You are hereForums / ಸಾಮಾಜಿಕ ವಿಚಾರಗಳು / ಲಾಲ್ ಘಡ ಪ್ರಜಾತಂತ್ರ ಸಂಘರ್ಷ

ಲಾಲ್ ಘಡ ಪ್ರಜಾತಂತ್ರ ಸಂಘರ್ಷ


By DIVAKAR N - Posted on 19 July 2009

ನಕ್ಸಲ್ ಬಾರಿ, ಎಡಪಂಥೀಯ ಚಳುವಳಿ, ಸ್ವಾತಂತ್ರ ಚಳುವಳಿ ಇನ್ನಿತರ ಅನೇಕ ಜನಪರ ಚಳುವಳಿಗಳ ತವರೂರಾದ ಪಶ್ಚಿಮ ಬಂಗಾಲದಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಅಚ್ಚರಿ ಮೂಡಿಸುತ್ತವೆ. ೧೯೬೭ರ ನಕ್ಸಲ್ ಬಾರಿ ಚಳುವಳಿಯ ನಂತರದಲ್ಲಿ ತೀವ್ರಗೊಂಡ ಎಡಪಂಥೀಯ ಚಳುವಳಿಯನ್ನು ಹತ್ತಿಕ್ಕಲು ಅಂದಿನ ಕಾಂಗ್ರೆಸ್ ಸರ್ಕಾರ ಜನಪರ ಚಳುವಳಿಗಳ ಮೇಲೆ ನಡೆಸಿದ ಆಕ್ರಮಣ ಮತ್ತು ಅನುಸರಿಸಿದ ದಮನಕಾರಿ ನೀತಿ, ಅಲ್ಲಿನ ರಾಜಕೀಯ ಸ್ವರೂಪವನ್ನೇ ಬದಲಾಯಿಸಿತ್ತು. ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರ ಆಳ್ವಿಕೆಯಲ್ಲಿ ಎಡಪಕ್ಷಗಳ ಮೇಲೆ ನಡೆದ ಮಾರಣಾಂತಿಕ ಆಕ್ರಮಣದ ಪರಿಣಾಮವಾಗಿ ಎಡಪಕ್ಷಗಳಿಗೆ ಬಂಗಾಲದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುವುದು ಸಾಧ್ಯವಾಗಿತ್ತು. ಸ್ವಾತಂತ್ರ್ಯಪೂರ್ವದಿಂದಲೂ ಭಾರತೀಯ ಶ್ರಮಜೀವಿಗಳ, ರೈತಾಪಿವರ್ಗಗಳ ಆಗ್ರಹವಾಗಿದ್ದ ಭೂ ಸುಧಾರಣೆ ಮುಂತಾದ ಜನಪರ ನೀತಿಗಳನ್ನು ತಮ್ಮ ಪ್ರಣಾಳಿಕೆಯನ್ನಾಗಿ ಮಾಡಿಕೊಂಡ ಎಡಪಕ್ಷಗಳು ೧೯೭೭ರಲ್ಲಿ ಅಧಿಕಾರದ ಗದ್ದುಗೆ ಏರಿದ್ದು, ಇಂದಿನವರೆಗೂ ಆಳ್ವಿಕೆ ನಡೆಸಿವೆ. ಭಾರತೀಯ ಪ್ರಜಾತಂತ್ರದಲ್ಲಿ ಮಾರ್ಕ್ಸ್‌ವಾದಿ ಧೋರಣೆಗಳನ್ನು ವಸ್ತುತಃ ಪಾಲಿಸುವ ಮೂಲಕ, ಒಂದು ಸಮತಾ ಸಮಾಜವನ್ನು ನಿರ್ಮಿಸುವ ಅವಕಾಶವನ್ನೂ ಪಶ್ಚಿಮ ಬಂಗಾಲದ ಜನತೆ ಎಡಪಕ್ಷಗಳಿಗೆ ನೀಡಿದ್ದು ಬೂರ್ಷ್ವಾ ಪಕ್ಷಗಳಿಗೆ ನುಂಗಲಾರದ ತುತ್ತಾಗಿತ್ತು.

ಪಕ್ಷದ ಸಿದ್ಧಾಂತ ಮತ್ತು ಮಾರ್ಕ್ಸ್‌ವಾದೀ ತತ್ವಗಳಿಗೆ ಬದ್ಧವಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಎಡರಂಗದ ಸರ್ಕಾರ ಪ್ರಾರಂಭಿಕ ಹಂತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡ ಭೂಸುಧಾರಣಾ ಕ್ರಮಗಳು ಪಕ್ಷವನ್ನು ಬಲಪಡಿಸಿತ್ತು. ಆದರೆ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯ ಮಿಶ್ರ ಆರ್ಥಿಕ ನೀತಿಯನ್ನು ಪಾಲಿಸುವ ನಿಟ್ಟಿನಲ್ಲಿ ಎಡರಂಗ ಸರ್ಕಾರಗಳು ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಾಗು ರೈತ-ಕೃಷಿ ಕಾರ್ಮಿಕರ ಪರವಾದ ಹಲವು ನೀತಿಗಳು ಎಡಪಕ್ಷಗಳನ್ನು ಮೂರು ದಶಕಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿರಿಸಿವೆ. ಆದರೂ ಕಳೆದ ಎರಡು ದಶಕಗಳಿಂದೀಚೆಗೆ, ಜಾಗತೀಕರಣ ಪ್ರಕ್ರಿಯೆ ಪ್ರಾರಂಭಗೊಂಡ ನಂತರದಲ್ಲಿ ಎಡರಂಗದ ಆರ್ಥಿಕ ನೀತಿಗಳು ಸೈದ್ಧಾಂತಿಕವಾಗಿ ಹಿನ್ನಡೆ ಅನುಭವಿಸಿದ್ದು, ಪಶ್ಚಿಮ ಬಂಗಾಲದ ಸಾಮಾಜಿಕ-ಆರ್ಥಿಕ ನೀತಿಗಳು ವಿಭಿನ್ನ ಹಾದಿ ಹಿಡಿದಿರುವುದು ಸ್ಪಷ್ಟವಾಗಿದೆ.

ಜಾಗತೀಕರಣ-ನವ ಉದಾರವಾದಿ ನೀತಿಗಳನ್ನು ತಾತ್ವಿಕವಾಗಿ ವಿರೋಧಿಸುತ್ತಲೇ ಈ ಪ್ರಕ್ರಿಯೆಗಳಿಗೆ ಮುಕ್ತ ಅವಕಾಶ ನೀಡುವ ದ್ವಂದ್ವವನ್ನೂ ಪಶ್ಚಿಮಬಂಗಾಲದಲ್ಲಿ ಕಾಣಬಹುದಾಗಿದೆ. ರಾಷ್ಟ್ರ ಪ್ರಭುತ್ವದ ಬಂಡವಾಳಶಾಹಿ ನೀತಿಗಳ ಚೌಕಟ್ಟಿನೊಳಗೇ ಕಾರ್ಯನಿರ್ವಹಿಸಬೇಕಾಗಿರುವ ಅನಿವಾರ್ಯತೆ ಎಡರಂಗ ಸರ್ಕಾರವನ್ನು ನಿರ್ಬಂಧಕ್ಕೊಳಪಡಿಸಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತದೆ. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲೇ ಒಂದು ಜನಪರವಾದ ಸಮಾಜವಾದಿ ಸಿದ್ಧಾಂತವನ್ನಾಧರಿಸಿದ ಆಳ್ವಿಕೆಯನ್ನು ನೀಡುವ ನಿಟ್ಟಿನಲ್ಲಿ ಎಡರಂಗ ಸರ್ಕಾರವು ಎಡವಿರುವುದೂ ಅಷ್ಟೇ ಸತ್ಯ. ೧೯೭೭-೮೨ರ ಅವಧಿಂiiಲ್ಲಿ ಕೈಗೊಳ್ಳಲಾದ ಅನೇಕ ಐತಿಹಾಸಿಕ ನಿರ್ಣಯಗಳ ನಿರ್ಲಕ್ಷ್ಯ, ಕೃಷಿ ಪ್ರಧಾನ ಆರ್ಥಿಕತೆಯನ್ನು ಪೋಷಿಸುತ್ತಲೇ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೈಫಲ್ಯ, ಬಂಡವಾಳಶಾಹಿ ಆರ್ಥಿಕತೆಯನ್ನು ಧಿಕ್ಕರಿಸಿ ಸಮಾಜವಾದಿ ಆರ್ಥಿಕ ನೀತಿಯನ್ನು ಅನುಷ್ಟಾನಗೊಳಿಸುವಲ್ಲಿ ನಿರುತ್ಸಾಹ ಇವೆಲ್ಲವೂ ಎಡರಂಗ ಸರ್ಕಾರದ ಪ್ರಮುಖ ವೈಫಲ್ಯಗಳು. ಈ ವೈಫಲ್ಯಗಳ ನಡುವೆಯೇ ಎದುರಾದ ನವ ಉದಾರವಾದಿ ಪ್ರಕ್ರಿಯೆ ಎಡರಂಗ ಸರ್ಕಾರವನ್ನು ವಿಭಿನ್ನ ಹಾದಿಗೆ ಕೊಂಡೊಯ್ದಿದ್ದು ನಂದಿಗ್ರಾಮ, ಸಿಂಗೂರು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಪ್ರಕಟವಾಗಿತ್ತು.

