You are hereForums / ಸಾಮಾಜಿಕ ವಿಚಾರಗಳು / ಅರವತ್ತು ವರುಷಗಳ ಪಾಪಪ್ರಜ್ಞೆ

ಅರವತ್ತು ವರುಷಗಳ ಪಾಪಪ್ರಜ್ಞೆ


By DIVAKAR N - Posted on 25 February 2009

ಅರವತ್ತು ವರ್ಷಗಳ ಪಾಪ-ಪ್ರಜ್ಞೆ

ಎರಡನೇ ಮಹಾಯುದ್ಧದ ನಂತರದಲ್ಲಿ ಏಷ್ಯಾ ಮತ್ತು ಐರೋಪ್ಯ ಖಂಡಗಳಲ್ಲಿ ಅನೇಕ ರಾಷ್ಟ್ರಗಳು ವಸಾಹತು ಶಾಹಿಯ ಆಳ್ವಿಕೆಯಿಂದ ವಿಮೋಚನೆ ಹೊಂದಿದವು. ಸೋವಿಯತ್ ಸಂಘ ಮತ್ತು ಅಮೆರಿಕಾದ ನಡುವಣ ಏರ್ಪಟ್ಟಿದ್ದ ಶೀತಲ ಸಮರದ ಹಿನ್ನೆಲೆಯಲ್ಲಿ ಪ್ರಜಾತಾಂತ್ರಿಕ ಚಳುವಳಿಗಳು ವಿಶ್ವದಾದ್ಯಂತ ಯಶಸ್ಸು ಕಾಣುತ್ತಿದ್ದವು. ವಿವಿಧ ದೇಶಗಳ ದುಡಿಯುವ ಜನತೆ ಪ್ರಜಾತಾಂತ್ರಿಕ ಹೋರಾಟಗಳ ಮೂಲಕ ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಿ ಸ್ವಾತಂತ್ರ್ಯ ಗಳಿಸಿದ್ದು ಈ ಅವಧಿಯಲ್ಲೇ. ಆದರೆ ಇದೇ ಸಮಯದಲ್ಲಿ ಪ್ರಜಾತಂತ್ರದ ಸಿದ್ಧಾಂತವನ್ನೇ ಬುಡಮೇಲು ಮಾಡುವ ಐತಿಹಾಸಿಕ ಘಟನೆಯೂ ಜರುಗಿತ್ತು. ಎಲ್ಲೆಡೆ ಆಕ್ರಮಣಶಾಹಿ ಶಕ್ತಿಗಳು ಪ್ರಜಾ ಹೋರಾಟಗಳಿಗೆ ಮಣಿದು ತಮ್ಮ ಆಳ್ವಿಕೆಯನ್ನು ಅಂತ್ಯಗೊಳಿಸುತ್ತಿದ್ದ ಸಮಯದಲ್ಲೇ, ಅರಬ್ ಸಮುದಾಯದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದ ಪಾಲೆಸ್ಟೈನ್‌ನಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಒಂದು ಹೊಸ ಇತಿಹಾಸ ಬರೆಯುತ್ತಿದ್ದರು. ಪಾಲೆಸ್ಟೈನಿನ ಮೂಲ ನಿವಾಸಿಗಳನ್ನು ತಮ್ಮ ಜನ್ಮಸ್ಥಾನದಿಂದ ಉಚ್ಚಾಟಿಸಿ, ಬೇರೊಂದು ಸಂಸ್ಕೃತಿಯನ್ನು ಅವರ ಮೇಲೆ ಹೇರುವ ಹವಣಿಕೆಗೆ ಅಮೆರಿಕಾ ಮತ್ತು ಬ್ರಿಟನ್ ರಾಷ್ಟ್ರಗಳು ಸಜ್ಜಾಗುತ್ತಿದ್ದವು. ಈ ಘಟನೆಯ ಹಿನ್ನೆಲೆಯಲ್ಲೇ ಜಾಗತಿಕ ಭೂಪಟದಲ್ಲಿ ಅಸ್ತಿತ್ವವೇ ಇಲ್ಲದಿದ್ದ ಇಸ್ರೇಲ್ ಎಂಬ ರಾಷ್ಟ್ರ ಉದಯವಾಗಿತ್ತು. ವಿಶ್ವದ ಬಹುತೇಕ ರಾಷ್ಟ್ರಗಳು ತಮ್ಮ ವಿಮೋಚನೆಯನ್ನು ಆಚರಿಸುತ್ತಿರುವ ಸಮಯದಲ್ಲಿ ಪಾಲೆಸ್ಟೈನಿನ ಜನತೆ ಸ್ವಾತಂತ್ರ್ಯವನ್ನು ಕಳೆದುಕೊಂಡು ತಮ್ಮ ರಕ್ಷಣೆಗಾಗಿ ಹೋರಾಡುತ್ತಿದ್ದರು.

ಈ ಘಟನೆ ಸಂಭವಿಸಿದ ಮೇ ೧೪ ೧೯೪೮ ಜಾಗತಿಕ ಇತಿಹಾಸದ ಕರಾಳ ದಿನ. ಸಾಮ್ರಾಜ್ಯಶಾಹಿಗಳಿಗೆ ಈ ದಿನವೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ. ಏಕೆಂದರೆ ಈ ದಿನದಂದೇ ಜಗತ್ತಿನ ಭೂಪಟದಲ್ಲಿ ಇಸ್ರೇಲ್ ಎಂಬ ರಾಷ್ಟ್ರದ ಉದಯವಾಗಿತ್ತು. ಸಾಮ್ರಾಜ್ಯಶಾಹಿಗಳ, ವಸಾಹತುಶಾಹಿಗಳ ಆಳ್ವಿಕೆಯಿಂದ ವಿಮೋಚನೆ ಹೊಂದಿದ ರಾಷ್ಟ್ರವಾಗಿ ಇಸ್ರೇಲ್ ಉದಯಿಸಲಿಲ್ಲ. ಅಮೆರಿಕಾ ಮತ್ತು ಬ್ರಿಟನ್ ರಾಷ್ಟ್ರಗಳ ರಾಜಕೀಯ ಪಿತೂರಿಯಿಂದ ಸ್ಥಾಪಿತವಾದ ಇಸ್ರೇಲ್ ಎಂಬ ರಾಷ್ಟ್ರಕ್ಕೆ ತನ್ನದೇ ಆದ ಪರಂಪರೆಯಾಗಲೀ, ಸಂಸ್ಕೃತಿಯಾಗಲೀ ಅಗತ್ಯವಾಗಿರಲಿಲ್ಲ. ಪಾಲೆಸ್ಟೈನ್ ಪ್ರಾಂತ್ಯಗಳ ಮೇಲೆ ಬ್ರಿಟೀಷರ ಆಡಳಿತಾಧಿಕಾರ ಅಂತ್ಯವಾಗುತ್ತಿದ್ದಂತೆಯೇ, ಆಗಸ್ಟ್ ೧ ೧೯೪೮ರಂದು ಬ್ರಿಟೀಷ್ ಆಡಳಿತವು ಈ ಪ್ರಾಂತ್ಯದ ಶೇ. ೫೮ರಷ್ಟು ಭೂಪ್ರದೇಶವನ್ನು ಯಹೂದಿಗಳ ರಾಷ್ಟ್ರಕ್ಕೆ ಬಳುವಳಿಯಾಗಿ ನೀಡಿತ್ತು. ಆದರೆ ಈ ಸಂದರ್ಭದಲ್ಲಿ ಪಾಲೆಸ್ಟೈನಿನಲ್ಲಿ ಯಹೂದಿಗಳ ಜನಸಂಖ್ಯೆ ಆರು ಲಕ್ಷವಿದ್ದರೆ, ಪಾಲೆಸ್ಟೈನಿಯರ ಸಂಖ್ಯೆ ೧೨ ಲಕ್ಷಕ್ಕೂ ಹೆಚ್ಚಾಗಿತ್ತು. ೧೯೨೨ರ ಜನಗಣತಿಯ ಪ್ರಕಾರ ಪಾಲೆಸ್ಟೈನ್ ರಾಷ್ಟ್ರದಲ್ಲಿ ಮುಸ್ಲಿಮರು ಶೇ. ೭೮, ಯಹೂದಿಗಳು ಶೇ. ೧೧ ಮತ್ತು ಕ್ರೈಸ್ತರು ಶೇ. ೯.೬ರಷ್ಟಿದ್ದರು. ೧೯೪೫ರ ವೇಳೆಗೆ ಯಹೂದಿಗಳ ಸಂಖ್ಯೆ ಶೇ. ೩೧ರಷ್ಟಾಗಿತ್ತು.

ಇಸ್ರೇಲ್‌ನ ಸ್ಥಾಪನೆಯ ಎರಡು ತಿಂಗಳ ಮುನ್ನ ಮಾರ್ಚಿ ೧೦ ೧೯೪೮ರಂದು ತಮ್ಮ ಅಂತಿಮ ಯೋಜನೆಯನ್ನು ರೂಪಿಸಲು ಡೇವಿಡ್ ಬೆನ್ ಗುರಿಯನ್ ನೇತೃತ್ವದಲ್ಲಿ ಸೇರಿದ್ದ ಸಭೆಯಲ್ಲಿ ಪಾಲೆಸ್ಟೈನಿಯರ ಜನಾಂಗವನ್ನೇ ನಿರ್ಣಾಮ ಮಾಡುವ ಪ್ಲಾನ್ ಡಲೆಟ್ ಎಂಬ ತಂತ್ರವನ್ನು ರೂಪಿಸಲಾಗಿತ್ತು. ೧೯೩೦ರಲ್ಲೇ ಪ್ರಾರಂಭವಾಗಿದ್ದ, ನ್ಯಾಷನಲ್ ಮಿಲಿಟರಿ ಸಂಘಟನೆ ಮತ್ತು ಸ್ಟರ್ನ್ ಗುಂಪು ಮುಂತಾದ ಯಹೂದಿಗಳ ಉಗ್ರಗಾಮಿ ತಂಡಗಳ ಕಾರ್ಯಾಚರಣೆಯನ್ನು ತೀವ್ರಗೊಳಿಸಿ, ಈ ಕಾರ್ಯವನ್ನು ಸಾಧಿಸಲು ತೀರ್ಮಾನಿಸಲಾಯಿತು. ಈ ಯೋಜನೆಯ ಪ್ರಕಾರ ಪಾಲೆಸ್ಟೈನಿಯರು ವಾಸಿಸುವ ನಗರಗಳ, ಗ್ರಾಮಗಳ ಮೇಲೆ ಬಾಂಬ್ ದಾಳಿ ನಡೆಸಲಾಯಿತು. ಲಕ್ಷಾಂತರ ಜನರನ್ನು ಉಚ್ಚಾಟಿಸಲಾಯಿತು. ಇಸ್ರೇಲನ್ನು ಬಹಳ ವರ್ಷಗಳ ಕಾಲ ಆಳಿದ ಪ್ರಥಮ ಪ್ರಧಾನಿ ಬೆನ್‌ಗುರಿಯನ್ ೧೯೩೭ರಲ್ಲೇ ಅರಬ್ಬರು ಎಂದಾದರೂ ಈ ಪ್ರದೇಶದಿಂದ ನಿರ್ಗಮಿಸಲೇ ಬೇಕು, ಅದಕ್ಕೆ ಸದವಕಾಶಗಳು ಯುದ್ಧದ ರೂಪದಲ್ಲಿ ಒದಗಿಬರಬೇಕು ಎಂದು ಹೇಳಿದ್ದರು.

