You are hereForums / ಸಾಮಾಜಿಕ ವಿಚಾರಗಳು / ಎಡವಿದ ಆದರ್ಶ - ನಲುಗಿದ ಸಮುದಾಯ

ಎಡವಿದ ಆದರ್ಶ - ನಲುಗಿದ ಸಮುದಾಯ


By DIVAKAR N - Posted on 07 June 2009

ಎಡವಿದ ಆದರ್ಶ-ನಲುಗಿದ ಸಮುದಾಯ

ಇತ್ತೀಚೆಗೆ ಶ್ರೀಲಂಕಾದ ಸೇನೆಯ ಗುಂಡಿಗೆ ಬಲಿಯಾದ ಎಲ್.ಟಿ.ಟಿ.ಇ ನಾಯಕ ವೇಲುಪಿಳ್ಳೈ ಪ್ರಭಾಕರನ್, ಶ್ರೀಲಂಕಾದ ತಮಿಳು ಸಮುದಾಯಗಳ ದೃಷ್ಟಿಯಲ್ಲಿ ಅಂತಿಮ ಉಸಿರಿರುವವರೆಗೂ ಧೀರೋದ್ಧತ್ತವಾಗಿ ಹೋರಾಡಿದ ಅಪ್ರತಿಮ ನಾಯಕನಾಗಿ ಕಂಡುಬಂದರೆ ಅಚ್ಚರಿಯೇನಿಲ್ಲ. ೫೪ ವರ್ಷದ ಪ್ರಭಾಕರನ್ ಪ್ರತ್ಯೇಕ ಈಲಂ ರಾಜ್ಯಕ್ಕಾಗಿ ಹೋರಾಡಲು ಕಟ್ಟಿದ ಎಲ್.ಟಿ.ಟಿ.ಇ ಸಂಘಟನೆಯನ್ನು ಸ್ಥಾಪಿಸಿದ್ದೇ ಅಲ್ಲದೆ ಅತ್ಯಂತ ಕಟ್ಟುನಿಟ್ಟಿನ, ಶಿಸ್ತುಬದ್ಧ ಉಗ್ರಗಾಮಿ ಸಂಘಟನೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು. ಆತ್ಮಹತ್ಯಾ ದಳಗಳನ್ನು, ಮಾನವ ಬಾಂಬುಗಳನ್ನು ರೂಪಿಸುವಲ್ಲಿ ಮಾದರಿಯನ್ನು ನೀಡಿದ್ದೇ ಎಲ್.ಟಿ.ಟಿ.ಇ ಎಂದು ಹೇಳಬಹುದು. ತನ್ನದೇ ಆದ ನೌಕಾದಳ, ವಾಯುದಳವನ್ನು ಹೊಂದಿದ್ದ ಈ ಸಂಘಟನೆ, ವಿಶ್ವಸಂಸ್ಥೆಯ ಅಭಿಪ್ರಾಯದಲ್ಲಿ ಅತ್ಯಂತ ಮುಂದುವರಿದ ಶಸ್ತಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕ ಸಂಘಟನೆಯಾಗಿತ್ತು. ಈಲಂ ರಾಜ್ಯದ ಸ್ಥಾಪನೆಗಾಗಿ ಯಾವುದೇ ರೀತಿಯ ತ್ಯಾಗಕ್ಕಾದರೂ ಸಿದ್ಧರಾಗಿದ್ದ ಪ್ರಭಾಕರನ್‌ಗೆ, ಬಹುಸಂಖ್ಯಾತ ಬೌದ್ಧರ ಸಿಂಹಳ ನಾಡಿನಲ್ಲಿ ತಮಿಳು ಜನಸಮುದಾಯಗಳಿಗೆ ಪ್ರತ್ಯೇಕ ರಾಜ್ಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ತಾವು ಕೈಗೊಂಡ ಸಾಹಸಮಯ ಕಾರ್ಯದಿಂದ ಸಾಹಸದಿಂದ ಒಂದು ಲಕ್ಷಕ್ಕೂ ಹೆಚ್ಚು ಸಹವರ್ತಿಗಳು ಬಲಿದಾನವಾದದ್ದು ವಿಶೇಷ ಸಂಗತಿ ಎನಿಸಿರಲೇ ಇಲ್ಲ.

