You are hereForums / ಸಾಮಾಜಿಕ ವಿಚಾರಗಳು / ಬಂದೀಖಾನೆಯಲ್ಲಿ ನಲುಗಿದ ಜೀವಗಳು

ಬಂದೀಖಾನೆಯಲ್ಲಿ ನಲುಗಿದ ಜೀವಗಳು


By DIVAKAR N - Posted on 23 June 2009

ಜೂನ್ 25 ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ದಿನ. ಪ್ರಜಾತಂತ್ರದ ದೃಷ್ಟಿಯಿಂದ ಕರಾಳ ದಿನವೂ ಹೌದು. ೩೪ ವರ್ಷಗಳು ಕಳೆದರೂ ಈ ಕರಾಳ ದಿನದ ನೆನಪು ಭಾರತೀಯರನ್ನು ಕಾಡುತ್ತಿದ್ದರೆ ಅತಿಶಯವಲ್ಲ. ಏಕೆಂದರೆ ಪ್ರಸ್ತುತ ಸಂದರ್ಭದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿಲ್ಲದಿದ್ದರೂ, ತುರ್ತುಪರಿಸ್ಥಿತಿಯ ಪರಂಪರೆ ಮತ್ತು ಕರಿನೆರಳು ಭಾರತೀಯ ಸಮಾಜವನ್ನು ಆವರಿಸಿರುವುದು ಸ್ಪಷ್ಟ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಸರ್ಕಾರವಾದರೂ ಕಾನೂನು ಸುವ್ಯವಸ್ಥೆಯ ರಕ್ಷಣೆಗಾಗಿ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅಪರಾಧಿಗಳನ್ನು ಶಿಕ್ಷಿಸಬೇಕಾಗುತ್ತದೆ, ಪಾತಕಿ ಕೃತ್ಯಗಳನ್ನು ನಿಯಂತ್ರಿಸಬೇಕಾಗುತ್ತದೆ. ಇದು ಅವಶ್ಯವೂ ಹೌದು. ಆದರೆ ಭಾರತೀಯ ಸಂದರ್ಭದಲ್ಲಿ ವಿಭಿನ್ನ ರೀತಿಯ ಸನ್ನಿವೇಶವನ್ನು ನೋಡಬಹುದಾಗಿದೆ.

ಸಾಮಾಜಿಕ ಚೌಕಟ್ಟಿನಲ್ಲಿರುವ ತಾರತಮ್ಯ ನೀತಿಗಳು, ಅಸಮಾನತೆಗಳು, ಪಾತಕೀ ಕೃತ್ಯಗಳ ನಿಗ್ರಹ ಪ್ರಕ್ರಿಯೆಯಲ್ಲೂ ಕಾಣಬಹುದು. ಕೋಟ್ಯಾಂತರ ರೂಗಳನ್ನು ವಂಚಿಸಿದ ಪಾತಕಿಗಳು, ಸಾವಿರಾರು ಅಮಾಯಕ ಜನರ ಹತ್ಯೆಗೆ ಕಾರಣರಾದ ಅಪರಾಧಿಗಳು, ಸಮಾಜದ ಸ್ವಾಸ್ಥ್ಯ-ಸೌಹಾರ್ದತೆಯನ್ನೇ ಹಾಳುಮಾಡುವ ಸಮಾಜಘಾತುಕರು ಸುಲಭವಾಗಿ ಅಪರಾಧಗಳಿಂದ ತಪ್ಪಿಸಿಕೊಳ್ಳುತ್ತಾರೆ. ಮತ್ತೊಂದೆಡೆ ಕಿತ್ತು ತಿನ್ನುವ ಬಡತನ, ದಾರಿದ್ರ್ಯತೆ, ಅನಕ್ಷರತೆ, ವಸತಿಹೀನತೆ ಇವೇ ಮುಂತಾದ ಸಾಮಾಜಿಕ ಕಾರಣಗಳಿಗಾಗಿ ಸಣ್ಣ ಪುಟ್ಟ ಅಪರಾಧಗಳನ್ನೆಸಗಿದ ಸಾಮಾನ್ಯ ಜನತೆ ಜೈಲುಗಳಲ್ಲಿ ಕೊಳೆಯುತ್ತಿರುತ್ತಾರೆ. ಅಕ್ರಮವಾಗಿ ಕೋಟ್ಯಾಂತರ ರೂಗಳ ಆಸ್ತಿ ಸಂಪಾದಿಸಿ ಲೋಕಾಯುಕ್ತರ ಬಲೆಗೆ ಬೀಳುವ ತಿಮಿಂಗಿಲಗಳು ನುಣುಚಿಕೊಂಡರೆ, ಸಣ್ಣ ಪುಟ್ಟ ಮೀನುಗಳು ಶಿಕ್ಷೆ ಅನುಭವಿಸಿ ನಲುಗುತ್ತವೆ. ಇದು ಭಾರತೀಯ ಪ್ರಜಾತಂತ್ರದ ವಿಪರ್ಯಾಸ. ಈ ಸಂದರ್ಭದಲ್ಲಿ ಭಾರತದ ಜೈಲುಗಳಲ್ಲಿರುವ ವಿಚಾರಣಾಧೀನ ಖೈದಿಗಳನ್ನು ಕುರಿತು ಅವಲೋಕಿಸುವುದು ಅಗತ್ಯ.

