್ರವಾಹ ಉಕ್ಕಿ
ಭೀತಿಯ ಬಂಡೆಗಳು ಕರಗಲೆಂದು
ನನ್ನ ಕವಿತೆಯು ಕನವರಿಸುತ್ತದೆ
ನಡುಹಗಲಿನಲ್ಲಿ ಕಲ್ಲು ಹೊತ್ತಿರುವ
ಸುಡುವ ನೆತ್ತಿಗೆ ಸಿಂಬೆಯಾಗಲೆಂದು
ಗುರುತು ಸಿಕ್ಕದ ಮಕ್ಕಳು ಗುನುಗಿ
ಹೆತ್ತವರಿಗೆ ನೆಪ್ಪಾಗಲೆಂದು
ಅಪರಾತ್ರಿಯಲಿ ಕತ್ತು ಹಿಸುಕುವ ಕೈಗಳು
ಬೆಚ್ಚಿ ಕೆಳಗಿಳಿಯಲೆಂದು
ನನ್ನ ಕವಿತೆ ಹಂಬಲಿಸುತ್ತದೆ
ಕಲ್ಲುಕಟ್ಟಡದೆದುರು ಕೈಚೆಲ್ಲಿ ಕುಳಿತವರ
ನಿಟ್ಟುಸಿರು ಧಿಕ್ಕಾರವಾಗಲೆಂದು
ಒದೆತ ಹೊಡೆತಕೆ ಸಿಕ್ಕಿ ಭೂಗತರಾದವರು
ಒಂದೇ ನೆಗೆತಕ್ಕೆ ಉತ್ತರ ಕೊಡಲೆಂದು
ಅಕ್ಷರಗಳ ಅಗ್ನಿಕುಂಡದಲ್ಲಿ
ಸಿಟ್ಟು ಧಗಧಗಿಸಿ ಉರಿಯುತ್ತಿರಲೆಂದು
ನನ್ನ ಕವಿತೆ ಹಾರೈಸುತ್ತದೆ
ಸಭ್ಯ ಕೊಲೆಗಡುಕರನ್ನು
ಕಾನೂನುಬದ್ಧ ದರೋಡೆಕಾರರನ್ನು
ಗೌರವಸ್ಥ ಲಂಚಕೋರರನ್ನು
ಮೆಚ್ಚಿ ಎಲ್ಲರೂ ತಲೆಬಾಗುವಾಗ
ನನ್ನ ಕವಿತೆ ಮರುಗುತ್ತದೆ
ಸನ್ಮಾನದ ಉನ್ಮಾದಕ್ಕೆ
ಸತ್ಯವಂತಿಕೆಯ ಪೊಳ್ಳು ಜಾಹಿರಾತುಗಳಿಗೆ
ಹಣದ ಥೈಲಿಯ ಸದ್ದುಗಳಿಗೆ
ಎಲ್ಲರೂ ದನಿಗೂಡಿಸುವಾಗ
ನನ್ನ ಕವಿತೆ ನಿಶ್ಯಬ್ದವಾಗುತ್ತದೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page