ಹಾಗಾಗಿಯೇ ಪಶ್ಚಿಮ ಬಂಗಾಲ ಸರ್ಕಾರ ತನ್ನ ಹೋರಾಟದ, ಸಂಘರ್ಷಗಳ ಪರಂಪರೆ ಮತ್ತು ಕ್ರ್ರಾಂತಿಕಾರಿ ಧೋರಣೆಗಳನ್ನು ಮರೆತು ಒಂದು ಸೋಷಿಯಲ್ ಡೆಮಾಕ್ರಟಿಕ್ ಸರ್ಕಾರವಾಗಿ ಕಾರ್ಯನಿರ್ವಹಿಸಲಾರಂಭಿಸಿತು. ಜನ ಸಮುದಾಯಗಳ ಸಂಘರ್ಷಗಳ ತಳಹದಿಯ ಮೇಲೆ ನಿರ್ಮಿತವಾದ ಎಡಪಂಥೀಯ ಚಳುವಳಿಯ ಮೂಲಕ ಅಧಿಕಾರದ ಗದ್ದುಗೆ ಏರಿದ ಎಡರಂಗ ಸರ್ಕಾರ ಈಗ ಪ್ರಜಾತಂತ್ರ ವ್ಯವಸ್ಥೆಯ ಮೂಲಭೂತ ಹಕ್ಕುಗಳಲ್ಲೊಂದಾದ ಜನಪರ ಹೋರಾಟಗಳನ್ನು ದಮನ ಮಾಡಲು ಹೊರಟಿರುವುದು ವಿಷಾದನೀಯ. ನಂದಿಗ್ರಾಮ, ಸಿಂಗೂರುಗಳ ಪರಂಪರೆಯ ಪರಾಕಾಷ್ಠೆಯನ್ನು ಪ್ರಸ್ತುತ ಲಾಲ್‌ಘಡದ ಪ್ರಕರಣದಲ್ಲಿ ಕಾಣಬಹುದಾಗಿದೆ. ಲಾಲ್‌ಘಡ್ ಚಳುವಳಿ ಮೂಲಭೂತವಾಗಿ ಆದಿವಾಸಿಗಳ ಹೋರಾಟದ ಗಾಥೆ. ಈ ಹೋರಾಟದ ಹಿಂದೆ ಬೇರಾವುದೇ ಶಕ್ತಿಗಳ ಪ್ರಭಾವ, ಕೈವಾಡಗಳಿದ್ದರೂ, ಇಲ್ಲಿನ ಆದಿವಾಸಿಗಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವುದು ಸತ್ಯ. ಈ ಹೋರಾಟವನ್ನು ಬಂಗಾಲದ ಎಡರಂಗ ಸರ್ಕಾರವು ನಿರ್ವಹಿಸಿರುವ ರೀತಿ ಪ್ರಶ್ನಾರ್ಹವಷ್ಟೇ ಅಲ್ಲದೆ ವಿಷಾದನೀಯವೂ ಆಗಿದೆ.

ಲಾಲ್‌ಘಡ ಚಳುವಳಿಯ ಇತಿಹಾಸ

ಪಶ್ಚಿಮ ಬಂಗಾಲದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಜರಗ್ರಾಮ್, ಬಿನ್‌ಪುರ ೧ ಮತ್ತು ಬಿನ್‌ಪುರ ಪ್ರದೇಶಗಳನ್ನೊಳಗೊಂಡ ಲಾಲ್‌ಘಡ್ ಆದಿವಾಸಿ ಪ್ರದೇಶ ಮೇದಿನಿಪುರದಿಂದ ೬೦ ಕಿಲೋಮೀಟರ್ ದೂರದಲ್ಲಿದೆ. ಸಂತಾಲ್ ಆದಿವಾಸಿ ಜನತೆ ಬಹುಸಂಖ್ಯಾತರಾಗಿರುವ ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಣ್ಣ ಪುಟ್ಟ ತುಂಡು ಜಮೀನನ್ನು ಹೊಂದಿರುವ ಇಲ್ಲಿನ ಜನ ಬಹುತೇಕವಾಗಿ ಮಳೆಯಾಧಾರಿತ ಕೃಷಿಯನ್ನೇ ಅವಲಂಬಿಸಿದ್ದು, ತಟ್ಟೆಗಳನ್ನು ತಯಾರಿಸಲು ಉಪಯೋಗಿಸುವ ಶಾಲ್ ಮರದ ಎಲೆಗಳನ್ನು ಆಯ್ದು ಮಾರುವುದೇ ಈ ಪ್ರದೇಶದ ಆರ್ಥಿಕ ಬೆನ್ನೆಲುಬು. ವಿಪುಲವಾದ ನೈಸರ್ಗಿಕ ಸಂಪತ್ತನ್ನು ಹೊಂದಿದ್ದರೂ ಆಳ್ವಿಕರ ನಿರ್ಲಕ್ಷದಿಂದ ಅಭಿವೃದ್ಧಿ ಕಾಣದ ಈ ಆದಿವಾಸಿ ಪ್ರದೇಶ ಇತಿಹಾಸ ಕಾಲದಿಂದಲೂ ಹಿಂದುಳಿದ ಪ್ರದೇಶವೇ ಆಗಿದೆ. ಇಂದಿಗೂ ಸಹ ಇಲ್ಲಿನ ಜನತೆಗೆ ಮೂಲಭೂತ ಸೌಲಭ್ಯಗಳು ದೊರೆಯದಿರುವುದು ವಿಪರ್ಯಾಸಕರ. ಇಲ್ಲಿನ ಜನತೆಗೆ ಆರೋಗ್ಯ ತಪಾಸಣೆಗಾಗಿ ೬೦ ಕಿಲೋಮೀಟರ್ ದೂರದ ಮೇದಿನಿಪುರಕ್ಕೆ ಹೋಗುವುದು ಅನಿವಾರ್ಯ, ಏಕೆಂದರೆ ಇಡೀ ಪ್ರದೇಶದಲ್ಲಿ ಏಕೈಕ ವೈದ್ಯರಿದ್ದು ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ವಹಿಸುತ್ತಾರೆ.

ಸ್ವತಂತ್ರ ಭಾರತದ ಅಭಿವೃದ್ಧಿ ಧೋರಣೆಯಲ್ಲಿ ಆದಿವಾಸಿಗಳನ್ನು ಕಡೆಗಣಿಸುವುದು ಸಾಮಾನ್ಯ ಸಂಗತಿಯಾಗಿದ್ದು ಆದಿವಾಸಿ ಪ್ರದೇಶಗಳನ್ನು ಕೇವಲ ಗಣಿಗಾರಿಕೆ ಮತ್ತು ಅರಣ್ಯ ಸಂಪತ್ತಿನ ಆಗರಗಳೆಂದು ಮಾತ್ರ ಪರಿಗಣಿಸಲಾಗಿದೆ. ಲಾಲ್‌ಘಡವೂ ಈ ಪ್ರವೃತ್ತಿಗೆ ಹೊರತಾಗಿಲ್ಲ. ನೈಸರ್ಗಿಕ ಸಂಪತ್ತು ಇರುವುದು ಪೋಷಣೆಗಲ್ಲದೆ ಶೋಷಣೆಗೆ ಎಂಬ ಬಂಡವಾಳಶಾಹಿ ಅಭಿವೃದ್ಧಿ ಮಂತ್ರ ನಿರಂತರವಾಗಿ ಜಾರಿಯಲ್ಲಿದೆ. ಪ್ರಭುತ್ವಗಳ ನಿರ್ಲಕ್ಷ್ಯ ಮತ್ತು ಆದಿವಾಸಿ ಸಮುದಾಯಗಳ ಬಡತನ ಈ ಪ್ರದೇಶಗಳಲ್ಲಿ ಜನಾಂದೋಲನಗಳು ಮತ್ತು ಹಿಂಸಾತ್ಮಕ ಚಳುವಳಿಗಳು ಸೃಷ್ಟಿಯಾಗಲು ಪೂರಕವಾಗಿವೆ. ಕಳೆದ ಹತ್ತು ವರ್ಷಗಳಿಂದಲೂ ಝಾರ್ಖಂಡ್‌ಗೆ ಹೊಂದಿಕೊಂಡಂತಿರುವ ಮೆದಿನಿಪುರ-ಬಂಕುರ-ಪುರುಲಿಯ ಪ್ರದೇಶಗಳಲ್ಲಿ ಮಾವೋವಾದಿ ಪಕ್ಷಗಳು ಸಕ್ರಿಯವಾಗಿವೆ. ಜಂಗಲ್ ಮಹಲ್ ಎಂದು ಕರೆಯಲಾಗುವ ಈ ಪ್ರದೇಶಗಳಲ್ಲಿ ಮಾವೋವಾದಿಗಳು ಬೀಡುಬಿಟ್ಟಿರುವುದನ್ನೇ ನೆಪ ಮಾಡಿಕೊಂಡು ಪಶ್ಚಿಮಬಂಗಾಲದ ಎಡರಂಗದ ಸರ್ಕಾರ ಆದಿವಾಸಿ ಹೋರಾಟಗಳನ್ನು ದಮನ ಮಾಡುತ್ತಿದೆ.