ಶ್ರೀಲಂಕಾದ ವಲವೆಟ್ಟಿತುರೈ ಎಂಬ ಮೀನುಗಾರರ ಪಟ್ಟಣದಲ್ಲಿ, ಹಿಂದೂ ತಮಿಳು ಅಲ್ಪಸಂಖ್ಯಾತ ಕುಟುಂಬದಲ್ಲಿ ಜನಿಸಿದ ಪ್ರಭಾಕರನ್ ಬಾಲ್ಯದಿಂದಲೂ ಅಂತರ್ಮುಖಿಯಾಗಿಯೇ ಬೆಳೆದಿದ್ದರು. ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ನೆಲೆಸಿದ್ದ ಹಿಂದೂಗಳು ಬ್ರಿಟೀಷರ ಆಡಳಿತಾವಧಿಯಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ್ದುದಲ್ಲದೆ, ಅಧಿಕಾರಶಾಹಿಯಲ್ಲೂ ಪ್ರಾಬಲ್ಯ ಗಳಿಸಿದ್ದರು. ಬ್ರಿಟೀಷರ ವತಿಯಿಂದ ಭಾರತದಿಂದ ವಲಸೆ ಬಂದಿದ್ದ ಕಾರ್ಮಿಕ ವರ್ಗಗಳೂ ಇವರ ಪೈಕಿ ಒಂದಾಗಿದ್ದರು. ಆದರೆ ಬ್ರಿಟೀಷರ ನಿರ್ಗಮನದ ನಂತರದಲ್ಲಿ ಅಧಿಕಾರ ವಹಿಸಿಕೊಂಡ ಸಿಂಹಳೀಯರ ಸರ್ಕಾರ ತನ್ನ ಜನಾಂಗೀಯ ಭಾವನೆಗಳಿಗೆ ಪೂರಕವಾಗಿ ಅನೇಕ ತಾರತಮ್ಯ ನೀತಿಗಳನ್ನು ಅನುಸರಿಸತೊಡಗಿತ್ತು. ತತ್ಪರಿಣಾಮವಾಗಿ ಅಂಚಿಗೆ ತಳ್ಳಲ್ಪಟ್ಟ ತಮಿಳು ಸಮುದಾಯಕ್ಕೆ ತಮ್ಮ ಅಸ್ಮಿತೆಗಾಗಿ, ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಹೋರಾಡುವುದು ಅನಿವಾರ್‍ಯವಾಗಿತ್ತು. ಈ ಸಂದರ್ಭದಲ್ಲೇ ಯುವಕ ಪ್ರಭಾಕರನ್ ೧೯೭೨ರಲ್ಲಿ ತಮಿಳು ನ್ಯೂ ಟೈಗರ್‍ಸ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಈ ಕಾಲಘಟ್ಟದಲ್ಲಿ ಇತರ ಸೌಮ್ಯವಾದಿ ತಮಿಳು ಸಂಘಟನೆಗಳು ಸುಧಾರಣೆಗಳಿಗಾಗಿ ಆಗ್ರಹಿಸುತ್ತಿದ್ದನ್ನು ವಿರೋಧಿಸಿದ ಯುವ ಪೀಳಿಗೆಗಳು ನ್ಯೂ ಟೈಗರ್‍ಸ್ ಸಂಘಟನೆಯ ಬೆನ್ನೆಲುಬಾಗಿದ್ದರು.

