You are hereForums / ಸಾಮಾಜಿಕ ವಿಚಾರಗಳು / ವರುಣನ ಆರ್ಭಟ-ಇತಿಹಾಸದ ಪುನರಾವರ್ತನೆ

ವರುಣನ ಆರ್ಭಟ-ಇತಿಹಾಸದ ಪುನರಾವರ್ತನೆ


By DIVAKAR N - Posted on 01 April 2009

ವರುಣನ ಆರ್ಭಟ-ಇತಿಹಾಸದ ಪುನರಾವರ್ತನೆ

ಉತ್ತರ ಪ್ರದೇಶದ ಪಿಲಿಬಿಟ್ ಕ್ಷೇತ್ರದ ಭಾಜಪ ಅಭ್ಯರ್ಥಿ ಮತ್ತು ಮೇನಕಗಾಂಧಿಯವರ ಸುಪುತ್ರ ವರುಣ್ ಗಾಂಧಿ ತಮ್ಮ ಚುನಾವಣಾ ಪ್ರಚಾರದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಆಡಿದ ಆಕ್ರಮಣಕಾರಿ ದ್ವೇಷಪೂರಿತ ಮಾತುಗಳಿಗಾಗಿ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಪಸಂಖ್ಯಾತರನ್ನು ತುಚ್ಚವಾಗಿ ಹೀಯಾಳಿಸಿದ್ದೇ ಅಲ್ಲದೆ, ಗಡ್ಡಧಾರಿಗಳಾದ ಎಲ್ಲ ಮುಸ್ಲಿಮರನ್ನೂ ಒಸಾಮ ಬಿನ್ ಲಾಡೆನ್‌ಗೆ ಹೋಲಿಸಿರುವ ವರುಣ್ ಗಾಂಧಿ, ತಮಗೆ ಅವಕಾಶ ಸಿಕ್ಕರೆ ಮುಸ್ಲಿಮರ ತಲೆ ಕಡಿಯುವುದಾಗಿ, ಕೈಕಾಲು ಕತ್ತರಿಸುವುದಾಗಿ ಹೇಳಿರುವುದು ದೇಶಾದ್ಯಂತ ಖಂಡನೆಗೊಳಗಾಗಿದೆ. ಪ್ರಾರಂಭದಲ್ಲಿ ವರುಣ್ ಗಾಂಧಿಯವರ ಈ ಹೇಳಿಕೆಗೂ ತಮಗೂ ಸಂಬಂಧವಿಲ್ಲ ಎಂದು ಜಾರಿಕೊಳ್ಳಲೆತ್ನಿಸಿದ ಭಾಜಪ ನಾಯಕರು, ಕ್ರಮೇಣವಾಗಿ ವರುಣನನ್ನು ಸಮರ್ಥಿಸಿಕೊಳ್ಳುತ್ತಿರುವುದು ಭಾಜಪದ ಕೋಮುವಾದಿ ರಾಜಕಾರಣಕ್ಕೆ ಕನ್ನಡಿ ಹಿಡಿದಂತಿದೆ. ಅಲ್ಪಸಂಖ್ಯಾತರನ್ನು ದೂಷಿಸುವುದು ಭಾಜಪದ ಪ್ರಮುಖ ಪ್ರಣಾಳಿಕೆಗಳಲ್ಲೊಂದು ಅಂಶ. ಅಲ್ಪಸಂಖ್ಯಾತ ವಿರೋಧಿ ನೆಲೆಗಟ್ಟಿನ ಮೇಲೆ ಸಂಘಪರಿವಾರ ತನ್ನ ಸಾಂಘಿಕ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿರುವುದು ಗುಟ್ಟಿನ ವಿಷಯವೇನಲ್ಲ. ಹಾಗಾಗಿ ವರುಣ್ ಗಾಂಧಿಯವರ ಆಕ್ರೋಶದ ಮಾತುಗಳ ಹಿಂದೆ ಒಂದು ಸಂಸ್ಕೃತಿ ಅಡಗಿರುವುದು ಸ್ಪಷ್ಟ. ವರುಣನ ತಂದೆ ಸಂಜಯ್ ಗಾಂಧಿಯವರು ಕಾಂಗ್ರೆಸ್‌ನಲ್ಲಿದ್ದರೂ, ಅವರ ಅಲ್ಪಸಂಖ್ಯಾತ ವಿರೋಧಿ ನಿಲುವುಗಳು ೭೦ರ ದಶಕದಲ್ಲೇ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಯೋಧ್ಯಾ ಕಾಂಡದಿಂದ ಕಂಧಮಾಲಿನವರೆಗೆ ನಡೆದು ಬಂದಿರುವ ಕೋಮುವಾದಿ ಫ್ಯಾಸಿಸ್ಟ್ ಸಂಘಟನೆಗಳ ಇತಿಹಾಸದಲ್ಲಿ ಈ ರೀತಿಯ ದ್ವೇಷಭರಿತ ಮಾತುಗಳು ಹಲವಾರು ಸಂದರ್ಭಗಳಲ್ಲಿ ವ್ಯಕ್ತವಾಗಿವೆ. ೧೯೮೦ರ ನಂತರದ ಭಾರತದ ರಾಜಕಾರಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಪ್ರಮುಖ ಮಹತ್ವ ಒದಗಿ ಬಂದದ್ದು ಕಾಕತಾಳೀಯವಾಗಲೀ, ಆಕಸ್ಮಿಕವಾಗಲೀ ಅಲ್ಲ. ದೇಶದ ವಿಭಜನೆಯ ನಂತರದಲ್ಲಿಯೇ ಜನರ ಮನಗಳಲ್ಲಿ ನೆಲೆಮಾಡಿದ್ದ ಮತೀಯ ಭಾವನೆಗಳು ನಂತರದ ಮೂರು ದಶಕಗಳ ಅಭಿವೃದ್ಧಿ ಕೇಂದ್ರಿತ ರಾಜಕಾರಣದಲ್ಲಿ ನಗಣ್ಯವಾಗಿತ್ತು. ಆದಾಗ್ಯೂ ಭಾರತೀಯ ಸಮಾಜ ಕೋಮು ಸಂಘರ್ಷಗಳಿಂದ ಮುಕ್ತವಾಗಿತ್ತೆಂದು ಹೇಳಲಾಗುವುದಿಲ್ಲ. ಮೀರಟ್, ಅಹಮದಾಬಾದ್, ಮುಂಬೈ, ಹೈದರಾಬಾದ್, ಕರ್ನಾಟಕದ ರಾಮನಗರ, ಕೋಲಾರ, ಶಿಡ್ಲಘಟ್ಟ ಇವೆಲ್ಲವೂ ಕೋಮು ಸಂಘರ್ಷಗಳ ಕೇಂದ್ರ ಬಿಂದುಗಳಾಗಿದ್ದವು. ಆದರೆ ಈ ಮತೀಯ ಗಲಭೆಗಳಲ್ಲಿ ಧಾರ್ಮಿಕ ಕಾರಣಗಳಿಗಿಂತಲೂ ಹೆಚ್ಚಾಗಿ ಆರ್ಥಿಕ ಕಾರಣಗಳು ಪ್ರಮುಖ ಪಾತ್ರ ವಹಿಸಿದ್ದವು. ಉತ್ಪಾದಕೀಯ ಶಕ್ತಿಗಳು ಮತ್ತು ಉತ್ಪಾದನಾ ಸಾಧನಗಳು ಒಂದೆಡೆಯಾದರೆ, ಮಾರುಕಟ್ಟೆ ಶಕ್ತಿಗಳು ಮತ್ತು ದಲ್ಲಾಳಿಗಳು ಮತ್ತೊಂದೆಡೆ ಸಂಘರ್ಷಕ್ಕಿಳಿಯುತ್ತಿದ್ದರು. ಈ ಎಲ್ಲಾ ನಗರಗಳ ವೈಶಿಷ್ಟ್ಯವೆಂದರೆ ಈ ಎರಡೂ ವರ್ಗಗಳು ಅನ್ಯ ಧರ್ಮೀಯರಾಗಿರುತ್ತಿದ್ದರು. ಹಾಗಾಗಿ ವಾಣಿಜ್ಯ ಪ್ರೇರಿತ ಕಾರಣಗಳು ಹಲವಾರು ಸಂದರ್ಭಗಳಲ್ಲಿ ಗಲಭೆಗಳಿಗೆ ಕಾರಣವಾಗಿ ಮತೀಯ ಸ್ವರೂಪ ಪಡೆದುಕೊಳ್ಳುತ್ತಿದ್ದವು. ಉದಾಹರಣೆಗೆ ಕೋಲಾರ, ರಾಮನಗರ ಮುಂತಾದ ಪ್ರದೇಶಗಳಲ್ಲಿ ರೇಷ್ಮೆ ಬೆಳೆಯುವ ರೈತರು ಹಿಂದೂಗಳಾಗಿದ್ದರೆ, ನೂಲು ತೆಗೆಯುವವರು ಮತ್ತು ರೇಷ್ಮೆ ಮೊಟ್ಟೆ ಮಾರುವವರು ಮುಸ್ಲಿಮರಾಗಿರುತ್ತಿದ್ದರು. ಮಾರುಕಟ್ಟೆಯ ಘರ್ಷಣೆ ಸಂಭವಿಸಿದಾಗೆಲ್ಲಾ ರಾಜಕೀಯ ಶಕ್ತಿಗಳ ಕೈವಾಡದಿಂದ ಗಲಭೆಗಳು ಮತೀಯ ಸ್ವರೂಪ ಪಡೆದುಕೊಳ್ಳುತ್ತಿದ್ದವು.

