You are hereಕತೆ: ಉತ್ತರಾಧಿಕಾರ

ಕತೆ: ಉತ್ತರಾಧಿಕಾರ


By admin - Posted on 20 February 2009

ಲೇಖಕರು: ದೀಪಾ ಹಿರೇಗುತ್ತಿ, ಕೊಪ್ಪ


ಯಾಕೋ ಪೂರ್ತಿ ಖಾಲಿಯಾಗಿಬಿಟ್ಟಿದ್ದೇನೆ ಅನಿಸುತ್ತಿದೆ, ಮಗು ಚೀಪಿಬಿಟ್ಟ ಐಸ್‌ಕ್ಯಾಂಡಿಯ ಕಡ್ಡಿಯ ಹಾಗೆ... ಸುಸ್ತು... ದೇಹದ ನೋವಿಗಿಂತಲೂ ಕಾಡುವ ಮನಸಿನ ಆಯಾಸ. ಯಾರೂ ಇಲ್ಲದಿರುವ ಜಾಗದಲ್ಲಿ ಸುಮ್ಮನೆ ಒಂದಷ್ಟು ದಿನ ಇದ್ದು ‘ವಿಶ್ರಾಂತಿ’ ತೆಗೆದುಕೊಳ್ಳುವ ಆಸೆ ತೀವ್ರವಾಗಿ ಕಾಡುತ್ತಿದ್ದ ದಿನಗಳು ನೆನಪಾದವು. ವಿಶ್ರಾಂತಿ ಪಡೆಯುವುದಕ್ಕಿಂತ ಅದರ ಕನಸು ಕಾಣುತ್ತ ಕೆಲಸ ಮಾಡುತ್ತ ಇರುವುದು ಮಾತ್ರ ನನ್ನಂಥವನಿಗೆ ಸಾಧ್ಯ ಎಂದು ಗೊತ್ತಾಗಿ ಹೋಗಿದೆ ಈ ಒಂದು ತಿಂಗಳ ಅವಧಿಯಲ್ಲಿ. ಯಾವುದೋ ಕೋಮುಗಲಭೆಯ ಪ್ರದೇಶವನ್ನು ಭೇಟಿ ಮಾಡಿ ಮನೆಗೆ ವಾಪಾಸಾಗಿದ್ದಷ್ಟೇ. ಮಹಡಿಯ ಮೇಲಿನ ನನ್ನ ಪರ್ಸನಲ್ ಲೈಬ್ರರಿಯಿಂದ ಏನೋ ತುರ್ತಾಗಿ ಮಾಹಿತಿ ಬೇಕಿತ್ತೆಂದು ನಾಲ್ಕೆಂಟು ಮೆಟ್ಟಿಲು ಹತ್ತಿದ್ದು ಮಾತ್ರ ನೆನಪಿದೆ. ಪ್ರಯಾಣದ ಆಯಾಸದಿಂದ ತಲೆತಿರುಗುತ್ತಿತ್ತೋ ಏನೋ ಗೊತ್ತಿಲ್ಲ. ಜೋಲಿ ತಪ್ಪಿದಂತಾಯಿತು. ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ. ನಗರದ ಅತಿ ಪ್ರತಿಷ್ಠಿತ ದವಾಖಾನೆಯಲ್ಲಿ. ನೀವು ಶ್ರೀಮಂತರಾದಷ್ಟು ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಬೇಕಾದ ಜಾಗದಲ್ಲಿ. ಸ್ಲಿಪ್‌ಡಿಸ್ಕ್ ಇರಬಹುದೆಂದರು ಮೊದಲು, ಒಂದೆರಡು ತಿಂಗಳ ವಿಶ್ರಾಂತಿಯ ನಂತರ ಕ್ರಿಯಾಶೀಲನಾಗುವ ನಿರೀಕ್ಷೆಯಲ್ಲಿ ಖುಷಿಯಾಗಿದ್ದೆ. ವಾರದ ನಂತರ ವೈದ್ಯರು ಸಿಡಿಸಿದರು, ಆಸ್ಟಿಯೋ ಫೋರೋಸಿಸ್-ಅದೇ ಇರಬೇಕು- ಎಂಬ ಬಾಂಬಿ ನಂತರ ಹೆಸರನ್ನು. ಶಬ್ಧ ಅರ್ಥವಾಗಲಿಲ್ಲ. ಆದರೆ ನನ್ನ ಭವಿಷ್ಯ ಅರ್ಥವಾಗಿತ್ತು. ನಾನು ನಡೆದಾಡುವ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣೊಬ್ಬಳು ಅನಿರೀಕ್ಷಿತವಾಗಿ ತನ್ನ ಶೀಲ ಕಳೆದುಕೊಂಡಷ್ಟು ದಾರುಣವಾಗಿ, ದಯನೀಯವಾಗಿ ಈ ಆಘಾತದಿಂದ ನನ್ನ ಮಿದುಳು ಘಾಸಿಯಾಗದಿದ್ದುದು ನನ್ನ ಪುಣ್ಯ.

