You are hereಕತೆ: ಪುನರಪಿ

ಕತೆ: ಪುನರಪಿ


By admin - Posted on 19 February 2009

ಲೇಖಕರು: ಚಲಂ, ಹಾಸನ


ಸಣ್ಣಗೆ ಮಳೆ ಹನಿಯುತ್ತಿತ್ತು. ಸಂದೇಶ ಹೊದ್ದುಕೊಂಡಿದ್ದ ಮುಸುಕನ್ನು ತಲೆ ಮಾತ್ರ ಕಾಣುವಂತೆ ಹೊರಹಾಕಿದ. ಕಿಟಕಿಯಿಂದ ಸ್ವಲ್ಪ ಬೆಳಕು ಹರಿಯುತ್ತಿದ್ದು, ಓಹ್! ಬೆಳಗಾಯಿತು ಎಂದು ಎದ್ದು ಕುಳಿತ. ಕಣ್ಣುಗಳು ಚುಚ್ಚುವಂತೆ ಭಾಸವಾಗುತ್ತಿದ್ದವು. ನಿನ್ನೆ ಕಾಲೇಜಿನಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡು ಚಿಂತಿತನಾಗಿ ರಾತ್ರಿ ತುಂಬಾ ಹೊತ್ತಿನ ತನಕ ಅವನಿಗೆ ಕಣ್ಣು ಹತ್ತಿರಲಿಲ್ಲ.

ಕಾಲೇಜಿನ ಕ್ಯಾಂಪಸ್ಸಿನಲ್ಲಿ ರಾಜಾರಾಮನು ಎಲ್ಲರೆದುರು ಕಪಾಳಕ್ಕೆ ಹೊಡೆದದ್ದು ಸಂದೇಶನಿಗೆ ನೋವಾಯಿತಾ? ಇಲ್ಲ. ಅವನು ಕಪಾಳಕ್ಕೆ ಹೊಡೆದದ್ದು ನೋವಾಗಿರಲಿಲ್ಲ. ಆದರೆ ಇಡೀ ಕ್ಯಾಂಪಸ್ಸಿನಲ್ಲಿ ಹುಡುಗರು, ಅಧ್ಯಾಪಕರ ಎದುರಿಗೆ ಹೊಡೆದದ್ದು ಅವನಿಗೆ ಎದೆಯಲ್ಲಿ ಮುಳ್ಳು ಮುರಿದಂತಾಗಿತ್ತು. ಇನ್ನು ಕಾಲೇಜಿನ ಕಡೆಗೆ ಮುಖ ಹಾಕಬಾರದೆಂದು ತೀರ್ಮಾನಿಸಿದರೂ, ಆ ತೀರ್ಮಾನ ಅವನ ಕೈಯಲ್ಲಿರಲಿಲ್ಲ. ಸಂದೇಶ ಎಲ್.ಎಲ್.ಬಿ.ಯ ಕಡೆಯ ವರ್ಷದಲ್ಲಿದ್ದನು. ಕಾಲೇಜು ಬಿಡಬೇಕೆಂದು ಮನಸ್ಸಿನಲ್ಲಿ ಬಂದದ್ದರ ಜೊತೆಗೆ ತನ್ನ ಮನೆಯ ಪರಿಸ್ಥಿತಿಯೂ ನೆನಪಿಗೆ ಬಂದಿತು. ಯಾವಾಗಲೂ ಕುಡಿದು ಊರ ಅರಳಿಮರದ ಕೆಳಗೆ ಬೀಡಿ ಸೇದುತ್ತಾ, ಚೌಕಾಬಾರದಲ್ಲಿ ಮುಳುಗಿಹೋಗಿದ್ದ ಸಂದೇಶನ ಅಪ್ಪ ಶುದ್ಧ ನಿರುಪಯುಕ್ತನಾಗಿದ್ದನು. ಸಂದೇಶನ ತಾಯಿ ಸೀರೆಯನ್ನೇ ಕಚ್ಚೆಯಂತೆ ಕಟ್ಟಿ ಗದ್ದೆ ಉಳುವುದನ್ನು ನೋಡಿ ಊರ ಜನರು ಅಯ್ಯೊ ಎನ್ನದಿರಲಿಲ್ಲ. ಅವಳ ಗಂಡನ ವರ್ತನೆಯಿಂದಾಗಿ ಎಂದೋ ಕೆರೆಯ ಪಾಲಾಗಬೇಕಿದ್ದ ಅವಳಿಗೆ ಇದ್ದ ಒಂದೇ ಒಂದು ಭರವಸೆಯೆಂದರೆ ಮಗ ಸಂದೇಶ.

