You are hereForums / ಸಾಮಾಜಿಕ ವಿಚಾರಗಳು / ಡಾ. ಬಿನಾಯಕ್ ಸೆನ್ ಬಿಡುಗಡೆ-ಸಾಂಕೇತಿಕ ವಿಜಯ

ಡಾ. ಬಿನಾಯಕ್ ಸೆನ್ ಬಿಡುಗಡೆ-ಸಾಂಕೇತಿಕ ವಿಜಯ


By DIVAKAR N - Posted on 30 May 2009

ಬಿನಾಯಕ್ ಸೆನ್ - ಸಾಂಕೇತಿಕ ವಿಜಯ

ಛತ್ತಿಸ್‌ಘಡ ಸರ್ಕಾರದ ಕರಾಳ ಶಾಸನಕ್ಕೆ ಬಲಿಯಾಗಿದ್ದ ಮಾನವ ಹಕ್ಕುಗಳ ಹೋರಾಟಗಾರ ಮತ್ತು ಪಿಯುಸಿಎಲ್ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಬಿನಾಯಕ್ ಸೆನ್ ಅವರಿಗೆ ದೇಶದ ಸರ್ವೋಚ್ಛ ನ್ಯಾಯಾಲಯ ಜಾಮೀನು ನೀಡಿರುವುದು ಪ್ರಜಾತಾಂತ್ರಿಕ ಹೋರಾಟಗಳಿಗೆ ಸಂದ ಜಯವಾಗಿದೆ. ಡಾ. ಸೆನ್ ಅವರ ಬಂಧನಕ್ಕೆ ಅಲ್ಲಿನ ಸರ್ಕಾರ ನೀಡಿದ ಕಾರಣಗಳೆಲ್ಲವೂ ಅಸಮರ್ಥನೀಯ ಎಂದು ನ್ಯಾಯಾಲಯದಲ್ಲಿ ನಿರೂಪಿತವಾದರೂ ಉಚ್ಚ ನ್ಯಾಯಾಲಯದಲ್ಲಿ ಸೆನ್ ಅವರಿಗೆ ನ್ಯಾಯ ದೊರಕದೆ ಹೋದದ್ದು ವಿಪರ್ಯಾಸ. ಸರ್ಕಾರಿ ವಕೀಲರ ೯೦ಕ್ಕೂ ಹೆಚ್ಚು ಸಾಕ್ಷಿಗಳು ಮೊಕದ್ದಮೆಯಲ್ಲಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿರುವುದು ಸರ್ಕಾರದ ಕುಟಿಲ ನೀತಿಗಳಿಗೆ ನಿದರ್ಶನವಾಗಿದೆ. ಡಾ. ಸೆನ್ ಅವರ ಬಂಧನಕ್ಕೆ ಛತ್ತಿಸ್‌ಘಡ ಸರ್ಕಾರ ನೀಡಿದ ಕಾರಣವೆಂದರೆ ಅವರಿಗೆ ಮಾವೋವಾದಿಗಳೊಡನೆ ಸಂಪರ್ಕವಿತ್ತು ಮತ್ತು ಮಾವೋವಾದಿಗಳಿಗೆ ಪತ್ರಗಳನ್ನು ರವಾನಿಸುತ್ತಿದ್ದರು ಎಂಬ ಆರೋಪ. ಆದರೆ ಈ ಆರೋಪ ನಿರಾಧಾರವೆಂದು ಪ್ರಾರಂಭದಲ್ಲೇ ತಿಳಿದುಬಂದಿತ್ತು. ಜೈಲುವಾಸ ಅನುಭವಿಸುತ್ತಿದ್ದ ಮಾವೋವಾದಿಗಳ ಮುಖಂಡನಿಗೆ, ಒಬ್ಬ ವೈದ್ಯನಾಗಿ ಚಿಕಿತ್ಸೆ ನೀಡಿದ್ದೇ ಸೆನ್ ಅವರ ಮಹಾಪರಾಧವಾಗಿತ್ತು. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ, ಎಂತಹ ಪಾತಕಿ ಕೃತ್ಯವೆಸಗಿದವನಿಗೂ, ಅಪರಾಧ ಸಾಬೀತಾಗುವವರೆಗೂ, ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಹೇಳಲಾಗಿದೆ. ಬಹುಶಃ ಛತ್ತಿಸ್‌ಘಡ ಸರ್ಕಾರದ ಕರಾಳ ಶಾಸನದಲ್ಲಿ ಈ ನಿಯಮವನ್ನು ಉಲ್ಲಂಘಿಸಲು ಅವಕಾಶ ಇದ್ದಿರಬಹುದು !