ಕೈಚಾಚಿದಾಗ ಕಾಲಿಂಗ್‌ಬೆಲ್‌ಗೆ ತಾಗಿತು. ಸರ್ ಎನ್ನುತ್ತ ಬಂದಳು ಬಿಳಿ ಬಣ್ಣದ ಸೀರೆಯುಟ್ಟ ಬಿಳಿ ನರ್ಸ್. ಬೇಡದಿದ್ದರೂ ನೀರು ಕೇಳಿದೆ. ಕೊಟ್ಟಳು. ಸಣ್ಣಕೆ ಕತ್ತರಿಸಿದ ಸ್ವಚ್ಛ ಉಗುರುಗಳ ಆರೋಗ್ಯವಂತ ಕೈಗಳು. ಚಿಕ್ಕ ಚೌಕುಳಿ ಕರ್ಚೀಫಿನಿಂದ ಬಾಯಿ ವರೆಸಿ ಇನ್ನೇನು ಬೇಕಿದ್ರೂ ಕೇಳಿ ಎಂದು ಗೌರವದಿಂದ ನಕ್ಕು ಹೋದಳು. ಇಲ್ಲಿಗೆ ಬಂದ ಮೇಲೆ ಬರೀ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಆಡಿಲ್ಲ. ‘ಅಪ್ಪಾಜಿಗೆ ಬೆಡ್‌ರೆಸ್ಟ್ ಹೇಳಿದಾರೆ, ಯಾರೂ ಭೇಟಿ ಮಾಡುವಂತಿಲ್ಲ’ ಎಂದು ಗೌತಮ ಹೇಳಿಬಿಟ್ಟಿದ್ದಾನೆ. ನನಗೂ, ಪತ್ರಿಕೆಗಳಿಗೂ, ಡಾಕ್ಟರು ಹೇಳಿದ್ದು ಮೈಯ್ಯಿನ ವಿಶ್ರಾಂತಿಗೆ ಬಾಯಿಗಲ್ಲ. ಬಾಯಿಗೆ ವಿಶ್ರಾಂತಿ ಕೊಟ್ಟರೆ ಮನಸ್ಸು ರೆಸ್ಟ್‌ಲೆಸ್ ಆಗುತ್ತದೆ. ಮನಸ್ಸಿಗೆ ರೆಸ್ಟ್ ಸಿಗುವುದು ಬಾಯಿಗೆ ಬಿಡುವಿಲ್ಲದಿದ್ದಾಗ ಮಾತ್ರ, ಅದೂ ಅರವತ್ತರ ಈ ವಯಸ್ಸಿನಲ್ಲಿ ಎನ್ನುವುದು ಯಾರಿಗೂ ಗೊತ್ತಿರದ ಸಂಗತಿಯೇನಲ್ಲ. ಆದರೆ ನಾನು ಕೆಲವರೊಂದಿಗೆ ಎಲ್ಲವನ್ನು, ಎಲ್ಲರೊಂದಿಗೆ ಕೆಲವನ್ನು ಹೇಳುವುದನ್ನು ಬಿಟ್ಟು ಎಲ್ಲರೊಂದಿಗೆ ಎಲ್ಲವನ್ನೂ ‘ಒದರಿಬಿಡುತ್ತೇನೆಂದು’ (ಗೌತಮನೇ ಸಿಟ್ಟಿನ ಭರದಲ್ಲಿ ಪ್ರಯೋಗಿಸಿದ ಪದ) ಈ ಮುನ್ನೆಚ್ಚರಿಕೆ, ಕಟ್ಟೆಚ್ಚರ. ಬೆರಳು ತೋರಿಸಿದರೆ ಇಡೀ ತೋಳನ್ನೇ ತಿಂದುಬಿಡುವ ಈ ಹಾಳು ಪತ್ರಕರ್ತರೆದುರು ನಾನು ಏನನ್ನಾದರೂ ಹೇಳಿ, ಅವರು ಇನ್ನೇನನ್ನಾದರೂ ಬರೆದು ಅವನ ರಾಜಕೀಯ ಅರಂಗೇಟ್ರಂಗೆ ತೊಂದರೆಯಾದೀತೆಂಬುದು ಅವನ ಚಿಂತೆ. ಸಹಜವಾದದ್ದೇ. ಹತ್ತಿರ ಹತ್ತಿರ ನಲವತ್ತು ವರ್ಷಗಳ ದೀರ್ಘ ರಾಜಕೀಯ ಜೀವನದಲ್ಲಿ ಆಲದಂತೆ ಬೆಳೆದುಬಿಟ್ಟೆ ನಾನು. ನನ್ನ ನೆರಳಿನಲ್ಲಿ ಎಂಥೆಂಥವರೋ ಕೂತು ದಣಿವಾರಿಸಿಕೊಂಡರು, ಕೊಂಬೆ ಕಡಿದು ಉಪಯೋಗಿಸಿಕೊಂಡರು, ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡರು. ಆದರೆ ಹತ್ತಿರ ಯಾವ ಗಿಡವೂ ಚಿಗುರಲು ನಾನು ಬಿಡಲಿಲ್ಲ. ಸ್ವತಃ ನನ್ನದೇ ಕುಡಿಯನ್ನೂ.

ಅವತ್ತು ಗೌತಮ ಊರಿಗೆ ಬಂದಿದ್ದ, ಊಟಿಯ ರೆಸಿಡೆನ್ಸಿಯಲ್ ಶಾಲೆಯಿಂದ. ಲಕ್ಷ್ಮಿಯ ನೂರು ಕೋರಿಕೆಗಳ ನಡುವೆಯೂ ಅವನನ್ನು ಬೆಂಗಳೂರಿನಲ್ಲಿರಿಸಿಕೊಳ್ಳಲು ಸುತರಾಂ ಒಪ್ಪಿರಲಿಲ್ಲ ನಾನು. ಯಾರೋ ಕೇಳಿದ್ದರು ಏನಾಗುತ್ತಿಯೋ ದೊಡ್ಡವನಾದ ಮೇಲೆ ಅಂತ. ‘ಪ್ರೈಂ ಮಿನಿಸ್ಟರ್ ಆಫ್ ಇಂಡಿಯಾ...’ ಫಟೀರನೆ ಬಿಟ್ಟಿದ್ದೆ ಕೆನ್ನೆಯ ಮೇಲೆ. ನನ್ನನ್ನು ಯಾರೊಂದಿಗೂ ಮಾತನಾಡಬಾರದೆಂದು ರಿಸ್ಟ್ರಿಕ್ಟ್ ಮಾಡುವಾಗ ಅವನ ಕೈ ಕೆನ್ನೆ ಸವರಿಕೊಳ್ಳುತ್ತಿತ್ತೇ? ಇರಲಿಕ್ಕಿಲ್ಲ. ಬರೀ ನನ್ನ ಭ್ರಮೆ ಇರಬಹುದು. ಅದಕ್ಕೇ ಅವನು ಅಪ್ಪನಿಗೆ ಅರಳು-ಮರಳು ಎಂದು ನನ್ನ ಹಿಂದೆ ಆಡಿಕೊಳ್ಳುವುದು. ಗೌತಮ ನನ್ನ ನಿರೀಕ್ಷೆಗೆ ತಕ್ಕಂತೆಯೇ ಓದಿದ. ಇಂಜಿನಿಯರಿಂಗ್ ಮುಗಿಸಿದ. ದೆಹಲಿಯ ಐಎಎಸ್ ಕೋಚಿಂಗ್‌ಗೆ ಸೇರಿಸಿದೆ. ಆ ಯುದ್ಧವನ್ನೂ ಗೆದ್ದ. ಗೆಲ್ಲುತ್ತಲೇ ನನ್ನಿಂದ ದೂರವಾಗುತ್ತ ನಡೆದ. ಯಾಕೋ ಬಎನ್ನು ಸಿಡಿಯುತ್ತಿದೆ. ನರ್ಸನ್ನು ಕರೆದರೆ ಪೇನ್‌ಕಿಲ್ಲರ್ ಕೊಡುತ್ತಾಳೆ. ಬೇಡವೆನಿಸಿತು.

