You are hereForums / ಕರ್ನಾಟಕದ ರಾಜಕೀಯ / 2009ರ ಚುನಾವಣೆ ವಿಶ್ಲೇಷಣೆ
2009ರ ಚುನಾವಣೆ ವಿಶ್ಲೇಷಣೆ
ಮತದಾನ ಮುಗಿಯಿತು-ಮುಂದೇನು?
ತೀವ್ರ ಕುತೂಹಲ ಕೆರಳಿಸಿದ್ದ ೧೫ನೆಯ ಲೋಕಸಭಾ ಚುನಾವಣೆಗಳು ಮುಗಿದಿದೆ. ಭಾರತೀಯ ಪ್ರಬುದ್ಧ ಮತದಾರರು ಹಲವು ವರ್ಷಗಳ ಬಳಿಕ ಸ್ಪಷ್ಟ ತೀರ್ಪು ನೀಡಿದ್ದಾರೆ. ಪ್ರಜೆಗಳ ನಿರ್ಣಯ ಸ್ಪಷ್ಟವಾಗಿದೆ ಎಂದು ಹೇಳಬಹುದೇ ಹೊರತು, ಸರಿ ತಪ್ಪುಗಳ ವಿಶ್ಲೇಷಣೆ ಮಾಡಲು ಇನ್ನೂ ಐದು ವರ್ಷಗಳ ಕಾಲ ಸಾಗಬೇಕಿದೆ. ಆದರೆ ಭಾರತದ ಮತದಾರರು ಒಂದು ಸ್ಥಿರ ಸರ್ಕಾರದ ರಚನೆಗೆ ಅವಕಾಶ ನೀಡಿರುವುದು ಶ್ಲಾಘನೀಯ. ಭಾವನಾತ್ಮಕ ವಿವಾದಗಳಿಗೆ ಸಮರ್ಥನೆ ನೀಡದೆ ಮತದಾರರು ದೇಶದ ಪ್ರಗತಿಯ ದೃಷ್ಟಿಯಿಂದ ಕೋಮುವಾದಿ ಪಕ್ಷಗಳನ್ನು ನಿರ್ಣಾಯಕವಾಗಿ ತಿರಸ್ಕರಿಸಿರುವುದು ಪ್ರಸಕ್ತ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ೨೦೦೪ರ ಚುನಾವಣೆಗೆ ಹೋಲಿಸಿದರೆ ೨೦೦೯ರ ಚುನಾವಣೆಗಳ ಜನಾದೇಶ ವಿಭಿನ್ನವಾಗಿದೆ. ಕಳೆದ ಐದು ವರ್ಷಗಳಲ್ಲಿ ನಡೆಸಿದ ಆಡಳಿತಕ್ಕಿಂತಲೂ ವಿಭಿನ್ನವಾದ ಆಡಳಿತವನ್ನು ನಡೆಸುವ ಗುರುತರ ಜವಾಬ್ದಾರಿ ಮನಮೋಹನ್ ಸಿಂಗ್ ಅವರ ಮೇಲಿದೆ. ಸಮ್ಮಿಶ್ರ ಸರ್ಕಾರವೇ ಆದರೂ, ಮಿತ್ರ ಪಕ್ಷಗಳ ತೀವ್ರ ಒತ್ತಡಗಳಿಗೆ ಮಣಿಯಬೇಕಾದ ಸನ್ನಿವೇಶದಿಂದ ಯುಪಿಎ ಮುಕ್ತವಾಗಿದೆ. ಹಾಗಾಗಿ ಜನಾದೇಶದ ಸಾಫಲ್ಯ ವೈಫಲ್ಯಗಳು ಮುಂಬರುವ ಐದು ವರ್ಷಗಳ ಆಳ್ವಿಕೆಯನ್ನು ಅವಲಂಬಿಸಿರುತ್ತದೆ.