ಲಾಲ್‌ಘಡ ಮತ್ತು ಸುತ್ತಮುತ್ತಲಿನ ಜನತೆ ಪಾರಂಪರಿಕವಾಗಿ ಝಾರ್ಖಂಡ್ ಪಕ್ಷ ಮತ್ತು ಝಾರ್ಖಂಡ್ ದಿಶಂ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹಾಗಾಗಿ ಸಿಪಿಎಂ ಕಾರ್ಯಕರ್ತರು ಇಲ್ಲಿನ ಜನರ ಮೇಲೆ ಆಕ್ರಮಣ ನಡೆಸುವುದೂ ಸಾಮಾನ್ಯ ಸಂಗತಿಯಾಗಿದೆ. ೨೦೦೬ರ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲೂ ಝಾರ್ಖಂಡ್ ಪಕ್ಷ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ನಡೆದ ಸಂಘರ್ಷದಲ್ಲಿ ಐವತ್ತಕ್ಕೂ ಹೆಚ್ಚು ಆದಿವಾಸಿಗಳನ್ನು ಬಂಧಿಸಿ, ಶಿಕ್ಷೆಗೊಳಪಡಿಸಲಾಗಿತ್ತು. ಭ್ರಷ್ಟಾಚಾರ, ಸರ್ಕಾರಿ ಯೋಜನೆಗಳ ನಿರ್ಲಕ್ಷ್ಯ, ಉದ್ಯೋಗ ಖಾತರಿ ಯೋಜನೆಯಲ್ಲಿನ ನ್ಯೂನತೆಗಳು, ಇಂದಿರಾ ಆವಾಸ್ ಯೋಜನೆಯ ಅನುಷ್ಟಾನದಲ್ಲಿನ ಕೊರತೆಗಳು ಹೀಗೆ ಅನೇಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ಆದಿವಾಸಿಗಳನ್ನು ಮತ್ತಿತರ ಸಂಘಟನೆಗಳನ್ನು ಎಡರಂಗದ ಸರ್ಕಾರ ದಮನಮಾಡುತ್ತಲೇ ಇದೆ. ಈ ಹೋರಾಟಗಳಲ್ಲಿ ಭಾಗಿಯಾದವರನ್ನು ಮಾವೋವಾದಿಗಳೆಂದು ಬಂಧಿಸುವುದೂ ಇಲ್ಲಿ ಸಾಮಾನ್ಯವಾಗಿದೆ. ಮಹಿಳೆಯರನ್ನೂ ಸೇರಿದಂತೆ ನೂರಾರು ಅಮಾಯಕರನ್ನು ಬಂಧಿಸಲಾಗಿದ್ದು, ಕಾಡುಗಳಲ್ಲಿ ಶಾಲ್ ಎಲೆಗಳನ್ನು ಸಂಗ್ರಹಿಸುವ ಕೂಲಿ ಹೆಂಗಸರನ್ನೂ ಮಾರಕಾಸ್ತ್ರಗಳನ್ನು ಹೊಂದಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಈ ದಮನಕಾರಿ ನೀತಿಗಳ ವಿರುದ್ಧವೇ ಲಾಲ್‌ಘಡದ ಆದಿವಾಸಿಗಳು ನಿರಂತರವಾಗಿ ಹೋರಾಡುತ್ತಿದ್ದಾರೆ.

ಈ ಹೋರಾಟದ ಸನ್ನಿವೇಶದಲ್ಲೇ ೨೦೦೮ರ ನವಂಬರ್‌ನಲ್ಲಿ ಪಶ್ಚಿಮಬಂಗಾಲದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರು ಕೇಂದ್ರ ಉಕ್ಕು ಮಂತ್ರಿ ರಾಮ್ ವಿಲಾಸ್ ಪಾಸ್ವಾನ್ ಅವರೊಡನೆ ಜಿಂದಾಲ್ ಉಕ್ಕು ಕಾರ್ಖಾನೆಯನ್ನು ಉದ್ಘಾಟಿಸಿದ್ದರು. ಸಲಬೋನಿ ಬ್ಲಾಕ್‌ನಲ್ಲಿದ್ದ ಈ ವಿಶೇಷ ಆರ್ಥಿಕ ವಲಯದ ವಿರುದ್ಧ ನಡೆದಿದ್ದ ಹೋರಾಟದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ವಾಹನವನ್ನು ನೆಲಬಾಂಬ್ ಸ್ಫೋಟ ಮಾಡಿದ ಘಟನೆಯೂ ನಡೆದಿತ್ತು. ಈ ಘಟನೆಯ ನಂತರವೇ ಶಂಕಿತ ಮಾವೋವಾದಿಗಳನ್ನು ಬಂಧಿಸುವ ನೆಪದಲ್ಲಿ ಸರ್ಕಾರ ಅನೇಕರನ್ನು ಬಂಧಿಸಲಾರಂಭಿಸಿತು. ಸಿಪಿಎಂ ಪಕ್ಷಕ್ಕೆ ಅಷ್ಟೇನೂ ಬೆಂಬಲ ಇಲ್ಲದಿದ್ದ ಲಾಲ್‌ಘಡ್ ಪ್ರದೇಶ ಪೊಲೀಸ್ ಕಾರ್ಯಾಚರಣೆಯ ಕೇಂದ್ರವಾಗಿತ್ತು. ಅನೇಕ ಶಾಲಾ ಮಕ್ಕಳನ್ನೂ, ಶಿಕ್ಷಕರನ್ನೂ ಬಂಧಿಸಲಾಯಿತು. ನವಂಬರ್ ೫ ೨೦೦೮ರಂದು ಈ ಅನಗತ್ಯ ಬಂಧನಗಳನ್ನು ಪ್ರತಿಭಟಿಸಿದ ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಲಾಗಿ ಹಲವಾರು ಮಹಿಳೆಯರಿಗೆ ತೀವ್ರ ಗಾಯಗಳಾಗಿತ್ತು. ಈ ಘಟನೆಯಲ್ಲಿ ಓರ್ವ ಮಹಿಳೆ ದೃಷ್ಟಿ ಕಳೆದುಕೊಂಡಿದ್ದೂ ವರದಿಯಾಗಿದೆ. ಪೊಲೀಸರ ಆಕ್ರಮಣ ತೀವ್ರವಾಗುತ್ತಿರುವಂತೆಯೇ ಜನರ ಪ್ರತಿಭಟನೆಯೂ ಗಂಭೀರ ಸ್ವರೂಪ ಪಡೆದುಕೊಂಡಿದ್ದರ ಪರಿಣಾಮವಾಗಿ ಸಾವಿರಾರು ಆದಿವಾಸಿ ಪುರುಷರು ಮತ್ತು ಮಹಿಳೆಯರು ಲಾಲ್‌ಘಡದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದೇ ಅಲ್ಲದೆ ಲಾಲ್‌ಘಡದೊಳಗೆ ಪೊಲೀಸರ ಪ್ರವೇಶವನ್ನೂ ನಿರ್ಬಂಧಿಸಿದರು. ಅಂದಿನಿಂದಲೂ ಲಾಲ್‌ಘಡದ ಆದಿವಾಸಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರಜಾ ಸಮಿತಿ(ಪಿಎಸ್‌ಜೆಬಿಸಿ) ಎಂಬ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಯುತ್ತಲೇ ಇದೆ.

ಲಾಲ್‌ಘಡದ ಪ್ರಜಾಂದೋಲನ

ಕಳೆದ ಎಂಟು ತಿಂಗಳುಗಳಲ್ಲಿ, ಇತ್ತೀಚಿನ ಬೆಳವಣಿಗೆಗಳವರೆಗೂ, ಪೊಲೀಸರು ಲಾಲ್‌ಘಡ ಪ್ರದೇಶವನ್ನು ಪ್ರವೇಶಿಸಿರಲಿಲ್ಲ. ಪಿಎಸ್‌ಜೆಬಿಸಿ ಸಮಿತಿಯು ಪ್ರತಿ ಗ್ರಾಮಗಳಲ್ಲೂ ತನ್ನದೇ ಆದ ತಂಡಗಳನ್ನು ರಚಿಸಿಕೊಂಡಿತ್ತು. ಈ ಚಳುವಳಿಯ ಪ್ರಭಾವದಿಂದ ಭಾವಾನಂದ್ ಪಂಚಾಯತಿಯ ಶಾಲೆಯಲ್ಲಿದ್ದ ಪೊಲೀಸ್ ಪಡೆಯನ್ನೂ ಸ್ಥಳಾಂತರಿಸಲಾಗಿತ್ತು. ಈ ಹೋರಾಟದಲ್ಲಿ ಭಾಗಿಯಾಗಿದ್ದ ಆದಿವಾಸಿಗಳಲ್ಲಿ ಹೊಸ ಉತ್ಸಾಹ ತುಂಬಿತ್ತು. ಪೊಲೀಸ್ ದೌರ್ಜನ್ಯವನ್ನು ಕೊನೆಗಾಣಿಸುವುದೇ ಅಲ್ಲದೆ ಇನ್ನಿತರ ಬೇಡಿಕೆಗಳನ್ನೂ ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ಇವುಗಳಲ್ಲಿ ಪ್ರಮುಖವಾಗಿ ಲಾಲ್ ಘಡ್ ಪ್ರದೇಶದಿಂದ ಪೊಲೀಸ್ ಪಡೆಗಳನ್ನು ಹಿಂತೆಗೆಯುವುದು, ಆಕ್ರಮಣದಲ್ಲಿ ಗಾಯಗೊಂಡವರಿಗೆ ಪರಿಹಾರ ನೀಡುವುದು ಮತ್ತು ಆದಿವಾಸಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಪ್ರಮುಖವಾಗಿದ್ದವು.

ಆದರೆ ಸಿಪಿಎಂ ಸರ್ಕಾರ ಆದಿವಾಸಿಗಳ ಈ ಪ್ರಜಾತಾಂತ್ರಿಕ ಬೇಡಿಕೆಗಳನ್ನು ಮನ್ನಿಸದೆ ದಮನಕಾರಿ ನೀತಿಯನ್ನು ಅನುಸರಿಸಿದ್ದು ಇಡೀ ಸಂಘರ್ಷಕ್ಕೆ ಕಾರಣವಾಗಿದೆ. ಮಾವೋವಾದಿಗಳಿಂದ ಹತ್ಯೆಗೊಳಗಾದ ಸಿಪಿಎಂ ಸದಸ್ಯರೊಬ್ಬರ ಶವಯಾತ್ರೆಯ ಸಂದರ್ಭದಲ್ಲಿ ಸಿಪಿಎಂ ಕಾರ್ಯಕರ್ತರು ಮತ್ತು ಸಮಿತಿಯ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ಸಂಘರ್ಷಕ್ಕೆ ತಿರುಗಿತ್ತು. ಶವಯಾತ್ರೆಯಲ್ಲಿ ಪೊಲೀಸರು ಭಾಗಿಯಾಗಬಾರದು ಎಂಬ ಪಿಎಸ್‌ಜೆಬಿಸಿ ಸಮಿತಿಯ ಬೇಡಿಕೆ ಇಡೀ ಸಂಘರ್ಷಕ್ಕೆ ನಾಂದಿ ಹಾಡಿತ್ತು. ಈ ಸಂದರ್ಭದಲ್ಲಿ ನಡೆದ ಆಕ್ರಮಣದಲ್ಲಿ ಸಮಿತಿಯ ಮೂವರು ಸದಸ್ಯರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು. ಐವರಿಗೆ ಗಾಯಗಳಾಗಿತ್ತು. ಈ ಘಟನೆಯೇ ಪ್ರಸ್ತುತ ಸಂಘರ್ಷ ಪರಾಕಾಷ್ಠೆ ತಲುಪಲು ಮೂಲಕಾರಣವಾಗಿ ಪರಿಣಮಿಸಿತು.