ಹಿಂಸಾತ್ಮಕ ತಂತ್ರವನ್ನೇ ಸಂಘಟನೆಯ ಮೂಲತತ್ವವನ್ನಾಗಿ ಪರಿಗಣಿಸಿದ್ದ ಪ್ರಭಾಕರನ್, ಇತರ ವಿರೋಧಿ ಸಂಘಟನೆಗಳ ಸದಸ್ಯರನ್ನು ಹತ್ಯೆಮಾಡಲು ಹಿಂಜರಿಯುತ್ತಿರಲಿಲ್ಲ. ೧೯೭೫ರಲ್ಲಿ ಜಾಫ್ನಾದ ಮೇಯರ್ ಆಲ್‌ಫ್ರೆಡ್ ದೂರ್‍ಯಪ್ಪ ಅವರ ಹತ್ಯೆಯ ಆಪಾದನೆಯ ಮೇಲೆ ಪ್ರಭಾಕರನ್‌ನ್ನು ಪೊಲೀಸರು ಬೇಟೆಯಾಡತೊಡಗಿದ್ದರು. ಕೆಲವೇ ತಿಂಗಳುಗಳಲ್ಲಿ ಸಂಘಟನೆಗೆ ಲಿಬರೇಷನ್ ಟೈಗರ್‍ಸ್ ಫಾರ್ ತಮಿಳ್ ಈಲಂ ಎಂದು ನಾಮಕರಣ ಮಾಡಲಾಯಿತು. ಆಗ ಮದ್ರಾಸಿನಲ್ಲಿ ತಲೆಮರೆಸಿಕೊಂಡಿದ್ದ ಪ್ರಭಾಕರನ್ ತನ್ನ ಸಂಘಟನೆಗೆ ಚೋಳರ ಲಾಂಛನವಾದ ಹುಲಿ ಚಿಹ್ನೆಯನ್ನು ಬಳಸುವ ಮೂಲಕ, ಸಂಘಟನೆಯ ಭವಿಷ್ಯದ ಯೋಜನೆಯನ್ನು ಸ್ಪಷ್ಟವಾಗಿ ರೂಪಿಸಿದ್ದರು. ಒಬ್ಬ ಯುವ ಉಗ್ರಗಾಮಿಯು ಪೊಲೀಸರ ಕೈಗೆ ಸಿಕ್ಕದಿರಲು ಸೈನಾಯ್ಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗದಿಂದ ಉತ್ತೇಜಿತನಾದ ಪ್ರಭಾಕರನ್ ಸಂಘಟನೆಯ ಪ್ರತಿಯೊಬ್ಬ ಸದಸ್ಯರಿಗೂ ಕತ್ತಿನಲ್ಲಿ ಸೈನಾಯ್ಡ್ ಗುಳಿಗೆಯನ್ನು ಧರಿಸುವ ನಿಯಮವನ್ನು ಜಾರಿಗೆ ತಂದಿದ್ದ. ಸೈನಾಯ್ಡ್ ಸೇವಿಸುವ ಮೂಲಕ ಬಲಿದಾನ ಮಾಡುವುದು ಮುಂದಿನ ದಿನಗಳಲ್ಲಿ ಆತ್ಮಹತ್ಯಾ ದಳಗಳಿಗೆ ನಾಂದಿಯಾಗಿತ್ತು.

೧೯೭೦ರ ದಶಕದ ಅಂಚಿನಲ್ಲಿ ಜೂನಿಯಸ್ ಜಯವರ್ಧನೆ ಸರ್ಕಾರದ ಅಮೆರಿಕ ಪರವಾದ ನೀತಿಗಳು ಎಲ್‌ಟಿಟಿಇ ಸಂಘಟನೆಯನ್ನು ಮತ್ತೂ ಬಲಗೊಳಿಸಿತ್ತು. ೧೯೮೩ರಲ್ಲಿ ತಮಿಳರ ವಿರುದ್ಧ ಶ್ರೀಲಂಕಾ ಸರ್ಕಾರ ನಡೆಸಿದ ಹತ್ಯಾಕಾಂಡದಿಂದ ಲಕ್ಷಾಂತರ ಸಂಖ್ಯೆಯ ತಮಿಳರು ಭಾರತಕ್ಕೆ ವಲಸೆ ಬಂದು ನಿರಾಶ್ರಿತ ತಾಣಗಳಲ್ಲಿ ನೆಲೆಸುವಂತಾಯಿತು. ಕೆಲವು ಶ್ರೀಮಂತ ತಮಿಳರು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ವಲಸೆ ಹೋಗಿ ಅಲ್ಲಿಂದಲೇ ಎಲ್.ಟಿ.ಟಿ.ಇ ಸಂಘಟನೆಗೆ ಹಣ ಸರಬರಾಜು ಮಾಡುತ್ತಿದ್ದರು. ಈ ಅವಧಿಯಲ್ಲೇ ಎಲ್.ಟಿ.ಟಿ.