You are hereForums / ಸಾಮಾಜಿಕ ವಿಚಾರಗಳು / ಘನತೆ ಸ್ವಾಭಿಮಾನದ ಗುಂಗಿನಲ್ಲಿ

ಘನತೆ ಸ್ವಾಭಿಮಾನದ ಗುಂಗಿನಲ್ಲಿ


By DIVAKAR N - Posted on 05 March 2009

ಮಾರ್ಚಿ ೮ರಂದು ವಿಶ್ವದಾದ್ಯಂತ ಆಚರಿಸಲಾಗುವ ಅಂತಾರಾಷ್ಟೀಯ ಮಹಿಳಾ ದಿನಾಚರಣೆಗೆ ಒಂದು ವಿಶಿಷ್ಟ ಐತಿಹಾಸಿಕ ಹಿನ್ನೆಲೆಯಿದೆ. ವ್ಯಾಲೆಂಟೈನ್ಸ್ ದಿನ, ತಾಯಂದಿರ ದಿನಗಳಂತೆಯೇ ಮಹಿಳಾ ದಿನಾಚರಣೆಯೂ ಪಾಶ್ಚಿಮಾತ್ಯ ಪ್ರಭಾವದಿಂದ ಪ್ರೇರೇಪಿತವಾದದ್ದೇ ಆಗಿದೆ. ಆದರೂ ವರ್ಷದಲ್ಲಿ ಒಂದು ದಿನ ಆಚರಿಸಲಾಗುವ ಮಹಿಳಾ ದಿನಾಚರಣೆಗೆ, ಆಚರಣೆಗಳ ಚೌಕಟ್ಟಿನ ಹೊರಗೂ ಒಂದು ಐತಿಹಾಸಿಕ ಮಹತ್ವವಿದೆ. ಜಾಗತಿಕ ಮಟ್ಟದಲ್ಲಿ ಆಚರಿಸಲಾಗುವ ಈ ದಿನವನ್ನು ಪ್ರತಿಯೊಂದು ದೇಶದಲ್ಲೂ ವಿಭಿನ್ನ ದೃಷ್ಟಿಕೋನದಿಂದ ನೋಡಲಾಗುತ್ತದೆ. ಮುಂದುವರೆದ ರಾಷ್ಟ್ರಗಳ ಮಹಿಳೆಯರು ನಡೆಸುವ ಹೋರಾಟದ ಉದ್ದೇಶಗಳಿಗೂ, ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳ ಮಹಿಳಾ ಚಳುವಳಿಗಳಿಗೂ ಸಾಮ್ಯತೆ ಇರಬೇಕೆಂದೇನಿಲ್ಲ. ಆಯಾ ರಾಷ್ಟ್ರಗಳ ಸಾಮಾಜಿಕ ಚೌಕಟ್ಟಿನಲ್ಲಿ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು ವಿಭಿನ್ನವಾದಂತೆಲ್ಲಾ ಮಹಿಳಾ ಚಳುವಳಿಗಳೂ ವಿಭಿನ್ನ ಧೋರಣೆಗಳನ್ನು ತಾಳುತ್ತವೆ. ಮಹಿಳಾ ಚಳುವಳಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಉಗಮವಾದರೂ, ಮಹಿಳೆಯರ ಸಮಸ್ಯೆಗಳು ವಿಶ್ವವ್ಯಾಪಿಯಾಗಿದ್ದು, ಜಾಗತಿಕ ಸಮಾಜವನ್ನು ಆವರಿಸಿರುವ ಪುರುಷ ಪ್ರಧಾನ ಸಾಮಾಜಿಕ ಚೌಕಟ್ಟಿನಲ್ಲಿ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯವನ್ನು, ಆಕ್ರಮಣವನ್ನು, ದಬ್ಬಾಳಿಕೆಯನ್ನು ಎದುರಿಸುತ್ತಲೇ ಇರುತ್ತಾರೆ. ಇದು ಸರ್ವಕಾಲಿಕ ಸತ್ಯ. ಹಾಗಾಗಿ ಭಾರತೀಯ ಸಂಸ್ಕೃತಿಯ ಆರಕ್ಷಕರು ಈ ದಿನವನ್ನೂ ಪಾಶ್ಚಿಮಾತ್ಯ ಸಂಸ್ಕೃತಿಯೆಂದು ಭಾವಿಸಿ ತಮ್ಮ ಪೌರುಷವನ್ನು ಪ್ರದರ್ಶಿಸದಿರಲಿ ಎಂದು ಆಶಿಸೋಣ.