ಪಿಎಸ್‌ಜೆಬಿಸಿ ಸಮಿತಿಯ ನಾಯಕರೊಡನೆ ಸಂಧಾನ ನಡೆಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರುವ ಸರ್ಕಾರದ ಯತ್ನ ಸಫಲವಾಗಲಿಲ್ಲ. ಅಭೂತಪೂರ್ವ ಐಕ್ಯತೆಯನ್ನು ಸಾಧಿಸಿದ್ದ ಸಮಿತಿಯ ಬೆಂಬಲಿಗರು ತಮ್ಮ ಬೇಡಿಕೆಗಳನ್ನು ಸಡಿಲಿಸಲು ಒಪ್ಪದಿದ್ದುದೇ ಮಾತುಕತೆಗಳ ವೈಫಲ್ಯಕ್ಕೆ ಕಾರಣವಾಗಿತ್ತು. ೨೦೦೯ರ ಏಪ್ರಿಲ್ ೧೦ರಂದು ಪೊಲೀಸರು ಸೆಕ್ಷನ್ ೧೪೪ರ ಅಡಿ ನಿಷೇದಾಜ್ಞೆ ಜಾರಿಗೊಳಿಸಿದ್ದರೂ ಪಿಎಸ್‌ಜೆಬಿಸಿ ಸಮಿತಿಯ ಸಾವಿರಾರು ಸದಸ್ಯರು ಬಂಕುರ ಜಿಲ್ಲೆಯ ಮೂವರು ಸಮಿತಿ ಸದಸ್ಯರನ್ನು ಬಂಧಿಸಿರುವದರ ವಿರುದ್ಧ ಪ್ರತಿಭಟನಾ ರ್‍ಯಾಲಿ ಹಮ್ಮಿಕೊಂಡಿದ್ದರು. ಮಹಿಳೆಯರು, ವಯೋವೃದ್ಧರು, ಮಕ್ಕಳನ್ನು ಒಳಗೊಂಡಿದ್ದ ಆದಿವಾಸಿ ಸಮುದಾಯ ಬಿಲ್ಲು, ಬಾಣ, ಕುಡುಗೋಲು, ತುಕ್ಕುಹಿಡಿದ ಕತ್ತಿಗಳನ್ನು ಹಿಡಿದು ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ತಮ್ಮ ಸಾಂಪ್ರದಾಯಿಕ ಡೋಲುಗಳನ್ನು ಬಾರಿಸುವುದರ ಮೂಲಕ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಜನಸಮುದಾಯ ಶಸ್ತ್ರಸಜ್ಜಿತ ಪೊಲೀಸ್ ತಡೆಗೋಡೆಯನ್ನ ಬೇಧಿಸಿ ಮುನ್ನಡೆಯಲು ಯತ್ನಿಸಿದ ಜನತೆಯ ಬೇಡಿಕೆ ಬಂಧಿತರನ್ನು ಬಿಡುಗಡೆ ಮಾಡುವುದು ಮಾತ್ರವಾಗಿತ್ತು. ನಮಗೆ ಹಿಂಸೆ ಬೇಡ, ನ್ಯಾಯ ಬೇಕು ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪಿಎಸ್‌ಜೆಬಿಸಿ ಸಮಿತಿಯ ವಕ್ತಾರ ಛತ್ರಧರ್ ಮಹತೋ, ಬಂಧಿತರನ್ನು ಬಿಡುಗಡೆ ಮಾಡದಿದ್ದಲ್ಲಿ ಮರುದಿನ ಸಾರೆಂಗ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಘೋಷಿಸಿದರು. ಮರುದಿನ ಮೂರು ಜನರನ್ನೂ ಬಿಡುಗಡೆ ಮಾಡಲಾಯಿತು.

ಆದರೆ ಆ ನಂತರದ ದಿನಗಳಲ್ಲೂ ಪೊಲೀಸರ ಆಕ್ರಮಣ ನಿಲ್ಲಲಿಲ್ಲ. ಏಪ್ರಿಲ್ ೧೧ರಂದು ಮಧುಪುರ ಗ್ರಾಮದೊಳಗೆ ನುಗ್ಗಿದ ಪೊಲೀಸರನ್ನು ಗ್ರಾಮದ ಮಹಿಳೆಯರೇ ಬಿಲ್ಲು ಬಾಣಗಳನ್ನು ಹೊತ್ತು ತಡೆಗಟ್ಟಿದ್ದರು. ಗ್ರಾಮದಲ್ಲಿ ನುಗ್ಗಲು ಯತ್ನಿಸಿದ ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಮಹಿಳೆಯರು ಕೂಡಲೇ ಪ್ರತಿಭಟನಾ ಮೆರವಣಿಗೆಯನ್ನೂ ನಡೆಸಿದ್ದರು. ಪ್ರತಿಭಟನೆಗೆ ಹೆದರಿ ಪೊಲೀಸರು ಹಿಮ್ಮೆಟ್ಟಬೇಕಾಯಿತು. ಅಕ್ಕ ಪಕ್ಕದ ಗ್ರಾಮಗಳಿಗೆ ಪೊಲೀಸರು ಬರುವ ಸೂಚನೆ ನೀಡಲು ನಗಾರಿಗಳನ್ನು ಬಳಸಿ ಪ್ರಚಾರ ಮಾಡಲಾಯಿತು. ಈ ಘಟನೆಯ ನಂತರದ ಕೆಲವೇ ಗಂಟೆಗಳೊಳಗೆ ಸಾವಿರಾರು ಆದಿವಾಸಿಗಳು ಮಧುಪುರದಲ್ಲಿ ಜಮಾಯಿಸಿದ್ದರು. ಗ್ರಾಮಗಳ ಇಡೀ ಜನತೆ ಈ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದವು. ಈ ರ್‍ಯಾಲಿಯ ಸಂದರ್ಭದಲ್ಲಿ ಪ್ರತಿಭಟನಾ ನಿರತ ಜನರ ಮೇಲೆ ಸಿಪಿಎಂ ಕಾರ್ಯಕರ್ತರು ಆಕ್ರಮಣ ಮಾಡಿದ ಪರಿಣಾಮ ಆದಿವಾಸಿಗಳು ತಮ್ಮ ಬಿಲ್ಲು ಬಾಣಗಳನ್ನು ಬಳಸಿ ಪ್ರತ್ಯಾಕ್ರಮಣ ಆರಂಭಿಸಿದ್ದರು. ಈ ಪ್ರಕರಣ ಸಂಜೆಯ ವೇಳೆಗೆ ರಾಜಧಾನಿ ಕೊಲ್ಕತ್ತಾ ತಲುಪಿತ್ತು. ಈ ಘಟನೆಗಳು ಲಾಲ್‌ಘಡದ ಆದಿವಾಸಿ ಜನಗಳ ಹೋರಾಟದ ಮನೋಭಾವ ಮತ್ತು ದೃಢ ನಿರ್ಧಾರಕ್ಕೆ ನಿದರ್ಶನವಷ್ಟೆ.

ಮೇ ತಿಂಗಳಿನಲ್ಲಿ ನಡೆಸ ಸಂಸದೀಯ ಚುನಾವಣೆಗಳ ಸಂದರ್ಭದಲ್ಲಿ ಆದಿವಾಸಿಗಳು ಚುನಾವಣೆಗಳನ್ನು ಬೆಂಬಲಿಸಿದರು ಪೊಲೀಸರ ಉಪಸ್ಥಿತಿಯನ್ನು ವಿರೋಧಿಸಿದ್ದರು. ತಮ್ಮ ಬೇಡಿಕೆಗಳನ್ನು ಈಡೇರಿಸದ ಹೊರತು, ಚುನಾವಣೆಯ ಸಂದರ್ಭದಲ್ಲಿ ಪೊಲೀಸರಿಗೆ ಲಾಲ್‌ಘಡದಲ್ಲಿ ಪ್ರವೇಶ ನೀಡುವುದಿಲ್ಲ ಎಂಬ ಪಿಎಸ್‌ಜೆಬಿಸಿ ಸಮಿತಿಯ ನಿಲುವು ಸರ್ಕಾರಕ್ಕೆ ತಲೆಬೇನೆಯಾಗಿತ್ತು. ಈ ಹಿನ್ನೆಲೆಂiiಲ್ಲೇ ಪಿಎಸ್‌ಜೆಬಿಸಿ ಸಮಿತಿಯ ಸದಸ್ಯರೊಡನೆ ಸಂಧಾನಕ್ಕೆ ಮುಂದಾದ ಚುನಾವಣಾ ಆಯೋಗ ಕೇಂದ್ರ ಮೀಸಲು ಪಡೆಗಳನ್ನು ನೇಮಿಸಿ ಚುನಾವಣೆ ನಡೆಸುವ ಆಯೋಗದ ಸಲಹೆಯನ್ನು ಸಮಿತಿಯ ನಾಯಕರು ಒಪ್ಪದೆ ಹೋದಾಗ ಲಾಲ್‌ಘಡದ ಹೊರ ಪ್ರದೇಶದಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಣಯಿಸಲಾಯಿತು. ಭಾರತೀಯ ಪ್ರಜಾತಂತ್ರದಲ್ಲಿ ಚುನಾವಣೆಗಳನ್ನು ನಡೆಸಲಾಗಲೀ, ಯಾವ ರೀತಿ ನಡೆಸಬೇಕೆಂದಾಗಲೀ ನಿರ್ಧರಿಸಲು ಜನಾಭಿಪ್ರಾಯವನ್ನು ಸಂಗ್ರಹಿಸಿದ ಇತಿಹಾಸವೇ ಇಲ್ಲ. ಈ ನಿಟ್ಟಿನಲ್ಲಿ ಲಾಲ್‌ಘಡದ ಜನತೆ ಹೊಸ ಇತಿಹಾಸವನ್ನೇ ನಿರ್ಮಿಸಿದ್ದರು. ಆದರೆ ಚುನಾವಣೆಗಳಲ್ಲಿ ಕೇವಲ ಶೇ ೧೩ರಷ್ಟು ಮತ ಚಲಾವಣೆಯಾಗಿತ್ತು.