ಭಾರತೀಯ ಜೈಲುಗಳ ಕಥನ

ದೇಶಾದ್ಯಂತ ಸಾವಿರಾರು ಸಾಮಾನ್ಯ ಜನತೆ ಯಾವುದೇ ವಿಚಾರಣೆಗೊಳಗಾಗದೆ ತಮ್ಮ ಕುಟುಂಬಗಳಿಂದ ವರ್ಷಗಳಿಂದ ದೂರವಾಗಿ, ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಒಟ್ಟು ಜೈಲುವಾಸಿಗಳಲ್ಲಿ ಮೂರನೆ ಎರಡರಷ್ಟಿರುವ ವಿಚಾರಣಾಧೀನ ಖೈದಿಗಳ ಬವಣೆ ದಶಕಗಳಿಂದಲೂ ನ್ಯಾಯ ಶಾಸ್ತ್ರ ಪಂಡಿತರನ್ನು, ನ್ಯಾಯಾಂಗ ತಜ್ಞರನ್ನು ಕಾಡುತ್ತಿದೆ. ಆದರೆ ಜೈಲುಗಳಲ್ಲಿರುವ ಅಸಂಖ್ಯಾತ ಮಹಿಳೆಯರಿಗೆ, ಪುರುಷರಿಗೆ, ಕೆಲವೊಮ್ಮೆ ಮಕ್ಕಳಿಗೆ ಯಾವುದೇ ಪ್ರಯೋಜನವಾಗಿಲ್ಲ. ತಮ್ಮ ಬಡತನ ಮತ್ತು ದಾರಿದ್ರ್ಯತೆಯನ್ನು ಸಹಿಸದೆ ಅಪರಾಧ ಮಾಡುವ ಈ ಅಮಾಯಕ ಜನತೆಗೆ ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವಾಗಲೀ, ವ್ಯವಧಾನವಾಗಲೀ ಇಲ್ಲದಿರುವುದು ಮತ್ತು ನಾಗರಿಕ ಸಮಾಜ ಈ ಕುರಿತು ಗಂಭೀರವಾಗಿ ಪ್ರತಿಕ್ರಯಿಸದಿರುವುದೂ ವಿಷಾದನೀಯ.