ಅವಳು ಇದ್ದ ಒಂದು ಹಸುವಿನಲ್ಲೇ ಹಾಲನ್ನು ವರ್ತನೆ ಮಾಡಿ ಉಳಿದಂತೆ ಎಲ್ಲದರಲ್ಲೂ ಹೊಟ್ಟೆಬಟ್ಟೆ ಕಟ್ಟಿ ಹಣ ಕೂಡಿಟ್ಟಿದ್ದರು. ಮದುವೆಯಾದಾಗಿನಿಂದ ಗಂಡ ಒಂದು ಗುಲಗಂಜಿ ಗಾತ್ರದ ಚಿನ್ನವನ್ನು ಮಾಡಿಸಿ ಕೊಟ್ಟಿರಲಿಲ್ಲ. ಹಲವಾರು ವರ್ಷಗಳ ಬಳಿಕ ತನ್ನ ಕೂಡಿದ್ದ ಹಣದಲ್ಲಿ ತಾಳಿಸರವನ್ನು ಮಾಡಿಸಿಕೊಂಡಳು. ಅದು ಅವಳ ಆತ್ಮ ವಿಶ್ವಾಸವನ್ನು ಹೆಚ್ಚಿಸಿತ್ತು. ಮಗ ಸಂದೇಶನನ್ನು ಓದಿಸಿ ಯಾವುದಾದರೂ ಕೆಲಸಕ್ಕೆ ಸೇರಿಸಿದರೆ ತನ್ನ ದಶಕಗಳ ಪಡಿಪಾಟಲು ಮುಗಿಯುತ್ತದೆ ಎಂದು ಅವಳು ದೃಢವಾಗಿ ನಂಬಿದ್ದಳು. ಆದರೆ ಮುಂದೆ ಓದಿಸುವುದು ಹೇಗೆ? ತನ್ನ ಕತ್ತಿನಲ್ಲಿದ್ದ ತಾಳಿ ಸರವನ್ನೇ ಬಿಚ್ಚಿ ಸಂದೇಶನ ಕೈಗಿಟ್ಟು, ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ಮನೆ ಬೆಳಗು ಎಂದು ಕಣ್ತುಂಬಿಕೊಂಡಿದ್ದಳು. ಇದನ್ನು ನೆನೆದ ಸಂದೇಶ ಕಾಲೇಜಿಗೆ ಹೋಗಬಾರದೆಂಬ ತನ್ನ ತೀರ್ಮಾನಕ್ಕೆ ತಾನೇ ನಾಚಿಕೊಂಡನು.