೧೯೮೦ರ ದಶಕದಲ್ಲಿ ಪ್ರಾರಂಭವಾದ ಅಯೋಧ್ಯಾ ರಾಮಮಂದಿರ ಚಳುವಳಿ ಈ ಪ್ರಕ್ಷುಬ್ಧ ಸಮಾಜದಲ್ಲಿ ಮತೀಯ ಭಾವನೆಗಳನ್ನು ಬೆಳೆಸುವುದರಲ್ಲಿ ಶ್ರಮವಹಿಸಬೇಕಾಗಿರಲಿಲ್ಲ. ಸಮಾಜದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಕೃಷ್ಟ ಸ್ಥಿತಿಯಲ್ಲಿರುವ ಜನತೆಯ ದೃಷ್ಟಿಯಲ್ಲಿ, ತಮ್ಮ ಕಷ್ಟ ಕಾರ್ಪಣ್ಯಗಳಿಗೆಲ್ಲಾ ಕಾರಣವಾದ ಒಂದು ಭೂತವನ್ನು ಸೃಷ್ಟಿಸಿದಲ್ಲಿ ಅದೇ ಭೂತವನ್ನು ಪೆಡಂಭೂತವನ್ನಾಗಿ ಮಾರ್ಪಡಿಸುವುದು ಕಷ್ಟಕರವೇನಲ್ಲ. ವಸಾಹತೋತ್ತರ ಆರ್ಥಿಕ ನೀತಿಗಳ ಪರಿಣಾಮವಾಗಿ ಇಡೀ ಭಾರತೀಯ ಸಮಾಜವನ್ನು ಕಾಡುತ್ತಿದ್ದ ಅಸಮತೋಲನ ಬೆಳವಣಿಗೆ ಸಾಮಾನ್ಯ ಜನತೆಯಲ್ಲಿ ತೀವ್ರ ಆಕ್ರೋಶ, ಜಿಗುಪ್ಸೆಗಳನ್ನು ಮೂಡಿಸಿತ್ತು. ಎಪ್ಪತ್ತರ ದಶಕದಲ್ಲಿ ಕಂಡುಬಂದಿದ್ದ ಉದ್ಯೋಗ ಭದ್ರತೆ, ಸುಭದ್ರ ಜೀವನದ ಭರವಸೆಗಳು ಕ್ರಮೇಣ ಕರಗತೊಡಗಿತ್ತು. ವಿಶ್ವವಿದ್ಯಾಲಯಗಳಿಂದ, ಕಾಲೇಜುಗಳಿಂದ ಹೊರಬರುತ್ತಿದ್ದ ಯುವಕರಿಗೆ ಭವಿಷ್ಯ ಆಶಾದಾಯಕವಾಗಿ ಕಾಣುತ್ತಿರಲಿಲ್ಲ. ಜಾಗತೀಕರಣದ ಸುಳಿವು ಆಗಲೇ ಭಾರತೀಯ ಆರ್ಥಿಕತೆಯಲ್ಲಿ ಕಾಣಿಸತೊಡಗಿದ್ದು, ಪಂಜಾಬ್‌ನ ಸಿಖ್ ಭಯೋತ್ಪಾದನೆ, ಕಾಶ್ಮೀರದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ, ಇಂದಿರಾಗಾಂಧಿಯ ಬರ್ಬರ ಹತ್ಯೆ ಇವೆಲ್ಲವೂ ರಾಷ್ಟ್ರ ರಾಜಕೀಯ ರಂಗದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದ್ದವು. ಏಕಪಕ್ಷೀಯ ಸರ್ಕಾರ ಮತ್ತು ಹೆಚ್ಚು ಕೇಂದ್ರೀಕೃತ ಆಡಳಿತದ ಬಗ್ಗೆ ವಿಶ್ವಾಸ ಕುಂದತೊಡಗಿತ್ತು.