ಇ ತನ್ನ ನೌಕಾದಳವನ್ನೂ ನಿರ್ಮಿಸಿತ್ತು. ೧೯೮೭ರಲ್ಲಿ ಭಾರತ-ಶ್ರೀಲಂಕಾ ಒಪ್ಪಂದವನ್ನು ತಮಿಳು ರಾಷ್ಟ್ರೀಯತೆಯ ವಿರುದ್ಧ ಹೂಡಿದ ತಂತ್ರ ಎಂದೆಣಿಸಿದ ಪ್ರಭಾಕರನ್ ಜಾಫ್ನಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರತ್ಯೇಕ ಈಲಂಗಾಗಿ ಹೋರಾಡಲು ಪಣತೊಟ್ಟಿದ್ದರು. ಈ ಒಪ್ಪಂದದನ್ವಯ ಶ್ರೀಲಂಕಾದ ತಮಿಳರನ್ನು ರಕ್ಷಿಸಲು ಕಳುಹಿಸಲಾದ ಭಾರತದ ಶಾಂತಿ ಪಡೆ ಕ್ರಮೇಣ ಎಲ್‌ಟಿಟಿಇ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಈ ಅವಧಿಯಲ್ಲಿ ಅರಣ್ಯಗಳಲ್ಲಿ ಆಶ್ರಯ ಪಡೆದ ಪ್ರಭಾಕರನ್ ತನ್ನ ಸುತ್ತಲೂ ಭದ್ರ ಕೋಟೆಯನ್ನೇ ನಿರ್ಮಿಸಿಕೊಂಡಿದ್ದರು. ಬೇರೊಬ್ಬರಿಂದ ನೀರನ್ನೂ ಸ್ವೀಕರಿಸದಷ್ಟು ಮಟ್ಟಿಗೆ ಪ್ರಭಾಕರನ್ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದರಲ್ಲದೆ, ಮಲಗುವಾಗಲೂ ಪಿಸ್ತೂಲನ್ನು ಬಳಿಯಲ್ಲೇ ಇಟ್ಟುಕೊಳ್ಳುತ್ತಿದ್ದರು. ಎಲ್.ಟಿ.ಟಿ.ಇ ಸದಸ್ಯರಿಗೆ ಮದ್ಯ ಸೇವನೆ ಮತ್ತು ತಂಬಾಕು ಸೇವನೆ ನಿಷಿದ್ದವಾಗಿತ್ತು. ಬ್ರಹ್ಮಚಾರಿ ಜೀವನವೂ ಕಡ್ಡಾಯವಾಗಿದ್ದರೂ, ತಮ್ಮ ವಿವಾಹವಾದ ನಂತರ ಪ್ರಭಾಕರನ್ ನಿಯಮವನ್ನು ಬದಲಾಯಿಸಿದ್ದರು.

೧೯೮೭ರಲ್ಲಿ ತನ್ನ ಆತ್ಮಹತ್ಯಾ ದಳಗಳನ್ನು ರೂಪಿಸಿದ ಎಲ್‌ಟಿಟಿಇ ಸಂಘಟನೆ ಪುರುಷ ಮತ್ತು ಮಹಿಳಾ ಸದಸ್ಯರಿಗೆ ತಮ್ಮ ಸೊಂಟದ ಬೆಲ್ಟಿನಲ್ಲಿ ಆಸ್ಪೋಟಕ ವಸ್ತುಗಳನ್ನು ಕಟ್ಟಿಕೊಳ್ಳುವ ಪರಂಪರೆಯನ್ನೇ ಸೃಷ್ಟಿಸಿತ್ತು. ಇದೇ ತಂತ್ರವನ್ನು ನಂತರ ಪ್ಯಾಲೆಸ್ಟೈನ್, ಚಚನ್ಯಾ ಮತ್ತು ಇರಾಕ್‌ನ ಉಗ್ರಗಾಮಿ ಸಂಘಟನೆಗಳು ಅನುಸರಿಸತೊಡಗಿದವು. ೧೯೯೦ರಲ್ಲಿ ಭಾರತೀಯ ಸೇನೆಯ ನಿರ್ಗಮನದ ವೇಳೆಗೆ ಸಾವಿರಾರು ಸದಸ್ಯರನ್ನು ಕಳೆದುಕೊಂಡಿದ್ದ ಪ್ರಭಾಕರನ್‌ಗೆ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸಿಕೊಳ್ಳುವುದು ಮುಖ್ಯ ಧ್ಯೇಯವಾಗಿ ಪರಿಣಮಿಸಿತು. ದ್ವೇಷ ರಾಜಕಾರಣಕ್ಕೆ ಬಲಿಯಾದವರಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪ್ರಮುಖರಾಗಿದ್ದರು.

