You are hereForums / ಸಾಮಾಜಿಕ ವಿಚಾರಗಳು / 2009 ಉಗಾದಿಯ ವಿಶೇಷ ಲೇಖನ

2009 ಉಗಾದಿಯ ವಿಶೇಷ ಲೇಖನ


By DIVAKAR N - Posted on 22 March 2009

ಪರ್ವಕಾಲಕ್ಕೆ ನಾಂದಿ ಹಾಡೋಣವೇ ?

ಸರ್ವಧಾರಿ ಸಂವತ್ಸರವನ್ನು ಕಳೆದು ವಿರೋಧಿ ನಾಮ ಸಂವತ್ಸರಕ್ಕೆ ಕಾಲಿರಿಸುತ್ತಿರುವ ಸಂದರ್ಭ ಭಾರತೀಯ ಸಮಾಜದ ಪರ್ವಕಾಲ. ವಸಂತ ಕಾಲದಲ್ಲಿ ಹಳೆಯ ಬೇರು ಹೊಸ ಚಿಗುರಿಗೆ ಜನ್ಮ ನೀಡುವಂತೆ ಕಳೆದ ವರ್ಷಗಳ ಆಗು ಹೋಗುಗಳು ಮುಂಬರುವ ವರ್ಷದ ಬೆಳವಣಿಗೆಗಳಿಗೆ ದಾರಿದೀಪವಾಗಬೇಕಾಗಿದೆ. ಯುಗಾದಿಯ ಸಂದರ್ಭ ಜಾತ್ಯಾತೀತವಾದದ್ದು. ಆಚರಣೆಯ ಮಟ್ಟದಲ್ಲಿ ವೈದಿಕ ಸಂಪ್ರದಾಯಕ್ಕೆ ಜೋತುಬೀಳುವ ಪ್ರವೃತ್ತಿ ಕಂಡುಬಂದರೂ, ಯುಗಾದಿಯ ಆಶಯಗಳ ಹಿಂದೆ ಜನಪದದ ಆಶಯವಿದೆ. ಬೇವು ಬೆಲ್ಲವನ್ನು ಹಂಚಿ ತಿನ್ನುವ ಸಂದರ್ಭದಲ್ಲಿ ಜನಸಾಮಾನ್ಯರ ನೋವು ನಲಿವುಗಳು, ಸಂಕಷ್ಟಗಳು ಮತ್ತು ಸದ್ಭಾವನೆಗಳನ್ನು ಪರಸ್ಪರ ಹಂಚಿಕೊಂಡು ಬಾಳುವ ಉನ್ನತ ಆದರ್ಶವಿದೆ. ವೈಜ್ಞಾನಿಕತೆಗಿಂತಲೂ ಭಾವುಕತೆ ಪ್ರಾಮುಖ್ಯ ಪಡೆದಾಗ ಈ ಆಚರಣೆಗಳು ತಮ್ಮ ಅರ್ಥವನ್ನು ಕಳೆದುಕೊಂಡುಬಿಡುತ್ತವೆ. ಜನಪದದಲ್ಲಿ ಅಡಗಿರುವ ಶ್ರಮಿಕ ವರ್ಗಗಳ ಭಾವನೆಗಳು ಧಾರ್ಮಿಕ ಆಡಂಬರಗಳಲ್ಲಿ ಬೆರೆತು ಹೊಸವರ್ಷದ ಹೊಸ್ತಿಲಲ್ಲಿ ಧಾರ್ಮಿಕ ಅಸ್ಮಿತೆಗಳು ತಮ್ಮದೇ ಆದ ಛಾಪನ್ನು ಮೂಡಿಸಿಬಿಡುತ್ತವೆ. ಬೆಲ್ಲವನ್ನು ಸವಿಯುವ ಸಮುದಾಯಗಳು ಹರ್ಷಚಿತ್ತರಾಗಿ ಹಬ್ಬವನ್ನು ಆಚರಿಸಿದರೆ, ಬೇವು ಉಣ್ಣುವ ಸಮುದಾಯಗಳು ಭವಿಷ್ಯದ ಚಿಂತನೆಯಲ್ಲಿ ಮುಳುಗಿರುತ್ತಾರೆ. ಬೇವು ಬೆಲ್ಲಗಳನ್ನು ಹಂಚಿಕೊಳ್ಳುವಾಗಿ ಈ ಎರಡೂ ವರ್ಗಗಳ ಸಮ್ಮಿಲನವಾಗುವ ಕನಸನ್ನು ಸಂವೇದನಾಶೀಲರು ಶತಮಾನಗಳಿಂದ ಕಾಣುತ್ತಲೇ ಇದ್ದರೂ, ಅದು ಕನಸಾಗಿಯೇ ಉಳಿದಿದೆ.