೧೯೮೪ರ ಸಿಖ್ ವಿರೋಧಿ ಗಲಭೆಗಳು ಮತೀಯ ಅಸ್ಮಿತೆಗಳಿಗೆ ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಒದಗಿಸಲು ಪೂರಕವಾಗಿದ್ದವು. ತಮ್ಮ ದೈನಂದಿನ ಸಮಸ್ಯೆಗಳ ನಿವಾರಣೆಗೆ ರಾಜಕೀಯ ಪಕ್ಷಗಳ ವಿರುದ್ಧ ಜಾತ್ಯಾತೀತ ಮನೋಭಾವದಿಂದ ಹೋರಾಟಗಳನ್ನು ನಡೆಸುತ್ತಿದ್ದ ಎಪ್ಪತ್ತರ ದಶಕದ ಮನೋಭಾವ ೮೦ರ ದಶಕದ ಉತ್ತರಾರ್ಧದಲ್ಲಿ ಕಣ್ಮರೆಯಾಗಿತ್ತು. ಖಲಿಸ್ತಾನ ಚಳುವಳಿ ಒಂದು ಪ್ರತ್ಯೇಕತಾ ಚಳುವಳಿಯ ಸ್ವರೂಪ ಪಡೆಯುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದ ತೀವ್ರವಾಗುತ್ತಿತ್ತು. ಇದೇ ಸಮಯದಲ್ಲಿ ವಿಘಟನೆಗೊಂಡ ಕಾಂಗ್ರೆಸ್ ವಿರೋಧಿ ರಾಜಕೀಯ ಪಕ್ಷಗಳು ಬಹುತೇಕವಾಗಿ ಪ್ರಾದೇಶಿಕ ಮಟ್ಟಕ್ಕೆ ಸೀಮಿತಗೊಂಡವು. ಈ ಸಂದರ್ಭದಲ್ಲಿ ಉದಯಿಸಿದ ಭಾರತೀಯ ಜನತಾ ಪಕ್ಷ (೧೯೮೨) ರಾಷ್ಟ್ರ ರಾಜಕಾರಣಕ್ಕೆ ಒಂದು ಹೊಸ ಭರವಸೆ ನೀಡುವ ಆಶ್ವಾಸನೆಯನ್ನು ಹೊತ್ತು ಬಂದಿತ್ತು. ತುರ್ತುಪರಿಸ್ಥಿತಿಯಲ್ಲಿ ಪ್ರಭುತ್ವದ ದಬ್ಬಾಳಿಕೆಯ ವಿರುದ್ಧ ಹೋರಾಡಿ, ಪ್ರಜಾತಂತ್ರದ ಉಳಿವಿಗಾಗಿ ಶ್ರಮಿಸಿದ ಅನೇಕ ನಾಯಕರನ್ನು ಹೊಂದಿದ್ದ ಭಾಜಪಕ್ಕೆ ಆ ಹೋರಾಟಗಳೇ ಪ್ರಮುಖ ಬಂಡವಾಳವಾಗಿತ್ತು. ಯಾವುದೇ ಒಂದು ನಿರ್ದಿಷ್ಟ ಪರ್ಯಾಯ ಆರ್ಥಿಕ ನೀತಿ ಇಲ್ಲದೆ ರಾಜಕೀಯ ರಂಗ ಪ್ರವೇಶಿಸಿದರೂ, ಅಮೆರಿಕ ಪರವಾದ, ಉದಾರವಾದಿ ನೀತಿಗಳಿಗೆ ಬದ್ಧವಾಗಿದ್ದ ಭಾಜಪಕ್ಕೆ ಕಾಂಗ್ರೆಸ್ ಪಕ್ಷವೂ ಅದೇ ನೀತಿಗಳನ್ನು ಅನುಸರಿಸುತ್ತಿದ್ದುದು ಕಸಿವಿಸಿ ಉಂಟುಮಾಡಿತ್ತು. ಪ್ರಭುತ್ವ ಬಂಡವಾಳವನ್ನೇ ಸಮಾಜವಾದವೆಂದು ಬೆಂಬಲಿಸುತ್ತಿದ್ದ ಕಾಂಗ್ರೆಸ್‌ಗೆ ಪರ್ಯಾಯವಾಗಿ ಭಾಜಪ ಗಾಂಧಿ ಸಮಾಜವಾದ, ಮುಕ್ತ ಮಾರುಕಟ್ಟೆ ನೀತಿಗಳ ಮೊರೆಹೋಗಬೇಕಾಯಿತು.