ನ್ಯಾಯಾಂಗ ಶಾಸ್ತ್ರದಲ್ಲಿ, ಯಾವುದೇ ಒಂದು ಅಪರಾಧ ಎಸಗಿ, ಬಂಧಿಸಲ್ಪಟ್ಟು, ವಿಚಾರಣೆಗೊಳಗಾಗದೆ, ಜಾಮೀನು ದೊರೆಯದೆ, ಜೈಲುವಾಸಿಯಾಗಿರುವವರನ್ನು ವಿಚಾರಣಾಧೀನ ಖೈದಿಗಳೆಂದು ಪರಿಗಣಿಸಲಾಗುತ್ತದೆ. ಈತ/ಈಕೆ ಕಾನೂನು ಉಲ್ಲಂಘಿಸಿದ್ದರೂ ಅದು ನಿರೂಪಿತವಾಗಿರುವುದಿಲ್ಲ, ಮತ್ತು ಜಾಮೀನಿಗೆ ಅರ್ಹನಾಗಿರುವುದಿಲ್ಲ ಅಥವಾ ಜಾಮೀನು ಪಡೆಯುವ ಸಾಮರ್ಥ್ಯವಿರುವುದಿಲ್ಲ. ಈ ರೀತಿಯ ವಿಚಾರಣಾಧೀನ ಖೈದಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ೨೦೦೬ರ ಅಂಕಿ ಅಂಶಗಳ ಪ್ರಕಾರ ಭಾರತದ ಜೈಲುಗಳಲ್ಲಿರುವ ಒಟ್ಟು ೩೭೩೦೦೦ ಖೈದಿಗಳ ಪೈಕಿ ೨೪೩೦೦೦ ಖೈದಿಗಳು ವಿಚಾರಣಾಧೀನ ಖೈದಿಗಳಾಗಿರುತ್ತಾರೆ. ಇವರಲ್ಲಿ ಶೇ. ೯೬ರಷ್ಟು ಪುರುಷರೇ ಇದ್ದಾರೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ ಬಿಹಾರ ಎರಡನೆ ಸ್ಥಾನ ಪಡೆಯುತ್ತದೆ.

1978ರಲ್ಲಿ ರಾಷ್ಟ್ರೀಯ ಪೊಲೀಸ್ ಸಮಿತಿಯ ಸದಸ್ಯರಾಗಿದ್ದ ಕೆ.ಎಫ್. ರುಸ್ತಂಜಿ ಅವರು ವಿಚಾರಣಾಧೀನ ಖೈದಿಗಳನ್ನು ಕುರಿತಂತೆ ಈ ಅಮಾಯಕ ಜನತೆ ವ್ಯವಸ್ಥೆಯ ಭಾರಕ್ಕೆ ಸಿಲುಕಿ ಕೃಶರಾಗುತ್ತಿದ್ದಾರೆ. ತಮ್ಮ ವಿರುದ್ಧ ಇರುವ ಆರೋಪವೇನು, ತಾವು ಎಸಗಿದ ಅಪರಾಧವೇನು, ನಮ್ಮನ್ನು ಏಕೆ ಜೈಲಿನಲ್ಲಿ ಬಂಧಿಸಲಾಗಿದೆ, ತಮ್ಮ ಭವಿಷ್ಯವೇನು, ಯಾವುದನ್ನೂ ಅರಿಯದ ಈ ಅಮಾಯಕ ಜನತೆಯನ್ನು ನೋಡಿದರೆ ಖೇದವಾಗುತ್ತದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಯಾವುದೇ ಅಪರಾಧ ಎಸಗಿರುವ ಸಾಕ್ಷಿಗಳು ಲಭ್ಯವಿಲ್ಲದಿದ್ದರೂ ಈ ವಿಚಾರಣಾಧೀನ ಖೈದಿಗಳನ್ನು ದೀರ್ಘಾವಧಿ ಕಾಲ ಬಂಧನದಲ್ಲಿರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಜೈಲಿನಲ್ಲಿ ಕಳೆದ ಜೀವನದ ಅಮೂಲ್ಯ ಕ್ಷಣಗಳು ಹಿಂದಿರುಗಿ ಬರುವುದಿಲ್ಲ ಎಂಬ ವಾಸ್ತವವಾಗಲೀ, ಒಮ್ಮೆ ಜೈಲಿಗೆ ಹೋಗಿ ಬಂದವರು ಸಮಾಜದ ದೃಷ್ಟಿಯಲ್ಲಿ ಶಾಶ್ವತ ಕಳಂಕಿತರಾಗಿಬಿಡುವರೆಂಬ ಸತ್ಯವಾಗಲೀ, ನಾಗರಿಕ ಸಮಾಜವನ್ನು, ನ್ಯಾಯಾಂಗ ವ್ಯವಸ್ಥೆಯನ್ನು ಕಾಡದಿರುವುದು ವಿಪರ್ಯಾಸಕರ.