ನೋಡಲು ಪೀಚು ಪೀಚಾಗಿದ್ದ ಸಂದೇಶ ತನ್ನ ಪ್ರಬುದ್ಧತೆಯಿಂದಾಗಿ ಕಾಲೇಜಿನ ಸಭ್ಯ ಹುಡುಗರಿಗೆ ಆತ್ಮೀಯವಾಗಿದ್ದನು. ‘ವಿಚಾರಧಾರೆ’ ಎಂಬುದು ಆ ಸಣ್ಣ ಗುಂಪಿನ ಆತ್ಮೀಯ ಸ್ನೇಹಿತರ ಒಂದು ಸಂಘ. ಅದೇ ಹೆಸರಿನಲ್ಲಿ ‘ಖಾಸಗಿ ಪ್ರಸಾರಕ್ಕಾಗಿ ಮಾತ್ರ’ ಎಂದು ಸಣ್ಣ ಪತ್ರಿಕೆಯನ್ನು ತರುತ್ತಿದ್ದ ಅದು ಯಾವುದೇ ಮುದ್ರಣರೂಪದಲ್ಲಿರದೇ ಸಂದೇಶನ ಮುದ್ದಾದ ಅಕ್ಷರಗಳಲ್ಲೇ ಪ್ರಕಟವಾಗುತ್ತಿತ್ತು. ಅದರಲ್ಲಿ ವಿಶ್ವದ ಪ್ರಸಿದ್ದ ಚಿಂತಕರ ವಿಚಾರಧಾರೆಗಳನ್ನು ಪ್ರಕಟಿಸುತ್ತಿದ್ದ. ಅದೇ ರೀತಿ ತನ್ನ ಕಾಲೇಜಿನ ಆಗುಹೋಗುಗಳ ಬಗ್ಗೆಯೂ ಸಣ್ಣಸಣ್ಣ ಟಿಪ್ಪಣಿ ಮಾಡುತ್ತಿದ್ದ.

ಶ್ರೀನಿವಾಸ ‘ವಿಚಾರಧಾರೆ’ ಬಳಗದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಂಶುಪಾಲರಾಗಿದ್ದರು. ಅಷ್ಟೆ ಶಿಸ್ತಿನ ಮನುಷ್ಯ ಕೂಡ. ಖಾಸಗಿ ಶಿಕ್ಷಣ ಸಂಸ್ಥೆಯಾಗಿದ್ದ ಕಾಲೇಜಿನ ಸಿಬ್ಬಂದಿಗಳಿಗೆ ಹಣಕಾಸಿನಲ್ಲಿ ಯಾವುದೇ ದುರುಪಯೋಗಕ್ಕೆ ಅವಕಾಶ ನೀಡುತ್ತಿರಲಿಲ್ಲ. ಅದು ಕಾಲೇಜಿನ ಸಿಬ್ಬಂದಿಯವರಿಗೆ ಮೈಕೈ ಪರಚಿಕೊಳ್ಳುವಂತಾಯಿತು. ಕಾಲೇಜಿನ ಕಾರ್ಯದರ್ಶಿ ನಾರಾಯಣಪ್ಪ ರಾಜಕೀಯ ಮುಖಂಡನಾಗಿದ್ದು ಮಂತ್ರಿಯಾಗಿದ್ದರು. ನಾರಾಯಣಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ತಾನೂ ಸಹ ಭಾಗಿಯಾಗಿದ್ದೆ ಎಂದು ಹೇಳಿಕೊಳ್ಳುತ್ತಿದ್ದರು. ಸರಳ ಸಜ್ಜನಿಕೆಗೆ ಹೆಸರಾಗಿದ್ದ ಅವರು ತನ್ನ ಪ್ರತಿ ಭಾಷಣಗಳಲ್ಲಿ ದೇಶದ ನಾನಾ ಮಹಾತ್ಮರುಗಳ ವಿಚಾರಗಳನ್ನು ತನ್ನ ಯೋಜನೆಗಳಿಗೆ ತಳುಕು ಹಾಕಿ ಮಾತನಾಡುತ್ತಿದ್ದರು. ನಂತರ ಬದಲಾದ ರಾಜಕೀಯ ಆಂತರಿಕ ಬದಲಾವಣೆಯಿಂದಾಗಿ ಅವರೂ ಕೈ ಮಸಿ ಮಾಡಿಕೊಂಡಿದ್ದರು. ರಾಜಕೀಯ ಕುತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. ಆದರೂ ಕೆಲವೊಮ್ಮೆ ತನ್ನ ಯೌವ್ವನಾವಸ್ಥೆಯ ಆದರ್ಶಗಳು ಮನದ ಮೂಲೆಯಲ್ಲಿ ಕುಟುಕುತ್ತಿತ್ತು. ಆದರೆ ಹಾಗೆ ಬದುಕಿದವರು ಈಗಲೂ ಜೋಪಡಿಗಳಲ್ಲಿ ವಾಸಿಸುತ್ತಿರುವುದನ್ನು ನೋಡಿ ಮತ್ತು ಹಲವಾರು ದಶಕಗಳ ಸ್ಥಿತ್ಯಂತರದಿಂದಾಗಿ ಭಾರಿ ಆಸ್ತಿಯನ್ನೆ ಮಾಡಿಕೊಂಡಿದ್ದರು. ಅದರಲ್ಲಿ ಈ ಶಿಕ್ಷಣ ಸಂಸ್ಥೆಯೂ ಒಂದು.