೧೯೯೦-೯೫ರ ಅವಧಿಯಲ್ಲಿ ಜಾಫ್ನಾ ಪರ್‍ಯಾಯದ್ವೀಪ ಒಂದು ಪುಟ್ಟ ರಾಜ್ಯವಾಗಿ ಸಂಪೂರ್ಣವಾಗಿ ಪ್ರಭಾಕರನ್‌ನ ಅಧಿಪತ್ಯಕ್ಕೆ ಒಳಪಟ್ಟಿದ್ದು. ಈ ಹಂತದಲ್ಲಿ ತನ್ನ ವಿರೋಧಿಗಳೆಲ್ಲರನ್ನೂ ಮಟ್ಟಹಾಕಿದ ಪ್ರಭಾಕರನ್ ೧೯೯೫ರಲ್ಲಿ ಶ್ರೀಲಂಕಾದ ಸೇನೆಯನ್ನು ಎದುರಿಸಬೇಕಾಯಿತು. ೬೦ ಸಾವಿರ ಸೈನಿಕರಿಂದ ಹೊರದೂಡಲ್ಪಟ್ಟ ಎಲ್‌ಟಿಟಿಇ ಸಂಘಟನೆ ವನ್ನಿ ಮತ್ತು ಇತರ ಪೂರ್ವ ಪ್ರಾಂತ್ಯಗಳಲ್ಲಿ ನೆಲೆ ಮಾಡಿತ್ತು. ಆದರೆ ೨೦೦೧ರ ವೇಳೆಗೆ ಆಡಳಿತದಲ್ಲಿದ್ದ ಯುಎನ್‌ಪಿ ಸರ್ಕಾರ ನಾರ್ವೆ ಸರ್ಕಾರದ ಮಧ್ಯಸ್ತಿಕೆಯಲ್ಲಿ ಎಲ್‌ಟಿಟಿಇಯೊಡನೆ ಒಪ್ಪಂದಕ್ಕೆ ಬಂದಿತ್ತು. ಸೆಪ್ಟೆಂಬರ್ ೧೧ ೨೦೦೧ರಂದು ನ್ಯೂಯಾರ್ಕ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ತನ್ನ ಶಸ್ತ್ರಾಸ್ತ್ರ ಸಂಗ್ರಹಣೆಯ ಕಾರ್ಯ ಕುಂಠಿತವಾಗಬಹುದೆಂಬ ಅನುಮಾನದಿಂದ ಪ್ರಭಾಕರನ್ ಈ ಶಾಂತಿ ಪ್ರಕ್ರಿಯೆಗೆ ಸಮ್ಮತಿ ವ್ಯಕ್ತಪಡಿಸಿದ್ದರು.

