You are hereಕತೆ: ಆವರ್ತ
ಕತೆ: ಆವರ್ತ
ಲೇಖಕರು: ಡಾ.ಟಿ.ಎಸ್.ವಿವೇಕಾನಂದ, ಬೆಂಗಳೂರು
ಏನೋ ಮೂಡ್ಲಣ್ಣಾ, ’ಇಷ್ಟೇನಾ ಇವತ್ತು ಬೇಲಿ ಸವ್ರಿದ್ದೂ’ ಸಂಜೀವನ ಧ್ವನಿ ಕೇಳಿ ಮೂಡ್ಲಿ ಹಿಂತಿರುಗಿ ನೋಡಿದ. ಜೊತೆಗೆ ಕವೆಗೋಲೊಂದನ್ನು ಹಿಡಿದು ಬೇಲಿಯನ್ನು ಪಕ್ಕಕ್ಕೆ ತಳ್ಳಲು ಅಪ್ಪನಿಗೆ ಸಹಾಯ ಮಾಡುತ್ತಿದ್ದ ಮರಿಯನೂ ಹಿಂತಿರುಗಿ ನೋಡಿದ. ನೋಡಿದ್ದೇ, ಕವೆಯನ್ನು ಕಂಕುಳಲ್ಲಿ ಇರುಕಿಕೊಂಡು ಬಲಗೈ ಎತ್ತಿ, ’ಗುಡ್ ಈನ್ವಿಂಗ್ ಸಾ..’ ಅಂದ. ಅಷ್ಟರಲ್ಲಿ ಅವನನ್ನು ಸಮೀಪಿಸಿದ್ದ ಸಂಜೀವ ಅವನ ತಲೆಯೊಳಕ್ಕೆ ಕೈಹಾಕಿ, ಕೆದರಿದ್ದ ಕೂದಲನ್ನು ಇನ್ನಷ್ಟು ಕೆದಕುತ್ತಾ ’ಈನ್ವಿಂಗ್’ ಅಲ್ವೋ, ’ಈವಿನಿಂಗ್’ ಅಂದ. ಸರೀಸಾ, ಗುಡ್ ಈನ್ವಿಂಗ್ ಸಾ... ಎಂದು ಪುನರುಚ್ಚರಿಸಿದ. ಸಂಜೀವ ನಕ್ಕು, ವೆರಿಗುಡ್ ಈವ್‌ನಿಂಗ್ ಸಾsssರ್ರ್.... ಎಂದ. ಕೂಡಲೇ ಮಡಕೆಯ ತಳದೊಂದಿಗೆ ಪೈಪೋಟಿಗಿಳಿದಂತಿದ್ದ ಮರಿಯನ ಮುಖ ಮುಸ್ಸಂಜೆಯ ಸೂರ್ಯನನ್ನೇ ನಾಚಿಸುವಷ್ಟು ಕೆಂಪಾಗಿ ಹೋಯ್ತು.
ಯಾಕೆ ಮೂಡ್ಲಣ್ಣಾ.. ನೀನು ಬೆಳಿಗ್ಗೇನೆ ಬರ್‍ಲಿಲ್ವಾ ಕೆಲಸಕ್ಕೆ? ಎಂದ. ಇಲ್ಲಪ್ಪಾ ಸ್ವಾಮೇರು ’ಇವತ್ತು ಇಸ್ಕೂಲ್ನಾಗೆ ಮಿತಿಂಗ್ ಐತೆ ಬಾ ಅಂತ ಹೇಳ್ಕಳ್ಸಿದ್ರು ಅದಕ್ಕೆ ಬೆಳಿಗ್ಗೇನೆ ಹೋಗಿದ್ದೆ. ಮಿತಿಂಗ್ ಮುಗ್ದಿದ್ದು ಮದ್ವಾನಕ್ಕೆ, ಆಮೇಕ್ ಬಂದೆ... ಎಂದ. ಅಷ್ಟರಲ್ಲಿ ದೂರದಲ್ಲಿ ಬಿದ್ದಿದ್ದ ಕುಡುಲನ್ನು ತರಲು ಹೋಗಿದ್ದ ಮರಿಯ ಎದುರಾಳಿಯೊಂದಿಗೆ ಯುದ್ದದಲ್ಲಿ ಹೋರಾಡುವವನಂತೆ ಆಡಿಸುತ್ತಾ ಅಲ್ಲಿಗೆ ಬಂದು ’ಸಾ, ಇದಕ್ಕೆ ಇಂಗ್ಲೀಸ್ನಾಗೆ ಏನಂತಾರೆ ಸಾ..?’ ಎಂದ. ಸಂಜೀವ ಅವನತ್ತ ಕೈಚಾಚಿ, ಕುಡುಲನ್ನು ಕೈಗೆ ತಗೆದುಕೊಂಡು ಅವನ ಕಾಲಿನತ್ತ ಹೊಡೆಯುವವನಂತೆ ಬೀಸಿ ಸಿಕಲ್’ ಅಂತಾರೆ ಅಂದ. ಅಷ್ಟರಲ್ಲಿ ಮೂರುಮಾರು ಹಾರಿ ನಿಂತಿದ್ದ ಮರಿಯ ಏದುಸಿರು ಬಿಡುತ್ತಿದ್ದ. ಇದೆಲ್ಲವನ್ನೂ ನೋಡುತ್ತಿದ್ದ ಮೂಡ್ಲಿ ಪಕ್ಕೆ ಹಿಡಿದು ನಗುತ್ತಿದ್ದ.
’ಅದೇನೋಪ್ಪ ನಮ್ಮ ಹಟ್ಟಿ ಬಡ್ಡಿಮಕ್ಳೆಲ್ಲಾ ಈಚೀಚ್ಗೆ ಯಾವಾಗಾರ ನೋಡು ಇಂಗ್ಲೀಸೇ ಮಾತಾಡ್ತಿರ್‍ತಾವೆ. ನಿಂತ್ರೂ ಟಸ್ಪುಸ್ಸೇ... ಕುಂತ್ರೂ ಟಸ್ಪುಸ್ಸೇ....; ನಾವೇನಾರಾ ಮಾತಾಡ್ತಿದ್ರೆ, ಅವ್ರವ್ರೇ ಏನೋ ಇಂಗ್ಲೀಸ್ನಾಗೆ ಮಾತಾಡ್ಕಂಡು ಕಿಸಪಸ ಅಂತಾ ನಗ್ತಿರ್‍ತಾವೆ. ಇಂಥಾ ಗಾಳಿನಾ ನಮ್ಮ ಜನ್ಮದಾಗೇ ನಮ್ಮಟ್ಟಿಯಾಗೆ ಕಾಣ್ವಿ’ ಎಂದು ಮೂಡ್ಲಿ ಅರ್ಧ ಆಪಾದನೆ, ಅರ್ಧ ಮೆಚ್ಚುಗೆಯ ಧ್ವನಿಯಲ್ಲಿ ಪ್ರಶಂಸಿಸಿದ. ಅದಕ್ಕೆ ಪ್ರತಿಕ್ರಿಯೆಯೆಂಬಂತೆ ಜೋರಾಗಿ ನಕ್ಕು, ’ನೀವೂ ಬನ್ರಯ್ಯಾ, ನಿಮಗೂ ಹೇಳಿಕೊಡ್ತೀನಿ, ನೀವೂ ಕಿಚಾಯ್ಸಿವ್ರಂತೆ ಅವರ್‍ನಾ, ಎಂದ ಸಂಜೀವ.
ಊಂ೦೦, ’ಅದೊಂದು ಬಾಕಿ ಐತೆ ನೋಡು, ನಾವು ಇಂಗ್ಲೀಸ್ ಕಲ್ತು, ನಮ್ಮ ಇಸ್ಕೂಲ್ನಾಗೆ ಮೇಟ್ರಾಗೋದೊಂದು ಉಳ್‌ದೈತೆ. ದೇವರಂತ ನಿಂಗೇ ಕೆಲ್ಸಿಲ್ಲಾ ಅಲ್ಲಿ...? ಎಂದವನೇ ತುಟಿಕಚ್ಚಿಕೊಂಡ.
ಈ ಮಾತು ಪ್ರಾಸಂಗಿಕವಾಗಿ ಬಂದಿದ್ದೆಂದು ಸಂಜೀವ ಭಾವಿಸಿದ. ಆದರೆ ಇಂದು ಮೀಟಿಂಗಿನಲ್ಲಿ ನಡೆದಿದ್ದ ಸಂಗತಿಯನ್ನು ಸಂಜೀವನಿಗೆ ಹೇಳಲು ಮೂಡ್ಲಪ್ಪ ಮಧ್ಯಾನದಿಂದಲೂ ತವಕಿಸುತ್ತಿದ್ದ. ಸಂಜೀವ ಊರಲ್ಲಿದ್ದಿದ್ದರೆ ಅವನ ಮನೆಗೇ ಹೋಗಿ ಹೇಳಿ ಬಂದಿರುತ್ತಿದ್ದ. ಅವನು ತುಮಕೂರಿಗೆ ಹೋಗಿರುವುದನ್ನು ತಿಳಿದಿದ್ದರಿಂದ ತನ್ನ ತವಕದ ಹಾವನ್ನು ತಾತ್ಕಾಲಿಕವಾಗಿ ಕಟ್ಟಿಟ್ಟು ಕೆಲಸ ಮಾಡಲು ಬಂದಿದ್ದ.
ಯಥಾವತ್ ಅರ್ಥಗಳಲ್ಲಿ ಮೂಡ್ಲಿ ಆ ಶಾಲೆಯ ಆಡಳಿತ ಮಂಡಲಿಯ ಸದಸ್ಯನಾಗಿದ್ದ. ಆದರೆ ಅವನು ಸಭೆಯ ಬಳಿ ಇರುತ್ತಿದ್ದನೇ ವಿನಹಾ ಸಭೆಯೊಳಗೆ ಎಂದೂ ಕುಳಿತವನಲ್ಲ. ಇವನ ಅಭಿಪ್ರಾಯವನ್ನು ಯಾರೂ ಎಂದೂ ಕೇಳಿದವರೂ ಅಲ್ಲ, ಇವನು ಹೇಳಿದವನೂ ಅಲ್ಲ. ಮೀಟಿಂಗಿನ ದಿನ ಸಾಮಾನ್ಯವಾಗಿ ಇವನಿಗೆ ಕರೆ ಹೋಗುತ್ತಿತ್ತು. ಅಲ್ಲಿ ಸಭೆಗೆ ಬಂದಿದ್ದ ಇತರ ದೊಡ್ಡ ಮನುಷ್ಯರಿಗೆ ಕಾಫಿ, ಟೀ, ಸಿಗರೇಟು, ಬಿಸ್ಕತ್ತು, ಊಟತಿಂಡಿಗಳ ಸರಬರಾಜು ಇವನ ಜವಾಬ್ದಾರಿಯಾಗಿತ್ತು. ಅಲ್ಲಿ ಇವನಿಗೆ ವಹಿಸಲ್ಪಡುತ್ತಿದ್ದ ಕೆಲಸವೂ ಅದೇ?! ಅಲ್ಲಿ ನೆರದಿದ್ದವರು ಏನೇನೋ ಮಾತಾಡುತ್ತಿದ್ದರು, ಬಹುಪಾಲು ಎಲ್ಲವೂ ಗೋಪ್ಯವಾಗಿರುತ್ತಿದ್ದವು. ಕೊನೆಯಲ್ಲಿ ಅದರಲ್ಲಿದ್ದ ಒಬ್ಬಿಬ್ಬರು ಮಾತ್ರ ಹೆಡ್ ಗುಮಾಸ್ತ ಪುಟ್ಟರಂಗಪ್ಪ ಹಿಡಿದು ನಿಂತಿರುತ್ತಿದ್ದ ರಿಜಿಸ್ಟರಿಗೆ ಸಹಿ ಮಾಡುತ್ತಿದ್ದರು. ಅವರದೆಲ್ಲಾ ಮುಗಿದ ಮೇಲೆ ಇಲ್ಲೊಂದು ಹೆಬ್ಬೆಟ್ಟೊತ್ತೋ, ಎನ್ನುತ್ತಿದ್ದ ಹೆಡ್ ಗುಮಾಸ್ತಿ. ಇವನು ವಿನಮ್ರನಾಗಿ ಒತ್ತುತ್ತಿದ್ದ. ಅವನೂ ಅಷ್ಟೇ ನಿಯತ್ತಾಗಿ ಹತ್ತೋ, ಹದಿನೈದೋ, ಇಪ್ಪತ್ತೋ, ಜೇಬಲ್ಲಿ ಎಷ್ಟು ಚಿಲ್ಲರೆ ಇರುತ್ತಿತ್ತೋ ಅಷ್ಟು ಕೊಟ್ಟು ಕಳಿಸುತ್ತಿದ್ದ. ಒಂದು ದಿನ ’‘ನನ್ತಾವ ಯಾಕ್ ಹೆಬ್ಬಟ್ ಆಕಿಸ್ಕಮಾದು” ಎಂದು ಕೇಳಿದ್ದಕ್ಕೆ ’‘ನಿಂಗೆ ಕೂಲಿ ಕೊಡ್ತೀವಲ್ಲೋ ಅದಕ್ಕೇ...” ಎಂದು ಹೆಡ್ ಗುಮಾಸ್ತೆ ಹೇಳಿದ್ದ. ಇವನಿಗೂ ಬೇರಾವ ಕಾರಣವೂ ಹೊಳೆಯದೆ, ಇರಬಹುದೆಂದು ಸುಮ್ಮನಾಗಿದ್ದ.
ಇವನೊಂದಿಗೆ ಮರಿಯಪ್ಪ, ಕದರಣ್ಣ, ಚಲುವಪ್ಪ, ಹೊಟ್ಗಣ್ಣ ಸಹ ಹೀಗೇ ಬರುತ್ತಿದ್ದರು. ಒಬ್ಬ ಶಾಲಾ ಕೊಠಡಿಯೊಂದನ್ನು ಮೀಟಿಂಗ್ ಹಾಲಾಗಿ ಪರಿವರ್ತಿಸುತ್ತಿರಲು, ಇನ್ನೊಬ್ಬ ಅಲ್ಲಿನ ಧೂಳನ್ನೆಲ್ಲಾ ಹೊಡೆದು ಸ್ವಚ್ಚ ಮಾಡುತ್ತಿದ್ದ. ಮತ್ತೊಬ್ಬನಾದ ದೊಡ್ಡ ಮೂಡ್ಲಿಯಂತೂ ಶಾಲಾ ಅಂಗಳವನ್ನು ನಿತ್ಯ ಸ್ವಚ್ಛಗೊಳಿಸುವ ಖಾಯಂ ಕಾಯಕ ವಹಿಸಲ್ಪಟ್ಟವನಾಗಿದ್ದ. ಆದರೆ ಶಾಲಾ ಸಿಬ್ಬಂದಿಯ ಪಟ್ಟಿಯಲ್ಲಿ ಇವನ ಹೆಸರಿರಲಿಲ್ಲ. ಇವನಿಗೆ ತಿಂಗಳಿಗೆ ನೂರೋ, ನೂರೈವ್ತತೋ, ರೂಪಾಯಿಗಳು ಸಂದಾಯವಾಗುತ್ತಿದ್ದವು. ಅದೂ ಹನುಮಪ್ಪನವರ ಜೇಬಿನಲ್ಲಿ ದುಡ್ಡಿದ್ದ ದಿನ. ಮೀಟಿಂಗ್ ದಿನ ಇವರೆಲ್ಲಾ ಹೆಬ್ಬೆಟ್ಟು ಒತ್ತಿ ತಲಾ ಹತ್ತೋ, ಹದಿನೈದೋ ಪಡೆಯುತ್ತಿದ್ದರು. ಕೆಲವೊಮ್ಮೆ ಇವರಿಂದ ಯಾವ್ಯಾವುದೋ ಕಾಗದ ಪತ್ರಗಳಿಗೆಲ್ಲಾ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದುದೂ ಉಂಟು. ಅದರಲ್ಲಿ ದೊಡ್ಡಮೂಡ್ಲಿಯ ಖದರ್ರೇ ಬೇರೆ, ಇವನು ಆಗಾಗ ಖಾಲಿ ಚೆಕ್ ಪುಸ್ತಕಕ್ಕೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದ. ಹಾಗೆ ಚೆಕ್ ಪುಸ್ತಕಕ್ಕೆ ಇಪ್ಪತ್ತೋ ಮುವತ್ತೋ ಹೆಬ್ಬೆಟ್ಟು ಒತ್ತಿದ ದಿನ ಅವನಿಗೆ ನೂರು ರೂಪಾಯಿ ಗರಿಗರಿನೋಟು ನಗದಾಗಿ ಸಂದಾಯವಾಗುತ್ತಿತ್ತು. ಇದೇ ಇವರಿಗೆಲ್ಲಾ ಸಂತೋಷ, ಸಂಭ್ರಮ,. ಗೌರವ.. ಇತ್ಯಾದಿ, ಇತ್ಯಾದಿ... ಸಂಗತಿಗಳಾಗಿದ್ದವು.