ಗೌತಮ ಪುಟ್ಟ ಮಗು. ಪೂರ್ತಿ ಹೆಸರು ಗೌತಮ್ ಪ್ರಜ್ವಲ್. ಬುದ್ಧನಂತೆ ಶಾಂತವಾಗಿ ಪ್ರಜ್ವಲಿಸುವ ವ್ಯಕ್ತಿತ್ವ ಅವನದಾಗಲೆಂದು ಆಸೆ. ಹೆಸರಿಡಲು ಬಂದವರೆಲ್ಲ ಶ್ಲಾಘಿಸಿದ್ದರು. ನಿಮ್ಮ ಹೆಸರನ್ನು ಬೆಳೆಸಿ ಪ್ರಜ್ವಲಿಸಲಿ ಈ ಹುಡುಗ ಎಂದು ಹಾರೈಸಿದ್ದರು. ಆರತಿಗೊಬ್ಬಳು ಮಗಳಾಗಲಿ ಎಂಬ ಹಿರಿಯ ಹೆಂಗಸರ ಮಾತನ್ನು ತುಟಿಯಂಚಿನಲ್ಲೇ ನಕ್ಕು ಸ್ವೀಕರಿಸಿದ್ದೆ. ಅದಾದ ನಾಲ್ಕೇ ತಿಂಗಳಿಗೆ ಆಸ್ಪತ್ರೆಯೊಂದರಲ್ಲಿ ನನ್ನ ವ್ಯಾಸೆಕ್ಟಮಿ ಯಾರಿಗೂ ಗೊತ್ತಿಲ್ಲದೇ ಮುಗಿದುಹೋಗಿತ್ತು; ಸ್ವತಃ ಲಕ್ಷ್ಮಿಗೂ ಗೊತ್ತಿಲ್ಲದಂತೆ! ಆಗ ನಾನಿನ್ನೂ ಎಂಎಲ್‌ಎ ಮಾತ್ರವಾಗಿದ್ದೆ. ಹೆಚ್ಚು ಮಕ್ಕಳು ಹೆಚ್ಚು ಕಿರಿಕಿರಿ, ಮಕ್ಕಳೇ ಇಲ್ಲದಿದ್ದರೆ ಕಿರಿಕಿರಿಯೇ ಇಲ್ಲವಲ್ಲ ಎಂದು ಒಳಮನಸ್ಸು ವ್ಯಂಗ್ಯವಾಡಿತ್ತು. ಬಂಜೆಯೆಂಬ ಉರಿಗಣ್ಣು ಲಕ್ಷ್ಮಿಯನ್ನು ಸುಡುವುದಕ್ಕಿಂತ ಕನಿಕರದ ಅನುಮಾನದ ಚೂಪು ಈಟಿ ನನ್ನನ್ನು ಇರಿಯುವುದು ಬೇಕಿರದ ಸ್ವಾರ್ಥದಿಂದ ಮಾತ್ರವೇ ಗೌತಮ ಹುಟ್ಟಿದ್ದು.

ನನ್ನ ಮನೆ ನೆನಪಾಗುತ್ತಿದೆ. ಅಲ್ಲಿ ಲಕ್ಷ್ಮಿ ನಗುತ್ತಿದ್ದಾಳೆ, ಫೋಟೋದಲ್ಲಿ. ಅದು ಫೋಟೋ ಎಂದು ನನಗೆ ಅನ್ನಿಸಿಯೇ ಇಲ್ಲ. ಯಾಕೆಂದರೆ ಅವಳು ಇದ್ದಾಗಲೂ ಆ ಫೋಟೋದಂತೆಯೇ ಇದ್ದಳು ನನ್ನ ಪಾಲಿಗೆ. ಅದಕ್ಕಿಂತ ಹೆಚ್ಚಿನ ಸಂವಹನ ಸಾಧ್ಯವಾಗಿತ್ತೆಂದು ಸುಳ್ಳು ಹೇಳಲಾರೆ. ಗಂಡ, ಮಗ, ಮನೆ, ಅಡಿಗೆ ಮತ್ತು ಬಂದವರ ಆದರಾತಿಥ್ಯ. ಎಲ್ಲಿಗೆ ಹೋಗುವಾಗಲೂ ತನ್ನ ನಿರ್ಲಿಪ್ತ ಕಿರುಗಣ್ಣುಗಳನ್ನು ಅಗಲಿಸಿ ನಗು ಬೀರಿ ಕಳುಹಿಸಿಕೊಡುತ್ತಿದ್ದಳು. ನಾಲ್ಕು ದಿನ ಬಿಟ್ಟು ಬಂದರೂ ಅದೇ ನಗು. ಈಗಿನಂತೆಯೇ. ಬಹುಶಃ ಅದಕ್ಕಾಗಿಯೇ ಲಕ್ಷ್ಮಿಯಂತಹ ಹುಡುಗಿಯನ್ನು ಹುಡುಕಿ(ಸಿ) ಹುಡುಕಿ(ಸಿ) ಮದುವೆಯಾದೆನೇನೋ... ಚಿಕ್ಕವಯಸ್ಸಿಗೇ ಶಾಸಕನಾದ ನನಗೆ ಹೆಣ್ಣುಕೊಡಲು ಎಷ್ಟು ಮಂದಿ ತಯಾರಿರಲಿಲ್ಲ, ಎಷ್ಟೋ ವಿದ್ಯಾವಂತ ತರುಣಿಯರು- ಕಾಮಾಕ್ಷಿಯಂತೆ- ನನ್ನ ಎದೆಯನ್ನು ಹರಿತ ಚೂರಿಯಂತೆ ಹೊಕ್ಕು ಘಾಸಿಗೊಳಿಸಿದ್ದರು. ಆದರೆ ಎಸ್ಸೆಸ್ಸೆಲ್ಸಿ ಪಾಸಾಗದ, ಎಣ್ಣೆ ಹಾಕದೆ ಒಂದು ದಿನವೂ ಬಾಚದ ಲಕ್ಷ್ಮಿಯನ್ನೇ ನಾನು ಮದುವೆಯಾಗಿದ್ದೆ. ಪುಣ್ಯಕ್ಕೆ ಪೇಟೆಗೆ ಬಂದೊಡನೆ ಶ್ರೀಮಂತಿಕೆಯ ಸೊಕ್ಕೇರಿ ಗಯ್ಯಾಳಿಯಾಗಿಬಿಡುವ ಹಳ್ಳಿಯ ಹುಡುಗಿಯಾಗಲಿಲ್ಲ ಲಕ್ಷ್ಮಿ. ಮನೆಯೊಳಗೆ ಬಂದೊಡನೆ ತೋಳ್ದೆರೆದು ಸ್ವಾಗತಿಸಿ ಕೂರಿಸಿಕೊಳ್ಳುವ ನನ್ನ ಈಸಿಚೇರಿನಂತೆ ಹಿತವಾಗಿದ್ದಳು, ನಿರುಪದ್ರವಿಯಾಗಿದ್ದಳು. ಮಗ ಊಟಿಯ ಶಾಲೆಗಿ ಹೋದ ಮೇಲೆ ಅವಳ ಅತಿಥಿ ಸತ್ಕಾರ ಜೋರಾಗಿತ್ತು.