ಶ್ರೀನಿವಾಸರ ಶಿಸ್ತಿನಿಂದ ಬೇಸರಗೊಂಡ ಸಿಬ್ಬಂದಿಗಳ ನಿಯೋಗವೊಂದು ಗುಪ್ತವಾಗಿ ಮಂತ್ರಿಗಳನ್ನು ಕಂಡು ಶ್ರೀನಿವಾಸರ ಶಿಸ್ತನ್ನೇ ಮಹಾಪರಾಧವೆಂಬಂತೆ ಬಣ್ಣಿಸಿ ಕತೆ ಕಟ್ಟಿ ಹೇಳಿದ್ದರು. ಅವೆಲ್ಲವನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಲು ಪುರುಸೊತ್ತಿಲ್ಲದ ಮಂತ್ರಿ ಮಹಾಶಯರು ‘ಏನ್ಮಾಡ್ಬೆಕ್ರಪ್ಪ?’ ಎಂಬಂತೆ ನಿಯೋಗದ ಕಡೆಗೆ ನೋಡಿದರು. ಸಿನಿಯಾರಿಟಿಯಲ್ಲಿ ಎರಡನೆಯವನಾದ, ಅಷ್ಟೆ ಭ್ರಷ್ಟನಾದ ಲಿಂಗಾಚಾರರನ್ನು ನಿಯೋಗವು ಪ್ರಾಂಶುಪಾಲರ ಹುದ್ದೆಗೆ ಸೂಚಿಸಿ ಅವರಾದರೆ ಕಾಲೇಜು ಉದ್ಧಾರವಾಗುತ್ತದೆ ಎಂದು ವಿನಮ್ರವಾಗಿ ಕೈಕಟ್ಟಿ ನಿಂತರು. ಕಾಲೇಜಿನ ಸಿಬ್ಬಂದಿಗಳೇ ಒಂದಾಗಿ ಶ್ರೀನಿವಾಸ ಮೇಲೆ ದೂರು ನೀಡುತ್ತಿರುವಾಗ ಆತನದೇ ತಪ್ಪಿರಬೇಕೆಂದು ಭಾವಿಸಿ ‘ತಥಾಸ್ತು’ ಎಂದರು.

