You are hereಕತೆ: ಮಬ್ಬು ಕವಿದ ಹಾದಿ
ಕತೆ: ಮಬ್ಬು ಕವಿದ ಹಾದಿ
ಲೇಖಕರು: ಮಾರ್ನಮಿಕಟ್ಟೆ ನಾಗರಾಜ, ಬೆಂಗಳೂರು
ಮೇಷ್ಟ್ರು ಕೈಗೆ ಕಟ್ಟಿದ ಹೆನ್ರಿ ಸಂಡೋಜ್ ವಾಚ್ ನೋಡಿದಾಗ ಹನ್ನೊಂದು ಕಾಲು ಗಂಟೆ ತೋರಿಸುತ್ತಿತ್ತು. ಎರಡು ದಿನಗಳ ಹಿಂದಿನ ಮಳೆಗೆ, ಕೊಡೆ ಹಿಡಿದಿದ್ದರೂ ವಾಚಿನೊಳಗೆ ನೀರು ಹೋಗಿ, ಸಮಯ ನೋಡಲು ಆಗುತ್ತಿರಲಿಲ್ಲ. ಮೈ ಶಾಖಕ್ಕೆ ನೀರು ಆವಿಯಾಗುತ್ತಾ ಬಂದು, ಗಾಜಿನೊಳಗಡೆ ಮಣಿಪೋಣಿಸಿದಂತೆ ಕೂತು, ನಲ್ವತ್ತು ವರ್ಷಗಳಿಂದ ಮೇಷ್ಟರ ಬೆವರನ್ನುಂಡು ಹಳದಿಯಾಗಿದ್ದ ಡಯಲ್‌ಗೆ ಹೊಸರೂಪು ಕೊಟ್ಟಿತ್ತು. ಅದನ್ನು ನೋಡಿದ ಮೇಷ್ಟ್ರು ನೀರ ಹನಿಕರಗದೆ ಹೀಗೆಯೇ ಇದ್ದರೆ ಚೆನ್ನ ಅಂದುಕೊಂಡರು.
ವಾಸುದೇವ ಮೂರ್ತಿ ಹತ್ತು ಗಂಟೆಗೆ ಆಫೀಸಿಗೆ ಬರುತ್ತಾನೆಂಬುದನ್ನು ತಿಳಿದುಕೊಂಡ ಮೇಷ್ಟ್ರು ತಡವಾದರೆ ಅವನ ಕೆಲಸಕಾರ್ಯಗಳ ಮಧ್ಯೆ ಭೇಟಿಯಾಗುವುದು ಕಷ್ಟವೆಂದು ಒಂಭತ್ತೂವರೆಗೆ ಬಂದು ಕುಳಿತಿದ್ದರು. ಇಷ್ಟು ಹೊತ್ತಾದರೂ ಅವನು ಬರದಿರುವುದನ್ನು ಕಂಡು, ಬರುತ್ತಾನೋ ಇಲ್ಲವೋ ಎನ್ನುವ ಅನುಮಾನ ಉಂಟಾಗಿ ಕಚೇರಿಯ ತಳ್ಳುಬಾಗಿಲ ಮುಂದೆ ಆಸೀನನಾಗಿದ್ದ ಪೇದೆಯನ್ನು ‘ಸಾಹೇಬರು ಎಷ್ಟು ಗಂಟೆಗೆ ಬರುತ್ತಾರೆ’ ಎಂದು ವಿಚಾರಿಸಿದರು. ಸಾಹೇಬರು ಕಚೇರಿಯಲ್ಲಿಲ್ಲದಾಗ ಅವರೇ ತಾನು ಎನ್ನುವ ಧಿಮಾಕಿನ, ಬಿಳಿಯ ಮುಂಡಾಸಿನ, ಖಾಕಿ ಅಂಗಿಗೆ ಚಿನ್ನದ ಬಣ್ಣಲೇಪಿತ ಗುಂಡಿಯ ಪೇದೆ, ಪ್ರಶ್ನೆ ತನಗಲ್ಲವೆಂಬಂತೆ ಎತ್ತಲೋ ನೋಡುತ್ತಿದ್ದ. ಪಾಪ, ಕೆಪ್ಪ ಎಂದು ತಿಳಿದುಕೊಂಡು ಮೇಷ್ಟ್ರು ರಮಾನಂದರು ‘ಸಾಹೇಬರು ಹತ್ತು ಗಂಟೆಗೆ ಬರಬೇಕಿತ್ತಲ್ಲವೇ?’ ಎಂದು ಕೇಳಿದರು, ಗಟ್ಟಿಯಾಗಿ. ‘ನಿಮಗೇನು ಬೇಕಿತ್ತು?’ ಮೇಷ್ಟ್ರನ್ನೇ ಕೇಳಿದ ಆತ.
‘ಅವರ ಹತ್ತಿರ ಮಾತಾಡಬೇಕಿತ್ತು’
‘ಅಪಾಯಂಟ್‌ಮೆಂಟ್ ತೆಗೆದುಕೊಂಡಿದ್ದೀರಾ?’
ವಾಸುದೇವ ಮೂರ್ತಿ ತನ್ನ ವಿದ್ಯಾರ್ಥಿಯಾದುದರಿಂದ ಸುಲಭವಾಗಿ ಮಾತನಾಡಿಸಬಹುದು ಎಂದುಕೊಂಡಿದ್ದ ಮೇಷ್ಟ್ರಿಗೆ, ಭೇಟಿ ಕಷ್ಟವಾಗಬಹುದೇನೋ ಅನ್ನಿಸಿ, “ನಾನು ಅವನ ಮೇಷ್ಟ್ರು, ಬಂದಿರುವುದು ಗೊತ್ತಾದರೆ ಕರೆಯುತ್ತಾರೆ” ಎಂದರು. ಕುಲ್ಯಾಡಿಕಾರ್ ಬ್ರದರ್ಸ್‌ನ ಹಳೆಯ ಪ್ಲಾಸ್ಟಿಕ್ ಕವರ್‌ನೊಳಗಡೆಯಿಂದ ಇಣುಕುತ್ತಿದ್ದ ಜೆರಾಕ್ಸ್ ಪ್ರತಿಗಳನ್ನು ಗಮನಿಸಿದ, ಸಾಹೇಬರ ಕಚೇರಿಯ ಬಾಗಿಲು ತೆರೆದು ಮುಚ್ಚುವುದರಲ್ಲಿ ಜೀವನ ಸಾರ್ಥಕವನ್ನು ಕಂಡುಕೊಂಡ ಪೇದೆ ಅಷ್ಟು ಸುಲಭವಾಗಿ ಮೇಷ್ಟ್ರ ಭೂತಕಾಲಕ್ಕೆ ಬೆಲೆ ಕೊಡುತ್ತಾನೆಯೇ?
