You are hereForums / ಕರ್ನಾಟಕದ ರಾಜಕೀಯ / ಚುನಾವಣೆ-ಪ್ರಣಾಳಿಕೆ-ಪ್ರಜಾತಂತ್ರ

ಚುನಾವಣೆ-ಪ್ರಣಾಳಿಕೆ-ಪ್ರಜಾತಂತ್ರ


By DIVAKAR N - Posted on 12 April 2009

ಚುನಾವಣೆ - ಪ್ರಣಾಳಿಕೆ - ಪ್ರಜಾತಂತ್ರ

ಸಾಮಾನ್ಯವಾಗಿ ಲೋಕಸಭಾ ಚುನಾವಣೆಗಳನ್ನು ಮಹಾಚುನಾವಣೆ ಎಂದು ಕರೆಯಲಾಗುತ್ತದೆ. ಐದು ವರ್ಷಗಳಿಗೊಮ್ಮೆ ಎದುರಾಗುವ ಈ ಪ್ರಕ್ರಿಯೆ ಪ್ರಜಾತಂತ್ರದ ಅಳಿವು ಉಳಿವಿನ ಮಾನದಂಡವಾಗಿರುವುದರಿಂದ ಸಾಮಾನ್ಯ ಜನತೆ ಈ ಮಹತ್ತರ ಸಮಯಕ್ಕಾಗಿ ಕಾತುರದಿಂದಿರುತ್ತಾರೆ. ತಮ್ಮಿಂದ ಚುನಾಯಿತವಾದ ಪಕ್ಷಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಮತ್ತು ಸರ್ಕಾರಗಳ ಸಾಧನೆಗಳನ್ನು ಪರಾಮರ್ಶಿಸಿ ತಮ್ಮ ಸಂವಿಧಾನಿಕ ಹಕ್ಕಿನ ಮೂಲಕ ತೀರ್ಪು ನೀಡುವ ಸಾರ್ವತ್ರಿಕ ಮತದಾನ ಪ್ರಜಾತಾಂತ್ರಿಕ ವ್ಯವಸ್ಥೆಯ ಪ್ರಮುಖ ಮಾನದಂಡ. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಶೇ ೬೦ರಷ್ಟು ಮತದಾರರು ಮತ ಚಲಾಯಿಸುತ್ತಾರೆ. ಆದಾಗ್ಯೂ ಮತ ಚಲಾಯಿಸುವ ಜನತೆ ಸಮಸ್ತ ಭಾರತೀಯರ ನಾಡಿಮಿಡಿತವನ್ನು ಪ್ರತಿನಿಧಿಸುವುದರಿಂದ ಹಾಗು ಚುನಾಯಿತ ಪಕ್ಷಗಳ ಸಾಫಲ್ಯ ವೈಫಲ್ಯಗಳು ಇಡೀ ಜನಸಂಖ್ಯೆಯನ್ನು ಬಾಧಿಸುವುದರಿಂದ, ಚುನಾಯಿತ ಸದಸ್ಯರು ಸಮಸ್ತ ಭಾರತೀಯ ಪ್ರಜೆಗಳ ಒಳಿತಿಗಾಗಿ ಶ್ರಮಿಸಬೇಕಾಗುತ್ತದೆ..

ಈ ದೃಷ್ಟಿಯಿಂದ ನೋಡಿದಾಗ ಭಾರತೀಯ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ ಶತಮಾನದ ಎಪ್ಪತ್ತರ ದಶಕದ ಅಂಚಿನವರೆಗೂ ಚುನಾವಣಾ ಪ್ರಣಾಳಿಕೆಗಳು ಸ್ಪಲ್ಪ ಮಟ್ಟಿಗಾದರೂ ದಾರ್ಶನಿಕತೆಯಿಂದ ಕೂಡಿ, ಮತದಾರರನ್ನು ಓಲೈಸುವ ದಸ್ತಾವೇಜು ಮಾತ್ರವಾಗಿರದೆ ಮುಂದಿನ ೫ ವರ್ಷಗಳಲ್ಲಿ ದೇಶವು ಕ್ರಮಿಸುವ ನಿರ್ದಿಷ್ಟ ಮಾರ್ಗವನ್ನು ಸೂಚಿಸುತ್ತಿದ್ದವು. ಈ ಅವಧಿಯಲ್ಲಿ ಪ್ರಣಾಳಿಕೆಗಳಿಂದಲೇ ರಾಜಕೀಯ ಪಕ್ಷಗಳ ಸೈದ್ಧಾಂತಿಕ ನಿಲುವು, ಆರ್ಥಿಕ ನೀತಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಸಂವಿಧಾನ ಬದ್ಧತೆಗಳು ವ್ಯಕ್ತವಾಗುತ್ತಿದ್ದವು. ಶೇ ೪೦ರಷ್ಟು ಅನಕ್ಷರಸ್ತರಿರುವ ದೇಶದಲ್ಲಿ ಪ್ರಣಾಳಿಕೆಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬ ಅಂಶ ಚರ್ಚಾಸ್ಪದವಾದರೂ, ಗ್ರಾಮೀಣ ಪ್ರದೇಶಗಳಲ್ಲೂ ರಾಜಕೀಯ ಪಕ್ಷಗಳ ಧ್ಯೇಯೋದ್ದೇಶಗಳನ್ನು ಕುರಿತ ಚರ್ಚೆಗಳು ವ್ಯಾಪಕವಾಗಿರುತ್ತಿದ್ದುದು ಅಂದಿನ ಚುನಾವಣೆಗಳ ವೈಶಿಷ್ಟ್ಯ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಲ್ಲವಾದರೂ, ಬಗೆಹರಿಸುವ ಸದುದ್ದೇಶವನ್ನು ಕಾಣಬಹುದಿತ್ತು.