ಅಸಾಧ್ಯ ನೋವು. ಮೆಟ್ಟಿಲಿಂದ ಉರುಳಿ ಬಿದ್ದಾಗ ಎತ್ತಿದವರು ಯಾರೋ. ಅಡಿಗೆಯವನಿರಬೇಕು. ಕೇಳಲೇ ಇಲ್ಲ ನಾನು. ಟಿವಿ ಆನ್ ಮಾಡಿದೆ. ‘ಮಾಜಿ ಮುಖ್ಯಮಂತ್ರಿ ವಿಶ್ವನಾಥ್ ರಾಜಕೀಯ ನಿವೃತ್ತಿ?’ ಎಂಬ ಚರ್ಚೆ ಎಲ್ಲೆಡೆಗೂ. ಆದರೆ ಅದು ನನ್ನನ್ನು ಬೇಸರಗೊಳಿಸುತ್ತಿಲ್ಲ. ಟಿವಿ ನನಗೆ ಬೇಸರ ತಂದಿದ್ದೇ ಇಲ್ಲ. ಮೊದಲು ಜನಪ್ರಿಯತೆಗಾಗಿ ಏನೆಲ್ಲಾ ಮಾಡಿ- ಬೇಕಾದರೆ ಬೆತ್ತಲಾಗಿ ಪತ್ರಿಕೆಗೆ ಪೋಸುಕೊಟ್ಟು ಕೊನೆಗೆ ಮನೆಯಿಂದ ಹೊರಡುವಾಗ ಬುರ್ಖಾ ಧರಿಸಿ ಹೊರಡುತ್ತೇನೆ ಎಂದು ಬೆವರುವವರನ್ನು ಕಂಡರೆ ನಗುವೇ ಬರುತ್ತದೆ. ಒಳಗೆ ಜನಪ್ರಿಯತೆಯ ಥ್ರಿಲ್ ಅನುಭವಿಸುತ್ತ ಹೊರಗೆ ಅದು ಬೇಡವಾಗಿತ್ತು ಎಂಬಂತೆ ನಟಿಸುತ್ತ ಇಬ್ಬಂದಿಯಲ್ಲಿ ನರಳುವ ಸೆಲೆಬ್ರಿಟಿಗಳು ನನ್ನಲ್ಲಿ ರೇಜಿಗೆ, ಮರುಕ ಒಟ್ಟೊಟ್ಟಿಗೇ ಹುಟ್ಟಿಸುತ್ತಾರೆ. ನನಗೆ ಯಾವತ್ತೂ ಸುದ್ದಿಯಲ್ಲಿರುವುದು ಇಷ್ಟ. ಹೈಸ್ಕೂಲಿನ ಕೈಬರಹದ ಗೋಡೆ ಪತ್ರಿಕೆಯಲ್ಲಿ ನನ್ನದೊಂದು ನಗೆಹನಿ ಪ್ರಕಟವಾದಾಗ ಅದರ ಕೆಳಗಿನ ನನ್ನ ಹೆಸರನ್ನು ನೋಡುತ್ತ ನಿಂತುಬಿಡುತ್ತಿದ್ದುದು ನೆನಪಿದೆ. ಬಿಡಿಎಸ್ ವಿದ್ಯಾರ್ಥಿನಿ, ನಮ್ಮ ಪಕ್ಷದ ಹಿರಿಯರಾದ ಸದಾಶಿವ ಅವರ ಮಗಳು, ನನ್ನ ಜೊತೆ ಸಲಿಗೆಯಿಂದಿದ್ದ ಕಾಮಾಕ್ಷಿ ಕಾರಿನಲ್ಲಿ ಹೋಗುವಾಗೊಮ್ಮೆ ಗೇರ್ ಬದಲಾಯಿಸುತ್ತಿದ್ದ ನನ್ನ ಕೈಯನ್ನು ತೆಗೆದು ತನ್ನ ಎದೆಯ ಮೇಲಿಟ್ಟುಕೊಂಡು ಮೃದುವಾಗಿ ಒತ್ತಿದಾಗಲೂ ಅಂದಿನ ರೋಮಾಂಚನದಷ್ಟು ಇದು ತೀವ್ರವಾಗಿರಲಿಲ್ಲ.

