You are hereForums / ಸಾಮಾಜಿಕ ವಿಚಾರಗಳು / ಮೇ ದಿನಾಚರಣೆಯ ಅಂಗವಾಗಿ

ಮೇ ದಿನಾಚರಣೆಯ ಅಂಗವಾಗಿ


By DIVAKAR N - Posted on 28 April 2009

ಮೇ ದಿನಾಚರಣೆಯ ಸಾರ್ಥಕತೆ

ಕಾರ್ಮಿಕ ಚಳುವಳಿ, ಕಾರ್ಮಿಕ ಸಂಘಟನೆ ಎಲ್ಲವೂ ಪ್ರಸ್ತುತ ಸಂದರ್ಭದಲ್ಲಿ ನಿರರ್ಥಕ ಮತ್ತು ಅಪ್ರಸ್ತುತ ಎಂಬ ಅಭಿಪ್ರಾಯ ಮಧ್ಯಮ ವರ್ಗಗಳಲ್ಲಿ ಗಟ್ಟಿಯಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ, ಶ್ರಮಿಕ ವರ್ಗಗಳು, ಕೃಷಿ ಕಾರ್ಮಿಕರು ಮತ್ತೊಂದು ಕಾರ್ಮಿಕ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಕಳೆದ ಎರಡು ದಶಕಗಳ ಜಾಗತೀಕರಣ ಪ್ರಕ್ರಿಯೆಯ ಪ್ರಹಾರಕ್ಕೆ ತತ್ತರಿಸಿ ಹೋಗಿರುವ ಭಾರತದ ಕಾರ್ಮಿಕ ಸಮುದಾಯ, ತನ್ನೆಲ್ಲಾ ಆಘಾತ, ನೋವುಗಳ ನಡುವೆಯೂ, ಸಂಘಟನೆಯ ಛಲ ಮತ್ತು ಹೋರಾಟದ ಅಂತಃಸತ್ವವನ್ನು ಉಳಿಸಿಕೊಂಡು ಬಂದಿದೆ. ಮೇ ದಿನಾಚರಣೆ ಕೇವಲ ತನ್ನ ಐತಿಹಾಸಿಕ ಅಥವಾ ಪಾರಂಪರಿಕ ಮಹತ್ವವನ್ನು ಸಾರುವುದಕ್ಕಾಗಿ ಮಾತ್ರ ಆಚರಿಸಲ್ಪಡುತ್ತಿಲ್ಲ ಬದಲಾಗಿ ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶದಲ್ಲಿ ದುಡಿಯುವ ವರ್ಗಗಳ ಹಿತಾಸಕ್ತಿಗಳ ರಕ್ಷಣೆಗಾಗಿ ಹೊಸ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಕಾರ್ಮಿಕರ ಮುಗಿಲು ಮುಟ್ಟುವ ಘೋಷಣೆಗಳ ಪ್ರಾಬಲ್ಯ ಕ್ಷೀಣಿಸಿದ್ದರೂ, ಶ್ರಮಿಕ ವರ್ಗಗಳ ನಿಟ್ಟುಸಿರು ಮತ್ತು ಮೂಕವೇದನೆ ಮತ್ತೊಂದು ರೂಪದಲ್ಲಿ ಆಳ್ವಿಕರನ್ನು ಬಡಿದೆಬ್ಬಿಸುತ್ತಿದೆ. ಇದು ಜಾಗತಿಕ ಮಟ್ಟದಲ್ಲಿಯೂ ಅಷ್ಟೇ ಸತ್ಯ.