ಬೆನ್ ಗುರಿಯನ್ ನೇತೃತ್ವದಲ್ಲೇ ನಡೆದ ಪಾಲೆಸ್ಟೈನಿಯರ ವಿರುದ್ಧದ ಆಕ್ರಮಣಗಳು ಅಷ್ಟೇ ಪ್ರಳಯಾಂತಕವಾಗಿದ್ದವು. ಪ್ರತಿಯೊಂದು ದಾಳಿಯೂ ಪಾಲೆಸ್ಟೈನಿಯರ ಹತ್ಯೆಯಲ್ಲಿ, ವಿನಾಶದಲ್ಲಿ, ಉಚ್ಚಾಟನೆಯಲ್ಲಿ ಕೊನೆಗೊಂಡು ಅವರ ಪ್ರದೇಶಗಳನ್ನು ಯಹೂದಿಗಳು ಆಕ್ರಮಿಸಿಕೊಳ್ಳಬೇಕು ಎಂಬ ಗುರಿಯನ್ ಅವರ ಆದೇಶದಂತೆಯೇ ಹತ್ಯಾಕಾಂಡಗಳು ಸಂಭವಿಸಿದವು. ಮೇ ೧೫ ೧೯೪೮ರಂದು ಪ್ರಾರಂಭವಾದ ನಖ್ಬ (ಮಹಾದುರಂತ) ಅವ್ಯಾಹತವಾಗಿ, ನಿರ್ಭಯವಾಗಿ ಮುಂದುವರೆದಿತ್ತು. ಟೆಲ್ ಅವಿವ್, ಹೈಫ, ಜೆರುಸೆಲಮ್ ಮತ್ತಿತರ ಪ್ರದೇಶಗಳಲ್ಲಿ ನಡೆದ ಮಾರಣಾಂತಿಕ ಆಕ್ರಮಣಗಳಿಂದ ಇಡೀ ಗ್ರಾಮಗಳೇ ನಿರ್ಜನವಾದವು. ಇದಕ್ಕೂ ಮುನ್ನ ಏಪ್ರಿಲ್ ೯ರಂದು ಸ್ಟರ್ನ್ ಗುಂಪಿನ ಉಗ್ರಗಾಮಿಗಳು ಜೆರುಸೆಲಮ್‌ನ ಗ್ರಾಮದ ಮೇಲೆ ದಾಳಿ ಮಾಡಿ ಒಂದೇ ರಾತ್ರಿ ೨೦೦ ಮಂದಿಯನ್ನು ಹತ್ಯೆ ಮಾಡಿದ್ದರು. ೩೦೦ಕ್ಕೂ ಹೆಚ್ಚು ಗ್ರಾಮಗಳನ್ನು ಖಾಲಿ ಮಾಡಲಾಯಿತು. ಸಾವಿರಾರು ಜನರನ್ನು ಬಲಾತ್ಕಾರದಿಂದ ಉಚ್ಚಾಟಿಸಲಾಯಿತು. ಲಕ್ಷಾಂತರ ಪಾಲೆಸ್ಟೈನಿಯರ ಹತ್ಯೆಗೈಯಲಾಯಿತು. ೮ ಲಕ್ಷ ಜನ ನಿರಾಶ್ರಿತರಾದರು. ಕೆಲವರು ಜೋರ್ಡಾನ್ ಆಡಳಿತದಲ್ಲಿದ್ದ ಪಶ್ಚಿಮ ದಂಡೆ (ವೆಸ್ಟ್ ಬ್ಯಾಂಕ್)ಗೆ ವಲಸೆ ಹೋದರು. ಇನ್ನು ಕೆಲವರು ಲೆಬನಾನಿಗೆ, ಈಜಿಪ್ಟ್ ಆಡಳಿತದ ಗಾಝಾ ಪ್ರದೇಶಕ್ಕೆ ವಲಸೆ ಹೋದರು. ಸಾವಿರಾರು ಜನ ಪಶ್ಚಿಮ ಏಷ್ಯಾದಲ್ಲಿ ಹಂಚಿಹೋದರು. ಈ ಹಂತದಲ್ಲೇ ಹಲವಾರು ಸಮುದಾಯದ ನಾಯಕರನ್ನು ಮರಣದಂಡನೆಗೆ ಗುರಿಮಾಡಲಾಯಿತು. ಅರಬ್ಬರ ಗ್ರಾಮಗಳಿದ್ದೆಡೆಯಲ್ಲಿ ಯಹೂದಿಗಳ ಗ್ರಾಮಗಳ ನಿರ್ಮಾಣವಾದವು. ಈ ರೀತಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳ ಸಾಮೂಹಿಕ ಉಚ್ಚಾಟನೆಯ ಮೂಲಕವೇ ೬೦ ವರ್ಷಗಳ ಹಿಂದೆ ಇಸ್ರೇಲ್ ಎಂಬ ರಾಷ್ಟ್ರ ಉದಯಿಸಿತ್ತು.

ಈ ಪ್ರಳಯಾಂತಕ ಸಂದರ್ಭವನ್ನು ಸ್ವತಂತ್ರ ಸಂಗ್ರಾಮವೆಂದು ಯಹೂದಿಗಳು ಸಂಭ್ರಮದಿಂದ ಆಚರಿಸಿದರೆ, ಪಾಲೆಸ್ಟೈನಿಯರು ಮಹಾದುರಂತವೆಂದು ಶೋಕಾಚರಣೆ ನಡೆಸುತ್ತಾರೆ. ೧೯೪೭ರಲ್ಲಿ ಸಂಯುಕ್ತ ರಾಷ್ಟ್ರಗಳ ಸಂಸ್ಥೆಯು ಪಾಲೆಸ್ಟೈನ್ ರಾಷ್ಟ್ರವನ್ನು ಅರಬ್ ಮತ್ತು ಯಹೂದಿ ರಾಷ್ಟ್ರಗಳಾಗಿ ವಿಭಜಿಸಲು ನೀಡಿದ್ದ ನಿರ್ಣಯವನ್ನು ಎಲ್ಲ ಅರಬ್ ರಾಷ್ಟ್ರಗಳೂ ತಿರಸ್ಕರಿಸಿದ್ದವು. ಯಹೂದಿಗಳ ಆಕ್ರಮಣವನ್ನು ಎದುರಿಸಲು ಸಜ್ಜಾಗಿದ್ದ ಅರಬ್ ಸೇನೆಗಳು ಜೆರುಸೆಲಮ್ ನಗರದ ಸುತ್ತ ಬೀಡುಬಿಟ್ಟಿದ್ದವು. ನಗರದಲ್ಲಿ ಯಹೂದಿಗಳು ಆಕ್ರಮಿಸಿಕೊಂಡಿದ್ದ ಪ್ರಾಂತ್ಯವನ್ನು ಹಲವು ತಿಂಗಳುಗಳ ಕಾಲ ಅರಬ್ ಸೈನಿಕರು ಸುತ್ತುವರೆದಿದ್ದರು. ಯುದ್ಧದ ಪ್ರಥಮ ಹಂತದಲ್ಲಿ, ಯುದ್ಧ ವಿರಾಮ ಘೋಷಿಸುವವರೆಗೂ ಅರಬ್ ಸೇನೆಗಳು ಮೇಲುಗೈ ಸಾಧಿಸಿದ್ದವು. ಆದರೆ ನಂತರದ ಯುದ್ಧದಲ್ಲಿ ಅಮೆರಿಕಾ ಮತ್ತು ಬ್ರಿಟನ್‌ನ ಸಹಾಯದಿಂದ ಯಹೂದಿಗಳು ಅನೇಕ ಅರಬ್ ಪ್ರದೇಶಗಳನ್ನೂ ಆಕ್ರಮಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ೧೯೩೦-೪೦ರ ದಶಕದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿ ಯಹೂದಿಗಳ ವಿರುದ್ಧ ನಡೆದ ನರಮೇಧದ ಹಿನ್ನೆಲೆಯಲ್ಲಿ ಯಹೂದಿ ರಾಷ್ಟ್ರ ನಿರ್ಮಾಣಕ್ಕಾಗಿ ಎಂತಹುದೇ ಸಾಹಸಕ್ಕೂ ಸಿದ್ಧರಾಗಿದ್ದ ಯಹೂದಿ ನಾಯಕರಿಗೆ ತಮ್ಮ ಜನಾಂಗವು ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಅರಬ್ಬರ ವಿರುದ್ಧ ಆಕ್ರಮಣ ನಡೆಸಲು ಪ್ರೇರೇಪಣೆಯಾಗಿದ್ದವು. ಎರಡನೇ ಮಹಾಯುದ್ಧದಲ್ಲಿ ಸಂಭವಿಸಿದ ಸಾವು ನೋವುಗಳು ಪಾಲೆಸ್ಟೈನಿಯರ ದುರಂತಗಳನ್ನು ಮರೆಮಾಡುವ ಪರದೆಗಳಾಗಿದ್ದವು. ಇಡೀ ಪಾಶ್ಚಿಮಾತ್ಯ ರಾಷ್ಟ್ರಗಳ ಮಾಧ್ಯಮಗಳಲ್ಲಿ ತಮ್ಮ ಪವಿತ್ರ ಸ್ಥಾನಕ್ಕೆ ಇಸ್ರೇಲಿಯರ ಪುನರಾಗಮನವೇ ಮಹತ್ವದ ಸುದ್ದಿಯಾಗಿತ್ತು.