ಸುಮಾರು ವರ್ಷಗಳ ಹಿಂದಿನ ಮಾತು. ಹಲವಾರು ಚುನಾವಣೆಗಳಲ್ಲಿ ಸೋತು ಸೋತು ಸುಣ್ಣವಾಗಿದ್ದ ಹನುಮಪ್ಪನವರು ಒಮ್ಮೆ ಯಾರೋ ಒಬ್ಬರು, ಬ್ರಹ್ಮಗಿರಿಯಲ್ಲಿ ಮಹಾಮಹಿಮಾನ್ವಿತ ಸ್ವಾಮಿಗಳಿರುವ ಸಂಗತಿ ತಿಳಿಸಿದ್ದರಂತೆ. ಅದನ್ನೇ ನೆಪವಾಗಿಟ್ಟುಕೊಂಡು ಇವರೂ ತೆಂಗಿನಕಾಯಿ ಮಾರಿದ್ದ ಲಕ್ಷ ರೂಪಾಯಿಯಲ್ಲಿ ಆಳುಗಳ ಕೂಲಿಯನ್ನೂ ಕೊಡದೆ ತೆಗೆದುಕೊಂಡು ಹೋಗಿದ್ದರಂತೆ. ಇವರ ಭಕ್ತಿಯ ಪರಾಕಾಷ್ಠೆಯನ್ನು ನೋಡಿದ ಸ್ವಾಮಿಗಳು, ಇವರ ದುಃಖದುಮ್ಮಾನಗಳನ್ನೆಲ್ಲಾ ಕೇಳಿ ಬೇಸರಗೊಂಡು, ’ನೀನು ಈಗಿಂದೀಗಲೇ ಒಂದು ಶಾಲೆಯನ್ನು ಆರಂಭಿಸು. ನಿನ್ನ ಅದೃಷ್ಟ ತಾನೇತಾನಾಗಿ ಖುಲಾಯಿಸಿ ಹೋಗುತ್ತದೆಂದು’ ಆಶೀರ್ವದಿಸಿದ್ದರಂತೆ. ಯಶಸ್ಸಿಗಾಗಿ ಯಾವುದೋ ಯಂತ್ರ ತಂತ್ರ ಮಂತ್ರಗಳ ನಿರೀಕ್ಷೆಯಲ್ಲಿ ಹೋಗಿದ್ದ ಹನುಮಪ್ಪನವರಿಗೆ ಶಾಲೆಯನ್ನು ತೆರೆಯುವುದಕ್ಕೂ, ತಾನು ರಾಜಕೀಯವಾಗಿ ಮೇಲೇಳುವುದಕ್ಕೂ ತಿಲಮಾತ್ರ ಸಂಬಂಧಕಾಣದೆ ಕಂಗಾಲಾಗಿ ಅಡ್ಡಬಿದ್ದಿದ್ದಾಗ, ಹಾಲಿ ಯಶಸ್ವಿ ರಾಜಕಾರಣಕ್ಕೂ ಅವರ ಬೆಂಬಲಕ್ಕಿರುವ ಶಿಕ್ಷಣ ಸಂಸ್ಥೆಗಳಿಗೂ ಇರುವ ಕಾರ್ಯಕಾರಣ ಸಂಬಂಧಗಳನ್ನು ವಿವರಿಸಿ ಹೇಳಿ, ’‘ಜೈ ಭಗಂಡೇಶ್ವರಾಯ ನಮಃ” ಎಂಬೊಂದು ಬೀಜಮಂತ್ರವನ್ನು ಅವರ ಕಿವಿಯಲ್ಲಿ ಉಸುರಿದ್ದರಂತೆ.
ಅವರ ಕೃಪಾಶೀರ್ವಾದದಿಂದ ಪುಳಕಿತರಾದ ಹನುಮಪ್ಪನವರು ಶ್ರೀ ಭಗಂಡೇಶ್ವರ ಶಿಕ್ಷಣ ಸಂಸ್ಥೆಯನ್ನು ತೆರೆಯುವುದೆಂದು ನಿರ್ಧರಿಸಿ, ಸಿದ್ದತೆಗಳನ್ನೆಲ್ಲಾ ಮಾಡಿಕೊಂಡು ಹೋಗಿದ್ದಾಗ, ಅದೇ ಶಿಕ್ಷಣ ಇಲಾಖೆಯಲ್ಲಿ ಉನ್ನತಾಧಿಕಾರದಲ್ಲಿದ್ದ ಅವರ ಭಾವನೆಂಟನೊಬ್ಬ, ಅದರಲ್ಲಿದ್ದ ಅವರ ಜಾತಿಯ ಹೆಸರುಗಳನ್ನೆಲ್ಲಾ ಕಿತ್ತಾಕಿ, ಊರಿನ ಏಳೆಂಟು ಮಂದಿ ಹೆಬ್ಬೆಟ್ಟಿನ ಎಸ್ಸಿ, ಎಸ್ಟಿಗಳ ಹೆಸರೇಳಲು ಕೇಳಿದ್ದರಂತೆ. ಇವರು ಹೇಳಿದ್ದರಂತೆ. ಶಾಲೆ ಆರಂಭವಾಗಿ, ಕೆಲವೇ ತಿಂಗಳುಗಳಲ್ಲಿ ಗ್ರಾಂಟೂ ಸಿಕ್ಕಿ, ಹೊಸ ಮೇಡಮ್ಮ, ಮೇಷ್ಟ್ರುಗಳ ನೇಮಕಾತಿಯಲ್ಲಿ ಗುರುಗಳಿಗೆ ಕೊಟ್ಟಿದ್ದ ಕಾಣಿಕೆಯ ಹತ್ತರಷ್ಟು ವಸೂಲಾಗಿ, ಒನ್ ಟೈಂ ಗುರುಗಳು, ಶಾಶ್ವತ ಗುರುಗಳಾಗಿ ಪ್ರತಿಷ್ಠಾಪನೆಯಾಗಿದ್ದರು. ಅವರ ಮಾರ್ಗದರ್ಶನದಲ್ಲಿಯೇ ಸದರಿ ಶ್ರೀಭಗಂಡೇಶ್ವರ ಗ್ರಾಮಾಂತರ ಪ್ರೌಢಶಾಲೆ, ಇಂದು ಕಿರಿಯ ಕಾಲೇಜೂ ಆಗಿ ತನ್ನ ಜನ್ಮದಾತನೊಂದಿಗೆ ತಾಲ್ಲೂಕಿನಲ್ಲಿ ವಿಚಿತ್ರ ಗೌರವಾದರಗಳಿಗೆ ಪಾತ್ರವಾಗಿತ್ತು.
ಇದೆಲ್ಲಾ ಏನೇ ಇರಲಿ ಕಳೆದ ಹಲವಾರು ವರ್ಷಗಳಿಂದ ಶಾಲೆ ಸುಗಮವಾಗಿ ಸಾಗುತ್ತಾ, ಸುತ್ತೇಳಳ್ಳಿಯ ಜನಕ್ಕೆ ವಿದ್ಯಾದಾನದ ಕೇಂದ್ರವಾಗಿ, ನಮ್ಮ ಹೆಣ್ಣು ಮಕ್ಕಳೂ ಹೈಸ್ಕೂಲು ಮೆಟ್ಟಿಲತ್ತುವಂತೆ ಮಾಡಿತ್ತು. ಈ ನಡುವೆಯೇ ದೊಡ್ಡ ಮೂಡ್ಲಯ್ಯ ನಿಧನನಾಗಿದ್ದ. ಆ ಜಾಗಕ್ಕೆ ಅವನ ಮಗ ಸಣ್ಣಮೂಡ್ಲಯ್ಯ ಬಂದಿದ್ದ. ಈ ಸಣ್ಣಮೂಡ್ಲಿಗೆ ಸದರಿ ಭಗಂಡೇಶ್ವರದಲ್ಲಿ ಪೀವನ್ ಕೆಲಸ ಕೊಡಿಸಲು ದೊಡ್ಡಮೂಡ್ಲಿ ಹನುಮಪ್ಪನವರನ್ನು ಹದ್ದಿನಂತೆ ಕಾದಿದ್ದ. ಅವರ ಸಕಲೆಂಟು ಕೆಲಸಗಳನ್ನೂ ಚಾಚೂತಪ್ಪದೆ, ಕಾಲಲ್ಲಿ ತೋರಿಸಿದ್ದನ್ನು ತಲೆಯ ಮೇಲೊತ್ತುಕೊಂಡು ನೆರವೇರಿಸಿದ್ದ.
ಆರಡಿ ಎತ್ತರದ ದಬ್ಬೆದೇಹದ ಆಳು ಹನುಮಪ್ಪನ ಹಿಂದೆ ಆರೂವರೆ ಅಡಿ ಎತ್ತರದ ದೊಡ್ಡಮೂಡ್ಲಿ ಹುರಿಗಟ್ಟಿದ ತೋಳುಗಳನ್ನು ಬೀಸುತ್ತಾ, ಮೂರಡಿ ಅಂತರದಲ್ಲಿ ನಡೆಯುತ್ತಿದ್ದರೆ ನೆಲ ದಿಗ... ದಿಗ್... ಎನ್ನುತ್ತಿತ್ತು. ಈ ಸದ್ದು ಯಾರ ನಡಿಗೆಯದ್ದೆಂದು ತಿಳಿಯದ ಜನ, ಅದು ಹನುಮಪ್ಪನವರದೇ ಎಂದು ತಪ್ಪುಭಾವಿಸಿ ಕಣ್ಣೆತ್ತಿ ಅತ್ತ ನೋಡಲೂ ಹಿಂಜರಿಯುತ್ತಿದ್ದರು. ಆದರೆ ಈ ಹೆಜ್ಜೆ ಸದ್ದುಗಳ ಮರ್ಮಬಲ್ಲ ಕೆಲವು ಬಿನ್ನಾಣಗಿತ್ತಿಯರು ಕಿಸಕ್ಕನೆ ನಕ್ಕು, ಪುಸಕ್ಕನೆ ಉಗುಳಿ ಸುಮ್ಮನಾಗುತ್ತಿದ್ದರು.
ಇಂಥಾ ಮೂಡ್ಲಿಯ ಮಗನಿಗೆ ಪೀವನ್ ಕೆಲಸ ಕೊಡುವುದಾಗಿ ಹನುಮಪ್ಪನವರು ಮಾತು ಕೊಡುತ್ತಾ, ’ಈಗಿರೋ ಮೂದೇವಿ ಮಾದೇವ ಇನ್ನು ಮೂರುವರ್ಷದಾಗೆ ರಿಟೇಲ್ಡ್ ಆಗ್ತಾನೆ, ಅವನು ಹೋಗ್ತಿದ್ದಂಗೆ ಆ ಕೆಲ್ಸ ನಿನ್ನ ಮಗ್ನಿಗೇ ಕಣೋ’ ಎಂದಿದ್ದರು. ಒಂದು ದಿನ ಈ ಮೂದೇವಿ ಮಾದೇವ ರಿಟೇರ್‍ಡ್ ಆಗೋದ. ಅವನು ಹೋಗುತ್ತಿದ್ದಂತೆಯೇ ಆ ಸ್ಥಾನದಲ್ಲಿ ವಚನಬದ್ಧರಾದ ಹನುಮಪ್ಪನವರು ಚಿಕ್ಕ ಮೂಡ್ಲಿಯನ್ನು ಪ್ರತಿಷ್ಠಾಪಿಸಿದರು. ಇದಕ್ಕೆ ಮುಂಚಿನಿಂದಲೂ ಇಲ್ಲಿ ಇನ್ನೊಬ್ಬ ಪೀವನ್ ಮಾದೇವೇಗೌಡ ಡ್ಯೂಟಿಯ ಮೇಲಿದ್ದ. ಆದರೂ ಅಂದಿನಿಂದ ತನ್ನ ಮಗ ನಾಕಂಕಿಯ ಸಂಬಳದ ಸರದಾರನಾಗುವ ಕನಸುಕಾಣುತ್ತಾ, ’‘ಅಂತೂ ನಮ್ಮ ಜನ್ಮಾ ಸಾರ್‍ತ ಆತು” ಎಂಬ ಧನ್ಯತಾಭಾವದಲ್ಲಿ ಮೊದಲಿಗಿಂತ ಮಿಗಿಲಾಗಿಯೇ ಅಪ್ಪ, ಮಗ ಶಾಲೆ ಹಾಗೂ ಹನುಮಪ್ಪನವರ ಸೇವೆಯಲ್ಲಿ ತೊಡಗಿಕೊಂಡರು.
ಹೀಗಾಗಿ ಎರಡು ವರ್ಷಗಳು ಸಂದವು. ದಿನಗಳಿಗೆ ಯಾರ ನದರೂ ಇರುವುದಿಲ್ಲ. ಅವು ಮತ್ತೆ ಮತ್ತೆ ಉರುಳುತ್ತಲೇ ಹೋದವು, ಆದರೂ ಚಿಕ್ಕಮೂಡ್ಲಿ ಪೀವನ್‌ಗಿರಿ ಖಾಯಮ್ಮಾಗಿರಲಿಲ್ಲ. ಈ ನದರಿಲ್ಲದ ದಿನಗಳನ್ನು ಹನುಮಪ್ಪ ಮತ್ತಷ್ಟು ಮುಂದೂಡುತ್ತಲೇ ಬಂದರು, ಅದನ್ನು ವರ್ಷಾನುಗಟ್ಟಲೆಯವರೆಗೆ ವಿಸ್ತರಿಸುತ್ತಾ ಹೋದರು. ಒಂದು ದಿನ ಖಾಯಮ್ಮಾತಿಯ ಆದೇಶವೂ ಬಂತು. ಆದರೆ ಅದರಲ್ಲಿ ಚಿಕ್ಕಮೂಡ್ಲಿಯೊಂದಿಗಿದ್ದ ಇನ್ನೊಬ್ಬ ಪೀವನ್ ಮಾದೇವೇಗೌಡನ ಹೆಸರಿತ್ತು. ಇವನು ಹನುಮಪ್ಪನವರ ಹೆಂಡತಿಯ ಚಿಕ್ಕತಂಗಿಯ ಕೊನೆಯ ಮಗ.