ಆದರೂ ಪ್ರಭುತ್ವದ ದೃಷ್ಟಿಯಲ್ಲಿ ಡಾ. ಸೆನ್ ಅಪರಾಧಿಯಾಗಿ ಕಂಡುಬಂದಿದ್ದರೆ ಅಚ್ಚರಿಯೇನಿಲ್ಲ. ಏಕೆಂದರೆ ಡಾ. ಸೆನ್ ವಿರೋಧಿಸಿದ್ದು ಸಲ್ವಾಜುಡಂ ಎಂಬ ಪ್ರಜಾತಂತ್ರ ವಿರೋಧಿ ಯೋಜನೆಯನ್ನು. ಛತ್ತಿಸ್‌ಘಡದಲ್ಲಿ ವ್ಯಾಪಕವಾಗಿ ಹರಡಿರುವ ನಕ್ಸಲೀಯರ, ಅಂದರೆ, ಮಾವೋವಾದಿಗಳ ಚಳುವಳಿಯನ್ನು ಹತ್ತಿಕ್ಕಲು ಪ್ರಜಾತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವ ಬದಲು ಅಲ್ಲಿನ ಸರ್ಕಾರ ಅನುಸರಿಸಿದ ಮಾರ್ಗವೇ ಸಲ್ವಾಜುಡಂ ಯೋಜನೆ. ಆದಿವಾಸಿ ಪ್ರದೇಶಗಳಲ್ಲಿ ಮಾವೋವಾದಿಗಳ ಸಶಸ್ತ್ರ ಹೋರಾಟವನ್ನು ಹಿಮ್ಮೆಟ್ಟಿಸಲು ಆದಿವಾಸಿ ಯುವಕರ ಪಡೆಗಳನ್ನು ಸ್ಥಾಪಿಸಿ, ಅವರಿಗೆ ಆಧುನಿಕ ಶಸ್ತ್ರಾಸ಼ಗಳನ್ನು ಒದಗಿಸುವುದು, ಪೊಲೀಸ್ ಕಾರ್ಯಾಚರಣೆಯಂತೆ ಈ ಪಡೆಗಳು ನಕ್ಸಲ್ ಪಡೆಗಳನ್ನು ಎದುರಿಸಿ ಹೋರಾಡುವುದು, ಹೋರಾಟದ ಸಮಯದಲ್ಲಿ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆ ಉಂಟಾಗಬಾರದೆಂದು ಆದಿವಾಸಿಗಳನ್ನು ತಮ್ಮ ಮೂಲ ಸ್ಥಾನದಿಂದ ಉಚ್ಚಾಟಿಸಿ ಪ್ರತ್ಯೇಕ ನಿರಾಶ್ರಿತ ತಾಣಗಳಲ್ಲಿ ಆಶ್ರಯ ನೀಡುವುದು. ಈ ಯೋಜನೆಯ ಮೂಲಕ ಛತ್ತಿಸ್‌ಘಡ ಸರ್ಕಾರ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ಪ್ರಯತ್ನ ಮಾಡಿತ್ತು. ಒಂದೆಡೆ ಮಾವೋವಾದಿಗಳನ್ನು ನಿಗ್ರಹಿಸುವ ನೆಪದಲ್ಲಿ ಆದಿವಾಸಿಗಳಲ್ಲಿ ಒಡಕು ಉಂಟುಮಾಡುವುದು, ಮತ್ತೊಂದೆಡೆ ಪ್ರಕ್ಷುಬ್ಧತೆಯ ನೆಪದಲ್ಲಿ ಆದಿವಾಸಿಗಳನ್ನು ತಮ್ಮ ಮೂಲನಿವಾಸದಿಂದ ಉಚ್ಚಾಟಿಸಿ, ಅರಣ್ಯ ಸಂಪತ್ತಿನ ಅವ್ಯಾಹತ ಲೂಟಿಗೆ ಅವಕಾಶ ಮಾಡಿಕೊಡುವುದು. ಈ ತಂತ್ರಗಾರಿಕೆಯ ಪರಿಣಾಮವಾಗಿ ಛತ್ತಿಸ್‌ಘಡದ ಆದಿವಾಸಿ ಸಮುದಾಯಗಳು ಭ್ರಾತೃಘಾತುಕ ಅಂತರ್ಯುದ್ಧದಲ್ಲಿ ತೊಡಗಿದ್ದಾರೆ. ಸಾಮಾನ್ಯ ಜನತೆ ಎರಡೂ ಪಡೆಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಅಗಾಧವಾದ ನೈಸರ್ಗಿಕ ಸಂಪನ್ಮೂಲಗಳು ಕಾರ್ಪೋರೇಟ್ ಉದ್ಯಮಿಗಳ ವಶವಾಗುತ್ತಿದೆ. ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗದ ಪ್ರಭುತ್ವದ ವಿರುದ್ಧ ಸೆಟೆದು ನಿಲ್ಲುವವರು ಮಾವೋವಾದಿಗಳನ್ನು ಬೆಂಬಲಿಸಿದರೆ, ಉಳಿದವರು ಸಲ್ವಾಜುಡಂಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ನಡುವೆ ನಾಗರಿಕ ಸಮಾಜ ಅನಾಗರಿಕತೆಯತ್ತ ಸಾಗುತ್ತಿದೆ.