ಭಾರತೀಯ ಮಹಿಳೆಯರಿಗೆ ಮಹಿಳಾ ಚಳುವಳಿ ಹಲವು ಮಜಲುಗಳಲ್ಲಿ ಪ್ರಸ್ತುತವೆನಿಸುತ್ತವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಜಾತಿಯ ನೆಲೆಗಟ್ಟಿನಲ್ಲಿ ಮಹಿಳೆಯರು ಅನುಭವಿಸುವ ದೌರ್ಜನ್ಯ, ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಪುರುಷ ಸಮಾಜದಿಂದ ಎದುರಿಸಬೇಕಾದ ದಬ್ಬಾಳಿಕೆ ಮತ್ತು ಮಾನಸಿಕ ಹಿಂಸೆ, ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿನ ಲೋಪಗಳಿಂದ ಎದುರಿಸಬೇಕಾದ ದಾರಿದ್ರ್ಯತೆ ಮತ್ತು ಕೌಟುಂಬಿಕ ಸಮಸ್ಯೆಗಳು ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲಗೊಳ್ಳುತ್ತಿರುವ ಮತಾಂಧತೆಯಿಂದ ಉದ್ಭವಿಸಬಹುದಾದ ಸಮಸ್ಯೆಗಳು. ಬಹುಶಃ ವಿಶ್ವದ ಯಾವುದೇ ದೇಶದಲ್ಲೂ ಮಹಿಳೆಯರು ಇಷ್ಟು ವೈವಿಧ್ಯಮಯ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಲಾರರು. ಆಳುವ ವರ್ಗಗಳ ಅನೇಕ ಸರ್ಕಾರಿ ಯೋಜನೆಗಳು ಮೇಲ್ ಪದರದ ಕೆಲವೇ ಮಹಿಳೆಯರಿಗೆ ತಲುಪಿದ್ದರೂ ಅದು ಕೇವಲ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುವುದೇ ಹೊರತು ಸಾಮಾಜಿಕ ನೆಲೆಗಟ್ಟಿನಲ್ಲಿ ಮಹಿಳೆಯರ ಗೌರವ ಮತ್ತು ಘನತೆಯನ್ನು ರಕ್ಷಿಸುವಲ್ಲಿ ಯಶಸ್ಸು ಕಂಡಿಲ್ಲ. ಕೆಲವು ಅಂಕಿ ಆಂಶಗಳು ಇದನ್ನು ದೃಢೀಕರಿಸುತ್ತವೆ.

೨೦೦೫ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗಿತ್ತು. ಸ್ವತಂತ್ರ ಭಾರತದಲ್ಲಿ ಈ ಕಾಯ್ದೆ ಚರಿತ್ರಾರ್ಹವೆಂದೂ ಪರಿಗಣಿಸಲಾಗಿತ್ತು. ಬಹುಶಃ ಈ ಕಾಯ್ದೆಯನ್ನು ರೂಪಿಸುವವರು ಭ್ರಮಾಲೋಕದಲ್ಲಿದ್ದರೇನೋ ಎನ್ನುವಂತೆ ಈ ಕಾಯ್ದೆ ವೈಫಲ್ಯದ ಹಾದಿ ಹಿಡಿದಿದೆ. ಮೈಸೂರಿನಂತಹ ಚಿಕ್ಕ ನಗರದಲ್ಲೇ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗುತ್ತಿರುವುದು ವರದಿಯಾಗಿದೆ. ೨೦೦೬ರಲ್ಲಿ ೧೬೯ ಪ್ರಕರಣಗಳು ವರದಿಯಾಗಿದ್ದರೆ, ೨೦೦೭ರಲ್ಲಿ ೧೯೯ ಮತ್ತು ೨೦೦೮ರಲಿ ೨೫೬ ಪ್ರಕರಣಗಳು ವರದಿಯಾಗಿವೆ. ಇದೇ ವರ್ಷಗಳಲ್ಲಿ ಕ್ರಮವಾಗಿ ೧೫, ೧೩ ಮತ್ತು ೨೧ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಮಹಿಳೆಯರ ಮಾನಭಂಗ ಪ್ರಕರಣಗಳು ಕ್ರಮವಾಗಿ ೧೪, ೨೫ ಮತ್ತು ೨೮ ರಷ್ಟು ವರದಿಯಾಗಿವೆ. ಗಂಡಂದಿರ ಉಪಟಳದ ಪ್ರಕರಣಗಳು ಕ್ರಮವಾಗಿ ೯೪, ೧೧೬ ಮತ್ತು ೧೩೯ ವರದಿಯಾಗಿವೆ. ಇವೆಲ್ಲವೂ ವರದಿಯಾಗಿರುವ ಪ್ರಕರಣಗಳು, ಮೈಸೂರು ನಗರ ಪ್ರದೇಶಕ್ಕೆ ಸೀಮಿತವಾದದ್ದು. ಇನ್ನು ಇಡೀ ದೇಶದ ಅಂಕಿಅಂಶಗಳು ಸಂವೇದನಾಶೀಲರಿಗೆ ಆಘಾತಕಾರಿಯಾಗಿರಲಿಕ್ಕೂ ಸಾಕು.