ಈ ಸುದ್ದಿಯನ್ನು ಹೆಡ್‌ಗುಮಾಸ್ತನಿಂದ ತಿಳಿದ ದಿನ ತುಂಬಾ ಖಿನ್ನನಾದ ದೊಡ್ಡಮೂಡ್ಲಿ ಮಧ್ಯಾನಕ್ಕೇ ಮನೆ ಸೇರಿದ. ಸಂಜೆಯಹೊತ್ತಿಗೆ ಕುಡಿದಿದ್ದು ಇಳಿಯದಿದ್ದರೂ ಹನುಮಪ್ಪನವರ ಮನೆಗೆ ಹೋದ. ಅವರು ತೋಟಕ್ಕೆ ಹೋಗಿರುವ ಸಂಗತಿ ಕೇಳಿ ಅಲ್ಲಿಗೇ ಹೋದ. ನಡುರಾತ್ರಿಯ ಹೊತ್ತಿಗೆ ಹನುಮಪ್ಪನವರ ತೋಟದ ಆಳು ಮುತ್ತಣ್ಣ ಹಟ್ಟಿಗೆ ಬಂದು ’ದೊಡ್ಡಮೂಡ್ಲಿಗೆ ಹಾಲ್ಟ್‌ಪೇಲಾಗಿ ತೋಟದಲ್ಲಿ ಬಿದ್ದೌನೆ’ ಎಂಬ ಸುದ್ದಿಕೊಟ್ಟ. ಅವನ ಹೆಂಡತಿಯೂ, ಚಿಕ್ಕಮೂಡ್ಲಿಯೂ ಹಟ್ಟಿಯ ಹಿತೈಷಿಗಳೊಂದಿಗೆ ಹೋಗುವಲ್ಲಿಗೆ ತೆಂಗಿನ ಗಿಡದ ಬುಡವೊಂದರಲ್ಲಿ ಘಟೋದ್ಘಜನಂಥ ಮೂಡ್ಲಿ ಅಸ್ತವ್ಯಸ್ತವಾಗಿ ಬಿದ್ದಿದ್ದ. ಅವನ ಬಲಗೈಲಿ ಒಂದು ಕುಡುಲಿತ್ತು. ದುಃಖಿತರಾಗಿದ್ದ ಹನುಮಪ್ಪನವರು ತೋಟದ ಮನೆಯ ಒಪ್ಪಾರದ ಕೆಳಗೆ ಆರಾಮ ಕುರ್ಚಿಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದರು. ‘ನನ್‌ಗಂಡ ಅಂಗೆಲ್ಲಾ ಸಾಯೋನಲ್ಲಾ.... ಯಾರೋ ಸಾಯ್ಸೌರೆ...’ ಇತ್ಯಾದಿ ಪದಪುಂಜಗಳೊಂದಿಗೆ ಚೀರಾಡುತ್ತಿದ್ದ ಮೂಡ್ಲಿಯ ಹೆಂಡತಿಯನ್ನು ಸ್ವತಃ ಹನುಮಪ್ಪನವರೇ ಸಂತೈಸಿದರು.
ಇದಾದ ಕೆಲವೇ ದಿನಗಳಲ್ಲಿ ಚಿಕ್ಕಮೂಡ್ಲಿ, ದೊಡ್ಡಮೂಡ್ಲಿಯ ಸ್ಥಾನವನ್ನು ಆಕ್ರಮಿಸಿದ. ಅವನಿಗೂ ಹನುಮಪ್ಪನವರ ಜೇಬಿನಲ್ಲಿದ್ದಾಗ ನೂರೋ... ನೂರೈವತ್ತೋ... ಸಂದಾಯ ಆರಂಭವಾಯಿತು. ಇದನ್ನು ಕಂಡು, ಅದೂ... ಇದೂ... ಗುಸುಗುಟ್ಟುತ್ತಿದ್ದ ಊರ ಜನ ಹಳೆಯದನ್ನೆಲ್ಲಾ ಮರೆತು ದೊಡ್ಡಮನುಷ್ಯರೆನಿಸಿಕೊಂಡರು.
೨
ದಯಾಮಯನಾದ ಕಾಲನ ಚಲನಶೀಲ ಚಕ್ರದ ಯಾವುದೋ ಮೂಲೆಯಲ್ಲಿ ಒಣಗಿದ ಸಿಂಬಳದಂತೆ ಅಂಟಿಕೊಂಡಿದ್ದ ಆಂಜನೇಯ ಆಯುಷ್ಕರ್ಮಶಾಲೆಯ ಮಾಲೀಕನೂ ಹಾಗೂ ಉತ್ತಮ ಕೆಲಸಗಾರನೂ ಆಗಿದ್ದ ಅಪ್ಪಣ್ಣನೆಂಬುವರ ಹಿರಿಯ ಮಗನಾದ ಸಂಜೀವನೆಂಬುವನು ಇದೇ ಶಾಲೆಯಲ್ಲಿ ಹೈಸ್ಕೂಲು ಓದಿ, ತುಮಕೂರಿನಲ್ಲಿ ಪಿಯುಸಿ ಮುಗಿಸಿ, ಪದವಿಗೆಂದು ಬೆಂಗಳೂರಿನ ದಾರಿ ಹಿಡಿದವನು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರನಾಗಿ, ಎಲ್ಲೆಲ್ಲೋ ಕೆಲಸಕ್ಕಾಗಿ ಪರದಾಡಿ, ಊರಿಗೆ ಹಿಂತಿರುಗುವ ಹೊತ್ತಿಗೆ ಏಳು ವರ್ಷಗಳು ಸಂದಿದ್ದವು.
ಅಪ್ಪಣ್ಣ ತುಂಬಾ ಶಿಸ್ತಿನ, ಭಾರೀ ಮಹತ್ವಾಕಾಂಕ್ಷೆಯ ಮನುಷ್ಯ. ಯಾವ ಹೊತ್ತಿನಲ್ಲಿ, ಯಾವ ದೈವದ ಪ್ರೇರಣೆಯಾಗಿತ್ತೋ! ಅಂತೂ ತನ್ನ ಮಗ ಡಿಗ್ರಿ ಮಾಡಿ, ಇದೇ ಹೈಸ್ಕೂಲಿನಲ್ಲಿ ಶಿಕ್ಷಕನಾಗಬೇಕೆಂದು ಕನಸುಕಂಡಿದ್ದ. ತನ್ನ ಮಕ್ಕಳನ್ನು, ತನ್ನಂತೆ ಕತ್ತಿ ಹಿಡಿಸಬಾರದೆಂಬುದು ಅವನ ಬದುಕಿನ ಛಲವಾಗಿತ್ತು. ಹಾಗಾಗಿ ತನ್ನ ಆರೂ ಮಂದಿ ಮಕ್ಕಳನ್ನು ಹೆಣ್ಣು-ಗಂಡುಗಳ ಬೇಧವಿಲ್ಲದೆ ಓದಿಸಿದ್ದ. ಹಾಗಾಗಿ ಅವನ ತೂಕ ಊರಲ್ಲಿ ನೂರಾರು ಕೇಜಿಯಷ್ಟು ಹೆಚ್ಚಾಗಿತ್ತು.
ಮಗ ಅವನ ನಿರೀಕ್ಷೆ ಮೀರಿ ಓದಿ, ಎಲ್ಲೋ ಮೇಷ್ಟ್ರಾಗುವುದು ಅವನಿಗೆ ಇಷ್ಟವಿರಲಿಲ್ಲ. ಮಗ ಎಲ್ಲೆಲ್ಲೋ ಕೆಲಸಕ್ಕೆ ಪ್ರಯತ್ನಿಸುತ್ತಿರುವುದನ್ನು ಕಂಡು, ತಾಳಲಾರದೆ, ಒಂದು ದಿನ ಹನುಮಪ್ಪನವರ ಮನೆ ಹಾದಿ ಹಿಡಿದಿದ್ದರು. ದೈವೇಚ್ಛೆ ಅವರಿಗೆ ಅನುಕೂಲವಾಗಿ ‘ಆಯ್ತು ಕರ್‍ಸು, ನೋಡನಾ’, ಎಂದಿದ್ದರು. ಅಲ್ಲಿಗಾಗಲೇ ಸಂಜೀವನ ಇಂಗ್ಲಿಷ್ ಪಾಂಡಿತ್ಯ ಸುತ್ತೇಳಳ್ಳಿಗಳಲ್ಲಿ ಗಾಳಿಸುದ್ದಿಯಾಗಿ ಹಬ್ಬಿತ್ತು. ಸಂಜೀವ ಊರಿಗೆ ಬರುವಾಗಲೇ ಊರವರ ಗೌರವಾದರಗಳಿಗೆ ಪಾತ್ರನಾಗಿದ್ದ. ಇಂಥ ಊರ ಜನರಲ್ಲಿ ಹನುಮಪ್ಪನೂ ಒಬ್ಬರಾಗಿದ್ದರು.
ಅವನು ಊರಿಗೆ ಬರುತ್ತಲೇ ಅವನನ್ನು ಕರೆದು, ಗೌರವದಿಂದ ಮಾತಾಡಿಸಿ, ’‘ನಿನಗೆ ಹೈಸ್ಕೂಲು ಮೇಷ್ಟ್ರ ಕೆಲಸವೇನೂ ಬೇಡ. ಹೇಗಿದ್ದರೂ ನಮ್ಮಲ್ಲಿ ಜೂನಿಯರ್ ಕಾಲೇಜಾಗಿದೆ, ನೀನು ಅಲ್ಲಿಯೇ ಸದ್ಯಕ್ಕೆ ಪಾರ್ಟ್ ಟೈಂ ಕೆಲಸ ಮಾಡ್ತಿರು, ಅದು ಅಪ್ರೂವ್ ಆಗ್ತಿದ್ದಂಗೇ ಖಾಯಂಮಾಡೋಣ” ಎಂದು ಹೇಳಿದ್ದರು. ಸಂಜೀವನಿಗೆ ಹನುಮಪ್ಪನವರ ಇತಿಹಾಸದ ಇಂಚಿಂಚೂ ಗೊತ್ತಿದ್ದರೂ, ಹಟಾತ್ತಾಗಿ ಅವರ ಮೇಲೆ ಗೌರವ ಮೂಡಿತ್ತು. ಆದರೂ ಈಗಾಗಲೇ ಎರಡು ವರ್ಷದಿಂದ ಫುಲ್ ಟೈಂ ಕೆಲಸ ಮಾಡುತ್ತಿರುವ ಬೆಟ್ಟೇಗೌಡರ ಮಗ ರಾಮಲಿಂಗೇಗೌಡನ ಬಗ್ಗೆ ಅವರು ಏನೂ ಹೇಳದೇ ಹೋದದ್ದು ಒಗಟಾಗಿ ಕಾಣಿಸಿತ್ತು.
ಮರುದಿನವೇ ಪಾರ್ಟ್ ಟೈಂ ಉಪನ್ಯಾಸಕನಾಗಿ ಕಾಲೇಜು ಸೇರಿದ ಸಂಜೀವ ಕೆಲವೇ ದಿನಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿ ರಾರಾಜಿಸತೊಡಗಿದ. ಪ್ಲೇಟೋನಿಂದ ಹಿಡಿದು ಕೆ.ವಿ.ಪುಟ್ಟಪ್ಪನವರವರೆಗೆ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಬೋಧಿಸಬಲ್ಲ, ತಾನು ಬೋಧಿಸಿದ್ದನ್ನು ಅರ್ಥಮಾಡಿಸಬಲ್ಲ ಕಲೆಗಾರಿಕೆ ಅವನಿಗೆ ಸಿದ್ಧಿಯಾಗಿತ್ತು. ಇಂಗ್ಲಿಷ್ ಅವನ ಬಾಯಲ್ಲಿ ನೀರಿನಂತೆ ಹರಿದಾಡುತ್ತಿತ್ತು. ಅವನ ಉಚ್ಚಾರಣೆಯಂತೂ ಎಷ್ಟೋ ಹರೆಯದ ಹೃದಯಗಳಿಗೆ ಲಗ್ಗೆ ಹಾಕಿತ್ತು. ಇವನು ಪಾಠ ಮಾಡಲು ನಿಂತನೆಂದರೆ ಶಾಲೆಗೆ ಶಾಲೆಯೇ ಸೂಜಿಗಲ್ಲಿನ ಮೇಲೆ ನಿಲ್ಲುತ್ತಿತ್ತು. ಎಂತೆಂಥಾ ಪೋಲಿ ಪಟಾಲಂಗಳೆಲ್ಲಾ ಇವನ ತರಗತಿಯಲ್ಲಿ ತಿಕಬಾಯಿ ಹೊಲೆದುಕೊಂಡವರಂತೆ ಬಿದ್ದಿರುತ್ತಿದ್ದರು.
ಹೈಸ್ಕೂಲಿನ ಮಕ್ಕಳ ಇಂಗ್ಲಿಷ್ ಸಾಮರ್ಥ್ಯ ಬಲ್ಲವನಾದ ಈತ, ಅವರಿಗೂ ಜನರಲ್ ಇಂಗ್ಲಿಷ್ ಬಗ್ಗೆ ವಾರಕ್ಕೆರಡು ಗಂಟೆ ಕಂಬೈನ್ಡ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದ. ಇಡೀ ಹೈಸ್ಕೂಲಿನ ಅರ್ಧಸಾವಿರಕ್ಕೆ ಹತ್ತಿರವಾದ ವಿದ್ಯಾರ್ಥಿ ಸಮೂಹ ಮಂತ್ರಮುಗ್ಧವಾಗಿ ಇವನ ಪಾಠ ಕೇಳುತಿತ್ತು. ಇವನ ಜನಪ್ರಿಯತೆ ಎಷ್ಟು ಹೆಚ್ಚಿತ್ತೆಂದರೆ, ಇಂಗ್ಲಿಷಿನ ಬಗ್ಗೆ ಭಯ ಭಕ್ತಿ, ಕುತೂಹಲ, ಗೌರವಗಳಿದ್ದ ಊರ ವಿದ್ಯಾವಂತರೂ, ಗೃಹಿಣಿಯರೂ, ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳೂ ಇವನ ಕ್ಲಾಸಿಗೆ ಬರಲಾರಂಭಿಸಿದ್ದರು. ಅನೇಕ ಬಾರಿ ಸ್ವಂತ ಹನುಮಪ್ಪನವರೂ ಪ್ರಿನ್ಸಿಪಾಲರ ಸಹಿತ ಬಂದು ಕೂರುವುದುಂಟು.
ಈ ನಡುವೆ ಇವನ ಜನಪ್ರಿಯತೆಯಿಂದ ಹೆಚ್ಚು ಅಸಂತುಷ್ಟರಾದವರೆಂದರೆ ಹೈಸ್ಕೂಲಿನ ಇಂಗ್ಲಿಷ್ ಮೇಷ್ಟ್ರು ರಾಮರಾಯರು ಮತ್ತು ಸ್ವತಃ ರಾಮಲಿಂಗೇಗೌಡರು ಮಾತ್ರ. ಸಂಜೀವನ ಎದುರಿಗೆ ತುಂಬಾ ವಿಶ್ವಾಸ ಪ್ರಕಟಿಸಿದರೂ, ಹಿಂದೆ, ಅದೂ, ಇದೂ, ಕೆಟ್ಟದ್ದಾಗಿ ಮಾತಾಡುತ್ತಿದ್ದ ಉದಾಹರಣೆಗಳನ್ನು ಜನ ಕಂಡಿದ್ದರು. ಎಲಿಯಟ್‌ನನ್ನು ’‘ಯೆಲ್ಲಿಎಟ್ಟು” ಎಂತಲೂ ಶೇಕ್‌ಸ್ಪಿಯರ್‌ನನ್ನು ‘ಶೇಖೂಸ್‌ಫಿಯರ್’ ಅಂತಲೂ ಸಂಬೋಧಿಸುತ್ತಿದ್ದ ಇವರ ಇಂಗ್ಲಿಷ್ ಪ್ರೌಢಿಮೆಯನ್ನು ಕಂಡಿದ್ದ ಊರ ಮಂದಿ ’‘ಗರ್‍ತೇರ್‍ನ ಕಂಡ್ರೆ ಗಂಡಬಿಟ್ಟೋಳಿಗೆ ಕ್ಯಾಪ್ವಂತೆ” ಎಂದು ನಗಾಡಿ ಸುಮ್ಮನಾಗುತ್ತಿದ್ದರು.