ಪಾಲೆಸ್ಟೈನ್‌ನಲ್ಲಿ ವಾಸವಾಗಿದ್ದ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳನ್ನು ನಿಷ್ಕಾರುಣ್ಯವಾಗಿ ಉಚ್ಚಾಟಿಸಿ , ಸ್ಫಾಪಿಸಲಾದ ಯಹೂದಿಗಳ ಇಸ್ರೇಲ್ ಸಾಮ್ರಾಜ್ಯ ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡು ವಿಶ್ವ ಮಾನ್ಯತೆ ಪಡೆದ ನಂತರದಲ್ಲಿ ಜನಾಂಗೀಯ ಹತ್ಯೆಯನ್ನು ನಿಲ್ಲಿಸಲಾಯಿತಾದರೂ, ಅಲ್ಪಸಂಖ್ಯಾತರಾಗಿ ಪರಿವರ್ತಿತರಾಗಿದ್ದ ಉಳಿದ ಪಾಲೆಸ್ಟೈನಿಯರ ಶೋಷಣೆಯನ್ನು ಅವ್ಯಾಹತವಾಗಿ ಮುಂದುವರೆಸಿಕೊಂಡು ಹೋಗಿತ್ತು. ೧೯೪೮ರಲ್ಲಿ ನಡೆದ ಪ್ರಥಮ ಇಸ್ರೇಲ್-ಅರಬ್ಬರ ಯುದ್ಧದಲ್ಲಿ ಅಮೆರಿಕಾ ಮತ್ತು ಬ್ರಿಟನ್‌ಗಳ ನೆರವಿನಿಂದ ಗೆಲುವು ಸಾಧಿಸಿದ ಇಸ್ರೇಲ್‌ನ ಆಳುವ ವರ್ಗಗಳು ಅಲ್ಲಿಯೇ ಉಳಿದಿದ್ದ ೨ ಲಕ್ಷಕ್ಕೂ ಹೆಚ್ಚು ಅರಬ್ಬರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಲಾರಂಭಿಸಿತ್ತು. ಅವರ ಅನೇಕ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಯಹೂದಿಗಳು ಇತರ ಧರ್ಮದ ಜನರಿಗೆ ಯಾವುದೇ ಸ್ಥಿರಾಸ್ತಿಗಳನ್ನು ಮಾರುವುದಾಗಲೀ, ಕೊಳ್ಳುವುದಾಗಲೀ ಮಾಡುವಂತಿಲ್ಲ ಎಂಬ ನಿರ್ಬಂಧ ಹೇರಲಾಗಿತ್ತು. ೧೯೪೮ರ ಯುದ್ಧದಲ್ಲಿ ಅರೆ ಮನಸ್ಸಿನಿಂದಲೇ ಪಾಲೆಸ್ಟೈನಿಯರ ಬೆಂಬಲಕ್ಕೆ ನಿಂತ ಜೋರ್ಡಾನ್‌ನಂತಹ ಬಲಿಷ್ಠ ಅರಬ್ ರಾಷ್ಟ್ರಗಳು ಬ್ರಿಟಿಷರಿಂದ ಗಾಝಾ ಪ್ರದೇಶವನ್ನು ಬಳುವಳಿಯಾಗಿ ಪಡೆದ ನಂತರ ಪಾಲೆಸ್ಟೈನಿಯರಿಗಿದ್ದ ನೈತಿಕ-ಸೇನಾ ಬೆಂಬಲವೂ ಕ್ಷೀಣಿಸಿತ್ತು. ೬೦ ವರ್ಷಗಳ ನಂತರ ಇಂದಿಗೂ ಶೇ ೨೫ರಷ್ಟು ಪಾಲೆಸ್ಟೈನಿಯರು ನಿರಾಶ್ರಿತರಾಗಿರುವುದು ಕಂಡುಬರುತ್ತದೆ. ವಿಶ್ವ ಸಂಸ್ಥೆಯ ಅನೇಕ ಆಶ್ವಾಸನೆಗಳ ಹೊರತಾಗಿಯೂ ಪಾಲೆಸ್ಟೈನಿಯರು ತಮ್ಮ ಮೂಲ ಸ್ಥಾನಕ್ಕೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ.

ಒಂದು ಸಂದರ್ಭದಲ್ಲಿ ಅಮೆರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರು ಪಾಲೆಸ್ಟೈನಿಯರ ಬವಣೆಯನ್ನು ಆಫ್ರಿಕದ ವರ್ಣಬೇಧ ನೀತಿಗೆ ಹೋಲಿಸಿದ್ದರು. ಅವರ ಈ ಪ್ರತಿಪಾದನೆಗೆ ಕಾರಣಗಳೂ ಇದ್ದವು. ಇಸ್ರೇಲ್‌ನಲ್ಲಿ ಪಾಲೆಸ್ಟೈನಿಯರನ್ನು ದೂರವಿಡಲು ಅಡ್ಡಗೋಡೆಗಳನ್ನು ನಿರ್ಮಿಸಲಾಗಿದೆ. ಯಹೂದಿಗಳು ಓಡಾಡಲು ಪ್ರತ್ಯೇಕ ರಸ್ತೆಗಳೂ ಇವೆ. ಆಫ್ರಿಕಾದಲ್ಲಿ ವರ್ಣಬೇಧ ನೀತಿ ಜಾರಿಯಲ್ಲಿದ್ದಾಗ ಕರಿಯರಿಗಾಗಿ ನಿರ್ಮಿಸಲಾಗುತ್ತಿದ್ದ ಪ್ರತ್ಯೇಕ ವಾಸಸ್ಥಾನಗಳನ್ನು ಇಸ್ರೇಲಿನಲ್ಲಿ ಪಾಲೆಸ್ಟೈನಿಯರಿಗೆ ನಿರ್ಮಿಸಲಾಗಿದೆ. ಅದನ್ನು ಬಂಟುಸ್ಥಾನ್ ಎಂದು ಕರೆಯಲಾಗುತ್ತದೆ. ಯಾವುದೇ ಮೂಲಭೂತ ನಾಗರಿಕ ಸೌಲಭ್ಯಗಳಿಲ್ಲದ ಈ ಪ್ರದೇಶಗಳಲ್ಲಿ ವಾಸಿಸುವುದು ಕಠೋರ ಶಿಕ್ಷೆಯೇ ಸರಿ.

ಅಮೆರಿಕಾದ ಪ್ರೋತ್ಸಾಹದಿಂದ ಇಸ್ರೇಲಿ ಸರ್ಕಾರವು ಗಾಝಾ ಪ್ರದೇಶವನ್ನು ಬಹುತೇಕ ಹೊರಾಂಗಣ ಕಾರಾಗೃಹವನ್ನಾಗಿ ಪರಿವರ್ತಿಸಿದ್ದು, ಮಿಲಿಟರಿ ತಾಲೀಮು ನಡೆಸಲಾಗುತ್ತಿದೆ. ಇಲ್ಲಿ ವಾಸಿಸುವ ಹದಿನೈದು ಲಕ್ಷಕ್ಕೂ ಹೆಚ್ಚು ಜನರ ಜೀವನ ಖೈದಿಗಳ ಜೀವನಕ್ಕಿಂತಲೂ ದುಸ್ತರವಾಗಿದ್ದು ಹಸಿವು ದಾರಿದ್ರ್ಯತೆ ಇಲ್ಲಿ ತಾಂಡವಾಡುತ್ತಿರುತ್ತದೆ. ಇಲ್ಲಿ ನೆಲೆಸಿರುವವರಲ್ಲಿ ಶೇ. ೮೦ಕ್ಕೂ ಹೆಚ್ಚು ಜನ ತಮ್ಮ ಮೂಲಸ್ಥಾನದಿಂದ ಉಚ್ಛಾಟಿಸಲ್ಪಟ್ಟವರಾಗಿದ್ದಾರೆ. ಇಸ್ರೇಲಿನಲ್ಲಿರುವವರು ತ್ಯಾಜ್ಯ ವಸ್ತುಗಳನ್ನು ಮತ್ತು ಗಟಾರದ ಕೊಳಚೆಯನ್ನು ಗಾಝಾ ಪ್ರದೇಶಕ್ಕೆ ಹರಿಯಬಿಡುವುದರಿಂದ ಇಲ್ಲಿನ ಭೂಜಲ ಕಲುಷಿತವಾಗಿದೆ. ಇದರ ದುರಸ್ತಿಗಾಗಿ ಸಿಮೆಂಟ್ ಮತ್ತು ಪೈಪುಗಳನ್ನು ಸರಬರಾಜು ಮಾಡಲು ಇಸ್ರೇಲ್ ಸರ್ಕಾರ ನಿರಾಕರಿಸುತ್ತದೆ. ಸೆಪ್ಟೆಂಬರ್ ೨೦೦೦ ದಲ್ಲಿ ಪಾಲೆಸ್ಟೈನಿಯರ ಎರಡನೆ ದಂಗೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ೯೦೦ ಮಕ್ಕಳೂ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಪಾಲೆಸ್ಟೈನಿಯರು ಇಸ್ರೇಲಿ ಸೈನಿಕರಿಂದ ಹತ್ಯೆಗೀಡಾಗಿದ್ದಾರೆ. ೧೯೬೭ರ ನಂತರದ ಅವಧಿಯಲ್ಲಿ ಇಸ್ರೇಲಿನ ಸೇನೆಗಳು ೧೮ ಸಾವಿರಕ್ಕೂ ಪಾಲೆಸ್ಟೈನಿಯರ ಮನೆಗಳನ್ನು ಧ್ವಂಸ ಮಾಡಿದ್ದು, ೭ ಲಕ್ಷಕ್ಕೂ ಹೆಚ್ಚು ಜನರನ್ನು ದಸ್ತಗಿರಿ ಮಾಡಿದೆ. ಇಂದಿಗೂ ಇಸ್ರೇಲ್‌ನ ಬಂದಿಖಾನೆಗಳಲ್ಲಿ ೨೦ ಸಾವಿರ ಪಾಲೆಸ್ಟೈನಿಯರು ಕೊಳೆಯುತ್ತಿದ್ದಾರೆ.

ಯಾವುದೇ ಸಂಭ್ರಮವನ್ನು ಆಚರಿಸುವ ಮುನ್ನ ಗಟ್ಟಿಯಾಗಿ ರೋದಿಸಿ ಗೋಳಾಡುವುದು ಯಹೂದಿ ಸಂಸ್ಕೃತಿಯ ವೈಶಿಷ್ಟ್ಯ. ಈಗಲೂ ಇದನ್ನು ಅನುಸರಿಸಲಾಗುತ್ತದೆ. ಯಹೂದಿಗಳ ವಿವಾಹ ಸಂದರ್ಭಗಳಲ್ಲೂ ವರ ಗಾಜನ್ನು ತುಳಿಯುವುದು ಸಂಪ್ರದಾಯವಾಗಿ ಬೆಳೆದುಬಂದಿದೆ. ಪ್ರತಿ ವರ್ಷ ಸ್ವತಂತ್ರ ದಿನಾಚರಣೆಯ ಮುನ್ನಾದಿನ ೧೯೪೮ರ ಯುದ್ಧದಲ್ಲಿ ಮಡಿದವರನ್ನು ನೆನೆಯುವ ನಿಟ್ಟಿನಲ್ಲಿ ಶೋಕಾಚರಣೆ ಆಚರಿಸಲಾಗುತ್ತದೆ. ಎಲ್ಲ ವಾಹನಗಳೂ ಸ್ಥಗಿತಗೊಳ್ಳುತ್ತವೆ. ಜನರೂ ನಿಂತಲ್ಲೇ ನಿಲ್ಲುತ್ತಾರೆ. ೨೪ ಗಂಟೆಗಳ ಕಾಲ ಎಲ್ಲ ಮನರಂಜನಾ ಕಾರ್ಯಕ್ರಮಗಳೂ ರದ್ದಾಗುತ್ತವೆ. ಸೈರನ್ನುಗಳ ಮೂಲಕ ಸೂಚನೆಯನ್ನು ನೀಡಿದ ನಂತರವೇ ಶೋಕಾಚರಣೆಯನ್ನು ಅಂತ್ಯಗೊಳಿಸಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಸ್ರೇಲಿಯರ ದೇಶಭಕ್ತಿ iತ್ತು ಸ್ವಾಭಿಮಾನ ಪರಾಕಾಷ್ಠೆಯನ್ನು ತಲುಪುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಯಹೂದಿಯೂ ತನ್ನ ದೇಶದ ಬಗ್ಗೆ ಹೆಮ್ಮೆಯಿಂದ ಬೀಗುತ್ತಾನೆ.