ವಿಚಾರಧಾರೆ ಬಳಗವು ತನ್ನ ಸೀಮಿತ ವ್ಯಾಪ್ತಿಯಲ್ಲಿ ಸಾಹಿತ್ಯ, ವಿಚಾರ ಹೀಗೆ ಒಂದು ಸಣ್ಣ ಸಂಘಟನೆಯಾಗಿ ರೂಪುಗೊಳ್ಳುತ್ತಿತ್ತು. ಆದರೆ ದಶಕಗಳಿಂದ ನಡೆದುಕೊಂಡು ಬಂದಿದ್ದ ಕಾಲೇಜಿನ ವೈಸ್‌ಪ್ರೆಸಿಡೆಂಟ್ ಎಲೆಕ್ಷನ್ ಈ ಸಿದ್ಧಾಂತಗಳಿಗೆ ವಿರುದ್ಧವಾಗಿತ್ತು. ಈ ಚುನಾವಣೆಯಲ್ಲಿ ಸಾವಿರಾರು ಜನ ವಿದ್ಯಾರ್ಥಿಗಳು ಒಬ್ಬ ನಾಯಕನನ್ನು ಆರಿಸುತ್ತಿದ್ದರು. ಹೇಳಬೇಕೆಂದರೆ ಹಾಗೆ ಆಯ್ಕೆಯಾದವನು ಕಾಲೇಜಿನ ಪ್ರಾಂಶುಪಾಲರಿಗಿಂತ ಹೆಚ್ಚು ಅಧಿಕಾರ ಚಲಾಯಿಸಬಲ್ಲವನಾಗಿದ್ದ. ಹೀಗೆ ಚುನಾಯಿತರಾದವರು ಹೆಚ್ಚಿನ ಮಟ್ಟಿಗೆ ಹಲವಾರು ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಒಳಗಾಗುತ್ತಿದ್ದರು. ಹೀಗೆ ಇದೇ ಕಾಲೇಜಿನಿಂದ ಹಿಂದೆ ಚುನಾಯಿತರಾಗಿ ಹೋದವರು ಮುನ್ಸಿಪಾಲ್ಟಿ ಮೆಂಬರುಗಳಾಗಿ, ಶಾಸಕರಾಗಿ ರಾಜಕೀಯ ರಂಗದಲ್ಲಿ ಮಿಂಚುತ್ತಿದ್ದರು. ಅವರಿಗೆಲ್ಲಾ ಈ ಕಾಲೇಜಿನ ಚುನಾವಣೆಯೇ ರಾಜಕೀಯ ಪ್ರವೇಶಕ್ಕೆ ಪ್ರಾಥಮಿಕ ಹಂತವಾಗಿತ್ತು. ರಾಜಕೀಯ ಪುಢಾರಿಗಳಿಗೆ ಹೀಗೆ ಅಭ್ಯರ್ಥಿಗಳನ್ನು ಬೆಂಬಲಿಸುವುದು ಅಗತ್ಯವಾಗಿತ್ತು. ಯಾಕೆಂದರೆ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯೂ ಮತದಾನದ ಹಕ್ಕನ್ನು ಪಡೆದಿರುತ್ತಾನಲ್ಲ. ಇದು ಪುಡಾರಿಗಳ ಬೇರೆ ಬೇರೆ ಚುನಾವಣೆಗಳಲ್ಲಿ ಮುಖ್ಯಪಾತ್ರವಹಿಸುತ್ತಿತ್ತು.