ಸರ್ಕಾರದ ಆಕ್ರಮಣಕಾರಿ ನೀತಿ

ಲಾಲ್‌ಘಡದ ಈ ಪ್ರಜಾಂದೋಲನವನ್ನು ಒಂದು ಸಮಾಜಮುಖೀ ದೃಷ್ಟಿಕೋನದಿಂದ ನೋಡದೆ ಮಾವೊವಾದಿಗಳ ಪ್ರೇರಿತ ಹೋರಾಟವೆಂದು ಬಿಂಬಿಸಲು ಹೊರಟಿರುವ ಪಶ್ಚಿಮ ಬಂಗಾಲದ ಸರ್ಕಾರದ ನೀತಿ ನೈಜ ಸಮಸ್ಯೆಯನ್ನು ಮರೆಮಾಚುವ ಯತ್ನದಂತಿದೆ. ಲಾಲ್‌ಘಡ ಹೋರಾಟದ ಪ್ರಕ್ರಿಯೆಯಲ್ಲಿ ಮಾವೋವಾದಿ ಪಕ್ಷ ಭಾಗಿಯಾಗಿದ್ದು ಸತ್ಯ ಸಂಗತಿಯಾದರೂ, ಆದಿವಾಸಿ ಸಮುದಾಯಗಳ ಪ್ರಜಾಸತ್ತಾತ್ಮಕ ಹೋರಾಟಗಳಿಗೂ, ಮಾವೋವಾದಿಗಳ ಸಶಸ್ತ್ರ ಹೋರಾಟದ ಧೋರಣೆಗೂ ಸಂಬಂಧ ಕಲ್ಪಿಸಲಾಗುವುದಿಲ್ಲ. ಆದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾವೋವಾದಿಗಳನ್ನು ಬೇಟೆಯಾಡುವ ನೆಪದಲ್ಲಿ ಆದಿವಾಸಿಗಳ ಮೇಲೆ ಆಕ್ರಮಣ ಮಾಡುತ್ತಿರುವುದು ಇಡೀ ಹೋರಾಟವನ್ನು ತೀಕ್ಷ್ಣಗೊಳಿಸಿದೆ. ಯಾವುದೇ ಸಂಘಟನೆಗಳಾಗಲೀ, ರಾಜಕೀಯ ನಾಗರಿಕ ನಾಯಕರಾಗಲೀ ಈ ಘರ್ಷಣೆಯ ಪ್ರದೇಶಕ್ಕೆ ಭೇಟಿ ನೀಡಬಾರದೆಂದು ಕೇಂದ್ರ ಗೃಹ ಮಂತ್ರಾಲಯ ಆದೇಶ ನೀಡಿರುವುದು, ಮಾವೋವಾದಿ ಸಂಘಟನೆಯನ್ನು ಭಯೋತ್ಪಾದಕರೆಂದು ನಿಷೇದಿಸಿರುವುದು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳೇ ಹೊರತು, ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರವಲ್ಲ.

ಸರ್ಕಾರದ ಆಕ್ರಮಣಕಾರಿ ನೀತಿಗೆ ತತ್ತರಿಸಿ ಹೋಗಿರುವ ಆದಿವಾಸಿಗಳು ಈಗ ತಮ್ಮ ಗ್ರಾಮಗಳನ್ನು ತೊರೆದು ವಲಸೆ ಹೋಗಲಾರಂಭಿಸಿದ್ದಾರೆ. ಪ್ರಭುತ್ವದ ದಮನಕಾರಿ ನೀತಿಗಳನ್ನು ವಿರೋಧಿಸಿ ಹೋರಾಡುತ್ತಿರುವ ಆದಿವಾಸಿಗಳಿಗೆ ನ್ಯಾಯ ಒದಗಿಸುವುದು ಎಡರಂಗ ಸರ್ಕಾರದ ನೈತಿಕ ಹೊಣೆಗಾರಿಕೆಯಾಗಿದೆ. ಆದರೂ ಸಿಪಿಎಂ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಪ್ರತಿಭಟನೆ ನಡೆಸುವವರೆಲ್ಲರನ್ನೂ ಮಾವೋವಾದಿಗಳೆಂದು ಪರಿಗಣಿಸುವುದು ಪ್ರಜಾತಂತ್ರಕ್ಕೆ ಅಪಚಾರವೆಸಗಿದಂತಾಗುತ್ತದೆ. ಲಾಲ್‌ಘಡದ ಆದಿವಾಸಿಗಳು ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಮೂಲಭೂತ ಸೌಕರ್‍ಯಗಳಿಗಾಗಿ ಹೋರಾಡುತ್ತಿದ್ದು, ಮಾವೋವಾದಿಗಳ ಸಶಸ್ತ್ರ ಹೋರಾಟದಲ್ಲಾಗಲೀ, ಹಿಂಸಾಕೃತ್ಯಗಳಲ್ಲಾಗಲೀ ಭಾಗಿಯಾಗುತ್ತಿಲ್ಲ. ಸಂಘರ್ಷದಲ್ಲಿ ತೊಡಗಿರುವ ಆದಿವಾಸಿಗಳಲ್ಲಿ ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳಿಗೆ ಸೇರಿದವರೂ ಇದ್ದಾರೆ. ಈ ಸತ್ಯಾಂಶವನ್ನು ಮರೆಮಾಚುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇಡೀ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ಜನಾಂದೋಲನವನ್ನು ಹತ್ತಿಕ್ಕಲು ಯತ್ನಿಸುತ್ತಿವೆ.

ಭಾರತೀಯ ಇತಿಹಾಸದಲ್ಲಿ ಆದಿವಾಸಿಗಳ ಮತ್ತು ಆಳ್ವಿಕರ ಸಂಘರ್ಷಗಳಿಗೆ ತನ್ನದೇ ಆದ ಪರಂಪರೆಯೇ ಇದೆ. ವಸಾಹತುಶಾಹಿಯ ಕಾಲದಿಂದಲೂ ಈ ಹೋರಾಟಗಳು ನಡೆಯುತ್ತಲೇ ಇವೆ. ಬ್ರಿಟೀಷರ ವಿರುದ್ಧ ಹೋರಾಡಿದ ಆದಿವಾಸಿ ನಾಯಕರನ್ನು ಮಹಾನ್ ಸ್ವತಂತ್ರ ಹೋರಾಟಗಾರರೆಂದು ಶ್ಲಾಘಿಸುವ ಆಳುವ ವರ್ಗಗಳು, ಪ್ರಸ್ತುತ ಪರಿಸ್ಥಿತಿಯಲ್ಲಿ ತಮ್ಮ ಹಕ್ಕುಗಳಿಗಾಗಿ, ಅರಣ್ಯದ ರಕ್ಷಣೆಗಾಗಿ, ನೈಸರ್ಗಿಕ ಸಂಪತ್ತಿನ ಸಂರಕ್ಷಣೆಗಾಗಿ, ತಮ್ಮ ಅಸ್ಮಿತೆಗಾಗಿ ಹೋರಾಡುವ ಆದಿವಾಸಿಗಳನ್ನು ಕ್ರಿಮಿನಲ್‌ಗಳಂತೆ ಪರಿಗಣಿಸುತ್ತದೆ. ಸಮಕಾಲೀನ ಸಂದರ್ಭದಲ್ಲಿ ಭಾರತದ ವ್ಯವಸ್ಥೆಯನ್ನು ಕಾಡುತ್ತಿರುವ ಅಸಮತೋಲನ ಅಭಿವೃದ್ಧಿ, ಆದಿವಾಸಿಗಳಲ್ಲಿನ ಪರಕೀಯತೆಯ ಮನೋಭಾವ, ಅಭಿವೃದ್ಧಿ-ಪ್ರಗತಿಯ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅರಣ್ಯ ಸಂಪತ್ತಿನ ಲೂಟಿ, ಆದಿವಾಸಿಗಳ ಮೂಲೋಚ್ಚಾಟನೆ ಇತ್ಯಾದಿ ಸಮಸ್ಯೆಗಳ ವಿರುದ್ಧ ಹೋರಾಡುವ ಆದಿವಾಸಿ ಸಮುದಾಯಗಳ ವಿರುದ್ಧ ಸರ್ಕಾರಗಳು ದಮನಕಾರಿ ನೀತಿಯನ್ನು ಅನುಸರಿಸುತ್ತಿವೆ.