ಒಂದು ಅರ್ಥದಲ್ಲಿ ಪ್ರಸ್ತುತ ಸಂವತ್ಸರ ವಿರೋಧಿ ಎಂಬ ನಾಮಾಂಕಿತವನ್ನು ಹೊತ್ತು ಬಂದಿರುವುದು ಕಾಕತಾಳೀಯವಾದರೂ ಭಾರತೀಯ ಸಮಾಜದ ಮಟ್ಟಿಗೆ ಸೂಕ್ತವಾಗಿಯೇ ಇದೆ. ಭಾರತೀಯ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ವಿರೋಧ ಸರ್ವವ್ಯಾಪಿಯಾಗಿರುವಂತೆಯೇ ಸರ್ವಧಾರಿಯೂ ಆಗಿದ್ದು, ಅನೇಕ ವಿರೋಧಾಭಾಸಗಳಿಗೂ ಎಡೆಮಾಡಿಕೊಟ್ಟಿದೆ. ಆರು ದಶಕಗಳಿಗೂ ಮೀರಿದ ಸ್ವತಂತ್ರ ಮಾರ್ಗದಲ್ಲಿ ಭಾರತ ಕಂಡ ಏಳು ಬೀಳುಗಳು ಅಭೂತಪೂರ್ವ. ಎರಡು ಶತಮಾನಗಳ ದಾಸ್ಯದ ಸಂಕೋಲೆಗಳಿಂದ ಮುಕ್ತಿ ಕಂಡ ಭಾರತೀಯ ಜನಸಮುದಾಯಗಳಿಗೆ ಸ್ವಾತಂತ್ರ್ಯದ ರುಚಿ ಸವಿಯಾಗಿರಲಿಲ್ಲ. ಬಹುಪಾಲು ಜನತೆಗೆ ಇಂದಿಗೂ ಸವಿಯಾಗಿಲ್ಲ. ದೇಶದ ವಿಭಜನೆ, ಕೋಮು ಸಂಘರ್ಷ, ಮಹಾತ್ಮನ ಹತ್ಯೆ, ಸುತ್ತ ಆವರಿಸಿದ ಯುದ್ಧದ ಕಾರ್ಮೋಡ, ಆಂತರಿಕ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಸ್ವತಂತ್ರ ಭಾರತದ ನಿರ್ಮಾಣದ ಇಟ್ಟಿಗೆಗಳಲ್ಲಿ ಕಂಡ ಬಿರುಕುಗಳಾಗಿದ್ದವು. ಆದರೂ ದಾರ್ಶನಿಕತೆಯನ್ನು ಮೆರೆದ ಅನೇಕ ರಾಷ್ಟ್ರೀಯ ನಾಯಕರುಗಳು ದೇಶದ ಜನತೆಯಲ್ಲಿ ಆಶಾಕಿರಣಗಳನ್ನು ಮೂಡಿಸುವ ಭರವಸೆಯ ಬೆಳಕನ್ನು ತೋರುವುದರಲ್ಲಿ ಸಫಲರಾಗಿದ್ದರು. ಭರವಸೆಯ ಬೆಳಕಿನ ಹಿಂದೆ ಕಾರ್ಗತ್ತಲಿನ ಮಂಜು ಮುಸುಕಿದ್ದರೂ, ಅದು ತಾತ್ಕಾಲಿಕ ಎಂಬ ಭ್ರಮೆ ಮೂಡಿತ್ತು. ಸ್ವಾವಲಂಬಿ ಭಾರತದ ನಿರ್ಮಾಣಕ್ಕಾಗಿ ಪಣತೊಟ್ಟು ಯಶಸ್ಸಿನ ಮೆಟ್ಟಿಲುಗಳನ್ನೇರುವುದರಲ್ಲಿ, ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೊಂಚ ಮಟ್ಟಿಗಾದರೂ ಸಫಲರಾದದ್ದು ಈ ನಾಯಕರಿಗೆ ಸಲ್ಲಬೇಕಾದ ಗೌರವ. ವಸಾಹತುಶಾಹಿಗಳ ಶೋಷಣೆಯಿಂದ ಹೊರಬಂದು ದೇಶದ ಸಂಪನ್ಮೂಲಗಳನ್ನು ರಕ್ಷಿಸುವುದೇ ಅಲ್ಲದೆ, ರಾಷ್ಟ್ರ ಸಂಪತ್ತನ್ನು ಉತ್ಪಾದಿಸುವ ದುಡಿಯುವ ವರ್ಗಗಳಲ್ಲಿ ಆತ್ಮವಿಶ್ವಾಸ ಮೂಡಿಸಿದ ಶ್ರೇಯಸ್ಸೂ ಈ ಮಹನೀಯರಿಗೆ ಸಲ್ಲುತ್ತದೆ.