ವಿಶ್ವವಿದ್ಯಾಲಯದ ಆಡಳಿತ ನಿಯಮಾವಳಿಗಳನ್ನು ಪ್ರಶ್ನಿಸಬಹುದಾಗಿದ್ದ ಈ ಚುನಾಯಿತರನ್ನು ಕಂಡರೆ ಆಡಳಿತ ವರ್ಗಕ್ಕೆ ಕಸಿವಿಸಿಯಾಗುತ್ತಿತ್ತು. ಆದರೆ ಲಿಂಗಾಚಾರಿಯಂತಹವರಿಗೆ ತನ್ನ ಹರಿದುಹೋದ ವ್ಯಕ್ತಿತ್ವಕ್ಕೆ ತೇಪೆ ಹಚ್ಚಲು ಬೆಂಬಲ ಬೇಕಾಗುತ್ತಿತ್ತು. ಹಾಗಾಗಿ ಜಾತಿಲಾಬಿ, ಹಣದ ಸಹಕಾರ ಹೀಗೆ ಅಭ್ಯರ್ಥಿಗಳಿಗೆ ಪೂರೈಸುತ್ತಾ ಒಂದಲ್ಲಾ ಒಂದು ದಿನ ಈ ಹುಡುಗರು ನನ್ನ ಸಹಕಾರಕ್ಕೆ ನಿಲ್ಲುತ್ತಾರೆ ಎಂದು ತಿಳಿದಿದ್ದ. ಹಾಗೆಯೆ ರಾಜಾರಾಮ್‌ನಂಥ ಪುಂಡರನ್ನು ಸಾಕಿಕೊಂಡಿದ್ದ. ಈಗ ಲಿಂಗಾಚಾರಿಯೇ ಪ್ರಾಂಶುಪಾಲನಾಗಿ ಬಂದ ಮೇಲೆ ಪುಂಡರ ಗುಂಪು ಅವನನ್ನು ಒಂದು ಗುಂಡು ಪಾರ್ಟಿ ಕೊಡಿಸಬೇಕೆಂದು ಏಳೆಂಟು ಸಾವಿರ ಖರ್ಚು ಮಾಡಿಸಿ ಒಂದೆರಡು ದಿನದ ಮಟ್ಟಿಗೆ ಟೈಟಾಗಿದ್ದರು.

ಶ್ರೀನಿವಾಸರನ್ನು ಪ್ರಾಂಶುಪಾಲ ಹುದ್ದೆಯಿಂದ ತೆಗೆದದ್ದು, ಲಿಂಗಾಚಾರಿಯನ್ನು ನೇಮಕ ಮಾಡಿದ್ದು ವಿಚಾರಧಾರೆ ಬಳಗಕ್ಕೆ ಬಾರಿ ಆಘಾತವನ್ನೇ ಉಂಟು ಮಾಡಿತ್ತು. ಇದೇ ವಿಚಾರದ ಬಗ್ಗೆ ಸಂದೇಶನು ಕೂಲಂಕುಶವಾಗಿ ಆದ ಬದಲಾವಣೆಯ ಬಗ್ಗೆ ವಿಮರ್ಶಿಸಿ ಒಂದು ಲೇಖನವನ್ನು ತನ್ನ ಖಾಸಗಿ ಪತ್ರಿಕೆಯಲ್ಲಿ ಬರೆದ. ಪತ್ರಿಕೆಯಲ್ಲಿ ಪ್ರಕಟವಾದ ಲೇಖನವನ್ನು ನೋಡಿ ಲಿಂಗಾಚಾರಿ ರಾಜಾರಾಮನನ್ನು ತನ್ನ ಚೇಂಬರಿಗೆ ಕರೆಸಿದ. ಅದರ ಪರಿಣಾಮವೇ ಸಂದೇಶನ ಮೇಲೆ ಹಲ್ಲೆ. ಸಂದೇಶನಿಗೆ ಹಿಂಸೆಯ ಬಗ್ಗೆ ಸ್ವಲ್ಪವೂ ಕಾಳಜಿಯಿರಲಿಲ್ಲ. ಅವನ ಬಳಗದವರು “ಮುಯ್ಯಿಗೆ ಮುಯ್ಯಿ” ಎಂದು ತೋಳೇರಿಸಿ ನಿಂತಾಗಲೂ ಸಂದೇಶ ಅವರನ್ನು ತಡೆದಿದ್ದ. ಆದರೆ ಈ ಹಲ್ಲೆಗೆ ಪ್ರತಿಕ್ರಿಯೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಹಿಂಸೆಯ ಪ್ರಚಂಡ ತಾಂಡವ ನರ್ತನ ಶುರುವಾಗುವುದರಲ್ಲಿ ಅನುಮಾನವಿಲ್ಲ ಎಂದು ಬಳಗದ ಸದಸ್ಯರ ಅಭಿಪ್ರಾಯವಾಗಿತ್ತು. ಸಂದೇಶನು ತನಗೆ ಓದು ಎಷ್ಟು ಮುಖ್ಯ, ಅದರಿಂದ ತನ್ನ ಜವಾಬ್ದಾರಿಗಳನ್ನು ತಿಳಿಸಿ ಬಳಗದ ಸದಸ್ಯರಿಗೂ ಓದಿನ ಕಡೆಗೆ ಗಮನ ನೀಡಲು ಹೇಳಿ ಇಂತಹ ಹಲ್ಲಂಡೆ ನಮಗೆ ಬೇಡ ಎಂದು ಸುಮ್ಮನಿರಿಸಿದ.