ಪ್ರಸಕ್ತ ಚುನಾವಣೆಗಳಲ್ಲಿ ಜನತೆಯ ಅವಕೃಪೆಗೆ ಪಾತ್ರರಾಗಿರುವ ಭಾಜಪ, ಎಡಪಕ್ಷಗಳು ಮತ್ತು ತೃತೀಯ ರಂಗದ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಚುನಾವಣಾ ಪ್ರಚಾರದಲ್ಲಿ ಜನತೆಗೆ ಅವಶ್ಯವೆನಿಸುವ ವಿಷಯಗಳನ್ನು ಪ್ರಸ್ತಾಪಿಸದೆ, ವೈಯ್ಯಕ್ತಿಕ ಚಾರಿತ್ರ್ಯವಧೆಯಲ್ಲಿ ತೊಡಗಿದ ಭಾಜಪದ ನಾಯಕತ್ವಕ್ಕೆ ಪಕ್ಷದ ಧೋರಣೆಗಳೇ ತಿರುಗುಬಾಣವಾಗಿರುವುದು ಸ್ಪಷ್ಟ. ದೇಶದ ಶೇ ೭೦ಕ್ಕೂ ಹೆಚ್ಚು ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಯಾವುದೇ ಪಕ್ಷವೂ ತಮ್ಮ ಪ್ರಣಾಳಿಕೆಗಳಲ್ಲಿ ವ್ಯಕ್ತಪಡಿಸದಿದ್ದುದು ಈ ಚುನಾವಣೆಯ ವೈಶಿಷ್ಟ್ಯವೆಂದೇ ಹೇಳಬಹುದು. ಸ್ಪಷ್ಟ ಪರ್ಯಾಯ ರಾಜಕೀಯ-ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಚಿಂತನೆಗಳಿಲ್ಲದೆ ದೇಶವನ್ನಾಳಲು ಬಯಸಿದ ತೃತೀಯ ರಂಗದ ಪಕ್ಷಗಳನ್ನು ಮತದಾರರು ತಿರಸ್ಕರಿಸಿರುವುದು, ದೇಶದ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹವೇ. ಹಿಂದಿನ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವ ಮೂಲಕ, ದೇಶದ ಆರ್ಥಿಕತೆಯನ್ನು ಹಿಂಜರಿತದಿಂದ ರಕ್ಷಿಸಿದ ಎಡಪಕ್ಷಗಳು, ತಮ್ಮ ಭದ್ರಕೋಟೆಯಲ್ಲೇ ಜನವಿರೋಧಿ ನೀತಿಗಳನ್ನು ಅನುಸರಿಸಿದ್ದು ಎಡರಂಗದ ಮುಳುವಿಗೆ ಕಾರಣವಾಗಿದ್ದು, ತೃತೀಯ ರಂಗದ ಪರಿಕಲ್ಪನೆಗೆ ಚಾಲನೆ ನೀಡಿದ ಎಡ ಪಕ್ಷಗಳ ನಿಲುವು ಚರ್ಚೆಗೊಳಗಾಗಬೇಕಿದೆ.
ಫಲಿತಾಂಶದ ಇಂಗಿತಗಳು
ಪ್ರಸಕ್ತ ಚುನಾವಣೆಯ ಫಲಿತಾಂಶವನ್ನು ವಿವಿಧ ರಾಜ್ಯಗಳಲ್ಲಿನ ಫಲಿತಾಂಶಗಳ ಒಟ್ಟು ಚಿತ್ರಣವೆಂದು ಭಾವಿಸಲಾಗುವುದಿಲ್ಲ. ಬದಲಾಗಿ ಸ್ಪಷ್ಟವಾದ ರಾಷ್ಟ್ರಮಟ್ಟದ ಪ್ರವೃತ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ಉತ್ತರ ಪ್ರದೇಶದಲ್ಲಿ ಬಹಳ ವರ್ಷಗಳ ನಂತರ ಉತ್ತಮ ಸಾಧನೆ ಮಾಡಿರುವ ಕಾಂಗ್ರೆಸ್ ಪಕ್ಷ ಬಹುತೇಕ ಎಲ್ಲ ರಾಜ್ಯಗಳಲ್ಲೂ, ಕರ್ನಾಟಕವನ್ನು ಹೊರತುಪಡಿಸಿ, ತನ್ನ ಸಾಮರ್ಥ್ಯವನ್ನು, ಶೇಕಡಾವಾರು ಮತಗಳಿಕೆಯಲ್ಲಿ ವೃದ್ಧಿ ಕಂಡಿದೆ. ಹಾಗೆಂದ ಮಾತ್ರಕ್ಕೆ ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡಿದೆ ಎಂದು ಅರ್ಥೈಸಲಾಗುವುದಿಲ್ಲ. ಐದು ದಶಕಗಳಲ್ಲಿ ಕಾಣದ ಬೆಲೆ ಏರಿಕೆಯ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಕಂಡುಬಂದಿದೆ. ನಿರುದ್ಯೋಗ, ಭಯೋತ್ಪಾದನೆ, ಮಾನವ ಹಕ್ಕುಗಳ ಉಲ್ಲಂಘನೆ, ಆದಿವಾಸಿಗಳ ಸಮಸ್ಯೆ, ದಲಿತರ ಮೇಲಿನ ದಬ್ಬಾಳಿಕೆ, ಕೋಮುಗಲಭೆಗಳು, ಕೃಷಿ ಕಾರ್ಮಿಕರ ಬವಣೆ, ಗ್ರಾಮೀಣ ನಿರುದ್ಯೋಗಿಗಳ ವಲಸೆ ಎಲ್ಲವೂ ಹೆಚ್ಚಾಗಿದೆ. ಸರ್ಕಾರದ ವಿದೇಶಿ ನೀತಿಯೂ ಜನವಿರೋಧಿಯಾಗಿದ್ದು, ಅಮೆರಿಕದ ಸಾಮ್ರಾಜ್ಯಶಾಹಿಯ ಪರವಾಗಿದೆ. ಆದಾಗ್ಯೂ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿರುವುದು ಪರ್ಯಾಯ ರಾಜಕೀಯ ಚಿಂತನೆಯ ಕೊರತೆ ಎದ್ದುಕಾಣುತ್ತದೆ.