ಅಪ್ಪ ಕುಳಿತಿದ್ದಾನೆ ಜಗುಲಿಯ ಮೇಲೆ. ಊರಿಗೆ ಊರೇ ಕಾಲಿಗೆ ಬೀಳುವಂತಹ ಮನುಷ್ಯ. ಅಷ್ಟು ಗೌರವವೇ ಎಂದರೆ ಉತ್ತರ ಜಾಸ್ತಿ ಹೌದು ಮತ್ತು ಸ್ವಲ್ಪ ಅಲ್ಲ. ಆಳುವ ಪಕ್ಷದ ಮುಖಂಡನಾದ ಅವನು ಹೆದರಿಕೆಯನ್ನು ಹುಟ್ಟಿಸುವ ಎಲ್ಲ ವಿಚಾರಗಳನ್ನು, ಸಾಧನೆಗಳನ್ನು, ವ್ಯಕ್ತಿಗಳನ್ನು ತನ್ನ ಜೊತೆ ಇಟ್ಟುಕೊಳ್ಳುತ್ತಿದ್ದ. ಹೆದರಿಕೆಯೇ ಗೌರವದ ಅತ್ಯುನ್ನತ ಹಂತ ಎಂದು ತಪ್ಪು ತಿಳಿದುಕೊಂಡಿದ್ದ ಎಂಬುದೊಂದನ್ನು ಬಿಟ್ಟರೆ ಅಪ್ಪ ತನಗೆ ಹೆದರುವ ಪುಕ್ಕಲು ಬಡ ಜನರಿಗೆ ಜೇಬಿಂದಲೇ ಖರ್ಚು ಮಾಡಿ ಕೆಲಸ ಮಾಡಿಕೊಡುತ್ತಿದ್ದ. ಅವನಿಗೆ ಅಡ್ಡ ಬಿದ್ದು ಹೆದರಿ ನಡುಗಿದವರು, ನಾಟಕ ಮಾಡಿದವರು ಎಲ್ಲರೂ ಜಮೀನು ಮನೆ ಮಾಡಿಕೊಂಡರು. ತನ್ನ ಹತ್ತಿರ ಏನೂ ಉಳಿಯದ ನೋವಿಗಿಂತ ಯಾರೂ ಉಳಿಯದ, ಕೊನೆಕೊನೆಗೆ ಜತೆಗಿರುವಂತೆ ನಟಿಸಿದ ಏಕಾಕಿತನ ಅಪ್ಪನನ್ನು ಕಾಡಿತೋ ಏನೋ. ಜಗುಲಿಯ ಮೇಲೆ ಇಡೀ ದಿನ ಕೂತಿದ್ದ. ಮಾರನೆಯ ದಿನ ಹದಿನಾಲ್ಕರ ನನ್ನನ್ನು, ಹತ್ತರ ಶಾರದೆಯನ್ನು, ಮೂಕಳಾಗಿ ಕೂತ ಅಮ್ಮನನ್ನು ಮತ್ತು ಅಪಾರ ಸಾಲವನ್ನು ಬಿಟ್ಟು ಹೋಗಿಬಿಟ್ಟ, ಊರಹೊರಗಿನ ಮರಕ್ಕೆ ನೇಣುಹಾಕಿಕೊಂಡು.

ಮೊದಲ ಬಾರಿ ರಜೆಯಲ್ಲಿ ಬಂದಾಗ ಗೌತಮ ಉತ್ಸಾಹದಿಂದ ಹೇಳುತ್ತಿದ್ದ, ಶಾಲೆಯಲ್ಲಿ ಅವನು ಕ್ಲಾಸಿನ ಮಾನಿಟರ್ ಅಂತೆ, ಅವನ ಟೀಚರ್‍ಸ್ ಎಲ್ಲಾ ಅಪ್ಪನ ಜೀನ್ಸ್ ಡೊಮಿನೇಟ್ ಆಗಿದೆ ನಿನ್ನಲ್ಲಿ ಎಂದಿದ್ದರಂತೆ. ನನ್ನ ಮುಖ ಕಪ್ಪಿಟ್ಟಿತ್ತು. ನಾಲ್ಕು ಮಂದಿ ಕೂತು ರಾಜಕೀಯದ ಸುದ್ದಿ ಮಾತಾಡುತ್ತಿದ್ದರೆ; ನಾನು ಅಲ್ಲಿ ಸುಳಿದಾಡುವುದು ನಿಷಿದ್ಧವಾಗಿತ್ತು ಅಪ್ಪನೆದರುರು. ಸಾಕಿದ ನಾಯಿಗಿಂತ ಕನಿಷ್ಠವಾಗಿ ಅಪ್ಪ ನನ್ನನ್ನು ಬೈಯ್ಯುತ್ತಿದ್ದ. ಹೊರಹೋದ ಅಪ್ಪ ಬರುವ ಸೂಚನೆಗಳು ಕಂಡಕೂಡಲೇ ಬೆಕ್ಕನ್ನು ಕಂಡ ಇಲಿ ಅಡಗುವಂತೆ ಮಹಡಿಯ ಮೇಲೆ ಮಲಗಿಬಿಡುತ್ತಿದ್ದೆ. ರಾತ್ರಿ ಹನ್ನೆರಡರ ಮೇಲೆ ಅಪ್ಪನ ದರ್ಬಾರು. ಕೋಳಿಸಾರು ಆಗಬೇಕೆಂದರೆ ಆ ಅಪರಾತ್ರಿಯಲ್ಲಿ ಗುಡಿನ ಕೋಳಿಯೊಂದಕ್ಕೆ ಗತಿ ಬಂತೆಂದು ಅರ್ಥ. ಅದಕ್ಕೆ ರೊಟ್ಟಿಯೂ ಆಗಬೇಕು. ರಾತ್ರಿ ಎರಡು-ಮೂರು ಗಂಟೆಗೆ ಶಿಸ್ತಾಗಿ ಊಟ ಮುಗಿಸಿ ಅಪ್ಪ ನಿದ್ದೆಹೋಗುತ್ತಿದ್ದ. ಕಣ್ಣೊರೆಸಿಕೊಳ್ಳುತ್ತ ಬೆಳಗು ಮಾಡುತ್ತಿದ್ದ ಅಮ್ಮ ಎದ್ದು ಬಚ್ಚಲ ಉರಿ ಹಾಕುತ್ತಿದ್ದಳು.