೨೦೦೯ರ ಚುನಾವಣೆಗಳಲ್ಲಿ ಅಚ್ಚರಿಯ ಯಶಸ್ಸು ಕಂಡಿರುವ ಯುಪಿಎ ಸರ್ಕಾರಕ್ಕೆ ತನ್ನ ಹೊಸ ಆರ್ಥಿಕ ನೀತಿ ಮತ್ತು ನವ ಉದಾರವಾದವನ್ನು ಅನುಷ್ಟಾನಕ್ಕೆ ತರಲು ಬಲಿಷ್ಠ ಪ್ರಭುತ್ವದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ಕರಾಳಶಾಸನಗಳನ್ನು ಜಾರಿಗೊಳಿಸುತ್ತಿರುವುದು ಒಂದು ಹೆಜ್ಜೆಯಾದರೆ ,ಮತ್ತೊಂದು ಹೆಜ್ಜೆಯನ್ನು ಲಾಲ್‌ಘಡದ ಘಟನೆಗಳಲ್ಲಿ ಕಾಣಬಹುದಾಗಿದೆ. ಈ ತಂತ್ರದಲ್ಲಿ ಪಶ್ಚಿಮಬಂಗಾಲದ ಎಡರಂಗ ಸರ್ಕಾರವನ್ನು ವಿಲನ್ ಮಾಡುವ ಯತ್ನಗಳನ್ನೂ ಮಮತಾ ಬ್ಯಾನರ್ಜಿ ಮಾಡುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಚುನಾವಣೆಗೆ ಮುನ್ನ ಲಾಲ್‌ಘಡದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೇ ಅಲ್ಲದೆ ಪಿಎಸ್‌ಜೆಬಿಸಿ ನಾಯಕ ಛತ್ರಪಾಲ್ ಮಹತೋ ಅವರನ್ನು ವೈಭವೀಕರಿಸಿದ್ದ ಮಮತಾಜಿ ಚುನಾವಣಾ ನಂತರದಲ್ಲಿ ಆತನನ್ನು ಮಾವೋವಾದಿ ಎಂದು ಬಿಂಬಿಸಲು ಯತ್ನಿಸುತ್ತಿರುವುದು ಠಕ್ಕುತನದ ಪರಮಾವಧಿಯಾಗಿದೆ. ಲಾಲ್‌ಘಡದ ಜನತೆ ಮಾವೋವಾದಿಗಳಾದರೆ ನಾನೂ ಮಾವೋವಾದಿಯೇ ಎಂದು ಹೇಳಿದ್ದ ಮಮತಾ ಈಗ ಮಾವೋವಾದಿ ಸಂಪರ್ಕವಿದ್ದ ಮಹತೋ ಅವರನ್ನು ತಮ್ಮ ಪಕ್ಷದಿಂದ ಮೊದಲೇ ಉಚ್ಚಾಟಿಸಿರುವುದಾಗಿ ಹೇಳುತ್ತಿದ್ದಾರೆ.

ಎಡರಂಗ ಸರ್ಕಾರವೂ ತನ್ನ ದ್ವಂದ್ವ ನೀತಿಗಳಿಂದ ಪೇಚಿಗೀಡಾಗಿದೆ. ಒಂದೆಡೆ ಪ್ರಕಾಶ್ ಕಾರಟ್ ಅವರು ಮಾವೋವಾದಿಗಳನ್ನು ರಾಜಕೀಯವಾಗಿ ಜನತೆಯಿಂದ ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳುತ್ತಿರುವಂತೆಯೇ, ಮತ್ತೊಂದೆಡೆ ಮುಖ್ಯಮಂತ್ರಿ ಬುದ್ಧದೇವ ಕೇಂದ್ರ ಮೀಸಲು ಪಡೆಗಳಿಗಾಗಿ ಆಗ್ರಹಿಸುತ್ತಿರುತ್ತಾರೆ. ಲಾಲ್‌ಘಡದಲ್ಲಾಗಲೀ ಇತರ ಯಾವುದೇ ಸಾಮಾಜಿಕ ಕ್ಷೆಭೆ ಇರುವ ಪ್ರದೇಶದಲ್ಲಾಗಲೀ, ಜನರ ಮೂಲಭೂತ ಸಮಸ್ಯೆಗಳಿಗೆ ಆಳ್ವಿಕರು ಸೂಕ್ತ ಸಮಯದಲ್ಲಿ ಸ್ಪಂದಿಸಿ, ಪರಿಹಾರ ಒದಗಿಸದಿದ್ದಲ್ಲಿ, ಅಂತಹ ಪ್ರದೇಶಗಳು ಹೋರಾಟಗಳ ಕೇಂದ್ರ ಬಿಂದುವಾಗುತ್ತವೆ ಎಂಬ ಸಂಗತಿ ಎಡಪಕ್ಷಗಳಿಗೇನೂ ತಿಳಿಯದಿಲ್ಲ. ಇಂತಹ ಪರಿಸ್ಥಿತಿಯಲ್ಲೇ ಮಾವೊವಾದಿಗಳು ತಮ್ಮ ಹಿಂಸಾತ್ಮಕ ಧೋರಣೆಯನ್ನು ಪ್ರತಿಪಾದಿಸುವುದೂ ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಆದಿವಾಸಿಗಳ ಮನಗೆಲ್ಲಲು ಯಾವ ರೀತಿಯ ಕ್ರಮ ಕೈಗೊಂಡಿದ್ದಾರೆ ಎನ್ನುವುದೇ ಇಲ್ಲಿ ಮೂರ್ತ ಪ್ರಶ್ನೆಯಾಗುತ್ತದೆ. ಮಾವೋವಾದಿ ಪಕ್ಷದ ಮೇಲೆ ನಿಷೇದ ಹೇರುವುದರಿಂದ ಆ ಪಕ್ಷ ಪುನಃ ಕಾಡು ಸೇರಬಹುದಷ್ಟೆ. ಆದರೆ ಆದಿವಾಸಿಗಳ ಸಮಸ್ಯೆಗಳು ಬಗೆಹರಿಯುವುದೇ ?

ಮಾವೋವಾದಿ ರಾಜಕೀಯ

ಮತ್ತೊಂದೆಡೆ ಮಾವೋವಾದಿ ಪಕ್ಷದ ನೀತಿಗಳೂ ಪ್ರಶ್ನಾರ್ಹವಾಗಿವೆ. ಯಾವುದೇ ಜನಪರ ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಭಾಗವಹಿಸದೆ, ಗಹನವಾದ ಸಾಮಾಜಿಕ-ಸಾಮುದಾಯಿಕ ಸಮಸ್ಯೆಗಳಿರುವ ಕ್ಷೇತ್ರಗಳಲ್ಲಿ ತಮ್ಮ ನೆಲೆ ಹುಡುಕಿಕೊಳ್ಳುವ ಮಾವೋವಾದಿ ಪಕ್ಷ ಪ್ರಭುತ್ವದ ಕೈ ಮೇಲಾದಾಗಲೆಲ್ಲಾ ಕಾಡು ಸೇರಿಕೊಂಡು ಭೂಗತವಾಗುತ್ತದೆ. ಆದರೆ ಈ ಜನಪರ ಹೋರಾಟಗಳಲ್ಲಿ ಪ್ರಜಾತಾಂತ್ರಿಕ ರೀತಿಯಲ್ಲಿ ಹೋರಾಡುವ ಸಾಮಾನ್ಯ, ಅಮಾಯಕ ಜನತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಪ್ರಜೆಗಳ ತೀವ್ರವಾದಿ ಹೋರಾಟಗಳ ಧೋರಣೆ ಮತ್ತು ಕ್ರಿಯಾಶೀಲತೆಯಿಂದ ದೂರ ಸರಿದಿರುವ ಮಾವೋವಾದಿಗಳು ಪ್ರಸಕ್ತ ಸಾಮಾಜಿಕ ಸ್ಥಿತ್ಯಂತರಳೊಡನೆ ಹೊಂದಿಕೊಳ್ಳುವುದರಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿದೆ. ಪ್ರಜಾಸಮೂಹಗಳನ್ನು ಒಳಗೊಳ್ಳುವ ಹೋರಾಟಗಳನ್ನು ರೂಪಿಸದೆ, ಪ್ರಜೆಗಳ ಅಭಿಪ್ರಾಯ ಸ್ವಾತಂತ್ರ್ಯವನ್ನು ಮನ್ನಿಸದೆ, ಒಂದು ಸಂಘಟನಾತ್ಮಕ ನಿರ್ಣಯಗಳನ್ನು ಬಂದೂಕಿನ ನಳಿಗೆಯ ಮೂಲಕವೇ ಪ್ರಸ್ತುತ ಪಡಿಸಿ ಕ್ರಾಂತಿ ಸಾಧಿಸಲು ಯತ್ನಿಸುವ ಮಾವೋವಾದಿಗಳ ಧೋರಣೆ ಅತ್ತ ಮಾವೋವಾದವೂ ಅಲ್ಲದೆ ಇತ್ತ ನಕ್ಸಲ್‌ವಾದವೂ ಅಲ್ಲದೆ ಪ್ರಕಟಗೊಳ್ಳುತ್ತಿದೆ. ಮಿಲಿಟರಿ ಕಾರ್ಯಾಚರಣೆಯ ಮೂಲಕವೇ, ಹಿಂಸಾತ್ಮಕ ಚಳುವಳಿಯ ಮೂಲಕವೇ ಕ್ರಾಂತಿ ನಡೆಸುವ ಭ್ರಮಾಲೋಕದಲ್ಲಿರುವ ಮಾವೋವಾದಿಗಳಿಗೆ ಜನಸಮುದಾಯಗಳ ಮನದಾಳದಲ್ಲಿರುವ ಪ್ರಜಾಸತ್ತಾತ್ಮಕ ಭಾವನೆಗಳು ಅರ್ಥವೇ ಆಗದಿರುವುದು ವಿಷಾದನೀಯ.