“ಪರಿಚಯ ಇದ್ದರೆ ಮನೆಗೆ ಹೋಗಿ ಮಾತನಾಡಿಸಿ. ಇಲ್ಲಿ ಸಾಹೇಬರು ಬ್ಯುಸಿಯಾಗಿರುತ್ತಾರೆ” ಎಂದುಬಿಟ್ಟು, ತನಗೂ ಲೋಕ ವ್ಯವಹಾರಕ್ಕೂ ಸಂಬಂಧವಿಲ್ಲವೆನ್ನುವಂತೆ ಇದ್ದುಬಿಟ್ಟ. ಅಚ್ಚುಮೆಚ್ಚಿನ ಶಿಷ್ಯನಾಗಿದ್ದ ವಾಸುದೇವ ಮೂರ್ತಿ ಒಳಗೆ ಹೋಗುವಾಗ ಗಮನಿಸಿದರೆ ತನ್ನನ್ನು ಕರೆಸಿಕೊಳ್ಳುವುದು ಗ್ಯಾರಂಟಿ. ಆವಾಗ ಈ ಮುಖಕ್ಕೆ ಮಂಗಳಾರತಿಯಾಗುತ್ತದೆ; ಆದರೆ ತನ್ನನ್ನು ನೋಡದೆ ಒಳಹೋದರೆ ಏನು ಮಾಡುವುದೆಂದು ರಮಾನಂದ ಮೇಷ್ಟ್ರು ಯೋಚಿಸಿದರು. ಮಗನ, ಅದಕ್ಕಿಂತಲೂ ಹೆಚ್ಚಾಗಿ ಹೆಂಡತಿಯ ಒತ್ತಾಯದಿಂದಾಗಿ ಒಲ್ಲದ ಮನಸ್ಸಿನಿಂದ ವಾಸುದೇವ ಮೂರ್ತಿಯನ್ನು ಭೇಟಿಯಾಗಲು ಅವರು ಬಂದಿದ್ದರು. ಮಗನ ಕೆಲಸದ ಬಗ್ಗೆ ಕೇಳುವುದೋ ಬೇಡವೋ ಎನ್ನುವುದನ್ನು ಅವರಿನ್ನೂ ತೀರ್ಮಾನಿಸಿರಲಿಲ್ಲ. ಅವರ ಸ್ವಭಾವವನ್ನು ಬಲ್ಲ ಮಹೇಶ, ಅಪ್ಪ ಹೊರಡುವಾಗ ಅಗತ್ಯವಿರುವ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಪ್ಲಾಸ್ಟಿಕ್ ಕವರ್‌ನೊಳಗಿಟ್ಟು ಕೈಗಿತ್ತು, ವಾಸುದೇವ ಮೂರ್ತಿಯವರಿಗೆ ಕೊಡಲು ಮರೆಯಬೇಡಿ ಎಂದು ಎಚ್ಚರಿಸಿದ್ದ. ಆದರೆ ಒಳಗಡೆ ಏನೇನು, ಯಾವ ಅನುಕ್ರಮಣಿಕೆಯಲ್ಲಿದೆ ಎಂದು ಗಮನಿಸಲು ಹೋಗದ ರಮಾನಂದ ಮೇಷ್ಟ್ರು ಕುಶಲೋಪರಿ ವಿಚಾರಿಸುವುದು, ಹೆಂಡತಿಯ ಬಗ್ಗೆ, ಮಕ್ಕಳ ಬಗೆಗೆ ಅವನಾಗಿ ಕೇಳಿದರೆ ಮಹೇಶ ಕೆಲಸಕ್ಕಾಗಿ ಅರ್ಜಿ ಹಾಕಿರುವ ವಿಷಯ ಪ್ರಸ್ತಾಪಿಸುವುದು ಎಂದು ಎಣಿಕೆ ಹಾಕಿಕೊಂಡಿದ್ದರು. ಮೊದಲು ಭಾಷಣ ಮಾಡಲು ಹೋಗುವ ಹುಡುಗರು ಚಡಪಡಿಸುವಂತೆ, ಅವನು ಎದುರಾಗಿ ಬಂದಾಗ ಏನು ಮಾಡುವುದು, ನಮಸ್ಕಾರ ಅನ್ನುವುದೋ, ಅವನು ಕೈಮುಗಿಯುವವರೆಗೆ ಕಾಯುವುದೋ, ಹೇಗೆ ಶುರು ಮಾಡುವುದು ಎನ್ನುವ ಗೊಂದಲಕ್ಕೆ ಬಿದ್ದರು. ಮೇಷ್ಟ್ರು ಎಂದರೆ ವಾಸುದೇವ ಮೂರ್ತಿಗೆ ಗೌರವ, ಭಯ ಎರಡೂ ಇತ್ತು. ಎಂದೂ ಎದುರಾಗಿ ಕೂತವನಲ್ಲ. ಈಗ ಅವನನ್ನು ತಾವು ರೂಢಿಬಿಟ್ಟು ಗೌರವಪೂರ್ವಕವಾಗಿ ನೀವು, ತಾವು ಎಂದು ಮಾತನಾಡಿಸಬೇಕು; ಅವನು ಅದಕ್ಕೆ ಆಸ್ಪದ ಕೊಡಲಿಕ್ಕಿಲ್ಲ. ತಕ್ಷಣ ‘ಸಾರ್, ನೀವು ನನಗೆ ಹಾಗೆ ಹೇಳಬೇಡಿ, ನಿಮ್ಮ ಶಿಷ್ಯ ನಾನು’ ಅನ್ನುತ್ತಾನೆ. ಮೇಷ್ಟ್ರಿಗೆ ಗಂಟಲು ಕಟ್ಟಿದಂತಾಗಿ ಕಾಫಿ ಕುಡಿಯಬೇಕು ಅನ್ನಿಸಿತು. ಅಷ್ಟು ಹೊತ್ತಿಗೆ ವಾಸುದೇವಮೂರ್ತಿ ಬಂದುಬಿಟ್ಟರೆ ಕೆಲಸ ಕೆಡುತ್ತದೆಂದು ಪೇದೆಯ ಹತ್ತಿರ ಹೋಗಿ ಹತ್ತಿರದಲ್ಲಿ ಕ್ಯಾಂಟೀನ್ ಇದೆಯೇ ಎಂದು ಕೇಳಿದರು. ಅವನು ಅಲ್ಲಿದೆ ಎನ್ನುವಂತೆ ಕೈ ತೋರಿಸಿದ. “ಕಾಫಿ ಕುಡಿದು ಬರುವುದರೊಳಗೆ ಸಾಹೇಬರು ಎಂದು ಬಿಡಬಹುದಾ?” ಮೇಷ್ಟ್ರು ವಿಚಾರಿಸಿದರು. “ನನಗೇನು ಗೊತ್ತು? ಎಷ್ಟು ಹೊತ್ತಿಗಾದರೂ ಬರಬಹುದು” ಎಂದ ಆತ. ಕಾಫಿ ಕುಡಿಯುವುದೋ, ಬೇಡವೋ ಎನ್ನುವ ಸಂದಿಗ್ಧಕೊಳ್ಳಗಾದ ಮೇಷ್ಟ್ರು, ಕಾಫಿ ಕುಡಿಯುವುದರೊಳಗೆ ಅವರು ಬಂದುಬಿಟ್ಟರೆ ನನ್ನನ್ನು ಸ್ವಲ್ಪ ಒಳಗೆ ಕಳುಹಿಸಿ ಎಂದರು. “ಹ್ಞೂಂ” ಅಂದ ಪೇದೆ “ಇಲ್ಲಿ ಬನ್ನಿ” ಎಂದು ಹತ್ತಿರ ಕರೆದು, “ಒಂದು ಐವತ್ತು ರೂಪಾಯಿ ಕೊಟ್ಟು ಹೋಗಿ” ಅಂದ. ಯಾವ ಮುಲಾಜು ಇಲ್ಲದೆ ಅವನು ಕೇಳಿದ ರೀತಿಗೆ ಬೆರಗಾದ ಮೇಷ್ಟು ಕೊಡುವುದೋ, ಬೇಡವೋ ಎಂದು ಯೋಚಿಸಿ, ಕೊಡದೆ ಹೋದರೆ ಒಳಗೆ ಬಿಡದೆ ಸತಾಯಿಸಬಹುದು ಎಂದುಕೊಂಡು ಜೇಬಿನಿಂದ ಐವತ್ತರ ನೋಟನ್ನು ತೆಗೆದುಕೊಟ್ಟರು. “ನಿಧಾನವಾಗಿ ಕಾಫಿ ಕುಡಿದುಕೊಂಡು ಬನ್ನಿ, ಸಾಹೇಬರು ಬರುವುದು ಇನ್ನೂ ಲೇಟು” ದುಡ್ಡು ತೆಗೆದುಕೊಂಡು ಹೇಳಿದ ಪೇದೆ.