ಗೌತಮ ಬಂದ. ‘ಹೌ ಆರ್ ಯು ಬಾಸ್’ ಎಂದು ತೊಡೆ ತಟ್ಟಿದ. ಎಂದೂ ಇಲ್ಲದ ಅವನ ಈ ಹೊಸ ಸಲಿಗೆ ಅವನಲ್ಲಿ ನಾನು ಎಂದೂ ಕಾಣದ ಹೊಸ ಸ್ನೇಹಿತನನ್ನು ಕಾಣಿಸಿ ಖುಷಿ ಕೊಟ್ಟರೂ, ಮರುಕ್ಷಣ ನನ್ನ ಅಸಹಾಯಕತೆಯನ್ನು ಅಣಕಿಸಲು ಅವನ ಅಹಂ ಕಂಡುಕೊಂಡ ಮಾರ್ಗ ಎಂದು ಅರಿವಾಗಿ ಖಿನ್ನನಾದೆ. ‘ನಿನ್ನೆಲ್ಲ ನಾಟಕಗಳನ್ನು ನನ್ನ ಒಂದು ಪ್ರೆಸ್‌ಮೀಟ್ ಮುಗಿಸಿಬಿಡಬಲ್ಲುದು, ಮೈಂಡ್ ಯು’ ಶಬ್ದಗಳು ಗಂಟಲಲ್ಲೇ ಒಣಗಿದವು. ಟಿ.ವಿ. ಎಲ್ಲವನ್ನೂ ನನಗೆ ಹೇಳುತ್ತಿರುತ್ತದೆಂದು ಅವನಿಗೆ ಗೊತ್ತು. ವಾತಾವರಣ ಇದ್ದಕ್ಕಿದ್ದಂತೆ ಕೃತಕವಾಗತೊಡಗಿತು. ಉಸಿರು ಕಟ್ಟಿದಂತಾಗಿ ಕೆಮ್ಮತೊಡಗಿದೆ. ನರ್ಸನ್ನು ಕರೆದು ಹೊರಟುಹೋದ.

ಬೆಳಿಗ್ಗೆದ್ದು ಹೋಗುತ್ತಿದ್ದ ಅಪ್ಪ ರಾತ್ರಿ ಬರುವುದರೊಳಗೆ ನಮ್ಮ ಸಾಲದ ಮೊತ್ತವನ್ನು ಹೆಚ್ಚಿಸಿರುತ್ತಿದ್ದ. ಸರ್ಕಾರದ ಬಡತನ ನಿವಾರಣಾ ಕಾರ್‍ಯಕ್ರಮಗಳು ಪಾರ್ಟಿಯ ಉಳಿದ ಮುಖಂಡರ ಬಡತನವನ್ನು ಬೇರುಸಮೇತ ಕಿತ್ತೆಸೆದರೆ ಅಪ್ಪ ತನ್ನ ಸ್ವಂತ ಆಸ್ತಿಯನ್ನೇ ಕಳೆದುಕೊಂಡ. ಕೆಲಸದವರಿಗೋಸ್ಕರ ಮನೆಕಟ್ಟಿಸಿ ಅವನ್ನೋ ಸರ್ಕಾರಿ ಮನೆಗಳೆಂದು ತೋರಿಸಿ ಆಳುಗಳ ಸಹಿ ಪಡೆದು, ತಮ್ಮ ತೋಟದ ಕೆಲಸಕ್ಕೆ ಬರದೇ ಇದ್ದರೆ ಅವರನ್ನೇ ಅವರ ಮನೆಯಿಂದ ಹೊರಹಾಕುವ ‘ಜನಸೇವಕರ’ ಮಧ್ಯೆ ಅಪ್ಪನದೊಂದು ತನ್ನ ತೋಟದ ಮನೆಗಳನ್ನೇ ಕೆಲಸದವರಿಗೆ ಬಿಟ್ಟುಕೊಟ್ಟ ವ್ಯಕ್ತಿತ್ವ. ಅಪ್ಪ ಬದುಕಿದ್ದಾಗ ಅವನ ಜನಪ್ರಿಯತೆಯ ಹಂಬಲ ಮತ್ತು ಪರೋಪಕಾರದ ತುಡಿತ ಎರಡನ್ನೂ ಪರಸ್ಪರ ವಿರೋಧಾಭಾಸವಾಗಿಯೋ ಅಥವಾ ಪೂರಕವಾಗಿಯೋ ನೋಡಲು ಬಾಲಕನಾಗಿದ್ದ ನನಗೆ ಸಾಧ್ಯವಾಗಲಿಲ್ಲವಲ್ಲ ಎಂದು ಆಗಾಗ ಅನ್ನಿಸಿದ್ದರೂ, ಇವತ್ತು ಬದುಕಿನ ಈ ತಿರುವಿನಲ್ಲಿ ನಿಂತಿರುವ ನಾನು ಈ ಕ್ಷಣದವರೆಗೆ ಎಷ್ಟು ಅಪ್ಪನನ್ನು ಅರ್ಥ ಮಾಡಿಕೊಂಡಿದ್ದೇನೆ ಎನ್ನಿಸಿ ಪಿಚ್ಚೆನ್ನಿಸಿತು. ಕಿರ್‍ಕಿಗಾರ್ಡ್ ಜೀವನದಲ್ಲಿ ಆಯ್ಕೆಯ ಬಗ್ಗೆಯೇ ಬಹಳ ಹೇಳುತ್ತಾನೆ. ಯಶಸ್ಸು ಅಥವಾ ಸಂಸಾರ, ಉದ್ಯೋಗ ಹೀಗೆ ಎರಡು ಜೀವನಕ್ರಮಗಳಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳುವ ಅನಿವಾರ್‍ಯತೆಯ ಕುರಿತು ಹೇಳುತ್ತಾನೆ. ಯಶಸ್ಸನ್ನು ಉದ್ಯೋಗ ಮಾಡಿಕೊಂಡು, ಸಂಸಾರ ಮಾಡುವ ನನ್ನಂಥವರು ಅವನಿಗೊಂದು ಛಾಲೆಂಜ್ ಆಗಬಲ್ಲರು. ಸಂಸಾರ? ಲಕ್ಷ್ಮಿ ಕಣ್ಣು ಅಗಲಿಸಿ ಕೇಳಿ ನಕ್ಕಂತಾಯಿತು, ಊರಿನವರಿಗೆ ಗೊತ್ತಿಲ್ಲದೇ ಖರೀದಿಸಿದ, ಮಾರಿದ ಬೆಂಗಳೂರಿನ ಹೊರವಲಯದ ಜಮೀನುಗಳು, ಕಟ್ಟಿದ ಅರಮನೆ, ಹೆಚ್ಚಿದ ಅಂತಸ್ತುಗಳ ಜೊತೆಗೆ ಅಪ್ಪನ ನೆನಪಾಗಿಬಿಡುತ್ತಿತ್ತು. ಅಪ್ಪ ಸತ್ತ ಹತ್ತು ವರ್ಷ ಬೀದಿನಾಯಿಗೂ ಬೇಡದ ನಮ್ಮ ಪಾಡು ನೆನಪಾಗಿಬಿಡುತ್ತಿತ್ತು. ಅಪ್ಪನ ಜನಪ್ರಿಯತೆಯ ಹಂಬಲದ ಜೀನ್ ಅನ್ನು ಮಾತ್ರ ಪಡೆದ ನಾನು ಪರಿಸ್ಥಿತಿಗೆ ರಾಜಿಯಾಗಲೊಲ್ಲದೆ ಸತ್ತ ಅವನ ಪ್ರಾಮಾಣಿಕತೆಯನ್ನೇಕೆ ಪಡೆಯಲಿಲ್ಲ? ಒಂದೂ ಚುನಾವಣೆಯನ್ನು ಸೋಲದ ಧೀರನೆಂದೇ ಖ್ಯಾತನಾದ ನಾನು ಅದು ಹೇಗೆಂದು ನನ್ನ ಬಲಗೈ ಭಂಟ ರಾಜುಗಿಂತ ಚೆನ್ನಾಗಿ ಹೇಳಲಾರೆ. ‘ಅಪ್ಪಾಜಿ, ನೀವು ನಡೆದ ದಾರಿಯಲ್ಲೇ ಕಣ್ಮುಚ್ಚಿ ನಡೆಯುವೆ’. ಪ್ರಶ್ನೆ ಕೇಳುವ ಮುನ್ನವೇ ಉತ್ತರ ಹೇಳಿದ್ದ ಮೊನ್ನೆ ನೋಡಲು ಬಂದಾಗ. ಗೌತಮನಿಗೆ ಮುಂಚಿನಿಂದಲೂ ರಾಜುವನ್ನು ಕಂಡರಾಗುವುದಿಲ್ಲ. ಗೌತಮ ತನ್ನ ಹುದ್ದೆಗೆ ರಾಜೀನಾಮೆ ಕೊಡುವವರೆಗೂ ರಾಜುಗೂ ಅವನನ್ನು ಕಂಡರೆ ಅಂತಹ ದ್ವೇಷವಿರಲಿಲ್ಲ.