ವಾಸ್ತವ ಸನ್ನಿವೇಶ

ಆದರೆ ೮೦ರ ದಶಕದ ನಂತರ ಭಾರತದ ರಾಜಕೀಯ ಮತ್ತು ಸಾಮಾಜಿಕ ಸ್ತರದಲ್ಲಿ ಏರ್ಪಟ್ಟ ಪಲ್ಲಟಗಳ ಪರಿಣಾಮವಾಗಿ ಇಡೀ ಚುನಾವಣಾ ಪ್ರಕ್ರಿಯೆಯೇ ವಿಭಿನ್ನ ಮಾರ್ಗ ಹಿಡಿದಿರುವುದು ಸ್ಪಷ್ಟ. ೧೯೭೫ರ ತುರ್ತು ಪರಿಸ್ಥಿತಿ ಮತ್ತು ತದನಂತರದಲ್ಲಿ ಆಳ್ವಿಕರು ಕೈಗೊಳ್ಳುವ ತೀರ್ಮಾನ, ಮಾರ್ಗ, ನೀತಿಗಳಲ್ಲಿ ಪ್ರಜೆಗಳ ದನಿ ನಗಣ್ಯವಾಗತೊಡಗಿತು. ಸಂಪೂರ್ಣ ಕ್ರಾಂತಿಯ ಚಳುವಳಿ ಕ್ರಾಂತಿಕಾರಿ, ಪ್ರಗತಿಪರ ನಾಯಕರನ್ನು ಸೃಷ್ಟಿಸುವ ಬದಲು ಪ್ರತಿಕ್ರಾಂತಿ ಸೃಷ್ಟಿಸುವ, ಅವಕಾಶವಾದಿ, ಪ್ರತಿಗಾಮಿ, ಸ್ವಾರ್ಥಪರ ನಾಯಕರನ್ನು ಸೃಷ್ಟಿಸಿತು. ಇದೇ ಹಂತದಲ್ಲೇ ಚಾಲ್ತಿಗೆ ಬಂದ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಪ್ರಜೆಗಳ ಕೈಗೇ ಅಧಿಕಾರ ಎಂಬ ಸೂತ್ರದಡಿ ಸಾಮಾನ್ಯ ಪ್ರಜೆಗಳ ಕೈಯ್ಯಿಂದ ಅಧಿಕಾರವನ್ನು ಕಸಿದುಕೊಳ್ಳುವ ಪ್ರಕ್ರಿಯೆಗೆ ಸಂವಿಧಾನಾತ್ಮಕ ಚಾಲನೆ ದೊರೆಯಿತು. ಪ್ರತಿಯೊಬ್ಬ ಪ್ರಜೆಗೂ ತನ್ನ ಪ್ರತಿನಿಧಿಯನ್ನು ಚುನಾಯಿಸುವ ಹಕ್ಕು ಇರುವುದೇ ಹೊರತು, ಚುನಾಯಿತರನ್ನು ಪ್ರಶ್ನಿಸುವ ಅಥವಾ ಹಿಂದಕ್ಕೆ ಕರೆಯುವ ಹಕ್ಕು ದೊರೆತಿಲ್ಲ. ಇದು ಪ್ರಜಾತಂತ್ರದ ವಿಡಂಬನೆಯಾದರೂ ಸತ್ಯ.