ವಿಶ್ವದ ಕಾರ್ಮಿಕರಿಗೆ ಮೇ ದಿನಾಚರಣೆ ಒಂದು ವಿಶಿಷ್ಟ ರೀತಿಯ ಹಬ್ಬದಂತೆ. ಆದರೆ ಎಲ್ಲಾ ಧಾರ್ಮಿಕ ಹಬ್ಬಗಳಂತೆ ಸಿಹಿಯನ್ನು ಸವಿದು ಆಚರಿಸುವ ಹಬ್ಬವಲ್ಲ. ಒಂದು ರೀತಿಯಲ್ಲಿ ಮೇ ದಿನಾಚರಣೆ ವಿಶ್ವದ ಕಾರ್ಮಿಕರಿಗೆ ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುವ ಮತ್ತು ತಮ್ಮ ಶ್ರೇಯಸ್ಸಿಗಾಗಿ ಪ್ರಾಣ ತೆತ್ತ ವೀರ ಯೋಧರಿಗೆ ಶ್ರದ್ಧಾಪೂರ್ವಕ ನಮನ ಸಲ್ಲಿಸುವ ಒಂದು ಮಹತ್ತರ ದಿನವೆಂದೇ ಹೇಳಬಹುದು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಜಗತ್ತಿನಾದ್ಯಂತ ಕಂಡುಬಂದ ಅನೇಕ ಕ್ರಾಂತಿಕಾರಿ ಬದಲಾವಣೆಗಳ ನೇರ ಪರಿಣಾಮವಾಗಿ ರೂಪುಗೊಂಡ ಕಾರ್ಮಿಕ ವರ್ಗದ ಚಳುವಳಿಗೆ ೧೮೮೬ರ ಮೇ ೧ರಂದು ಅಮೆರಿಕಾದ ಹೇ ಮಾರ್ಕೆಟ್ ಚೌಕದಲ್ಲಿ ನಡೆದ ಗೋಲೀಬಾರ್ ಮತ್ತು ತದನಂತರದಲ್ಲಿ ನಡೆದ ಗಲಭೆಗಳು ಒಂದು ಮಹತ್ತರ ತಿರುವು ನೀಡಿತ್ತು. ಐರೋಪ್ಯ ರಾಷ್ಟ್ರಗಳಲ್ಲಿ ಜನ್ಮ ತಾಳಿದ ಸಮಾಜವಾದಿ ಸಿದ್ಧಾಂತ, ಮಾರ್ಕ್ಸ್ ಮತ್ತು ಏಂಜೆಲ್ಸ್‌ರವರು ಪ್ರತಿಪಾದಿಸಿದ ಕಮ್ಯುನಿಸ್ಟ್ ಸಿದ್ಧಾಂತ, ಇದರ ಪರಿಣಾಮವಾಗಿ ನಡೆದ ಫ್ರಾನ್ಸ್‌ನ ಕ್ರಾಂತಿ ಮತ್ತು ೧೮೭೧ರ ಪ್ಯಾರಿಸ್ ಕಮ್ಯೂನ್, ಇಂಗ್ಲೆಂಡ್, ಅಮೆರಿಕಾ ಮುಂತಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ವಸಾಹತು ಶಾಹಿ ಧೋರಣೆ ಮತ್ತು ದಮನಕಾರಿ ನೀತಿಗಳು, ಇವೆಲ್ಲವೂ ಈ ಅವಧಿಯಲ್ಲಿ ಜಾಗತಿಕ ಇತಿಹಾಸಕ್ಕೆ ಮಹತ್ತರ ತಿರುವು ನೀಡಿದ್ದವು.