ಈ ಬೆಳವಣಿಗೆಗಳನ್ನು ಗ್ರಹಿಸಲು ಡಾ. ಸೆನ್ ಅವರಿಗೆ ಸೂಕ್ತ ಅವಕಾಶಗಳು ಲಭ್ಯವಾಗಿದ್ದವು. ಓರ್ವ ಶಿಶುವೈದ್ಯರಾಗಿ ಆದಿವಾಸಿ ತಾಣಗಳಿಗೆ ಖುದ್ದಾಗಿ ತೆರಳಿ, ಅಲ್ಲಿನ ಹಸುಳೆಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದ ಡಾ. ಸೆನ್ ಅವರ ಕಣ್ಣಿಗೆ ಕಂಡ ಸತ್ಯವೆಂದರೆ ಆದಿವಾಸಿಗಳು ಈ ಎರಡೂ ಪಡೆಗಳ ನಡುವೆ ಸಿಲುಕಿ ಪರದಾಡುತ್ತಿದ್ದುದು. ಸಲ್ವಾಜುಡಂನಿಂದ ಯುವಕರಲ್ಲಿ ಹಿಂಸಾತ್ಮಕ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಕೊಲೆ, ಸುಲಿಗೆ, ದರೋಡೆ, ದೌರ್ಜನ್ಯಗಳು ಹೆಚ್ಚಾಗುತ್ತಿರುವುದನ್ನು ಕಂಡ ಡಾ. ಸೆನ್ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಈ ಯೋಜನೆಯನ್ನು ಕೈಬಿಡುವ೦ತೆ ಒತ್ತಾಯಿಸಿದ್ದರು. ಆದಿವಾಸಿ ತಾಣಗಳಲ್ಲಿ ನಡೆಯುತ್ತಿದ್ದ ಹಿಂಸೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ವರದಿಯನ್ನೂ ಸಲ್ಲಿಸಿದ್ದರು. ತಮ್ಮ ವರದಿಯಲ್ಲಿ ಸೆನ್ ಅವರು ಮಾವೋವಾದಿಗಳನ್ನು ಬೆಂಬಲಿಸುವಂತಹ ಯಾವುದೇ ಅಂಶವನ್ನು ವ್ಯಕ್ತಪಡಿಸಿರಲಿಲ್ಲ. ಅಥವಾ ಯಾವುದೇ ರೀತಿಯ ಹಿಂಸೆಯನ್ನು ಸಮರ್ಥಿಸಿರಲೂ ಇಲ್ಲ. ಸಾಮಾಜಿಕ ಪ್ರಜ್ಞೆಯುಳ್ಳ ಸಂವೇದನಾಶೀಲ ವ್ಯಕ್ತಿಯಾಗಿ ಡಾ. ಸೆನ್ ಅವರು ಕೈಗೊಂಡ ಈ ಕ್ರಮ ಯಾವುದೇ ಪ್ರಜಾತಾಂತ್ರಿಕ ಪ್ರಭುತ್ವದಲ್ಲಾದರೂ ಅತಿಹೆಚ್ಚಿನ ಮಾನ್ಯತೆ ಗಳಿಸಬೇಕಿತ್ತು. ಆದರೆ ಛತ್ತಿಸ್‌ಘಡ ಸರ್ಕಾರದ ದೃಷ್ಟಿಯಲ್ಲಿ ಇದು ಅಕ್ಷಮ್ಯ ಅಪರಾಧವಾಗಿತ್ತು. ಏಕೆಂದರೆ ಪ್ರಭುತ್ವದ ಕರಾಳ ಶಾಸನಗಳ ಒಂದು ಮಗ್ಗುಲನ್ನು ಡಾ. ಸೆನ್ ಬಹಿರಂಗಗೊಳಿಸಿದ್ದರು. ಈ ಅಪರಾಧಕ್ಕಾಗಿಯೇ ಡಾ. ಸೆನ್ ಅವರು ಎರಡು ವರ್ಷಗಳ ಜೈಲುವಾಸ ಅನುಭವಿಸಬೇಕಾಯಿತು.