ಹಿರಿಯ ನಾಗರಿಕರು ತಮ್ಮ ಕಾಲದ ಸುಮಧುರ ಕ್ಷಣಗಳನ್ನು ನೆನೆದು ವಾಸ್ತವ ಸನ್ನಿವೇಶದ ಬಗ್ಗೆ ಪರಿತಪಿಸುತ್ತಾರೆ. ಸ್ವಾತಂತ್ರ್ಯಾನಂತರದ ಪ್ರಾರಂಭಿಕ ಹಂತದಲ್ಲಿ ಇಸ್ರೇಲಿನ ನಾಯಕರಲ್ಲಿ ಕಂಡುಬರುತ್ತಿದ್ದ ನಿಷ್ಠೆ, ವಿಶ್ವಾಸ, ಸತ್ಯ ಸಂಧತೆ ಎಲ್ಲವೂ ಈಗ ಮಾಯವಾಗಿದೆ ಎಂದು ಹಲುಬುತ್ತಾರೆ. ಆದರೂ ಒಮ್ಮೆಯಾದರೂ ತಮ್ಮ ಸ್ವಂತ ನೆಲದಲ್ಲೇ ನಿರಾಶ್ರಿತರಾಗಿ ಬಾಳುತ್ತಿರುವ ಪಾಲೆಸ್ಟೈನ್ ಅರಬ್ಬರ ದುಸ್ಥಿತಿಯ ಬಗ್ಗೆ ಚಕಾರ ಎತ್ತುವುದಿಲ್ಲ. ಪಾಲೆಸ್ಟೈನಿನ ಜನತೆಯ ದುಃಖ ದುಮ್ಮಾನಗಳು, ಕಷ್ಟ ವ್ಯಸನಗಳು, ಪ್ರಜಾತಂತ್ರ ಮತ್ತು ಸಮಾನತೆ ಎಂಬ ಪದಪುಂಜಗಳ ಹಿಂದೆ ಮರೆಯಾಗಿಬಿಟ್ಟಿರುತ್ತವೆ. ಯಹೂದಿಗಳ ದೃಷ್ಟಿಯಲ್ಲಿ ನಿಷ್ಟಾವಂತರೂ, ಸತ್ಯಸಂಧರೂ ಆಗಿದ್ದ ಇಸ್ರೇಲಿ ನಾಯಕರು, ಪಾಲೆಸ್ಟೈನಿಯರ ಪಾಲಿಗೆ ಯಮದೂತರಾಗಿದ್ದುದು ೧೯೫೬ರ ಇಸ್ರೇಲ್-ಇಜಿಪ್ಟ್ ಯುದ್ಧದಲ್ಲೇ ನಿರೂಪಿತವಾಗಿತ್ತು. ಸೂಯಜ್ ಕಾಲುವೆಯನ್ನು ವಶಪಡಿಸಿಕೊಳ್ಳುವ ಉದ್ದೇಶದಿಂದ ಇಜಿಪ್ಟ್ ಮೇಲೆ ಆಕ್ರಮಣ ಮಾಡಿ ಅಬ್ದೆಲ್ ನಾಸೆರ್ ಸರ್ಕಾರವನ್ನು ಉರುಳಿಸಲು, ಫ್ರಾನ್ಸ್ ಮತ್ತು ಬ್ರಿಟನ್ ನೆರವಿನೊಂದಿಗೆ ಸಂಚು ಹೂಡಿದ್ದ ಇಸ್ರೇಲ್ ಈ ಯುದ್ಧದ ಸಮಯದಲ್ಲೇ ಇಸ್ರೇಲಿನ ಸೇನೆಯ ಒಂದು ತುಕಡಿ ಕೇಂದ್ರ ಭಾಗದಲ್ಲಿದ್ದ ಕಾಫ್‌ರ್ ಕಸ್ಸೆಮ್ ಪ್ರಾಂತ್ಯದ ಮೇಲೆ ಹಲ್ಲೆ ನಡೆಸಿ ಗ್ರಾಮದಲ್ಲಿದ್ದ ಎಲ್ಲ ಪಾಲೆಸ್ಟೈನಿಯರನ್ನೂ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ಹಲವು ಸೈನಿಕರು ಅಪರಾಧಿಗಳೆಂದು ಸಾಬೀತಾದರೂ, ಶಿಕ್ಷೆಗೊಳಗಾಗಲಿಲ್ಲ. ಅರಬ್ ಪ್ರಜೆಗಳ ಜೀವಕ್ಕೆ ಇಸ್ರೇಲಿ ಆಡಳಿತದಲ್ಲಿ ಯಾವುದೇ ಮೌಲ್ಯವಿರಲಿಲ್ಲ. ಈ ಸಂಸ್ಕೃತಿ ಇಂದಿಗೂ ಪ್ರಚಲಿತವಾಗಿದೆ. ೬೦ನೆಯ ಸ್ವತಂತ್ರ ದಿನಾಚರಣೆಯ ಸಂದರ್ಭದಲ್ಲೂ ಸಹ ಆಕ್ರಮಿತ ಪ್ರದೇಶಗಳ ಸುತ್ತ ಬೇಲಿ ನಿರ್ಮಿಸಿ ಪಾಲೆಸ್ಟೈನಿಯರನ್ನು ನಿರ್ಬಂಧಿಸಲಾಗಿತ್ತು.

ಆದರೆ ಪಾಲೆಸ್ಟೈನಿಯರ ಅವಿರತ ಪರಿಶ್ರಮ ಮತ್ತು ಹೋರಾಟಗಳ ಪರಿಣಾಮವಾಗಿ ಪಾಲೆಸ್ಟೈನ್ ಹೋರಾಟ ಒಂದು ಪ್ರಮುಖ ಹಂತಕ್ಕೆ ತಲುಪಿದೆ. ಯಾಸೆರ್ ಅರಾಫತ್, ಜಾರ್ಜ್ ಹಬಾಷ್ ಮುಂತಾದ ನಾಯಕರ ವೀರೊಚಿತ ಹೋರಾಟಗಳಿಗೆ ಮಣಿದ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಪಾಲೆಸ್ಟೈನಿಯರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗಾದರೂ ಶ್ರಮವಹಿಸುತ್ತಿದ್ದಾರೆ. ಇಸ್ರೇಲಿನ ಜನತೆ ತಮ್ಮ ಯಹೂದಿ ರಾಷ್ಟ್ರದ ಉಳಿವಿನ ಬಗ್ಗೆ ಮುಂಚಿನಷ್ಟು ಭರವಸೆ ಹೊಂದಿಲ್ಲದಿರುವುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ. ಇಸ್ರೇಲಿನ ರಾಜಕೀಯ ವಿಶ್ಲೇಷಕ ನಹೋಂ ಬ್ರೂನಿಯವರ ಅಭಿಪ್ರಾಯದಲ್ಲಿ ಇಸ್ರೇಲಿನ ಮಿಲಿಟರಿ ಸಾಮರ್ಥ್ಯ ಮತ್ತು ಆರ್ಥಿಕ ಸಾಮರ್ಥ್ಯಗಳು ಉತ್ಪ್ರೇಕ್ಷಿತವಾದದ್ದು. ಇಸ್ರೇಲಿ ಜನತೆಯೂ ಸಹ ದೇಶದಲ್ಲಿನ ಭ್ರಷ್ಟಾಚಾರ, ಅಸಮಾನತೆ, ದಾರಿದ್ರ್ಯತೆಗಳಿಂದ ಭ್ರಮನಿರಸನರಾಗಿರುವುದು ಅಲ್ಲಲ್ಲಿ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ತಮ್ಮ ಮೂಲಸ್ಥಾನಕ್ಕಾಗಿ ವಿಮೋಚನಾ ಹೋರಾಟದಲ್ಲಿ ತೊಡಗಿರುವ ಪಾಲೆಸ್ಟೈನಿಯರ ಸ್ಥೈರ್ಯ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಮಾಸ್ ಪಡೆಗಳು ಈಗಾಗಲೇ ಕೆಲವು ಪ್ರಾಂತ್ಯಗಳಲ್ಲಿ ಆಳ್ವಿಕೆ ನಡೆಸುತ್ತಿವೆ. ಇಸ್ರೇಲಿನಿಂದ ಹೊರಗುಳಿದಿರುವ ಯಹೂದಿಗಳು ತಮ್ಮ ಸ್ವದೇಶಕ್ಕೆ ಮರಳಲು ಅನುಮಾನಿಸುತ್ತಿರುವುದೂ ಕಂಡುಬರುತ್ತಿದೆ. ಸೋವಿಯತ್ ಪತನದ ನಂತರ ಇಸ್ರೇಲಿಗೆ ಬಂದ ರಷ್ಯನ್ನರು, ಶೇ. ೨೦ರಷ್ಟು, ಈಗ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ವಲಸೆ ಹೋಗಲಾರಂಭಿಸಿದ್ದಾರೆ.