ಇದೇ ಪರಂಪರೆಯ ಜಾಡಿನಲ್ಲಿ ಸಾಗಿಬಂದಿರುವ ಜಾಗತಿಕ ಆರ್ಥಿಕ ವ್ಯವಸ್ಥೆ ಕಾಲಕಾಲಕ್ಕೆ ತನ್ನ ಸ್ವರೂಪವನ್ನು, ಲಕ್ಷಣಗಳನ್ನು ಬದಲಾಯಿಸಿಕೊಂಡೇ ಬಂದಿದ್ದರೂ, ಬಂಡವಾಳ ವ್ಯವಸ್ಥೆಯ ಚೌಕಟ್ಟಿನಿಂದ ಹೊರಬಂದಿಲ್ಲ. ೧೯-೨೦ನೆಯ ಶತಮಾನದ ವಸಾಹತು ನೀತಿ, ೨೧ನೆಯ ಶತಮಾನದಲ್ಲಿ ನವ ಉದಾರವಾದಿ ನೀತಿಯ ರೂಪದಲ್ಲಿ ಪ್ರಕಟಗೊಂಡಿದ್ದು, ಬಂಡವಾಳದ ಹಿಡಿತವನ್ನು ಇನ್ನೂ ಬಿಗಿಗೊಳಿಸಿದೆ. ಪ್ರಸಕ್ತ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಜಾಗತಿಕ ಹಣಕಾಸು ಬಂಡವಾಳದ ಪ್ರಭಾವ ಕ್ಷೀಣಿಸಿದ್ದರೂ ಶ್ರಮಿಕ ವರ್ಗಗಳು ಸಮರ್ಥ ಪ್ರತಿರೋಧ ವ್ಯಕ್ತಪಡಿಸುವುರಲ್ಲಿ ವಿಫಲವಾಗಿರುವುದು ಆಳ್ವಿಕರನ್ನು ಉತ್ತೇಜಿಸಿದೆ. ಆದರೆ ಈ ಸನ್ನಿವೇಶವನ್ನು ಶ್ರಮಿಕ ವರ್ಗಗಳ ಹಿನ್ನಡೆ ಎಂದಾಗಲೀ, ಬಂಡವಾಳ ವ್ಯವಸ್ಥೆಯ ಗತಿಶೀಲತೆ ಎಂದಾಗಲೀ ಬಣ್ಣಿಸಲಾಗದು. ಜಾಗತೀಕರಣ ಪ್ರಕ್ರಿಯೆ ತನ್ನೆಲ್ಲಾ ಸಂಪನ್ಮೂಲಗಳನ್ನು ಪ್ರಯೋಗಿಸಿ ಶ್ರಮಿಕ ವರ್ಗಗಳಲ್ಲಿ, ವಿಶೇಷವಾಗಿ ಮೇಲ್ ಮಧ್ಯಮವರ್ಗಗಳಲ್ಲಿ ಮೂಡಿಸಿರುವ ಭ್ರಮೆ ಕ್ರಮೇಣ ಕರಗುತ್ತಿರುವುದು ಸ್ಪಷ್ಟವಾಗುತ್ತಿದೆ. ಇಡೀ ವಿಶ್ವವೇ ಒಂದು ಪುಟ್ಟ ಹಳ್ಳಿಯಂತಾಗುವುದರಿಂದ, ಯಾವುದೇ ರೀತಿಯ ಸಾಮಾಜಿಕ, ಆರ್ಥಿಕ ತಾರತಮ್ಯಗಳನ್ನು ಹೋಗಲಾಡಿಸಬಹುದು ಎಂಬ ಜಾಗತೀಕರಣದ ಪೂಜಾರಿಗಳ ಮಂತ್ರ ಮಂಜಿನಂತೆ ಮರೆಯಾಗುತ್ತಿದ್ದು, ಜಾಗತೀಕೃತ ವಿಶ್ವದಲ್ಲಿ ಸಹಮಾನವರ ನಡುವಿನ ಅಂತರ, ತಾರತಮ್ಯ ಹೆಚ್ಚಾಗುತ್ತಿದೆ.

ಉದ್ಯೋಗ ಎಂಬ ಮರೀಚಿಕೆ

ಮೇ ದಿನಾಚರಣೆಯ ಈ ಸಂದರ್ಭದಲ್ಲೇ ದೇಶವು ಚುನಾವಣೆಯನ್ನೆದುರಿಸುತ್ತಿರುವುದು ಶ್ರಮಿಕ ವರ್ಗಗಳಿಗೆ ನವಶಕ್ತಿ ಬಂದಂತಾಗಿದೆ. ನಿರುದ್ಯೋಗ ಮತ್ತು ಅರೆ ಉದ್ಯೋಗಾವಕಾಶಗಳು ಸರ್ವವ್ಯಾಪಿಯಾಗಿರುವ ಭಾರತದಂತಹ ದೇಶದಲ್ಲಿ ಹೊಸ ಉದ್ಯೋಗ ಸೃಷ್ಟಿ ಮತ್ತು ಸಾಮಾನ್ಯ ಜನತೆಯ ಜೀವನೋಪಾಯಗಳು ಚುನಾವಣೆಯ ಪ್ರಮುಖ ಕಾರ್ಯಸೂಚಿಯಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಪ್ರಸಕ್ತ ಚುನಾವಣೆಗಳಲ್ಲಿ ಉದ್ಯೋಗ ಕ್ಷೇತ್ರದ ಬಗ್ಗೆ, ಎಡ ಪಕ್ಷಗಳನ್ನು ಹೊರತುಪಡಿಸಿ, ಮುಖ್ಯವಾಹಿನಿಯ ಯಾವುದೇ ಪಕ್ಷವೂ ಪ್ರಸ್ತಾಪಿಸಿಲ್ಲ. ಈ ಸನ್ನಿವೇಶದಲ್ಲಿ ದೇಶದ ದುಡಿಯುವ ವರ್ಗಗಳ ದೃಷ್ಟಿಯಲ್ಲಿ ಮೇ ದಿನಾಚರಣೆ ಮಹತ್ವ ಗಳಿಸುತ್ತದೆ.