ಚುನಾವಣಾ ಪ್ರಣಾಳಿಕೆಗಳ ಮಹತ್ವವನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ಕೆಲವು ನಾಯಕರುಗಳು, ತಮ್ಮ ಪಕ್ಷ ಸಮಸ್ತ ಭಾರತದ ಜನತೆಯನ್ನು ಪ್ರತಿನಿಧಿಸುತ್ತದೆ ಎಂಬ ಅಹಮಿಕೆಯಿಂದ ತಮ್ಮ ಧ್ಯೇಯೋದ್ದೇಶಗಳಿಗನುಗುಣವಾಗಿ ಸಿದ್ಧಪಡಿಸುವ ಚುನಾವಣಾ ಪ್ರಣಾಳಿಕೆಗಳಿಗೆ ಜನ ಮನ್ನಣೆ ಇರುತ್ತದೆಯೇ ಎಂಬ ಮೂರ್ತ ಪ್ರಶ್ನೆಗೆ ಚುನಾವಣಾ ಫಲಿತಾಂಶ ಉತ್ತರ ನೀಡುತ್ತದೆ. ಹಾಗಾಗಿಯೇ ಪ್ರಣಾಳಿಕೆಗಳು ಕೇವಲ ಪಕ್ಷಗಳ ಚಿಂತನೆಗಳನ್ನು, ಸ್ವಾರ್ಥಪರ ಉದ್ದೇಶಗಳನ್ನು ಮಾತ್ರ ಬಿಂಬಿಸದೆ, ಜನರ ಆಶೋತ್ತರಗಳನ್ನೂ ಬಿಂಬಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಕಳೆದ ಹಲವು ಚುನಾವಣೆಗಳ ಪ್ರಣಾಳಿಕೆಗಳನ್ನು ಪರಾಮರ್ಶಿಸಿದಾಗ ಬಹುತೇಕವಾಗಿ ಪಕ್ಷಗಳು ಜನರ ಆಶೋತ್ತರಗಳನ್ನು ಕಡೆಗಣಿಸಿರುವುದು ಗೋಚರಿಸುತ್ತದೆ. ಇಲ್ಲಿ ಭಾವನಾತ್ಮಕ ಅಂಶಗಳು ಮಾತ್ರ ಪ್ರಧಾನ ಭೂಮಿಕೆ ವಹಿಸಿದ್ದವು. ಈ ಎಲ್ಲಾ ಚುನಾವಣೆಗಳಲ್ಲೂ ನಿರ್ಲಕ್ಷಿಸಲ್ಪಟ್ಟ ಏಕೈಕ ಅಂಶವೆಂದರೆ ದೇಶದ ಜನಸಾಮಾನ್ಯರ ದುಸ್ತರ ಜೀವನ.

ಕಾಕತಾಳೀಯವಾಗಿ ೧೯೮೦ರಿಂದಲೇ ಪ್ರಾರಂಭವಾದ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಜಾಗತೀಕರಣ ಪ್ರಕ್ರಿಯೆ ೧೯೯೧ರಲ್ಲಿ ಪೂರ್ಣ ಪ್ರಮಾಣದಲ್ಲಿ ಅನಾವರಣಗೊಂಡ ನಂತರ ಎಲ್ಲ ಆಳುವ ವರ್ಗಗಳೂ ಒಂದೇ ಸ್ವರದಲ್ಲಿ ಹಾಡತೊಡಗಿದವು. ಕಳೆದ ಎರಡು ದಶಕಗಳ ರಾಜಕಾರಣದಲ್ಲಿ ಯಾವುದೇ ಚುನಾವಣೆಯಲ್ಲೂ ಜನರ ದೈನಂದಿನ ಸಮಸ್ಯೆಗಳು ಪ್ರಧಾನ ವಿಷಯವಾಗಲೇ ಇಲ್ಲ. ೧೯೯೮ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭಾಜಪ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ, ೨೦೦೪ರ ವೇಳೆಗೆ ಜಾಗತೀಕರಣ ಪ್ರಕ್ರಿಯೆಯನ್ನು ತೀಕ್ಷ್ಣವಾಗಿಸಿದ್ದೇ ಅಲ್ಲದೆ ದೇಶದ ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿದ್ದ ಸೌಹಾರ್ದಯುತ ವಾತಾವರಣವನ್ನೂ ಹಾಳುಗೆಡವಿತ್ತು. ಭಾರತ ಪ್ರಕಾಶಿಸುತ್ತಿದ್ದ ಸಂದರ್ಭದಲ್ಲೇ ಆಮ್ ಆದ್ಮಿ (ಸಾಮಾನ್ಯ ಪ್ರಜೆ)ಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದ ಜನತೆಗೆ ಅಂತಿಮವಾಗಿ ನಿರಾಸೆಯೇ ಆಗಿದೆ. ಭಾರತದ ಆಮ್ ಆದ್ಮಿ ತನ್ನ ಬಾಳಿನ ಹೆಜ್ಜೆ ಗುರುತುಗಳನ್ನು ಗಮನಿಸದಿರುವಷ್ಟು ಕೃಷನಾಗುತ್ತಿದ್ದಾನೆಂಬ ಕಟು ಸತ್ಯ ಆಳ್ವಿಕರಿಗೆ ಗ್ರಹಿಸಲಾಗಿಲ್ಲ.