ಒಳಗೆ ಕೂತು ಮಾತನಾಡುವಾಗ ವಾಸುದೇವ ಮೂರ್ತಿ ಕಾಫಿ ತರಿಸಿಕೊಡುತ್ತಾನೆ; ಆಗ ಅವನ ದಾಕ್ಷಿಣ್ಯಕ್ಕಾಗಿ ಕಾಫಿ ಕುಡಿಯಬೇಕಾಗುತ್ತದೆ. ಈ ಯೋಚನೆ ಆಗಲೇ ಬಂದಿದ್ದರೆ ಕಾಫಿ ಇಷ್ಟೊಂದು ದುಬಾರಿಯಾಗುತ್ತಿರಲಿಲ್ಲ ಅನ್ನಿಸಿತು ಮೇಷ್ಟ್ರಿಗೆ. ಬೆಳಗ್ಗಿನ ಕಾಫಿಯ ಸಮಯವಾಗಿದ್ದರೆ ಪಾಠಕ್ಕೆಂದು ಬರುವ ನಾಲ್ಕೈದು ಮಕ್ಕಳಿಗೂ ರುಕ್ಮಿಣಿ ಕಾಫಿ ಕೊಡುತ್ತಿದ್ದಳು. ಎಲ್ಲಾ ವಿಷಯಗಳಲ್ಲಿ ಒಳ್ಳೆಯ ಅಂಕ ಪಡೆದಿದ್ದರೂ ಇಂಗ್ಲಿಷಿನಲ್ಲಿ ಹಿಂದೆ ಇದ್ದ ವಾಸುದೇವ ಮೂರ್ತಿಗೆ ಅವರೇ ಇತರ ಹುಡುಗರ ಜೊತೆಗೆ ಪಾಠಕ್ಕೆ ಬರಹೇಳಿದ್ದರು. ಅವರು ಸೆಕೆಂಡರಿ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಗ ಪ್ರತಿಫಲ ಅಪೇಕ್ಷೆ ಇಲ್ಲದೆ ಬಿಡುವಿದ್ದಾಗ ಪಾಠ ಹೇಳುವುದನ್ನು ರೂಢಿ ಮಾಡಿಕೊಂಡಿದ್ದರು. ವಾಸುದೇವ ಮೂರ್ತಿಯ ತೀರಿಹೋದ ತಂದೆ ವಿಠಲಮೂರ್ತಿ, ರಮಾನಂದ ಮೇಷ್ಟ್ರ ಗೆಳೆಯರೂ ಆಗಿದ್ದುದರಿಂದ ಅವನಿಗೆ ಎಲ್ಲ ಹುಡುಗರಿಗಿಂತ ಹೆಚ್ಚಿನ ಸಲಿಗೆ ಇತ್ತು. ಸಣ್ಣಪುಟ್ಟ ಕೆಲಸಗಳಲ್ಲಿ ರುಕ್ಮಿಣಿಗೂ ನೆರವಾಗಿ, ಅಂಗಡಿಯಿಂದ ಅವಳಿಗೆ ಬೇಕಾದ ಸಾಮಾನುಗಳನ್ನು ತಂದುಕೊಡುವುದು ಮಾಡುತ್ತಿದ್ದ. ಈ ಬಳಕೆಯಿಂದಲೇ ಮಹೇಶನ ಕೆಲಸದ ವಿಷಯವಾಗಿ ಮಾತನಾಡಲು ರಮಾನಂದ ಮೇಷ್ಟ್ರು ಹಿಂದೇಟು ಹಾಕಿದಾಗ ರುಕ್ಮಿಣಿ, ನೀವು ಹೋಗದಿದ್ದರೆ ನಾನೇ ಕಂಡು ಬರುತ್ತೇನೆ ಎಂದು ಹೇಳಿದ್ದು.
ಕಾಫಿ ಕುಡಿದು ಬರುವಾಗ ಕಚೇರಿಯ ಮುಂದೆ ನಾಲ್ವರು ಕುಳಿತಿರುವುದು ಕಣ್ಣಿಗೆ ಬಿತ್ತು. ಅವರಲ್ಲಿ ಬೋಳುತಲೆಯ ಗಡ್ಡ ಬಿಟ್ಟುಕೊಂಡಿರುವ ವ್ಯಕ್ತಿಯನ್ನು ಎಲ್ಲೋ ನೋಡಿದಂತೆನಿಸಿ, ಮೇಷ್ಟ್ರಿಗೆ ಕಸಿವಿಸಿಯಾಯಿತು. ಮಹೇಶ ಸ್ನಾತಕೋತ್ತರ ಪದವಿ ಪಡೆದು ಕೆಲಸವಿಲ್ಲದೆ ಅಲೆಯುತ್ತಿರುವುದು ಗೊತ್ತಿದ್ದವರಾದರೆ, ವಾಸುದೇವ ಮೂರ್ತಿಯವರಲ್ಲಿ ಶಿಫಾರಸು ಮಾಡಿಸಿಕೊಳ್ಳಲು ಬಂದಿರುತ್ತಾರೆ ಎಂದು ಆತ ತಿಳಿದುಕೊಳ್ಳಬಹುದು. ಈವರೆಗೆ ಯಾರ ಬಳಿಯಲ್ಲಿಯೂ ಏನನ್ನೂ ಯಾಚಿಸದ ತಾನು ಇಲ್ಲಿಗೆ ಬರಬಾರದಿತ್ತೆಂದು, ಸಂಕೋಚದಿಂದ ಮೂಲೆಯ ಜಾಗ ಹಿಡಿದು ಕೂತರು. ಆದರೆ ಆ ವ್ಯಕ್ತಿ ರಮಾನಂದ ಮೇಷ್ಟ್ರನ್ನು ಗಮನಿಸದೆ ಅನ್ಯಮನಸ್ಕನಾಗಿ ಕುಳಿತಿದ್ದ. ದೂರದಲ್ಲಿ ವಾಸುದೇವ ಮೂರ್ತಿ ಬರುತ್ತಿರುವುದನ್ನು ಕಂಡಾಗ ಎಲ್ಲರು ಎದ್ದು ನಿಂತು ಮುಂದೆ ಬಂದರೂ ಮೇಷ್ಟ್ರು ನಿಂತಲ್ಲೇ ಇದ್ದರು. ಇಬ್ಬರು ವ್ಯಕ್ತಿಗಳೊಂದಿಗೆ ಮಾತನಾಡುತ್ತಾ ಬಂದ ವಾಸುದೇವ ಮೂರ್ತಿ, ನಿಂತಿದ್ದವರು ನಮಸ್ಕರಿಸಿದರೂ ನೋಡದೆ ನೇರವಾಗಿ ಕಚೇರಿಯನ್ನು ಹೊಕ್ಕ. ಸಮೀಪದಿಂದ ಅವನನ್ನು ಗಮನಿಸಿದ ಮೇಷ್ಟ್ರು ದೈಹಿಕವಾಗಿ ತುಂಬಾ ಬದಲಾಗಿದ್ದಾನೆ ಅಂದುಕೊಂಡರು... ಅವರು ಕೊನೆಯ ಬಾರಿ ವಾಸುದೇವ ಮೂರ್ತಿಯನ್ನು ಮಾತನಾಡಿಸಿದ್ದು, ಅವನು ಮದುವೆಗೆ ಆಹ್ವಾನಿಸಲು ಬಂದಾಗ. ನೀಳದೇಹ, ಕೋಲುಮುಖ, ಅದಕ್ಕೆ ಒಪ್ಪುವ ದಪ್ಪಮೀಸೆ, ಹಣೆಯ ಮೇಲೆ ಹರಡಿದ ಕೂದಲು, ಲವಲವಿಕೆಯಿಂದ ಆ ಕಾಲದ ಕ್ರಿಕೆಟ್ ಪಟು ಚಂದ್ರಶೇಖರ್ ತರಹ ಕಾಣಿಸುತ್ತಿದ್ದ. ಈಗ ಹಣೆ ಬೋಳಾಗಿದ್ದು, ಮೀಸೆಯಲ್ಲಿ ಬೆಳ್ಳಿಯ ಗೆರೆಗಳು ಕಾಣಿಸುತ್ತಿದ್ದವು. ದೇಹ ದಪ್ಪವಾಗಿಬಿಟ್ಟು, ಹೊಟ್ಟೆ ಮುಂದಕ್ಕೆ ಚಾಚಿತ್ತು. ಮುಖಕ್ಕೊಂದು ಗಾಂಭೀರ್ಯವನ್ನು ನೀಡಿದ ಕಣ್ಣುಗಳು ತನ್ನನ್ನು ನೋಡುತ್ತವೆಯೋ ಎಂದು ಮೇಷ್ಟ್ರು ಆತುರವಾಗಿ ದಿಟ್ಟಿಸಿದರು. ವಾಸುದೇವ ಮೂರ್ತಿ ಸೈಕಲ್ಲಿನಲ್ಲಿ ಹೋಗುವಾಗ ಕಣ್ಣಿಗೇನೋ ಬಿದ್ದು ಕಣ್ಣುಕೆಂಪಗಾಗಿ ಊದಿಕೊಂಡಿತ್ತು. ಅದನ್ನು ರುಕ್ಮಿಣಿ ಗಮನಿಸಿದ್ದಳು. ಸುಕನ್ಯಳನ್ನು ಹೆತ್ತು ಎರಡು ತಿಂಗಳಾಗಿತ್ತು; ಅವಳು ಹಾಲು ಕುಡಿಯುವ ಮಗು. ತನ್ನನ್ನು ಕರೆದು ಮಗುವಿಗೆ ಹಾಲುಕುಡಿಸುವ ಒಳಲೆಯಲ್ಲಿ ಮೊಲೆ ಹಾಲನ್ನು ಕೊಟ್ಟು ಮೂರ್ತಿಯ ಕಣ್ಣಿಗೆ ಹಾಕುವಂತೆ ಹೇಳಿದ್ದಳು. ತಾನು ಅವನ ಕಣ್ಣನ್ನು ಬಿಡಿಸಿ ತೊಟ್ಟು ತೊಟ್ಟಾಗಿ ಹಾಲುಹಾಕಿದ್ದು ಮೇಷ್ಟ್ರ ನೆನಪಿಗೆ ಬಂತು.