ಇಲ್ಲಿ ಗ್ರಹಿಸಬೇಕಾದ ಅಂಶವೆಂದರೆ ಮಾನವೀಯ ಸಂಬಂಧಗಳ ನಿರ್ವಹಣೆಗೆ ಕಾನೂನು ಕಟ್ಟಳೆಗಳಿಗಿಂತಲೂ, ಮನುಜ ಸಮಾಜದ ಮನಃ ಪರಿವರ್ತನೆ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಸರ್ಕಾರದ ಕಾನೂನುಗಳು ಎಷ್ಟೇ ಬಿಗಿಯಾಗಿದ್ದರೂ, ಅವೆಲ್ಲವೂ ಸಂಭವಿಸಿದ ಪ್ರಕರಣಗಳನ್ನು ತನಿಖೆ ಮಾಡಲು ಸಹಕಾರಿಯಾಗುವುದೇ ಹೊರತು, ಸಂಭವನೀಯ ದುರಂತಗಳನ್ನು ತಪ್ಪಿಸಲಾಗುವುದಿಲ್ಲ. ಮಹಿಳೆಯರ ಮೇಲೆ ಅವ್ಯಾಹತವಾಗಿ, ವರ್ಗಾತೀತವಾಗಿ ನಡೆಯುತ್ತಿರುವ ಆಸಿಡ್ ದಾಳಿ ಮತ್ತು ವರದಕ್ಷಿಣೆ ಸಾವುಗಳೇ ಇದಕ್ಕೆ ಸ್ಪಷ್ಟ ನಿದರ್ಶನ. ಅತ್ಯಾಚಾರಿಗಳಿಗೆ, ಮಹಿಳೆಯರ ವಿರುದ್ಧ ದೌರ್ಜನ್ಯವೆಸಗುವವರಿಗೆ, ವರದಕ್ಷಿಣೆಗಾಗಿ ಪೀಡಿಸುವವರಿಗೆ ಉಗ್ರ ಶಿಕ್ಷೆ ವಿಧಿಸುವುದರಿಂದ ಅಪರಾಧಗಳನ್ನು ತಡೆಗಟ್ಟಲಾಗುವುದಿಲ್ಲವಾದರೂ, ಉಗ್ರ ಶಿಕ್ಷೆ ವಿಧಿಸಬೇಕೆಂಬ ಆಗ್ರಹದ ಹಿಂದಿನ ಮಹಿಳೆಯರ ಅಂತರಾಳದ ನೋವನ್ನು ಭಾರತೀಯ ಪುರುಷ ಸಮಾಜ ಗ್ರಹಿಸಬೇಕಿದೆ. ಈ ಸಂವೇದನಾ ಶೀಲತೆ ಪುರುಷ ಸಮಾಜದಲ್ಲಿ ಮೂಡುವವರೆಗೂ ಕಾಯ್ದೆ ಕಾನೂನುಗಳು ಅಸಮರ್ಥವಾಗಿಯೇ ಕಾಣುತ್ತವೆ.