ಡಾ. ಸೆನ್ ಅವರ ಬಿಡುಗಡೆಗಾಗಿ ಒತ್ತಾಯಿಸಿದವರಲ್ಲಿ ವಿಶ್ವದ ೨೧ ಜನ ನೊಬಲ್ ಪ್ರಶಸ್ತಿ ಪುರಸ್ಕೃತರೂ ಇದ್ದುದು ಅವರ ಅಂತಾರಾಷ್ಟ್ರೀಯ ಖ್ಯಾತಿಯ ಕುರುಹಾಗಿದೆ. ಭಾರತದಲ್ಲಿ ಸಂಸತ್ ಸದಸ್ಯರು, ಶಾಸಕರುಗಳು ಡಾ. ಸೆನ್ ಅವರ ಬಗ್ಗೆ ತಿಳಿದಿರುವರೋ ಇಲ್ಲವೋ, ಬ್ರಿಟಿಷ್ ಸಂಸತ್ತಿನಲ್ಲಿ ಡಾ.ಸೆನ್ ಅವರ ಬಿಡುಗಡೆಗಾಗಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದ್ದು ಚರಿತ್ರಾರ್ಹ. ಆದರೆ ಭಾರತದ ರಾಜಕಾರಣದಲ್ಲಿ ಈ ಬಗ್ಗೆ ದನಿಯೇ ಮೂಡದೆ ಹೋಗಿದ್ದು ಅಷ್ಟೇ ದುರದೃಷ್ಟಕರ. ಆದರೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ ಡಾ.ಸೆನ್ ಮುಕ್ತರಾಗಿದ್ದಾರೆ. ತೀರ್ಪು ನೀಡಲು ಸನ್ಮಾನ್ಯ ನ್ಯಾಯಾಧೀಶರುಗಳು ಒಂದೇ ನಿಮಿಷದ ಕಾಲಾವಧಿ ತೆಗೆದುಕೊಂಡದ್ದು ಇಡೀ ಪ್ರಕರಣದ ದೌರ್ಬಲ್ಯವನ್ನು ತೋರುತ್ತದೆ.