ಪೇದೆ ಎಲ್ಲರ ಕೈಗೆ ಚೀಟಿ ಕೊಟ್ಟು, ಹೆಸರು ಬರೆದು ಕೊಡಲು ಹೇಳಿದ. ಎಲ್ಲರಿಗಿಂತ ಮೊದಲು ಬಂದ ಮೇಷ್ಟ್ರು ಕೊನೆಯಲ್ಲಿ ಕುಳಿತಿದ್ದರು. ಅವರೆಲ್ಲರೂ ವಾಸುದೇವ ಮೂರ್ತಿ ಬರುವ ಸಮಯವನ್ನು ಮೊದಲೇ ತಿಳಿದವರಂತೆ ಸಮಯಕ್ಕೆ ಸರಿಯಾಗಿ ಬಂದಿದ್ದರು. ತಾನು ಎರಡು ಗಂಟೆ ಮುಂಚಿತವಾಗಿ ಬಂದಿದ್ದು ವ್ಯರ್ಥ ಎಂದುಕೊಂಡರೂ ಪೇದೆ ತನ್ನ ಚೀಟಿಯನ್ನು ಮೇಲೆ ಇಡಬಹುದು ಎನ್ನುವ ಆಸೆಯಿಂದ ಮೇಷ್ಟ್ರು ಕಾದರು. ವಾಸುದೇವ ಮೂರ್ತಿ ಒಂದೊಂದಾಗಿ ಚೀಟಿಗಳನ್ನು ನೋಡಿ ತನ್ನ ಹೆಸರು ಕಣ್ಣಿಗೆ ಬಿದ್ದಾಗ ಎದ್ದು ಹೊರಗೆ ಬರುತ್ತಾನೆ; ‘ಸಾರ್, ನೀವು ಇಷ್ಟು ದೂರ? ಫೋನ್ ಮಾಡಿದರೆ ನಾನೇ ಬರುತ್ತಿದ್ದೆ’ ಅನ್ನುತ್ತಾನೆ. ಕೂತಿದ್ದವರೆಲ್ಲಾ ಆಶ್ಚರ್ಯದಿಂದ ನೋಡುತ್ತಿರುವಾಗ, ತನ್ನ ಕೈಗಳನ್ನು ಹಿಡಿದುಕೊಂಡು ಕಚೇರಿಯೊಳಕ್ಕೆ ಕರೆದುಕೊಂಡು ಹೋಗುವಾಗ ಪೇದೆ ಕಕ್ಕಾಬಿಕ್ಕಿಯಾಗಿ ಇವರ ಹತ್ತಿರ ನಾನು ಯಾಕೆ ದುಡ್ಡು ತೆಗೆದುಕೊಂಡೆ ಎಂದು ಪರಿತಪಿಸುತ್ತಾನೆ ಎಂದು ಮೇಷ್ಟ್ರು ಯೋಚಿಸುತ್ತಿದ್ದಾಗ ಬೆಲ್ ಶಬ್ದವಾಗಿ ಪೇದೆ ಯಾರದೋ ಹೆಸರನ್ನು ಕೂಗಿದ. ಸಾಲಿನಲ್ಲಿ ಕೂತಿದ್ದ ಓರ್ವರು ಗಕ್ಕನೆದ್ದು ಒಳಹೋದರು. ಪಾಪ, ವಾಸುದೇವ ಮೂರ್ತಿ ಎಲ್ಲಾ ಚೀಟಿಗಳನ್ನು ನೋಡಿಲ್ಲ, ಪೇದೆ ಜೋಡಿಸಿಕೊಟ್ಟಂತೆ ಕರೆಯುತ್ತಿದ್ದಾನೆ ಅಂದುಕೊಂಡು ಸಮಾಧಾನ ಪಟ್ಟುಕೊಂಡರು ರಮಾನಂದ ಮೇಷ್ಟ್ರು. ಒಳಗೆ ಹೋದ ವ್ಯಕ್ತಿ ಎಷ್ಟು ಹೊತ್ತಾದರೂ ಹೊರಗೆ ಬಾರದಿದ್ದಾಗ ಕೂತವರಿಗೆಲ್ಲ ಚಡಪಡಿಕೆ ಶುರುವಾಯಿತು. ವಾಚ್ ನೋಡಿಕೊಂಡು ಅವರವರಲ್ಲಿ ಮಾತನಾಡುತ್ತಿದ್ದರು. ಎರಡನೆಯ ಬಾರಿ ಬೆಲ್ ಶಬ್ದ ಮಾಡಿದಾಗ ಹೋದ ವ್ಯಕ್ತಿ ಹೊರಬಂದು ಮತ್ತೊಬ್ಬ ಒಳಹೋದ. ಈಗ ಮೇಷ್ಟ್ರನ್ನು ಸೇರಿ ಮೂರು ಜನ ಮಾತ್ರ ಉಳಿದಿದ್ದರು. ಬೋಳು ತಲೆಯ ವ್ಯಕ್ತಿ ಪಕ್ಕಕ್ಕೆ ಬಂದುದರಿಂದ ಪರಿಚಿತನಲ್ಲವೆಂದು ತಿಳಿದು ಮೇಷ್ಟ್ರಿಗೆ ಸಮಾಧಾನವಾಯಿತು ಒಳಹೋದವನು ಹೊರಗೆ ಬಂದು ಇವರ ಮುಂದೆ ನಡೆದುಹೋದರೂ ಬೆಲ್ ಶಬ್ದವಾಗಲಿಲ್ಲ. ಪೇದೆ ಇವರ ಬಳಿ ಬಂದು ಸಾಹೇಬರಿಗೆ ಎಲ್ಲೋ ಅರ್ಜೆಂಟಾಗಿ ಹೋಗಬೇಕಾಗಿದೆ, ನೀವೆಲ್ಲರೂ ನಾಳೆಯದಿನ ಬರಬೇಕಂತೆ ಎಂದು ಹೇಳಿದ. “ಒಂದು ನಿಮಿಷ ಮಾತಾಡಿ ಬರುತ್ತೇನೆ, ಅಗತ್ಯದ ವಿಷಯ ಹೇಳುವುದಿದೆ” ಎಂದು ಒಬ್ಬ ಅಂಗಲಾಚಿಸಿದರೂ ಪೇದೆ ಆಗುವುದಿಲ್ಲ ಎಂದು ತಲೆಯಲ್ಲಾಡಿಸಿದ. ಏನು ತನಗೇನಾದರೂ ಹೇಳುತ್ತಾನೋ ಎಂದು ಮೇಷ್ಟ್ರು ಒಂದು ನಿಮಿಷ ಕಾದರು.
ರುಕ್ಮಿಣಿ ಮನೆಗೆ ಹೋದ ತಕ್ಷಣ ನೂರ ಎಂಟು ಪ್ರಶ್ನೆಗಳನ್ನು ಕೇಳುತ್ತಾಳೆ. ವಾಸುದೇವ ಮೂರ್ತಿಗೆ ನಿಮ್ಮ ಗುರುತು ಹತ್ತಿತೆ? ನನ್ನನ್ನು ಕೇಳಿದನೆ? ಅವನು ಹಾಗೆಲ್ಲಾ ಮರೆಯುವ ಸ್ವಭಾವದವನಲ್ಲ, ಹಬ್ಬ ಹುಣ್ಣಿಮೆಗೆ ನಮ್ಮ ಮನೆಯಲ್ಲಿಯೇ ಕಡುಬು ಬೇಕು-ಬೇಕು ಎಂದು ಕೇಳಿಕೊಂಡು ಹಾಕಿಸುತ್ತಿದ್ದ; ಸುಕನ್ಯಳನ್ನು ಎತ್ತಿ ಆಟವಾಡಿಸುತ್ತಿದ್ದ, ಅವಳ ಮದುವೆ ಆಯಿತಾ ಎಂದು ವಿಚಾರಿಸಿರಬೇಕಲ್ಲಾ? ಮಹೇಶನ ಕೆಲಸದ ಬಗ್ಗೆ ಈವರೆಗೆ ನನಗೆ ನೀವು ಯಾಕೆ ತಿಳಿಸಿರಲಿಲ್ಲ ಎಂದು ಕೇಳಿರುತ್ತಾನೆ. ನಿಮಗೆ ಬಿಗುಮಾನ ಬಿಟ್ಟರಲ್ಲವೆ? ನಾನು ಎಷ್ಟುಸಲ ಹೇಳಿದೆ ನಿಮಗೆ, ಹೋಗಿ ಅವನನ್ನು ನೋಡಿ ಬನ್ನಿ ಎಂದು. ಅಂತೂ ಈಗ ನಮ್ಮ ಪಾಲಿನ ದೇವರು ಕಣ್ಣು ತೆರೆದ; ನೀವು ಹೋಗುವಾಗಲೇ ದೇವರಿಗೆ ತುಪ್ಪದ ದೀಪ ಹಚ್ಚಿಟ್ಟೆ ಎನ್ನುತ್ತಾಳೆ. ಅವಳಿಗೆ ಯಾವರೀತಿ ಸಮಾಧಾನವನ್ನು ಹೇಳುವುದು ಎಂದು ಯೋಚಿಸುತ್ತಾ ಬಂದ ಮೇಷ್ಟ್ರಿಗೆ ರುಕ್ಮಿಣಿ ಏನನ್ನೂ ಕೇಳದೆ ಮೌನವಾಗಿ ಊಟಕ್ಕೆ ಬಡಿಸಿದಾಗ ಆಶ್ಚರ್ಯವಾಯಿತು.