ಸರ್ಕಾರದ ದೃಷ್ಟಿಯಲ್ಲಿ ನಿರುದ್ಯೋಗಿಗಳೆಂದರೆ ನಿರ್ದಿಷ್ಟ ವೇತನ ಗಳಿಸುವ, ಔಪಚಾರಿಕ ಕ್ಷೇತ್ರದ ಸಂಘಟಿತ ಕ್ಷೇತ್ರದಲ್ಲಿ ಉಂಟಾಗುವ ನಿರುದ್ಯೋಗವನ್ನು ಮಾತ್ರ ಪರಿಗಣಿಸಲಾಗುತ್ತದೆ. ಭಾರತದ ಸಂದರ್ಭದಲ್ಲಿ ಈ ಕ್ಷೇತ್ರದ ಉದ್ಯೋಗಿಗಳ ಪ್ರಮಾಣ ಕೇವಲ ಶೇ ೮ರಷ್ಟಿದೆ. ಬಹುಪಾಲು ಕಾರ್ಮಿಕರು ಈ ಕ್ಷೇತ್ರದಲ್ಲಿ ನೌಕರಿ ಗಳಿಸಲಾಗದೆ ಸ್ವಯಂ ಉದ್ಯೋಗದಲ್ಲಿ ತೊಡಗಿದವರಾಗಿರುತ್ತಾರೆ. ೨೦೦೪ರ ಲೋಕಸಭಾ ಚುನಾವಣೆಗಳಲ್ಲಿ ಈ ಅಸಂಘಟಿತ ಕ್ಷೇತ್ರದ ಕಾರ್ಮಿಕರ ಬವಣೆಯೇ ಪ್ರಮುಖ ವಿಷಯವಾಗಿತ್ತು. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಪ್ರತಿಯೊಂದು ಕುಟುಂಬಕ್ಕೂ ವರ್ಷಕ್ಕೆ ನೂರು ದಿನಗಳ ವೇತನ ನೌಕರಿ ನೀಡುವ ಆಶ್ವಾಸನೆ ನೀಡಿತ್ತು. ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಹೊರತಾಗಿಯೂ ಈ ಧ್ಯೇಯವನ್ನು ಸಾಧಿಸಲಾಗಿಲ್ಲ. ಗ್ರಾಮೀಣ ಮಟ್ಟದಲ್ಲಿ ಈ ಯೋಜನೆಯ ಪರಿಣಾಮವಾಗಿ ಅಲ್ಪ ಪ್ರಮಾಣದ ಉದ್ಯೋಗ ಸೃಷ್ಟಿಯಾಗಿರುವುದಾದರೂ, ಗ್ರಾಮೀಣ ಬಡವರ ವಲಸೆಯ ಪ್ರಮಾಣದಲ್ಲಿ ಇಳಿಮುಖವಾಗದಿರುವುದು ಸತ್ಯ.

೧೯೯೯-೨೦೦೪ ಅವಧಿಯಲ್ಲಿ ಔಪಚಾರಿಕ ಕ್ಷೇತ್ರದಲ್ಲಿನ ಉದ್ಯೋಗ ಸೃಷ್ಟಿಯ ಪ್ರಮಾಣ ಹೆಚ್ಚಿರುವುದು ಕಂಡುಬಂದರೂ, ಸೃಷ್ಟಿಯಾದ ಉದ್ಯೋಗಾವಕಾಶಗಳು ಜನಸಾಮಾನ್ಯರಿಗೆ ಭದ್ರತೆಯನ್ನು ಒದಗಿಸುವುದರಲ್ಲಿ ವಿಫಲವಾಗಿವೆ. ಭಾರತದಲ್ಲಿ ಶೇ. ೭೦ರಷ್ಟು ಕಾರ್ಮಿಕರು ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಉಲ್ಬಣಿಸುತ್ತಿರುವ ಬಿಕ್ಕಟ್ಟಿನ ಪರಿಣಾಮವಾಗಿ ಕೃಷಿ ಕಾರ್ಮಿಕರ ಬವಣೆ ಹೇಳತೀರದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳಾಗಿರುವವರನ್ನು ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಔದ್ಯಮಿಕ ಕ್ಷೇತ್ರ ವಿಫಲವಾಗಿರುವುದರಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಸುಮಾರು ೪೦ ಕೋಟಿ ಕಾರ್ಮಿಕರನ್ನು ಹೊಂದಿರುವ ಅಸಂಘಟಿತ ಕ್ಷೇತ್ರದ ಬಗ್ಗೆ ಯಾವುದೇ ಸರ್ಕಾರವೂ ನಿರ್ದಿಷ್ಟ ಯೋಜನೆ ಜಾರಿಗೊಳಿಸದಿರುವುದು ವಿಷಾದನೀಯ. ಎನ್.ಎಸ್.ಎಸ್.ಒ ಸಮೀಕ್ಷೆಯ ಪ್ರಕಾರ ಕೃಷಿ ಕ್ಷೇತ್ರದಲ್ಲಿ ೨೪ ಕೋಟಿ, ತಯಾರಿಕಾ ಕ್ಷೇತ್ರದಲ್ಲಿ ೪ಕೋಟಿ, ವ್ಯಾಪಾರ-ಸೇವಾ ಕ್ಷೇತ್ರದಲ್ಲಿ ೪ ಕೋಟಿ, ಕಟ್ಟಡ ನಿರ್ಮಾಣದಲ್ಲಿ ೨ ಕೋಟಿ ಮತ್ತು ಇತರ ಕ್ಷೇತ್ರಗಳಲ್ಲಿ ೬ ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ.