ಈ ಖೈದಿಗಳ ಪೈಕಿ ಹಲವರನ್ನು ಯಾವುದೇ ಕಾರಣವಿಲ್ಲದೆ, ಸಂಶಯದ ಮೇಲೆ ಬಂಧಿಸಿರುವ ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿವೆ. ಅಪರಾಧ ತಡೆಗಟ್ಟಲು ಪೂರ್ವಭಾವಿಯಾಗಿ ಸಂಶಯದ ಮೇಲೆ ಬಂಧಿಸಲಾಗುವ ಈ ಖೈದಿಗಳು ಬಹುತೇಕವಾಗಿ ಬಡತನದಿಂದ ಬಳಲುತ್ತಿರುವ ಅಮಾಯಕ ಜನರೇ ಆಗಿರುತ್ತಾರೆ. ಅಥವಾ ಯಾವುದೋ ಪ್ರಕ್ಷುಬ್ಧ ಗಲಭೆಗಳಲ್ಲಿ ಸಿಲುಕಿದವರಾಗಿರುತ್ತಾರೆ. ಕೋಮುಸಂಘರ್ಷಗಳು, ಭಯೋತ್ಪಾದಕ ಕೃತ್ಯಗಳು, ಜಾತಿ ಸಂಘರ್ಷಗಳು, ಸಾಮಾಜಿಕ ಕ್ಷೆಭೆಗಳು ಮುಂತಾದ ಸಂದರ್ಭಗಳಲ್ಲಿ ಈ ರೀತಿಯ ಬಂಧನಗಳು ಸರ್ವೇ ಸಾಮಾನ್ಯವಾಗಿರುತ್ತದೆ. ಆದರೆ ಈ ಪ್ರಕರಣಗಳ ಮೊಕದ್ದಮೆಗಳು ವರ್ಷಾನುಗಟ್ಟಳೆ ನಡೆಯುವುದರಿಂದ, ಬಂಧಿತರಾದ ಅಮಾಯಕ ಜನತೆ, ಯಾವುದೇ ಅಪರಾಧ ಎಸಗದಿದ್ದರೂ ಜೈಲುವಾಸಿಗಳೆಂಬ ಹಣೆಪಟ್ಟಿ ಧರಿಸಬೇಕಾಗುತ್ತದೆ.

ಸಾರ್ವಜನಿಕ ಉದ್ದೇಶಿತ ಶಾಸನಗಳಲ್ಲಿ ಈ ಖೈದಿಗಳನ್ನು ಕುರಿತು ಕಾಳಜಿ ವ್ಯಕ್ತವಾಗುವುದೇ ವಿರಳ. ಸಾವಿರಾರು ಸಂಖ್ಯೆಯ ಪುರುಷರು, ಮಹಿಳೆಯರು ಮತ್ತು ಮಕ್ಕಳು ವರ್ಷಾನುಗಟ್ಟಳೆ ಯಾವುದೇ ವಿಚಾರಣೆಗೊಳಗಾಗದೆ ಜೈಲುಗಳಲ್ಲಿದ್ದಾರೆ. ಈ ಜನತೆಯ ವಿರುದ್ಧ ಇರುವ ಆರೋಪಗಳು ಕ್ಷುಲ್ಲಕವಾಗಿದ್ದು, ಒಂದು ವೇಳೆ ಶಿಕ್ಷೆಗೊಳಗಾದರೂ, ಕೆಲವು ತಿಂಗಳು ಅಥವಾ ಒಂದು-ಎರಡು ವರ್ಷಗಳ ಕಾಲ ಜೈಲುವಾಸಕ್ಕೆ ಒಳಗಾಗಬಹುದು. ವಿಪರ್ಯಾಸವೆಂದರೆ ಇಂತಹ ಅಸಂಖ್ಯಾತ ಖೈದಿಗಳು ಹತ್ತಾರು ವರ್ಷಗಳ ಕಾಲ ಜೈಲಿನಲ್ಲಿರುವುದು ವಿಷಾದನೀಯ ಎಂದು ಸರ್ವೋಚ್ಛನ್ಯಾಯಾಲಯವೇ ಹೇಳಿರುವುದು ಇಲ್ಲಿ ಗಮನಾರ್ಹ. ಈ ರೀತಿ ಬಂಧನಕ್ಕೊಳಗಾದ ಅಮಾಯಕರಿಗೆ ಭಾರತೀಯ ನ್ಯಾಯ ವ್ಯವಸ್ಥೆಯ ಮೇಲೆ ಹೇಗೆ ವಿಶ್ವಾಸ ಬರಲು ಸಾಧ್ಯ ಎಂಬ ಪ್ರಶ್ನೆ ನ್ಯಾಯಶಾಸ್ತ್ರಜ್ಞರನ್ನೂ ಗಾಢವಾಗಿ ಕಾಡುತ್ತಿದ್ದು ಅನೇಕ ಸಂದರ್ಭಗಳಲ್ಲಿ ನ್ಯಾಯಾಲಯಗಳಲ್ಲೂ ವ್ಯಕ್ತವಾಗಿದೆ.