ಕೆಲವು ದೇಶಗಳು ಶತಮಾನದ ಅವಧಿಯಲ್ಲಿ ಸಾಧಿಸಿದ್ದನ್ನು ೫೦ವರ್ಷಗಳಲ್ಲಿ ಸಾಧಿಸಿದ ಹೆಮ್ಮೆ ಭಾರತೀಯರಿಗಿದ್ದರೆ ಅತಿಶಯೋಕ್ತಿಯೇನಲ್ಲ. ವಿಜ್ಞಾನ, ಕೃಷಿ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಉನ್ನತ ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆ ಮಾಡಿರುವುದು ಅಲ್ಲಗಳೆಯಲಾಗದ ಸತ್ಯ. ಆದರೆ ಸಾಧನೆಗಳ ಆಹ್ಲಾದತೆಯಲ್ಲಿ ವೈಫಲ್ಯಗಳನ್ನು ಮರೆಯುವುದು ಒಳಿತಲ್ಲ. ಕೆಲವು ದೇಶಗಳು ಐದು ದಶಕಗಳಲ್ಲಿ ಗೈದಿರುವ ಸಾಧನೆಗಳನ್ನು ನೋಡಿದಾಗ ಭಾರತ ಇನ್ನೂ ಎಷ್ಟೋ ಹಿಂದುಳಿದಿರುವುದೂ ಸ್ಪಷ್ಟವಾಗುತ್ತದೆ. ದಾರಿದ್ರ್ಯತೆ, ಅನಕ್ಷರತೆ, ಅಪೌಷ್ಟಿಕತೆ, ಮಹಿಳೆಯರ ವಿರುದ್ಧ ದೌರ್ಜನ್ಯ, ಬಾಲ ಕಾರ್ಮಿಕರ ಬವಣೆ, ನಿರುದ್ಯೋಗ ಸಮಸ್ಯೆ ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಾಫಲ್ಯಗಳ ಬೆನ್ನಟ್ಟಿ ಹೋಗುವ ಭರದಲ್ಲಿ ಆಳ್ವಿಕರು ಸಮಾಜದ ಒಡಲಲ್ಲೇ ಹುದುಗಿದ್ದ ಅನೇಕ ನ್ಯೂನತೆಗಳನ್ನು ಗಮನಿಸದೆ ಹೋದದ್ದು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿದೆ. ಭವ್ಯ ಪರಂಪರೆ, ಇತಿಹಾಸದ ಗತವೈಭವ, ಅಳಿದ ಸಾಮ್ರಾಜ್ಯಗಳ ಸಾಧನೆಗಳು ಭಾರತೀಯ ಸಮಾಜದ ಕಣ್ಣಿಗೆ ಕಟ್ಟಿದ ಪಟ್ಟಿಯಂತಾಗಿವೆ. ಇತಿಹಾಸದ ನೆನಪಿನಲೆಗಳಲ್ಲಿ ತೇಲುತ್ತಾ ವಾಸ್ತವದ ಘೋರಗಳನ್ನು ಮರೆಮಾಚುತ್ತಿರುವುದು ಭಾರತೀಯ ಸಮಾಜದ ವಿಲಕ್ಷಣ ವೈಶಿಷ್ಟ್ಯಗಳಲ್ಲೊಂದು.