ಲಾಲ್‌ಘಡದಲ್ಲಿ ನಡೆದಿರುವ ಹಲವಾರು ಪ್ರಕರಣಗಳು ಮಾವೋವಾದಿಗಳ ಹಿಂಸಾತ್ಮಕ, ಅಸಹನೆಯ ಧೋರಣೆಯನ್ನು ಪ್ರದರ್ಶಿಸುತ್ತದೆ. ಜೂನ್ ೧೭ ರಂದು ಮೂವರು ಸಿಪಿಎಂ ಸದಸ್ಯರನ್ನು ಹತ್ಯೆಮಾಡಿದ ಮಾವೋವಾದಿಗಳು ತಮ್ಮ ಹೋರಾಟವನ್ನು ವಿರೋಧಿಸುವವರೆಲ್ಲರನ್ನೂ ಮುಗಿಸುವ ನೀತಿಯನ್ನು ಅನುಸರಿಸಿರುವುದು ಲಾಲ್‌ಘಡದಲ್ಲಿ ಸ್ಪಷ್ಟವಾಗಿದೆ. ೨೦೦೨ರಿಂದೀಚೆಗೆ ಮೇದಿನಿಪುರದಲ್ಲಿ ನೂರಕ್ಕೂ ಹೆಚ್ಚು ಜನರನ್ನು ಮಾವೋವಾದಿಗಳು ಕೊಂದಿರುವ ವರದಿಯಾಗಿದೆ. ಈ ವರದಿಗಳಲ್ಲಿ ಉತ್ಪ್ರೇಕ್ಷೆ ಇದ್ದಿರಬಹುದಾದರೂ, ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಇಲ್ಲಿನ ಪ್ರಕ್ಷುಬ್ಧ ವಾತಾವರಣದಲ್ಲಿ ಜನಸಾಮಾನ್ಯರು ಒಂದೆಡೆ ಪೊಲೀಸರ ದೌರ್ಜನ್ಯ ಎದುರಿಸಿದರೆ, ಮತ್ತೊಂದೆಡೆ ಮಾವೋವಾದಿಗಳ ಆಕ್ರಮಣ ಎದುರಿಸಬೇಕಾಗುತ್ತದೆ. ಮಾವೋವಾದಿಗಳಿಂದ ಹತರಾಗುವವರಲ್ಲಿ ಶ್ರಮಜೀವಿಗಳೇ ಹೆಚ್ಚಾಗಿರುವುದು ಮಾರ್ಕ್ಸ್‌ವಾದದ ವಿಡಂಬನೆಯಲ್ಲವೇ ? ಈ ಕಾಳಗದಲ್ಲಿ ಅವರ ಸಮಸ್ಯೆಗಳು ನಗಣ್ಯವಾಗಿ ಇಡೀ ಸನ್ನಿವೇಶ ಗೊಂದಲಮಯವಾಗುತ್ತದೆ. ಲಾಲ್‌ಘಡದಲ್ಲೂ ಇದೇ ಪ್ರಕ್ರಿಯೆಯನ್ನು ಕಾಣಬಹುದಾಗಿದೆ.

ಆದಿವಾಸಿ ಜನಸಮುದಾಯಗಳು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಸ್ಪೋಟಿಸುವುದು, ರೈಲುಗಳನ್ನು ನೆಲಬಾಂಬ್‌ಗಳಿಂದ ಸ್ಫೋಟಿಸುವುದು, ಶಾಲಾ ಕಟ್ಟಡಗಳನ್ನು ಧ್ವಂಸ ಮಾಡುವುದು, ಸಾಮಾನ್ಯ ಜನತೆಯ ಪ್ರಾಣಹಾನಿ ಮಾಡುವುದು ಇವೇ ಮುಂತಾದ ಜನವಿರೋಧಿ ಕೃತ್ಯಗಳಲ್ಲಿ ತೊಡಗುವ ಮಾವೋವಾದಿಗಳ ಪಕ್ಷ ಪ್ರಜಾಕ್ರಾಂತಿ ಸಾಧಿಸುವುದು ಹೇಗೆ ಸಾಧ್ಯ ? ಪ್ರಭುತ್ವದ ವಿರುದ್ಧ ಹೋರಾಟದಲ್ಲಿ ಹಿಂಸೆ ಅನಿವಾರ್ಯ ಎಂದಾದರೆ ಜಿಹಾದಿಗಳ ಹೋರಾಟವೂ ಸಮರ್ಥನೀಯ ಆಗುವುದಲ್ಲವೇ? ಭಾರತೀಯ ಮುಸ್ಲಿಮರಿಗೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಲು ಮುಂಬೈ ಮೇಲೆ ದಾಳಿ ಮಾಡಲಾಗಿದೆ ಎಂದು ಘೋಷಿಸುವ ಭಯೋತ್ಪಾದಕರಿಗೂ, ಆದಿವಾಸಿಗಳಿಗೆ ಅನ್ಯಾಯವಾಗಿರುವುದರಿಂದ ನಾವು ಬಂದೂಕುಗಳನ್ನು ಹಿಡಿದು ಕೊಲೆ, ಸುಲಿಗೆಯಲ್ಲಿ ತೊಡಗುವ ಮೂಲಕ ಪ್ರಭುತ್ವವನ್ನು ಎದುರಿಸುತ್ತೇವೆ ಎಂದು ಹೇಳುವ ಮಾವೋವಾದಿಗಳಿಗೂ ಅತ್ಯಂತ ಸೂಕ್ಷ್ಮ ವ್ಯತ್ಯಾಸ ಮಾತ್ರ ಕಂಡುಬರುತ್ತದೆ. ಹಾಗೆಂದ ಮಾತ್ರಕ್ಕೆ ಕೇಂದ್ರ ಸರ್ಕಾರ ಹೇಳಿರುವಂತೆ ಮಾವೋವಾದಿಗಳನ್ನು ಭಯೋತ್ಪಾದಕರೆಂದು ಪರಿಗಣಿಸಲಾಗುವುದಿಲ್ಲ. ಆದಗ್ಯೂ ಜನಸಮುದಾಯಗಳ ಪ್ರಜಾಸತ್ತಾತ್ಮಕ ಭಾವನೆಗಳಿಗೆ ಸ್ಪಂದಿಸದೆ ತಮ್ಮ ಧೋರಣೆಯನ್ನು ಹೇರಲೆತ್ನಿಸುವ, ಸಿದ್ಧಾಂತದ ಹೆಸರಿನಲ್ಲಿ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗುವ ಮಾವೊವಾದಿಗಳ ರಾಜಕೀಯ ನಿಲುವುಗಳೇ ಪ್ರಶ್ನಾರ್ಹವಾಗಿದೆ.

ಭವಿಷ್ಯದ ಹಾದಿ

ಲಾಲ್‌ಘಡದ ಚಳುವಳಿ ಸ್ವಯಂಪ್ರೇರಣೆಯಿಂದ, ಆದಿವಾಸಿಗಳ ಆಕ್ರೋಶದ ಪರಿಣಾಮವಾಗಿ ಭುಗಿಲೆದ್ದ ಆಂದೋಲನ. ಪಿಎಸ್‌ಜೆಬಿಸಿ ನೇತೃತ್ವದಲ್ಲಿ ಶೀಘ್ರದಲ್ಲೇ ಸಂಘಟನಾತ್ಮಕ ಸ್ವರೂಪ ಪಡೆದುಕೊಂಡಿತ್ತು. ಲಾಲ್‌ಘಡದ ೯೧ ಗ್ರಾಮಗಳಿಂದ ತಲಾ ಹತ್ತು ಪ್ರತಿನಿಧಿಗಲ ತಂಡಗಳು ಗ್ರಾಮಸಮಿತಿಗಳಾಗಿ ರೂಪುಗೊಂಡವು. ಈ ಸಮಿತಿಗಳಲ್ಲಿ ಐವರು ಮಹಿಳೆಯರನ್ನು ಒಳಗೊಳ್ಳಲಾಗಿದೆ. ಪ್ರತಿ ಗ್ರಾಮ ಸಮಿತಿಯಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ರಾಜ್ಯ ಸಮಿತಿಯಿಂದ ನಾಲ್ಕು ಸದಸ್ಯರ ಕೇಂದ್ರ ಸಮಿತಿಯನ್ನು ಚುನಾಯಿಸಲಾಗಿದೆ. ಈ ರೀತಿಯ ಪ್ರಜಾಸತ್ತಾತ್ಮಕ ಸಂರಚನೆಯಿಂದ ಕೂಡಿದ ಚಳುವಳಿ ಸಿಪಿಎಂ ಸರ್ಕಾರದ ದೌರ್ಜನ್ಯದ ವಿರುದ್ಧ ತನ್ನ ಹೋರಾಟವನ್ನು ನಡೆಸುತ್ತಿದೆ. ಈ ಚಳುವಳಿಯ ನಾಯಕತ್ವವನ್ನು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳು ವಹಿಸಿಕೊಳ್ಳದಿರುವಂತೆ ಸಮಿತಿ ಎಚ್ಚರ ವಹಿಸಿದೆ. ಹಾಗಾಗಿಯೇ ಇಡೀ ಚಳುವಳಿಯಲ್ಲಿ ಯಾವುದೇ ಪಕ್ಷಗಳ ಬ್ಯಾನರ್ ಕಂಡುಬರುವುದಿಲ್ಲ. ಎಲ್ಲ ಪ್ರತಿಭಟನಾ ರ್‍ಯಾಲಿಗಳಲ್ಲೂ ಈ ಸಮಿತಿಯ ಸದಸ್ಯರೇ ಮುಂಚೂಣಿಂiiಲ್ಲಿರುವುದನ್ನೂ ಗಮನಿಸಬಹುದು. ಈ ಚಳುವಳಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಮಾವೋವಾದಿ ಪಕ್ಷ ಕ್ರಮೇಣ ತನ್ನದೇ ಆದ ಹೋರಾಟ ಮಾರ್ಗವನ್ನು ಅನುಸರಿಸಿದ್ದು, ಇಡೀ ಚಳುವಳಿಗೆ ಮಾವೋವಾದಿ ಸ್ಪರ್ಶ ನೀಡುವ ಸರ್ಕಾರದ ತಂತ್ರಕ್ಕೆ ಬುನಾದಿಯಾಗಿ ಪರಿಣಮಿಸಿತು.