೨೦೦೨ರಲ್ಲಿ ವನ್ನಿ ಪ್ರಾಂತ್ಯ ಮುಕ್ತವಾದ ನಂತರದಲ್ಲಿ ನಡೆದ ಪತ್ರಿಕಾ ಗೋಷ್ಠಿಯೊಂದರಲ್ಲಿ ಪ್ರಭಾಕರನ್ ರಾಜೀವ್ ಗಾಂಧಿಯವರ ಹತ್ಯೆಯನ್ನು ದುಃಖಕರ ಪ್ರಕರಣ ಎಂದು ಬಣ್ಣಿಸಿದರೂ ಕ್ಷಮೆ ಯಾಚಿಸಿರಲಿಲ್ಲ. ಆದರೂ ಪ್ರಭಾಕರನ್‌ನ ಚಿಂತನೆಯಲ್ಲಿ ಬದಲಾವಣೆಯ ಸೂಚನೆಗಳು ಕಾಣತೊಡಗಿದ್ದವು. ಆದರೆ ಈ ಶಾಂತಿ ಪ್ರಕ್ರಿಯೆ ಹೆಚ್ಚು ಕಾಲ ಉಳಿಯಲಿಲ್ಲ. ಈ ಅವಧಿಯಲ್ಲೇ ಎಲ್‌ಟಿಟಿಇ ಪಡೆಗಳೂ ಅರಣ್ಯಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತ್ತು. ೨೦೦೬ರ ವೇಳೆಗೆ, ಸಂಘಟನೆಯಲ್ಲಿ ಸೌಮ್ಯವಾದಿಯಾಗಿದ್ದ ಬಾಲಸಿಂಘಂ ಅವರ ನಿಧನದ ನಂತರ, ಎಲ್‌ಟಿಟಿಇ ಪುನಃ ತನ್ನ ಹಳೆಯ ಹಾದಿಗೆ ಮರಳಿತ್ತು. ಇದೇ ಸಂದರ್ಭದಲ್ಲಿ ಪ್ರಭಾಕರನ್‌ನ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮುರಳೀಧರನ್ ಅಲಿಯಾಸ್ ಕರುಣ ತನ್ನ ಸಾವಿರಾರು ಹಿಂಬಾಲಕರೊಂದಿಗೆ ಎಲ್‌ಟಿಟಿಇ ಸಂಘಟನೆಯನ್ನು ತೊರೆದು ಸರ್ಕಾರದ ಅರೆ ಸೇನಾ ಪಡೆಗಳಾಗಿ ಸೇರಿದ್ದರು.

ಆದರೆ ೧೯೮೦ರ ನಂತರದಲ್ಲೇ ಪ್ರಭಾಕರನ್ ತನ್ನ ಗೆರಿಲ್ಲಾ ಸೇನೆಯನ್ನು ಸಾಂಪ್ರದಾಯಕ ಸೇನೆಯನ್ನಾಗಿ ಪರಿವರ್ತಿಸಿದ್ದು ಈ ಹಂತದಲ್ಲಿ ಸಂಘಟನೆಗೆ ಮುಳುವಾಗಿ ಪರಿಣಮಿಸಿತು. ೨೦೦೬ರಲ್ಲಿ ಶ್ರೀಲಂಕಾದೊಡನೆ ಸಮರ ಪ್ರಾರಂಭವಾದಾಗ ಸೆಣಸಾಡುವುದು ಎಲ್‌ಟಿಟಿಇಗೆ ಅನಿವಾರ್ಯವಾಯಿತು. ೨೦೦೭ರ ಮಾರ್ಚಿ ತಿಂಗಳ ವೇಳೆಗೆ ಶ್ರೀಲಂಕಾದ ಸೇನೆ ಬಹುತೇಕ ಪೂರ್ವಪ್ರಾಂತ್ಯಗಳನ್ನು ಆಕ್ರಮಿಸಿಕೊಂಡಿತ್ತು. ೨೦೦೮ರಲ್ಲಿ ನಾರ್ವೇ ಒಪ್ಪಂದದ ಕದನವಿರಾಮ ಘೋಷಣೆಯನ್ನು ಉಲ್ಲಂಘಿಸಿದ ಶ್ರೀಲಂಕಾ ಸರ್ಕಾರ ಶ್ರೀಲಂಕಾ ಹುಲಿಗಳ ರಾಜಧಾನಿಯಾಗಿದ್ದ ಕಿಳಿನೋಚಿಯನ್ನು ಆಕ್ರಮಿಸಿಕೊಂಡಿತ್ತು. ಏತನ್ಮಧ್ಯೆ ದ್ವೀಪದಾದ್ಯಂತ ಅನೇಕ ಕಡೆಗಳಲ್ಲಿ ಬಾಂಬ್ ದಾಳಿ ನಡೆಸಿದ್ದ ಎಲ್‌ಟಿಟಿಇ ಸೇನೆಯ ಉಗ್ರ ಆಕ್ರಮಣಕ್ಕೆ ಆಹ್ವಾನ ನೀಡಿತ್ತು. ತದನಂತರದಲ್ಲಿ ತೀವ್ರ ಆಕ್ರಮಣಕಾರಿ ಸಮರ ನೀತಿಯನ್ನು ಅನುಸರಿಸಿದ ಶ್ರೀಲಂಕಾ ಸರ್ಕಾರ ಪ್ರಭಾಕರನ್ ಮತ್ತು ಆತನ ಸಂಘಟನೆಯನ್ನು ಮುಗಿಸುವ ನಿಟ್ಟಿನಲ್ಲಿ ಯಶಸ್ವಿಯಾದರೂ, ಲಕ್ಷಾಂತರ ನಾಗರಿಕರು ಹತ್ಯೆಗೀಡಾಗಬೇಕಾಗಿದ್ದು ದುರದೃಷ್ಟಕರ. ಮೂರು ಲಕ್ಷಕ್ಕೂ ಹೆಚ್ಚು ಜನ ಇಂದಿಗೂ ನಿರಾಶ್ರಿತರಾಗಿರುವುದು ಶ್ರೀಲಂಕಾ ಸರ್ಕಾರಕ್ಕೆ ಕಗ್ಗಂಟಿನ ಸಮಸ್ಯೆಯಾಗಿದೆ. ನಾಗರಿಕ ಸಮುದಾಯಗಳ ಮೇಲೆ ಆಕ್ರಮಣ ನಡೆಸಿದ ಆರೋಪವನ್ನೂ ಶ್ರೀಲಂಕಾ ಸರ್ಕಾರ ಎದುರಿಸುತ್ತಿದೆ.