ಆದರೆ ವಿಚಾರಧಾರೆ ಬಳಗದ ಖಾಯಂ ಸದಸ್ಯೆಯಾಗಿದ್ದ ಸೌಮ್ಯಳ ಮನಸ್ಸಿನಲ್ಲಿ ಸಂದೇಶನ ಮೇಲೆಯಾದ ಹಲ್ಲೆ ಸಹನೀಯವಲ್ಲವೇ ಅಲ್ಲ ಎಂದು ಕೊರೆಯುತ್ತಿತ್ತು. ಕಾಲೇಜು ಶುರುವಾದ ಒಂದೆರಡು ತಿಂಗಳುಗಳಲ್ಲೇ ಸಂದೇಶನ ಸರಳತೆ, ಆತನ ಶಿಸ್ತು, ಬುದ್ಧ್ದಿವಂತಿಕೆಗೆ ಮರುಳಾಗಿದ್ದಳು. ಬಹುತೇಕ ಹುಡುಗಿಯರಿಗೆ ಕಟ್ಟುಮಸ್ತಾದ ದೇಹ, ಚಟಪಟ ಮಾತುಗಳನ್ನಾಡುವ ಹುಡುಗರು ಇಷ್ಟವಾಗುತ್ತಿದ್ದರೂ, ಸೌಮ್ಯಳಿಗೆ ತರಗೆಲೆಯಂತಿದ್ದ ಸಂದೇಶನು ಪ್ರಿಯವಾಗುತ್ತಿದ್ದ. ಬಾಹ್ಯಸೌಂದರ್ಯಕ್ಕಿಂತ ಆಂತರಿಕ ಸೌಂದರ್‍ಯಕ್ಕೆ ಅವಳು ಹೆಚ್ಚು ಬೆಲೆ ಕೊಟ್ಟಿದ್ದಳು. ಆದರೆ ಸಂದೇಶನು ಅವಳು ತೆರೆದ ಬಾಗಿಲೊಳಗೆ ಹೋಗದೇ ಆಗಾಗ ಬಾಗಿಲ ಬಳಿ ಬಂದು ನಿಂತು ಒಂದು ಅಂತರವನ್ನು ಕಾಪಾಡಿಕೊಂಡಿದ್ದ.

ಹಲ್ಲೆಯ ನಂತರ ಲಿಂಗಾಚಾರಿ ಮತ್ತು ರಾಜಾರಾಮನ ವಿರುದ್ಧ ತನ್ನ ಸ್ನೇಹಿತರನ್ನೆಲ್ಲಾ ಎತ್ತಿಕಟ್ಟುವ ಕೆಲಸವನ್ನು ಅವಳು ಸಮಯ ಸಿಕ್ಕಾಗಲೆಲ್ಲಾ ಬಳಸದೇ ಇರುತ್ತಿರಲಿಲ್ಲ. ಇದು ಸಂದೇಶನಿಗೆ ತಿಳಿದಾಗ ನನಗೆ ಹಲ್ಲೆಯಾದರೂ ಅದು ತನಗೆ ಆದಂತೆ ಎಂದು ವರ್ತಿಸುತ್ತಿದ್ದ ಸೌಮ್ಯಳನ್ನು ಕಂಡು ಅಭಿಮಾನ ಪ್ರೀತಿಯುಂಟಾಗುತ್ತಿತ್ತು. ಆದರೆ ಅದನ್ನು ಪ್ರೋತ್ಸಾಹಿಸಲು ಹೋಗದೇ, ತಡೆಯಲೂ ಹೋಗದೇ ಸುಮ್ಮನಾಗಿಬಿಟ್ಟಿದ್ದ.