ಊಟ ಮುಗಿಸಿ ಹೊರಬಂದು ಆರಾಮ ಕುರ್ಚಿಯಲ್ಲಿ ಕಾಲು ನೀಡಿ ಕೂತು, ಊಟದ ತಟ್ಟೆಗಳನ್ನು ಒಳಗಿಟ್ಟು ಬಂದ ರುಕ್ಮಿಣಿಗೆ, ವಾಸುದೇವ ಮೂರ್ತಿಯನ್ನು ಈವತ್ತು ಮಾತನಾಡಿಸಲು ಆಗಲಿಲ್ಲ, ನಾಳೆ ನೋಡಬೇಕು ಎಂದರು. ರುಕ್ಮಿಣಿ ರಮಾನಂದ ಮೇಷ್ಟ್ರ ಮಾತನ್ನು ಕೇಳಿಯೂ ಕೇಳಿಸದವರಂತೆ, “ಮಹೇಶನಿಗೆ ವಿದ್ಯಾವರ್ಧಕ ಕಾಲೇಜಿನಿಂದ ಇಂಟರ್‌ವ್ಯೂಗೆ ಕರೆಬಂದಿದೆ, ನಾಡಿದ್ದು ಹೋಗಬೇಕಂತೆ” ಎಂದು ಹೇಳಿದರು. ವಿದ್ಯಾವರ್ಧಕ ಕಾಲೇಜಿನ ಹುದ್ದೆಗೆ ಅರ್ಜಿ ಹಾಕಿದ್ದ ವಿಷಯವನ್ನು ಮಹೇಶ ಅವರಲ್ಲಿ ಹೇಳಿರಲಿಲ್ಲ. ಆ ಸಂಸ್ಥೆಯ ಕಾರ್ಯದರ್ಶಿ ಮಧುಸೂದನ ರಮಾನಂದ ಮೇಷ್ಟ್ರ ಸಹೋದ್ಯೋಗಿಯಾಗಿದ್ದ. ವಿದ್ಯಾ ಇಲಾಖೆಯಲ್ಲಿ ಅಧಿಕಾರದಲ್ಲಿದ್ದ. ಅವನ ನೆಂಟರ ನೆರವಿನಿಂದ ಪಿ.ಯು ಕಾಲೇಜು ಪ್ರಾರಂಭಿಸಿದಾಗ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದ ರಮಾನಂದರನ್ನು ಜೊತೆಗೆ ಸೇರುವಂತೆ ಕೇಳಿಕೊಂಡಿದ್ದ; ಅವರು ಒಪ್ಪಿರಲಿಲ್ಲ. ಮತ್ತಿಬ್ಬರು ಸಹೋದ್ಯೋಗಿಗಳು ಕಾಲೇಜು ಬಿಟ್ಟು ಮಧುಸೂದನನ ಸಂಸ್ಥೆ ಸೇರಿದ್ದರು. ರಮಾನಂದರು ಸರಕಾರಿ ಸ್ಪರ್ಧಾ ಪರೀಕ್ಷೆಗಳನ್ನು ಮುಗಿಸಿ, ಶಿಕ್ಷಣ ಇಲಾಖೆಯಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸಮಾಡಿ ಉಪನಿರ್ದೇಶಕರ ಸ್ಥಾನದವರೆಗೆ ಏರಿ ನಿವೃತ್ತಿ ಹೊಂದಿದ್ದರು.
ಮೊದಲೆರಡು ವರ್ಷ ಕಾಲೇಜು ನಡೆಸಲು ಕಷ್ಟವಾದರೂ ಒಳ್ಳೆಯ ಫಲಿತಾಂಶ ಬರತೊಡಗಿದ ಮೇಲೆ ವಿದ್ಯಾರ್ಥಿಗಳು ಆಕರ್ಷಿತರಾದರು. ಒಳ್ಳೆಯ ಅಧ್ಯಾಪಕರನ್ನು ನೇಮಿಸಿ, ಉತ್ತಮ ಫಲಿತಾಂಶ ಬರುವಂತೆ ಅವನು ನೋಡಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕವನ್ನೂ ವಸೂಲು ಮಾಡತೊಡಗಿದ. ದೊಡ್ಡ ಕಟ್ಟಡಗಳನ್ನೂ ಕಟ್ಟಿಸಿ ಪದವಿ, ಸ್ನಾತಕೋತ್ತರ ತರಗತಿಗಳನ್ನೂ ಪ್ರಾರಂಭಿಸಿದ. ಕೆಲವು ವರ್ಷಗಳ ಹಿಂದೆ ವಿದ್ಯಾವರ್ಧಕ ಸಂಸ್ಥೆಗೆ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲು ಅನುಮತಿಯೂ ದೊರೆತು ಅದು ನಗರದ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯಿತು.
‘ಅಪ್ಪ ಸೆಕ್ರೆಟರಿಯವರ ಹತ್ತಿರ ಮಾತನಾಡಿದರೆ ಕೆಲಸ ಸಿಗುತ್ತದೆ ಎಂದು ಮಹೇಶ ಹೇಳುತ್ತಿದ್ದ’ ಎಂದು ಮೆತ್ತಗೆ ಹೇಳಿದರು ರುಕ್ಮಿಣಿ. ರಮಾನಂದ ರಾಯರಿಗೆ ಮಧುಸೂದನನ ಹತ್ತಿರ ಮೊದಲಿನ ಸಲುಗೆ ಇಲ್ಲ ಎಂದು ರುಕ್ಮಿಣಿಗೆ ತಿಳಿದಿದ್ದರೂ ಅವರ ಭಿನ್ನಾಭಿಪ್ರಾಯದ ಕಾರಣಗಳು ಗೊತ್ತಿರಲಿಲ್ಲ. ಏನಿದ್ದರೂ ಹಳೆಯ ಸಹೋದ್ಯೋಗಿ, ಸ್ವಂತ ಮಗನ ಉದ್ಯೋಗಕ್ಕೆ ಇಲ್ಲ ಎನ್ನಲಾರ, ರಮಾನಂದ ರಾಯರು ಕೇಳುವುದಕ್ಕೆ ಮನಸ್ಸು ಮಾಡಬೇಕಷ್ಟೆ ಎನ್ನುವುದು ಅವರ ಅಭಿಪ್ರಾಯ. ಗಂಡನ ಧೋರಣೆಗೆ ವಿರುದ್ಧವಾಗಿ ಎಂದೂ ಹೋಗದ ಅವರು ಇತ್ತೀಚೆಗೆ ಮಕ್ಕಳು ಕಷ್ಟ ಪಡುತ್ತಿರುವುದನ್ನು ನೋಡಿ, ತಾವು ಬದುಕಿದ ರೀತಿಯಲ್ಲಿ ತಪ್ಪಿದೆಯೋ ಏನೋ ಎಂದು ಯೋಚಿಸುತ್ತಿದ್ದರು. ಅಪ್ಪನಿಗಿಂತ ಕಡಿಮೆ ದರ್ಜೆಯ ಅಧಿಕಾರಿಗಳು ಕಾರು, ಬಂಗಲೆ ಇಟ್ಟುಕೊಂಡು ಚೆನ್ನಾಗಿದ್ದಾರೆ, ಅವರ ಮಕ್ಕಳಿಗೂ ದೊಡ್ಡ ದೊಡ್ಡ ಕೆಲಸ ಸಿಗುವಂತೆ ನೋಡಿಕೊಂಡಿದ್ದಾರೆ, ನಮಗೆ ಇರುವುದಕ್ಕೊಂದು ಮನೆ ಬಿಟ್ಟರೆ ಬೇರೇನಿದೆ ಎಂದು ಮಕ್ಕಳು ಹೇಳುವುದರಲ್ಲಿ ಸತ್ಯಾಂಶವಿದೆಯೆಂದು ಅವರಿಗೆ ಅನ್ನಿಸಿದೆ. ರಮಾನಂದ ರಾಯರಿಂದ ಉಪಕೃತರಾದ ಜನ, ಅವರು ಸರ್ವೀಸಿನಲ್ಲಿದ್ದಾಗ ಗುಣಗಾನ ಮಾಡುತ್ತಿದ್ದ ಮಂದಿ ಇಂದು ಕಣ್ಣಿಗೆ ಬೀಳುತ್ತಿಲ್ಲ. ಮಹೇಶ ಉದ್ಯೋಗಕ್ಕಾಗಿ ಅಲೆದೂ ಅಲೆದೂ ಕಂಗಾಲಾಗಿದ್ದಾನೆ, ಇನ್ನಾದರೂ ಒಣಪ್ರತಿಷ್ಠೆ ಬಿಟ್ಟು ಗೊತ್ತಿದ್ದವರಲ್ಲಿ ಮಾತನಾಡಿದರೆ ಅವನಾದರೂ ಸುಖವಾಗಿರಬಹುದು ಅಂದುಕೊಂಡರು.