ಇಷ್ಟೆಲ್ಲಾ ಹೋರಾಟ, ತ್ಯಾಗ, ಬಲಿದಾನಗಳ ನಂತರವೂ ಶ್ರೀಲಂಕಾದ ತಮಿಳು ಜನಾಂಗದ ಪ್ರಜಾತಾಂತ್ರಿಕ ಆಶಯಗಳು ಈಡೇರುವುದೇ ಎಂಬುದೇ ಮುಂದಿನ ಪ್ರಶ್ನೆ. ಆತ್ಮಹತ್ಯಾ ದಳದ ಪರಂಪರೆಯನ್ನು ಆಧುನಿಕ ಜಗತ್ತಿಗೆ ಕಾಣಿಕೆಯನ್ನಾಗಿ ನೀಡುವ ಮೂಲಕ ಹಿಂಸಾತ್ಮಕ ಧೋರಣೆಗೆ ಹೊಸ ವ್ಯಾಖ್ಯಾನ ಬರೆದ ಎಲ್‌ಟಿಟಿಇ ತನ್ನ ಸುಧೀರ್ಘ ಹೋರಾಟದ ಮೂಲಕ ಸಾಧಿಸಿದ್ದೇನು? ಪ್ರಾರಂಭಿಕ ಹಂತದಲ್ಲಿ ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದ ಸಂಘಟನೆ ಸೆಕ್ಯುಲಾರ್ ತತ್ವಗಳನ್ನೂ ಅನುಸರಿಸುತ್ತಿತ್ತು. ಆದರೆ ಕ್ರಮೇಣ ಒಂದು ಭಯೋತ್ಪಾದಕ ಸಂಘಟನೆಯಾಗಿ ರೂಪುಗೊಂಡು ತನ್ನ ರಕ್ಷಣೆಗಾಗಿ ತಮಿಳು ಜನತೆಯನ್ನೇ ಭದ್ರ ಕವಚವನ್ನಾಗಿ ಉಪಯೋಗಿಸತೊಡಗಿದ್ದು ಇಡೀ ಹೋರಾಟದ ಸೈದ್ಧಾಂತಿಕ ಗೊಂದಲವನ್ನು ತೋರಿಸುತ್ತದೆ. ಪ್ರಭಾಕರನ್‌ನ ಹತ್ಯೆಯ ನಂತರದಲ್ಲಿ ಎಲ್‌ಟಿಟಿಇ ಉಳಿಯುವುದೇ, ಹೊಸ ಸ್ವರೂಪ ಪಡೆಯುವುದೇ, ವಿಭಿನ್ನ ಧೋರಣೆ ಅನುಸರಿಸುವುದೇ, ಅಥವಾ ಶ್ರೀಲಂಕಾ ಸರ್ಕಾರದ ಒತ್ತಡಗಳಿಗೆ ಮಣಿಯುವುದೇ ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಕಷ್ಟಸಾಧ್ಯ. ಆದರೂ ಶ್ರೀಲಂಕಾದ ತಮಿಳು ಜನಾಂಗದ ಅಸ್ಮಿತೆಯ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಅಸ್ಮಿತೆಯ ಉಳಿವಿಗಾಗಿ ಹೋರಾಡಿ ಅಸ್ತಿತ್ವವನ್ನೇ ಕಳೆದುಕೊಳ್ಳುವ ನಿಟ್ಟಿನಲ್ಲಿ ಎಲ್‌ಟಿಟಿಇ ಸಾಗಿ ಬಂದಿದ್ದು ವಿಪರ್ಯಾಸವೇ ಸರಿ.