ಔಪಚಾರಿಕ ಕ್ಷೇತ್ರದಲ್ಲೂ ೧೯೯೯-೨೦೦೦ದಲ್ಲಿ ೫೪.೧ ದಶಲಕ್ಷವಿದ್ದ ಕಾರ್ಮಿಕರ ಸಂಖ್ಯೆ ೨೦೦೪-೦೫ರಲ್ಲಿ ೬೨.೬ ದಶಲಕ್ಷವಾಗಿದೆ. ಅಂದರೆ ವಾರ್ಷಿಕ ಶೇ ೩ರಷ್ಟು ವೃದ್ಧಿಯಾಗಿದೆ. ಸಂಘಟಿತ ಕ್ಷೇತ್ರವನ್ನು ಮಾತ್ರ ಪರಿಗಣಿಸುವುದಾದರೆ ಇದೇ ಅವಧಿಯಲ್ಲಿ ಕಾರ್ಮಿಕರ ಸಂಖ್ಯೆ ೩೩.೭ ದಶಲಕ್ಷದಿಂದ ೩೩.೪ ದಶಲಕ್ಷಕ್ಕೆ ಇಳಿದಿದೆ. ಸಂಘಟಿತ ಕ್ಷೇತ್ರದಲ್ಲಿ ಪ್ರಬಲವಾದ ಕಾರ್ಮಿಕ ಸಂಘಟನೆಗಳು ಸಕ್ರಿಯವಾಗಿದ್ದರೂ ಉದ್ಯೋಗ ಸೃಷ್ಟಿಸುವಲ್ಲಿ ಔದ್ಯಮಿಕ ಕ್ಷೇತ್ರ ವಿಫಲವಾಗಿರುವುದು ನವ ಉದಾರವಾದಿ ನೀತಿಗಳ ನೇರ ಪರಿಣಾಮವಾಗಿದೆ. ನೇರ ವಿದೇಶಿ ಬಂಡವಾಳ ಹೂಡಿಕೆ, ಮಾರುಕಟ್ಟೆ ಸ್ಪರ್ಧೆಯನ್ನು ಉತ್ತೇಜಿಸುವ ನೆಪದಲ್ಲಿ ಆಳ್ವಿಕರು ಅನುಸರಿಸುತ್ತಿರುವ ಆರ್ಥಿಕ ನೀತಿಗಳು ಸಾರ್ವಜನಿಕ ಉದ್ದಿಮೆಗಳನ್ನು ಅವಸಾನದ ಅಂಚಿಗೆ ತಳ್ಳುತ್ತಿವೆ. ಎನ್.ಡಿ.ಎ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತಕ್ಕಾಗಿಯೇ ಪ್ರತ್ಯೇಕ ಮಂತ್ರಿಯನ್ನು ನೇಮಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ಯು.ಪಿ.ಎ ಸರ್ಕಾರವು ಬಂಡವಾಳ ಹಿಂದೆಗೆಯದಿದ್ದರೂ, ಹೊಸ ಬಂಡವಾಳ ಹೂಡಿಕೆಯನ್ನೂ ಮಾಡದಿರುವುದು ಸತ್ಯ.