ಮತ್ತೊಂದೆಡೆ ಪಾಲೆಸ್ಟೈನ್ ವಿಮೋಚನೆಗಾಗಿ ಹೋರಾಡುತ್ತಿರುವ ಸಂಘಟನೆಗಳು ಪಾಲೆಸ್ಟೈನ್ ಏಕ ರಾಷ್ಟ್ರ ವೇದಿಕೆ ಯನ್ನು ಪ್ರಾರಂಭಿಸಿದ್ದು, ಒಂದೇ ರಾಷ್ಟ್ರದ ಸ್ಥಾಪನೆಗೆ ಪಣ ತೊಟ್ಟು ನಿಂತಿವೆ. ಮೆಡಿಟರೇನಿಯನ್ ಪ್ರದೇಶದಿಂದ ಜೋರ್ಡಾನ್ ನದಿಯವರೆಗೆ ವ್ಯಾಪಿಸಿರುವ ವಿಶಾಲ ಪ್ರದೇಶದಲ್ಲಿ ಪಾಲೆಸ್ಟೈನ್ ರಾಷ್ಟ್ರ ನಿರ್ಮಾಣ ಮಾಡಿ, ಅಲ್ಲಿ ಯಹೂದಿಗಳು, ಅರಬ್ ಸಮುದಾಯಗಳು ಸೌಹಾರ್ದದಿಂದ ಬಾಳುವ ವಾತಾವರಣ ನಿರ್ಮಾಣ ಮಾಡಲು ಈ ವೇದಿಕೆ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಪ್ರಣಾಳಿಕೆಯನ್ನೂ ಹೊರಡಿಸಿದೆ. ಒಂದು ವೇಳೆ ಇಸ್ರೇಲ್ ೧೯೬೭ರಲ್ಲಿ ವಿಧಿಸಿದ ಗಡಿ ರೇಖೆಗಳನ್ನು ನಿರಾಕರಿಸದಿದ್ದಲ್ಲಿ, ಇಡೀ ಪಾಲೆಸ್ಟೈನ್ ರಾಷ್ಟ್ರದ ನಿರ್ಮಾಣಕ್ಕಾಗಿ ಹೋರಾಡಲು ಸಿದ್ಧ ಎಂದೂ ಈ ವೇದಿಕೆ ಸ್ಪಷ್ಟಪಡಿಸಿದೆ. ತಮ್ಮ ತಾಯ್ನಾಡಿಗೆ ಹಿಂದಿರುಗುವ ಹಕ್ಕನ್ನು ಪ್ರತಿಪಾದಿಸುವುದರೊಂದಿಗೇ, ತಾಯ್ನಾಡಿನಿಂದ ಉಚ್ಚಾಟಿತರಾಗಿ ಆರು ದಶಕಗಳ ಕಾಲ ಅನುಭವಿಸಿದ ಚಿತ್ರಹಿಂಸೆಗೆ ಪರಿಹಾರವನ್ನೂ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಇಸ್ರೇಲ್ ಸರ್ಕಾರ ನೀಡಬೇಕೆಂದು ಈ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ, ಪ್ರಮುಖವಾಗಿ ಅಮೆರಿಕದ ಬೆಂಬಲ ಪಡೆದಿರುವ ಇಸ್ರೇಲ್ ತನ್ನ ಆಕ್ರಮಣಕಾರಿ ಧೋರಣೆಯನ್ನು ಬದಲಾಯಿಸಲು ಸಿದ್ಧವಾಗಿಲ್ಲ. ವಿಶ್ವ ಸಂಸ್ಥೆಯ ಸಭೆಗಳಲ್ಲಿ ಇದುವರೆಗೂ ೩೯ ಬಾರಿ ಇಸ್ರೇಲಿನ ಪರವಾಗಿ ತನ್ನ ವಿಟೊ ಅಧಿಕಾರವನ್ನು ಚಲಾಯಿಸಿರುವ ಅಮೆರಿಕಾಗೆ ಅರಬ್ ರಾಷ್ಟ್ರಗಳ ವಿರುದ್ಧ ಸಮರ ಸಾರಲು, ತೈಲ ಸಂಪತ್ತನ್ನು ದೋಚಲು, ಇಸ್ರೇಲ್ ಕೇಂದ್ರ ಆವಾಸ ಸ್ಥಾನವಾಗಿದೆ. ಪಾಲೆಸ್ಟೈನ್ ಜನತೆಯ ವೀರೋಚಿತ ಹೋರಾಟವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಯೆಂದೇ ಪರಿಗಣಿಸುವ ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ, ತಮ್ಮ ನೆಚ್ಚಿನ ಮಿತ್ರ ರಾಷ್ಟ್ರವಾದ ಇಸ್ರೇಲಿನಲ್ಲಿ ಯಹೂದಿಯರಲ್ಲದ ಎಲ್ಲರನ್ನೂ ನಿರ್ನಾಮ ಮಾಡುವ ಕೈಂಕರ್‍ಯ ನಡೆಯುತ್ತಿರುವುದು ಗಂಭೀರವಾದ ಸಮಸ್ಯೆ ಎನಿಸುವುದೇ ಇಲ್ಲ. ಪಾಲೆಸ್ಟೈನ್ ಹೋರಾಟಕ್ಕೆ ಬೆಂಬಲ ನೀಡುವವರೆಲ್ಲರನ್ನೂ ಭಯೋತ್ಪಾದಕರೆಂದೇ ಚಿತ್ರಿಸುವ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಮತ್ತು ಪ್ರೇರೇಪಿತ ಮಾಧ್ಯಮಗಳು, ಇಸ್ರೇಲ್ ಸರ್ಕಾರವು ಪ್ರಜಾತಾಂತ್ರಿಕ ಹೋರಾಟಗಾರರ ವಿರುದ್ಧ ಅವ್ಯಾಹತವಾಗಿ ನಡೆಸುತ್ತಿರುವ ಹತ್ಯಾಕಾಂಡವನ್ನು ಮರೆಮಾಚುತ್ತಿರುವುದು, ಸಾಮ್ರಾಜ್ಯಶಾಹಿಗಳ ಠಕ್ಕುತನಕ್ಕೆ ಸಾಕ್ಷೀಭೂತವಾಗಿದೆ.

ಜನಪರ ಹೋರಾಟಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವುದು ಜಾಗತೀಕರಣ ಪ್ರಕ್ರಿಯೆಯ ಒಂದು ಕೊಡುಗೆಯೂ ಆಗಿದ್ದು, ವಿಶ್ವದಾದ್ಯಂತ ಪ್ರಜಾತಾಂತ್ರಿಕ ಚಳುವಳಿಗಳು ಪ್ರಬಲವಾಗುತ್ತಿರುವ ಸಂದರ್ಭದಲ್ಲೇ ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗುತ್ತಿದ್ದು ಪ್ರಭುತ್ವಗಳ ದಮನಕಾರಿ ಪ್ರವೃತ್ತಿ ಬಲಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ನೆಪದಲ್ಲಿ ವಿವಿಧ ದೇಶಗಳ ಮೇಲೆ ಆಕ್ರಮಣ ಮಾಡಿ, ಮಿಲಿಯಾಂತರ ಜನರ ಹತ್ಯೆಗೈಯ್ಯುವ ಕೈಂಕರ್‍ಯದಲ್ಲಿ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತೊಡಗಿದ್ದರೆ, ಭಾರತದಲ್ಲಿ ಭಯೋತ್ಪಾದನೆಯ ನಿಯಂತ್ರಣದ ನೆಪದಲ್ಲಿ ಒಂದು ಇಡೀ ಧಾರ್ಮಿಕ ಸಮುದಾಯವನ್ನು ಹಿಂಸೆಗೀಡುಮಾಡಲಾಗುತ್ತಿದೆ. ಭಾರತದ ರಾಜಕಾರಣದಲ್ಲೂ ಇಸ್ರೇಲ್ ರಾಷ್ಟ್ರದ ಪರಂಪರೆಯ ದಟ್ಟ ಛಾಯೆ ಹರಡಿಕೊಂಡಿರುವುದು ವ್ಯಕ್ತವಾಗುತ್ತಿದ್ದು, ಭಾಜಪದಂತಹ ಪಕ್ಷಗಳು ಇಸ್ರೇಲನ್ನು ಮಿತ್ರ ರಾಷ್ಟ್ರವೆಂದೇ ಪರಿಗಣಿಸುತ್ತವೆ. ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಇಸ್ರೇಲ್ ನಮಗೆ ಮಾದರಿಯಾಗಬೇಕು ಎಂದು ಹಲವು ನಾಯಕರು ಪ್ರತಿಪಾದಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಸಂಭವಿಸಿದ ಗಾಜಾ ಪಟ್ಟಿಯ ಮೇಲಿನ ಇಸ್ರೇಲಿ ಆಕ್ರಮಣವನ್ನು ವಿಶ್ಲೇಷಿಸಬಹುದು.

ಮಾರಣಾಂತಿಕ ಆಕ್ರಮಣ

ಪಾಲೆಸ್ಟೈನಿಯರ ಗಾಝಾ ಪ್ರದೇಶದ ಅಮಾಯಕ ಜನಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಅಂತಾರಾಷ್ಟ್ರೀಯ ಸಮುದಾಯ ಮೂಕ ಪ್ರೇಕ್ಷಕನಾಗಿತ್ತು. ಬಹುಶಃ ಕೆಲವು ರಾಷ್ಟ್ರಗಳ ಅಭಿಪ್ರಾಯದಲ್ಲಿ ಗಾಝಾ ಪ್ರದೇಶದಲ್ಲಿರುವ ಜನತೆಯ ಜೀವಗಳಿಗೆ ಬೆಲೆಯೇ ಇಲ್ಲವೆನಿಸುತ್ತದೆ. ಕಳೆದ ಒಂದೂವರೆ ವರ್ಷದಿಂದ ಇಸ್ರೇಲಿನ ಸೈನ್ಯದ ಮುತ್ತಿಗೆಗೆ ಸಿಲುಕಿ ಬಳಲುತ್ತಿರುವ ಹದಿನೈದು ಲಕ್ಷ ಗಾಝಾ ಜನತೆಯ ಬದುಕು ಮೂರಾಬಟ್ಟೆಯಾಗುತ್ತಿದ್ದರೂ, ಆಂತಾರಾಷ್ಟ್ರೀಯ ಸಮುದಾಯ ನಿರುಮ್ಮಳವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ, ಮುಂಬೈ ಮೇಲಿನ ಭಯೋತ್ಪಾದಕ ದಾಳಿ, ಇರಾಕ್ ಮತ್ತು ಆಫ್ಘಾನಿಸ್ತಾನದಲ್ಲಿನ ವಿಷಮ ಪರಿಸ್ಥಿತಿ ಈ ಗಂಭೀರ ಸಮಸ್ಯೆಗಳ ನಡುವೆ ಇಸ್ರೇಲಿನ ಬಹಿಷ್ಕಾರಕ್ಕೆ ಸಿಲುಕಿ ಒಂದೂವರೆ ವರ್ಷದಿಂದ ಅನ್ನಾಹಾರಗಳಿಲ್ಲದೆ, ಔಷದಿಗಳಿಲ್ಲದೆ ಕುಡಿಯುವ ನೀರಿಲ್ಲದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಗಾಝಾ ಜನತೆಯ ಬವಣೆ ಅಗೋಚರವಾದಂತಿದೆ. ಈ ಬವಣೆಯನ್ನು ಸ್ಪಷ್ಟವಾಗಿ ಅರಿತಿದ್ದರೂ ದಿವ್ಯಮೌನ ವಹಿಸಿರುವ ಅಮೆರಿಕಾ ಮತ್ತು ಇಂಗ್ಲೆಂಡ್, ಗಾಝಾ ಜನತೆಯ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಸಮರ್ಥಿಸುತ್ತಿರುವುದು ಸಾಮ್ರಾಜ್ಯಶಾಹಿಯ ಅಮಾನವೀಯತೆಗೆ ಸ್ಪಷ್ಟ ನಿದರ್ಶನವಾಗಿದೆ.