ಕೈಕಾಲು ಮರುಗಟ್ಟಿಹೋಗಿವೆ. ಸೊಂಟದ ನಿರ್ಬಲತೆ ಮೈಗೂ ಆವರಿಸಿತೇನೋ ಎಂದು ದಿಗಿಲುಗೊಂಡೆ. ಅಂದು ಲಕ್ಷ್ಮಿಯ ಕಣ್ಣಲ್ಲಿದ್ದ ದಿಗಿಲು. ಊರಿನಲ್ಲಿನ ಪಂಚಾಯ್ತಿಯ ವಿರೋಧ ಪಕ್ಷದ ಸದಸ್ಯೆಯೊಬ್ಬಳನ್ನು ಅಡಗಿಸಿಡಲು ಇಲ್ಲಿಗೆ ಕರೆದುಕೊಂಡು ಬರಲಾಗಿತ್ತು. ಗಂಡನಿಲ್ಲದ ಪುಣ್ಯವತಿ ಬಹಳ ಮಹತ್ವಾಕಾಂಕ್ಷೆಯ ಹೆಂಗಸು. ಅದೇ ಕೊನೆಗಳಿಗೆಯಲ್ಲಿ ನಮ್ಮ ಪಾಲಿನ ಅಧ್ಯಕ್ಷ ಸ್ಥಾನಕ್ಕೆ ಮುಳುವಾದೀತೆಂಬ ಭಯ. ಮಹಡಿಯ ಮೇಲಿನ ಕೋಣೆಯಲ್ಲಿದ್ದ ಅವಳನ್ನು ಮಾತಾಡಿಸಲು ಹೋಗಿದ್ದೆನಷ್ಟೇ. ತಾನೇಕೆ ಅಧ್ಯಕ್ಷೆ ಆಗಬಾರದೆಂಬ ವಾದ ಇಟ್ಟಳು. ನಮ್ಮ ಪಾರ್ಟಿಗೆ ಸೇರುವ ಮಾತಾಡುತ್ತ ಮಾತಾಡುತ್ತ ಮಲಗುವ ಕೋಣೆಗೆ ಕರೆದೊಯ್ದಳು. ಗಂಟೆಯ ನಂತರ ಕೋಣೆಯ ಬಾಗಿಲು ತೆರೆದರೆ ಎದುರಿಗೆ ಲಕ್ಷ್ಮಿ ನಿಂತಿದ್ದಳು. ಹಿಂದೆಯೇ ಬಂದ ಪುಣ್ಯವತಿ ಧರೆಗಿಳಿದು ಹೋದಳು. ಪಾಪ ಲಕ್ಷ್ಮಿ, ಧರಿತ್ರಿಯೇ ಸೈ. ಏನೂ ಮಾತನಾಡಲಿಲ್ಲ. ಪಂಚಾಯ್ತಿ ಅಧ್ಯಕ್ಷರ ಚುನಾವಣೆ ಮುಗಿಯುವವರೆಗೂ, ಅಷ್ಟೇ ಅಲ್ಲ ಪುಣ್ಯವತಿ ಅಧ್ಯಕ್ಷೆಯಾದ ಸುದ್ದಿ ಗೊತ್ತಾದಾಗಲೂ. ನಂತರವೂ ನಮ್ಮ ಮನೆಯ ಬಾವಿಯ ಮೂಲಕ ಭೂಮಿಯೊಳಗೇ ಹೋಗಿ ನಗುತ್ತಲೇ ಭಾವಚಿತ್ರದ ಕಟ್ಟಿನೊಳಗೆ ಉಳಿದುಬಿಟ್ಟಳು. ಅದರ ನಂತರ ಪುಣ್ಯವತಿ ಹಲವು ಬಾರಿ ನನ್ನ ಕೋಣೆಗೇ ಬಂದಳು. ಆದರೆ ಲಕ್ಷ್ಮಿಯ ನಗುಮುಖ ಬದಲಾಗಿಲ್ಲ. ಪುಣ್ಯವತಿಯೂ ಜಾಣೆ, ತನ್ನ ಮುಖಭಾವ ಯಾರಿಗೂ ಕಾಣದಂತೆ ಮೇಕಪ್ ಮಾಡಿಕೊಂಡಿದ್ದಾಳೆ. ಪುಣ್ಯವತಿಯಲ್ಲ ಕ್ಷಮಿಸಿ, ಶ್ರೀಮತಿ ಪುಣ್ಯವತಿ ರಮೇಶ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಈಗ. ನಾಲ್ಕು ದಿನದ ಕೆಳಗೆ ಬಂದಾಗ ಕೈಒತ್ತಿ ನಾನಿದ್ದೇನೆ ಎಂದಳು. ಮಹಿಳಾ ನಾಯಕತ್ವದ ಬಗ್ಗೆ ಮಾತನಾಡಿದಳು. ಸುಮ್ಮನೆ ಹೂಂಗುಟ್ಟಿದೆ. ಮೊನ್ನೆ ರಾತ್ರಿ ಅವಳ ಪತ್ರಿಕಾಗೋಷ್ಠಿ ಪ್ರಸಾರವಾಗುತ್ತಿತ್ತು ಟಿವಿಯಲ್ಲಿ. ‘ಅಪ್ಪಾಜಿಯ ಮಹಿಳಾ ಸಬಲೀಕರಣದ ಕನಸಿನ ವಿಸ್ತರಣೆ ನನ್ನ ಮಹತ್ವಾಕಾಂಕ್ಷೆ ‘ಎನ್ನುತ್ತ’, ಪಾಶ್ಚಿಮಾತ್ಯರ ಪ್ರಜಾಪ್ರಭುತ್ವ ಉದಾರವಾದಿ’ ಎಂದು ಇನ್ನೇನನ್ನೋ ಸೇರಿಸಿ ಅರ್ಥವಿಲ್ಲದೆ ಮಾತಾಡಿಯೂ ಪುಣ್ಯವತಿ ಮಿಂಚುತ್ತಿದ್ದಳು.

ಯಾಕೋ ದುರ್ಬಲನಾಗುತ್ತ ಹೋಗುತ್ತಲೇ ಇದ್ದೇನೆ. ನನ್ನಂಥ ದುಡ್ಡಿದ್ದವರಿಗೆ ಜಮೀನು ಮಾರಿ ರಸ್ತೆ ಬದಿಯಲ್ಲಿ ಬೀಡಿ ಸೇದುತ್ತ ಕೆಮ್ಮುವವರ ಅಳಲಿನಷ್ಟು ನಿಶ್ಯಕ್ತನಾಗಿ, ತೀವ್ರವಾಗಿ ಬಾಗಿನಲ್ಲೆಂಬಂತೆ ಹೂತುಹೋಗುತ್ತಿದ್ದೇನೆ. ಅಪ್ಪ, ಅಮ್ಮ, ಲಕ್ಷ್ಮಿ, ಗೌತಮ, ರಾಜು, ಪುಣ್ಯವತಿ, ಕಾಮಾಕ್ಷಿ, ಜನರು ಎಲ್ಲರೂ ಗುಂಪಾಗಿಯೇ ನೆನಪಾಗುತ್ತಿದ್ದಾರೆ. ಮನಸ್ಸು ಮಾಡಿದರೆ ಇಲ್ಲಿಂದಲೇ ರಾಜ್ಯವಾಳಬಲ್ಲೆ. ಆದರೆ ನನ್ನ ಅಕಾಲಿಕ, ಕಡ್ಡಾಯ ನಿವೃತ್ತಿಯ ಬಗ್ಗೆ ಯಾರೂ ಮಾತಾಡುತ್ತಿಲ್ಲ ಏಕೆ? ನನ್ನೆದುರು ನನಗೇ ಅವಮಾನವೆನಿಸಿತು. ನಾನಿನ್ನ ತಟಸ್ಥ, ನಿರ್ಲಿಪ್ತ. ಬೇರೆಯವರಿಗಾಗಲ್ಲ, ಕೇವಲ ನನಗಾಗಿ. ನೋಯಿಸಬೇಕು, ಅಳಿಸಬೇಕು. ತೀರ್ಮಾನಕ್ಕೆ ಬಂದ ಖುಷಿ ಹಗುರವಾಗಿಸಿತು. ರಿಮೋಟ್ ಒತ್ತಿದೆ. ಪ್ರಧಾನಿಗಳು ಸಮಾಧಿಯ ಮೇಲೆ ಹೂವು ಸುರಿಯುತ್ತಿದ್ದಾರೆ. ಓಹ್! ಇಂದು ಅಕ್ಟೋಬರ್ ಎರಡು!

ಓದುಗರ ಅಭಿಪ್ರಾಯಗಳು

Search