ಹಾಗಾಗಿಯೇ ಬ್ರಿಟೀಷರ ವಿರುದ್ಧದ ಒಂದಾಗಿ ಹೋರಾಡಿದ ಜನ ಸಮುದಾಯ, ರಾಷ್ಟ್ರ ಪ್ರಜ್ಞೆಯನ್ನೇ ಮರೆತಂತಿದೆ. ಅಥವಾ ರಾಷ್ಟ್ರ ಪ್ರಜ್ಞೆಯ ಭಾವನೆ ಸೀಮಿತ ದೃಷ್ಟಿಕೋನದಿಂದ ಬಾಧಿತವಾಗಿದೆ. ಭೌಗೋಳಿಕವಾಗಿ ಭಾರತ ಒಂದು ಬಲಿಷ್ಠ ಏಕೀಕೃತ ರಾಷ್ಟ್ರವಾಗಿ ಕಂಡುಬಂದರೂ ಭೌತಿಕವಾಗಿ, ಮಾನಸಿಕವಾಗಿ, ಸಾಂಸ್ಕೃತಿಕವಾಗಿ ಛಿದ್ರವಾಗಿಯೇ ಕಂಡುಬರುತ್ತದೆ. ಅಸ್ಮಿತೆಗಳ ಅಹಮಿಕೆ ಮಾನವೀಯ ಸಂವೇದನೆಯನ್ನು ಹೊಸಕಿ ಹಾಕುತ್ತಿರುವುದೂ ಪ್ರಸ್ತುತ ಸಾಮಾಜಿಕ ಪರಿಸರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮನುಕುಲದ ಅತಿ ದೊಡ್ಡ ಪ್ರಜಾತಂತ್ರವೆಂಬ ಹೆಗ್ಗಳಿಕೆಯ ನಡುವೆಯೇ ವ್ಯವಸ್ಥಿತವಾಗಿ ಪ್ರಜಾತಂತ್ರದ ಕಗ್ಗೊಲೆಯೂ ನಡೆಯುತ್ತಿರುವುದು ಭಾರತೀಯ ಸಮಾಜ ಎದುರಿಸುತ್ತಿರುವ ದ್ವಂದ್ವದ ಪ್ರತೀಕ. ಸಹಿಷ್ಣುತೆ, ಸಹನೆ, ಶಾಂತಿ ಮತ್ತು ಸಹಬಾಳ್ವೆಯ ದ್ಯೋತಕವಾಗಿದ್ದ ಭಾರತೀಯ ಜನಸಮುದಾಯದ ಒಡಲಾಳದಲ್ಲಿ ಅಸಹನೆ, ಅಸೂಯೆ, ದ್ವೇಷದ ವಿಷಬೀಜಗಳನ್ನು ಬಿತ್ತಲು ಸಮಾಜಕಂಟಕರಿಗೆ ನಾಲ್ಕು ದಶಕಗಳ ಸ್ವಾತಂತ್ರ್ಯ ಸಾಕಾಗಿತ್ತು. ರಾಷ್ಟ್ರ ನಿರ್ಮಾಣದ ಹೊಣೆಗಾರಿಕೆಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದ ಶ್ರಮಿಕವರ್ಗಗಳು ತಮಗೆ ಒದಗಿದ್ದ ಸ್ವಾತಂತ್ರ್ಯದಿಂದ ವಂಚಿತರಾದರೂ ಧನಿಕ ವರ್ಗಗಳು ತಮ್ಮ ಸ್ವಾತಂತ್ರ್ಯದ ಸವಿಯನ್ನು ಅನುಭವಿಸಿದ್ದು, ಈ ಶ್ರಮಿಕ ವರ್ಗಗಳ ಶೋಷಣೆಯ ಮೂಲಕ. ಹಾಗಾಗಿಯೇ ಜಾತಿ ವೈಷಮ್ಯಗಳ ವಿಷವರ್ತುಲದೊಳಗೆ ಸಿಲುಕಿದ್ದರೂ, ಸೌಹಾರ್ದತೆಯೆಡೆಗೆ ದಿಟ್ಟ ಹೆಜ್ಜೆ ಹಾಕುತ್ತಿದ್ದ ಜನಸಾಮಾನ್ಯರ ನಡುವೆ ಕಂದರಗಳನ್ನು ಸೃಷ್ಟಿಸಿ, ಗೋಡೆಗಳನ್ನು ನಿರ್ಮಿಸಲು ಆಳ್ವಿಕರಿಗೆ ಪ್ರಜಾತಂತ್ರ ವ್ಯವಸ್ಥೆ ಭದ್ರ ಬುನಾದಿ ಒದಗಿಸಿತ್ತು. ಪ್ರಜಾತಂತ್ರ ವ್ಯವಸ್ಥೆ ಉಳ್ಳವರ ಪರವಾಗಿದ್ದು ಭಾರತೀಯ ಸ್ವಾತಂತ್ರೋತ್ತರ ಇತಿಹಾಸದ ಘೋರ ಅಧ್ಯಾಯ.