ಬಲಿಷ್ಠ ನಾಯಕ-ಸಮರ್ಥ ಸರ್ಕಾರ ಎಂಬ ಘೋಷಣೆಯನ್ನು ಹೊತ್ತು ಅಖಾಡಕ್ಕಿಳಿದ ಭಾಜಪದ ನೇತಾರರು, ಕಾಂಗ್ರೆಸ್ ಆಡಳಿತದ ಈ ವೈಫಲ್ಯಗಳನ್ನು ಮತ್ತು ವೈಫಲ್ಯದ ಹಿಂದಿನ ಜಾಗತಿಕ ಕಾರಣಗಳನ್ನು ಜನತೆಗೆ ತಿಳಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಒಂದು ಪ್ರಜಾತಾಂತ್ರಿಕ ದೇಶವನ್ನಾಳುವ ವ್ಯಕ್ತಿ ಬಲಿಷ್ಠನಾಗಿರಬೇಕೆಂದು ಬಯಸುವುದೇ ಪ್ರಜಾತಂತ್ರ ವಿರೋಧಿ ಚಿಂತನೆಯಾಗುತ್ತದೆ. ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದು ಬಿಂಬಿಸುವ ಮೂಲಕ ಲೋಹಪುರುಷ ಎಲ್.ಕೆ. ಅದ್ವಾನಿಯವರನ್ನು ಸಮರ್ಥರೆಂದು ಬಿಂಬಿಸುವ ಭಾಜಪದ ಯತ್ನಕ್ಕೆ ಜನತೆ ಮನ್ನಣೆ ನೀಡಿಲ್ಲ. ಕಾರಣ, ಭಾರತೀಯ ಪ್ರಜೆಗಳಿಗೆ ಲೋಹಪುರುಷರ ಅವಶ್ಯಕತೆಯೂ ಇಲ್ಲ. ಲೋಹಪುರುಷರು ಅಧಿಕಾರಕ್ಕಾಗಿ ಹಾತೊರೆವ ಮೋಹಪುರುಷರೂ ಆಗಿರುತ್ತಾರೆ ಎಂಬ ಸತ್ಯವನ್ನು ಭಾರತದ ಜನತೆ ೧೯೭೫ರ ತುರ್ತುಪರಿಸ್ಥಿತಿಯಲ್ಲೇ ಗ್ರಹಿಸಿದ್ದಾರೆ.
ಮತ ಚಲಾಯಿಸುವ ಪ್ರಜೆಗಳನ್ನು ದೇಶದ ಭವಿಷ್ಯದ ನಿರ್ಮಾಪಕರೆಂದು ಭಾವಿಸದೆ, ತಮ್ಮೆದುರು ಅಂಗಲಾಚುವ ಬಿಕಾರಿಗಳೆಂದು ಭಾವಿಸುವ ರಾಜಕೀಯ ಪಕ್ಷಗಳಿಗೆ ಜನತೆಯ ಒಳದನಿ ಗ್ರಹಿಸಲಾಗುವುದಿಲ್ಲ. ಪ್ರಸಕ್ತ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. ವರುಣ್ ಗಾಂಧಿಯಂತಹ ಯುವ ನೇತಾರರಿಗೆ ಅಲ್ಪಸಂಖ್ಯಾತರ ನಿಗ್ರಹವೇ ಮುಖ್ಯವಾದರೆ, ನರೇಂದ್ರ ಮೋದಿಯವರಿಗೆ ಅಫ್ಜಲ್ ಗುರುವಿಗೆ ನೇಣುಹಾಕುವುದು ಮಹತ್ತರ ಸಾಧನೆಯಾಗುತ್ತದೆ. ಭಯೋತ್ಪಾದನೆಯ ಕೃತ್ಯಗಳಿಂದ ರಕ್ತಸಿಕ್ತವಾದ ಭೂಮಿಯ ಮೇಲೆ ತಮ್ಮ ರಾಜಕೀಯ ಗೆಲುವಿನ ಚಿತ್ತಾರ ಬಿಡಿಸುವ ಕೋಮುವಾದಿ ಪಕ್ಷಗಳಿಗೆ ಪ್ರಸಕ್ತ ಚುನಾವಣೆ ಆತ್ಮಾವಲೋಕನವಾಗಿರಲಿಕ್ಕೂ ಸಾಕು. ಚುನಾಯಿತರಾದಲ್ಲಿ ಪಕ್ಷ ಬಡಜನತೆಯ ಏಳಿಗೆಗಾಗಿ ಏನು ಮಾಡುತ್ತದೆ ಎಂಬ ಪ್ರಶ್ನೆಗೆ ಯಾವುದೇ ಪ್ರಣಾಳಿಕೆಯಲ್ಲೂ ಉತ್ತರ ಸಿಗಲಾರದು.