ಮುಕ್ತ ಮಾರುಕಟ್ಟೆ ನೀತಿಯನ್ನು ಆಲಂಗಿಸಿಕೊಂಡು, ಗ್ಯಾಟ್ ಒಪ್ಪಂದಗಳಿಗೆ ಸಹಿ ಮಾಡುವ ಮೂಲಕ ಸಾಮ್ರಾಜ್ಯಶಾಹಿಗಳಿಗೆ ಶರಣಾದ ಭಾರತದ ಆಳುವ ವರ್ಗಗಳ ಆರ್ಥಿಕ ನೀತಿಗಳು ಭಾರತದ ಸ್ವಾವಲಂಬನೆಯನ್ನೇ ಅಪಾಯದ ಅಂಚಿಗೆ ತಳ್ಳಿವೆ. ೧೯೯೦ರಲ್ಲಿ ಸಾರ್ವಜನಿಕ ಉದ್ದಿಮೆಗಳ ಸಂಖ್ಯೆ ೨೬೬ರಷ್ಟಿದ್ದು ೨೦೦೮ರಲ್ಲಿ ೨೨೦ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಒಂದು ಸಮಯದಲ್ಲಿ ಯಾವುದೇ ಕಾರಣಕ್ಕೂ ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಅವಕಾಶ ನೀಡಕೂಡದು, ಖಾಸಗೀಕರಣ ಮಾಡಕೂಡದು ಎಂದು ಹೋರಾಡುತ್ತಿದ್ದ ಸಂಸದೀಯ ಎಡ ಪಕ್ಷಗಳು ಇತ್ತೀಚೆಗೆ ತಮ್ಮ ನಿಲುವನ್ನು ಬದಲಿಸಿ ಲಾಭದಾಯಕ ಉದ್ದಿಮೆಗಳನ್ನು ಮತ್ತು ನವರತ್ನಗಳನ್ನು ಹೊರತುಪಡಿಸಿ ಇತರ ಉದ್ದಿಮೆಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲು ತಾತ್ವಿಕವಾಗಿ ಒಪ್ಪಿಕೊಂಡಿವೆ. ಸಂಸತ್ತಿನಲ್ಲಿ ಪ್ರಬಲ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಬ್ಯಾಂಕ್ ಮತ್ತು ವಿಮಾ ಕ್ಷೇತ್ರಗಳಲ್ಲೂ ಸರ್ಕಾರದ ಬಂಡವಾಳ ಪ್ರಮಾಣವನ್ನು ತಗ್ಗಿಸಲಾಗಿದೆ. ವಿದೇಶಿ ಬ್ಯಾಂಕುಗಳು, ವಿಮಾಕಂಪನಿಗಳಿಗೆ ಮುಕ್ತ ಅವಕಾಶ ನೀಡಿರುವುದರಿಂದ ದೇಶೀ ಸಂಸ್ಥೆಗಳು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿರುವುದು ಸ್ವಷ್ಟವಾಗಿದೆ.

ಎಲ್ಲ ಕ್ಷೇತ್ರಗಳಲ್ಲೂ ಹೊರಗುತ್ತಿಗೆ ನೀಡುವ ರಭಸದಲ್ಲಿ ಸಾರ್ವಜನಿಕ ಸಂಸ್ಥೆ ಮತ್ತು ಉದ್ದಿಮೆಗಳ ಸ್ವಾಯತ್ತತೆಯನ್ನೇ ಬಲಿ ನೀಡಿರುವ ನವ ಉದಾರವಾದಿ ನೀತಿಗಳು, ದೇಶವನ್ನು ಬಿಕ್ಕಟ್ಟಿನ ಅಂಚಿಕೆ ಕೊಂಡೊಯ್ದಿದೆ. ಜಾಗತಿಕ ಆರ್ಥಿಕ ಹಿಂಜರಿತವಿದ್ದಾಗ್ಯೂ ಭಾರತದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗದಿರಲು ಎಡ ಪಕ್ಷಗಳ ಮತ್ತು ಕಾರ್ಮಿಕ ಸಂಘಟನೆಗಳ ಅವಿರತ ಹೋರಾಟವೇ ಕಾರಣವೆಂದರೆ ತಪ್ಪಾಗಲಾರದು. ಒಂದು ವೇಳೆ ಬ್ಯಾಂಕ್ ಮತ್ತು ವಿಮಾ ಕ್ಷೇತ್ರದ ಕಾರ್ಮಿಕರು ಎಡ ಪಕ್ಷಗಳೊಡನೆ ಸೇರಿ ಹೋರಾಟ ನಡೆಸದೆ ಇದ್ದಲ್ಲಿ ಇಂದು ದೇಶಾದ್ಯಂತ ಸತ್ಯಂಗಳ ರುದ್ರ ನರ್ತನವನ್ನು ಕಾಣಬಹುದಿತ್ತು. ಆದಾಗ್ಯೂ ಕೇಂದ್ರ ಸರ್ಕಾರವು ಬ್ಯಾಂಕುಗಳ ವಿಲೀನ ಮತ್ತು ಚಾಲ್ತಿ ಖಾತೆಯ ಪೂರ್ಣ ಪರಿವರ್ತನೆಯ ನಿಯಮವನ್ನು ಅನುಷ್ಟಾನಗೊಳಿಸಲು ತುದಿಗಾಲಲ್ಲಿ ನಿಂತಿರುವುದು ಮುಂಬರುವ ಅಪಾಯದ ಸೂಚನೆಯಾಗಿದೆ.

ಸಂಘಟಿತ ಕ್ಷೇತ್ರದಲ್ಲಿ ಕಾರ್ಮಿಕರು ಸುಭದ್ರ ನೌಕರಿಯನ್ನಾದರೂ ಹೊಂದಿದ್ದಾರೆ. ಆದರೆ ಅಸಂಘಟಿತ ಕ್ಷೇತ್ರದಲ್ಲಿ, ಕೃಷಿ ಕ್ಷೇತ್ರದಲ್ಲಿ ಸಾಮಾಜಿಕ-ಆರ್ಥಿಕ ಅಭದ್ರತೆಯಿಂದ ಬಳಲುತ್ತಿರುವ ಕಾರ್ಮಿಕ ವರ್ಗ ಬೆಲೆ ಏರಿಕೆಯ ಬೇಗೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ವತಿಯಿಂದ ಸೃಷ್ಟಿಯಾಗುತ್ತಿರುವ ಉದ್ಯೋಗಾವಕಾಶಗಳು ಸಾಕಷ್ಟು ಆರ್ಥಿಕ ಸಾಮರ್ಥ್ಯವನ್ನು ನೀಡುತ್ತಿಲ್ಲವೆಂಬ ಅಂಶ ಆಳ್ವಿಕರ ಗಮನಕ್ಕೆ ಬಂದಿಲ್ಲದಿರುವುದು ವಿಷಾದನೀಯ. ವಿಶೇಷವಾಗಿ ಮಹಿಳೆಯರಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಕುಂಠಿತವಾಗಿದ್ದು, ವೇತನಗಳಿಕೆಯೂ ಕ್ಷೀಣಿಸಿದೆ. ಜವಳಿ ಉದ್ದಿಮೆಯಲ್ಲಿನ ಬಿಕ್ಕಟ್ಟಿನಿಂದ ಸಾವಿರಾರು ಮಹಿಳಾ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ತತ್ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಶೇ ೪೫ರಷ್ಟು ಮಹಿಳೆಯರು ಸ್ವಯಂ ಉದ್ಯೋಗವನ್ನು ಅವಲಂಬಿಸುವಂತಾಗಿದೆ.

ದೇಶದ ಅರ್ಧಕ್ಕಿಂತಲೂ ಹೆಚ್ಚು ಕಾರ್ಮಿಕ ವರ್ಗ ನೇರ ಉದ್ಯೋಗ ಹೊಂದಿಲ್ಲ. ಹಾಗಾಗಿ ಉದ್ಯೋಗದ ಪ್ರಗತಿಯಾಗುತ್ತಿದೆ ಎಂದು ಹೇಳಲಾದರೂ ಪದಾರ್ಥಗಳ ಉತ್ಪನ್ನ ಹೆಚ್ಚಾಗುತ್ತಿಲ್ಲ. ಕಾರ್ಮಿಕರ ಆದಾಯದಲ್ಲಿ ಹೆಚ್ಚಳ ಕಾಣುತ್ತಿಲ್ಲ. ಕಾರ್ಮಿಕ ಬ್ಯೂರೋ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಎಂಟು ಪ್ರಮುಖ ಔದ್ಯಮಿಕ ಕ್ಷೇತ್ರಗಳಲ್ಲಿ ಕಳೆದ ೬ ತಿಂಗಳ ಅವಧಿಯಲ್ಲಿ ೫ ಲಕ್ಷಕ್ಕೂ ಹೆಚ್ಚು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಇದು ಕೇವಲ ಹಲವು ಕ್ಷೇತ್ರಗಳ ಸಮೀಕ್ಷೆಯಾಗಿದ್ದು, ಒಟ್ಟಾರೆ ದೇಶದ ಉದ್ಯೋಗ ಕ್ಷೇತ್ರವನ್ನು ನೋಡಿದರೆ ಕಾರ್ಮಿಕರ ಬವಣೆ ಇನ್ನೂ ಹತಾಶ ಸ್ಥಿತಿ ತಲುಪಿರುವುದು ಸ್ಪಷ್ಟವಾಗುತ್ತದೆ.