ಜನಸಮುದಾಯಗಳ ಹೋರಾಟಗಳ ಧ್ಯೇಯವನ್ನು ನಿರ್ಧರಿಸುವಲ್ಲಿ ಸಿದ್ಧಾಂತದ ಪ್ರಶ್ನೆ ಇಲ್ಲಿ ಮುಖ್ಯವಾಗುತ್ತದೆ. ಪ್ರಭಾಕರನ್ ನೇತೃತ್ವದ ಎಲ್‌ಟಿಟಿಇ ಭಾವುಕತೆಯ ನೆಲೆಗಟ್ಟಿನಲ್ಲಿ, ತಮಿಳು ರಾಷ್ಟ್ರೀಯತೆಯನ್ನು ಪ್ರತಿಪಾದಿಸಿತೇ ಹೊರತು, ವರ್ಗ ಸಂಘರ್ಷವನ್ನು ರೂಪಿಸಲು ಯತ್ನಿಸಲಿಲ್ಲ. ತಮಿಳರ ಅಸ್ಮಿತೆಯ ಪ್ರಾಬಲ್ಯದಲ್ಲಿ, ತಮಿಳು ಸಮುದಾಯದ ಶ್ರಮಿಕವರ್ಗಗಳ ಹಿತಾಸಕ್ತಿಗಳು ಕಡೆಗಣಿಸಲ್ಪಟ್ಟವು. ತಮ್ಮ ಸಾಮುದಾಯಿಕ ಅಸ್ಮಿತೆಯೊಂದಿಗೇ, ಸಾಮಾಜಿಕ ಘನತೆ, ಆರ್ಥಿಕ ಪ್ರಗತಿಯನ್ನು ಬಯಸಿ, ಪ್ರಭಾಕರನ್‌ನ ಸಂಘಟನೆಯನ್ನು ಬೆಂಬಲಿಸಿದ ಲಕ್ಷಾಂತರ ಸಂಖ್ಯೆಯ ಶ್ರಮಜೀವಿಗಳು ಇಂದು ಪುನಃ ಶ್ರೀಲಂಕಾದ ದಮನಕಾರಿ ಪ್ರಭುತ್ವದ ಅಡಿಯಾಳುಗಳಾಗಿದ್ದಾರೆ. ಮುಂಬರುವ ದಿನಗಳಲ್ಲಿ ಈ ಶ್ರಮಜೀವಿಗಳ ಆಶಯಗಳನ್ನು ಈಡೇರಿಸುವಲ್ಲಿ ಶ್ರೀಲಂಕಾ ಸರ್ಕಾರ ಯಾವ ಮಾರ್ಗ ಅನುಸರಿಸುತ್ತದೆ ಎಂಬುದನ್ನು ಇಡೀ ವಿಶ್ವವೇ ಕುತೂಹಲದಿಂದ ವೀಕ್ಷಿಸುತ್ತಿದೆ. ಯುದ್ಧ ಪರಂಪರೆಯಿಂದ ನಲುಗಿಹೋಗಿರುವ ಶ್ರೀಲಂಕಾದ ದುಡಿಯುವ ಶ್ರಮಿಕವರ್ಗಗಳಿಗೆ ಒಂದು ಪ್ರಜಾತಾಂತ್ರಿಕ ಪರಿಹಾರದ ಅವಶ್ಯಕತೆ ಇದೆ. ಪ್ರಭಾಕರನ್ ಇಲ್ಲದ ಶ್ರೀಲಂಕಾದಲ್ಲಿ ಈ ಪರಿಹಾರ ದೊರಕುವುದೇ ಕಾದುನೋಡಬೇಕು.

ನಾ ದಿವಾಕರ