ವಿಶ್ವಸಂಸ್ಥೆಯು ಗಾಝಾ ಪಟ್ಟಿಯ ಜನತೆಗೆ ಒದಗಿಸಿದ ಮಾನವೀಯ ನೆರವಿನ ದಿನನಿತ್ಯದ ಆಹಾರ ಪದಾರ್ಥಗಳ ಸರಬರಾಜನ್ನು ಇಸ್ರೇಲ್ ನವಂಬರ್‌ನಿಂದಲೇ ಸ್ಥಗಿತಗೊಳಿಸಿತ್ತು. ಆರು ದಶಕಗಳ ಇಸ್ರೇಲ್-ಪಾಲೆಸ್ಟೈನ್ ಸಮರದಲ್ಲಿ ಯಾವುದೇ ಪಾತ್ರ ವಹಿಸದ, ಗಾಝಾ ಪಟ್ಟಿಯ ಹಸುಳೆಗಳು ಈ ರಾಜಕಾರಣದ ಬಲಿಪಶುಗಳಾಗಿವೆ. ಗಾಝಾದ ಒಟ್ಟು ಜನಸಂಖ್ಯೆಯ ಶೇ. ೫೫ರಷ್ಟಿರುವ ಈ ಹಸುಳೆಗಳಲ್ಲಿ ಶೇ. ೪೬ರಷ್ಟು ರಕ್ತಹೀನತೆಯಿಂದ ಬಳಲುತ್ತಿವೆ. ಶೇ. ೧೮ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯಿಂದ ಬಳಲುತ್ತಿವೆ. ಇಸ್ರೇಲಿನ ಜೆಟ್ ವಿಮಾನಗಳ ಅಬ್ಬರದಿಂದ ಅನೇಕ ಮಕ್ಕಳ ಶ್ರವಣ ಶಕ್ತಿ ಮಂದವಾಗಿದೆ. ಗಾಝಾ ಪಟ್ಟಿಗೆ ಆಹಾರ ಪದಾರ್ಥಗಳನ್ನು ಮತ್ತು ಸಹಾಯಕ ಪಡೆಗಳನ್ನು ಕಳುಹಿಸುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಬನ್ ಕಿ ಮೋನ್ ಅವರು ಆಗ್ರಹಿಸಿದರೂ, ಇಸ್ರೇಲ್ ಸರ್ಕಾರ ತಿರಸ್ಕರಿಸಿದೆ. ಗಾಝಾದ ಜನತೆಯ ಬವಣೆಯನ್ನು ವರದಿ ಮಾಡದಂತೆ ಪತ್ರಕರ್ತರಿಗೂ ಇಸ್ರೇಲ್ ಸರ್ಕಾರ ನಿರ್ಬಂಧ ವಿಧಿಸಿದ್ದು, ಪತ್ರಕರ್ತರ ವರದಿಯಿಂದ ಜನತೆಯ ಬವಣೆ ಇನ್ನೂ ಹೆಚ್ಚಾಗುತ್ತದೆ ಎಂದು ಇಸ್ರೇಲಿನ ರಕ್ಷಣಾಮಂತ್ರಿಗಳು ಹೇಳುತ್ತಾರೆ.

ಡಿಸೆಂಬರ್‌ನಲ್ಲಿ ಇಸ್ರೇಲ್ ಸರ್ಕಾರದಿಂದ ಹೊರದೂಡಲ್ಪಟ್ಟ ಮಾನವ ಹಕ್ಕುಗಳ ಕಾರ್ಯಕರ್ತ ರಿಚರ್ಡ್ ಫಾಕ್ ಇಸ್ರೇಲ್‌ನ ಆಕ್ರಮಣಕಾರಿ ನೀತಿಯನ್ನು ಎರಡನೇ ಮಹಾಸಮರದ ನಾಝಿ ಆಕ್ರಮಣಗಳಿಗೆ ಹೋಲಿಸುತ್ತಾರೆ. ಗಾಝಾದಲ್ಲಿ ನೆಲೆಸಿರುವ ಪಾಲೆಸ್ಟೈನ್ ಸೈನಿಕರು ಇಸ್ರೇಲಿನ ಮೇಲೆ ವೈಮಾನಿಕ ದಾಳಿ ನಡೆಸಿರುವುದನ್ನೇ ನೆಪ ಮಾಡಿಕೊಂಡು, ಗಾಝಾದ ಮೇಲೆ ಆಕ್ರಮಣ ಮಾಡುತ್ತಿರುವ ಇಸ್ರೇಲ್‌ನ ಕ್ರಮ ಖಂಡನೀಯವೆಂದು ಫಾಕ್ ಪ್ರತಿಪಾದಿಸುತ್ತಾರೆ. ಗಾಝಾದ ಜನತೆ ಪ್ರಜಾತಾಂತ್ರಿಕವಾಗಿ ಚುನಾಯಿಸಿದ್ದ ಹಾಮಾಸ್ ಸಂಘಟನೆಯ ಸರ್ಕಾರವನ್ನು ಅಧಿಕಾರವಹಿಸಿಕೊಳ್ಳಲು ಬಿಡದೆ, ತನ್ನ ಸೇನಾ ಪ್ರಾಬಲ್ಯದಿಂದ ಗಾಝಾಪಟ್ಟಿಯನ್ನು ಸುತ್ತುವರೆದಿರುವ ಇಸ್ರೇಲ್‌ನ ನೀತಿ ಮನುಕುಲ ವಿರೋಧಿ ಕ್ರಮವಾಗಿದೆ.

ಗಾಝಾ ಪಟ್ಟಿ ಎಂಬ ಸೆರೆ ಶಿಬಿರ

ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಝಾ ಪಟ್ಟಿಯನ್ನು ವಿಶ್ವದ ಅತಿದೊಡ್ಡ ಸೆರೆಯಾಳುಗಳ ಶಿಬಿರ (Concentration Camp) ಎಂದು ಬಣ್ಣಿಸಬಹುದು. ನವಂಬರ್ ಮೊದಲ ವಾರದಿಂದಲೇ ಗಾಝಾ ಪ್ರದೇಶಕ್ಕೆ ನೆಲ, ಜಲ ಮತ್ತು ವಾಯುಮಾರ್ಗಗಳನ್ನು ಬಂದ್ ಮಾಡಿದ ಇಸ್ರೇಲ್ ಸರ್ಕಾರಕ್ಕೆ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ಐದು ತಿಂಗಳಿನ ಕದನವಿರಾಮ ಒಪ್ಪಂದ ಅಡ್ಡಗೋಡೆಯಾಗಿತ್ತು. ಗಾಝಾದಲ್ಲಿನ ಹಮಾಸ್ ಸಂಘಟನೆ ಈ ಒಪ್ಪಂದವನ್ನು ಪಾಲಿಸಿ ಯಾವುದೇ ಆಕ್ರಮಣಗಳನ್ನು ನಡೆಸಿರಲಿಲ್ಲ. ಆದರೆ ನವಂಬರ್ ೪ ೨೦೦೮ರಂದು ಇಸ್ರೇಲ್ ಈ ಒಪ್ಪಂದವನ್ನು ಉಲ್ಲಂಘಿಸಿ ತನ್ನ ಸೇನೆಯನ್ನು ನುಗ್ಗಿಸಿದ್ದು, ಪಾಲೆಸ್ಟೈನಿಯರ ಆಕ್ರಮಣಕ್ಕೆ ಎಡೆಮಾಡಿಕೊಟ್ಟಿತ್ತು. ಇಸ್ರೇಲಿನ ಆಕ್ರಮಣಕ್ಕೆ ಹಸುಳೆಗಳನ್ನೂ ಸೇರಿದಂತೆ ನೂರಾರು ಪಾಲೆಸ್ಟೈನಿಯರು ತುತ್ತಾದರು. ಈ ಸಂದರ್ಭದಲ್ಲಿ ಹಾಮಾಸ್ ಸಂಘಟನೆ ಪ್ರತಿದಾಳಿ ನಡೆಸುವುದು ಅನಿವಾರ್ಯವಾಗಿತ್ತು. ಹಾಮಾಸ್‌ನ ವೈಮಾನಿಕ ದಾಳಿಯಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೂ ಇಸ್ರೇಲಿನ ದಾಳಿ ನಿಲ್ಲುವವರೆಗೂ ತಾವು ಪ್ರತಿದಾಳಿ ನಡೆಸುವುದಾಗಿ ಹಾಮಾಸ್ ಘೋಷಿಸಿದ್ದು ಯುದ್ಧದ ವಾತಾವರಣಕ್ಕೆ ಎಡೆಮಾಡಿಕೊಟ್ಟಿತ್ತು.

ವಿಶ್ವಸಂಸ್ಥೆಯ ಮೂಲಗಳ ಪ್ರಕಾರ ಗಾಝಾ ಜನತೆಗೆ ಆಹಾರ ಪದಾರ್ಥಗಳ ಸರಬರಾಜನ್ನು ಸ್ಥಗಿತಗೊಳಿಸಿರುವುದರಿಂದ ಗಾಝಾದಲ್ಲಿ ತೀವ್ರತೆರನಾದ ಕ್ಷೆಭೆ ಉಂಟುಮಾಡಿದೆ. ಕಳೆದ ಎಂಟು ವರ್ಷಗಳಲ್ಲಿ ಹಸಿವಿನಿಂದ ಈ ಪ್ರಮಾಣದ ಸಾವುಗಳು ಸಂಭವಿಸಿರಲಿಲ್ಲ ಎಂದು ಹೇಳಲಾಗಿದೆ. ಗಾಝಾದ ಜನತೆ ಕೇವಲ ಆಕ್ರಮಣಕ್ಕೊಳಗಾಗದೆ, ಇಸ್ರೇಲಿನ ಮುತ್ತಿಗೆಯಿಂದ ಬಳಲುತ್ತಿರುವುದು ಸ್ಪಷ್ಟವಾಗಿದೆ. ಈ ವಿಷಮ ಪರಿಸ್ಥಿತಿಯಲ್ಲೂ ಇಸ್ರೇಲಿನ ವಿದೇಶಾಂಗ ಮಂತ್ರಿ ಮತ್ತು ರಕ್ಷಣಾ ಮಂತ್ರಿಗಳು, ಹಾಮಾಸ್ ಸರ್ಕಾರವನ್ನು ದಮನಮಾಡಲು ಮಿಲಿಟರಿ, ಆರ್ಥಿಕ ದಿಗ್ಬಂಧನ ಮತ್ತು ರಾಜಕೀಯ ತಂತ್ರಗಾರಿಕೆಯನ್ನು ಪ್ರಯೋಗಿಸುವುದಾಗಿ ಘೋಷಿಸಿರುವುದು ಇಸ್ರೇಲ್‌ನ ದಮನಕಾರಿ ನೀತಿಗೆ ನಿದರ್ಶನ.