೧೯೮೪ರ ಸಿಖ್ ವಿರೋಧಿ ಗಲಭೆ, ೨೬/೧೧ರ ಘಟನೆ, ಗೋದ್ರಾ ಮತ್ತು ಗುಜರಾತ್, ಕಂಧಮಾಲ್, ಖೈರಲಾಂಜಿ, ಇವೆಲ್ಲವೂ ದೇಶದ ಭವಿಷ್ಯದ ದೃಷ್ಟಿಯಿಂದ ಖಂಡನೀಯ ಮತ್ತು ಆಘಾತಕರ ಘಟನೆಗಳಾದರೂ, ಆಳ್ವಿಕರ ಆರ್ಥಿಕ ನೀತಿಗಳಿಂದ ಕಂಗಾಲಾಗಿರುವ ಶ್ರಮಜೀವಿಗಳಿಗೆ, ದುಡಿಯುವ ವರ್ಗಗಳಿಗೆ ತಮ್ಮ ಅಳಿವು ಉಳಿವಿನ ಪ್ರಶ್ನೆ ಪ್ರಮುಖ ಸವಾಲಾಗಿದೆ. ಶ್ರಮಜೀವಿಗಳ, ಮಣ್ಣಿನ ಮಕ್ಕಳ ಜೀವನಾಧಾರವಾದ ಭೂಮಿ ಅವರಿಂದ ಕಸಿಯಲ್ಪಡುತ್ತಿದೆ. ಆದಿವಾಸಿಗಳನ್ನು ನಿರಂತರವಾಗಿ ತಮ್ಮ ಮೂಲಸ್ಥಾನದಿಂದ ಉಚ್ಚಾಟಿಸಲಾಗುತ್ತಿದೆ. ಆದಿವಾಸಿಗಳ ಭೂಮಿಯನ್ನು ಕಾರ್ಪೋರೇಟ್ ಉದ್ಯಮಿಗಳು ಅಡೆತಡೆಯಿಲ್ಲದೆ ಕಬಳಿಸುತ್ತಿದ್ದಾರೆ. ದೇಶದ ಬಹುಪಾಲು ಕೃಷಿ ಭೂಮಿ ಕೈಗಾರಿಕೋದ್ಯಮಿಗಳ ಪಾಲಾಗುತ್ತಿದೆ. ತಮ್ಮ ಬದುಕಿಗಾಗಿ ಹೋರಾಡುವ ಕೃಷಿಕರು ಪ್ರಭುತ್ವದ ಗುಂಡೇಟಿಗೆ ಬಲಿಯಾಗುತ್ತಿದ್ದಾರೆ. ತುಷ್ಟೀಕರಣ, ಮೀಸಲಾತಿ, ಮಹಿಳಾ ಸಬಲೀಕರಣ, ಕಾರ್ಮಿಕ ರಕ್ಷಣೆ, ಗ್ರಾಮೀಣ ಉದ್ಯೋಗ ಇನ್ನೂ ಮುಂತಾದ ಘೋಷಣೆಗಳು ಮೊಳಗುತ್ತಿರುವಂತೆಯೇ, ಜನ ಸಮುದಾಯಗಳು ತಮ್ಮ ಅಸ್ಮಿತೆಗಾಗಿ ಹೋರಾಡಬೇಕಾದ ಅನಿವಾರ್ಯತೆಯೂ ಹೆಚ್ಚಾಗಿರುವುದು ಆಳ್ವಿಕರ ನೀತಿಗಳ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.
ಆದರೆ ಈ ಸಮಸ್ಯೆಗಳು ಚುನಾವಣಾ ವಿಷಯಗಳಾಗಲೇ ಇಲ್ಲ. ದುರ್ಬಲ ಪ್ರಧಾನಿಯ ದೌರ್ಬಲ್ಯವನ್ನು ಅಫ್ಜಲ್ ಗುರುವಿನಲ್ಲಿ ಕಾಣಲಾಯಿತೇ ಹೊರತು, ಅಸುನೀಗಿದ ಲಕ್ಷಾಂತರ ರೈತರ ಜೀವಗಳಲ್ಲಿ ಕಾಣಲಿಲ್ಲ. ಲೋಹಪುರುಷರ ಸಾಮರ್ಥ್ಯವನ್ನು ಗುಜರಾತಿನಲ್ಲಿ, ಕಂದಮಾಲ್‌ನಲ್ಲಿ ಗುರುತಿಸಲಾಯಿತು ಆದರೆ ೧೨೩ ಒಪ್ಪಂದದಲ್ಲಿ ಬಿಂಬಿಸಲಾಗಲಿಲ್ಲ. ಶ್ರಮಜೀವಿಗಳ ಹಿತಾಸಕ್ತಿಗಳಿಗಾಗಿ ದಶಕಗಳ ಕಾಲ ಹೋರಾಟ ನಡೆಸಿದ ಎಡಪಕ್ಷಗಳ ಸ್ಥೈರ್ಯ ಸಿಂಗೂರು-ನಂದಿಗ್ರಾಮದಲ್ಲಿ ವ್ಯಕ್ತವಾಗಲಿಲ್ಲ. ಪ್ರಾದೇಶಿಕ ಅಸ್ಮಿತೆಗಳಿಗಾಗಿ ಪಣ ತೊಟ್ಟ ಪಕ್ಷಗಳಲ್ಲಿ ರಾಷ್ಟ್ರೀಯ ಪ್ರಜ್ಞೆಯೇ ಕಂಡುಬರಲಿಲ್ಲ. ತಮ್ಮ ಪ್ರಾದೇಶಿಕ ಪ್ರಾಬಲ್ಯದಿಂದ ಜನಾದೇಶ ಪಡೆದ ಒರಿಸ್ಸಾದ ನವೀನ್ ಪಟ್ನಾಯಕ್, ಬಿಹಾರದ ನೀತಿಶ್ ಕುಮಾರ್, ಉತ್ತರ ಪ್ರದೇಶದ ಮಾಯಾವತಿ, ತಮಿಳುನಾಡಿನ ಡಿಎಂಕೆ ಪಕ್ಷಗಳ ದೃಷ್ಟಿಯಲ್ಲಿ ಪ್ರಜೆಗಳ ವಿಶ್ವಾಸ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆಯುವ ಸಾಧನವಾಯಿತೇ ಹೊರತು, ರಾಷ್ಟ್ರ ಪ್ರಜ್ಞೆಯನ್ನು ಮೂಡಿಸುವ ಮತ್ತು ಪ್ರಜಾತಂತ್ರವನ್ನು ಬೆಳೆಸುವ ಆಕರವಾಗಲಿಲ್ಲ.