ಆದರೆ ೧೯೮೪ರಲ್ಲಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ಸರ್ಕಾರ ಅನುಸರಿಸಿದ ಸಾಮಾಜಿಕ ಆರ್ಥಿಕ ನೀತಿಗಳು ಇದೇ ಮಾರ್ಗವನ್ನು ಅನುಸರಿಸಿತ್ತು. ಈ ಸಂದರ್ಭದಲ್ಲಿ ಭಾಜಪ ಮತ್ತು ಸಂಘಪರಿವಾರಕ್ಕೆ ದೊರೆತ ಪ್ರಮುಖ ರಾಜಕೀಯ ಅಸ್ತ್ರ ಅಲ್ಪಸಂಖ್ಯಾತರ ತುಷ್ಟೀಕರಣ. ಈ ಘೋಷಣೆ ಚಾಲ್ತಿಗೆ ಬಂದು ಮೂರು ದಶಕಗಳು ಸಂದಿದ್ದರೂ ಇದಕ್ಕೆ ಈವರೆಗೂ ಸ್ಪಷ್ಟವಾದ ವ್ಯಾಖ್ಯಾನ ನೀಡಲು ಭಾಜಪಕ್ಕೆ ಸಾಧ್ಯವಾಗಿಲ್ಲ. ೮೦ರ ದಶಕದಲ್ಲಿ ಕಾಶ್ಮೀರ ಸಮಸ್ಯೆ, ೯೦ರಲ್ಲಿ ಬಾಬ್ರಿ ಮಸೀದಿ, ೨೦೦೦ದ ಪ್ರಾರಂಭದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಇತ್ತೀಚಿನ ದಿನಗಳಲ್ಲಿ ಜಾಗತಿಕ ಭಯೋತ್ಪಾದನೆ ಈ ವಿದ್ಯಮಾನಗಳೆಲ್ಲವೂ ತುಷ್ಟೀಕರಣದ ವ್ಯಾಖ್ಯಾನಕ್ಕೆ ಕಾಲಕಾಲಕ್ಕೆ ಒಳಗಾಗಿವೆ. ಅಫ್ಜಲ್ ಗುರು ಎಂಬ ಶಂಕಿತ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ವಿಧಿಸದಿರುವುದೂ ತುಷ್ಟೀಕರಣ ಎನ್ನಲಾಗುತ್ತದೆ. ಇದರೊಂದಿಗೆ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತರಿಗೆ ನೀಡಲಾಗುವ ಸೌಲಭ್ಯಗಳೂ ಸೇರಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ೧೯೮೬ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಕೆಲವು ವಿವಾದಸ್ಪದ ನಿಲುವುಗಳು, ಶಹಬಾನೋ ಪ್ರಕರಣ ಕೋಮುವಾದಿ ರಾಜಕಾರಣದ ಬೆಳವಣಿಗೆಗೆ ಹೊಸ ಆಯಾಮ ದೊರಕಿಸಿತ್ತು. ಮುಸ್ಲಿಮರ ತುಷ್ಟೀಕರಣದ ಆರೋಪವನ್ನೇ ತೀವ್ರಗೊಳಿಸಿ ರಾಮಮಂದಿರ ವಿವಾದವನ್ನು ಪರಾಕಾಷ್ಠೆಗೆ ಕೊಂಡೊಯ್ಯಲು ಭಾಜಪಕ್ಕೆ ೮೦ರ ರಾಜಕೀಯ ವಿದ್ಯಮಾನಗಳು ಪೂರಕವಾಗಿದ್ದು. ಈ ಸಂದರ್ಭದಲ್ಲೇ ದೇಶಾದ್ಯಂತ ಕೋಮು ಸಂಘರ್ಷಗಳಿಗೂ ಹೊಸ ಆಯಾಮ ದೊರೆತದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಆರ್ಥಿಕ ಸಂಘರ್ಷಗಳನ್ನು ಮೀರಿದ ಕೋಮು ಗಲಭೆಗಳು ಧಾರ್ಮಿಕ ಅಸ್ಮಿತೆಗಳನ್ನು ಪಡೆದುಕೊಳ್ಳಲಾರಂಭಿಸಿದವು. ಕೋಮು ಸಂಘರ್ಷದ ದಳ್ಳುರಿ ದೇಶಾದ್ಯಂತ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಸಂದರ್ಭದಲ್ಲಿ ಸೃಷ್ಟಿಯಾದ ಕೆಲವು ಘೋಷಣೆಗಳು ಸಂಘಪರಿವಾರದ ಪ್ರಣಾಳಿಕೆಗಳಾದದ್ದು ಇಲ್ಲಿ ಉಲ್ಲೇಖನೀಯ. ಅಯೋಧ್ಯಾ ಕಾಂಡದಲ್ಲಿ ಮುರಳಿಮನೋಹರ ಜೋಷಿ, ಉಮಾಭಾರತಿ, ಸಾಧ್ವಿ ರಿತಾಂಬರ, ವಿನಯ್ ಕಟಿಯಾರ್ ಮುಂತಾದವರು ಆಡಿದ್ದ ಮಾತುಗಳು ನೆನಪಿನಂಗಳದಲ್ಲಿ ಹಸಿರಾಗಿದ್ದಲ್ಲಿ ವರುಣನ ಆರ್ಭಟ ಅತಿಶಯವೂ ಎನಿಸುವುದಿಲ್ಲ.