ತೈಲ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯದಿಂದ ಗಾಝಾ ಪಟ್ಟಿಯಲ್ಲಿ ದಿನಕ್ಕೆ ೧೬ ಗಂಟೆಗಳ ಕಾಲ ವಿದ್ಯುತ್ ಸರಬರಾಜು ಇರುವುದಿಲ್ಲ. ಇಡೀ ಪ್ರಾಂತ್ಯದಲ್ಲಿ ಕೇವಲ ಒಂದೇ ಒಂದು ವಿದ್ಯುತ್ ಉತ್ಪಾದನಾ ಘಟಕವಿದ್ದು, ವಿದ್ಯುತ್ ತೊಂದರೆಯಿಂದ ಆಸ್ಪತ್ರೆಗಳಲ್ಲಿ ತುರ್ತುಸೇವಾ ಘಟಕಗಳು ನಿಷ್ಕ್ರಿಯವಾಗಿವೆ. ಗಾಝಾದ ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆಗೆ ಅಗತ್ಯವಾದ ಪರಿಕರಗಳೇ ಇಲ್ಲದಿರುವುದು, ಔಷದಿಗಳು ಅಲಭ್ಯವಾಗಿರುವುದು, ಅನೇಕ ರೋಗಿಗಳನ್ನು ಸಾವಿನ ದವಡೆಗೆ ನೂಕುತ್ತಿದೆ. ಇಲ್ಲಿನ ಆಸ್ಪತ್ರೆಗಳಲ್ಲಿ ಕೃತಕ ಶಾಖೋಪಕರಣಗಳು (Incubators) ಮತ್ತು ಡಯಾಲಿಸಿಸ್ ಉಪಕರಣಗಳು ನಿಷ್ಕ್ರಿಯವಾಗಿವೆ. ಪರಿಣಾಮವಾಗಿ ರೋಗಿಗಳ ಸಾವಿನ ಪ್ರಕರಣಗಳು ಹೆಚ್ಚಾಗುವ ಸಂಭವಗಳಿವೆ ಎಂದು ಹೇಳಲಾಗುತ್ತಿದೆ. ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ಜನಕ್ಕೆ ಕುಡಿಯುವ ನೀರು ದೊರೆಯುತ್ತಿಲ್ಲ. ಚರಂಡಿಗಳು ದುರ್ನಾತ ಹೊರಸೂಸುತ್ತಿದ್ದು, ಶುದ್ಧೀಕರಿಸಲಾಗುತ್ತಿಲ್ಲ. ಇದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತಿವೆ. ಈ ಪರಿಸ್ಥಿತಿಯಲ್ಲಿ ಕೂಳಿಲ್ಲದೆ ಸಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಏತನ್ಮಧ್ಯೆ ಪಾಲೆಸ್ಟೈನಿಗಾಗಿ ಹೋರಾಡುತ್ತಿರುವ ಸಂಘಟನೆಗಳ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯಗಳೂ ಇಸ್ರೇಲಿಗೆ ನೆರವಾಗಿವೆ. ಫತಾಃ ಸಂಘಟನೆಯ ನೇತೃತ್ವದ ಪಾಲೆಸ್ಟೈನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಹಾಮಾಸ್ ಸಂಘಟನೆಯನ್ನು ಶಿಥಿಲಗೊಳಿಸಲು ಹೊಂಚುಹಾಕುತ್ತಿದೆ. ಇಸ್ರೇಲ್‌ನ ಅಮಾನವೀಯ ಆಕ್ರಮಣದ ನಡುವೆಯೂ ಗಾಝಾದ ಜನತೆಗೆ ಯಾವುದೇ ನೆರವು ಒದಗಿಸಲು ಅಬ್ಬಾಸ್ ವಿರೋಧಿಸುತ್ತಾರೆ. ಅರಬ್ ದೇಶಗಳು ಹಾಮಾಸ್‌ಗೆ ಬೆಂಬಲ ಸೂಚಿಸಿದರೆ ಹಾಮಾಸ್ ಬಲಿಷ್ಟವಾಗುತ್ತದೆ ಎಂದು ಪ್ರತಿಪಾದಿಸುವ ಅಬ್ಬಾಸ್ ಹಾಮಾಸ್ ನಾಯಕರನ್ನು ಭೇಟಿ ಮಾಡಿದ ಅರಬ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಜನವರಿ ೯ ೨೦೦೯ಕ್ಕೆ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿರುವ ಫತಾಃ ಸಂಘಟನೆ, ಗಾಝಾ ಜನತೆಗೆ ಒದಗಿಸುವ ಎಲ್ಲ ನೆರವನ್ನು ತಮ್ಮ ಮೂಲಕವೇ ಸರಬರಾಜು ಮಾಡಬೇಕೆಂದು ಆಗ್ರಹಿಸುತ್ತಿದೆ. ಒಂದು ರೀತಿಯಲ್ಲಿ ಇಸ್ರೇಲ್‌ನ ದಾಳಿಗೆ ಪರೋಕ್ಷವಾಗಿ ಫತಾಃ ಸಂಘಟನೆ ಬೆಂಬಲ ನೀಡಿದ್ದು ಅರಬ್ ದೇಶಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ.

ಈ ಸಂದರ್ಭದಲ್ಲಿ ಗಾಝಾದ ಜನತೆಯ ವಿರುದ್ಧ ಮಾರಣಾಂತಿಕ ಆಕ್ರಮಣ ನಡೆಸಿದ ಇಸ್ರೇಲಿ ಪಡೆಗಳು ೮೨೧ ಜನರ ಬಲಿ ತೆಗೆದುಕೊಂಡಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಮಾಸ್ ವಿರುದ್ಧ ದಾಳಿಮಾಡುವುದು ಅನಿವಾರ್ಯ ಎಂದು ಇಸ್ರೇಲ್ ಮತ್ತು ಇಸ್ರೇಲ್‌ನ ಬೆಂಬಲಿಗರು ಪ್ರತಿಪಾದಿಸುತ್ತಾರೆ. ಇಸ್ರೇಲನ್ನು ನಿರ್ನಾಮ ಮಾಡುತ್ತೇವೆ ಎಂಬ ಹಾಮಾಸ್‌ನ ಘೋಷಣೆಯನ್ನೇ ಆಧಾರವಾಗಿರಿಸಿಕೊಂಡು ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಆಕ್ರಮಣ ನಡೆಸಿತ್ತು. ಹಾಮಾಸ್ ಸಂಘಟನೆಯ ಉಗ್ರಗಾಮಿ ಲಕ್ಷಣಗಳನ್ನು ವಿರೋಧಿಸುವ ಜೋರ್ಡಾನ್, ಈಜಿಪ್ಟ್ ಮತ್ತಿತರ ಅರಬ್ ರಾಷ್ಟ್ರಗಳು ಇಸ್ರೇಲಿಗೆ ಪರೋಕ್ಷವಾಗಿ ಬೆಂಬಲಿಸುತ್ತಿವೆ. ಆದರೆ ಕಳೆದ ಆರು ದಶಕಗಳಿಂದಲೂ ಪಾಲೆಸ್ಟೈನಿಯರನ್ನು ನಿರ್ನಾಮ ಮಾಡುವುದಾಗಿ ಘೋಷಿಸುತ್ತಿರುವ ಇಸ್ರೇಲಿನ ಆಕ್ರಮಣಕಾರಿ ನೀತಿಯನ್ನು ಈ ರಾಷ್ಟ್ರಗಳು ಪ್ರಶ್ನಿಸದಿರುವುದು ದುರದೃಷ್ಟಕರ.

೨೦೦೫ರಲ್ಲಿ ಇಸ್ರೇಲ್ ಗಾಝಾ ಪಟ್ಟಿಯಿಂದ ಹಿಂದೆ ಸರಿದ ನಂತರ ೧೮ ಜನ ಇಸ್ರೇಲಿಯರು ಗಾಝಾದ ವೈಮಾನಿಕ ದಾಳಿಗೆ ಬಲಿಯಾಗಿದ್ದಾರೆ. ಆದರೆ ಇದೇ ಅವಧಿಯಲ್ಲಿ ಇಸ್ರೇಲಿ ಸೇನೆಗಳು ೨೦೦೦ಕ್ಕೂ ಹೆಚ್ಚು ಪಾಲೆಸ್ಟೈನಿಯರ ಹತ್ಯೆಗೈದಿದೆ. ಪ್ರಸ್ತುತ ಸಮರದಲ್ಲಿ ಮೊದಲ ವಾರದಲ್ಲಿ ಗಾಝಾದ ೪೦೦ ರಾಕೆಟ್‌ಗಳು ನಾಲ್ಕು ಇಸ್ರೇಲಿಯರನ್ನು ಬಲಿತೆಗೆದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ೪೦೦ ಬಾಂಬು ಮತ್ತು ಕ್ಷಿಪಣಿಗಳಿಗೆ ಒಂದೇ ವಾರದಲ್ಲಿ ೪೦೦ ಜನ ಬಲಿಯಾಗಿದ್ದಾರೆ. ಪ್ರಸ್ತುತ ದಾಳಿಯಲ್ಲಿ ಇಸ್ರೇಲ್ ಎಫ್ ೧೬ ಜೆಟ್‌ಗಳು, ಚಾಲಕರಹಿತ ವೈಮಾನಿಕ ಕ್ಷಿಪಣಿ, ಅಪಾಚ್ ಹೆಲಿಕಾಪ್ಟರ್ ಮುಂತಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೆ, ಪಾಲೆಸ್ಟೈನಿಯರ ಬಳಿ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳುವ ಸಾಧನಗಳೂ ಇಲ್ಲದೆ, ಪ್ರಬಲ ಶಸ್ತ್ರಾಸ್ತ್ರಗಳಿಲ್ಲದೆ ದಾಳಿಗೆ ತುತ್ತಾಗುತ್ತಿದ್ದಾರೆ. ಹಾಮಾಸ್ ಸಂಘಟನೆಯನ್ನು ಸೋಲಿಸುವ ನಿಟ್ಟಿನಲ್ಲಿ ಇಡೀ ಗಾಝಾ ಪಟ್ಟಿಯ ಜನತೆಯ ಮೇಲೆ ಆಕ್ರಮಣ ಮಾಡುತ್ತಿರುವ ಇಸ್ರೇಲಿ ಪಡೆಗಳು, ಸರ್ಕಾರಿ ಕಟ್ಟಡಗಳೂ, ನಾಗರಿಕರ ಮನೆಗಳು, ಶಾಲಾ ಕಟ್ಟಡಗಳು ಎಲ್ಲವನ್ನೂ ಧ್ವಂಸಮಾಡುತ್ತಿವೆ. ತನ್ನ ರಾಜಕೀಯ ಉದ್ದೇಶಗಳ ಈಡೇರಿಕೆಗಾಗಿ ನಾಗರಿಕರ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲಿ ಸೈನ್ಯಗಳ ಕ್ರಮವನ್ನು, ಇಸ್ರೇಲಿನ ಮೇಲೆ ದಾಳಿ ಮಾಡುತ್ತಿರುವ ಹಾಮಾಸ್‌ನ ಕೃತ್ಯವನ್ನೂ ಭಯೋತ್ಪಾದನೆಯ ಪರಿಧಿಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. ಇತ್ತೀಚಿನ ಬೆಳವಣಿಗೆಯಲ್ಲಿ ಹಾಮಾಸ್ ಮತ್ತು ಫತಾಸ್ ಸಂಘಟನೆಗಳು ಒಂದಾಗುವ ಸೂಚನೆಗಳಿದ್ದರೂ, ಭ್ರಾತೃಘಾತಕ ಸಂಘರ್ಷಗಳು ಇಸ್ರೇಲಿಗೆ ಉಪಯುಕ್ತವಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಇಡೀ ಪ್ರಕರಣದ ಉದ್ದೇಶ ಇಸ್ರೇಲಿನ ಪರಮಾಧಿಕಾರವನ್ನು ಸ್ಥಾಪಿಸುವುದೇ ಆಗಿದೆ. ೨೦೦೬ರಲ್ಲಿ ಲೆಬನಾನ್ ವಿರುದ್ಧ ಸೋಲನುಭವಿಸಿದ ಇಸ್ರೇಲಿಗೆ ಈ ಯುದ್ಧದಲ್ಲಿ ಗೆಲುವು ಸಾಧಿಸುವುದು ರಾಜಕೀಯ ಅನಿವಾರ್ಯತೆಯಾಗಿದೆ. ಮತ್ತೊಂದೆಡೆ ಪಾಲೆಸ್ಟೈನಿಯರ ಹೋರಾಟವನ್ನು ಜೀವಂತವಾಗಿಡಲು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಹಾಮಾಸ್ ಸಂಘಟನೆಗೂ ಅನಿವಾರ್ಯವಾಗಿದೆ. ಈ ಎರಡೂ ಬಣಗಳ ನಡುವೆ, ೬೦ ವರ್ಷಗಳ ಹಿಂದೆ ತಮ್ಮ ಮೂಲನಿವಾಸದಿಂದ ಉಚ್ಚಾಟಿಸಲ್ಪಟ್ಟ ಪಾಲೆಸ್ಟೈನ್ ಜನತೆ ಬಲಿಪಶುಗಳಾಗುತ್ತಿದ್ದಾರೆ. ಪಾಲೆಸ್ಟೈನಿಯರ ಪ್ರಸ್ತುತ ಪರಿಸ್ಥಿತಿಗೆ ಅವರೇ ಹೊಣೆ ಎಂದು ಹೇಳುವ ಇಸ್ರೇಲ್ ಸರ್ಕಾರಕ್ಕೆ, ಗಾಝಾದಲ್ಲಿ ನೆಲೆಸಿರುವವರ ಪೈಕಿ ಶೇ. ೮೦ರಷ್ಟು ಜನ ೧೯೪೮ರಲ್ಲಿ ತಮ್ಮ ತಾಯ್ನಾಡಿನಿಂದ ಉಚ್ಚಾಟಿಸಲ್ಪಟ್ಟು, ಆರು ದಶಕಗಳ ಕಾಲ ಇಸ್ರೇಲಿನ ಆಕ್ರಮಣಕ್ಕೆ ಬಲಿಯಾದವರು ಎಂಬ ಅಂಶ ಮನದಟ್ಟಾಗಬೇಕು.