ಸಮಸ್ಯೆಗಳ ಸಪ್ತಪದಿ

ಕಳೆದ ಎಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿಯ ಚುನಾವಣೆಗಳು ಜನಸಾಮಾನ್ಯರ ದೃಷ್ಟಿಯಿಂದ ಮಹತ್ವದ್ದಾಗಿದೆ. ಭಾರತೀಯ ಜನತೆಯ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳೇ ಇಲ್ಲ. ಸಮಸ್ಯೆ ಸ್ವಾಭಾವಿಕ, ಹಾಗಾಗಿ ಕೊಂಚ ಕಾಲ ಸಹಿಸಿಕೊಂಡಿರಿ ಎಂಬ ಉಪದೇಶ ಆಳ್ವಿಕರ ವೇದಮಂತ್ರ. ವಿಧಿ, ಹಣೆಬರಹ, ಕರ್ಮ ಸಿದ್ಧಾಂತಗಳನ್ನು ಇನ್ನೂ ತ್ಯಜಿಸದ ಸಮಾಜದಲ್ಲಿ ಬಡತನದ ಬೇಗೆ ದೈವೀಕವಾದರೆ, ಶ್ರೀಮಂತಿಕೆ ಮಹತ್ಸಾಧನೆಯಾಗುತ್ತದೆ. ಇಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ.

ಮೊದಲನೆಯದಾಗಿ, ಕಳೆದ ಮೂರು ದಶಕಗಳಿಂದಲೂ ಭಾರತೀಯ ಯುವಜನತೆಯನ್ನು ನಿರಂತರವಾಗಿ ಕಾಡುತ್ತಿರುವ ನಿರುದ್ಯೋಗ ಸಮಸ್ಯೆ ಇವುಗಳಲ್ಲೊಂದು. ಖಾಸಗೀಕರಣ ಪ್ರಕ್ರಿಯೆ ತೀಕ್ಷ್ಣಗೊಳ್ಳುತ್ತಿರುವಂತೆಯೇ ನಿರುದ್ಯೋಗಿಗಳ ಪ್ರಮಾಣವೂ ಹೆಚ್ಚುತ್ತಿದ್ದು ದೇಶದ ಯುವಜನತೆ ಪಾತಕ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ. ಎರಡನೆಯದಾಗಿ ಕೃಷಿ ಕ್ಷೇತ್ರದಲ್ಲಿ ಆಮ್ ಆದ್ಮಿಯ ಯುಪಿಎ ಸರ್ಕಾರ ಐದು ವರ್ಷಗಳಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಯಾವುವೂ ರೈತರ ಆತ್ಮಹತ್ಯೆಯನ್ನು ತಡೆಗಟ್ಟಲಾಗಿಲ್ಲ. ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿಲ್ಲ ಎಂದ ಮಾತ್ರಕ್ಕೆ ಘಟನೆಗಳನ್ನು ನಿರಾಕರಿಸಲಾಗುವುದಿಲ್ಲ. ಮೂರನೆಯದಾಗಿ, ಬೆಲೆ ಏರಿಕೆ ದೇಶದ ಸಮಸ್ತ ಜನತೆಯನ್ನೂ ಬಾಧಿಸುತ್ತಿರುವ ಗಂಭೀರ ಸಮಸ್ಯೆ ನಾಲ್ಕನೆಯದಾಗಿ, ಭಾರತೀಯ ಪ್ರಭುತ್ವ ಮಕ್ಕಳ ಶಿಕ್ಷಣವನ್ನು ಶಾಸನಬದ್ಧ ಕರ್ತವ್ಯವೆಂದು ಪರಿಗಣಿಸಿಯೇ ಇಲ್ಲ. ಸಾಂವಿಧಾನಿಕವಾಗಿ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದೂ ಪರಿಗಣಿಸಿಲ್ಲ. ಹಾಗಾಗಿ ಸಾರ್ವತ್ರಿಕ ಶಿಕ್ಷಣ ಸಾಮಾನ್ಯ ಜನತೆಯ ಪಾಲಿಗೆ ಮರೀಚಿಕೆಯಾಗಿಯೇ ಉಳಿದಿದೆ. ೨೦೦೩ರಲ್ಲಿ ಶೇ ೮೬ರಷ್ಟಿದ್ದ ಸರ್ಕಾರಿ ಶಾಲೆಗಳ ಪ್ರಮಾಣ ೨೦೦೭ರಲ್ಲಿ ಶೇ ೮೧.೨ಕ್ಕೆ ಇಳಿದಿದೆ. ಶೇ ೮-೯ ರಷ್ಟು ಜಿಡಿಪಿ ವೃದ್ಧಿಯನ್ನು ಕಾಣುತ್ತಿರುವ ಭಾರತದಲ್ಲಿ ಶೇ ೫೬ರಷ್ಟು ಮಹಿಳೆಯರು, ಶೇ ೨೪ರಷ್ಟು ಪುರುಷರು ಮತ್ತು ಶೇ ೭೦ರಷ್ಟು ಐದು ವರ್ಷದ ಕೆಳಗಿನ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಶಿಶು ಮರಣ ಪ್ರಮಾಣ, ಅಂದರೆ ಒಂದು ವರ್ಷಕ್ಕಿಂತಲೂ ಮುನ್ನ ಅಸುನೀಗುವ ಮಕ್ಕಳ ಪ್ರಮಾಣ ಶೇ ೫೭ರಷ್ಟಿದೆ.