ಈ ನೇತ್ಯಾತ್ಮಕ ರಾಜಕಾರಣದ ಪರಿಣಾಮವನ್ನು ಪ್ರಸಕ್ತ ಚುನಾವಣೆಗಳಲ್ಲಿ ಕಾಣಬಹುದು. ಗುಜರಾತ್, ಬಿಹಾರ, ಒರಿಸ್ಸಾ, ಛತ್ತಿಸ್‌ಘಡ್ ಮತ್ತು ಆಂಧ್ರ ಪ್ರದೇಶಗಳಲ್ಲಿ ಉತ್ತಮ ಆಡಳಿತ ನೀಡಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಮುಖ್ಯಮಂತ್ರಿಗಳ ಮಹತ್ತರ ಸಾಧನೆ (?) ಎಂದರೆ ಕಾರ್ಪೋರೇಟ್ ಉದ್ಯಮಿಗಳಿಗೆ ಮತ್ತು ವಿದೇಶಿ ಬಂಡವಾಳಕ್ಕೆ ಕೆಂಪುಗಂಬಳಿ ಹಾಸಿ ಸ್ವಾಗತ ಕೋರಿದ್ದು. ಈ ಎಲ್ಲ ರಾಜ್ಯಗಳಲ್ಲೂ ಅರಣ್ಯ ಸಂಪತ್ತು, ಕೃಷಿ ಭೂಮಿ ಕಾರ್ಪೋರೇಟ್ ಉದ್ಯಮಿಗಳ ಪಾಲಾಗುತ್ತಿದೆ. ಛತ್ತಿಸ್‌ಘಡ್ ಸರ್ಕಾರ ಅಲ್ಲಿನ ಆದಿವಾಸಿಗಳನ್ನು ತಮ್ಮ ಮೂಲಸ್ಥಾನದಿಂದ ಉಚ್ಛಾಟಿಸಲು ಸಲ್ವಾಜುಡಂ ಎಂಬ ಅಧಿಕೃತ ಯೋಜನೆಯನ್ನೇ ಜಾರಿಗೊಳಿಸಿದೆ. ಮಾವೋವಾದಿಗಳನ್ನು ನಿಗ್ರಹಿಸುವ ನೆಪದಲ್ಲಿ ಆದಿವಾಸಿಗಳ ಭೂಮಿಯನ್ನು ಕಾರ್ಪೋರೇಟ್‌ಗಳಿಗೆ ಉದಾರವಾಗಿ ನೀಡಲಾಗುತ್ತಿದೆ. ಮೇಲೆ ಉಲ್ಲೇಖಿಸಿದ ಇತರ ರಾಜ್ಯಗಳಲ್ಲೂ ಇದೇ ಪ್ರಕ್ರಿಯೆಯನ್ನು ಕಾಣಬಹುದು. ಈ ಜನವಿರೋಧಿ ಪ್ರಕ್ರಿಯೆಗೆ ಎಡರಂಗದ ಪಶ್ಚಿಮ ಬಂಗಾಲವೂ ಹೊರತಾಗಿಲ್ಲವೆಂದು ನಂದಿಗ್ರಾಮ ನಿರೂಪಿಸಿದೆ. ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಗಳನ್ನು ವಿರೋಧಿಸುವ ಪಕ್ಷಗಳಲ್ಲಿ ಸೈದ್ದಾಂತಿಕ ಬದ್ಧತೆಗಿಂತಲೂ, ರಾಜಕೀಯ ಆಕಾಂಕ್ಷೆಗಳು ಎದ್ದುಕಾಣುತ್ತವೆ. ತೃಣಮೂಲ ಕಾಂಗ್ರೆಸ್ ಈ ನಿಟ್ಟಿನಲ್ಲಿ ಉತ್ತಮ ನಿದರ್ಶನ.