ತನ್ನನ್ನು ಅವಮಾನಿಸುವ ಉದ್ದೇಶದಿಂದ ಮಧುಸೂದನ ಮಹೇಶನ ಇಂಟರ್‌ವ್ಯೂಗೆ ಕರೆ ಕಳುಹಿಸಿರಬಹುದೇ ಎನ್ನುವ ಶಂಕೆ ರಮಾನಂದ ಮೇಷ್ಟ್ರಿಗೆ ಉಂಟಾಯಿತು. ನೀನೊಬ್ಬ ಯಕಶ್ಚಿತ್ ಸರಕಾರಿ ಅಧಿಕಾರಿ, ನಿವೃತ್ತನಾದ ಮೇಲೆ ನನ್ನ ಕಾಲಬುಡಕ್ಕೆ ಬಂದು ಬೇಡಿಕೊಳ್ಳುತ್ತಿದ್ದೀ ಎಂದು ದರ್ಪ ತೋರಿಸಬಹುದು; ಚುಚ್ಚಿ ಮಾತನಾಡಬಹುದು. ಅವನ್ನೆಲ್ಲಾ ಮಗನಿಗಾಗಿ ಸಹಿಸಿಕೊಂಡರೂ ಕೆಲಸ ಕೊಡದೇ ಸತಾಯಿಸಬಹುದು. ಅವನ ಸಹವಾಸವೇ ಬೇಡ ಎಂದು ಸುಮ್ಮನಿದ್ದರೆ, ಮಹೇಶ ಇಂಟರ್‌ವ್ಯೂಗೆ ಹೋದಾಗ ನಿನ್ನ ಅಪ್ಪ ಬರಲಿಲ್ಲವೇ ಎಂದು ಕೇಳಿ, ಮುದುಕನಿಗೆಷ್ಟು ಅಹಂಕಾರ ಎಂದು ಉದ್ಯೋಗ ನಿರಾಕರಿಸಿ ಸೇಡು ತೀರಿಸಿಕೊಳ್ಳಬಹುದು.
ರಮಾನಂದ ರಾಯರು ಉಪನಿರ್ದೇಶಕರಾಗಿದ್ದಾಗ ಅನಿರೀಕ್ಷಿತ ತನಿಖೆಗೆಂದು ವಿದ್ಯಾವರ್ಧಕ ಕಾಲೇಜಿಗೆ ಭೇಟಿನೀಡಿ, ಮುನ್ನೂರು ವಿದ್ಯಾರ್ಥಿಗಳಿಗೆ ಅನುಮತಿಯಿದ್ದ ಕಾಲೇಜಿನಲ್ಲಿ ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ನಡೆಯುತ್ತಿರುವುದನ್ನು ನೋಡಿ ಕೆಂಡಾಮಂಡಲವಾಗಿದ್ದರು. ಪ್ರಿನ್ಸಿಪಾಲರಿಗೆ ಚೆನ್ನಾಗಿ ಬೈದು ಕಾರ್ಯದರ್ಶಿ ಬಂದು ತಮ್ಮನ್ನು ಭೇಟಿಯಾಗುವಂತೆ ಆದೇಶಿಸಿದ್ದರು. ಮಧುಸೂದನ ಅವರನ್ನು ಭೇಟಿ ಮಾಡಿದಾಗ ಅವನ ಕಾಲೇಜಿನಲ್ಲಿ ನಿಯಮವಾಹಿರವಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿಸಿ ಪರವಾನಗಿ ರದ್ದುಗೊಳಿಸಲು ಸರಕಾರಕ್ಕೆ ಶಿಫಾರಸು ಮಾಡುತ್ತೇನೆಂದು ಹೇಳಿದ್ದರು. ಅವನ ಯಾವುದೇ ಆಮಿಷಕ್ಕೂ ಬೆದರಿಕೆಗೂ ಅವರು ಜಗ್ಗಿರಲಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆ ಬಾರಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತು ಕೊಳ್ಳಲು ಅನುಕೂಲ ಮಾಡಿಕೊಟ್ಟರಾದರೂ ಅವರು ಆ ಊರಲ್ಲಿ ಇರುವವರೆಗೆ ಮಧುಸೂದನ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಬಿಡಲಿಲ್ಲ. ರಮಾನಂದರು ಶಿವಮೊಗ್ಗೆಗೆ ವರ್ಗಹೊಂದಲು ಅವನೇ ಕಾರಣ ಎಂದು ವದಂತಿಗಳಿದ್ದರೂ ಅವರು ತಲೆಕೆಡಿಸಿಕೊಳ್ಳಲಿಲ್ಲ.
“ಮಹೇಶ ಎಲ್ಲಿ” ರುಕ್ಮಿಣಿಯನ್ನು ಕೇಳಿದರು ಮೇಷ್ಟ್ರು.
“ಅವನ ಸ್ನೇಹಿತನ ತಂದೆ ವಿದ್ಯಾವರ್ಧಕದಲ್ಲಿ ಪ್ರಿನ್ಸಿಪಾಲ್ ಅಂತೆ. ಅವರನ್ನು ಭೇಟಿಮಾಡಲು ಬೈಕ್ ತೆಗೆದುಕೊಂಡು ಹೋದ”.
ಸರ್ವೀಸ್‌ನಲ್ಲಿದ್ದಾಗ ಒಂದು ಸ್ಕೂಟರ್ ಆದರೂ ತೆಗೆದುಕೊಳ್ಳಿ ಎಂದು ರುಕ್ಮಿಣಿ ಅಂಗಲಾಚಿದರೂ ಒಪ್ಪದ ರಮಾನಂದ ರಾಯರು ಸರಕಾರಿ ವಾಹನವನ್ನು ಕೂಡಾ ಮನೆಬಳಕೆಗೆ ಉಪಯೋಗಿಸಿದವರಲ್ಲ. ಮಹೇಶ ಪದವಿ ಪರೀಕ್ಷೆಯ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ಹಠ ಹಿಡಿದನೆಂದು ಬೈಕ್ ಕೊಡಿಸಿದ ಮೇಲಷ್ಟೇ ರುಕ್ಮಿಣಿ ಸ್ವಂತ ವಾಹನ ಸಂಚಾರದ ಸುಖ ಅನುಭವಿಸಿದ್ದು.
ಮಹೇಶ ಪ್ರಿನ್ಸಿಪಾಲ್ ಸರ್ವೋತ್ತಮ ಪ್ರಭುಗಳನ್ನು ಭೇಟಿ ಮಾಡಿದರೂ ಉಪಯೋಗವಿಲ್ಲವೆಂದು ರಮಾನಂದರಿಗೆ ಗೊತ್ತು.
“ನಾನು ಪ್ರಯತ್ನ ಮಾಡುತ್ತೇನೆ, ನಿಮ್ಮ ಅಪ್ಪನಿಗೂ ಮಧುಸೂದನರನ್ನು ಮೀಟ್ ಮಾಡಲು ಹೇಳು” ಎಂದು ಅವರು ಹೇಳಿ ಕಳುಹಿಸಬಹುದು. “ಸೆಕ್ರೆಟರಿಯವರು ಅಪ್ಪನಿಗೆ ತುಂಬಾ ಪರಿಚಿತರಂತೆ. ಈ ಸಲ ಮನಸ್ಸು ಮಾಡಿದರೆ ಅವರು ಕೊಡಿಸಬಹುದು ಎಂದು ಮಹೇಶ ಹೇಳುತ್ತಿದ್ದ” ಎಂದು ರುಕ್ಮಿಣಿ ರಮಾನಂದ ಮೇಷ್ಟ್ರ ಮನಸ್ಸಿಗೆ ಮುಟ್ಟಲಿ ಎಂದು ಅವರ ಮುಖ ನೋಡುತ್ತಾ ಹೇಳಿದರು.