ಲಾಲ್‌ಘಡದ ಆದಿವಾಸಿಗಳು ತೀವ್ರ ಬಡತನ, ದಾರಿದ್ರ್ಯತೆ ಎದುರಿಸುತ್ತಿದ್ದು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದರೂ, ಪ್ರಸ್ತುತ ಸಂದರ್ಭದಲ್ಲಿ ಅವರ ಬೇಡಿಕೆಗಳು ಈ ಅಂಶಗಳನ್ನು ಒಳಗೊಂಡಿರದೆ, ಸಾಮುದಾಯಿಕ ನ್ಯಾಯ ಮತ್ತು ಮೂಲಭೂತಹಕ್ಕುಗಳನ್ನು ಕುರಿತದ್ದಾಗಿತ್ತು. ಪೊಲೀಸ್ ದೌರ್ಜನ್ಯ, ಅಮಾಯಕರ ಬಂಧನ, ಪ್ರಭುತ್ವದ ದಮನಕಾರಿ ನೀತಿ ಇವುಗಳ ವಿರುದ್ಧ ಆದಿವಾಸಿಗಳ ಹೋರಾಟ ರೂಪುಗೊಂಡಿತ್ತು. ಏತನ್ಮಧ್ಯೆ ಪಿಎಸ್‌ಜೆಬಿಸಿ ಸಮಿತಿ ತನ್ನ ಸದಸ್ಯರನ್ನೇ ಒಳಗೊಂಡು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿತ್ತು. ಅನೇಕ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ , ಕೆರೆಗಳ ನಿರ್ಮಾಣ, ಬೋರ್‌ವೆಲ್‌ಗಳು, ಕೆರೆಕಟ್ಟೆಗಳ ನಿರ್ಮಾಣ ಮುಂತಾದ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಮಿತಿ ತೊಡಗಿಸಿಕೊಂಡಿದ್ದಾರೆ. ತಮ್ಮ ಪರಿಶ್ರಮದ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದೇ ಅಲ್ಲದೆ ಸ್ಥಳೀಯ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ನೀರಾವರಿ ಆಧಾರಿತ ಕೃಷಿಯನ್ನೂ ಆದಿವಾಸಿಗಳು ಪಾಲಿಸುತ್ತಿದ್ದಾರೆ. ಎರಡು ಗ್ರಾಮಗಳಲ್ಲಿ ಸಮಿತಿಯ ವತಿಯಿಂದ ಆರೋಗ್ಯ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರದ ಆದೇಶಗಳನ್ನು ಲೆಕ್ಕಿಸದೆ ಸಂತಾಲ್ ಆದಿವಾಸಿಗಳಿಗೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ಒದಗಿಸಲಾಗುತ್ತಿದೆ.

ಈ ದೃಷ್ಟಿಯಿಂದ ನೋಡಿದಾಗ ಲಾಲ್‌ಘಡದ ಆದಿವಾಸಿಗಳ ಚಳುವಳಿ ಜನಸಮುದಾಯಗಳ ಬದುಕುವ ಹಕ್ಕಿಗಾಗಿ, ಅಸ್ಮಿತೆಗಾಗಿ, ಸಾಮಾಜಿಕ ಘನತೆಗಾಗಿ, ಆರ್ಥಿಕ ಪ್ರಗತಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಪ್ರಜಾಂದೋಲನ ಎಂದೇ ಹೇಳಬಹುದು. ಇಲ್ಲಿನ ಜನತೆಯ ಮನದಾಳದಲ್ಲಿ ಮೂಡಿರುವ ಪರಿತ್ಯಕ್ತ ಭಾವನೆಗಳೇ ಚಳುವಳಿಗೆ ಹೆಚ್ಚಿನ ಕಾವು ನೀಡುತ್ತಿರುವುದೂ ಸ್ಪಷ್ಟವಾಗಿದೆ. ಆಳುವ ವರ್ಗಗಳ ನಿರ್ಲಕ್ಷ್ಯ ಮತ್ತು ದಮನಕಾರಿ ಧೋರಣೆಗಳು ಈ ಭಾವನೆಗಳನ್ನು ಕೆರಳಿಸಿರುವುದೂ ಸಹಜವೇ ಆಗಿದೆ. ಆದರೆ ಸಿಪಿಎಂ-ಮಾವೋವಾದಿಗಳು ಮತ್ತು ಪ್ರಭುತ್ವಗಳ ನಡುವಿನ ಆಕ್ರಮಣಕಾರಿ ಕಲಹದಲ್ಲಿ ಬಂಧಿಗಳಾಗಿರುವ ಲಾಲ್‌ಘಡದ ಆದಿವಾಸಿಗಳು ತಮ್ಮ ಆಶಯಗಳಿಗೆ ವಿರುದ್ಧವಾಗಿ ಇನ್ನೂ ಹೆಚ್ಚು ದಮನಕ್ಕೊಳಗಾಗುತ್ತಿರುವುದು ವಿಪರ್ಯಾಸ.

ಈ ಸಂದರ್ಭದಲ್ಲಿ ಮಾವೋವಾದಿ ಪಕ್ಷದ ನಿಷೇದ, ಮಾವೋವಾದಿ ವಕ್ತಾರರ ಬಂಧನ, ಪಿಎಸ್ ಜೆಬಿಸಿ ಸಮಿತಿಯ ನಾಯಕರ ಬಂಧನ ಮತ್ತು ಮಿಲಿಟರಿ ಕಾರ್ಯಾಚರಣೆಗಳು ಇಡೀ ಆಂದೋಲನವನ್ನು ಹಿಮ್ಮೆಟ್ಟಿಸಿದೆ. ತತ್ಪರಿಣಾಮವಾಗಿ ಆದಿವಾಸಿಗಳ ಪರಿತ್ಯಕ್ತ ಭಾವನೆ ಇನ್ನೂ ಹೆಚ್ಚಾಗುತ್ತಿದೆ. ಈ ಸನ್ನಿವೇಶಕ್ಕೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಮಾವೋವಾದಿಗಳು ಕಾರಣರಾಗಿದ್ದಾರೆ. ಕೊಲೆ, ಸುಲಿಗೆ, ಬಾಂಬ್ ಸ್ಫೋಟ ಮುಂತಾದ ಹಿಂಸಾತ್ಮಕ ಧೋರಣೆಯನ್ನು ಅನುಸರಿಸುವುದರ ಮೂಲಕ ಒಂದು ಪ್ರಜಾಂದೋಲನದ ಮೂಲ ಆಶಯವನ್ನೇ ಬುಡಮೇಲು ಮಾಡಿರುವ ಮಾವೋವಾದಿಗಳ ರಾಜಕೀಯ ಧೋರಣೆ ಮತ್ತು ಆದರ್ಶವೂ ಇಲ್ಲಿ ಪ್ರಶ್ನಾರ್ಹವಾಗುತ್ತದೆ. ಪ್ರಭುತ್ವದ ದಮನಕಾರಿ ನೀತಿಗೆ ಪುಷ್ಟಿ ನೀಡುವ ಮೂಲಕ ಮಾವೋವಾದಿಗಳು ಆದಿವಾಸಿಗಳ ವಿಶ್ವಾಸ ದ್ರೋಹ ಎಸಗಿರುವುದೂ ಸ್ಪಷ್ಟವಾಗಿದೆ. ಲಾಲ್‌ಘಡದ ಆದಿವಾಸಿ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಭೂಮಿ, ನೀರಾವರಿ ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತವೆ. ಈ ಸಮಸ್ಯೆಗಳನ್ನು ನಿವಾರಿಸುವಲ್ಲಿ ಒಂದು ಪ್ರಜಾತಾಂತ್ರಿಕ ವೇದಿಕೆ ಸಿದ್ಧಪಡಿಸುವುದು ಯಾವುದೇ ಆಳುವ ಪಕ್ಷಗಳ ಕರ್ತವ್ಯವೂ ಆಗಿದೆ.

ಜನಾಂದೋಲನಗಳ ಪರಂಪರೆಯಲ್ಲೇ ಅನೇಕ ಹೋರಾಟಗಳಲ್ಲಿ ತೊಡಗಿ ಮೂರು ದಶಕಗಳಿಗೂ ಹೆಚ್ಚುಕಾಲ ಆಡಳಿತ ನಡೆಸಿರುವ ಸಿಪಿಎಂ ನೇತೃತ್ವದ ಸರ್ಕಾರ ಲಾಲ್‌ಘಡದ ಆದಿವಾಸಿಗಳಿಗೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಇಡುವ ಪ್ರತಿಯೊಂದು ಹೆಜ್ಜೆಯೂ ಮಹತ್ವ ಪಡೆಯುತ್ತದೆ. ಇದರಿಂದ ಸಿಪಿಎಂ ಪಕ್ಷದ ಆಶಯವಾದ ಮಾವೋವಾದಿಗಳನ್ನು ಜನರಿಂದ ರಾಜಕೀಯವಾಗಿ ದೂರ ಮಾಡುವ ಇಚ್ಚೆಯೂ ಪೂರೈಸಿದಂತಾಗುತ್ತದೆ. ಲಾಲ್‌ಘಡದ ಆದಿವಾಸಿಗಳ ಹೋರಾಟ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವಂತಹುದು. ಅನೇಕ ಜನಪರ ಹೋರಾಟಗಳಿಗೆ ಆದರ್ಶಪ್ರಾಯವಾಗುವಂತಹುದು. ಆಳುವ ಪಕ್ಷಗಳು ಮತ್ತು ಪ್ರಭುತ್ವ ಈ ಸತ್ಯಾಂಶವನ್ನು ಗ್ರಹಿಸಿ, ಜನಸಮುದಾಯಗಳ ಮೂಲಭೂತ ಆಶಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದಲ್ಲಿ ಲಾಲ್‌ಘಡದ ಮತ್ತೊಂದು ಸ್ವರೂಪ ವ್ಯಕ್ತವಾಗುವುದಿಲ್ಲ.

ನಾ ದಿವಾಕರ..