ಭಾರತೀಯ ಸಮಾಜದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ, ವಿಶೇಷವಾಗಿ ಗ್ರಾಮೀಣ ಪರಿಸರದಲ್ಲಿ ದಿನನಿತ್ಯ ದಲಿತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು ಆಧುನಿಕ ಸಮಾಜದ ಹರಿಕಾರರಿಗೆ ಸುದ್ದಿ ಎನಿಸುವುದೇ ಇಲ್ಲ. ಏಕೆಂದರೆ ಅಪರಾಧಿಗಳು ಸಮಾಜದ ಮೇಲ್ವರ್ಗಕ್ಕೆ ಸೇರಿದವರಾಗಿರುತ್ತಾರೆ. ನೊಂದ ಹೃದಯಗಳಿಗೆ ಇವರ ಸಾಮಾಜಿಕ ಚೌಕಟ್ಟಿನಲ್ಲಿ ಸ್ಥಾನವೇ ಇರುವುದಿಲ್ಲ. ಮಾದ್ಯಮಗಳಲ್ಲಿ ವೈಭವೀಕರಿಸಲಾಗುವ ಕೆಲವು ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮನೋಭಾವವನ್ನು ಸ್ಪಷ್ಟವಾಗಿ ಕಾಣಬಹುದು. ಕೆಳಸ್ತರದ ಸಮುದಾಯಗಳ ಮಹಿಳೆಯರು ಎರಡು ವಿಧದ ದೌರ್ಜನ್ಯವನ್ನು ಎದುರಿಸುತ್ತಿರುವುದು ಮಹಿಳಾ ಚಳುವಳಿಗಳ ಹೊಣೆಗಾರಿಕೆಯನ್ನು ಹೆಚ್ಚಿಸಬೇಕಾಗಿದೆ. ದಲಿತ, ಅಲ್ಪಸಂಖ್ಯಾತ ಮಹಿಳೆಯರು, ಮೇಲ್ವರ್ಗಕ್ಕೆ ಸೇರಿದವರಾದರೂ, ಅವರ ಆರ್ಥಿಕ ಸ್ವಾವಲಂಬನೆ ಸಾಮಾಜಿಕ ಘನತೆಗೆ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಸುಶಿಕ್ಷಿತ ಸಮಾಜದಲ್ಲಿ, ಸರ್ಕಾರಿ ಕಛೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಈ ದಮನಿತ ಮಹಿಳೆಯರನ್ನು ಅನ್ಯ ರನ್ನಾಗಿಯೇ ಕಾಣಲಾಗುತ್ತದೆ. ಹೊರನೋಟಕ್ಕೆ ಸಾಮಾಜಿಕ ಮತ್ತು ಸಂವಿಧಾನಿಕ ಅನಿವಾರ್ಯತೆಗಳಿಗೆ ಕಟ್ಟುಬಿದ್ದು, ಸಮಾನತೆಯ ಸೋಗಿನಲ್ಲಿದ್ದರೂ, ಮೇಲ್ಜಾತಿಯ ಸಮುದಾಯದ ಆಂತರ್ಯದಲ್ಲಿ ಸುಪ್ತವಾಗಿರುವ ತಾರತಮ್ಯ ಭಾವನೆ ಸೂಕ್ಷ್ಮ ಸಂದರ್ಭಗಳಲ್ಲಿ ಪ್ರಕಟಗೊಳ್ಳುತ್ತಿರುತ್ತದೆ. ಗ್ರಾಮೀಣ ಸಮುದಾಯಗಳಲ್ಲಿ ಈ ಸಮಸ್ಯೆ ಇನ್ನೂ ಗಂಭೀರವಾಗಿದ್ದು, ಜಾಗತೀಕರಣ ಮತ್ತು ಯಂತ್ರಾಧಾರಿತ ಆರ್ಥಿಕತೆಯ ಪರಿಣಾಮವಾಗಿ ಮಹಿಳೆಯರು ತಮ್ಮ ಸಾಮಾಜಿಕ ಸ್ಥಾನಗಳೊಂದಿಗೆ ಆರ್ಥಿಕ ಸ್ವಾವಲಂಬನೆಯನ್ನೂ ಕಳೆದುಕೊಳ್ಳುತ್ತಿದ್ದಾರೆ.