ಲಕ್ಷಾಂತರ ರೂಪಾಯಿ ದೇಣಿಗೆ ಸಂಗ್ರಹಿಸುತ್ತಿರುವ ಮಧುಸೂದನ ತುಂಬಾ ಬೇಡಿಕೆಯಿರುವ ಉಪನ್ಯಾಸಕ ಹುದ್ದೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುತ್ತಾನೆನ್ನುವುದು ಭ್ರಮೆ. ತಾನು ಮಾನಾಪಮಾನಗಳನ್ನು ಬದಿಗಿರಿಸಿ ಹೋದರೂ, ಇಂತಿಷ್ಟು ಮೊತ್ತ ಕೊಡಲು ಮುಂದೆ ಬಂದವರಿದ್ದಾರೆ, ನಿಮ್ಮ ಸವಾಲು ಎಷ್ಟು ಎಂದು ಹುದ್ದೆಯನ್ನು ಹರಾಜು ಹಾಕಬಹುದು. ಅಥವಾ ಮಹಾ ಸಭ್ಯಸ್ಥನಂತೆ, ಪ್ರಿನ್ಸಿಪಾಲರ ಹತ್ತಿರ ಮಾತನಾಡಿ ಅವರೆಷ್ಟು ಸೂಚಿಸುತ್ತಾರೋ ಅಷ್ಟು ಕೊಟ್ಟು ಬಿಡಿ ಎಂದು ಹೇಳಬಹುದು. ಅವರು ಹೇಳುವ ಮೊತ್ತಕ್ಕೆ ಒಪ್ಪಿಕೊಳ್ಳುವ ಅಥವಾ ಚೌಕಾಸಿ ಮಾಡುವ ಸ್ಥಿತಿಯಲ್ಲಿ ರಮಾನಂದ ಮೇಷ್ಟ್ರು ಇರಲಿಲ್ಲ. ನಿವೃತ್ತರಾದಾಗ ದೊರೆತ ಹಣದಲ್ಲಿ ಮೊದಲ ಮಗಳು ಸುಮಿತ್ರೆಯ ಮದುವೆಗೆ ಅರ್ಧದಷ್ಟು ಖರ್ಚಾಗಿತ್ತು. ಉಳಿದುದನ್ನು ಬ್ಯಾಂಕಿನಲ್ಲಿ ಜೋಪಾನ ಮಾಡಿ ಕೊನೆಯ ಮಗಳು ಸುಕನ್ಯ ಮದುವೆ ಖರ್ಚಿಗೆ ಉಳಿಸಿಕೊಂಡಿದ್ದರು. ಪಿಂಚಣಿಯ ಹಣದಲ್ಲಿ ಸಂಸಾರ ಹೇಗೋ ಸಾಗುತ್ತಿತ್ತು. ಮಹೇಶನ ಉದ್ಯೋಗಕ್ಕೆ ಆ ಹಣವನ್ನು ಕೊಟ್ಟುಬಿಟ್ಟರೆ, ಪದವಿಯ ಕೊನೆಯ ವರ್ಷದಲ್ಲಿರುವ ಸುಕನ್ಯಳ ಮದುವೆಯನ್ನು ಮಾಡುವುದಾದರೂ ಹೇಗೆ? ಚಿಂತೆಯಲ್ಲಿ ಮೇಷ್ಟ್ರಿಗೆ ನಿದ್ದೆ ಹತ್ತಲಿಲ್ಲ.
ಬೆಳಗ್ಗೆ ಅವರು ಹೊರಟು ನಿಂತಾಗ ರುಕ್ಮಿಣಿ, “ಸೆಕ್ರೆಟರಿ ಹತ್ತುಗಂಟೆಗೆ ಆಫೀಸಿಗೆ ಬರುತ್ತಾರಂತೆ” ಎಂದು ನೆನಪಿಸಿ ಕೈಗೆ ಕುಲ್ಯಾಡಿಕಾರ್‍ಸ್‌ನ ಕವರನ್ನು ಕೊಟ್ಟು “ಇದರಲ್ಲಿ ರೆಕಾರ್ಡ್ಸ್ ಇದೆಯಂತೆ, ನೋಡಿಕೊಳ್ಳಿ” ಎಂದರು. ಮಹೇಶ ಕಣ್ಣಿಗೆ ಬೀಳದಿದ್ದರೂ ಅಪ್ಪ ಏನು ಹೇಳುತ್ತಾರೆ ಎಂದು ಕೇಳಲು, ಒಳಕೋಣೆಯಲ್ಲಿ ಕಿವಿಕೊಟ್ಟು ಕುಳಿತಿರುತ್ತಾನೆ ಎನ್ನುವುದು ಅವರಿಗೆ ಗೊತ್ತು.
ವಾಸುದೇವ ಮೂರ್ತಿಯನ್ನು ನೋಡುವುದಾಗಿದ್ದರೆ ಹತ್ತುಗಂಟೆಗೆ ಹೋಗಬೇಕಿತ್ತು. ಅವನು ಉದ್ದೇಶಪೂರ್ವಕವಾಗಿ ಭೇಟಿಯಾಗುವುದನ್ನು ತಪ್ಪಿಸಿಕೊಂಡಿರಬಹುದೇ ಎನ್ನುವ ಶಂಕೆ ಅವರಲ್ಲಿ ಉಂಟಾಯಿತು. ಅವನ ಆಫೀಸಿನಲ್ಲಿ ಕೊನೆಗೆ ಉಳಿದ ಮೂವರನ್ನು ಮಾತನಾಡಿಸಿ ಕಳುಹಿಸುವುದು ಅಂತಹ ಕಷ್ಟದ ಕೆಲಸವೇನೂ ಆಗಿರಲಿಲ್ಲ. ಕೊನೆಯ ಪಕ್ಷ ಬಂದವರು ಯಾರು ಎನ್ನುವುದನ್ನು ಅವನು ಚೀಟಿಯಲ್ಲಿ ನೋಡದಿರಲು ಶಕ್ಯವೇ? ಮೇಷ್ಟ್ರು ಏನೋ ಒಂದು ಅನುಕೂಲ ಪಡೆಯಲು ಬಂದಿದ್ದಾರೆ, ಮಾತನಾಡಿಸಿದರೆ ಇಲ್ಲ ಎನ್ನಲಾಗುವುದಿಲ್ಲ, ಆದ್ದರಿಂದ ಭೇಟಿಯಾಗದಿರುವುದೇ ವಾಸಿ ಎಂದು ಹಾಗೆ ಮಾಡಿದ್ದಾನೋ ಎಂಬ ಭಾವನೆ ಕಾಡತೊಡಗಿತು.
ಬೆಳಗ್ಗಿನ ಹೊತ್ತಾದುದರಿಂದ ವಾಹನಗಳ ಭರಾಟೆ ಜೋರಾಗಿತ್ತು. ಚಿಕ್ಕದಾದ ಕಾಲುದಾರಿಯಲ್ಲಿ ಮೇಷ್ಟ್ರು ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಅವರ ಮಗ್ಗುಲಲ್ಲಿ ಸವರುವಂತೆ ಹೋಯಿತು. ಆಫೀಸಿಗೆ ಹೋಗುತ್ತಿದ್ದಾಗ ಒಮ್ಮೆ ಮಧುಸೂದನ ಪಕ್ಕದಲ್ಲಿ ಕಾರು ನಿಲ್ಲಿಸಿ, ಬಾಗಿಲು ತೆರೆದು “ಬನ್ನಿ ಆಫೀಸಿಗೆ ಬಿಡುತ್ತೇನೆ” ಎಂದು ಕರೆದಿದ್ದ. ಅವನ ಕಾಲೇಜಿಗೆ ಹಠಾತ್ ಭೇಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ ದಿನಗಳವು. ಮೇಷ್ಟ್ರು ಕಾರು ಹತ್ತಲು ಒಪ್ಪದಿದ್ದಾಗ, “ನಿಮ್ಮ ಆಫೀಸಿನ ಮಾರ್ಗವಾಗಿಯೇ ಹೋಗುತ್ತಿದ್ದೇನೆ, ನನಗೇನು ತೊಂದರೆಯಾಗುವುದಿಲ್ಲ” ಎಂದು ಒತ್ತಾಯ ಮಾಡಿದರೂ ಅವರು ಕೂರಲಿಲ್ಲ. ಆಮೇಲೆ ಅವರು ಪರಸ್ಪರ ಭೇಟಿಯಾಗದಿದ್ದರೂ ತನ್ನ ಮೇಲೆ ಮುನಿಸಿಕೊಂಡಿದ್ದಾನೆ ಎನ್ನುವುದು ತಿಳಿದಿತ್ತು. ಅದಕ್ಕೆ ತಕ್ಕಹಾಗೆ ರಮಾನಂದ ಮೇಷ್ಟ್ರ ವರ್ಗಾವಣೆಯಲ್ಲಿ ಅವನ ಕೈವಾಡ ಇದೆ ಎನ್ನುವ ಅಂತೆ ಕಂತೆಗಳು ಹಬ್ಬಿದ್ದವು.