ಇಸ್ರೇಲಿನ ದಾಳಿಯನ್ನು ಖಂಡಿಸುವ ನಿಟ್ಟಿನಲ್ಲಿ ವಿಶ್ವಾದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದರೂ ನಾಗರಿಕ ಸಮಾಜದ ಒಂದು ವರ್ಗ ಇಸ್ರೇಲ್‌ನ ಕ್ರಮವನ್ನು ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಹೋರಾಟ ಎಂದು ಬಣ್ಣಿಸುವ ಮೂಲಕ, ಅಮಾನವೀಯ ಯುದ್ಧಪರಂಪರೆಯನ್ನು ಬೆಂಬಲಿಸುತ್ತಿರುವುದು ವಿಷಾದನೀಯ. ೨೬-೧೧ರ ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್ ಕೈಗೊಂಡ ಕ್ರಮವನ್ನೇ ಭಾರತವೂ ಅನುಸರಿಸಬೇಕೇ ಎಂಬ ಪ್ರಶ್ನೆಗಳೂ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ. ಆದರೆ ಮಾನವೀಯ ಸಂವೇದನೆಗಳನ್ನು ತುಚ್ಛವಾಗಿ ಕಾಣುವ ಇಸ್ರೇಲಿನ ದಮನಕಾರಿ ನೀತಿ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಗೆ ದಾರಿದೀಪವಾಗಬೇಕಿಲ್ಲ.

೧೯೩೮ರ ನವಂಬರ್ ೧೧ರ ಹರಿಜನ ಪತ್ರಿಕೆಯ ಸಂಪಾದಕೀಯದಲ್ಲಿ ಮಹಾತ್ಮಾಗಾಂಧಿಯವರು ಇಂಗ್ಲೆಂಡ್ ಇಂಗ್ಲೀಷರಿಗೆ ಸೇರಿದಂತೆ, ಫ್ರಾನ್ಸ್ ಫ್ರೆಂಚ್ ಜನತೆಗೆ ಸೇರಿದಂತೆ, ಪಾಲೆಸ್ಟೈನ್ ಅರಬ್ಬರಿಗೆ ಸೇರಿದ ಪ್ರದೇಶ. ಯಹೂದಿಗಳನ್ನು ಅರಬ್ಬರ ಮೇಲೆ ಹೇರುವುದು ಅಮಾನವೀಯವಾಗುತ್ತದೆ. ಪಾಲೆಸ್ಟೈನ್ ಪ್ರದೇಶವನ್ನು ಯಹೂದಿಗಳಿಗೆ ಅವರ ಮೂಲ ಸ್ಥಾನದ ರೂಪದಲ್ಲಿ ಬಿಟ್ಟುಕೊಡುವುದು ಅರಬ್ಬರಿಗೆ ಅನ್ಯಾಯ ಮಾಡಿದಂತಾಗುವುದಷ್ಟೇ ಅಲ್ಲದೆ ಇಡೀ ಮನುಕುಲದ ವಿರುದ್ಧ ಅಪರಾಧವೆಸಗಿದಂತಾಗುತ್ತದೆ. ಎಂದು ಹೇಳುತ್ತಾರೆ. ಆದರೆ ೬೦ ವರ್ಷಗಳಿಂದ ಇಸ್ರೇಲಿನಲ್ಲಿ ನಡೆಯುತ್ತಿರುವ ಕೋಮು ಹತ್ಯಾಕಾಂಡಗಳು, ಧಾರ್ಮಿಕ ಸಮುದಾಯಗಳ Ghettoisation ಪ್ರಕ್ರಿಯೆಗಳು ವಿಶ್ವದ ಅತಿ ದೊಡ್ಡ ಪ್ರಜಾತಂತ್ರವಾದ ಭಾರತದಲ್ಲೂ ನಡೆಯುತ್ತಿರುವುದು ಗಹನವಾದ ವಿಚಾರವಾಗಿದೆ.

ನಾ ದಿವಾಕರ

ದಿವಾಕರ್,
ನಿಮ್ಮ ಲೇಖನ ಅತ್ಯುತ್ತಮ ಮತ್ತು ಸಕಾಲಿಕ. ಪ್ಯಾಲೆಸ್ಟೇನಿಯರ ಬಗ್ಗೆ ತಿಳಿಯದಿದ್ದ ಎಷ್ಟೊಂದು ವಿಷಯಗಳನ್ನು ವಿವರವಾಗಿ ತಿಳಿಸಿದ್ದೀರಿ. ಭಯೋತ್ಪಾದಕತೆಗೆ ಗುರಿಯಾಗಿದ್ದರಿಂದ ಇಸ್ರೇಲ್ ಆ ರೀತಿ ಆಕ್ರಮಣಗೈಯುತ್ತಿದೆಯೆಂದು ಭಾವಿಸಿದ್ದ ನನ್ನಂತವರಿಗೆ ನಿಮ್ಮ ಲೇಖನ ನಿಜಕ್ಕೂ ಕಣ್ಣುತೆರೆಯಿಸಿತು. ಹಾಗೆಯೆ ತಮ್ಮ ನೆಲದಿಂದಲೆ ಹೊರದಬ್ಬಲ್ಪಟ್ಟ ಕಾಶ್ಮೀರಿಗಳ ಬಗ್ಗೆಯೂ ನಿಮ್ಮ ಅಭಿಪ್ರಾಯ ತಿಳಿಸಿ.

ಮಾನ್ಯರೆ
ನಿಮ್ಮ ಅಭಿನಂದನೆಗಳಿಗೆ ವಂದನೆಗಳು. ಕಾಶ್ಮೀರದಲ್ಲಿನ ಹಿಂದೂಗಳನ್ನು ಹೊರದೂಡಿರುವ ಅಮಾನವೀಯ ರಾಜಕಾರಣದ ಹಿಂದೆ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳೂ ಇವೆ. ಅಮರನಾಥ ಯಾತ್ರೆಯ ವಿವಾದದ ಹಿನ್ನೆಲೆಯಲ್ಲಿ ನಾನು ಬರೆದಿರುವ ಲೇಖನವನ್ನು ವಿಚಾರಮಂಟಪಕ್ಕೆ ಕಳುಹಿಸುತ್ತೇನೆ. ಸ್ವಲ್ಪ ಸಮಯ ನೀಡಿ. ಆದರೆ ಒಂದು ಮಾತನ್ನು ಹೇಳಲಿಚ್ಚಿಸುತ್ತೇನೆ. ಕಾಶ್ಮಿರವನ್ನಾಗಲಿ ಪಾಲೆಸ್ಟೈನನ್ನಾಗಲೀ ಮತೀಯ ಅಸ್ಮಿತೆಗಳನ್ನು ದಾಟಿ ನೋಡಿದಲ್ಲಿ ನೈಜ ಸ್ಥಿತಿ ತಿಳಿಯಬಹುದು. ಭಯೋತ್ಪಾದನೆಯ ಮೂಲವನ್ನು ಶೋಧಿಸಿದಾಗ ಗ್ರಹಿತವಾಗುವ ಒಂದು ಅಂಶವೆಂದರೆ, ಆಳುವ ಶಕ್ತಿಗಳಿಗೆ ಭಯೋತ್ಪಾದನೆ ಸದಾ ವರದಾನವಾಗಿರುತ್ತದೆ.ಏಕೆಂದರೆ ಜನತೆಯ ಸಮಸ್ಯೆಗಳನ್ನು ಮರೆಮಾಚಲು ಅದು ಸಾಧನವಾಗುತ್ತದೆ. ಕಾಶ್ಮೀರದ ಹಿಂದೂಗಳ ಪರಿಸ್ಥಿತಿಯೂ ರಾಜಕೀಯ ಚದುರಂಗದಾಟದಲ್ಲಿ ಸಿಲುಕಿದ್ದು, ಸ್ಥಳೀಯ ಜನತೆಯ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಕಾಶ್ಮೀರದ ಉಗ್ರರಿಗೂ ಅಲ್ಲಿನ ಸಾಮಾನ್ಯ ಜನತೆಗೂ ಇರುವ ವ್ಯತ್ಯಾಸವನ್ನು ನಾವು ಗ್ರಹಿಸುವುದು ಒಳ್ಳೆಯದು.

ನಾ ದಿವಾಕರ