ಸ್ವಾವಲಂಬನೆಯ ಹೊಸ್ತಿಲಲ್ಲಿದ್ದ ದೇಶವನ್ನು ಪುನಃ ಸಾಮ್ರಾಜ್ಯಶಾಹಿಗಳ ತೆಕ್ಕೆಯೊಳಗೆ ಸಿಲುಕಿಸಿದ ಆಳುವ ವರ್ಗಗಳ ಕೈಂಕರ್‍ಯಗಳು ಇಂದು ಇಡೀ ದೇಶಕ್ಕೆ ಉರುಳಾಗಿ ಪರಿಣಮಿಸಿದೆ. ಜಾಗತೀಕರಣವೆಂಬ ಸುನಾಮಿಗೆ ಸಿಲುಕಿ ತತ್ತರಿಸಿರುವ ಭಾರತೀಯ ಸಮಾಜಕ್ಕೆ ಸಾಮ್ರಾಜ್ಯಶಾಹಿ ರಾಜಕಾರಣದ ಕೊಡುಗೆಯಾಗಿ ಭಯೋತ್ಪಾದನೆ, ಕೋಮುವಾದ ಸೃಷ್ಟಿಯಾಗಿದೆ. ಪರಿಣಾಮವಾಗಿ ಸಹವರ್ತಿಗಳನ್ನು ಮನುಜರೆಂದು ಗುರುತಿಸುವ ಬದಲು, ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿಸಿ ನೋಡುವ ಹಂತಕ್ಕೆ ನಾಗರಿಕ ಸಮಾಜದ ತಲುಪಿದೆ. ಜೀವ ಮತ್ತು ಆತ್ಮಗಳ ಮಿಲನವೇ ಮನುಕುಲದ ಶ್ರೇಷ್ಠ ಪರಂಪರೆ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದ ಭಾರತೀಯ ಸಮಾಜದಲ್ಲಿ ಮನುಜ ಜೀವಕ್ಕೆ ಬೆಲೆಯೇ ಇಲ್ಲವೇನೋ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಜನಿಸಿದವರು ಒಂದು ಅಸ್ಮಿತೆಯನ್ನು ಹೊತ್ತುಕೊಂಡೇ ಬಂದರೆ, ಗತಿಸಿದವರು ನಾಗರಿಕ ಸಮಾಜ ಆರೋಪಿಸುವ ಅಸ್ಮಿತೆಗಳ ಜಾಲದಲ್ಲಿ ಸಿಲುಕಿ ಕಳೆದುಹೋಗುತ್ತಾರೆ. ಅಗ್ನಿಯಲ್ಲಿ ಮಿಂದುದೆಲ್ಲವೂ ಶ್ರೇಷ್ಠವಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯನ್ನು ಪೋಷಿಸುತ್ತಲೇ, ಭೂಮಂಡಲದ ಶ್ರೇಷ್ಠ ಚರಗಳಾದ ಮನುಜರನ್ನು ಆನಂದದಿಂದ ಅಗ್ನಿಗೆ ಆಹುತಿ ನೀಡುವ ಪರಂಪರೆ ಈ ನಾಡಿನಲ್ಲಿ ಇಂದಿಗೂ ಜೀವಂತವಾಗಿದೆ. ಈ ಕೃತ್ಯಗಳಿಗೆ ನಾಗರಿಕ ಸಮಾಜ ವಹಿಸುವ ದಿವ್ಯ ಮೌನ ವಿಸ್ಮಯ ಮೂಡಿಸುತ್ತದೆ. ಜನಿಸಿ ಬಂದವರೆಲ್ಲ ಅಳಿಯಲೇ ಬೇಕು, ಆದರೆ ಅಳಿದು ಹೋದವರನ್ನು ಮರೆಯಬೇಕೇ? ಎಂಬ ಪ್ರಶ್ನೆ ಸಂವೇದನಾಶೀಲರನ್ನು, ಪ್ರಜ್ಞಾವಂತರನ್ನು ಕಾಡುತ್ತಲೇ ಇರುತ್ತದೆ.