ಐದನೆಯದಾಗಿ, ನವ ಉದಾರವಾದಿ ನೀತಿಗಳಿಗೆ ಪೂರಕವಾಗಿ ಮೂಲಭೂತವಾದ, ಫ್ಯಾಸಿಸಂ ಮತ್ತು ಭಯೋತ್ಪಾದನೆ ಬೆಳೆಯುತ್ತಿರುವುದು ದೇಶದ ಸಾಮಾಜಿಕ ಸೌಹಾರ್ದತೆಗೆ ಮಾರಕವಾಗಿದೆ.. ಮಲೆಗಾಂವ್ ಪ್ರಕರಣದಲ್ಲಿ ಹಿಂದುತ್ವ ಪ್ರತಿಪಾದಕರ ಕೈವಾಡವಿರುವ ಆರೋಪಗಳ ಹಿನ್ನೆಲೆಯಲ್ಲಿ ಭಯೋತ್ಪಾದನೆ ಹೊಸ ಆಯಾಮವನ್ನು ಪಡೆದುಕೊಂಡಿದೆ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಯುಪಿಎ ಸರ್ಕಾರ ಕರಾಳಶಾಸನಗಳ ಮೊರೆ ಹೋಗಿರುವುದರಿಂದ ಪ್ರಭುತ್ವ ಇನ್ನೂ ಹೆಚ್ಚು ದಮನಕಾರಿಯಾಗಿದೆ. ಆರನೆಯದಾಗಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ದಲಿತ-ಆದಿವಾಸಿ-ಒಬಿಸಿಗಳ ಬಗ್ಗೆ ತೀವ್ರವಾದ ಕಾಳಜಿ ವ್ಯಕ್ತಪಡಿಸಿದ್ದರೂ ವಿಶೇಷ ಆರ್ಥಿಕ ವಲಯ ಮತ್ತು ಚತುಷ್ಪತ ರಸ್ತೆಗಳ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವ ಸರ್ಕಾರಗಳು ದಲಿತರನ್ನು ಮತ್ತು ಆದಿವಾಸಿಗಳನ್ನು ತಮ್ಮ ನೆಲದಿಂದ ಉಚ್ಚಾಟಿಸುತ್ತಿವೆ. ಮತ್ತೊಂದೆಡೆ ಜಾತಿ ದೌರ್ಜನ್ಯಗಳು ತೀವ್ರಗೊಳ್ಳುತ್ತಿದ್ದು ಖೈರಲಾಂಜಿಯಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜಾಗತೀಕರಣ ಪ್ರಕ್ರಿಯೆಯಿಂದ ಹೆಚ್ಚು ಬಾಧಿತರಾಗಿರುವ ಮಹಿಳೆಯರ ಸಮಸ್ಯೆಗಳಿಗೆ ಯಾವುದೇ ಸರ್ಕಾರಗಳೂ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ಸ್ಪಷ್ಟವಾಗಿದೆ. ಮಹಿಳಾ ಮೀಸಲಾತಿ ಮಸೂದೆ ಇಂದಿಗೂ ಮರೀಚಿಕೆಯಾಗೇ ಉಳಿದಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಾಚಾರ ,ಹೆಣ್ಣು ಭ್ರೂಣ ಹತ್ಯೆ ಸಾಮಾನ್ಯ ಸಂಗತಿಯಾಗಿದ್ದು ಪುರುಷ-ಮಹಿಳೆಯ ಅನುಪಾತದಲ್ಲಿ ತೀವ್ರತೆರನಾದ ವ್ಯತ್ಯಯಗಳು ಕಂಡುಬರುತ್ತಿವೆ.

