You are hereಎಚ್ಚರ

ಎಚ್ಚರ


ಕಾಡ ಕತ್ತಲೆಯಲ್ಲಿ ಕವಿದ ಮಂಪರಿನಲ್ಲಿ
ಮಲಗಿದ್ದೆ ನಾನು
ಈ ಜಗದ ಜಂಜಾಟ
ಎಚ್ಚರಿಸಲಿಲ್ಲ
ಕಾಳಗದ ಕೂಗು ಕಡಲುಗಳ ಅಳಲು
ಗುಡುಗು ಸಿಡಿಲಿನ ಮೊಳಗು
ಚೆಲುವ ಸೂರ್ಯನ ಬೆಳಗು
ನನ್ನ ನಿದ್ದೆಯ ಕಿತ್ತುಕೊಳ್ಳಲಿಲ್ಲ
ಕಣ್ತೆರೆಸಿ ಮುನ್ನಡೆಸಲಾಗಲಿಲ್ಲ

ಮಣ್ಣಿನಲಿ ಮಣ್ಣಾಗಿ
ಬೇರಿನಲಿ ಬೇರಾಗಿ
ಹುತ್ತ ಬೆಳೆಯುವ ಹೊತ್ತು
ಸಾವು ಸುಳಿಯುವ ಹೊತ್ತು
ನೀ ಬಂದೆ ಗೆಳತಿ

ನಿನ್ನ ಕಾಲಿನ ಗೆಜ್ಜೆಯ ಸದ್ದು
ಎಚ್ಚರಿಸಿತು ನನ್ನ
ನಿನ್ನೊಡಲಿನ ನಿಟ್ಟುಸಿರಿನ ಸದ್ದು
ಎಚ್ಚರಿಸಿತು ನನ್ನ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು