You are hereಕತೆ: ಪಾಲು
ಕತೆ: ಪಾಲು
ಲೇಖಕರು: ವೆಂಕಟ್ ರಮಣ್ ಮೋಂಟಡ್ಕ, ಬೆಂಗಳೂರು
ಅಲ್ಲಿ ಬೆಳಕಿರಲಿಲ್ಲ.
ಸಂಜೆಗತ್ತಲು ಆವರಿಸಿ ಮನೆಯೊಳಗೆಲ್ಲ ಕಪ್ಪು ತುಂಬಿತ್ತು. ಕರೆಂಟು ಹೋಗಿ ತಿಂಗಳೆರಡು ಕಳೆದಿದ್ದರೂ ಇನ್ನೂ ರಿಪೇರಿ ಯಾಗಿರಲಿಲ್ಲ. ಹೊರಗೆ ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ದನಕರುಗಳ ಹಿಂಡನ್ನು ಕಿಟಕಿಯ ಬದಿಗೆ ಒರಗಿ ನಿಂತ ಶಿವರಾಮ ನೋಡುತ್ತಾ ನಿಂತಿದ್ದಾನೆ. ಬೆಳಕಿಲ್ಲದಿರುವ ಅಂತಹ ಸಂಜೆಗತ್ತಲು ಶಿವರಾಮನನ್ನು ಗಾಢ ಯೋಚನೆಗೆ ದೂಡಿ ಅಂತರ್ಮುಖಿಯಾಗಿಸುತ್ತದೆ. ಬೇಡದ ನೆನಪುಗಳು ಮುತ್ತಿಕೊಂಡು ಬರಲು ಅಂಥ ಸಂಜೆಗತ್ತಲು ಕುಮ್ಮಕ್ಕು ನೀಡುತ್ತದೆ. ನೆನಪುಗಳು ಶಿವರಾಮನಿಗೆ ಬೇಡವೆಂದಲ್ಲ. ತನ್ನನ್ನು ಅಂತರ್ಮುಖಿಯಾಗಿಸುತ್ತಾ ಖಿನ್ನನಾಗುವಂತೆ ಮಾಡುವ ಆ ನೆನಪುಗಳು ಕಾಡದಿದ್ದರೆ ಒಳ್ಳೆಯದೆಂದು ಶಿವರಾಮ ಯಾವಾಗಲೂ ಯೋಚಿಸುತ್ತಾನೆ. ಆದರೆ ಆ ನೆನಪುಗಳ ಕೋಡಿಯಿಂದ ಚಿಮ್ಮುವ ದುಗುಡ ಕೆಲವೊಮ್ಮೆ ವಿಚಿತ್ರ ಸುಖ ನೀಡುತ್ತದೆಯೆಂದೂ ಅವನಿಗೆ ಆಗಾಗ ಅನಿಸಿದೆ.
ಶೇಖರಣ್ಣ ಕಳುಹಿಸಿಕೊಟ್ಟ ಪವರ್ ಆಫ್ ಅಟಾರ್ನಿ ಶಿವರಾಮನಿಗೆ ತಲುಪಿತ್ತು. ಮೊನ್ನೆ ತಾನೆ ರಿಜಿಸ್ತ್ರಿ ಮಾಡುವುದೆಂದು ನಿಶ್ಚಯಿಸಿದ್ದರು. ಆ ದಿನ ಎಲ್ಲರೂ ಇರಬೇಕೆಂದೂ ತಿಳಿಸಿದ್ದರು. ಅಕ್ಕನೂ ಬೆಳಿಗ್ಗೆ ಬಂದಿದ್ದಳು. ಸಂಕಪ್ಪ ಬಾವನೂ ಬಂದಿದ್ದರು. ಆದರೆ ಶ್ರೀಧರ ಬಂದಿರಲಿಲ್ಲ. ಅವತ್ತು ರಿಜಿಸ್ತ್ರಿ ಮಾಡಲಾಗಲಿಲ್ಲ. ಆದರೆ ಅಕ್ಕನ ಹಕ್ಕು ಖುಲಾಸೆ ಪತ್ರವನ್ನು ರಿಜಿಸ್ತ್ರಿ ಮಾಡಿಸಿಯಾಯಿತು. ಅಕ್ಕನಿಗೆ ಅಮ್ಮನ ಚಿನ್ನದಲ್ಲಿ ಒಂದು ಚಕ್ರಸರ ಮತ್ತು ಎಪ್ಪತ್ತೈದು ಸಾವಿರ ರೂಪಾಯಿಯನ್ನು ಕೊಟ್ಟಾಯಿತು. ಶ್ರೀಧರನನ್ನು ಕರೆತರಲು ಮಾರನೇ ದಿನ ಯಾರಾದರೂ ಹೋಗಲೇಬೇಕೆಂದು ತೀರ್ಮಾನವಾಯಿತು. ಆದರೆ ಸಕಲೇಶಪುರಕ್ಕೆ ಹೋದವರು ಬರುವಾಗ ಕತ್ತಲಾಗಿತ್ತು. ಸಬ್ ರಿಜಿಸ್ಟ್ರಾರನ್ನು ವಿನಂತಿಸಿಕೊಂಡು ಸಂಜೆ ಏಳು ಗಂಟೆಯ ವರೆಗೆ ನಿಲ್ಲಿಸಲಾಗಿತ್ತು. ಮಾರನೇ ದಿನ ಶ್ರೀಧರ ಬಂದ. ಆದರೆ ಪಂಚಾತಿಕೆದಾರರು ಮೂವರೂ ಬಂದಿರಲಿಲ್ಲ. ಅವರನ್ನು ಕರೆತರಲು ದೊಡ್ಡಣ್ಣನಲ್ಲಿ ಹೇಳಿದಾಗ ತನ್ನಿಂದ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ. ಪಂಚಾತಿಕೆಯವರು ಇಲ್ಲದ್ದರಿಂದ ರಿಜಿಸ್ತ್ರಿ ಆಗಲಿಲ್ಲ. ಒಬ್ಬ ಬಂದಾಗ ಇನ್ನೊಬ್ಬ ಬಾರದಿರುವುದು, ಎಲ್ಲರೂ ಇದ್ದಾಗ ಪಂಚಾತಿಕೆಯವರು ಇಲ್ಲದಿರುವುದು. ಹೀಗೆ ದಿನ ಮುಂದೆ ಹೋಗಿ ಎಲ್ಲರೂ ಚಿಂತೆಗೀಡಾಗಿದ್ದರು. ಎಲ್ಲರನ್ನೂ ಒಂದೇ ದಿನ ಸೇರುವಂತೆ ಮಾಡಲು ಶಿವರಾಮ ಅದೆಷ್ಟು ಪರದಾಡಿದರೂ ಬೇಗನೆ ಮುಗಿಸುವ ಇಚ್ಛೆ ಉಳಿದ ಯಾರಿಗೂ ಇದ್ದಂತೆ ಕಾಣಲಿಲ್ಲ.
ಕೂಜಿಮಲೆ ಬೆಟ್ಟದ ತಪ್ಪಲಲ್ಲಿರುವ ಪಿತ್ರಾರ್ಜಿತ ಇಪ್ಪತ್ತೆರಡು ಎಕ್ರೆ ಜಾಗದಲ್ಲಿ ಅಡಿಕೆ, ತೆಂಗು, ಎಲ್ಲಾ ಆಲಫಲಗಳೂ ಇವೆ. ಬೆಟ್ಟದಿಂದಲೇ ಹರಿದು ಬರುವ ನೀರು ಸಾಕಷ್ಟು ಇದೆ. ಬಿಡು ನೀರಿನ ಕೃಷಿಯಾದ್ದರಿಂದ ತೋಟಕ್ಕೆ ನೀರು ಹಾಕುವ ಕೆಲಸ ಇಲ್ಲವೇ ಇಲ್ಲ. ಆದರೆ ಮಳೆಗಾಲದಲ್ಲಿ ತೋಟದಲ್ಲಿ ನೀರು ಶೇಖರವಾಗಿ ಕೊಳೆರೋಗ ಬರುವುದೇ ಹೆಚ್ಚು... ಹಿಂಭಾಗದಲ್ಲಿ ತೋಟಕ್ಕೆ ತಾಗಿದಂತೆಯೇ ಕಡಿದಾದ ಕೂಜಿಮಲೆ ಬೆಟ್ಟ ರಕ್ಷಣೆಯ ಗೋಡೆಯಂತೆ ದೃಢವಾಗಿ ನಿಂತಿದೆ. ದಟ್ಟ ಕಾಡಿನಲ್ಲಿರುವ ಹಂದಿ, ಕಾಟಿ, ಆನೆಗಳ ಹಾವಳಿ ಯಾವಾಗಲೂ ಇದ್ದದ್ದೇ. ಆದರೆ ಈಗ ಕೂಜಿಮಲೆಯಲ್ಲಿ ಸಿಗುವ ಬೆಲೆಬಾಳುವ ಹೊಳೆಯುವ ಕೆಂಪು ಬಣ್ಣದ ‘ಕುರಂಗ’ ಎಂಬ ಕಲ್ಲನ್ನು ಬೆಟ್ಟದಿಂದ ಅಗೆದು ತೆಗೆಯಲು, ಹೋಗುವವರಿಂದಾಗಿ ಕಾಡುಪ್ರಾಣಿಗಳು ತೋಟದತ್ತ ಬರುವುದು ಹೆಚ್ಚಾಗಿದೆ. ಹಂದಿ, ಕಾಟಿಗಳು ರಾತ್ರಿ ಎಲ್ಲೆಂದರಲ್ಲಿ ನುಗ್ಗಿ ಬಂದು ದಾಳಿಯಿಡುತ್ತವೆ. ತೆಂಗಿನ ಮರದ ಬುಡವನ್ನು ಒಕ್ಕಿ ಮಗುಚಿ ಹಾಕುವುದೂ ಇದೆ. ಆನೆಗಳಂತೂ ತೋಟಕ್ಕೆ ಹೊಕ್ಕರೆ, ಎಲ್ಲವೂ ಧ್ವಂಸ! ಆಗಾಗ ಹುಚ್ಚೆದ್ದು ಹಾರಾಡುವ ಹೆಜ್ಜೇನುಗಳ ಹಾವಳಿಯೂ ಜಾಸ್ತಿಯಾಗಿದೆ. ಈ ಹೆಜ್ಜೇನುಗಳು ಹಾರಾಡುತ್ತಿರುವಾಗ ತೋಟದೊಳಗೆ ಕಾಲಿಡುವುದು ಸಾಧ್ಯವೇ ಇಲ್ಲ! ಒಂದೆರಡು ಕುಟುಕಿದರೂ ನೋವು ಒಂದು ವಾರಕ್ಕೆ ಸಾಕು!
ಈ ಕಲ್ಲು ಹುಡುಕಿ ಹೋಗುವವರು ಫಾರೆಸ್ಟ್‌ನವರ ಕಣ್ಣು ತಪ್ಪಿಸಿ ಹೋಗುವವರಾದ್ದರಿಂದ ಹೆಚ್ಚಾಗಿ ಶಿವರಾಮನವರ ತೋಟದ ಒಳಗಿಂದಲೇ ಕದ್ದು ಹೋಗುತ್ತಾರೆ. ಫಾರೆಸ್ಟ್‌ನವರು ಕಂಡರೆ ತಕ್ಷಣ ಓಡಿ ಅವಿತುಕೊಳ್ಳುವುದಕ್ಕಾಗಿ ತೋಟದೊಳಗೆ ಯಾರ್‍ಯಾರೋ ಅಪರಿಚಿತರು ನುಗ್ಗುವುದರಿಂದ ಶಿವರಾಮನ ತಲೆ ಕೆಟ್ಟುಹೋಗಿದೆ. ಮೊದಲು ಮರ್ಯಾದೆಯಿಂದ ಹೇಳಿ, ಮತ್ತೆ ಬೈದು, ಕೊನೆಗೆ ಜಗಳವಾಡಿ ಸಾಕು ಸಾಕಾಗಿ ಈಗ ಅಂಥವರನ್ನು ಓಡಿಸಲೆಂದೇ ಶಿವರಾಮ ಎರಡು ಡಾಬರ್‌ಮನ್ ನಾಯಿಗಳನ್ನು ಸಾಕಿದ್ದಾನೆ, ಅವುಗಳ ಬಾಯಿಗೆ ಯಾರಾದರೂ ಸಿಕ್ಕಿದರೆ ಕತೆ ಮುಗಿಯಿತು. ಹುಲಿಯಂತಿರುವ ಆ ನಾಯಿಗಳು ಶಿವಾರಾಮನ ಶಿಕಾರಿಗೂ ಸಹಾಯವಾಗುತ್ತವೆ. ಆದರೆ ಊರಿನ ನಾಯಿಗಳಂತೆ ಮೌನವಾಗಿ ಕಾದು ಒಳ್ಳೆ ಸಮಯ ನೋಡಿ ಒಮ್ಮಿಂದೊಮ್ಮೆಗೆ ದಾಳಿಮಾಡುವ ಜಾಣತನ ಅವಕ್ಕಿಲ್ಲ. ಅದಕ್ಕೆಂದೇ ಊರಿನ ಮೂರು ನಾಯಿಗಳಿವೆ. ಅವು ಮನುಷ್ಯರಿಗೆ ಏನೂ ಮಾಡುವುದಿಲ್ಲ. ಕಾಡುಪ್ರಾಣಿಗಳನ್ನು ಕಂಡರೆ ಉಪಾಯದಿಂದ ಸುತ್ತುವರಿದು ಎಲ್ಲೂ ಓಡಿಹೋಗದಂತೆ ಮಾಡುವ ಜಾಣ ನಾಯಿಗಳವು.
ತೋಟದಿಂದ ಮೇಲಕ್ಕೆ ಕಣ್ಣು ಹಾಯಿಸಿದರೆ ಕಾಣುವ ಕಡಿದಾದ ಕೂಜಿಮಲೆ ಬೆಟ್ಟ ಹಲವು ನಿಗೂಢಗಳ ಭಂಡಾರ. ಹಿಂದಿನವರು ಹೇಳುತ್ತಿದ್ದರು ’ಅಲ್ಲಿ ಪಾಂಡವರ ಕೊಪ್ಪರಿಗೆ ಇದೆಯಂತೆ...! ಮಳೆಗಾಲದಲ್ಲಿ ಅದು ಜಾರಿ ಬೆಟ್ಟದೊಳಗೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುತ್ತದೆಯಂತೆ...! ಹಾಗಾದಾಗ ಇಡೀ ಬೆಟ್ಟವೇ ನಡುಗುವಂತೆ ದೊಡ್ಡ ಶಬ್ದವಾಗುತ್ತದೆಯಂತೆ...! ಒಮ್ಮೊಮ್ಮೆ ಎರಡು ಮೂರು ವಿಮಾನಗಳು ಒಮ್ಮೆಗೇ ಮೇಲಕ್ಕೇರುವ ಸದ್ದಿನಂತೆ ಭಯಂಕರ ಸದ್ದಾಗುತ್ತದೆಯಂತೆ...! ಹೀಗಾದಾಗ ಬೆಟ್ಟದಲ್ಲಿ ಎಲ್ಲಾದರೂ ಮಣ್ಣು ಜರಿದು ಬೀಳುವುದೂ ಇದೆ. ಹಾಗೊಂದು ಸಾರಿ ಮಳೆಗಾಲದಲ್ಲಿ ಮಣ್ಣು ಜಾರಿ ಶಿವರಾಮನವರ ತೋಟಕ್ಕೆ ಮಳೆನೀರಿನೊಂದಿಗೆ ಕೆಂಪು ಮಣ್ಣು, ಕಲ್ಲು ಎಲ್ಲಾ ಹರಿದು ಬಂದಿತ್ತು. ಯಾರೋ ಹೇಳಿದ್ದರು- ಅದರಲ್ಲಿ ಕೊಪ್ಪರಿಗೆಯಿಂದ ಚೆಲ್ಲಿದ ಫಳ ಫಳ ಹೊಳೆಯುವ ಕೆಲವು ಕೆಂಪು ಕಲ್ಲುಗಳೂ ಇದ್ದುವಂತೆ...! ಕೊಪ್ಪರಿಗೆ ಜಾರಿದಾಗ ಶಂಖ, ಜಾಗಟೆ, ಚೆಂಡೆ, ಕೊಂಬು, ಕಹಳೆಯ ಸದ್ದೂ ಕೇಳಿಸುತ್ತದೆಯಂತೆ...! ದಿನಗಟ್ಟಲೆ ಜಡಿಮಳೆ ಸುರಿದಾಗಲೇ ಈ ತರಹ ಆಗುವುದರಿಂದ ಆ ಸದ್ದುಗಳು ಯಾರಿಗೂ ಕೇಳಿಸುವುದಿಲ್ಲವೆಂದೂ ಕೆಲವರು ಹೇಳುತ್ತಾರೆ. ಇಂತಹ ನಿಗೂಢ ಕೂಜಿಮಲೆ ಬೆಟ್ಟದ ತಪ್ಪಲಲ್ಲಿರುವ ತೋಟಕ್ಕೆ ಒಂದಲ್ಲ ಒಂದು ರೀತಿಯ ತೊಂದರೆ ಇದ್ದೇ ಇರುತ್ತಿತ್ತು.
ಇನ್ನು ಕೆಲ ದಿನಗಳಲ್ಲಿ ’ಆಟಿ’ ತಿಂಗಳು ಆರಂಭವಾಗಲಿರುವುದರಿಂದ ಆದಷ್ಟು ಬೇಗನೆ ಪಾಲುಪಟ್ಟಿ ಮುಗಿಸಬೇಕು ಎಂದು ಪಂಚಾತಿಕೆದಾರರು ಮೊದಲೇ ತಿಳಿಸಿ, ಮತ್ತೇನಾದರೂ ಹೆಚ್ಚು ಕಡಿಮೆ ಆದರೆ ನಾವು ಜವಾಬ್ದಾರರಲ್ಲ ಎಂದೂ ಹೇಳಿದ್ದಾರೆ.
ದಿನಗಳು ಹೀಗೇ ಉರುಳಿದವು. ಗುಡುಗು ಸಿಡಿಲಿನೊಂದಿಗೆ ಜಡಿಮಳೆ ಆರಂಭವಾಗಿ ಹೊರಗೆ ಓಡಾಡುವರೇ ಕಡಿಮೆ. ಅಗತ್ಯವಿದ್ದರೆ ಮಾತ್ರ ಊರ ಜನ ಹೊರಗೆಲ್ಲಾದರೂ ಹೋಗುತ್ತಾರಲ್ಲದೆ, ಹೆಚ್ಚಿನ ವೇಳೆ ಮನೆಯಲ್ಲೇ ಕೂತು ಕಾಲ ತಳ್ಳುತ್ತಾರೆ. ಇರುವ ಕೃಷಿ ಕೆಲಸಗಳನ್ನು ಮಳೆ ನಿಂತಾಗ ಎಡೆ ಎಡೆಯಲ್ಲಿ ಮುಗಿಸಿ ಸುಟ್ಟ ಗೇರುಬೀಜವನ್ನೋ, ಹಲಸಿನ ಹಪ್ಪಳವನ್ನೋ ಕುರುಕುತ್ತಾ ಕಳೆದ ಒಳ್ಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ.
ಅಡಿಕೆ ತೋಟದಲ್ಲಿ ಹೊಸ ತೋಟದ ನಾನ್ನೂರು ಗಿಡಗಳು ತನಗೇ ಸಿಗಬೇಕೆಂಬ ದೊಡ್ಡಣ್ಣನ ಹಠ ಮುಂದುವರಿದಿತ್ತು. ಅದೇ ತೋಟ ತನಗೂ ಬೇಕೆಂದು ಶ್ರೀಧರನೂ ಹಠ ಹಿಡಿದಿದ್ದ. ಇದರಿಂದ ಉಳಿದೆಲ್ಲ ಜಾಗದ ವಿಭಾಗ ಸರಿಯಾಗಿ ಆದರೂ ಹೊಸ ತೋಟದ ವಿಚಾರ ಇನ್ನೂ ನಿರ್ಧಾರವಾಗಿರಲಿಲ್ಲ. ಮೊನ್ನೆಯಷ್ಟೇ, ಹೊಸ ತೋಟದ ವಾಶಿ ತನಗೆ ಎರಡು ಲಕ್ಷ ಹೆಚ್ಚು ಕೊಟ್ಟರೆ ಒಪ್ಪುತ್ತೇನೆಂದು ಶ್ರೀಧರಣ್ಣ ಹೇಳಿದ್ದ. ಹಾಗೆ ಎಲ್ಲರೂ ಒಪ್ಪಿದಂತಾಗಿ ಶಿವರಾಮನ ಪಾಲಿಗೆ ಎರಡು ಎಕ್ರೆ ಗುಡ್ಡೆಯೂ ಐನೂರು ಕಂಗು ಇರುವ ಹಳೆತೋಟವೂ ಬಂದಿತ್ತು. ಹಳೆತೋಟದಲ್ಲಿ ಫಸಲು ಅಷ್ಟಕ್ಕಷ್ಟೆ. ಅಷ್ಟರಲ್ಲಿ ತಾನು ಉದ್ಧಾರವಾಗುವುದು ಸಾಧ್ಯವಿಲ್ಲ ಎಂದು ಶಿವರಾಮನಿಗೆ ಅರ್ಥವಾಗಿದ್ದರೂ ಏನೂ ಹೇಳಲಾಗದೆ ಸುಮ್ಮನಿದ್ದ. ತನ್ನ ಸೊಸೈಟಿ ಸಾಲದ ಹುತ್ತ ತನ್ನಿಂದೆತ್ತರ ಬೆಳೆದು ನಿಂತಿದೆ! ಪ್ರೈಮರಿ ಶಾಲೆಗೆ ಹೋಗುವ ಎರಡು ಮಕ್ಕಳನ್ನು ಮುಂದೆ ಓದಿಸುತ್ತಾ ಜೀವನ ನಿರ್ವಹಿಸುವುದು ಹೇಗೆ? ಮನೆ ಕೂಡಾ ದೊಡ್ಡಣ್ಣನ ಪಾಲಿಗಾಗಿರುವುದರಿಂದ ಬೇರೆ ಮನೆ ಕಟ್ಟಿಸುವುದು ಹೇಗೆಂದು ಚಿಂತೆಗೀಡಾಗಿದ್ದ. ಸರ್ಕಾರಿ ಉದ್ಯೋಗಿಗಳಾಗಿರುವ ಶೇಖರ, ಶ್ರೀಧರರಿಬ್ಬರಿಗೂ ಪಾಲಿನಲ್ಲಿ ಎಷ್ಟೇ ಸಿಕ್ಕಿದರೂ ಅದು ಹೆಚ್ಚೆಂದೇ ಪಂಚಾತಿಕೆದಾರರ ಲೆಕ್ಕಾಚಾರ. ಇಬ್ಬರೂ ಮಂಗಳೂರಲ್ಲಿ ಮನೆ ಕಟ್ಟಿಸಿಕೊಂಡು ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಆದರೆ ತಮಗೆ ಸಿಗಬೇಕಾದದ್ದು ಸಮಪಾಲು ಎಂದು ಇಬ್ಬರೂ ಹೇಳಿದ್ದರಿಂದ ಇಷ್ಟೆಲ್ಲ ಗೊಂದಲವಾಗಿತ್ತು. ಈಗ ಶೇಖರಣ್ಣ ಪಾಲುಪಟ್ಟಿ ರಿಜಿಸ್ತ್ರಿಯಂದು ತನಗೆ ಬರಲಾಗುವುದಿಲ್ಲವೆಂದು ಹೇಳಿ ಪಾಲುಪಟ್ಟಿಗೆ ಅವನ ಪರವಾಗಿ ಸಹಿ ಮಾಡಲು ಶಿವರಾಮನಿಗೆ ಪವರ್ ಆಫ್ ಅಟಾರ್ನಿ ಕಳುಹಿಸಿದ್ದ.
ಆದರೆ ಈಗ ಎಲ್ಲ ಮಾತುಕತೆ ಮುರಿದುಬಿದ್ದಂತೆ ಆಗಿರುವುದರಿಂದ ಸದ್ಯ ಪಾಲು ಆಗುವುದು ಸಾಧ್ಯವಿಲ್ಲವೆಂದು ಶಿವರಾಮನಿಗೆ ಅರಿವಾಗಿದೆ.
ದೊಡ್ಡಣ್ಣ ಅವನ ಸಂಸಾರಕ್ಕೆ ಬೇಕಷ್ಟನ್ನು ಈಗಾಗಲೇ ಮಾಡಿಕೊಂಡಿದ್ದಾನೆ. ಮಕ್ಕಳಿಬ್ಬರೂ ಬೆಂಗಳೂರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಪಾಲು ಆದರೂ ಆಗದಿದ್ದರೂ ದೊಡ್ಡಣ್ಣನಿಗೆ ಅಂತಹ ಬದಲಾವಣೆಯೇನೂ ಇಲ್ಲ. ಸೊಪ್ಪಿನ ಗುಡ್ಡೆ ಮತ್ತು ಹಳೆತೋಟದ ಸ್ವಲ್ಪ ಅಡಿಕೆ ಮಾತ್ರ ಅವನಿಗೆ ಕಡಿಮೆಯಾಗುವುದು. ಅವನಿಗೆ ಅದೇನೂ ದೊಡ್ಡ ವಿಷಯವಲ್ಲದ್ದರಿಂದ ಪಾಲಿನ ವಿಚಾರದಲ್ಲಿ ನಿರ್ಲಿಪನಂತೆ ವರ್ತಿಸುತ್ತಿದ್ದ. ಇರುವ ಒಟ್ಟು ಇಪ್ಪತ್ತೆರಡು ಎಕರೆ ಜಾಗದಲ್ಲಿ ನಾಲ್ಕು ಸಮಪಾಲು ಮಾಡಿದರೆ ಐದೂವರೆ ಎಕ್ರೆಯಷ್ಟು ಪ್ರತಿಯೊಬ್ಬನಿಗೂ ಸಿಗಬೇಕು. ಆದರೆ ತೋಡು, ತೋಟ, ಗುಡ್ಡೆ ಎಂಬ ವ್ಯತ್ಯಾಸಗಳನ್ನು ಸರಿದೂಗಿಸಿ ಮಾಡಿದರೆ, ಐದೂ ಮುಕ್ಕಾಲು, ಐದೂವರೆ, ಆರೂಕಾಲು, ನಾಲ್ಕೂವರೆ ಎಂದು ವಿಭಾಗಿಸಬೇಕಾಗುತ್ತದೆ. ತೋಟ ಹೆಚ್ಚು ಬಂದವನಿಗೆ ವಿಸ್ತೀರ್ಣದಲ್ಲಿ ಕಡಿಮೆಯಾಗುತ್ತದೆ. ಶೇಖರ ಮತ್ತು ಶ್ರೀಧರ, ಮಾಡುವುದಿದ್ದರೆ ಸಮಾ ಪಾಲೇ ಮಾಡಬೇಕೆಂದು ಹಠ ಹಿಡಿದುದರಿಂದ ಮಾತುಕತೆ ಇಲ್ಲಿವರೆಗೆ ಬಂದು ನಿಂತಿದೆ. ಇನ್ನು ಇದನ್ನು ಹೇಗಪ್ಪಾ ಸರಿ ಮಾಡುವುದೆಂದು ಯೋಚಿಸಿ ಶಿವರಾಮನ ತಲೆ ಚಿಟ್ಟು ಹಿಡಿದು ಹೋಗಿದೆ.
ಕತ್ತಲಾಗಿತ್ತು. ದನಕರುಗಳು ಅಲ್ಲಿರಲಿಲ್ಲ. ದನಗಳೆಲ್ಲ ಬಂದಿದಾವೋ ಇಲ್ಲವೋ ಎಂದು ನೆನಪಾಗಿ ಶಿವರಾಮ ಹಟ್ಟಿಯತ್ತ ಹೋದ.
ಮನೆಗೆ ನೆಂಟರು ಬಂದಿದ್ದರು. ಮೂವರು ಮಕ್ಕಳೊಂದಿಗೆ ಸರಸತಿಯಕ್ಕ, ಬಾವ ಮತ್ತು ಬಾವನ ಸೋದರಮಾವ ಒಟ್ಟು ಆರು ಜನ ಬಂದಿದ್ದರು. ಅತ್ತಿಗೆ ಎಲ್ಲರನ್ನೂ ಆದರದಿಂದ ಬರಮಾಡಿಕೊಂಡು ಚಾ, ಅವಲಕ್ಕಿ, ಬಾಳೆಹಣ್ಣು, ಹಪ್ಪಳ ಆತಿಥ್ಯ ನಡೆಸುತ್ತಿದ್ದರು. ಲೋಕಾಭಿರಾಮ ಮಾತಾಡುತ್ತಾ, ಚಾ, ತಿಂಡಿ, ತಿನ್ನುತ್ತಿದ್ದಂತೆಯೇ ಶಿವರಾಮನ ಮನಸ್ಸಿನಾಳದಲ್ಲಿ ಕೆಲವು ಸಂಶಯಗಳು ಟಿಸಿಲೊಡೆದವು. ವರ್ಷಕ್ಕೊಮ್ಮೆಯೂ ತಮ್ಮಲ್ಲಿಗೆ ಬಾರದ ಸರಸತಿಯಕ್ಕನ ಗಂಡ ಸಂಕಪ್ಪ ಈಗೇಕೆ ತನ್ನ ಪಟಾಲಂ ಸಮೇತ ಬಂದಿದ್ದಾರೆ! ಮೂರು ತಂಟೆಕೋರ ಮಕ್ಕಳಲ್ಲದೆ ತನ್ನ ದೈನೇಸಿ ಸೋದರಮಾವನನ್ನೂ ಕರೆತಂದಿದ್ದಾರೆ? ಏನೋ ಒಂದು ಲೆಕ್ಕಾಚಾರ ಹಾಕಿಯೇ ಬಂದಿರಬೇಕು! ಹಬ್ಬಕ್ಕಾದರೂ ಬನ್ನಿ ಎಂದರೆ ಗ್ರಾಮ ಪಂಚಾಯತ್ ಮೀಟಿಂಗ್, ಸ್ಕೂಲ್ ಕಮಿಟಿ ಸಭೆ, ತಾಲೂಕಾಫೀಸಲ್ಲಿ ಯಾವುದೋ ಉತ್ಸವದ ಮೀಟಿಂಗ್, ಯಾವುದೋ ಪಾಲು ಪಂಚಾತಿಕೆಯೆಂದು - ಒಂದಿಲ್ಲೊಂದು ಕಾರಣ ಹೇಳುತ್ತಿದ್ದ ಮಹಾನುಭಾವನಿಗೆ ಈಗ ಪುರುಸೊತ್ತಾದದ್ದು ಹೇಗೆ? ಏನೋ ಒಂದು ಇರಬೇಕು! ಸುಮ್ಮನೆ ಹಾಗೆಲ್ಲ ಬಂದು ಹೋಗುವ ಅಸಾಮಿ ಸಂಕಪ್ಪನಲ್ಲ! ಸಾಲ ಕೇಳಲು ಬಂದಿರಬಹುದೇ? ಇರಲಿಕ್ಕಿಲ್ಲ, ಅಂಥ ತಾಪತ್ರಯವೇನಿಲ್ಲ. ಮತ್ತೆ! ತನ್ನ ಸೋದರಮಾವನನ್ನೂ ಯಾಕೆ ಕರೆ ತಂದಿದ್ದಾರೆ? ಯಾವುದಾದರೂ ಪಂಚಾತಿಕೆ ಇರಬಹುದೇ? ಇದ್ದರೂ ಇದ್ದೀತು! ತನ್ನ ಪುಡಿ ರಾಜಕಾರಣದಲ್ಲಿ ಏನಾದರೊಂದು ಜಗಳ ತಾರಕಕ್ಕೆ ಮುಟ್ಟಿದಾಗ ನಮ್ಮ ನೆನಪಾಗಿರಬಹುದು. ಆದರೂ ದೈನೇಸಿ ಸೋದರಮಾವ ಯಾಕೆ ಜತೆಗೆ? ಬಹುಶಃ ಅಕ್ಕನಿಗೂ ಪಾಲು ಕೊಡಬೇಕೆಂದು ಕೇಳಲು ಬಂದಿರಬೇಕು. ಚಿನ್ನ, ಹಣ ಕೊಟ್ಟಾದರೂ ಈ ಬಾವನಿಗೆ ಸಮಾಧಾನ ಆಗಿಲ್ಲವಲ್ಲ! ಯೋಚಿಸುತ್ತಾ ಕುಳಿತ ಶಿವರಾಮನಿಗೆ ಎದುರಿಗೆ ನೆಂಟರಿದ್ದಾರೆ ಎಂಬುದೂ ಮರೆತುಹೋಗಿತ್ತು.
ಚಾ, ತಿಂಡಿಯಾಗಿ ಎಲ್ಲರೂ ಎದ್ದರು. ಮಕ್ಕಳು ಆಟಕ್ಕೆ ತೊಡಗಿದವು. ದೊಡ್ಡಣ್ಣ ಕೈ ತೊಳೆದು ಬಾಯಿ ಮುಕ್ಕಳಿಸಿ ಚಾವಡಿಯ ಈಸಿಚೇರಿನಲ್ಲಿ ಕುಳಿತು ಕಾಲು ನೀಡಿದ. ಸರಸತಿಯಕ್ಕ ಒಳಗೆ ಹೋದಳು. ಬಾವ, ದೈನೇಸಿ ಮಾವ ಉಳಿದ ಕುರ್ಚಿ, ಬೆಂಚಲ್ಲಿ ಕುಳಿತರು. ಮಳೆ ಬೆಳೆಯ ಬಗ್ಗೆ ಮಾತು ಆರಂಭವಾಗಿ ಅಡಿಕೆ ರೇಟು, ಫಸಲಿನ ದುಸ್ಥಿತಿಗೆ ಮರುಗಿ ಹಳದಿರೋಗ, ಕೊಳೆರೋಗಕ್ಕೆ ಶಪಿಸಿ ದೊಡ್ಡಣ್ಣನ ನಿಟ್ಟುಸಿರಿನೊಂದಿಗೆ ಒಂದು ಚಿಕ್ಕ ಮೌನ ಆವರಿಸಿದಾಗ ಸಂಕಪ್ಪ ದೊಡ್ಡಣ್ಣನಲ್ಲಿ ಹೇಳಿದ.
’ಬಾವಾ... ಈಗ ಒಂದು ಸಂಗತಿ.... ಈ... ಪಾಲಿನಲ್ಲಿ ಸರಸತಿಗೆ......’
ಶಿವರಾಮನಿಗೆ ತನ್ನ ಊಹೆ ಸರಿಯೆನಿಸಿತು.
ಇಂದು ಕೂಡಾ ಹೊರಗೆ ಜಿಟಿ ಜಿಟಿ ಮಳೆ. ಹೊರಗೆಲ್ಲ್ಲೂ ಹೋಗಲು ಸಾಧ್ಯವಿಲ್ಲ. ಹೋಗಿ ಮಾಡುವಂಥದ್ದೇನೂ ಇಲ್ಲ. ಆದರೂ ಹೊರಗೆ ಹೋಗಬೇಕಲ್ಲ! ಎಂದು ಅನಿಸುತ್ತದೆ. ಹೊರಗೆ ಹೋಗಿ ಮಾಡಿದ್ದೇನೆಂದು ಕೇಳಿದರೆ, ಸೊನ್ನೆ! ಆದರೆ ಹೀಗೊಂದು ನಿರುದ್ದಿಶ್ಶ್ಯ ಅಲೆದಾಟದ ಆಸೆ ಹೊಮ್ಮಿ, ಹೊರಗೆ ಅಡ್ಡಾಡಿ ಬರಬೇಕೆಂದು ಅನ್ನಿಸಿದರೂ ಎಡೆಬಿಡದೆ ಸುರಿಯುತ್ತಿರುವ ಜಡಿಮಳೆಯಿಂದ ಹೊರಗೆ ಕಾಲಿಡಲಾಗದು. ದಿನ ಆರು ಕಳೆದರೂ ಮಳೆಯ ಭೋರ್ಗರೆತ ನಿಂತಿಲ್ಲ. ಎಲ್ಲೆಲ್ಲೂ ನೀರು. ಬೇಸಿಗೆಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದವರ ಗದ್ದೆ ತೋಟಗಳೆಲ್ಲ ನೀರಿನಲ್ಲಿ ಮುಳುಗಿವೆ. ಯಾರಿಗೂ ಈ ಬಗೆಯ ಮಳೆ ಬೇಡಪ್ಪಾ ಬೇಡ ಅನ್ನುವಂತಾಗಿದೆ. ಮನೆಯೊಳಗೆ ಕೂತ ಶಿವರಾಮನ ಮನಸ್ಸು ಹೆಪ್ಪುಗಟ್ಟಿದೆ!
ಕೂಜಿಮಲೆ ಕಾಡು ಜರಿದು ಬೀಳುತ್ತಿದೆಯಂತೆ....!!
ಎರಡೆಕರೆಗಿಂತಲೂ ಹೆಚ್ಚು ಭಾಗ ಕುಸಿದು ಮಳೆನೀರಿನಲ್ಲಿ ಝರಿ, ತೋಡು, ಹೊಳೆಗಳನ್ನು ಸೇರಿದ ಕಲ್ಲು ಮಣ್ಣಿನಿಂದಾಗಿ, ಹೊಳೆಯ ನೀರೆಲ್ಲ ಕೆಂಪಾಗಿದೆ..!
ಕೂಜಿಮಲೆಯಲ್ಲಿ ಸಿಗುವ ಬೆಲೆ ಬಾಳುವ ’ಕುರಂಗ’ ಕಲ್ಲಿಗಾಗಿ ಖದೀಮರು ಅಗೆದು ಮಾಡಿದ ನೂರಾರು ಸುರಂಗಗಳಿಂದಾಗಿ ಬೆಟ್ಟ ಒಳಗೆ ಟೊಳ್ಳಾಗಿದೆ...! ಈ ಬಾರಿಯ ಎಡೆಬಿಡದ ಜಡಿಮಳೆಗೆ ಮಲೆಗೆ ಮಲೆಯೇ ಬೆದರುವಂತೆ ಬೆಟ್ಟ ಝರ್ರಾಂತ ಕುಸಿದಿದೆ...! ನೂರಾರು ಮರಗಳು ಬುಡಮೇಲಾಗಿ ಮಣ್ಣಿನಡಿ ಸಮಾಧಿಯಾಗಿವೆ. ಜರಿದು ಬಿದ್ದ ಮಣ್ಣೊಳಗೆ ಸೇರಿಕೊಂಡಿರುವ ಹೊಳೆಯುವ ಕಲ್ಲುಗಳು ಕೊಚ್ಚಿಕೊಂಡು ಬಂದು ಝರಿ, ತೋಡುಗಳಲ್ಲಿ ಹರಿದು ಹೊಳೆ ಬದಿಗಳಲ್ಲಿ ಮಿನುಗುತ್ತಿವೆ. ಸುತ್ತಮುತ್ತಲಿನ ಯುವಕರು, ಮಧ್ಯವಯಸ್ಕರು ಕಲ್ಲುಗಳನ್ನು ಆಯ್ದು ಸಂಗ್ರಹಿಸಲು ನದಿ ಬದಿಯಲ್ಲಿ ಕಣ್ಣರಳಿಸಿ ತಡಕಾಡುತ್ತಾ ಅಲೆಯುತ್ತಾರೆ. ಒಳ್ಳೆಯ ಕೆಂಪು ಬಣ್ಣದ, ಬೋಲ್ಟ್ ತಲೆಯ ಷಡ್ಭುಜಾಕಾರದ ಕಲ್ಲುಗಳಿಗೆ ಕೆಜಿಗೆ ೩೦೦೦ದಿಂದ ೫೦೦೦ ರೂಪಾಯಿ ವರೆಗೆ ಸಿಗುತ್ತದಂತೆ! ಒಂದು ಕೆಜಿ ತೂಗಲು ಎಷ್ಟು ಕಲ್ಲು ಬೇಕು? ನಾಲ್ಕೈದು ಸಾಕಾಗಬಹುದು.
ಛೆ! ಹೀಗೆ ಒಳಗೇ ಕುಳಿತಿರುವ ಬದಲು ಕೂಜಿಮಲೆ ಕಲ್ಲನ್ನಾದರೂ ಹುಡುಕಿ ತರಲು ಹೋಗಬಹುದಿತ್ತಲ್ಲಾ..! ಮಕ್ಕಳ ಬಟ್ಟೆ ಖರ್ಚಿಗಾದರೂ ಆಗುತಿತ್ತು. ಕಲ್ಲು ತೆಗೆಯುವ ಕೆಲಸ ಕಷ್ಟದ್ದಾದರೂ ಅದಕ್ಕೆ ಕೆಲವು ತಂತ್ರಗಳನ್ನು ಕಂಡುಕೊಂಡವರು ಕೆಲವರಿದ್ದಾರೆ. ಸುರಂಗ ಕೊರೆಯುವುದೆಂದರೆ ಅಷ್ಟು ಸುಲಭವಲ್ಲ! ಅದಕ್ಕೆ ತುಂಬಾ ಸಮಯ ಹಿಡಿಯುವುದರಿಂದ ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಲು ಸಾಧ್ಯವೇ ಇಲ್ಲ. ರೇಂಜರ್, ಫಾರೆಸ್ಟರೊಂದಿಗೆ ಪಾಲು ಹಂಚಿಕೊಂಡೇ ಕೆಲಸ ಆರಂಭಿಸಬೇಕು. ‘ಕುರಂಗ’ ಕಲ್ಲಿನ ನಿಕ್ಷೇಪ ಇರಬಹುದಾದ ಜಾಗದ ಸುತ್ತಮುತ್ತ ಕೆಲವು ಜಾತಿಯ ಸಸ್ಯಗಳು ಹೆಚ್ಚು ಬೆಳೆದಿರುತ್ತವೆಯಂತೆ. ಮೇಲ್ಪದರದ ಮಣ್ಣಿನ ಲಕ್ಷಣವೂ ವಿಶಿಷ್ಟವಾಗಿರುತ್ತದೆಯಂತೆ. ಭೂಗರ್ಭದ ಈ ರಹಸ್ಯ ತಿಳಿದಿರುವ ಕಾಡಲ್ಲೇ ಜೀವಿಸುವ ಮಲೆಕುಡಿಯ ಜನಾಂಗದ ಕೆಲವರಿಗೆ ನೂರಿನ್ನೂರು ರೂಪಾಯಿಯೊಂದಿಗೆ ಕೊಂಚ ಶರಾಬು ಕುಡಿಸಿದರೆ, ಕುರಂಗದ ನಿಕ್ಷೇಪಗಳನ್ನು ಗುರುತಿಸಿ ತೋರಿಸುತ್ತಾರೆ. ಎಷ್ಟು ಅಡಿ ಆಳ ಗುಂಡಿ ತೋಡಬೇಕು, ಎಷ್ಟು ಆಳದಲ್ಲಿ ಯಾವ ದಿಕ್ಕಿಗೆ ಸುರಂಗ ಎಷ್ಟು ಅಡಿ ಉದ್ದಕ್ಕೆ ಕೊರೆಯಬೇಕು ಎಂಬುದೆಲ್ಲವನ್ನೂ ನಿಖರವಾಗಿ ತಿಳಿಸುತ್ತಾರೆ!
ಮೊದಲು ಅಲ್ಲೊಂದಿಬ್ಬರು ಮೂವರು ನಿರಾಳವಾಗಿ ಕೆಲಸ ಮಾಡಬಹುದಾದಷ್ಟು ಅಗಲದ ಎಂಟ್ಹತ್ತು ಅಡಿ ಆಳದ ಬಾವಿಯಂಥ ಗುಂಡಿ ತೋಡುತ್ತಾರೆ. ನಂತರ ಒಬ್ಬ ಸಾಧಾರಣ ಆಳು ಅಂಬೆಗಾಲಿನಲ್ಲಿ ಹೋಗಬಹುದಾದಷ್ಟು ಅಗಲದಲ್ಲಿ ಮಲೆಕುಡಿಯರು ತಿಳಿಸಿರುವ ದಿಕ್ಕಿನತ್ತ ಅಡ್ಡಕ್ಕೆ ಸುರಂಗ ಕೊರೆಯುತ್ತಾರೆ. ಹತ್ತಿಪ್ಪತ್ತು ಅಡಿ ಹೋದಂತೆ ನೀರು ಒಸರುವ ಮೆದು ಜೇಡಿಮಣ್ಣು ಸಿಕ್ಕಾಗ ಮೇಲಿನಿಂದ ಮಣ್ಣು ಕುಸಿಯದಂತೆ ಮೊದಲೇ ಸಿದ್ಧಗೊಳಿಸಿಕೊಂಡ ಬಿದಿರು, ಬೆತ್ತಗಳ ಸಲಾಕೆಗಳನ್ನು ಕಮಾನಿನ ಆಕಾರದಲ್ಲಿ ಒತ್ತೊತ್ತಾಗಿ ಅಳವಡಿಸಿ ಮತ್ತೆ ಕೊರೆಯುತ್ತಾ ಹೋಗುತ್ತಾರೆ. ಚಿಕ್ಕ ಬುಟ್ಟಿಗಳನ್ನು ಬಳ್ಳಿ ಕಟ್ಟಿ, ಕೊರೆದು ತೆಗೆದ ಮಣ್ಣನ್ನು ಹೊರ ಸಾಗಿಸುತ್ತಾರೆ. ಹೊಳೆಯುವ ಕುರಂಗ ಕಲ್ಲು ಸಿಗುವ ವರೆಗೆ ನಿರಂತರ ಕೊರೆಯುತ್ತಲೇ ಹೋಗುತ್ತಾರೆ. ಕಲ್ಲು ಸಿಕ್ಕಾಕ್ಷಣ ಹೊರಗಿದ್ದವರಿಗೆ ಸೂಚನೆ ಸಿಕ್ಕು ಇನ್ನೊಬ್ಬ ಒಳಕ್ಕೆ ತೆವಳುತ್ತಾ ಸಾಗುತ್ತಾನೆ.
ಈ ಕಳ್ಳತನ ಬೆಟ್ಟದ ಹಲವು ಭಾಗಗಳಲ್ಲಿ ಹತ್ತು ಹದಿನೈದು ವರ್ಷಗಳಿಂದ ನಿರಂತರ ನಡೆಯುತ್ತಲೇ ಇದೆ.
ಆಕಸ್ಮಾತ್ ಮಣ್ಣು ಕುಸಿದು ಒಳಹೊಕ್ಕವ ಸತ್ತರೆ ಯಾರಿಗೂ ತಿಳಿಯದಂತೆ ಸುರಂಗದ ಬಾಯಿಗೇ ಮಣ್ಣು ಮುಚ್ಚಿ ಇನ್ನೊಂದು ಬದಿಯಿಂದ ಕೊರೆಯಲು ಆರಂಭಿಸುತ್ತಾರೆ. ಕೆಲವೊಮ್ಮೆ ಸುರಂಗ ಕೊರೆಯುವಾಗ ತಲೆಬುರುಡೆ, ಎಲುಬುಗಳು ಸಿಗುವುದಿದೆ. ಹಾಗೆ ಸಿಕ್ಕಾಗ ಕೆಲ ಧೈರ್ಯಶಾಲಿಗಳು ತಲೆಬುರುಡೆಯ ಮೇಲೆ ಒಂದಿಷ್ಟು ಶರಾಬು ಚಿಮುಕಿಸಿ ಉಳಿದುದನ್ನು ಕುಡಿದು ಮುಂದುವರಿಯುತ್ತಾರೆ. ಹೆಚ್ಚಿನವರು ಧೈರ್ಯಕ್ಕೆಂದು ಶರಾಬು ಕುಡಿದೇ ಕೆಲಸ ಆರಂಭಿಸುತ್ತಾರೆ. ೪೦ - ೫೦ ಅಡಿಗಳಷ್ಟು ಒಳಕ್ಕೆ ಹೋದಾಗ ಕೆಲವು ಸಾರಿ ಆಮ್ಲಜನಕ ಸಾಕಾಗದೆ, ಉಸಿರು ಕಟ್ಟಿ ಸತ್ತವರನ್ನು ಕೇಳುವವರೇ ಇಲ್ಲ! ಅವರೆಲ್ಲೋ ಕಾಡುಪ್ರಾಣಿಗೆ ಬಲಿಯಾಗಿ ಕಾಣೆಯಾಗಿದ್ದಾರೆ ಎಂಬ ಸುದ್ದಿ ಕೆಲದಿನಗಳಲ್ಲಿ ಹರಡಿ ಕ್ರಮೇಣ ತಣ್ಣಗಾಗುತ್ತದೆ. ಉಸಿರಾಟಕ್ಕೆಂದೇ ಪ್ಲಾಸ್ಟಿಕ್ ಪೈಪೊಂದನ್ನು ಕುತ್ತಿಗೆಗೆ ಕಟ್ಟಿಕೊಂಡು ಹೋದವರೂ ಕೆಲವು ಸಾರಿ ವಿಷಾನಿಲದಿಂದ ಉಸಿರು ಕಟ್ಟಿ ಸತ್ತಿರುತ್ತಾರೆ!
ಊರಲ್ಲಿ ದಿನ ಬೆಳಗಾಗುವಷ್ಟರಲ್ಲಿ ಕೆಲವರು ಶ್ರೀಮಂತರಾಗಿಬಿಡುವುದು, ಕೆಲವರು ಕಾಣೆಯಾಗುವುದು ಆಗಾಗ ನಡೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಒಂದಿಲ್ಲೊಂದು ಹೊಡೆದಾಟ ನಡೆಯುತ್ತಿರುತ್ತದೆ. ಈ ಪೈಪೋಟಿಯಲ್ಲಿ ಜಿದ್ದಿಗೆ ಬಿದ್ದು ಊರೊಳಗೇ ಹಲವು ರೌಡಿಗಳು ಹುಟ್ಟಿಕೊಂಡಿದ್ದಾರೆ. ಕುರಂಗ ಕಲ್ಲುಗಳನ್ನು ಮಂಗಳೂರು ಬೆಂಗಳೂರು ಮೂಲಕ ಜೈಪುರಕ್ಕೆ ಸಾಗಿಸುವ ದೊಡ್ಡ ಜಾಲವೊಂದರ ಬೆಂಬಲವೂ ಈ ರೌಡಿಗಳಿಗೆ ಇರುವುದರಿಂದ ಕೂಜಿಮಲೆಗೆ ಸೊಪ್ಪು ಸೌದೆಗೆಂದು ಹೋಗುವವರಿಗೆ ನಿತ್ಯ ಕಿರುಕುಳ ಆರಂಭವಾಗಿದೆ. ಹೆಂಗಸರಂತೂ ಕಾಡಿಗೆ ಹೋಗುವುದನ್ನು ಎಂದೋ ನಿಲ್ಲಿಸಿದ್ದಾರೆ. ಮೀಸೆ ಚಿಗುರದ ಹುಡುಗರೂ ಹೊಸ ಹೊಸ ಬೈಕು, ಕಾರುಗಳಲ್ಲಿ ಆ ಹಳ್ಳಿ ಮೂಲೆಯಲ್ಲೂ ಓಡಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಹೊಸ ಮೊಬೈಲ್ ಟವರೊಂದು ಬೆಟ್ಟದ ಬದಿಯಲ್ಲೇ ಸ್ಥಾಪನೆಯಾಗಿರುವುದರಿಂದ ಕಲ್ಲುಕಳ್ಳರ ವ್ಯವಹಾರ, ಮಾತುಕತೆಗಳೆಲ್ಲ ಮೊಬೈಲಲ್ಲೇ ರಹಸ್ಯವಾಗಿ ನಡೆಯುತ್ತವೆ.
ಯೋಚಿಸುತ್ತಾ ಹೋದಂತೆ ಶಿವರಾಮ ದುಗುಡಕ್ಕೊಳಗಾಗಿ ಸಂಜೆಗತ್ತಲಿನಂತೆ ಅಂತರ್ಮುಖಿಯಾಗಿಬಿಡುತ್ತಾನೆ. ಹೀಗೆ ಕಲ್ಲಿಗಾಗಿ ಕೂಜಿಮಲೆಯನ್ನೆಲ್ಲಾ ಕೊರೆದು ಮಣ್ಣು ಕುಸಿದು ಮರಗಳೆಲ್ಲ ಬಿದ್ದು ಕಾಡು ಬರಿದಾದರೆ ಏನು ಗತಿ! ತೋಟಕ್ಕೆ ಬರುವ ಬಿಡುನೀರು ನಿಲ್ಲುವುದು ಖಂಡಿತ! ಕಳೆದ ಬಾರಿ ಫೆಬ್ರವರಿ ತಿಂಗಳಲ್ಲೇ ನೀರು ಕಡಿಮೆಯಾಗಲು ಆರಂಭವಾಗಿದೆ.
ಒಟ್ಟಾರೆ ಯಾವುದೂ ಬರ್ಖತ್ ಆಗುತ್ತಿಲ್ಲ. ತಲೆ ಚಿಟ್ಟು ಹಿಡಿಯುತ್ತಿದೆ. ಹೀಗೇ ಕುಳಿತರೆ ತಲೆಕೆಟ್ಟು ಹುಚ್ಚು ಹಿಡಿಯದಿದ್ದರೆ ಸಾಕು. ನನ್ನ ಕಷ್ಟಗಳು ಯಾರಿಗೂ ಅರ್ಥವಾಗುವುದಿಲ್ಲ! ಮುಟ್ಟಿದ್ದೆಲ್ಲ ಮಣ್ಣಾಗುತ್ತಿರುವಾಗ ಹೊಸತೇನನ್ನಾದರೂ ಮಾಡಲು ಧೈರ್ಯ ಎಲ್ಲಿರುತ್ತದೆ? ಮಾಡಲು ಎಷ್ಟೋ ಕೆಲಸಗಳಿದ್ದರೂ ಯಾವುದನ್ನು ಮೊದಲು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ನೆಮ್ಮದಿಯಿಲ್ಲದ ಮನಸ್ಸಿನಲ್ಲಿ ಯಾವುದೂ ಸ್ಥಿರವಾಗಿ ನಿಲ್ಲುವುದಿಲ್ಲ. ಎಲ್ಲವೂ ಕ್ಷಣಿಕ... ಮರುಕ್ಷಣ ಮತ್ತೊಂದೇ ಯೋಚನೆ. ಯಾವುದರಲ್ಲೂ ನಂಬಿಕೆ ಉಳಿದಿಲ್ಲ. ಎಲ್ಲವೂ ಸೋಲಿನ ಪ್ರಪಾತಗಳಂತೆ ಕಾಣುತ್ತಿವೆ. ಹೀಗೇ ಆದರೆ ಎಲ್ಲ ಮುಗಿದಂತೆ.
ಶಿವರಾಮ ಸುರಿವ ಮಳೆ ಚಳಿಗೆ ರಗ್ಗುಹೊದ್ದು ಕೂತಿದ್ದ.
ಆಗ ಆಕಾಶವೇ ಕೆಳಗೆ ಬಿದ್ದಂತಹ ಘೋರ ಸದ್ದು ಕೇಳಿಸಿತು..!!
ಬೊರೋ.... ಎಂದು ಹತ್ತಾರು ವಿಮಾನಗಳು ಆಕಾಶಕ್ಕೇರಿದಂತೆ ಭಯಂಕರ ಸದ್ದು ಕೇಳಿಸುತ್ತಲೇ ಇದೆ!
ಶಿವರಾಮ ರಗ್ಗು ತೆಗೆದೊಗೆದು ಮಳೆಯಲ್ಲೇ ಅಂಗಳಕ್ಕೋಡಿ ನಿಂತ. ಹಿಂದೆ ತಿರುಗಿ ನೋಡಿದರೆ ಮಹಾ ಗೋಡೆಯಂತೆ ದೃಢವಾಗಿ ನಿಂತಿದ್ದ ಕೂಜಿಮಲೆಯ ಒಂದು ಭಾಗ ಜರಿದು ಬೀಳುತ್ತಿದೆ..!! ಮರಗಿಡಗಳು ಅಡ್ಡಾದಿಡ್ಡಿ ಉರುಳಿ ಬೀಳುತ್ತಿವೆ..! ಆಕಾಶದಲ್ಲಿ ಕಾಗೆಗಳು ಕಾಕಾ ಎನ್ನುತ್ತ ಅಡ್ಡಾದಿಡ್ಡಿ ಹಾರಾಡುತ್ತಿವೆ! ಯಾವ್ಯಾವುದೋ ಕಾಡುಪಕ್ಷಿಗಳು ಭಯದಿಂದ ದಿಕ್ಕೆಟ್ಟವುಗಳಂತೆ ಹಾರಾಡುತ್ತಿವೆ.! ಹೆಜ್ಜೇನುಗಳ ಹಿಂಡುಗಳು ಝೇಂಕರಿಸುತ್ತಾ ಚಿತ್ರವಿಚಿತ್ರವಾಗಿ ಸುತ್ತುತ್ತಿವೆ...! ಶಿವರಾಮ ಬೊಬ್ಬಿಟ್ಟ...!
’ಕೂಜಿಮಲೆ’ ಬೀಳ್ತಾ ಉಂಟು...! ಎಲ್ಲಾ ಹೊರಗೆ ಬನ್ನಿ.... ಓಡಿ..! ಓಡಿ...!’
ಜಡಿಮಳೆಯೊಂದಿಗೆ ಬೆಟ್ಟ ಕುಸಿಯುತ್ತಿರುವ ಆ ಭಯಂಕರ ಸದ್ದಿನಲ್ಲಿ ಮನೆಯೊಳಗಿದ್ದವರಿಗೆ ಅವನ ಕಿರುಚಾಟ ಹೇಗೆ ತಾನೆ ಕೇಳಿಸೀತು? ಯಾರೂ ಹೊರಗೆ ಬರಲೇ ಇಲ್ಲ...!!
ಶಿವರಾಮ ಮತ್ತೊಮ್ಮೆ ಬೊಬ್ಬಿಟ್ಟ....! ಕಿರುಚಿದ...!
ಮನೆಯೊಳಗೆ ಹೋಗಿ ಎಲ್ಲರನ್ನೂ ಹೊರಗೆ ಕರೆತರಬೇಕೆಂದು ಯೋಚಿಸುವಾಗಲೇ ಬೆಟ್ಟದ ದೊಡ್ಡ ಭಾಗವೊಂದು ಕಳಚಿ ಬೀಳತೊಡಗಿತು..! ದಿಗ್ಭ್ರಮೆಯಿಂದ ನೋಡುತ್ತಾ ನಿಂತ ಶಿವರಾಮನಿಗೆ ಆ ಮಣ್ಣಿನ ದೊಡ್ಡ ಭಾಗ ತೋಟದ ಮೇಲೆಯೇ ಬೀಳುತ್ತಿರುವಂತೆ ಕಂಡಿತು! ಇಲ್ಲ ಅದು ಮತ್ತೂ ಈ ಕಡೆ ಮನೆಯವರೆಗೂ ವ್ಯಾಪಿಸುತ್ತಿದೆ. ಶಿವರಾಮನಿಗೆ ಏನು ಮಾಡಬೇಕೆಂದೇ ತೋಚಲಿಲ್ಲ.! ಭಯದಿಂದ ಬೊಬ್ಬಿಡುತ್ತಾ ಅಂಗಳದಿಂದ ದೂರಕ್ಕೆ ಓಡತೊಡಗಿದ. ಇನ್ನೂ ಕೆಲವರು ಓಡುತ್ತಲಿದ್ದರು... ಶಿವರಾಮ ತಿರುಗಿ ತಿರುಗಿ ನೋಡುತ್ತಾ ದೂರ ಓಡಿದ. ನೋಡು ನೋಡುತ್ತಿದ್ದಂತೆಯೇ ಆ ಅಗಾಧ ಮಣ್ಣಿನ ರಾಶಿ ತೋಟವಿಡೀ ವ್ಯಾಪಿಸಿ ಶಿವರಾಮನ ಮನೆಯನ್ನೂ ಆವರಿಸಿ ಬಿದ್ದು ಬಿಟ್ಟಿತು..!! ಭಯಭೀತ ಶಿವರಾಮನ ತೆರೆದ ಬಾಯಿ ತೆರೆದಂತೇ ಇತ್ತು!
ತನ್ನ ಹೆಂಡತಿ, ಇಬ್ಬರು ಮಕ್ಕಳು ದೊಡ್ಡಣ್ಣ ಅತ್ತಿಗೆ, ಅಕ್ಕ, ಬಾವ, ಅವರ ಮಕ್ಕಳು, ಮಾವ, ದನ, ಕರು, ನಾಯಿ, ಮನೆ, ಹಟ್ಟಿ, ಕೊಟ್ಟಿಗೆ ಎಲ್ಲವೂ ಮಣ್ಣಿನ ಅಡಿಯಲ್ಲಿ ಸಮಾಧಿಯಾಗಿದ್ದವು...!!
ಶಿವರಾಮ ಒಬ್ಬನನ್ನು ಬಿಟ್ಟು ಅಲ್ಲಿ ಏನೂ ಉಳಿದಿರಲಿಲ್ಲ..!!
ಭಯಾಶ್ವರ್ಯಗಳಿಂದ ಮೂಕನಾಗಿದ್ದ ಶಿವರಾಮನಿಗೆ ದಿಕ್ಕೆಟ್ಟಂತಾಗಿ ಅಳು ಕೂಡಾ ಬರಲಿಲ್ಲ. ಯಾರೋ ಮಕ್ಕಳು, ಹೆಂಗಸರು ಕಿರುಚುತ್ತಾ, ಬೊಬ್ಬಿಡುತ್ತಾ ಎತ್ತೆತ್ತಲೋ ಓಡುತ್ತಿದ್ದರು! ಮಣ್ಣಿನಡಿ ಸಿಕ್ಕಿ ಬೀಳದೆ ಬದುಕುಳಿದ ಕಾಡುಹಂದಿ, ಕಡವೆ, ಕಾಟಿ ಮುಂತಾದ ಕಾಡುಪ್ರಾಣಿಗಳು ಗಾಬರಿಯಿಂದ ತೋಟ, ಗದ್ದೆ, ರಸ್ತೆ, ಮನೆ ಯಾವುದನ್ನೂ ಲೆಕ್ಕಿಸದೆ ಸಿಕ್ಕಸಿಕ್ಕಲ್ಲಿ ನುಗ್ಗತೊಡಗಿದವು. ಬದುಕುಳಿಯಲು ಎತ್ತಲೋ ಓಡುತ್ತಿದ್ದ ಕೆಲವರಿಗೆ ಒಮ್ಮೆಗೆ ಎದುರಾಗುವ ಕಾಟಿ, ಕಡವೆ, ಹಂದಿಗಳು ಢಿಕ್ಕಿಹೊಡೆದು ಬೀಳಿಸಿ ಗಲಿಬಿಲಿಗೊಂಡು ತುಳಿಯುತ್ತಾ ಎತ್ತೆತ್ತಲೋ ಓಡುತ್ತಿದ್ದವು. ಹುಚ್ಚೆದ್ದ್ಟ ಹೆಜ್ಜೇನುಗಳು ಕಾಡುಪ್ರಾಣಿಗಳನ್ನು, ಸಿಕ್ಕಸಿಕ್ಕವರನ್ನು ಕಚ್ಚತೊಡಗಿದವು. ಇದರಿಂದ ಮತ್ತಷ್ಟು ಬೆದರಿದ ಪ್ರಾಣಿಗಳೊಂದಿಗೆ ಜನರೂ ದಿಕ್ಕು ದೆಸೆ ತಿಳಿಯದೆ ಕಿರುಚುತ್ತಾ ಓಡುತ್ತಿದ್ದರು.
ಜಡಿಮಳೆಯೊಂದಿಗಿನ ಆ ಭೀಕರ ಸದ್ದಿನ ನಡುವೆ ಭಯಭೀತ ಜನರ ಬೊಬ್ಬೆ, ಕಿರುಚಾಟದಲ್ಲಿ ಯಾರು ಯಾರಿಗೆ ಏನು ಹೇಳಿದರೋ? ಒಂದೂ ಕೇಳಿಸುತ್ತಿರಲಿಲ್ಲ..! ಕುಸಿದ ಮಣ್ಣು ಇನ್ನೂ ಚಲಿಸುತ್ತಿದ್ದುದರಿಂದ ಸದ್ದು ಇನ್ನೂ ಮುಂದುವರಿದಿತ್ತು..!! ಅಲ್ಲಿ ಬೇರೆ ಕೆಲವರ ಮನೆಗಳೂ ಮಣ್ಣಿನಡಿ ಸಮಾಧಿಯಾಗಿದ್ದವು. ಅಲ್ಲಿ ಸತ್ತವರೆಷ್ಟೋ..!!
ಮಳೆಯಲ್ಲೇ ಶಿವರಾಮ ತಲೆ ಚಚ್ಚಿಕೊಳ್ಳುತ್ತಾ ಕಿರುಚಾಡುತ್ತಿದ್ದ. ಯಾರ್‍ಯಾರೋ ಬಂದು ಶಿವರಾಮನನ್ನು ಸಂತೈಸಲು ಪ್ರಯತ್ನಿಸುತ್ತಿದ್ದರು. ಶಿವರಾಮ ಎಲ್ಲರನ್ನು ಕೊಡವಿ ಹುಚ್ಚನಂತೆ ನೆಲಕ್ಕೆ ಒದೆಯುತ್ತಾ ಮೈ ಕೈ ಪರಚಿಕೊಳ್ಳುತ್ತಾ ಅಳತೊಡಗಿದ. ಕೆಸರಲ್ಲಿ ಬಿದ್ದು ಉರುಳಾಡಿದ....!
ಮಳೆ ಎಡೆಬಿಡದೆ ಸುರಿಯುತ್ತಲೇ ಇತ್ತು.
ಅಗಾಧ ಮಣ್ಣಿನ ರಾಶಿ ಕೆಂಪಗೆ ಕಾಣುತ್ತಿತ್ತು. ಹಳೆತೋಟ, ಹೊಸತೋಟ, ಹಟ್ಟಿ, ಕೊಟ್ಟಿಗೆ, ಮನೆ ಯಾವುದೂ ಅಲ್ಲಿಲ್ಲ...!! ಎಲ್ಲವೂ ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿ ಏನೂ ಉಳಿದಿರಲಿಲ್ಲ. ಶಿವರಾಮನಿಗೆ ಯಾರು ಸಮಾಧಾನ ಹೇಳುವವರು.? ಏನೆಂದು ಹೇಳಿಯಾರು? ನಿಂತ ನೆಲವೇ ಕುಸಿದಂತಾಗಿರುವ ಸ್ಥಿತಿಯಲ್ಲಿ ಯಾರು ಏನು ಮಾಡಲು ಸಾಧ್ಯ..!!
ಸಂಜೆಯಾಗಿ ಕತ್ತಲಾದರೂ ಶಿವರಾಮ ಅಲ್ಲೇ ಇದ್ದ. ಯಾರು ಕರೆದರೂ ಕೇಳಿಸಿಕೊಳ್ಳುತ್ತಿರಲಿಲ್ಲ... ಇನ್ಯಾರೋ ತಮ್ಮ ಮನೆಗೆ ಕರೆದೊಯ್ಯಲು ಪ್ರಯತ್ನಿಸಿದರೂ ಶಿವರಾಮ ಅಲ್ಲಿಂದ ಕದಲಲಿಲ್ಲ. ಭಯ, ಆಘಾತ, ದು:ಖದಿಂದ ಜರ್ಜರಿತನಾಗಿದ್ದ ಶಿವರಾಮ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟ! ಹತ್ತಿರದ ಕೆಲವರು ಸೇರಿ ಅವನನ್ನು ಹೊತ್ತು ಯಾರದೋ ಮನೆಗೆ ಕರೆತಂದರು. ಎಲ್ಲಿಂದಲೋ ಒಬ್ಬ ಡಾಕ್ಟರನ್ನು ಕರೆತಂದರು. ಎಚ್ಚರಗೊಂಡ ಶಿವರಾಮ ಒಮ್ಮೆ ಜೋರಾಗಿ ಕಿರುಚಿ ಮತ್ತೆ ಪ್ರಜ್ಞೆ ತಪ್ಪಿದ.
ಉಳಿದವರ ಗೋಳಿನ ಕಣ್ಣೀರು ಮಳೆಯೊಂದಿಗೆ ಬೆರೆತು ಕೆಸರಲ್ಲಿ ಕೆಸರಾಗಿ ಹೋಗುತ್ತಿತ್ತು.
ಮರುದಿನ ಅಣ್ಣ ಶೇಖರ, ಶ್ರೀಧರ, ಬಂದರು. ತಬ್ಬಲಿಗಳಾದ ದೊಡ್ಡಣ್ಣನ ಇಬ್ಬರು ಮಕ್ಕಳು ಬಂದು ಗೋಳಾಡಿದರು. ಯಾರ ಗೋಳು ಯಾರು ಕೇಳುವುದು! ಯಾರು ಯಾರನ್ನು ಸಂತೈಸುವುದು?
ಚಿಕಿತ್ಸೆ, ಆರೈಕೆಯಿಂದ ಪ್ರಜ್ಞೆ ಮರುಕಳಿಸಿದರೂ ಶಿವರಾಮ ಮೊದಲಿನ ಸ್ಥಿತಿಗೆ ಬರಲಿಲ್ಲ.
ಸರ್ಕಾರಿ ಅಧಿಕಾರಿಗಳು, ಅರಣ್ಯ ಇಲಾಖೆ ಸಿಬ್ಬಂದಿಗಳು, ಪೋಲಿಸರು ಮಣ್ಣಿನಡಿ ಹುದುಗಿಹೋಗಿರುವ ಶವಗಳನ್ನು ಹುಡುಕಲು ಜೆಸಿಬಿ ಯಂತ್ರ ಬಳಸಿ ಪ್ರಯತ್ನಿಸುತ್ತಿದ್ದರು. ಎರಡು ದಿನ ಕಳೆದರೂ ಮಳೆ ಕಡಿಮೆಯಾಗಲಿಲ್ಲ. ಬದುಕಿ ಉಳಿದವರು ಆಘಾತದಿಂದ ಹೊರಬರಲಾಗದೆ ಕಂಗೆಟ್ಟಿದ್ದರು.
ಶಿವರಾಮ ಮಂಕಾಗಿ ಕುಳಿತಿದ್ದ.
ಅದೆಂತೋ ತಪ್ಪಿಸಿಕೊಂಡಿದ್ದ ನಾಯಿಯೊಂದು ದೀನವಾಗಿ ನೋಡುತ್ತಾ ಶಿವರಾಮನ ಕಾಲು ನೆಕ್ಕುತ್ತಿತ್ತು. ಪಿತ್ರಾರ್ಜಿತ ಇಪ್ಪತ್ತೆರಡು ಎಕ್ರೆ ಭೂಮಿ ಮನೆ ಸಹಿತ ಸಮಾಧಿಯಾಗಿ ಅಲ್ಲಿ ಮೊದಲು ಏನೇನಿತ್ತು ಎಂಬುದೇ ಗೊತ್ತಾಗುತ್ತಿರಲಿಲ್ಲ. ಎಕ್ರೆಗಟ್ಟಲೆ ವ್ಯಾಪಿಸಿದ ಅಗಾಧ ಕೆಂಪು ಮಣ್ಣಿನ ರಾಶಿ! ಶಿವರಾಮ ಮಣ್ಣನ್ನು ಕೈಯಲ್ಲಿ ಬಗೆದು ಬಗೆದು ಹುಡುಕುತ್ತಿದ್ದಾನೆ...!
ಕೈಗೆ ಸಿಕ್ಕಿದ ’ಕುರುಂಗ’ ಕಲ್ಲನ್ನು ತೆಗೆದು ದೂರಕ್ಕೆ ಎಸೆಯುತ್ತಾನೆ...!!
ಖದೀಮರು ಅಲ್ಲಿ ಬಂದು ಕಲ್ಲು ಹುಡುಕಿ ತೆಗೆಯಲು ನೋಡಿದರೆ ಶಿವರಾಮ ಕಿರುಚಾಡುತ್ತಾ ಅವರನ್ನು ಕಲ್ಲು, ಬಡಿಗೆಗಳನ್ನೆತ್ತಿ ಎಸೆದು ಬೈಯುತ್ತಾ ಓಡಿಸುತ್ತಿದ್ದಾನೆ.
ಶಿವರಾಮ ಎಸೆದ ಕಲ್ಲುಗಳಲ್ಲಿ ಕೆಲವು ’ಕುರುಂಗ’ ಕಲ್ಲುಗಳೂ ಇರುತ್ತಿದ್ದುದರಿಂದ ಅವುಗಳನ್ನು ಆಯ್ದುಕೊಳ್ಳಲು ಅವನ ಗುರಿ ತಪ್ಪಿಸಿ ಮತ್ತೆ ಮತ್ತೆ ಅಲ್ಲೇ ಸುಳಿದಾಡುತ್ತಾರೆ. ಕೆಲವರು ಮಣ್ಣಿನಡಿ ಹುದುಗಿರುವ ಬೀಟಿ, ಚಿರ್ಪು ಕಿರಾಲ್‌ಬೋಗಿ ಮರಗಳಿಗಾಗಿ ಅಗೆದು ಬಗೆದು ಹುಡುಕುತ್ತಿದ್ದಾರೆ.
ಅಣ್ಣಂದಿರಾದ ಶೇಖರ, ಶ್ರೀಧರ ಯಾರೂ ಈಗ ಪಾಲು ಕೇಳಲು ಬರುತ್ತಿಲ್ಲ.
ಯಾರಿಗೂ ಭೂಮಿ ಬೇಡ. ಪಾಲೂ ಬೇಡ.
****************************************
- Login or register to post comments
- Email this page