ಭಾಷೆ ಹಾಗೂ ಸಾಮಾಜಿಕ ಅಸಮಾನತೆಯ ನಡುವಿನ ಸೂಕ್ಷ ಎಳೆಗಳನ್ನು ಲೋಹಿಯಾ, ಕುವೆಂಪು, ಗಾಂಧಿ, ಎಲಿಯಟ್, ಚಾಮ್‌ಸ್ಕಿಗಳ ಸಾಂಗತ್ಯದಿಂದ ಅರಿತಿದ್ದ ಸಂಜೀವ ಪ್ರಾಥಮಿಕ ಹಂತದಲ್ಲಿಯೇ ಭಾಷೆಯ ಬೇರುಗಳನ್ನು ಗಟ್ಟಿಗೊಳಿಸದೇ ಹೋದಲ್ಲಿ, ಪ್ರೌಢತೆಯಲ್ಲೂ ಆ ಬೇರುಗಳು ಅಸ್ಥಿರವಾಗಿಯೇ ಉಳಿಯುತ್ತವೆಂದು ಆಗಾಗ ಹೇಳುತ್ತಿದ್ದ. ಹಾಗಾಗಿ, ಬೆಳಗಿನ ಹೊತ್ತು ಮಾಧ್ಯಮಿಕ ಶಾಲಾ ಮಕ್ಕಳಿಗೆ ಸರಳ ಇಂಗ್ಲಿಷ್ ಕಲಿಸುವ ತರಗತಿಗಳನ್ನು ಆರಂಭಿಸಿದ. ಹಾಗೆಯೇ ಸಂಜೆ ಹೊತ್ತು ಆಸಕ್ತಿ ಇರುವವರಿಗಾಗಿ ಸಂಜೆ ಶಾಲೆಯನ್ನು ತೆರೆದ.
ತನ್ನ ಮನೆಗೇ ಅಂಟಿಕೊಂಡಂತಿದ್ದ ತನ್ನ ಕೊಠಡಿಯಲ್ಲಿಯೇ ಆರಂಭವಾದ ಈ ತರಗತಿಗಳಿಗೆ ಸ್ವತಃ ತಾನೇ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನೂ, ಆಸಕ್ತರನ್ನೂ ಆಹ್ವಾನಿಸಿ ಬಂದ. ಕೆಲವೇ ದಿನಗಳಲ್ಲಿ ಅವನ ಊಹೆ ಮೀರಿ ಊರಿನ ಎಲ್ಲಾ ವರ್ಗಗಳಿಂದ, ಜಾತಿಗಳಿಂದ ಅದರಲ್ಲೂ ಮುಖ್ಯವಾಗಿ ಹರಿಜನ, ಗಿರಿಜನ, ಅಗಸ, ಹಜಾಮ, ಕೊರಚ, ಆಚಾರಿ ಜಾತಿಗಳೇ ಮೊದಲಾಗಿ ದಾಸರು, ತಿಗಳರಮಕ್ಕಳಿಂದ ಇವನ ಶಾಲೆ ಕಿಕ್ಕಿರಿದು ತುಂಬಿತು. ತರಗತಿಗಳನ್ನು ಬ್ಯಾಚ್ ಮಾಡಿದ. ಆದರೂ ಜಾಗ ಸಾಕಾಗುತ್ತಿರಲಿಲ್ಲ. ಅದರಲ್ಲೂ ಕೆಲವು ಪ್ರತಿಷ್ಠಿತರ ಮಕ್ಕಳು ‘ಅವನ ಪಕ್ಕ ನಾನು ಕೂತ್ಕಳಲ್ಲಾ ಸಾರ್!?, ಇವನು ಮೈ ಮುಟ್ಟುಸ್ತಾನೆ ಸಾರ್...’ ಎಂಬಂಥ ದೂರಗಳನ್ನು ಹೇಳಿದಾಗ ಇವನಿಗೆ ಮೈ ಪರಚಿಕೊಂಡಂತಾಗುತ್ತಿತ್ತು. ಮಕ್ಕಳಿಗೆ ಸಾಧ್ಯವಾದಷ್ಟು ಈ ಹಿರೀಕರ ರೋಗಗಳಿಂದ ಮುಕ್ತಮಾಡಲು ಪ್ರಯತ್ನಿಸಿ ಬಹುಮಟ್ಟಿಗೆ ಸಫಲನಾದ. ಇದು ಸರಿಯಾಗಿ ಅಸ್ತಿತ್ವಕ್ಕೆ ಬರಲು ಒಂದು ಉಪಾಯ ಮಾಡಿದ. ಊರಿನ ಹರಿಜನ ಗಿರಿಜನ ಹಾಗೂ ಉಳಿದ ಸಣ್ಣಪುಟ್ಟ ಜಾತಿಗಳ ಮಕ್ಕಳನ್ನು ಕ್ರಮವಾಗಿ ಮುಂದಿನ ಸಾಲಿನಿಂದ ಕೂರಿಸುತ್ತಾ ಹೋದ. ಉಳಿದ, ಉಳ್ಳವರ ಮಕ್ಕಳು ಹಿಂದಿನ ಸಾಲಿನಲ್ಲಿ ಜಾಗ ಪಡೆದರು. ಮುಂದೆ ಕೂರಲು ಯಾರಿಗೆ ಇಷ್ಟವಿದೆಯೋ ಅವರು ಅಲ್ಲಿ ಯಾರಾದರಿರಲಿ ಅವರೊಟ್ಟಿಗೆ ಹೊಂದಿಕೊಂಡು ಕುಳಿತುಕೊಳ್ಳಬೇಕೆಂದು ಕಟ್ಟಾಜ್ಞೆ ಮಾಡಿದ.
ಈ ವ್ಯವಸ್ಥೆ ಊರಿನ ಅನೇಕರ ಅಸಮಾಧಾನಕ್ಕೆ ಕಾರಣವಾಗಿ, ಅಂಥವರು ತಮ್ಮ ಮಕ್ಕಳನ್ನು ಅಲ್ಲಿಗೆ ಹೋಗದಂತೆ ತಡೆದರು. ಆದರೆ ಅಲ್ಲಿಗೆ ಹೋಗುವ ಮಕ್ಕಳು ಶಾಲೆಯಲ್ಲಿ ಕೇವಲ ಇಂಗ್ಲಿಷ್ ಮಾತ್ರವಲ್ಲದೆ ಉಳಿದ ವಿಷಯಗಳಲ್ಲೂ ಮುಂದಾಗಿರುವುದನ್ನು ನೋಡಿ, ಹೆತ್ತವರ ಮಾತನ್ನು ಧಿಕ್ಕರಿಸಿ ಕೆಲವರು, ಕದ್ದೂಮುಚ್ಚಿ ಅನೇಕರು ಅಲ್ಲಿಗೆ ಹೋಗಲಾರಂಭಿಸಿದರು. ಅಲ್ಲದೆ ತಮ್ಮಿಂದ ಒಂದು ಪೈಸೆ ಮುಟ್ಟದೆ, ಅಲ್ಲಿದ್ದವರನ್ನೆಲ್ಲಾ ಪ್ರೀತಿಯಿಂದ ಭಾವಿಸುತ್ತಿದ್ದ , ಎಂದೂ ತಮ್ಮ ಪೋಷಕರಂತೆ ದುಷ್ಟರೀತಿಯಲ್ಲಿ ಯೋಚಿಸಿದ್ದನ್ನು, ನಡೆದುಕೊಂಡಿದ್ದನ್ನು ಕಂಡಿಲ್ಲದ ಮಕ್ಕಳು ಸದಾ ಸಂಜೀವನ ಪರವಾಗಿಯೇ ಇರುತ್ತಿದ್ದರು.
ಈ ಹೊತ್ತಿನಲ್ಲಿಯೇ ಪಕ್ಕದ ಮನೆಯ ಬಳೇರ ಗುಬ್ಬಣ್ಣನ ಹೆಂಡತಿ ಸುಶೀಲಮ್ಮನ ಕಡೆಯಿಂದ ವಿಚಿತ್ರ ವತಾರಗಳು ಆರಂಭವಾದವು. ಕುಲಗೆಟ್ಟೋರೆಲ್ಲಾ ದಿನಾ ನಮ್ಮ ಮನೆ ಬಾಕ್ಲಾಗೇ ಓಡಾಡ್ತಾವೆ! ಅನಿಷ್ಟ ಮುಂಡೇವು, ಶನಿಗಳು, ಇವರ ಮನೆ ಹಾಳಾಗ, ಇವುರ್‍ನ ಕಟ್ಟಿಕುಂಡುರ್‍ಸಾ, ಇವ್ರಿಗೆ ಬರಬಾರ್‍ದು ಬರಾ, ಇತ್ಯಾದಿಯಾಗಿ ಸದಾ ಶಾಪಹಾಕುತ್ತಾ, ಛೀ..ಥೂ, ಎಂದು ಮಕ್ಕಳು ಬರುವ ಹೊತ್ತಿಗೆ ಸರಿಯಾಗಿ ಸಗಣಿ ಬಗ್ಗಡ ಮಾಡಿ ಎರಚುವುದು, ಮನಸ್ಸಿಗೆ ಸಮಾಧಾನವಾಗುವಷ್ಟು ನೀರು ಸೇದಿ ಅಂಗಳಕ್ಕೆ ಹೊಯ್ದು ಮಕ್ಕಳು ಬರುವ ದಾರಿಯನ್ನೇ ಕೆಸರಗುಂಡಿ ಮಾಡುವಂಥಾ ಕ್ರಿಯೆಗಳೆಲ್ಲಾ ಆರಂಭವಾದವು. ಇದರಿಂದ ಮೊದಲೇ ಇಕ್ಕಟ್ಟಿನಲ್ಲಿದ್ದ ಪಾಠದ ಮನೆ ಕೆಸರು- ಬಗ್ಗಡಮಯವಾಗಿ, ಈ ಶೀತ ಮಕ್ಕಳಿಗೆಲ್ಲಾ ತಟ್ಟಿ, ಅವು ಸಂಜೀವನಿಗೆ ದೂರು ಹೇಳಿದವು. ಒಂದು ದಿನ ರೋಸಿಹೋದ ಸಂಜೀವ ’‘ಸುಶೀಲಮ್ಮನೋರೆ ಹೀಗೆಲ್ಲಾ ಮಾಡಬಾರದು, ಇದರಿಂದ ಮಕ್ಕಳಿಗೆಲ್ಲಾ ತೊಂದರೆಯಾಗುತ್ತೆ” ಎಂದು ಹೇಳುತ್ತಿದ್ದಂತೆಯೇ ಸುಶೀಲಮ್ಮ ಇದ್ದಕ್ಕಿದ್ದಂತೆ ಬೊಬ್ಬೆ ಹೊಡೆದು ಕೂಗಾಡಿದಳು. ಇವಳ ಕೂಗಾಟ ಕೇಳಿ ಓಡಿಬಂದ ಊರವರ ಮುಂದೆ ’‘ಇವನು ನನ್ನ ಹಿಡ್ಕಳಾಕೆ ಬಂದಿದ್ನಪ್ಪೋ” ಎಂದು ಚೀರಾಡಿದಳು. ಜೀವಂತ ಸಾಕ್ಷಿಗಳಾಗಿ ಅಲ್ಲೇ ನಿಂತಿದ್ದ ನೂರಾರು ಮಕ್ಕಳು ಕೂಡಲೇ ಕೈಗೆ ಸಿಕ್ಕಿದ್ದನ್ನು ಎತ್ತಿ ಅವಳತ್ತ ಬೀಸಿದ್ದರು.
ತಾತ್ಕಾಲಿಕವಾಗಿ ಸಂಜೀವನ ಮಾನ ಉಳಿದರೂ, ಊರಲ್ಲಿ ಲಿಂಗಾಯತರ ಮುಖಂಡ ಶಿವರುದ್ರಪ್ಪ, ಸಂಜೀವನ ಮೇಲೆ ಬೇಸರಗೊಂಡು, ಅವಕಾಶ ಸಿಕ್ಕಿದಲ್ಲೆಲ್ಲಾ ಅವನ ಪ್ರತಿಭೆಯನ್ನು ಹೊಗಳುತ್ತಲೇ... ‘ಅಂತೂ ಇಂಗ್ಲೀಸ್ ತೋರ್‍ಸಿ... ಸತಿ ಸಾವಿತ್ರಿ ಅಂತಾ ಸುಶೀಲಮ್ಮುನ್ನೇ ಅಡೀಕಾಕಂಬುಟ್ಟಾ ನೋಡಿ’ ಎಂದು ತಮ್ಮ ಆಪ್ತವಲಯದಲ್ಲಿ ಹೇಳಿಕೊಂಡಿದ್ದ. ಈ ಮಾತುಗಳು ಹೇಗೋ ಸಾವಿತ್ರಮ್ಮನ ಕಿವಿಗೆ ಬಿದ್ದು, ಅಲ್ಲಿಂದ ಹಾರಿ ಗುಬ್ಬಣ್ಣನ ಕಿವಿಗೂ ಬಿದ್ದು, ಗುಬ್ಬಣ್ಣ ಮಚ್ಚು ಹಿಡಿದು ಶಿವರುದ್ರಪ್ಪನನ್ನು ಕತ್ತರಿಸಲು ಹೋಗಿದ್ದ. ಲಾಗಾಯ್ತಿನಿಂದ ಒಂದಾಗಿದ್ದ ಲಿಂಗಾಯತರಲ್ಲಿ ವಿದ್ಯುಕ್ತವಾಗಿ ಎರಡು ಗುಂಪುಗಳಾಗಿ, ಒಂದು ಗುಂಪಿನ ಪ್ರಬಲ ವಿರೋಧದಿಂದಾಗಿ ಸಂಜೀವನ ಮನೆ ಪಾಠವೂ ವಿದ್ಯುಕ್ತವಾಗಿಯೇ ಬರಖಾಸ್ತಾಯಿತು.
೩
ಇದಾದ ಕೆಲವು ದಿನದಲ್ಲಿ ಹೊಲದ ಕಡೆಗೆ ಹೊರಟಿದ್ದ ಸಂಜೀವನನ್ನು ಕಾದಿದ್ದವನಂತೆ ಹಟ್ಟಿಯ ಬಳಿ ಕೂಡಿಕೊಂಡ ಸಣ್ಣಮೂಡ್ಲಿ, ಮಾತಾಡುತ್ತಾ ಆಡುತ್ತಾ, ನಾನೊಂದು ಮಾತೇಳ್ತೀನಿ, ಇಲ್ಲಾ ಅನ್ಬಾರ್‍ದು, ಸಿಟ್ಮಾಡ್ಕಾಬಾರ್‍ದು, ಬೇಸ್ರಾನೂ ಮಾಡ್ಕಾಬಾರ್‍ದೂ ಎಂದು ಹೇಳಿದ. ’ಏ... ಅದೇನ್ ಹೇಳಪ್ಪಾ, ಅದ್ರಾಗೆ ಬೇಸ್ರಾ ಮಾಡ್ಕಾಳಾದೇನೈತೆ’ ಎಂದ ಸಂಜೀವ. ‘ನೋಡು ಸಂಜೀವಣ್ಣಾ ಆ ಮುಂಡೇಮಗ ಶಿವರುದ್ರಯ್ಯ ನಿಂಗೆ ಸ್ಕೂಲು ಮಾಡಾಕೆ ಪ್ರೇಮ್ರಿ ಸ್ಕೂಲ್ನಾ ಕೊಡಬಾರ್‍ದಂತಾ ಹೆಡ್‌ಮೇಟ್ರಿಗೆ ಹೇಳೌನೆ. ನೀನು ಹೇಸ್ಕೂಲು ಕೇಳಿದ್ದಲ್ಲಾ ಅದೂ ನಿಂಗೆ ಸಿಗೋವಲ್ದು. ನೆನ್ನೆ ರಾತ್ರೆನಾಗೆ ಯಾರ್‍ಯಾರೋ ಬಂದು ಹೇಸ್ಕೂಲೇನಾದ್ರಾ ಬಿಟ್‌ಕೊಟ್ರೆ ಊರಾಗೆ ಬಾಳಾಬಾಳಾ ಆಗೋಗುತ್ತೇಂತಾ ಹನುಮಪ್ಪನೋರ್‍ಗೆ ಹೇಳ್ತಿದ್ರು. ಅದಕ್ಕೆ ಅವ್ರೂನೂ ಏನೋಪ್ಪ ಜನ್ರ ಮಾತೇ ನಂದೂನೂ’ ಎಂದರು, ಈಗ ನೀನು ಪಾಠ ಎಲ್ಲಿ ಮಾಡ್ತಿ? ಯಾರ್‍ಗೆ ನಿನ್ನ ಪಾಟಾ ಬೇಕೋಇಲ್ವೋ ನಂಗಂತೂ ಗೊತ್ತಿಲ್ಲ! ನನ್ಮಗ ಮರಿಯಾ ಮಾತ್ರ ನೀವು ಪಾಠ ಮಾಡ್ಲೇಬೇಕು, ಅಂತಾ ಅಟಾಇಡ್ದು ಕುಂತೌನೆ. ಅದುಕ್ಕೇ ಹೇಳ್ದೆ, ನಂಗೊಂದು ಯೋಚ್ಣೆ ಐತೆ, ನಮ್ಮಟ್ಟಿಯಾಗೆ ಐತಲ್ಲಾ ನಾಟ್ಕುದ್ಮನೆ ಅದರಾಗೆ ಯಾಕೆ ಮಾಡಬಾರದೂಂತಾ ನಿನ್ನ ಕೇಳಾನ ಅಂತಾ ಬಂದೆ. ತಪ್ಪಾದ್ರೆ ಕ್ಸಮಸಿಬಿಡಪ್ಪೋ’ ಅಂದ.