ರಮಾನಂದರಾಯರು ನಿವೃತ್ತಿಯ ಅಂಚಿನ ವರ್ಷಗಳಲ್ಲಿ ದೂರದ ಶಿಮೊಗ್ಗದಲ್ಲಿದ್ದರೂ ಅಲ್ಲಿ ಮಾಡಿದ ಕೆಲಸ ಕಾರ್ಯಗಳು ಅವರ ಮನಸ್ಸಿಗೆ ತೃಪ್ತಿ ನೀಡಿದ್ದವು. ಮಲೆನಾಡಿನ ದೂರದೂರದ ಕಾಲೇಜುಗಳಿಗೆ ಖುದ್ದು ಭೇಟಿನೀಡಿ, ವಿದ್ಯಾರ್ಥಿಗಳು ಯಾವ ವಿಷಯಗಳಲ್ಲಿ ತೊಂದರೆ ಅನುಭವಿಸುತ್ತಾರೆ ಎನ್ನುವುದನ್ನು ತಿಳಿದು ವಿಶೇಷ ಕಾರ್ಯಾಗಾರಗಳನ್ನು ನಡೆಸಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಂಡಿದ್ದರು. ಪದೇಪದೇ ಉಪನಿರ್ದೇಶಕರ ಕಚೇರಿಗೆ ಎಡತಾಕಿ, ಸಣ್ಣಪುಟ್ಟ ಕಾರ್ಯಗಳಿಗೂ ಕಷ್ಟ ಅನುಭವಿಸುತ್ತಿದ್ದ ಪ್ರಾಧ್ಯಾಪಕರುಗಳಿಗೆ ತ್ವರಿತ ಪರಿಹಾರ ದೊರಕುವಂತೆ ಮಾಡಿದ್ದರು. ಅವರು ಒಲ್ಲೆ ಎಂದರೂ ನಿವೃತ್ತರಾದಾಗ ಶಿವಮೊಗ್ಗದಲ್ಲಿ ಅದ್ದೂರಿಯ ವಿದಾಯ ಸಮಾರಂಭ ಏರ್ಪಡಿಸಿದ್ದರು. ಅಂದು ಸೇರಿದ ಜನ, ಭಾಷಣ ಮಾಡಿದ ವ್ಯಕ್ತಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಅವರ ಹೃದಯ ಕರಗಿತ್ತು. ತಾನು ಮಾಡಿದ ಸೇವೆ ತಕ್ಕಮಟ್ಟಿಗೆ ಸಾರ್ಥಕವಾಯಿತು ಎನ್ನುವ ಭಾವನೆಯನ್ನು ಅವರಲ್ಲಿ ಉಂಟುಮಾಡಿತ್ತು. ರುಕ್ಮಿಣಿಗೂ ಅದೊಂದು ಮರೆಯಲಾರದ ಸಂತಸದ ದಿನ. ಅಂದು ಹೊದೆಸಿದ್ದ ಕಂದುಬಣ್ಣದ ಶಾಲನ್ನು ಉಪಯೋಗಿಸದೆ ಇಂದಿಗೂ ಅವಳು ತೆಗೆದಿರಿಸಿದ್ದಾಳೆ. ಅದೇ ಬಣ್ಣದ ಬೆಡ್‌ಶೀಟ್ ಒಂದನ್ನು ಅವರು ಹೊಸದಾಗಿ ಕೊಂಡಿದ್ದರು. ವಾಸುದೇವ ಮೂರ್ತಿಗೆ ಮೊದಲ ಸಲ ಕೆಲಸ ದೊರೆತು ಬೆಂಗಳೂರಿಗೆ ಹೊರಟಾಗ, ಹೇಳಿ ಹೋಗಲು ಮೇಷ್ಟ್ರ ಮನೆಗೆ ಬಂದಿದ್ದ. ಅವನ ಮನೆಯ ಆರ್ಥಿಕ ಪರಿಸ್ಥಿತಿಯ ಅರಿವಿದ್ದ ಮೇಷ್ಟ್ರು, ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೀಯಾ, ಬೆಂಗಳೂರಿನಲ್ಲಿ ಚಳಿಜಾಸ್ತಿ, ಹೊದೆಯಲು ತೆಗೆದುಕೊಂಡಿದ್ದೇ ತಾನೇ? ಎಂದು ವಿಚಾರಿಸಿದ್ದರು. ಸಂಬಳ ಬಂದ ಮೇಲೆ ತೆಗೆದುಕೊಳ್ಳುತ್ತೇನೆ ಎಂದು ಅವನು ಹೇಳಿದಾಗ, ಡಿಸೆಂಬರ್ ತಿಂಗಳಲ್ಲಿ ಹೊದೆದುಕೊಳ್ಳದೆ ಮಲಗಲು ಸಾಧ್ಯವಿಲ್ಲ ಎಂದು ತಮಗಾಗಿ ಕೊಂಡಿದ್ದ ಬೆಡ್‌ಶೀಟ್ ನೀಡಿ ಕಳುಹಿಸಿದ್ದರು.
ವಾಸುದೇವ ಮೂರ್ತಿಯನ್ನು ನೋಡುವುದೋ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮಧುಸೂದನನ್ನು ಮಾತನಾಡಿಸುವುದೋ ಎಂದು ನಿರ್ಧರಿಸಲಾಗದ ರಮಾನಂದ ಮೇಷ್ಟ್ರು ಎಂದಿನಂತೆ ಬಂದು ಕೂರುತಿದ್ದ ಕಾರ್ನಾಡು ಸದಾಶಿವರಾವ್ ಗ್ರಂಥಾಲಯಕ್ಕೆ ಬಂದರು. ಅವರು ಕೂತಲ್ಲಿಂದ ಗೋಡೆಗೆ ತೂಗುಹಾಕಿದ ಕಾರ್ನಾಡ್ ಸದಾಶಿವರಾಯರ ಭಾವಚಿತ್ರ ಕಾಣುತ್ತಿತ್ತು. ಆಗರ್ಭ ಶ್ರೀಮಂತರಾಗಿದ್ದ ಸದಾಶಿವರಾಯರು ಗಾಂಧೀಜಿ ಕರೆಗೆ ಓಗೊಟ್ಟು, ಕೈತುಂಬಾ ವರಮಾನ ತರುತ್ತಿದ್ದ ವಕೀಲಿ ವೃತ್ತಿಗೆ ತಿಲಾಂಜಲಿ ನೀಡಿ, ಸ್ವಂತದ್ದೆಲ್ಲವನ್ನೂ ಕಳೆದುಕೊಂಡು ಮುಂಬಯಿಯಲ್ಲಿ ನಿರ್ಗತಿಕರಂತೆ ಪ್ರಾಣ ಬಿಟ್ಟಿದ್ದರು. ಅವರ ಆದರ್ಶವನ್ನು ಪಾಠ ಮಾಡುತ್ತಿದ್ದ ದಿನಗಳು ನೆನಪಿಗೆ ಬಂದವು.
ಸಮಯ ಎಷ್ಟಾಗಿರಬಹುದೆಂದು ಮೇಷ್ಟ್ರು ವಾಚ್ ನೋಡಿದರು. ಮಳೆಹನಿಗಳು ಆವಿಯಾಗಿ ಡಯಲ್ ಸ್ಪಷ್ಟವಾಗಿ ಕಾಣಿಸುತ್ತಿತ್ತು; ವಾಚ್ ನಿಂತಿತ್ತು. ನಿನ್ನೆ ಕೀ ಕೊಟ್ಟಿರಲಿಲ್ಲ ಎಂದುಕೊಂಡರು ಮೇಷ್ಟ್ರು.
- Login or register to post comments
- Email this page