೧೯೯೮ರಲ್ಲಿ ಅಧಿಕಾರಕ್ಕೆ ಬಂದ ನಂತರ ಸಮ್ಮಿಶ್ರ ಸರ್ಕಾರದ ನಿಯಮಗಳಿಗೆ ಕಟ್ಟುಬಿದ್ದು ತನ್ನ ಪ್ರಮುಖ ಧ್ಯೇಯಗಳನ್ನು ಬದಿಗಿರಿಸಿದ್ದ ಭಾಜಪಕ್ಕೆ ನವ ಉದಾರವಾದಿ ನೀತಿಗಳೇ ಶ್ರೀರಕ್ಷೆ ಎಂದು ಭಾವಿಸಲಾಗಿತ್ತು. ಆದರೆ ಪರೋಕ್ಷವಾಗಿ ಈ ಅವಧಿಯಲ್ಲಿ ದೇಶದ ಮೂಲೆ ಮೂಲೆಗಳಲ್ಲೂ ಮತೀಯವಾದಕ್ಕೆ ಹೆಚ್ಚು ಮನ್ನಣೆ ದೊರೆತಿದ್ದು ಅಚ್ಚರಿಯ ಅಂಶವೇನಲ್ಲ. ಆಡಳಿತ ಯಂತ್ರದಲ್ಲಿ ಸಂಘಪರಿವಾರದ ಹಿಂಬಾಲಕರನ್ನು ವ್ಯವಸ್ಥಿತವಾಗಿ ಸೇರಿಸಿದ್ದು ೨೦೦೨ರ ಗುಜರಾತ್ ಗಲಭೆಗಳಲ್ಲಿ ಸ್ಪಷ್ಟವಾಗಿತ್ತು. ಹಿಂದುತ್ವದ ಅಲೆಯನ್ನೇರಿ, ನವ ಉದಾರವಾದಿ ನೀತಿಯನ್ನು ಅನುಸರಿಸಿ, ಭಾರತೀಯ ಸಾಮಾಜಿಕ ಹಾಗು ಆರ್ಥಿಕ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳುವ ಭಾಜಪದ ಚಾಣಕ್ಯ ನೀತಿಗೆ ೨೦೦೪ರ ಚುನಾವಣೆಗಳು ನಿರ್ಣಾಯಕವಾಗಿದ್ದವು. ಅಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವ ಹಿಂದುತ್ವ ರಾಜಕಾರಣಕ್ಕೆ ಮಂಜಿನ ಪರದೆಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಭ್ರಮೆ ನುಚ್ಚು ನೂರಾಗಿತ್ತು. ವಾಜಪೇಯಿ ಸರ್ಕಾರದ ನವ ಉದಾರವಾದಿ ನೀತಿಗಳು ಮತ್ತು ಸಂಘಪರಿವಾರದ ಕೋಮುವಾದಿ ರಾಜಕೀಯ ಭಾಜಪಕ್ಕೆ ಮುಳುವಾಗಿತ್ತು.