ಬಂಧನಕ್ಕೊಳಗಾದ ವ್ಯಕ್ತಿ ತೀವ್ರ ಮಾನಸಿಕ ಒತ್ತಡಕ್ಕೊಳಗಾಗುವುದು ಸಹಜ. ಬ್ರಿಟೀಷರ ವಿರುದ್ಧ ಹೋರಾಟದಲ್ಲಿ ಅನೇಕ ಬಾರಿ ಜೈಲುವಾಸ ಅನುಭವಿಸಿದ ಜವಹರಲಾಲ್ ನೆಹರೂ ಅವರು ಜೈಲಿನ ಎತ್ತರದ ಗೋಡೆಗಳು ಮತ್ತು ಕಬ್ಬಿಣದ ಸರಳುಗಳು ಬಂದೀಖಾನೆಯನ್ನು ಬಾಹ್ಯ ವಿಶ್ವದಿಂದ ಸಂಪೂರ್ಣವಾಗಿ ಬೇರ್ಪಡಿಸುತ್ತದೆ. ಈ ಜೈಲಿನ ಪ್ರಪಂಚದಲ್ಲಿ ಎಲ್ಲವೂ ವಿಭಿನ್ನ. ಇಲ್ಲಿ ಬಣ್ಣಗಳಿಲ್ಲ, ಬದಲಾವಣೆಯ ಗಾಳಿಯಿಲ್ಲ, ಚಲನೆ ಇಲ್ಲ, ಭರವಸೆ ಇಲ್ಲ, ಹರುಷವಿಲ್ಲ. ಏಕತಾನತೆಯಲ್ಲಿ ಜೀವನ ಸಾಗುತ್ತದೆ. ಏರು ದಿಬ್ಬಗಳಿಲ್ಲದ ಮರುಭೂಮಿಯಂತಿರುವ ಬಂದೀಖಾನೆಯಲ್ಲಿ ದಾಹ ತೀರಿಸಿಕೊಳ್ಳಲು ನೀರು ಸಿಗುವುದಿಲ್ಲ. ಸುಡುವ ಶಾಖದಿಂದ ಪಾರಾಗಲು ಆಶ್ರಯವಿಲ್ಲ. ಇಲ್ಲಿ ದಿನಗಳು ವಾರಗಳಂತೆ, ವಾರಗಳು ತಿಂಗಳಿನಂತೆ, ಜೀವನದ ಕ್ಷಣಗಳು ನಿರ್ನಾಮವಾಗುವ ರೀತಿಯಲ್ಲಿ ಉರುಳುತ್ತವೆ. ಪ್ರಭುತ್ವದ ಶಕ್ತಿಯ ಎದುರು ಜೈಲುವಾಸಿಯ ಶಕ್ತಿ ಉಡುಗಿಹೋಗಿರುತ್ತದೆ. ಜೈಲು ವಾಸಿಯ ನೋವಿನ ಆಕ್ರಂದನ ಯಾರಿಗೂ ಕೇಳುವುದಿಲ್ಲ, ವೇದನೆಯ ಅಳುವಿನ ದನಿ ಜೈಲಿನ ಗೋಡೆಗಳನ್ನು ದಾಟಿ ಹೋಗುವುದಿಲ್ಲ ಎಂದು ಹೇಳಿರುವುದು ಮಾರ್ಮಿಕವಾಗಿದೆ.

ನಾ ದಿವಾಕರ