ಕಡೆಯದಾಗಿ, ಅಲಿಪ್ತ ಚಳುವಳಿಗೆ ಒಂದು ಹೊಸ ಆಯಾಮವನ್ನು ನೀಡಿ, ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ಪ್ರಬಲ ದನಿಯಾಗಿದ್ದ ಭಾರತ ಇಂದು ಸಾಮ್ರಾಜ್ಯಶಾಹಿಗಳ ಅಡಿಯಾಳಾಗಿದೆ. ಭಯೋತ್ಪಾದನೆಯ ವಿರುದ್ಧ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಸಾರಿರುವ ಸಮರದಲ್ಲಿ ಭಾರತವೂ ಭಾಗಿಯಾಗುತ್ತಿರುವುದು , ದೇಶದ ತಟಸ್ಥ ವಿದೇಶಾಂಗ ನೀತಿಗೆ ಮಾರಕವಾಗಿ ಪರಿಣಮಿಸಿದೆ. ಭಾರತ ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದ ನಂತರದಲ್ಲಿ ಅಮೆರಿಕದ ಕೈಗೊಂಬೆಯಾಗಿರುವ ಭಾರತ ಸರ್ಕಾರ, ಅಮೆರಿಕದ ಯುದ್ಧ ಪರಂಪರೆಗೆ ಶರಣಾಗುತ್ತಿದೆ.

ಪ್ರಣಾಳಿಕೆಗಳಲ್ಲೇನಿದೆ ?

ಮೇಲೆ ಹೇಳಿದ ಸಮಸ್ಯೆಗಳು ಇಡೀ ಭಾರತೀಯರನ್ನು ಕಾಡುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ಲಕ್ಷಾಂತರ ರೂಗಳ ವೇತನ ಗಳಿಸುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರುಗಳು ನಿರುದ್ಯೋಗಿಗಳಾಗುವ ಸನ್ನಿವೇಶ ಎದುರಾಗಿದೆ. ಗ್ರಾಮೀಣ ಪ್ರದೇಶಗಳಿಂದ ನಗರ-ಪಟ್ಟಣಗಳಿಗೆ ವಲಸೆ ಹೋಗುವವರ ಸಂಖ್ಯೆ ಏರುತ್ತಲೇ ಇದೆ. ಐಷಾರಾಮಿ ಜೀವನ ಶೈಲಿಗೆ ಅನುಕೂಲವಾಗುವ ನವ ಉದಾರವಾದಿ ನೀತಿಗಳು ಬಡ ಜನತೆಯನ್ನು ದಾರಿದ್ರ್ಯತೆಯ ಕೂಪಕ್ಕೆ ತಳ್ಳುತ್ತಿವೆ. ನಿರುದ್ಯೋಗಿ ಯುವಕರು ಮಾಫಿಯಾಗಳಿಗೆ, ಮೂಲಭೂತವಾದಿಗಳಿಗೆ, ಫ್ಯಾಸಿಸ್ಟ್ ಶಕ್ತಿಗಳಿಗೆ ಬಲಿಯಾಗಿ ಹರಕೆಯ ಕುರಿಗಳಾಗುತ್ತಿದ್ದಾರೆ. ದೇಶದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ಏರುತ್ತಿರುವಂತೆಯೇ ದಾರಿದ್ರ್ಯತೆಯ ಪ್ರಮಾಣವೂ ಏರುತ್ತಿದೆ. ಸ್ವಿಸ್ ಬ್ಯಾಂಕಿನಲ್ಲಿ ಹೂಡಲಾಗಿರುವ ೧೪೫೬ ಬಿಲಿಯನ್ ಡಾಲರ್ ಕಪ್ಪುಹಣ (೭೦ ಲಕ್ಷ ಕೋಟಿ ರೂಗಳು) ಯಾವುದೇ ಪ್ರಜ್ಞಾವಂತನನ್ನೂ ತಲೆತಗ್ಗಿಸುವಂತೆ ಮಾಡುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಮಹಾಚುನಾವಣೆಗಳನ್ನು ಎದುರಿಸುತ್ತಿರುವ ಭಾರತೀಯ ಜನತೆಯ ಮುಂದೆ ರಾಜಕೀಯ ಪಕ್ಷಗಳು ಮಂಡಿಸುತ್ತಿರುವ ಪ್ರಣಾಳಿಕೆಗಳೇನು? , ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ಗೋಧಿ, ೧ ರೂ ಕೆಜಿಗೆ ಅಕ್ಕಿ, ೨ ರೂ ಕೆಜಿಗೆ ಗೋಧಿ, ಎಲ್ಲರಿಗೂ ಉಚಿತ ಟಿವಿ, ಉಚಿತ ಮೊಬೈಲ್, ಅಂತರ್ಜಾಲ ಸಂಪರ್ಕ, ಪ್ರತಿ ಮನೆಗೂ ಟೆಲಿಫೋನ್ ಇತ್ಯಾದಿ. ಭಾರತದ ದುಡಿಯುವ ಜನತೆ ತಮ್ಮ ಪ್ರತಿನಿಧಿಗಳಿಂದ ಭಿಕ್ಷೆ ಕೇಳುತ್ತಿಲ್ಲ ಎಂಬ ಅಂಶವನ್ನು ರಾಜಕೀಯ ಪಕ್ಷಗಳು ಗ್ರಹಿಸುವ ಕಾಲ ಬಂದಿದೆ. ದೇಶದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ತಮ್ಮ ಕೋಟ್ಯಾಂತರ ರೂ ಆಸ್ತಿಗಳನ್ನು ಬಹಿರಂಗ ಪಡಿಸುವ ರಾಜಕಾರಣಿಗಳ ಪ್ರಹಸನ ನಾಚಿಕೆಗೇಡಿನ ಸಂಗತಿ. ಇದನ್ನು ಜನತೆಯೂ ಮಹಾ ಪ್ರಜಾಸತ್ತಾತ್ಮಕ ಲಕ್ಷಣವೆಂದು ಸ್ವೀಕರಿಸುತ್ತಿದೆ. ಚುನಾವಣೆಯಲ್ಲಿ ನೀರಿನಂತೆ ಹರಿಸಲಾಗುವ ಕೋಟ್ಯಾಂತರ ರೂಗಳು ಮತದಾರರನ್ನು ತಾತ್ಕಾಲಿಕವಾಗಿ ಕೊಳ್ಳಬಹುದು, ಆದರೆ ಇಡೀ ದೇಶದ ನಾಗರಿಕ ಪ್ರಜ್ಞೆಯನ್ನು ಕೊಳ್ಳಲಾಗುವುದಿಲ್ಲ.