೨೦೦೪ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ನೀತಿಗಳೂ ಎನ್‌ಡಿಎ ಸರ್ಕಾರದ ನೀತಿಗಳಿಂದ ಭಿನ್ನವಾಗಿರಲಿಲ್ಲ. ಜಾಗತೀಕರಣ ಪ್ರಕ್ರಿಯೆಯನ್ನು ಇನ್ನೂ ತೀವ್ರವಾಗಿಸುವ ನಿಟ್ಟಿನಲ್ಲಿ ಸಾಮಾನ್ಯ ಜನತೆಯ ಜನಜೀವನವನ್ನು ಬಲಿಕೊಟ್ಟ ಯುಪಿಎ ನೀತಿಗಳು ಸಾಮಾಜಿಕ ಕ್ಷೆಭೆಗೆ ಪೂರಕವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಕಂಧಮಾಲ್, ನಂದಿಗ್ರಾಮ, ಕಳಿಂಗನಗರ, ಮಂಗಳೂರು ಮುಂತಾದೆಡೆಗಳಲ್ಲಿ ನಡೆದ ಜನವಿರೋಧಿ ಕೋಮುವಾದಿ ಕೃತ್ಯಗಳನ್ನು ಅರ್ಥೈಸುವುದರಲ್ಲಿ ವಿಫಲವಾದ ಕಾಂಗ್ರೆಸ್ ಸರ್ಕಾರ ಭಯೋತ್ಪಾದನೆಯನ್ನು ನಿಯಂತ್ರಿಸುವುದರಲ್ಲೂ ವಿಫಲವಾಗಿರುವುದು ಅಲ್ಲಗಳೆಯಲಾಗದ ಸತ್ಯ. ಈ ಸಂದರ್ಭದಲ್ಲಿ ಘೋಷಿತವಾಗಿರುವ ಚುನಾವಣೆಗಳು ಭಾಜಪ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ತಮ್ಮ ರಾಷ್ಟ್ರೀಯ ಅಸ್ಮಿತೆಗಳನ್ನು ಉಳಿಸಿಕೊಳ್ಳಲು ಬಹುತೇಕ ಕಡೆಯ ಅವಕಾಶವಾಗಿದೆ. ಆದರೆ ನವ ಉದಾರವಾದಿ ನೀತಿಗಳನ್ನು ಅನುಸರಿಸುವುದರಲ್ಲಿ ಒಂದೇ ಮಾರ್ಗವನ್ನು ಅನುಸರಿಸುವ ಎರಡೂ ಪಕ್ಷಗಳ ನಡುವೆ ಭಿನ್ನತೆ ಏನಾದರೂ ಇರುವುದಾದಲ್ಲಿ ಸಾಮಾಜಿಕ ಸ್ತರದಲ್ಲಿ ಮಾತ್ರ ಕಾಣಬಹುದಾಗಿದೆ. ಹಾಗಾಗಿಯೇ ಭಾಜಪ ತನ್ನ ಹಿಂದುತ್ವ ರಾಜಕೀಯದ ಪುನರಾವರ್ತನೆಗೆ ಯತ್ನಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಕೋಮುವಾದಿ ಘೋಷಣೆಗಳು ದೇಶಾದ್ಯಂತ ಅಲ್ಪಸಂಖ್ಯಾತರ ವಿರುದ್ಧ ಸಾಮಾನ್ಯ ಜನರನ್ನು ಸಂಘಟಿಸಲು ಭಾಜಪಕ್ಕೆ ನೆರವಾಗುವ ಸಾಧ್ಯತೆಗಳಿವೆ. ಮುಸ್ಲಿಂ ಮೂಲಭೂತವಾದಿಗಳ ಮನ ಒಲಿಸಲು ಯುಪಿಎ ಸರ್ಕಾರ ಅನುಸರಿಸುವ ನೀತಿಗಳನ್ನೇ ಮುಸ್ಲಿಮರ ತುಷ್ಟೀಕರಣ ಎಂದು ಅರ್ಥೈಸುವ ಭಾಜಪಕ್ಕೆ ವರುಣ್ ಗಾಂಧಿಯವರ ಹೇಳಿಕೆಗಳು ವರದಾನವಾಗುತ್ತದೆ. ಹಾಗಾಗಿ ವರುಣನ ಆರ್ಭಟದ ಹಿಂದೆ ಒಂದು ರಾಜಕೀಯ ಸಿದ್ಧಾಂತವಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ನಾನು ಗಾಂಧಿ, ಒಬ್ಬ ಶುದ್ಧ ಹಿಂದೂ ಎಂದು ಘೋಷಿಸುವ ವರುಣ್ ತನ್ನ ತಾಯಿ ಪ್ರಾಣಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಮಹಿಳೆ ಎಂಬ ಅಂಶವನ್ನು ಮರೆತಂತಿದೆ. ಯಾವುದೇ ವ್ಯಕ್ತಿಯ ಮನೆತನವಾಗಲೀ, ಧಾರ್ಮಿಕ ಅಸ್ಮಿತೆಗಳಾಗಲೀ ಆತನಲ್ಲಿ ಉದಾತ್ತತೆಯನ್ನು ಮೂಡಿಸವಂತಿದ್ದರೆ ವಿಶ್ವದಲ್ಲಿ ಈ ವರುಣ್ ಗಾಂಧಿಯಂತಹ ದ್ವೇಷದ ಕಾರ್ಖಾನೆಗಳು ಉದ್ಭವಿಸುತ್ತಿರಲಿಲ್ಲ. ವರುಣ್ ಗಾಂಧಿಯ ಅಭಿಪ್ರಾಯ ವೈಯ್ಯಕ್ತಿಕವೇ ಇರಬಹುದು. ಆದರೆ ಅದರ ಹಿಂದಿನ ಭಾವನೆಗಳಿಗೆ ಒಂದು ಇತಿಹಾಸವಿದೆ. ಸಾಂಸ್ಕೃತಿಕ ಮನ್ನಣೆ ಇದೆ. ಧಾರ್ಮಿಕ ಸಮರ್ಥನೆ ಇದೆ. ಇದೇ ಭಾವನೆಗಳನ್ನೇ ಬಿನ್ ಲಾಡೆನ್‌ನಲ್ಲೂ, ಲಷ್ಕರ್ ಸಂಘಟನೆಗಳಲ್ಲೂ ಕಾಣಬಹುದು.

ವರುಣ್ ಗಾಂಧಿಯ ಭಾಷಣವನ್ನು ಭಾಜಪ ಸಮರ್ಥಿಸಲಿ ಬಿಡಲಿ, ಈ ರೀತಿಯ ಹಿಂಸಾತ್ಮಕ ಪ್ರಚೋದನಕಾರಿ ಹೇಳಿಕೆಗಳು ಭಾರತೀಯ ರಾಜಕಾರಣದ ಅಂಶಿಕ ಭಾಗವಾಗಿರುವುದು ಮಾತ್ರ ಕಟು ಸತ್ಯ. ಭಯೋತ್ಪಾದನೆಯ ಸುಳಿಗೆ ಸಿಲುಕಿ ಪರದಾಡುತ್ತಿರುವ ಭಾರತೀಯ ಸಮಾಜದಲ್ಲಿ ಪ್ರೀತಿ, ಸ್ನೇಹಗಳನ್ನು ಹರಡುವುದು ಮುಖ್ಯವೇ ಹೊರತು ದ್ವೇಷ ಸಾಧನೆಯಲ್ಲ. ದ್ವೇಷದ ಸುಳಿಯಲ್ಲಿ ಸಿಲುಕಿರುವ ಯುವ ಸಮಾಜಕ್ಕೆ ಭಾಜಪದಂತಹ ರಾಜಕೀಯ ಮುಖ್ಯವಾಹಿನಿಯ ಪಕ್ಷಗಳು ವರುಣ್ ಗಾಂಧಿಯಂತಹ ನಾಯಕರನ್ನು ಒದಗಿಸುವುದು ರಾಷ್ಟ್ರದ ಐಕ್ಯತೆಗೇ ಅಪಾಯಕಾರಿ. ವರುಣ್ ಗಾಂಧಿಯಷ್ಟೇ ದ್ವೇಷವನ್ನು ಹರಡುವ ಶಕ್ತಿಗಳು ಮತ್ತೊಂದು ಮಗ್ಗುಲಲ್ಲೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ಈ ಪರಿಯ ರಾಜಕಾರಣ ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತದೆ ಎಂಬ ಸತ್ಯ ರಾಜಕೀಯ ಪಕ್ಷಗಳಿಗೆ ಅರಿವಾಗಬೇಕಾಗಿದೆ. ವಸಂತ ಋತುವಿನ ಆಗಮನವನ್ನು ಹರ್ಷಚಿತ್ತದಿಂದ ಹೂಗೊಂಚಲುಗಳಿಂದ, ಹಕ್ಕಿಗಳ ಕಲರವದಿಂದ ಸ್ವಾಗತಿಸುವುದು ಉಚಿತ. ಇಲ್ಲವಾದಲ್ಲಿ ವರುಣನ ಆರ್ಭಟಗಳಿಂದ ಕವಿಯುವ ದ್ವೇಷದ ಕಾರ್ಮೋಡ ಮಾಮರದಲ್ಲಿ ಅಗ್ನಿಕುಂಡವನ್ನೇ ಸೃಷ್ಟಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ನಾ ದಿವಾಕರ