ಭಾರತೀಯ ಜನತೆಯ ಪಾಲಿಗೆ ಭಯೋತ್ಪಾದನೆ ಹಲವಾರು ರೂಪಗಳಲ್ಲಿ ವ್ಯಕ್ತವಾಗುತ್ತಿದೆ. ರೈತರ ಆತ್ಮಹತ್ಯೆ, ವಧುಗಳ ದಹನ, ನಿರುದ್ಯೋಗಿಗಳ ಬವಣೆ, ಅನಕ್ಷರಸ್ತರ ದುಸ್ತರ ಜೀವನ, ಕೊಳೆಗೇರಿ ವಾಸಿಗಳ(ಈಗ ಇವರಿಗೆ ಸ್ಲಂಡಾಗ್ ಎಂಬ ಬಿರುದೂ ಲಭ್ಯವಾಗಿದೆ) ದುರ್ಬರ ಬಾಳು, ಮಹಿಳೆಯರನ್ನು ಕಾಡುವ ಅಭದ್ರತೆ, ನಿಮ್ನ ವರ್ಗಗಳ ಶೋಷಣೆ, ಇವೆಲ್ಲವೂ ಭಯೋತ್ಪಾದನೆಯ ವಿವಿಧ ಮುಖಗಳಾಗಿ ಎರಗಿಬರುತ್ತಿವೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಭಯೋತ್ಪಾದನೆ ಏಕಕಾಲಕ್ಕೆ ಜನಸಾಮಾನ್ಯರನ್ನು ಬಾಧಿಸುತ್ತಿವೆ. ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಭೀತಿಯಲ್ಲೇ ಬಾಳುತ್ತಿರುವ ದುಡಿಯುವ ವರ್ಗಗಳು, ಶ್ರಮಜೀವಿಗಳು ದುರ್ಗಮ ಮಾರ್ಗವನ್ನು ಕ್ರಮಿಸುತ್ತಿದ್ದಾರೆ. ಶ್ರೀಮಂತ ವರ್ಗಗಳ ವಿಲಾಸೀ ಜೀವನಕ್ಕೆ ದೇಶದ ಉತ್ಪಾದಕೀಯ ಶಕ್ತಿಗಳು ಹರಕೆಯ ಕುರಿಗಳಾಗುತ್ತಿದ್ದಾರೆ. ಕುರಿ ಕೊಬ್ಬಿದೊಡೆ ಲಾಭ ಕುರುಬಂಗೆ ಎಂದು ಕುವೆಂಪು ಅವರು ಹೇಳಿರುವಂತೆ ಶ್ರಮಿಕ ವರ್ಗಗಳ ಏಳ್ಗೆ ಧನಿಕ ವರ್ಗಗಳ ವೈಭವದ ಸೋಪಾನವಾಗಿದೆ. ಧಾರ್ಮಿಕ, ಜಾತೀಯ, ಪ್ರಾಂತೀಯ ಅಸ್ಮಿತೆಗಳು ಇದೇ ಜನತೆಯನ್ನು ಮತ್ತಷ್ಟು ಧೃತಿಗೆಡಿಸಿ, ವಿಘಟನೆಯತ್ತ ಸಾಗಿಸುತ್ತಿವೆ. ಈ ಅಸ್ಮಿತೆಗಳನ್ನು ರೂಪಿಸುವವರು ತಮ್ಮದೇ ಆದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ತೊಡಗಿದ್ದಾರೆ. ಹಾಗಾಗಿಯೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ನೈಸರ್ಗಿಕ ವಿಕೋಪಕ್ಕೆ ಬಲಿಯಾದವರಿಗಿಂತಲೂ ಹೆಚ್ಚು ಜನ, ಮಾನವ ಪ್ರೇರಿತ ವೈಪರೀತ್ಯಗಳಿಗೆ ಬಲಿಯಾಗಿದ್ದಾರೆ. ಇಂದಿಗೂ ಬಲಿಯಾಗುತ್ತಿದ್ದಾರೆ.