ಈ ಮೊದಲೇ ಹೇಳಿದಂತೆ ಚುನಾವಣಾ ಪ್ರಣಾಳಿಕೆಗಳು ದೇಶದ ಭವಿಷ್ಯದ ಅಭಿವೃದ್ಧಿಗೆ ಪೂರಕವಾಗಿರುವುದು ಅತ್ಯವಶ್ಯ. ಆದರೆ ಪ್ರಸ್ತುತ ಚುನಾವಣೆಗಳಲ್ಲಿ ಯಾವುದೇ ಗಂಭೀರ ಸಮಸ್ಯೆಗಳೂ ಬಿಂಬಿತವಾಗುತ್ತಿಲ್ಲ. ತಲೆ, ಕೈಕಾಲು ಕಡಿಯುವುದರಲ್ಲಿ ಪೈಪೋಟಿ ನಡೆಸುತ್ತಿರುವ ಆಯುಧ ಧಾರಿ ರಾಜಕಾರಣಿಗಳು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದಾರೆಯೇ ಹೊರತು, ಜನಸಾಮಾನ್ಯರ ಜ್ವಲಂತ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಜಾಗತೀಕರಣದ ಮುಕ್ತ ಮಾರುಕಟ್ಟೆಯ ಸರಕುಗಳಾಗಿರುವ ಚುನಾಯಿತ ಪ್ರತಿನಿಧಿಗಳಲ್ಲಿ ಸಂವಿಧಾನ ನಿಷ್ಠೆಯೂ ಕ್ಷೀಣಿಸುತ್ತಿದೆ. ಇಂದು ಭಾರತ ಜಾಗತಿಕ ಮಟ್ಟದಲ್ಲಿ ಅಗ್ರ ಶ್ರೇಣಿಯಲ್ಲಿ ನಿಲ್ಲುವುದೇ ಆದರೆ ಅದಕ್ಕೆ ಕಾರಣ ಶ್ರಮಿಕ ವರ್ಗಗಳು. ವಿಪರ್ಯಾಸವೆಂದರೆ ಪ್ರಸಕ್ತ ಚುನಾವಣೆಗಳಲ್ಲಿ ಈ ಶ್ರಮಿಕವರ್ಗಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾಗಳು, ಭೂಗತ ದೊರೆಗಳು, ಮದ್ಯದ ದೊರೆಗಳು ಮತ್ತು ದಲ್ಲಾಳಿ ಕಾರ್ಪೋರೇಟ್ ಶಕ್ತಿಗಳು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಕಳಿಂಗನಗರ, ನಂದಿಗ್ರಾಮ, ಸಿಂಗೂರು, ಕಂಧಮಾಲ್, ಖೈರಲಂಜಿ, ಕಂಬಾಲಪಲ್ಲಿ, ಮಂಗಳೂರು, ಮುಂಬೈ, ಗೋದ್ರ, ಗುಜರಾತ್, ಇವೆಲ್ಲವೂ ೬೦ ವರ್ಷಗಳ ಪ್ರಬುದ್ಧ ಸ್ವತಂತ್ರ ಭಾರತಕ್ಕೆ ಕಳಂಕ ಹಚ್ಚುವ ಸಂಗತಿಗಳು. ಈ ಎಲ್ಲ ಪ್ರಕರಣಗಳ ಹಿಂದೆ ನವ ಉದಾರವಾದಿ ನೀತಿಗಳ ಕಾಣದ ಕೈಗಳು ಕೆಲಸ ಮಾಡುತ್ತವೆ. ಈ ಕಾಣದ ಕೈಗಳಿಗೆ ಇನ್ನೂ ಹೆಚ್ಚು ಸಾಮರ್ಥ್ಯ ತುಂಬುವ ಕೆಲಸವನ್ನು ದೇಶದ ಪ್ರಮುಖ ರಾಜಕೀಯ ಪಕ್ಷಗಳು ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಗಳ ಮೂಲಕ ಸಾಮಾನ್ಯ ಜನತೆಯನ್ನು ಆಂಗಲಾಚುವ ಭಿಕಾರಿಗಳಂತೆ ಪರಿಗಣಿಸುವ ರಾಜಕೀಯ ಪಕ್ಷಗಳಿಗೆ ಜನರ ಸಂವೇದನೆಗಳನ್ನು ಸರಿಯಾಗಿ ಗ್ರಹಿಸುವ ಕಾಲ ಸನ್ನಿಹಿತವಾಗಿದೆ. ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳೇ ಭಾರತದ ನೂರು ಕೋಟಿ ಜನತೆಗೆ ಅಪಾಯಕಾರಿಯಾಗಿದ್ದಾರೆ. ಯಾವ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎನ್ನುವುದಕ್ಕಿಂತಲೂ ಮುಂಬರುವ ಸರ್ಕಾರದ ನೀತಿಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂಬ ಪ್ರಶ್ನೆ ಇಂದು ಜನತೆಯನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ತೀವ್ರ ನಿರಾಸೆ ಮೂಡಿಸುತ್ತವೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆ ಜನತೆಯ ಬತ್ತಳಿಕೆಯಲ್ಲಿರುವ ಒಂದು ಮಹಾನ್ ಅಸ್ತ್ರ. ಸದಾಕಾಲವೂ ಹಣದ ಪ್ರಭಾವದಿಂದ ಈ ಅಸ್ತ್ರಗಳನ್ನು ನಿಷ್ಕ್ರಿಯಗೊಳಿಸಲಾಗುವುದಿಲ್ಲ. ದುಡಿಯುವ ಜನತೆಯ, ದಮನಿತ ಜನಸಮುದಾಯಗಳ, ಶೋಷಿತ ವರ್ಗಗಳ ಆಕ್ರೋಶದ ಕಿಡಿಗಳು ಸುಪ್ತವಾಗಿದ್ದರೂ, ಸಹನೆಯ ಮಿತಿ ಮೀರಿದಾಗ ಸ್ಫೋಟಗೊಳ್ಳುತ್ತವೆ. ಈ ಗಂಭೀರ ಸತ್ಯವನ್ನು ಆಳುವ ಪಕ್ಷಗಳು, ರಾಜಕಾರಣಿಗಳು ಗ್ರಹಿಸಿದಲ್ಲಿ ಪ್ರಜಾತಂತ್ರ ಗಟ್ಟಿಯಾಗುತ್ತದೆ. ಪ್ರಸಕ್ತ ಚುನಾವಣೆಗಳು ಈ ದಿಕ್ಕಿನಲ್ಲಿ ಬದಲಾವಣೆಯನ್ನು ತರುವುದೆಂದು ಆಶಿಸೋಣ.

ನಾ ದಿವಾಕರ