ಕೂಡಲೇ ಸಂಜೀವ ಲಾಟರಿ ಹೊಡೆದವನಂತೆ ’ಫೆಂಟಾಸ್ಟಿಕ್, ನಂಗೆ ಈ ಐಡಿಯಾನೆ ಬಂದಿರ್‍ಲಿಲ್ವೆಲ್ಲೋ?! ನಾಳೆಯಿಂದ ಅಲ್ಲೇ ನಮ್‌ಸ್ಕೂಲು ಮಾಡೊಣ್‌ಕಣ್ಲಾ, ನಾಳೆ ಸ್ಕೂಲಿನ ಗೇಟಿಂನ್ತಾವ ನಿಂತ್ಕಂಡು ಎಲ್ಲಾ ಸ್ಟೂಡೆಂಟ್ಸಿಗೂ ಹೇಳಿಬಿಡು, ಎಂದು ಹೇಳುತ್ತಾ ಹಸಿರು ಚೆಲ್ಲುತ್ತಿದ್ದ ಹೊಲಗಳತ್ತ ಹೆಜ್ಜೆ ಹಾಕಿದ.
ಆ ವರ್ಷದ ಫಲಿತಾಂಶ ಬಂದಿತ್ತು. ಶೇಕಡಾ ಅರವತ್ತು ಭಾಗ ವಿದ್ಯಾರ್ಥಿಗಳು ಪಾಸಾಗಿದ್ದರು. ಉಳಿದ ನಲವತ್ತು ಭಾಗದಲ್ಲೂ ಮೂವತ್ತು ಜನ ಇಂಗ್ಲಿಷ್‌ನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದ್ದರೂ, ಗಣಿತ, ವಿeನದಲ್ಲಿ ದಯನೀಯವಾಗಿ ದಂಡ ಹೊಡೆದಿದ್ದರು. ಶಾಲೆಯ ಇತಿಹಾಸದಲ್ಲೇ ಈ ಮಾದರಿಯ ಫಲಿತಾಂಶ ಬಂದಿರಲಿಲ್ಲ. ಊರಿಗೆ ಊರೇ ಸೋಜಿಗದಲ್ಲಿತ್ತು. ಅದರಲ್ಲೂ ಎಲ್ಲಾ ವಿದ್ಯಾರ್ಥಿಗಳೂ ತಮ್ಮ ಜನ್ಮಜಾತ ಶತ್ರುವಾದ ಇಂಗ್ಲಿಷ್‌ನಲ್ಲಿ ಪಾಸಾಗಿದ್ದು ದೊಡ್ಡ ಪವಾಡದಂತಾಗಿ, ಸಂಜೀವ ಪವಾಡ ಪುರುಷನನಾಗಿ, ನೂರಾರು ಮಂದಿ ಇಂಥಾ ಮಕ್ಕಳನ್ನೆತ್ತ ತಾಯಂದಿರ ಅಭಿಮಾನಕ್ಕೆ ಭಾಜನನಾಗಿದ್ದ.
ಇದರಲ್ಲಿ ಒಂದು ವಿಚಿತ್ರವಿತ್ತು. ಅನೇಕ ಮಂದಿ ಹಟ್ಟಿಯ ಮಕ್ಕಳು, ’ಅಂತಿಂಥವರ’ ಮಕ್ಕಳು ಇಂಗ್ಲಿಷ್‌ನಲ್ಲಿ ಎಂಭತ್ತಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ, ಅನೇಕ ಮಂದಿ ಬಹು ಸಂಖ್ಯಾತರ ಮಕ್ಕಳು ಐವತ್ತು, ಅರವತ್ತಕ್ಕೇ ಸೀಮಿತರಾಗಿದ್ದರು. ಈ ವಿಷಯ ಅಲ್ಲಲ್ಲಿ ಚರ್ಚೆಗೆ ಬಂದು, ಕೆಲವರು ಸಂತಸದಿಂದ ಉಕ್ಕಿದರೆ, ಕೆಲವರು ವಿಚಿತ್ರವಾಗಿ ಬಿಕ್ಕಿದರು.
ಇದರಿಂದ ಸಂಜೀವನಿಗಂತೂ ಒಂದು ವಿಷಯ ಸ್ಪಷ್ಟವಾಗಿತ್ತು: ಬೋಧಿಸುವವನಿಗೆ ಭಾಷೆಯ ಮೇಲೆ ಪ್ರಭುತ್ವವಿದ್ದು, ಅದನ್ನು ಮಕ್ಕಳಿಗೆ ತಲುಪಿಸುವ ಕಲೆ ಗೊತ್ತಿದ್ದರೆ, ಹಳ್ಳಿ- ಪಟ್ಟಣಗಳ ವ್ಯತ್ಯಾಸವಿಲ್ಲದೆ ನಮ್ಮ ಮಕ್ಕಳು ಯಾವ ಭಾಷೆಯನ್ನು ಬೇಕಾದರೂ ಸಮರ್ಥವಾಗಿ ಕಲಿಯಬಲ್ಲರು ಎಂದು. ಇದೇ ಅವನ ಸಿದ್ಧಾಂತವಾಗಿತ್ತು. ಹೊರ ನೋಟದಲ್ಲಿ ತಂದೆಯ ಮಾತಿಗೆ ಕಟ್ಟುಬಿದ್ದು ಹಳ್ಳಿಗೆ ಬಂದ ಶ್ರೀರಾಮಚಂದ್ರನಂತೆ ಕಂಡರೂ ಇವನ ನಿಜವಾದ ಉದ್ದೇಶ ಇದೇ ಆಗಿತ್ತು.
ಹಾಗೆಂದು ಬೇರೆ ಕಾಲೇಜುಗಳಲ್ಲಿ ಈ ಮಹಾಮಹಿಮನನ್ನು ಸ್ವಾಗತಿಸಲು ಅಪಾಯಿಂಟ್‌ಮೆಂಟ್ ಆರ್ಡರಿಡಿದು ನಿಂತಿದ್ದರೆಂದಲ್ಲ! ಇವನು ಹೋದಲ್ಲೆಲ್ಲಾ ಇವನ ಜಾತಿಯೇ ಇವನಿಗೆ ಅಡ್ಡಗಾಲುಹಾಕಿ ನಿಲ್ಲುತ್ತಿತ್ತು. ಒಂದೋ ಬಹುಸಂಖ್ಯಾತ ಇಲ್ಲವೇ ಮುಂದುವರಿದ ಜಾತಿಗಳಾಗಬೇಕಿತ್ತು ಇಲ್ಲಾ ರಿಸರ್ವೇಷನ್ ಇದ್ದಿದ್ದರೆ ಕೆಲಸ ಸಾಗುತ್ತಿತ್ತು. ಇವೆರಡರೊಟ್ಟಿಗೆ ನೋಟಿನ ಕಟ್ಟುಗಳನ್ನೂ ಕೈಯಲ್ಲಿ ಹಿಡಿದಿರಬೇಕಾಗುತ್ತಿತ್ತು. ಇವ್ಯಾವುದೂ ಇಲ್ಲಾ ಎಂದರೆ ಅದರ ಎರಡರಷ್ಟು ನೋಟಿನ ಕಟ್ಟುಗಳನ್ನು ತಳ್ಳಬೇಕಾಗುತ್ತಿತ್ತು. ಇತ್ತ ಮೀಸಲಾತಿಯೂ ಇಲ್ಲ, ಅತ್ತ ದೊಡ್ಡ ಜಾತಿಯೂ ಅಲ್ಲದ ಇವನಂಥಾ ಪುಡಿಜಾತಿಯ ಅಭ್ಯರ್ಥಿಗಳನ್ನು ಎಸ್ಸಿ, ಎಸ್‌ಟಿ, ಹಿಂದುಳಿದ ಜಾತಿಗಳ ಆಡಳಿತವಿದ್ದ ಶಾಲಾಕಾಲೇಜುಗಳೂ ಸಹಾನುಭೂತಿಯಿಂದಲೇ ಬೀಳ್ಕೊಟ್ಟಿದ್ದರು. ಆಗಲೇ ಅವನಿಗೆ ಅರ್ಥವಾಗಿದ್ದು ಈ ಜಾತೀಯ ದುರಂತಗಳು ಮನೆಯೊಳಕ್ಕೆ ಹೋಗುವುದು, ನೀರು ಕುಡಿಯುವುದು, ಮುಟ್ಟಿಸಿಕೊಳ್ಳುವುದು, ತಟ್ಟಿಸಿಕೊಳ್ಳುವುದರಂಥ ಚಿಲ್ಲರೆ ಸಂಗತಿಗಳನ್ನೆಲ್ಲಾ ಮೀರಿ, ಅಪಾಯಕಾರಿ ದಿಕ್ಕಿನತ್ತ ಧ್ರುವೀಕರಣಗೊಳ್ಳುತ್ತಿವೆ” ಎಂದು.
ಈ ಫಲಿತಾಂಶದ ನಂತರ ಯಾಕೋ ಊರು ಇವನ ವಿಷಯದಲ್ಲಿ ಮುನಿಸಿಕೊಂಡಂತೆ ಕಾಣುತಿತ್ತು. ಇದಕ್ಕೆ ಮುನ್ನ ಅನೇಕ ಜನ ಊರಿಗೆ ಹಿರಿಯರೂ, ಶ್ರೀಮಂತರೂ, ಸ್ಥಿತಿವಂತರೂ, ಇವನನ್ನು ಪ್ರತ್ಯೇಕವಾಗಿಯೂ, ಖಾಸಗಿಯಾಗಿಯೂ ಕಂಡು, ’‘ತಮ್ಮ ಮನೆಗೆ ಬಂದು ತಮ್ಮ ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಪಾಠ ಹೇಳಿ ಕೊಡಬೇಕೆಂದೂ, ಅದಕ್ಕೆ ನೀನು ಕೇಳಿದಷ್ಟು ಫೀಸು ಕೊಡುತ್ತೇವೆಂದೂ” ಕೇಳಿದ್ದರು. ಇದಕ್ಕೆ ಸಂಜೀವ ಒಪ್ಪಿರಲಿಲ್ಲ.
ಇದರ ಮುಂದುವರಿದ ಭಾಗವೆಂಬಂತೆ ಒಂದು ದಿನ ಇಂಥಾ ಹಿರೀಕರೆಲ್ಲಾ ಒಂದಾಗಿ, ಆಕಸ್ಮಿಕ ಒಂದಾದವರಂತೆ ಅಪ್ಪಣ್ಣನ ಬಳಿ ತೋರಿಸಿಕೊಂಡು ’‘ನಿನ್ನ ಮಗ ನಮ್ಮಂಥವರ ಮಕ್ಕಳಿಗೇ ಒಂದು ಪ್ರತ್ಯೇಕ ಟ್ಯೂಷನ್ ತಗೆಯುವುದಾದರೆ, ಮಿಡ್ಲಿಸ್ಕೂಲನ್ನೂ ಬಿಡಿಸಿಕೊಡುವುದಾಗಿಯೂ, ಹಾಗೆಯೇ ಅವನು ಹೈಸ್ಕೂಲಿನಲ್ಲಿ ಪಾಠ ಮಾಡಿದರೆ ಎಷ್ಟು ಸಂಬಳ ಬರುತ್ತೋ ಅಷ್ಟನ್ನು, ನಾವೇ ಸಂಬಳವಾಗಿ ಕೊಡುವುದಾಗಿಯೂ” ಕೇಳಿದರು ಈ ಜಾತಿ ರಾಜಕೀಯದಿಂದ ಹುಟ್ಟಿದಾರಭ್ಯ ಬಳಲಿದ್ದ ಅಪ್ಪಣ್ಣ ‘ಊರಾಗಿರಾ ಮಕ್ಳೆಲ್ಲಾ ಒಂದೇ ಅಲ್ವಾ ಸ್ವಾಮಿ! ಪಾಠ ಎಲ್ಲಿ ಮಾಡಿದ್ರೇನಂತೆ! ಅಲ್ಲಿಗೆ ಯಾರು ಬಂದ್ರೇನಂತೆ! ನಿಮ್ಮ ಮಕ್ಕಳ್ನೂ ಅಲ್ಲೇ ಕಳ್ಸಿ, ಅವ್ರೂ ಅಲ್ಲೇ ಕಲೀಲಿ! ವಿದ್ಯೆಗೆ ಭೇದಭಾವ ಇಲ್ಲ!?’ ಎಂದು ಶಾಂತಚಿತ್ತರಾಗಿ ಹೇಳಿದ್ದರು. ಬಂದವರೆಲ್ಲಾ ತರತರದ ಸಿಟ್ಟಿನಿಂದ ಪರಿಪರಿಯಾಗಿ ನಿಂದಿಸುತ್ತಾ ’‘ತಲಿಗೆ ಮೆಟ್ಟುಕೇಳೋ ನನ್ಮಕ್ಳು” ಎನ್ನುತ್ತಾ ಅಲ್ಲಿಂದ ತೆರಳಿದ್ದರು. ಅಷ್ಟು ಹೊತ್ತಿಗೆ ಬೇಸಿಗೆ ರಜೆಗಳು ಆರಂಭವಾಗಿ ಸಂಜೀವ ’ಖಿಚಿಟಞ ಇಟಿgಟish’ ಎಂಬ ತರಗತಿಗಳನ್ನು ಎಲ್ಲರಿಗಾಗಿ ಆರಂಭಿಸಿದ್ದ. ಇದರ ಫಲವಾಗಿಯೇ ಮೂಡ್ಲಿಯ ಕಿರಿಯ ಮಗ ಕುಡುಲು ಹಿಡಿದು ಅದರ ಇಂಗ್ಲಿಷ್ ಹೆಸರು ಕೇಳಿದ್ದು.