ಯಾರನ್ನು ದೂಷಿಸುವುದು? ಯಾರನ್ನು ಹಳಿಯುವುದು? ವಿಧಿ, ಹಣೆಬರಹ, ದೈವಲೀಲೆಗಳನ್ನು ಹಳಿಹಳಿದು ಹಳಿತಪ್ಪಿ ಹೋಗಿರುವ ಭಾರತೀಯ ಸಮಾಜಕ್ಕೆ ಸಾಕ್ಷಾತ್ಕಾರದ ಮಾರ್ಗವಿರುವುದು ದುಡಿಯುವ ವರ್ಗಗಳ, ಶ್ರಮಜೀವಿಗಳ ಐಕ್ಯತೆಯಲ್ಲಿ, ಗೋಸುಂಬೆಗಳ ರಾಜಕಾರಣದಲ್ಲಲ್ಲ. ಈ ಐಕ್ಯತೆಯನ್ನು ಸಾಧಿಸಲು ಹಲವು ತೊಡಕುಗಳನ್ನು ನಿರ್ನಾಮ ಮಾಡಬೇಕಾಗುತ್ತದೆ. ಅಸ್ಮಿತೆಗಳ ಕಂದರಗಳನ್ನು ಮುಚ್ಚಬೇಕಾಗುತ್ತದೆ. ವೈಷಮ್ಯದ ಗೋಡೆಗಳನ್ನು ಕೆಡವಬೇಕಾಗುತ್ತದೆ. ದ್ವೇಷದ ದಳ್ಳುರಿಯ ಶಮನ ಮಾಡಬೇಕಾಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ಜನತೆಗೆ ಈ ಅವಕಾಶ ಲಭ್ಯವಿದೆ. ರಾಷ್ಟ್ರ ನಿರ್ಮಾಣವೆಂದರೆ ಭೋಗೋಳಿಕ ಪರಿಕಲ್ಪನೆಯಲ್ಲ, ಭೌತಿಕ ಪರಿಕಲ್ಪನೆ ಎಂಬ ಸತ್ಯಾಂಶವನ್ನು ಭಾರತೀಯ ನಾಗರಿಕ ಸಮಾಜ ಗ್ರಹಿಸಬೇಕಾಗಿದೆ. ರಾಷ್ಟ್ರ ಪ್ರೇಮ, ದೇಶ ಭಕ್ತಿ ಇತ್ಯಾದಿ ಪರಾಕುಗಳ ಹಿಂದೆ ಮಾನವೀಯ ಸಂವೇದನೆ ಇಲ್ಲದೆ ಹೋದಲ್ಲಿ ಮನುಕುಲದ ಏಳಿಗೆ ಸಾಧ್ಯವಾಗದು.

ಭಾರತೀಯ ಜನಸಾಮಾನ್ಯರ ಅಂತರಂಗದಲ್ಲಿ ಹುದುಗಿರುವ ಧನಾತ್ಮಕ ಭಾವನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲ ಸಂಘಟನೆಗಳೂ, ವ್ಯಕ್ತಿಗಳೂ ಕಾರ್ಯಗತರಾಗುವುದರಿಂದ ವಿರೋಧಿ ನಾಮ ಸಂವತ್ಸರವನ್ನು ವಿರೋಧ ನಿರ್ನಾಮ ಸಂವತ್ಸರವನ್ನಾಗಿ ಮಾರ್ಪಡಿಸುವತ್ತ ಸಾಗಿದಲ್ಲಿ ನವವರ್ಷವನ್ನು ಒಂದು ಪರ್ವಕಾಲವನ್ನಾಗಿ ಪರಿವರ್ತಿಸಬಹುದಲ್ಲವೇ ? ಯುಗಾದಿಯ ಸಂದರ್ಭದಲ್ಲಿ ಈ ಆಶಯವನ್ನು ಹೊತ್ತು ಎಲ್ಲರೂ ಮುಂದೆ ಸಾಗೋಣವೇ ?

ನಾ ದಿವಾಕರ