ಈ ದೃಷ್ಟಿಯಿಂದ ಪ್ರಸಕ್ತ ವರ್ಷದ ಮೇ ದಿನಾಚರಣೆ ಹೆಚ್ಚಿನ ಮಹತ್ವ ಗಳಿಸುತ್ತದೆ. ಕೆಂಬಾವುಟದಡಿ ಸಂಘಟಿತರಾಗಿ, ಕಾರ್ಮಿಕ ವರ್ಗಗಳ ಶ್ರೇಯಸ್ಸಿಗಾಗಿ ಅವಿರತವಾಗಿ ಹೋರಾಡುವ ಸುಶಿಕ್ಷಿತ ಕಾರ್ಮಿಕರೇ ಇಂದು ಜಾಗತೀಕರಣದ ಪ್ರಬಲ ಸಮರ್ಥಕರಾಗಿರುವುದು ದುರಂತ. ಈ ವರ್ಗಗಳಿಂದಲೇ ಕಾರ್ಮಿಕ ಚಳುವಳಿ ಅಪ್ರಸ್ತುತ ಎಂಬ ಅಭಿಪ್ರಾಯವೂ ವ್ಯಾಪಕವಾಗಿ ಹರಡುತ್ತಿದೆ. ಜಾತಿ, ಧರ್ಮ, ಭಾಷೆ, ಪ್ರಾಂತ್ಯಗಳ ಭಿನ್ನತೆಗಳನ್ನು ಮೀರಿ ಬೆಳೆಯಬೇಕಾದ ಕಾರ್ಮಿಕ ಚಳುವಳಿಗಳು ಇಂದು ಸಂಘಟನಾ ದೌರ್ಬಲ್ಯಗಳ ಪರಿಣಾಮವಾಗಿ ವಿಘಟಿತವಾಗುತ್ತಿವೆ. ಕಾರ್ಮಿಕ ವರ್ಗದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಸಮಾನತೆಯೆಡೆಗೆ ಸಾಗುವ ರಾಜಕೀಯ ಪ್ರಜ್ಞೆಯನ್ನು ಬೆಳಸುವ ಅಗತ್ಯತೆ ಹೆಚ್ಚಾಗಿರುವ ಪ್ರಸ್ತುತ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ರಾಜಕಾರಣದಿಂದ ವಿಮುಖರಾಗುತ್ತಿರುವುದೂ ಸ್ಪಷ್ಟವಾಗುತ್ತಿದೆ. ಬೂರ್ಷ್ವಾ ರಾಜಕೀಯ ಪಕ್ಷಗಳು ತಮ್ಮ ವಿಭಜಕ ರಾಜಕಾರಣದಿಂದ ಕಾರ್ಮಿಕ ವರ್ಗಗಳನ್ನು ಹಿಮ್ಮೆಟ್ಟಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತಿವೆ. ಈ ನಿಟ್ಟಿನಲ್ಲಿ ಪ್ರಾದೇಶಿಕತೆ, ಮತೀಯ ಭಾವನೆಗಳು, ಭಾಷಾ ದ್ವೇಷ ಮತ್ತು ಜಾತಿ ವೈಷಮ್ಯಗಳು ಕಾರ್ಮಿಕರ ಪರಮ ಶತ್ರುಗಳಾಗಿ ಪರಿಣಮಿಸಿವೆ. ಈ ಆಂತರಿಕ ಶತ್ರುಗಳನ್ನು ಎದುರಿಸಿ ಹೋರಾಡಿ ದೇಶದ ಅಸಂಖ್ಯಾತ ಶ್ರಮಿಕ ವರ್ಗಗಳ ಏಳಿಗೆಗಾಗಿ ಹೋರಾಡುವ ಸಂಕಲ್ಪ ತೊಡಲು ವೇದಿಕೆಯಾದಲ್ಲಿ ಮೇ ದಿನಾಚರಣೆ ಸಾರ್ಥಕವಾಗುತ್ತದೆ.

ನಾ ದಿವಾಕರ