ತಮ್ಮ ಜೀವನಾಧಾರದ ರಕ್ಷಣೆಗಾಗಿ, ಭೂಮಿಗಾಗಿ, ನೌಕರಿಗಾಗಿ, ಕೂಲಿಗಾಗಿ ಹೋರಾಡುವ ಬಡಜನತೆಯ ಪ್ರತಿಭಟನೆಯ ದನಿಯನ್ನು ಅಡಗಿಸಿ, ದಮನಿಸುವ ಪ್ರವೃತ್ತಿ ಎಲ್ಲ ಪಕ್ಷಗಳಲ್ಲೂ ಸ್ಪಷ್ಟವಾಗಿ ಕಂಡುಬರುತ್ತದೆ. ಆದರೂ ಕಾರ್ಪೋರೇಟ್ ಪ್ರೇರಿತ ಮಾಧ್ಯಮಗಳಲ್ಲಿ ಈ ಪಕ್ಷಗಳ ಆಳ್ವಿಕೆಯನ್ನು ಜನಪರ, ಅಭಿವೃದ್ಧಿಪರ, ಅನುಕರಣೀಯ ಎಂದೆಲ್ಲಾ ಬಣ್ಣಿಸಲಾಗುತ್ತದೆ. ವಿಪರ್ಯಾಸವೆಂದರೆ ಈ ಎಲ್ಲ ಪಕ್ಷಗಳೂ, ಎಡಪಕ್ಷಗಳನ್ನು ಹೊರತುಪಡಿಸಿ, ಪ್ರಸಕ್ತ ಚುನಾವಣೆಯಲ್ಲಿ ಯಶಸ್ಸು ಕಂಡಿವೆ. ಪಕ್ಷಾತೀತವಾದ ಈ ದಮನಕಾರಿ ಪ್ರವೃತ್ತಿಗೆ ಕಾಂಗ್ರೆಸ್ ಮತ್ತು ಭಾಜಪಗಳೂ ಹೊರತಾಗಿಲ್ಲವೆಂದು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ನಿರೂಪಿತವಾಗಿದೆ. ಭಾರತೀಯ ಪ್ರಜಾಪ್ರಭುತ್ವ ಬಲಪಂಥೀಯ ರಾಜಕಾರಣದತ್ತ ಹೊರಳುತ್ತಿರುವುದಕ್ಕೆ ಪ್ರಸಕ್ತ ಚುನಾವಣೆ ಸ್ಪಷ್ಟ ನಿದರ್ಶನವಾಗಿದೆ. ಈ ನಿಟ್ಟಿನಲ್ಲಿ ಖ್ಯಾತ ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಚರ್ಚೆಯೊಂದರಲ್ಲಿ ಇನ್ನು ನಲವತ್ತು ವರ್ಷಗಳ ನಂತರ, ೨೦೫೦ರಲ್ಲಿ, ಸಂಶೋಧನಾ ವಿದ್ಯಾರ್ಥಿಯೊಬ್ಬ ಭಾರತೀಯ ಚುನಾವಣೆಗಳನ್ನು ಸಂಶೋಧಿಸುವಾಗ ೨೦೦೯ರ ಚುನಾವಣೆಯನ್ನು ವಿಶ್ಲೇಷಿಸಿದಲ್ಲಿ, ಮೂರು ಅಂಶಗಳನ್ನು ಮುಖ್ಯವಾಗಿ ಪರಿಗಣಿಸುತ್ತಾನೆ. ದೇಶದ ಶೇ. ೭೦ರಷ್ಟು ಜನತೆ ತೀವ್ರ ಸಂಕಷ್ಟ ಎದುರಿಸುತ್ತಿದ್ದರು, ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ಲೂಟಿಗೊಳಗಾಗಿ ಆದಿವಾಸಿಗಳು ಮೂಲಸ್ಥಾನದಿಂದ ಉಚ್ಚಾಟಿಸಲ್ಪಡುತ್ತಿದ್ದರು, ಮುಂಬರುವ ಒಂದು ಶತಮಾನದ ಕಾಲ ಭಾರತೀಯ ಪ್ರಜಾತಂತ್ರದ ಕಪ್ಪುಚುಕ್ಕೆಯಾಗಿ ಪರಿಣಮಿಸುವ ಸಲ್ವಾಜುಡಂ ಎಂಬ ಸರ್ಕಾರಿ ಯೋಜನೆ ಜಾರಿಯಲ್ಲಿತ್ತು, ಈ ಮೂರು ಅಂಶಗಳೂ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಬಿಂಬಿತವಾಗಲಿಲ್ಲ ಏಕೆ ಎಂಬ ಅಂಶ ಆ ವಿದ್ಯಾರ್ಥಿಯನ್ನು ಕಾಡಬಹುದು ಎಂದು ಹೇಳಿದ್ದು ಮಾರ್ಮಿಕವಾದರೂ, ಎಷ್ಟು ಸತ್ಯ ?