ಜಾಗತೀಕರಣ ಪ್ರಕ್ರಿಯೆ ತೀವ್ರವಾಗುತ್ತಿರುವಂತೆಯೇ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಆವರಿಸಿಕೊಳ್ಳುತ್ತಿರುವ ನವ ಉದಾರವಾದಿ ಧೋರಣೆಯಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶಗಳು ಲಭ್ಯವಾಗಿದ್ದರೂ, ಇದು ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿದೆ. ಮತ್ತೊಂದೆಡೆ ಇದೇ ಪ್ರಕ್ರಿಯೆ ಮಹಿಳೆಯರ ಉತ್ಪಾದನಾ ಶಕ್ತಿಯನ್ನು ವ್ಯರ್ಥಗೊಳಿಸುತ್ತಿದೆ. ಗ್ರಾಮೀಣ ಆರ್ಥಿಕತೆಯಲ್ಲಿ ಕಂಡುಬಂದಿರುವ ಸುಧಾರಣೆಗಳು ಮತ್ತು ಮಹತ್ತರ ಬದಲಾವಣೆಗಳು ಮಹಿಳೆಯರ ಸ್ವಾವಲಂಬನೆಗೆ ಮಾರಕವಾಗಿ ಪರಿಣಮಿಸಿದೆ. ಈ ನ್ಯೂನತೆಯನ್ನು ನೀಗಲು ಸ್ತ್ರೀ ಶಕ್ತಿ ಸಂಘಟನೆಗಳು, ಸ್ವಸಹಾಯ ಗುಂಪುಗಳು ಉತ್ತಮ ಸಾಧನವಾಗಿರುವುದಾದರೂ, ಈ ಪ್ರಕ್ರಿಯೆಗಳು ಪುರುಷ ಸಮಾಜದ ಚೌಕಟ್ಟಿನೊಳಗೇ ನಲುಗುತ್ತಿರುವುದು ಸ್ಪಷ್ಟವಾಗಿದೆ. ಸ್ತ್ರೀಯರ ಉಳಿತಾಯ, ಪುರುಷರ ಲೇವಾದೇವಿ ವ್ಯವಹಾರಕ್ಕೆ ಬಂಡವಾಳವಾಗಿರುವುದು ಕಲ್ಪನೆಯ ಮಾತೇನಲ್ಲ. ಆಳುವ ವರ್ಗಗಳ ಅಧಿಕಾರ ವಿಕೇಂದ್ರೀಕರಣ ಪ್ರಕ್ರಿಯೆಯಲ್ಲೂ ಸಹ ಮಹಿಳೆಯರು ಪುರುಷರ ಕೈಗೊಂಬೆಗಳಾಗಿರುವುದು ಕಟು ವಾಸ್ತವ. ಮೂರು ಪೂರ್ಣಾವಧಿ ಸರ್ಕಾರಗಳು ದೇಶವನ್ನು ಆಳಿದರೂ, ಮಹಿಳಾ ಮೀಸಲಾತಿ ಮಸೂದೆ ಇನ್ನೂ ಜಾರಿಗೊಳ್ಳದಿರುವುದು ಈ ನಿಟ್ಟಿನಲ್ಲಿ ಗಮನಾರ್ಹ. ಮೀಸಲಾತಿ ಸಂವಿಧಾನಿಕವಾಗಿ ಲಭ್ಯವಾಗುವವರೆಗೂ ಮಹಿಳೆಯರಿಗೆ ಅವಕಾಶ ನೀಡಬಾರದೆಂಬ ಪ್ರಮುಖ ರಾಜಕೀಯ ಪಕ್ಷಗಳ ನಿಲುವು ಇಲ್ಲಿ ಪ್ರಶ್ನಾರ್ಹವಾಗುತ್ತದೆ. ದೇಶದ ಇಡೀ ವ್ಯವಸ್ಥೆ ಪುರುಷ ಪ್ರಧಾನವಾಗಿರುವುದಕ್ಕೆ ಇದಕ್ಕಿಂದಲೂ ಉತ್ತಮ ನಿದರ್ಶನ ಬೇಕಿಲ್ಲ.