ಆದರೆ ಸೆನ್ ಅವರು ವಿಮೋಚನೆ ಪಡೆದಿದ್ದರೂ ಅವರ ಆಶಯಗಳು ಇನ್ನೂ ಬಂಧಿತವಾಗಿಯೇ ಇವೆ. ಡಾ. ಸೆನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದ ವ್ಯಕ್ತಿ. ಅವರ ಬಿಡುಗಡೆಗಾಗಿ ಆಗ್ರಹಿಸಲು ದೇಶಾದ್ಯಂತ ಹೋರಾಟಗಳು ನಡೆದವು. ನೂರಾರು ಚಿಂತಕರು, ಮುತ್ಸದ್ಧಿಗಳು, ಪ್ರಜ್ಞಾವಂತರು ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ ಅವರಂತೆಯೇ ಯಾವುದೇ ಅಪರಾಧವನ್ನೆಸಗದೆ ಜೈಲಿನ ನಾಲ್ಕು ಗೋಡೆಗಳ ನಡುವೆ ಕೊಳೆಯುತ್ತಿರುವ ವಿಚಾರಣಾಧೀನ ಖೈದಿಗಳ ಸಂಖ್ಯೆ ಲಕ್ಷಕ್ಕೂ ಮೀರಿದೆ. ಅವರ ಬೆಂಬಲಕ್ಕೆ ಯಾವ ನೊಬಲ್ ಪುರಸ್ಕೃತರೂ, ಬ್ರಿಟಿಷ್ ಸಂಸತ್ ಸದಸ್ಯರೂ ಆಗ್ರಹಿಸುವುದಿಲ್ಲ. ಅಪೇಕ್ಷೆ ಇದ್ದರೂ ವ್ಯಕ್ತವಾಗದೆ ಇರಬಹುದು. ಸರ್ಕಾರಗಳ ಕರಾಳ ಶಾಸನಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಕತ್ತಲಿನಲ್ಲಿ ಕಳೆಯುತ್ತಿರುವ ಈ ಬಂಧಿಗಳಿಗೆ ವಿಮೋಚನೆ ಎಂದು? ಇವರ ಪರವಾಗಿ ಹೋರಾಡುವವರಾರು ? ಇದು ಕೇವಲ ಮಾನವ ಹಕ್ಕುಗಳ ಸಂಘಟನೆಗಳ ಹೊಣೆಗಾರಿಕೆಯೇ ? ನಾಗರಿಕ ಸಮಾಜಕ್ಕೆ ಈ ಹೊಣೆಗಾರಿಕೆ ಇಲ್ಲವೇ ? ದೇಶದ, ರಾಜ್ಯದ ಪ್ರಜ್ಞಾವಚಿತ, ಪ್ರಜಾತಾಂತ್ರಿಕ ಕಳಕಳಿಯುಳ್ಳವರು ಇದಕ್ಕೆ ಸ್ಪಂದಿಸುವುದು ಅವಶ್ಯವಲ್ಲವೇ? ಈ ದೃಷ್ಟಿಯಿಂದ ಡಾ. ಸೆನ್ ಅವರ ವಿಮೋಚನೆ ಸಾಂಕೇತಿಕ ಮಾತ್ರ. ಬಿನಾಯಕ್ ಸೆನ್ ಮತ್ತು ಸಹಚರರ ಪ್ರಜಾತಾಂತ್ರಿಕ ಆಶಯಗಳು ಇಂದಿಗೂ ಬಂಧಿತವಾಗಿಯೇ ಇವೆ. ವಿಭಿನ್ನ ಕಾರಣಗಳಿಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಕರಾಳ ಶಾಸನಗಳ ಮೊರೆ ಹೋಗುವ ಪ್ರಭುತ್ವಗಳ ಪ್ರಜಾತಾಂತ್ರಿಕ ಮೌಲ್ಯಗಳನ್ನೇ ಒರೆಗೆ ಹಚ್ಚಬೇಕಾಗಿದೆ. ಮಾನವ ಹಕ್ಕುಗಳ ರಕ್ಷಣೆಯ ಆಶಯಗಳ ವಿಮೋಚನೆಗಾಗಿ ಹೋರಾಡಲು ನಾಗರಿಕ ಸಮಾಜ ಸಜ್ಜಾದಲ್ಲಿ, ಡಾ. ಸೆನ್ ಅವರ ಬಿಡುಗಡೆ ಸಾರ್ಥಕತೆ ಪಡೆಯುತ್ತದೆ.

ನಾ ದಿವಾಕರ