ಬೇಸಿಗೆ ರಜೆ ಮುಗಿದು, ಶಾಲೆಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಉಳಿದಿದ್ದವು. ’ಈ ಶೈಕ್ಷಣಿಕ ವರ್ಷದ ಆರಂಭದ ಹೊತ್ತಿಗೆ ಕಾಲೇಜಿನ ಖಾಯಂ ಸಿಬ್ಬಂದಿಯ ಪಟ್ಟಿಕೊಡದೇ ಹೋದರೆ ಗ್ರಾಂಟ್ ಸಮಸ್ಯೆಯಾಗುತ್ತದೆ’ ಎಂದು ತುಮಕೂರಿನಿಂದ ಖುದ್ದಾಗಿ ಡಿಡಿಪಿಐಗಳೇ ಬಂದು ಹೇಳಿದ್ದರು. ಇದೇ ಹೊತ್ತಿಗೆ ಜಿಲ್ಲಾ ಪಂಚಾಯತಿ ಚುನಾವಣೆಯೂ ಘೋಷಣೆಯಾಗಿ, ಹನುಮಪ್ಪನವರು ತುಂಬಾ ಗಡಿಬಿಡಿಯಲ್ಲಿದ್ದರು. ಈ ಬಾರಿ ತಮ್ಮ ಮಗನನ್ನು ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದರು. ಹೋದ ಬಾರಿ ತಾನು ಎದುರಾಳಿಯ ಸಾಮರ್ಥ್ಯವನ್ನು ಸರಿಯಾಗಿ ಅಂದಾಜು ಮಾಡದೆ ನನ್ನ ಮಗ ಬೆಲೆತೆರುವಂತಾಯಿತು ಎಂದು ಭಾವಿಸಿದ್ದರು. ಆದರೆ ಕೃಷ್ಣ, ಕಂಸ, ಜರಾಸಂಧ, ಶಕುನಿಯರೇ ಮೊದಲಾದ ಮಹಾತ್ಮರ ಆಯ್ದಗುಣಗಳ ಸಂಕಲನವಾಗಿದ್ದ ಇವನನ್ನು ಜನ ನಿಖರವಾಗಿ ಗುರ್ತಿಸಿ, ಪ್ರಖರವಾದ ಪಟ್ಟಿ ಮಾಡಿ ಸದಾ ಜೇಬಿನಲ್ಲಿಟ್ಟಿಕೊಂಡಿರುತ್ತಿದ್ದರು. ಆದರೂ ದುಡ್ಡು, ಹೆಂಡ, ಸೀರೆಕುಪ್ಸ, ಮೂಗುತಿಗಳು ಏನುಬೇಕಾದರೂ ಮಾಡುತ್ತವೆಂದು ನಂಬಿದ್ದ ಹನುಮಪ್ಪ ಇವುಗಳಿಗೆ ವ್ಯವಸ್ಥೆ ಮಾಡುತ್ತಲೂ, ಅದೇ ಹೊತ್ತಿನಲ್ಲಿ ದುರ್ಬಲ ಎದುರಾಳಿ ಬಿದ್ದರೆ ಇವುಗಳ ಖರ್ಚಿನಲ್ಲಿ ಸ್ವಲ್ಪವನ್ನು ಉಳಿಸಬಹುದೆಂಬ ಚಿಂತನೆಯಿಂದಲೂ, ಅಂತಾ ಎದುರಾಳಿಯನ್ನೇ ಹಾಕಲು ಎದುರು ಪಾರ್ಟಿಯವರೊಂದಿಗೆ ಚೌಕಾಶಿಯಲ್ಲಿ ತೊಡಗಿದ್ದರು. ಈ ಮಧ್ಯದಲ್ಲೇ ಡಿಡಿಪಿಐಯ ಎಚ್ಚರಿಕೆ ನೆನಪಾಗಿ ಒಂದು ಸಭೆಯನ್ನೂ ಕರೆದಿದ್ದರು.
ಈ ಸಭೆಯ ದಿನ ಏನೇ ಆದರೂ ಸಂಜೀವ ಊರು ಬಿಡುತ್ತಿರಲಿಲ್ಲ. ಆದರೆ ರಾತ್ರಿ ಹತ್ತರ ಸುಮಾರಿನಲ್ಲಿ ಮ್ಯಾಕಿಯವೆಲ್ಲಿಯನ್ನು ಓದುತ್ತಾ ಮಲಗಿದ್ದಾಗ ಇದ್ದಕ್ಕಿದ್ದಂತೆ ಜನವಾದಿ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಸವೇಗೌಡರು ಆಗಮಿಸಿದರು. ‘ಪಕ್ಷದ ರಾಜ್ಯಾಧ್ಯಕ್ಷರಾದ ಮಾಲೆ ಶೇಷಣ್ಣನವರು ನಿಮ್ಮನ್ನು ನೋಡಬೇಕೆಂದೂ, ನಿಮ್ಮ ಬಗ್ಗೆ ಅವರಿಗೆ ತುಂಬಾ ಗೌರವವಿದೆಯೆಂದೂ, ಅವರು ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ತುಮಕೂರು ಐಬಿಯಲ್ಲಿ ತಮ್ಮನ್ನು ನಿರೀಕ್ಷಿಸಿದ್ದಾರೆ’ ಎಂದು ಹೇಳಿ ಹೋದರು.
ಇದರ ಪೂರ್ವಾಪರ ಅರಿಯದ ಸಂಜೀವ ಗೊಂದಲಗೊಂಡು ನಿಂತರೆ, ಅಪ್ಪಣ್ಣನಿಗೆ ಮಗನ ಜನಪ್ರಿಯತೆಯೇ ಕಾರಣವಾಗಿ ಭವಿಷ್ಯದ ಭವ್ಯರೇಖೆಗಳು ಗೋಚರವಾದವು. ಅವರೇ ಬಲವಂತಮಾಡಿ ಮಗನನ್ನು ತುಮಕೂರಿಗೆ ಕಳುಹಿಸಿಕೊಡುತ್ತಾ, ನೀನೇನೂ ಯೋಚ್ನೆ ಮಾಡ್ಬಾ ಡ, ಹೋಗ್‌ಬಾ, ನಾನು ಹನುಮಪ್ಪನೋರ್‍ನ ಈಗ್ಲೇ ಹೋಗಿ ಕಾಣ್ತೀನೆ ಎಂದರು.
೪
ತುಮಕೂರಿನಿಂದ ಹಿಂತಿರುಗಿದ ಸಂಜೀವನ ಮೆದುಳು ಮಕ್ಕಳ ಕೈಗೆ ಸಿಕ್ಕಿದ ದಾರದುಂಡೆಯಾಗಿತ್ತು. ಅವನ ಭವಿಷ್ಯ ಕಾಡಿನ ಕವಲುದಾರಿಯಲ್ಲಿ ನಿಂತಿತ್ತು. ’‘ಇದರ ಆಳ ಇಷ್ಟೇ” ಎಂದು ಹೇಳುವ ಮಾರ್ಗದರ್ಶಕರಾರೂ ಇವನಗಿರಲಿಲ್ಲ. ಇವನಿಗೆ ತಮ್ಮಂಥಾ ಪುಡಿಜಾತಿಗಳವರ ರಾಜಕೀಯ ಬದುಕಿನ ಅನಿಶ್ಚಯತೆ ಗೊತ್ತಿತ್ತು. ರಾಜಕೀಯಕ್ಕೆ ಇಳಿಯುವ ಮೊದಲು ಆ ಮನೆತನಗಳು ಸಾಮಾಜಿಕ, ಆರ್ಥಿಕ ಸ್ಥಿರತೆಯನ್ನು ಸಾಧಿಸಬೇಕಾದ ಅಗತ್ಯದ ಅರಿವೂ ಅವನಿಗಿತ್ತು. ಈಗ ತಾನು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸ್ಥಿರವಾಗಿ ನಿಂತರೆ, ನನ್ನ ಮಗನೋ ಮೊಮ್ಮಗನೋ ಇಂತಹ ಸಾಹಸ ಮಾಡಬಹುದೇ ವಿನಃ, ಇನ್ನೂ ಯಾವ ತಳಹದಿಯೂ ಇಲ್ಲದ ನಮ್ಮಂತಹವರು ಆಕಸ್ಮಿಕ ಸೋತರೆ ಆಗುವ ಧಕ್ಕೆಯಿಂದ ಚೇತರಿಸಿಕೊಳ್ಳಲು ಎರಡುಮೂರು ತಲೆಮಾರುಗಳೇ ಪರದಾಡಬೇಕಾಗುತ್ತದೆ ಎಂಬುದು ಅವನ ಊಹೆಯಾಗಿತ್ತು.
ಇದನ್ನು ಮಾಲೆ ಶೇಷಣ್ಣನವರಿಗೂ ಹೇಳಿದ್ದ. ಅದಕ್ಕೆ ಅವರೂ ವಿಶ್ವ ರಾಜಕಾರಣದ ವ್ಯಾಪ್ತಿಯಲ್ಲಿ, ಭಾರತದ ಜಾತಿ ಪದ್ದತಿಯನ್ನೂ, ಅದರ ದೌರ್ಬಲ್ಯ-ಸಾಮರ್ಥ್ಯಗಳನ್ನೂ ಆಳವಾಗಿ ವಿಶ್ಲೇಷಿಸುತ್ತಾ, ‘ರಾಜಕೀಯದಲ್ಲಿ ಯಾವುದೇ ಚಮತ್ಕಾರ ಯಾವಾಗ ನಡೆಯಬಹುದೆಂದು ಊಹಿಸುವುದು ಸಾಧ್ಯವಿಲ್ಲವೆಂದೂ, ದೊಡ್ಡದೊಡ್ಡ ರಾಜಕೀಯ ಪಂಡಿತರೂ ಇದರಲ್ಲಿ ಸೋತುಹೋಗಿದ್ದಾರೆ’ ಎಂದು ಹೇಳಿದರು. ಇದಕ್ಕೆ ಅನೇಕ ದಲಿತ, ಹಿಂದುಳಿದ ನಾಯಕರು ಮೇಲೇಳಿದ ಸಂಗತಿಗಳನ್ನು ಅವರ ಹಿನ್ನೆಲೆ ಸಹಿತ ವಿವರಿಸಿದ್ದರು.
ಅದಕ್ಕೆ ಇವನೂ ಪ್ರತಿವಾದ ಹೂಡಿ, “ನಮ್ಮ ರಾಷ್ಟ್ರದ ಯಾವುದೇ ಮುಂದುವರಿದ, ಬಹುಸಂಖ್ಯಾತ ಜನಾಂಗಗಳಲ್ಲಿ ರಾಜಕೀಯ ಸಾಧಕರು ಎರಡನೇ ಸ್ಥಾನದಲ್ಲಿ ಮಾತ್ರ ನಿಲ್ಲುತ್ತಾರೆ. ಏಕೆಂದರೆ ಯಾವುದೇ ಜನಾಂಗದ ಯುವಪೀಳಿಗೆ ಮೊದಲು ಆಕರ್ಷಿತರಾಗುವುದು ಸಾಂಸ್ಕೃತಿಕ ನಾಯಕತ್ವಕ್ಕೆ ಮಾತ್ರ. ಉದಾಹರಣೆಗೆ ನಿಮ್ಮ ಜಾತಿಯನ್ನೇ ತಗೆದುಕೊಂಡರೆ ಕುವೆಂಪು ನಮ್ಮ ಸ್ಪಂದನಶೀಲ ಯುವಪೀಳಿಗೆಯಲ್ಲಿ ಪೂಜನೀಯರಾದಷ್ಟು, ನಿಮ್ಮ ಯಾವ ರಾಜಕೀಯ ನಾಯಕರೂ ಆಗಿಲ್ಲ. ಕುವೆಂಪು ಹೆಸರಿಗಿರುವ ಹೆಮ್ಮೆ ನಿಮ್ಮ ರಾಜಕೀಯ ನಾಯಕರ ಹೆಸರಿಗಿಲ್ಲ. ಏಕೆಂದರೆ ಸಾಂಸ್ಕೃತಿಕ ನಾಯಕತ್ವ ಘಾಸಿಗೊಂಡ ಹೃದಯಗಳಿಂದ ಸೃಷ್ಟಿಯಾದರೆ, ರಾಜಕೀಯ ನಾಯಕತ್ವ ಹೃದಯಗಳನ್ನು ಘಾಸಿಗೊಳಿಸಿ ಬೆಳೆಯಲು ಪ್ರಯತ್ನಿಸುತ್ತದೆ. ಬ್ರಾಹ್ಮಣರಲ್ಲಿ ಎಷ್ಟು ಜನ ರಾಜಕೀಯ ನಾಯಕರು ಆಗಿ ಹೋಗಿದ್ದಾರೋ ಗೊತ್ತಿಲ್ಲ, ಆದರೆ ಅವರ ಅಹಂಕಾರ, ಮೇಲ್ತನದ ಭಾವಗಳ ಸೆಲೆಮಾತ್ರ ವಸಿಷ್ಟ, ವಿಶ್ವಾಮಿತ್ರ, ಭಾರದ್ವಾಜರಾದಿಯಾಗಿ ವೆಂಕಣ್ಣಯ್ಯ, ಬೇಂದ್ರೆ ಅನಂತಮೂರ್ತಿಯಂಥವರವರೆಗೆ ಪ್ರತಿಭೆಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಹಾಗೇ ಇಸ್ಲಾಂನಲ್ಲಿ ಮಹಮದ್ ಪೈಗಂಬರ್ಂದ ಹಿಡಿದು, ಅಲ್ಲಾದೀನ್ ಖಾನ್, ನೂರ್ ಜಹಾನ್, ವೈಕಂ ಮಹಮದ್ ಬಶೀರ್, ಬಿಸ್ಮಿಲ್ಲಾಖಾನ್‌ರನ್ನೂ ದಾಟಿ ಮುಂದುವರಿಯುತ್ತದೆ. ಇಂತಹ ಹೆಸರುಗಳು ಹೆಚ್ಚಿದಂತೆಲ್ಲಾ ಆ ಜನಾಂಗದ ಆತ್ಮವಿಶ್ವಾಸದ ಬೇರುಗಳು ಸ್ಥಿರತೆಯತ್ತ ಸಾಗುತ್ತವೆ,” ಎಂದು ವಾದಿಸಿದ್ದ.
ಅಪ್ರತಿಭರಾದ ಶೇಷಣ್ಣ, “ಇದೆಲ್ಲಾ ನನಗೂ ಗೊತ್ತು! ಆದರೆ ನಿನಗೊಂದು ವಿಷಯ ಗೊತ್ತಿಲ್ಲ! ಈಗ ನೀನು ಹೇಳಿದಂಥ ಜನ ಅಥವಾ ನಿನ್ನಂಥ ಫಿಲಾಸಫಿಕಲ್ ಟಚ್ ಇರುವ ಜನ ಇಲ್ಲಿಯೂ ಹೆಮ್ಮೆಯಾಗಬಹುದು. ’ಹೆಮ್ಮೆ ಮನುಷ್ಯನ ಪ್ರಾಮಾಣಿಕತೆಯನ್ನ, ಕಾರ್ಯನಿಷ್ಠುರತೆಯನ್ನು, ಕರ್ತವ್ಯ ಪ್ರಜ್ಞೆ ಹಾಗೂ ಜವಾಬ್ಧಾರಿಗಳ ಅರಿವನ್ನು ಅವಲಂಬಿಸಿರುತ್ತದೆ. ನಿಮ್ಮಂಥ ಸಣ್ಣಪುಟ್ಟ ಜನಾಂಗಗಳಿಂದ ಬಂದ ಜನ ಇವುಗಳ ನಿಷ್ಠುರ ಆರಾಧಕರಾದರೆ ಎಂಥಾ ಮುಂದುವರಿದ, ಬಹುಸಂಖ್ಯಾತರ ನಾಯಕನೂ ಎಲ್ಲಾ ಮುಚ್ಚಿಕೊಂಡು ನಿಮ್ಮನ್ನು ಅನುಸರಿಸುತ್ತಾನೆ...” ಎಂದು ಮರುವಾದ ಮಾಡಿದ್ದರು. ಒಂದರ್ಥದಲ್ಲಿ ಇದು ಸರಿ ಎನಿಸಿದರೂ ಇವನಿಗೆ ಉಪನ್ಯಾಸಕನ ಹುದ್ದೆಯೇ ಹೆಚ್ಚು ಅಪ್ಯಾಯಮಾನವಾಗಿ ಕಾಣುತಿತ್ತು. ಹಾಗಾಗಿ ‘ಅಪ್ಪನನ್ನೂ ಕೇಳಿನೋಡುತ್ತೇನೆ, ಸ್ವಲ್ಪ ಸಮಯ ಕೊಡಿ’ ಎಂದು ಹೇಳಿ ಬಂದಿದ್ದ.