ಭವಿಷ್ಯದ ಹಾದಿ
ಕಾಂಗ್ರೆಸ್‌ನ ವಿಜಯವನ್ನು ಸೆಕ್ಯುಲರಿಸಂನ ಗೆಲುವು ಎಂದು ಹೇಳುವುದಕ್ಕಿಂತಲೂ ಕೋಮುವಾದಿಗಳ ಸೋಲು ಎಂದು ಹೇಳುವುದು ಸೂಕ್ತ. ಧಾರ್ಮಿಕ ಭಾವನೆಗಳಿಂದಲೇ ಜನರನ್ನು ಆಕರ್ಷಿಸಲಾಗುವುದಿಲ್ಲ, ಅಲ್ಪಸಂಖ್ಯಾತರನ್ನು ಹಳಿಯುವುದರ ಮೂಲಕ ಬಹುಸಂಖ್ಯಾತರ ಮತಗಳಿಸಲಾಗುವುದಿಲ್ಲ ಎಂದು ಜನತೆ ನಿರೂಪಿಸಿದ್ದಾರೆ. ಅದೇ ವೇಳೆ ಭಯೋತ್ಪಾದಕತೆಯಂತಹ ಜಾಗತಿಕ ಪಿಡುಗಿಗೆ ಧಾರ್ಮಿಕ ಲೇಪನ ನೀಡಿ, ಜನಸಮುದಾಯಗಳನ್ನು ಒಡೆದು ಆಳುವುದು ಸಾಧ್ಯವಿಲ್ಲವೆಂದೂ ಮುಂಬೈ, ದೆಹಲಿ ಮತ್ತಿತರ ನಗರಗಳ ಜನತೆ ಸಾರಿ ಹೇಳಿದ್ದಾರೆ. ಏತನ್ಮಧ್ಯೆ ಸೆಕ್ಯುಲರ್ ನೀತಿಗಳು ಭಾರತೀಯ ಪ್ರಜಾತಂತ್ರದ ಜೀವಾಳವೆಂದೂ ಮತದಾರರು ತೀರ್ಪಿತ್ತಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಗ್ರಹಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಮುಂಬರುವ ಐದು ವರ್ಷಗಳಲ್ಲಿ ಸೆಕ್ಯುಲರ್ ತತ್ವಗಳನ್ನು ಪ್ರಮಾಣೀಕರಿಸುವ ಯತ್ನ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಹಿಂದುತ್ವವಾದದ ಕೋಮುವಾದವನ್ನು ಮಣಿಸಲು ಕಾಂಗ್ರೆಸ್ ತನ್ನದೇ ಆದ ಕೋಮುವಾದವನ್ನು ಬೆಳೆಸುವ ಸಾಧ್ಯತೆಗಳಿವೆ.
ಏಕೆಂದರೆ ಜಾಗತೀಕರಣ ಮತ್ತು ನವ ಉದಾರವಾದದ ಬೆಳವಣಿಗೆಗೆ ಬಲಪಂಥೀಯ ರಾಜಕಾರಣ ಸಿದ್ಧೌಷದವಿದ್ದಂತೆ. ಸ್ಥಳೀಯ ಮತ್ತು ಜಾಗತಿಕ ಕಾರ್ಪೋರೇಟ್ ಶಕ್ತಿಗಳಿಗೆ ಉದಾರವಾದಿ ಮುಖವಾಡವನ್ನು ಹೊತ್ತ ಬಲಪಂಥೀಯ ಆಳ್ವಿಕೆಯ ಅಗತ್ಯವಿದೆ. ಜಾಗತಿಕ ಹಣಕಾಸು ಬಂಡವಾಳವನ್ನು ನಿರ್ವಹಿಸಲು ಮತ್ತು ಈ ಪ್ರಕ್ರಿಯೆಯ ವಿರುದ್ಧ ದನಿ ಎತ್ತುವ ಜನಪರ ಹೋರಾಟಗಳನ್ನು ದಮನಿಸಲು ಬಲಪಂಥೀಯ ರಾಜಕೀಯ ಅವಶ್ಯವಾದರೂ, ಭಾಜಪದಂತಹ ಕೋಮುವಾದಿ ಬಲಪಂಥೀಯ ಶಕ್ತಿಗಳು ನವ ಉದಾರವಾದದ ಮುನ್ನಡೆಗೆ ಸುಗಮ ಹಾದಿಯನ್ನು ಸೃಷ್ಟಿಸುವುದಿಲ್ಲ. ನವ ಉದಾರವಾದ ತನ್ನ ಉಗ್ರ ಸ್ವರೂಪವನ್ನು ಹೊರಗೆಡಹಿದ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಎಡಪಂಥೀಯ ಚಳುವಳಿಗಳು, ಪ್ರಜಾಂದೋಲನಗಳು ಪ್ರಬಲವಾದ ಹಿನ್ನೆಲೆಯಲ್ಲಿ ನವ ಉದಾರವಾದದ ಸಮರ್ಥಕರು ತೀವ್ರ ಎಚ್ಚರ ವಹಿಸಿರುವುದು ಭಾರತದ ಚುನಾವಣೆಗಳಲ್ಲಿ ವ್ಯಕ್ತವಾಗುತ್ತದೆ. ಪ್ರಜಾಂದೋಲನಗಳನ್ನು, ದಮನಿತ ಜನತೆಯ ಪ್ರತಿಭಟನಾ ದನಿಯನ್ನು ದಮನಿಸುತ್ತಲೇ, ಜನಪರ ಆಳ್ವಿಕೆಯ ಮುಖವಾಡವನ್ನು ಪ್ರದರ್ಶಿಸುವ ಪಕ್ಷದ ಅವಶ್ಯಕತೆ ಜಾಗತಿಕರಣ ಪ್ರಕ್ರಿಯೆಗೂ ಇದೆ. ಕಾಂಗ್ರೆಸ್‌ನ ವಿಜಯವನ್ನು ಈ ದೃಷ್ಟಿಕೋನದಿಂದಲೇ ನೋಡಬೇಕಾಗುತ್ತದೆ.