೨೧ನೆಯ ಶತಮಾನದ ಮೊದಲ ದಶಕವನ್ನು ಪೂರೈಸುತ್ತಿರುವ ಮಾನವ ಸಮಾಜ ವೈಜ್ಞಾನಿಕ ಮತ್ತು ವೈಚಾರಿಕ ಕ್ರಾಂತಿಗಳ ಹೊರತಾಗಿಯೂ ಪಾರಂಪರಿಕ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಿಗೆ ಜೋತುಬಿದ್ದಿರುವ ಭಾರತೀಯ ಸಮಾಜದಲ್ಲಿ ಕಳೆದ ಮೂರು ದಶಕಗಳಲ್ಲಿ ಬಲವಾಗಿ ನೆಲೆಮಾಡಿರುವ ಮತಾಂಧತೆ ಮಹಿಳಾ ಚಳುವಳಿಗೆ ಸವಾಲಾಗಿ ಪರಿಣಮಿಸಿದೆ. ಸತಿ ಪದ್ಧತಿ, ಬಾಲ್ಯವಿವಾಹಗಳಂತಹ ಪ್ರಾಚೀನ ಅನಾಗರಿಕ ಆಚರಣೆಗಳನ್ನು ಇಂದಿಗೂ ವೈಭವೀಕರಿಸುವ ಸಂಘಟನೆಗಳಲ್ಲಿ ಮಹಿಳೆಯರೂ ಸಕ್ರಿಯವಾಗಿರುವುದು ಭಾರತೀಯ ಸಮಾಜದ ವೈಶಿಷ್ಟ್ಯ. ಧರ್ಮದ ನೆಲೆಗಟ್ಟಿನಲ್ಲಿ ವ್ಯಾಖ್ಯಾನಿಸಲಾಗುವ ಸಂಸ್ಕೃತಿಯ ಚೌಕಟ್ಟಿನೊಳಗೆ ಮಹಿಳೆಯರನ್ನು ಬಂಧಿಸುವಲ್ಲಿ ಸಾಂಪ್ರದಾಯಿಕ ಶಕ್ತಿಗಳು ಬಹುತೇಕ ಯಶಸ್ವಿಯಾಗಿವೆ. ಹಾಗಾಗಿಯೇ ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಮಹಿಳೆಯರನ್ನು ನಿರ್ಬಂಧಿಸುವ ಸಾಂಸ್ಕೃತಿಕ ಆರಕ್ಷಕರ ಕೈಂಕರ್‍ಯಗಳಿಗೂ ಒಂದು ವರ್ಗದ ಮಹಿಳೆಯರು ಬೆಂಬಲಿಸುವುದನ್ನು ಕಾಣಬಹುದು. ಇತ್ತೀಚಿನ ಮಂಗಳೂರು ಗಲಭೆಗಳಲ್ಲಿ ಇದು ಸ್ಪಷ್ಟವಾಗಿ ಗೋಚರಿಸಿತ್ತು. ಧರ್ಮ ನಿಷ್ಠೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಒಂದು ಭೌಗೋಳಿಕ ಕ್ಷೇತ್ರಕ್ಕೆ ಮತ್ತು ನಿರ್ದಿಷ್ಟ ಜನಸಮುದಾಯಗಳಿಗೆ ಸೀಮಿತಗೊಳಿಸುವ ಮೂಲಕ ಮಹಿಳೆಯರಲ್ಲಿ ಒಂದು ರೀತಿಯ ಭೀತಿಯನ್ನು ಸೃಷ್ಟಿಸುವುದರಲ್ಲೂ ಸಂಪ್ರದಾಯವಾದಿಗಳು, ಮೂಲಭೂತವಾದಿಗಳು ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಮಹಿಳೆಯರ ಚಲನವಲನಗಳ ಮೇಲೆ ಸದಾ ನಿಗಾ ವಹಿಸಲಾಗಿರುತ್ತದೆ.

ಮಹಿಳೆಯರಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಲ್ಪಮಟ್ಟದ ಅವಕಾಶ ನೀಡುತ್ತಲೇ ಅವರ ಸುತ್ತ ಸಂಸ್ಕೃತಿಯ ಬೇಲಿಯನ್ನು ನಿರ್ಮಿಸುವ ಯತ್ನ ಹಿಂದೂ ಸಮುದಾಯದಲ್ಲಿ ನಡೆಯುತ್ತಿದ್ದರೆ, ಮುಸ್ಲಿಂ ಸಮುದಾಯದಲ್ಲಿ ಧರ್ಮರಕ್ಷಣೆಯ ಬೇಲಿ ಮಹಿಳೆಯರನ್ನೂ ಇನ್ನೂ ಹೆಚ್ಚು ಅಂತರ್ಮುಖಿಗಳನ್ನಾಗಿ ಮಾಡಲಾಗುತ್ತಿದೆ. ಮಂಗಳೂರಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಅರಳುತ್ತಿರುವ ಎಳೆ ಮೊಗ್ಗುಗಳನ್ನೂ ಕಿವುಚಿ ಹಾಕಲಾಗುತ್ತಿದೆ. ಅನ್ಯ ಧರ್ಮೀಯರೊಡನೆ ಮಾತನಾಡುವುದೇ ಅಪರಾಧ ಎಂಬ ಕೂಗು ಕೇಳಿಬರುತ್ತಿದ್ದು, ಇದು ಮಹಿಳೆಯರಿಗೆ ಮಾತ್ರ ಮೀಸಲಾಗಿರುವುದು ವಿಡಂಬನೆಯಾದರೂ ಸತ್ಯ. ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂದು ಹಿಂದೂಗಳ ಧರ್ಮ ಗ್ರಂಥವಾದ ಮನುಸ್ಮೃತಿಯಲ್ಲಿ ಹೇಳಲಾಗಿದೆ. ಬಾಲ್ಯದಲ್ಲಿ ಸ್ತ್ರೀಯನ್ನು ತಂದೆ ರಕ್ಷಿಸುತ್ತಾನೆ, ಯೌವ್ವನದಲ್ಲಿ ಗಂಡನು ರಕ್ಷಿಸುತ್ತಾನೆ, ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ, ಆದ್ದರಿಂದ ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಹೇಳುವ ಈ ಶ್ಲೋಕಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡುವ ಮೂಲಕ ಸಮರ್ಥನೆಯನ್ನೂ ಒದಗಿಸುವ ಪಂಡಿತರು ಮಹಿಳೆಗೆ ರಕ್ಷಣೆ ಬೇಕೇ ಬೇಕು ಎಂದು ಅರ್ಥೈಸುತ್ತಾರೆ. ಸಮಕಾಲೀನ ಸಂದರ್ಭದಲ್ಲಿ ನೋಡಿದರೆ ಈ ಪಾರಂಪರಿಕ ಶ್ಲೋಕಕ್ಕೆ ಹುಟ್ಟಿನಿಂದ ಅಂತ್ಯದವರೆಗೂ ಮಹಿಳೆಯರು ಸಾಂಸ್ಕೃತಿಕ ಆರಕ್ಷಕರ ರಕ್ಷಣೆಯಲ್ಲಿರಬೇಕು ಎಂಬ ಸಾಲು ಸೇರ್ಪಡೆಯಾಗಬೇಕಾಗಿದೆ. ಸ್ತ್ರೀಯರನ್ನು ಪೂಜಿಸುವೆಡೆಯಲ್ಲಿ ದೇವತೆಗಳು ರಮಿಸುತ್ತಾರೆ ಎಂದು ಸಾರುವ ಈ ಧರ್ಮಭೂಮಿ(?)ಯಲ್ಲಿ ಭ್ರೂಣಾವಸ್ಥೆಯಲ್ಲೇ ಹಕ್ಕು ಚ್ಯುತಿ ಎದುರಿಸುವ ಏಕೈಕ ಚರಾಚರ ಜೀವಿ ಎಂದರೆ ಮಹಿಳೆ ಮಾತ್ರ !

ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಸಾವುಗಳು, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ, ಆಸಿಡ್ ಎರಚುವ ಪ್ರಕರಣಗಳು, ಇವುಗಳನ್ನು ಒಂದು ಗಂಭೀರ ಸಾಮಾಜಿಕ ಪಿಡುಗು ಎಂದು ಪರಿಗಣಿಸದೆ, ಕಾನೂನಿನ ಕಣ್ಣಿನಲ್ಲೇ ನೋಡುವ ಆಳುವ ವರ್ಗಗಳ ವೈಖರಿ ಈ ಸಂದರ್ಭದಲ್ಲಿ ಪ್ರಶ್ನಾರ್ಹವಾಗುತ್ತದೆ. ಹಲವು ದಿಕ್ಕುಗಳಲ್ಲಿ ಪಸರಿಸಿರುವ ಮಹಿಳಾ ಚಳುವಳಿಗಳು ಈ ಸಮಸ್ಯೆಗಳನ್ನು ನಾಗರಿಕ ಸಮಾಜದ ಗಮನಕ್ಕೆ ತರಲು ಹರಸಾಹಸ ಪಡುತ್ತಿದ್ದರೂ ನಾಗರಿಕ ಪ್ರಜ್ಞೆ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಖೇದಕರ. ಮಹಿಳಾ ಸಮುದಾಯವನ್ನು ತನ್ನ ಅಧಿಪತ್ಯದಲ್ಲಿರಿಸಿಕೊಳ್ಳಲು ಪುರುಷ ಸಮಾಜವು ಧರ್ಮ, ಜಾತಿ ಮತ್ತು ಸಂಸ್ಕೃತಿಯನ್ನು ಅಸ್ತ್ರಗಳನ್ನಾಗಿ ಬಳಸುತ್ತಿವೆ. ದೇಶದ ಇತರ ಚಳುವಳಿಗಳಂತೆಯೇ ವಿವಿಧ ಧೋರಣೆಗಳಲ್ಲಿ ಹರಿದು ಹಂಚಿಹೋಗಿರುವ ಮಹಿಳಾ ಚಳುವಳಿಗೆ ಈ ದಬ್ಬಾಳಿಕೆ ಮತ್ತು ಆಕ್ರಮಣವನ್ನು ಎದುರಿಸುವ ಹೊಸ ಆಯಾಮವನ್ನು ಒದಗಿಸುವುದು ತುರ್ತು ಅಗತ್ಯತೆಯಾಗಿದೆ. ಇಂದು ಮಹಿಳಾ ಚಳುವಳಿ ಕೇವಲ ಸಾಮಾಜಿಕ ಅವಕಾಶಗಳಿಗಾಗಿ ಅಥವಾ ಘನತೆಗಾಗಿ ಮಾತ್ರ ಹೋರಾಡಿದರೆ ಸಾಲದು. ಗ್ರಾಮೀಣ ಮಹಿಳೆಯರ, ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಹಾಗೂ ನಗರೀಕೃತ ಸುಶಿಕ್ಷಿತ ಮಹಿಳೆಯರ ವೈವಿಧ್ಯಮಯ ಸಮಸ್ಯೆಗಳನ್ನು ಒಟ್ಟಾರೆಯಾಗಿ ನೋಡುವ ದೂರದರ್ಶಿತ್ವ ಮಹಿಳಾ ಚಳುವಳಿಗೆ ಅವಶ್ಯವಾಗಿದೆ.