೫
ಕತ್ತಲು ನಿಧಾನವಾಗಿ ಬಯಲನ್ನೆಲ್ಲಾ ಆವರಿಕೊಳ್ಳುತ್ತಿತ್ತು. ಬೇಲಿಬುಡಕ್ಕೆ ಕಟ್ಟಿದ್ದ ದನಗಳು ಹಳ್ಳಿಯತ್ತ ನೋಡುತ್ತಾ ಹಗ್ಗ ಜಗ್ಗುತ್ತಿದ್ದವು. ಮರಿಯ ಇವ್ಯಾವುದರ ಪರಿವೆಯೂ ಇಲ್ಲದೆ ಬಣ್ಣಬಣ್ಣದ ಓತಿಕ್ಯಾತವೊಂದಕ್ಕೆ ಉಡದಾರ ಬಿಚ್ಚಿ, ಜೀರುಗುಣಿಕೆ ಹಾಕಿ ಅದನ್ನು ಆಡಿಸುವಲ್ಲಿ ಮಗ್ನನಾಗಿದ್ದ, ಆದರೆ ಅವನ ಬಾಯಿಮಾತ್ರ ನಿನ್ನೆ ಸಂಜೀವ ಹೇಳಿಕೊಟ್ಟಿದ್ದ ’‘ಮೇರಿಹ್ಯಾಡ್ ಎ ಲಿಟ್ಲ್ ಲ್ಯಾಂಬ್” ಎಂದು ಗಾರಾದ ಗ್ರಾಮೋಫೋನಿನ ಪ್ಲೇಟು ಹೇಳಿದ್ದನ್ನೇ ಹೇಳುವಂತೆ ಮತ್ತೆ ಮತ್ತೆ ರಿಪೀಟಾಗಿ ಹೇಳುತ್ತಿತ್ತು. ಸಂಜೀವ ಅವನಲ್ಲಿ ಆಸಕ್ತನಾಗಿ ನೋಡುತ್ತಿದ್ದರೂ, ಮೂಡ್ಲಿಯೇ ಬಾಯಿಬಿಡಲಿ ಎಂದು ನಿರೀಕ್ಷಿಸಿದ್ದ. ಇಂದು ಶಾಲೆಯಲ್ಲಾದ ಮೀಟಿಂಗಿನ ತೀರ್ಮಾನದ ಬಗ್ಗೆ ಕುತೂಹಲಿಯಾಗಿದ್ದ. ಅದು ಅವನ ಆಪ್ತ ಕನಸೊಂದಕ್ಕೆ ಸೇರಿದ್ದಾಗಿತ್ತು. ತಾನೂ ಒಬ್ಬ ಗೌರವಾನ್ವಿತ ಉಸನ್ಯಾಸಕನಾಗಬೇಕು ಎಂದು ಹಂಬಲಿಸಿದ್ದ. ಯಾವುದೇ ಸಾಮಾಜಿಕ ಆರ್ಥಿಕ ಕ್ರಾಂತಿಯ ಹಿಂದೆ ಸ್ಪಷ್ಟವಾದ, ನಿಷ್ಠುರವಾದ ಶೈಕ್ಷಣಿಕ ನೀತಿ ಇಲ್ಲದೇ ಹೋದಲ್ಲಿ ನಮ್ಮ ಹಳ್ಳಿಗಳ ಸ್ಥಿತಿ ಹೀಗೇ ಮುಂದುವರಿಯುವ ದುರಂತವನ್ನು ಅರ್ಥಮಾಡಿಕೊಂಡಿದ್ದ. ಹಾಗೆಯೇ ವರಿಜಿನಲ್ಲಾದ ಪ್ರತಿಭೆ, ಸಾಧನೆಗೆ ಜಾತಿಗಳ ಕ್ಷುದ್ರ ಚೌಕಟ್ಟನ್ನು ಮೀರಿನಿಲ್ಲುವ ಸಾಮರ್ಥ್ಯವಿರುತ್ತದೆ. ಅಂತಹವನನ್ನು ನಿಯಂತ್ರಿಸುವುದು ಹುಸಿ ಪ್ರತಿಷ್ಠೆ, ಸ್ವಾರ್ಥ, ಧೂರ್ತತನಗಳಂಥ ಬಲವಾದ ತಳಹದಿಯೇ ಇಲ್ಲದ ಮನಃಸ್ಥಿತಿಗಳಿಗೆ ಸಾಧ್ಯವಿಲ್ಲವೆಂದು ಅವನಿಗೆ ಅನಿಸುತ್ತಿತ್ತು. ಯಾವುದೇ ಜನಾಂಗ ಸಾರಾಸಗಟಾಗಿ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಎಲ್ಲಾ ಜನಾಂಗಳಲ್ಲೂ ಈ ಥರದ ಜನಗಳು ಇದ್ದೇ ಇರುತ್ತಾರೆ ಎಂಬುದನ್ನು ತನ್ನ ಅನುಭವದಿಂದ ಕಂಡುಕೊಂಡಿದ್ದ.
ತನ್ನ ಜಾತಿಯವರೇ ಅನೇಕ ಜನ ಬೇರೆಬೇರೆ ಪಟ್ಟಣಗಳಲ್ಲಿ, ನಗರಗಳಲ್ಲಿ ಯಾವ್ಯಾವುದೋ ಜಾತಿ ಹೆಸರೇಳಿಕೊಂಡು ಬದುಕುತ್ತಿರುವುದು ಅವನಲ್ಲಿ ವಿಚಿತ್ರ ತಲ್ಲಣಗಳನ್ನು ಹುಟ್ಟಿಸಿತ್ತು. ಒಮ್ಮೆ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ತನ್ನ ತಾಯಿಯ ಕಡೆಯ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದಾಗ, ತನ್ನೂರಿನ ತಮ್ಮ ಜಾತಿಯ ಜನರ ಗತಿಸ್ಥಿತಿಗಳ ಬಗ್ಗೆ ಮಾತಾಡುತ್ತಿದ್ದಾಗ... ಅವರ ಹೆಂಡತಿ ದಬದಬನೆ ಕಿಟಕಿ, ಬಾಗಿಲುಗಳನ್ನು ಮುಚ್ಚುತ್ತಾ ಹೋಗಿದ್ದನ್ನು ನೋಡಿ, ಕೊನೆಗೆ ಉಸಿರು ಕಟ್ಟಿದಂತಾಗಿ, ‘ಅತ್ತೆ... ಅದ್ಯಾಕೆ ಕಿಟ್ಗಿ, ಬಾಗುಲ್ನೆಲ್ಲಾ ಅಂಗೆ ಮುಚ್ಚದೆ, ತಗೀಬಾರ್‍ದಾ...? ಸೆಖೆ ಆಗುತ್ತೆ’ ಅಂದಿದ್ದಕ್ಕೆ, ಫ್ಯಾನನ್ನು ಇನ್ನಷ್ಟು ಜೋರುಮಾಡಿ, ‘ಅಕ್ಕಪಕ್ಕದೋರಿಗೆ ನೀನು ಮಾತಾಡದು ಕೇಳ್ಸುತ್ತೆ ಕಣೋ! ಇಲ್ಲಿ ಯಾರ್‍ಗೂ ನಾವ್ಯಾರಂತ ಗೊತ್ತಿಲ್ಲ. ನಾವೆಲ್ಲಾ ಬಣಜಿಗರು ಅಂತಾ ಹೇಳ್ಕಂಡಿದ್ದೀವಿ’ ಎಂದು, ರಹಸ್ಯವೆಂಬಂತೆ ಹೇಳಿದರು. ಅಂದು ಅದು ಅವನಿಗೆ ಜನಾಂಗೀಯ ಕ್ರೌರ್ಯ, ನಿರ್ದಯತೆ, ಅಸಹಾಯಕತೆ ಎಂದೆಲ್ಲಾ... ಏನೇನೋ ಅನಿಸಿತ್ತು. ಇಂದು ಕೇವಲ ಆತ್ಮವಂಚನೆ, ಹೇಡಿತನ ಎಂದು ಮಾತ್ರ ಅನಿಸುತ್ತಿತ್ತು. ಈ ಹಂತದಲ್ಲಿಯೇ ಉಪನ್ಯಾಸಕ ಮತ್ತು ರಾಜಕಾರಣಿ ಮುಖಾಮುಖಿಯಾಗಿ ನಿಂತು, ಮೂಡ್ಲಿಯೊಂದಿಗೆ ಮಾತು ತೆಗೆಯಲು ಮೀನಾಮೇಷಾ ಎಣಿಸುತ್ತಾ ಕುಳಿತಿದ್ದ.
ಸಂಜೀವ ಈಗ ಬಾಯಿಬಿಡಬಹುದು, ಆಗ ಬಿಡಬಹುದು ಎಂದು ನಿರೀಕ್ಷಿಸುತ್ತಾ ಮೂಡ್ಲಿ ಕುಂತಿದ್ದ. ಮಧ್ಯಾಹ್ನದ ವಿಷಯವನ್ನು ಹೇಳಲು ಕಾತರನಾಗಿದ್ದರೂ, ಈ ನಡುವಿನಲ್ಲಿ ನಡೆದ ಚಿಂತನಮಂಥನಗಳ ಫಲವಾಗಿ ವಿಷಯವನ್ನು ಹೇಗಪ್ಪಾ ಹೇಳುವುದು...! ಎಂದು ಚಿಂತಾಕ್ರಾಂತನಾಗಿದ್ದ. ಬೆಳಿಗ್ಗೆ ಬೆಟ್ಟೇಗೌಡ ಮತ್ತು ರುದ್ರಪ್ಪ ಹನುಮಪ್ಪನವರ ಬಳಿ ಬಲವಾಗಿಯೇ ವಾದಿಸಿದ್ದನ್ನು ಕಂಡಿದ್ದ. ಬೆಟ್ಟೇಗೌಡನಂತೂ “ನಾನು ಕಾಲೇಜ್ ಅಪ್ರೂವೆಲ್ಗೆ ಕೊಟ್ಟಿದ್ದ ಎರಡು ಲಕ್ಸನಾ ಏನ್ ಬಿಟ್ಟಿ ದಾನ ಅಂತ ತಿಳಕೊಂಡಿದ್ದಿರೋ ಹೆಂಗೆ?! ಏನೋ ನನ್ನ ಮಗುಂಗೆ ಒಂದು ದಾರಿ ಆಗುತ್ತಾ ಅಂತಾ ಕೊಟ್ಟಿದ್ದೀನಿ..!? ಈಗ ಅವನ್ಯಾವನೋ ಚೆಂದಾಗಿ ಪಾಠಮಾಡ್ತಾನಂತ ಅವ್ನಿಗೆ ಕೊಟ್ರೆ, ನಮ್ಮ್ ಹುಡುಗ್ನ ಗತಿ ಏನಂತಾ? ಪಾಠ ಎಂಗ್ ಮಾಡಿದ್ರೂ ನಿಮ್ಮ ಸ್ಕೂಲಿಗ್ ಬರೋ ಮಕ್ಳೇನ್ ಕಮ್ಮಿ ಆಗ್ತಾವ. ಇರೊದೊಂದು ಸ್ಕೂಲು ಎಂಗ್‌ಮಾಡಿದ್ರೂ ಬಂದೇ ಬತ್ತಾವೆ. ಅವನ್ಗಾದ್ರೆ ಎಲ್ಲಾನಾ ಕೆಲ್ಸ ಸಿಕ್ಕುತ್ತೆ. ನನ್ನ್ ಮಗುಂಗೆ ಯಾರು ಕೆಲ್ಸ ಕೊಡ್ತಾರೆ. ಮುಂಡೇದು ಎಂಗೋ ಪ್ಯಾಸಾಗೈತೆ. ಅದುನ್ನ ಪ್ಯಾಸ್ ಮಾಡ್ಸೋಕೆ ನಾನೆಷ್ಟು ಖರ್ಚುಮಾಡಿದ್ದೀನಂಬೋದು ನನಗೊಬ್ನಿಗೇ ಗೊತ್ತು. ನಿಮ್ಗೇನ್ ಗೊತ್ತಾಗಬೇಕು ನನ್ ಕಷ್ಟ” ಎಂದೆಲ್ಲಾ ಹಾರಾಡಿ, ಕೂಗಾಡಿ, ಅಂಗಲಾಚಿ... ಪಟ್ಟು ಹಾಕಿ ಕುಳಿತಿದ್ದರು. ಇವರಿಗೆ ರುದ್ರಪ್ಪನೂ ಬೆಂಬಲವಾಗಿ, “ಅದ್ರಾಗೆ ನಂದೂ ಅರ್ಧಲಕ್ಷ ಐತಪ್ಪೋ, ನೀನು ಈಗ ಅವುಂಗೆ ಕೆಲ್ಸ ಕೊಡ್ಲಿಲ್ಲಾ ಅಂದ್ರೆ ನನ್ನ ದುಡ್ಡುಬಡ್ಡಿ ಎಲ್ಲಾ ಹೋದಂಗೇ” ಎಂದ. ಆಗ, ಇವರ ಹಲವು ರೀತಿಯ ಮುಖಂಡತ್ವವಿಲ್ಲದೆ ಕ್ಷೇತ್ರದಲ್ಲಿ ತನ್ನ ಬೇಳೆ ಬೇಯುವುದು ಕಷ್ಟವೆಂದು ಅರಿತಿದ್ದ ಹನುಮಪ್ಪನವರು “ರಾಮಲಿಂಗೇಗೌಡ್ನ ಹೆಸುನ್ರೇ ಕಳುಸ್ರಪ್ಪೋ, ಇನ್ನೇನು ಮಾಡಾದು” ಎಂದು ಸಭೆಗೆ ತೀರ್ಮಾನ ಹೇಳಿದ್ದರು. ಈ ತೀರ್ಮಾನಕ್ಕೆ ಅವರೆಲ್ಲಾ ಸಹಿ ಮಾಡುತ್ತಿದ್ದಾಗ ಹೆಬ್ಬೆಟ್ಟನ್ನು ಹಿಂದಿಟ್ಟುಕೊಂಡ ಮೂಡ್ಲಿ ಉಚ್ಚೆ ಮಾಡುವ ನೆಪದಲ್ಲಿ ಅಲ್ಲಿಂದ ಮಾಯವಾಗಿ ದಿಣ್ಣೆ ಸೇರಿದ್ದ.
ಈ ಎಲ್ಲಾ ನೆನಪುಗಳ ಮರುಕಳಿಕೆಯಿಂದ ಚಂಚಲಚಿತ್ತನಾದ ಮೂಡ್ಲಿ, ‘ಅದೇನಪ್ಪೋ... ಇವತ್ತು ತುಂಕೂರಿಗೋಗಿದ್ಯಲ್ಲಾ,! ಅದೇನಾತು?’ ಎಂದ. ‘ಅದಿರ್‍ಲಿಕಣೋ ಇವತ್ತು ಮೀಟಿಂಗಿನಾಗೆ ಏನಾತು ಹೇಳೋ?’ ಎಂದು ಸಂಜೀವ ಮರು ಪ್ರಶ್ನೆ ಹಾಕಿದ. ಅಷ್ಟರಲ್ಲಿ ಮಗನ ಕಡೆಗೆ ನೋಡುವವನಂತೆ ನಟಿಸುತ್ತಾ ಕುಳಿತಿದ್ದ ಮೂಡ್ಲಿ, ತುಂಬಾ ಸರಳ ವಿಷಯವೆಂಬಂತೆ, ಉಡಾಫೆಯ ಧ್ವನಿಯಲ್ಲಿ ‘ರಾಮಲಿಂಗೇಗೌಡ್ರ ಹೆಸುರ್‍ನ ಕಳ್ಸಿದ್ರು ಬಿಡಪ್ಪೋ! ನೀನ್ಯಾಕೆ ಆಸೆ ಇಟ್ಗಂತೀಯಾ?!’ ಎನ್ನುತ್ತಾ ನಡೆದ್ದಿದ್ದನ್ನೆಲ್ಲಾ ಸಂಕ್ಷಿಪ್ತವಾಗಿ ಹೇಳಿ ಅಲ್ಲಿಂದ ಎದ್ದ. ಸಂಜೀವ ಒರಗಿದ್ದ ಬಂಡೆಯ ವಿಸ್ತರಣೆಯಂತೆ ಕುಳಿತಿದ್ದ.