ಸ್ಪಷ್ಟ ಜನಾದೇಶ ಗಳಿಸಿರುವ ಯುಪಿಎ ಮುಂಬರುವ ದಿನಗಳಲ್ಲಿ ಆರ್ಥಿಕ ಸುಧಾರಣೆಗಳ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಮುನ್ಸೂಚನೆ ಈಗಾಗಲೇ ವ್ಯಕ್ತವಾಗಿದೆ. ವಿಶೇಷ ಆರ್ಥಿಕ ವಲಯದ ವ್ಯಾಪಕ ವಿಸ್ತರಣೆ, ಬ್ಯಾಂಕಿಂಗ್-ವಿಮಾ ಕ್ಷೇತ್ರದ ಸುಧಾರಣೆ, ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ, ಪಿಂಚಣಿಯ ಖಾಸಗೀಕರಣ ಇವೆಲ್ಲವೂ ಶೀಘ್ರಗತಿಯಲ್ಲಿ ಮುನ್ನಡೆಯುವ ಸೂಚನೆಗಳು ಸ್ಪಷ್ಟವಾಗಿವೆ. ಈ ನೀತಿಗಳನ್ನು ವಿರೋಧಿಸುವ ವಿರೋಧ ಪಕ್ಷಗಳೆಂದರೆ ಎಡಪಕ್ಷಗಳು ಮಾತ್ರ, ಆದರೆ ಎಡರಂಗದ ಸಂಖ್ಯೆ ನಗಣ್ಯ. ವಿದೇಶಿ ನೀತಿಯಲ್ಲಿ ಅಮೆರಿಕವನ್ನು ಹಿಂಬಾಲಿಸುವ ಕಾಂಗ್ರೆಸ್ ಪಕ್ಷದ ನೀತಿ ದೇಶದ ಭವಿಷ್ಯಕ್ಕೆ ಮಾರಕವೇ ಹೊರತು, ಲಾಭದಾಯಕವಲ್ಲ.
ಈ ಎಲ್ಲ ನೀತಿಗಳನ್ನು ಕೈಬಿಟ್ಟು, ಜನಪರವಾದ ಅಭಿವೃದ್ಧಿ ಪಥವನ್ನು ಆಯ್ದುಕೊಂಡಲ್ಲಿ ಮಾತ್ರ ೨೦೦೯ರ ಜನಾದೇಶ ಸಾರ್ಥಕತೆ ಪಡೆಯುತ್ತದೆ. ದೇಶದ ಬಹುಪಾಲು ಜನತೆ ಪ್ರಸಕ್ತ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸಿದ್ದರೆ ಅದರ ಹಿಂದೆ ಒಂದು ಆಶಯವಿದೆ, ಆಕಾಂಕ್ಷೆಯಿದೆ, ಕನಸುಗಳಿವೆ, ಕೊಂಚ ಮಟ್ಟಿಗೆ ಭ್ರಮೆಯೂ ಇದೆ. ಸಾಮಾಜಿಕ ಘನತೆ-ಆರ್ಥಿಕ ಸಮಾನತೆಗಾಗಿ ಹೋರಾಡುತ್ತಿರುವ ದಲಿತ-ಆದಿವಾಸಿ ಸಮುದಾಯಗಳು, ಅಸ್ಮಿತೆಯ ಹುಡುಕಾಟದಲ್ಲಿರುವ ಅಲ್ಪಸಂಖ್ಯಾತರು, ಕೂಲಿಗಾಗಿ ಪರಿತಪಿಸುತ್ತಿರುವ ಗ್ರಾಮೀಣ ಬಡಜನತೆ, ಕೂಳಿಗಾಗಿ ಅರಸುತ್ತಿರುವ ನಿರುದ್ಯೋಗಿಗಳು, ನೌಕರಿಯಿಂದ ವಂಚಿತರಾಗಿರುವ ಮಧ್ಯಮವರ್ಗಗಳು, ಸ್ವಾಭಿಮಾನ-ಘನತೆಗಾಗಿ ಹೋರಾಡುತ್ತಿರುವ ಮಹಿಳೆಯರು ಈ ಭ್ರಮಾಲೋಕದ ವಾಸಿಗಳಾಗಿದ್ದಾರೆ. ಮನಮೋಹನ್ ಸಿಂಗ್-ಸೋನಿಯಾ ಅವರ ನೇತೃತ್ವದ ಯುಪಿಎ ಸರ್ಕಾರ ಈ ವರ್ಗಗಳ ಕನಸುಗಳನ್ನು ಸಾಕಾರಗೊಳಿಸುವುದೇ ? ಇದು ದೇಶದ ನಾಗರಿಕರ ಮುಂದಿರುವ ಪ್ರಶ್ನೆ !
ನಾ ದಿವಾಕರ
- Login or register to post comments
- Email this page