ಧರ್ಮಾಂಧತೆ, ಮತೀಯವಾದ, ಕೋಮುವಾದ, ಸಾಂಸ್ಕೃತಿಕ ಆಕ್ರಮಣ, ಜಾತಿ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಮಾನಹಾನಿ ಪ್ರಕರಣಗಳು ಹೀಗೆ ಹಲವಾರು ಮಜಲುಗಳಲ್ಲಿ ಮಹಿಳೆಯರ ಸಮಸ್ಯೆಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಇದರೊಟ್ಟಿಗೇ ಸಂಸ್ಕೃತಿ-ಪರಂಪರೆಗಳ ರಕ್ಷಣೆಗೆ ಮಹಿಳೆಯರನ್ನೇ ಮುಂಚೂಣಿಯಲ್ಲಿ ನಿಲ್ಲಿಸಿ ಶೋಷಣೆಗೊಳಪಡಿಸುವ ಧಾರ್ಮಿಕ ಶಕ್ತಿಗಳ ವಿರುದ್ಧವೂ ಸೆಣಸಬೇಕಾಗಿದೆ. ಮಹಿಳೆಯರ ಸಮಸ್ಯೆಗಳು ಅವರ ಸ್ವಯಂಕೃತ ಅಪರಾಧವಲ್ಲ, ಭಾರತೀಯ ಸಾಮಾಜಿಕ ಚೌಕಟ್ಟಿನೊಳಗೆ ಪಾರಂಪರಿಕವಾಗಿ ಪೋಷಿಸಲಾಗಿರುವ ವ್ಯವಸ್ಥೆಯ ಫಲ ಎಂಬ ಸತ್ಯಾಂಶವನ್ನು, ಸಂವೇದನಾ ರಹಿತ ನಾಗರಿಕ ಸಮಾಜಕ್ಕೆ ಕೂಗಿ ಹೇಳಬೇಕಾಗಿದೆ. ಖ್ಯಾತ ಬಂಗಾಲಿ ಲೇಖಕ ಶರತ್ ಚಂದ್ರ ಚಟರ್ಜಿಯವರು ಓ ಹೆಂಗಸರೇ, ನೀವು ಪೂರ್ವ ಜನ್ಮದಲ್ಲಿ ಯಾವ ಪಾಪ ಮಾಡಿದ್ದೀರೆಂದು, ಸಂವೇದನೆಯೇ ಇಲ್ಲದ ಪುರುಷರಿಂದ ತುಂಬಿದ ಈ ದೇಶದಲ್ಲಿ ಜನಿಸಿದ್ದೀರಿ ? ಎಂದು ಹೇಳಿದ್ದನ್ನು ಸ್ಮರಿಸುತ್ತಾ, ಅವರ ದಿವ್ಯವಾಣಿ ಶತಮಾನಗಳ ನಂತರವೂ ವಾಸ್ತವತೆಗೆ ಹತ್ತಿರವಾಗಿರುವುದನ್ನು ಗಮನಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಮಹಿಳಾ ಚಳುವಳಿಗಳು ಒಂದು ಹೊಸ ಆಯಾಮದತ್ತ ಮುನ್ನಡೆಯುವ ಸಂಕಲ್ಪ ಮಾಡಬೇಕಾಗಿದೆ.

ನಾ ದಿವಾಕರ