‘ಕೇಳ್ದೇನಪ್ಪಾ ವಿಷಯಾನ..!’ ಬಹಳ ಹೊತ್ತಿನಿಂದ ಕವಿದಿದ್ದ ಸೂತಕದ ಕಳೆಯಂಥಾ ಮೌನವನ್ನು ಭೇದಿಸುತ್ತಾ ಅಪ್ಪಣ್ಣ ಮಾತು ತಗೆದರು. ಸಂಜೀವ ಮಾತಾಡಲಿಲ್ಲ. ‘ನೋಡು ನೀನ್ ಹೇಳ್ತೀಯ, ಒಬ್ಬ ಮನುಷ್ಯಾ ಎಲ್ಲಾ ಕಾಲುಕ್ಕೂ ಕೆಟ್ಟೋನಾಗಿರಲ್ಲಾ ಅಂತ! ಈಗ ಗೊತ್ತಾತಾ?! ನಮ್ಮಂಥ ಜನ ಯಾಕೆ ಹಾಳಾಗೋಗ್ತೀವಂತ, ನಮಂಥೋರು ಲಕ್ಷಲಕ್ಷ ಎಲ್ಲಿಂದಾ ತರಾನಾ? ಇರೋ ನಾಕೆಕರೆ ಹೊಲ ಬರಕೊಟ್ರೆ ಉಳಿದೋರು ಏನ್ ತಿನ್ಬೇಕು?’ ಮುಂತಾಗಿ, ಅಪ್ಪಣ್ಣ ಹೇಳುತ್ತಾ ಹೋದರು. ಇವರ ಮಾತು ಮನೆಯಲ್ಲಿದ್ದ ಇತರರಿಗೆ ಒಗಟಿನಂತೆ ಕೇಳುತ್ತಿದ್ದರೂ, ಬೆಳಿಗ್ಗೆ ಅಪ್ಪ, ಹನುಮಪ್ಪನವರ ಮನೆಗೆ ಹೋಗಿದ್ದಾಗ ಏನು ನಡೆದಿರಬಹುದೆಂದು ಸಂಜೀವ ಅಂದಾಜು ಮಾಡಿದ. ಅಪ್ಪನ ಧ್ವನಿಯಲ್ಲಿದ್ದ ದುಗುಡ, ಹತಾಷೆಗಳನ್ನು ಕಂಡು ಅವನಿಗೆ ಭಯವಾಯಿತು.
“ಅದಕ್ಯಾಕೆ ಬೇಸ್ರಾ ಮಾಡ್ಕೂತೀಯಪ್ಪಾ., ಒಂದು ಮೇಷ್ಟ್ರಕೆಲ್ಸ ಸಿಗಲಿಲ್ಲಾ ಅಂದ್ರೆ, ಪ್ರಪಂಚಾ ಹಾಳಾಗೋಗೈತಾ? ಇನ್ನೆಲ್ಲೋ ಸಿಗುತ್ತೆ. ಸಿಗ್ಲೇಇಲ್ಲಾ ಅನ್ನು, ಅದೇ ಹೊಲದಲ್ಲಿ ಬೇಸಾಯ ಮಾಡಿದ್ರಾತು, ಅದೂ ಇಲ್ಲಾ ಅಂದ್ರೆ ನಮ್ಮ ಕಸುಬ್ನೇ ಸರಿಯಾಗಿ ಮಾಡಿದ್ರಾತು! ಅದ್ರಾಗೇನು ಅವಮಾನಾನ!? ಎಂದು ಅಪ್ಪನಿಗೆ ಸಮಾಧಾನ ಮಾಡಲು ಪ್ರಯತ್ನಿಸಿದ. ಆದರೆ ಅಪ್ಪಣ್ಣ ಮಾತಾಡಲಿಲ್ಲ. ಒಮ್ಮೆ ನೀಳವಾಗಿ ಉಸಿರುಬಿಟ್ಟು ತಿಂದಷ್ಟಕ್ಕೇ ಹೊಟ್ಟೆ ತುಂಬಿದಂತಾಗಿ ಕೈತೊಳೆದುಕೊಂಡು, ಹಾಸಿಗೆಗೆ ಹೋದರು. ಸೇರಿದಷ್ಟು ತಿಂದು, ‘ಅಮ್ಮಾ ಸ್ವಲ್ಪ ತಿರಗಾಡ್ಕಂಡ್ ಬತ್ತೀನಿ’ ಎಂದು ಹೇಳಿ ಸಂಜೀವ ಕೆರೆಯತ್ತ ನಡೆದ. ಕೆರೆ ಏರಿಯಮೇಲೆ ಸುಮಾರು ಹೊತ್ತು ಸುತ್ತಾಡಿ ಮನೆಗೆ ಬರುವಲ್ಲಿಗೆ ಎಲ್ಲಾ ನಿದ್ದೆ ಹೋಗಿದ್ದರು. ಯಾರನ್ನೂ ಎಬ್ಬಿಸದೆ ಸಂಜೀವ ಹಾಸಿಗೆ ಸೇರಿ ನಿದ್ದೆ ಹೋದಾಗ ನಡುರಾತ್ರಿ ಮೀರಿತ್ತು.
ಬೆಳಗಿನ ಜಾವದಲ್ಲಿ ಯಾರೋ ಬಂದು ಕೂಗಿದಂತಾಗಿ ಬಾಗಿಲು ತೆಗೆದ ಅಪ್ಪಣ್ಣನ ಪತ್ನಿಯ ಎದುರಿಗೆ ಚಿಕ್ಕಮೂಡ್ಲಿ ನಿಂತಿದ್ದ. ‘ಏನ್ ಮೂಡ್ಲಣ್ಣಾ ಇಷ್ಟು ಹೊತ್ಗೇ ಬಂದಿದ್ದೀಯ?’ ಎಂದು ಪ್ರಶ್ನಾರ್ಥಕವಾಗಿ ಅವನ ಮುಖ ನೋಡಿದಳು. ಅದಕ್ಕೆ ಅವನು ‘ಯಾಕೋ ಸಂಜೀವಣ್ಣ ಬೆಳಿಗ್ಗೆ ಅಷ್ಟೋತ್ಗೇ ಬಾರಲಾ... ಹೊಲ್ತಾಕ್ಕೆ ಹೋಗಬೇಕು ಅಂತಾ ಹೇಳಿದ್ರಮ್ಮಾ, ಅದುಕ್ಕೇ ಬಂದೆ, ವಸಿ ಸಂಜೀವಣ್ಣನ ಎಬ್ಸಿ ಕಳುಸ್ತೀರಾ...?’ ಅಂದ. ನಿದ್ದೆಗಣ್ಣಲ್ಲಿ ಸಂಜೀವನನ್ನು ಎಬ್ಬಿಸಿ, ತಾಯಿ ಮತ್ತೆ ಹಾಸಿಗೆಗೆ ಹೋದಳು. ಅವಳು ಹೇಳಿದ್ದನ್ನು ಕೇಳಿ ಇವನಿಗೆ ಆಶ್ಚರ್ಯವಾಯಿತು. ಅವನು ಮೂಡ್ಲಿಗೆ ಬರಲು ಹೇಳಿರಲೇ ಇಲ್ಲ. ಯಾಕೆ ಬಂದ? ಏನೋ ವಿಷಯ ಇರಬೇಕು, ಎಂದು ಸಂಜೀವ ಸಿದ್ಧನಾಗಿ ಹೊರಬಂದ. ಅವನನ್ನು ನೋಡಿದ್ದೇ ತಡ, ಮೌನವಾಗಿರುವಂತೆ ಕೈಸನ್ನೆ ಮಾಡಿ, ತನ್ನೊಂದಿಗೆ ಬರುವಂತೆ ಸಂಜೀವನಿಗೆ ಸೂಚಿಸಿ ಅವನು ಮುಂದಾದ.
ಸೀದಾ ಕರಡಿದೊಣೆಯತ್ತ ಸಾಗುತ್ತಿದ್ದ ಮೂಡ್ಲಿಯನ್ನು ಮೌನವಾಗಿ ಹಿಂಬಾಲಿಸುವುದು ಕಷ್ಟವಾಗಿ, ‘ಅದೇನ್ಲಾ ಮೂಡ್ಲಿ ಇವತ್ತು ಈಕಡಿಕ್ಕೆ’ ಅಂದ. ‘ಏ...ಸುಮ್ಕೆ ಬಾರಪ್ಪೋ...! ಊರಾಗೆ ಜನೆಲ್ಲಾ ನೀನು ಬಲ್ ತಾಳ್ಮೆ ಮನ್ಸಾ ಅಂತಾರೆ, ನಿಂಗೆ ಅದೇ ಇಲ್ವೆಲ್ಲಪ್ಪೋ...!’ ಎಂದು ಗಂಭೀರವಾಗಿ ಚುಡಾಯಿಸಿದ. ಸಂಜೀವನ ಕುತೂಹಲ ಕ್ಷಣದಿಂದ ಕ್ಷಣಕ್ಕೆ ಏರುತ್ತಾ ಹೋಗಿ, ‘ಅದೇನೇಳ್ಲಾ?!’ ಎಂದು ಅಂಗಲಾಚುವವನಂತೆ ಕೋರಿದ. ಅಷ್ಟು ಹೊತ್ತಿಗೆ ಕರಡಿದೊಣೆ ಬಂದಿತ್ತು. ’‘ಬಾ ಇಲ್ಲಿ ಈ ದೊಣೆಯಾಗೆ ಮಿಂದುಬಾ, ನಮ್ಮ ಕನ್ನೇರವ್ವ ನಿನಗೆ ಒಳ್ಳೇದು ಮಾಡೌಳೆ” ಎಂದು, ಇವನ ಆeಧಾರಕನಂತೆ ಬಟ್ಟೆ ಬಿಚ್ಚುತ್ತಿದ್ದ ಸಂಜೀವನತ್ತ ಬಟ್ಟೆಗಳಿಗಾಗಿ ಕೈಯೊಡ್ಡಿದ. ಅವನು ಮೊದಲ ಬಾರಿ ನೀರಿನಲ್ಲಿ ಮುಳುಗುತ್ತಿದ್ದಾಗ ‘ನೆನ್ನೆ ರಾಮಲಿಂಗೇಗೌಡನ ಹೆಸುನ್ರ ತಗೊಡೋಗಿದ್ರಲ್ಲಾ, ಹನುಮಪ್ಪನೋರು, ಅವ್ರು ತುಂಕೂರಿಗೋದಾಗ, ಶೇಷಣ್ಣೋರು ನಿನ್ನ ಕರ್‍ಸಿದ್ದ ಇಷ್ಯ ತಿಳಿತಂತೆ.’ ಎಂದು ಹೇಳಿ ಮಾತು ನಿಲ್ಲಿಸಿದ. ‘ಅದೇನೋಳೋ ಮುಂದುಕ್ಕೆ’ ಎಂದು ಸಂಜೀವ ಹಾಗೇ ನಿಂತ. ‘ಇನ್ನೊಂದಪಾ ಮುಣ್ಗು ಹೇಳ್ತೀನಿ...’ ಅಂದ. ಸಂಜೀವ ಇನ್ನೊಮ್ಮೆ ಮುಳುಗಿದ. ಈಗ ಕೇಳು.. ‘ಅವ್ರು ಪೂರ್ತಾ ಇಷ್ಯಾ ಕಲಾಕ್ದಾಗ... ಈ ಸಾರಿ ಅವ್ರ ಪಾರ್‍ಟಿ ನಿಂಗೆ ಸೀಟ್ಕೊಡುತ್ತೇಂತಾ ಗೊತ್ತಾತಂತೆ. ಇದ್ದಕ್ಕಿದ್ದಂಗೆ ಆ ಪತ್ರದಾಗಿದ್ದ ಗೌಡ್ನ ಹೆಸ್ರು ತಗ್ದು, ನಿನ್ನೆಸ್ರಾಕಿ, ಅದುನ್ನಾ, ಅದೆಂಥದೋ ಸಾಯೇಬ್ರಿಗೆ ಕೊಟ್ಟು.. ಅವ್ರತಾವ ಈ ಕೆಲ್ಸ ನಿಂಗೇ ಗ್ಯಾರಂಟಿ ಅಂತ ಇನ್ನೊಂದು ಪತ್ರಾ ತಗಂಟು ಸೀದಾ ಸೇಸಪ್ಪನೋರತಾಕ್ಕೆ ಹೋದ್ರಂತೆ...’ ಎಂದು ಮತ್ತೊಮ್ಮೆ ಮಾತು ನಿಲ್ಲಿಸದ, ಸಂಜೀವ ತೀವ್ರ ಕುತೂಹಲದಿಂದ ನಿಂತಿದ್ದ, ’‘ಹೇಳ್ಲಾ ಮುಂದುಕ್ಕೆ...” ಎಂದು ಕೇಳಿದ ಸಂಜೀವಗೆ ಇಡಿಯ ಕತೆಯನ್ನು ಒಮ್ಮೆಲೇ ಕೇಳಿಬಿಡುವ ತವಕವಿತ್ತು. ‘ಇನ್ನೊಂದಪಾ ಮುಣ್ಗು, ಹೇಳ್ತೀನಿ,’ ಎಂದ. ಅವನು ಮುಳಿಗೆದ್ದ ಮೇಲೆ ‘ಅವ್ರತಾಕ್ಕೆ ಹೋಗಿ... ಅವ್ನಿಗೆ ಎಂಗೆ ಸೀಟುಕೊಡ್ತೀರಾ? ಅವ್ನು ನಮ್ಮ ಕಾಲೇಜಿನ ಸ್ಟಾಪು. ಅವುನು ಎಲಕ್ಷನ್ನಿಗೆ ನಿಂತ್ಕಾಮಂಗಿಲ್ಲ.. ಅಂದ್ರಂತೆ’. ಅದಕ್ಕೆ ಸೇಸಣ್ಣನೋರು “ನಾವು ಕೊಟ್ಟಿದ್ದೇ ಕೊಟ್ಟಿದ್ದು, ಈ ದಪ ಅವುನು ಎಲೆಕ್ಸನ್ನಿನಾಗೆ ಗೆದ್ರೆ, ಮುಂದಿನ ಎಮ್ಮೆಲ್ಲೆ ಸೀಟೂ ಅವ್ನಿಗೇ” ಎಂದ್ರಂತೆ, ಮಕ್ಕೊಡದಂಗೆ. ಅದಕ್ಕೆ ಹನುಮಪ್ಪನೋರು, ಅವ್ರಕಾಲಿಡ್ಕಂಡು, “ಇವುನು ಎಂಗಾರ ಮೇಷ್ಟ್ರಾಗನಾ ಬದುಕಣ್ತಾನೆ, ನನ್ನ ಮಗುಂಗೆ ಇದ್ಯಿಲ್ಲ, ಬುದ್ದಿಲ್ಲ, ರಾಜಕೀಯ್ದಾಗಾದ್ರೆ ಎಂಗನಾ ಬೆಳಕಾಬೌದು, ನೀವೂ ನಮ್ಮೋರೆ ಆಗಿ, ನಮಗಿಂತಾ ಅನ್ಯಾಯ ಮಡ್ಬಾ ಡ್ರಿ,” ಅಂದ್ರಂತೆ ಎಂದು ಹೇಳಿ, ಮೂಡ್ಲಿ ಮತ್ತೆ ಮಾತು ನಿಲ್ಲಿಸಿದ. ಮರಗಟ್ಟುವ ಛಳಿಯಲ್ಲಿ ಬರಿ ಮೈಯಲ್ಲಿ ನಿಂತು ಈವರೆಗೂ ಹಲ್ಲಲ್ಲು ಕಡಿಯುತ್ತಿದ್ದ ಸಂಜೀವ ನಿಧಾನವಾಗಿ ಬೆವರಲಾರಂಭಿಸಿದ್ದ.
- Login or register to post comments
- Email this page