ಲಿಂಗಾಚಾರಿಯಂತಹವರು ಪ್ರಾಂಶುಪಾಲರಾದ ಮೇಲೆ ಏನೇನು ಗುರುತರ ತಪ್ಪುಗಳು ನಡೆಯಬೇಕಿತ್ತೋ ಅವೆಲ್ಲವೂ ನಡೆದುಹೋದವು. ಸಂಸ್ಥೆಯ ಲೆಕ್ಕಾಚಾರದಲ್ಲಿ ಲಕ್ಷಾಂತರ ರೂಪಾಯಿ ಸಿಬ್ಬಂದಿವಲಯದಲ್ಲಿ ಹಂಚಿಹೋಗಿತ್ತು. ಅದಕ್ಕೆ ಸಿಬ್ಬಂದಿ ವರ್ಗದವರು ಲಿಂಗಾಚಾರಿಯ ನೇತೃತ್ವದಲ್ಲಿ ಒಂದು ಸಭೆ ನಡೆಸಿ ಒಂದು ಲೆಕ್ಕಾಚಾರಕ್ಕೆ ಬಂದು ಕಾಲೇಜಿನ ಪುನರುತ್ಥಾನಕ್ಕಾಗಿ ಪ್ರತಿ ವಿದ್ಯಾರ್ಥಿಯೂ ಮೂರು ಸಾವಿರ ರೂಪಾಯಿ ಕೊಡಬೇಕು ಎಂದು ಶಿಫಾರಸ್ಸನ್ನು ಜಾರಿಮಾಡಿತು. ಸಂದೇಶನಂತ ತುಂಬಾ ಹುಡುಗರಿಗೆ ಇದು ಭರಿಸಲಾರದ ಮೊತ್ತವಾಗಿತ್ತು. ಮತ್ತು ಈ ಹಣ ವಸೂಲಿಯ ಹಿಂದಿನ ಮರ್ಮವೂ ತಿಳಿದು ಹುಡುಗರು ಕುದಿಯತೊಡಗಿದರು.

ಇನ್ನೇನು ಪರೀಕ್ಷೆಗಳು ಎರಡು ತಿಂಗಳುಗಳು ಬಾಕಿಯಿದ್ದವು. ದಾರಿಯಲ್ಲಿ ಹೋಗುವಾಗ ಒಮ್ಮೆ ಸಂದೇಶನಿಗೆ ರಾಜಾರಾಮನು ಎದುರು ಬದುರಾಗಿ ಸಿಕ್ಕನು. “ರಾಜಾರಾಮ್ ಹೇಗಿದ್ದೀರಾ, ಹೇಗೆ ಓದುತ್ತಿದ್ದೀರಾ? ನಿಮ್ಮ ಹಲವಾರು ಸೆಮಿಸ್ಟರ್‌ಗಳು ಹಾಗೆ ಉಳಿದಿವೆ ಎಂದು ತಿಳಿದೆ. ಬೇಗ ಮುಗಿಸಿಕೊಳ್ಳಿ, ಒಟ್ಟಿಗೆ ಪ್ರಾಕ್ಟೀಸ್ ಮಾಡೋಣ” ಎಂದು ತೀರಾ ಆತ್ಮೀಯ ಸ್ನೇಹಿತನಂತೆ ಹೇಳಿದ. ರಾಜಾರಾಮನು ಎಷ್ಟೇ ಪ್ರಯತ್ನಿಸಿದರೂ ಅವನು ಈ ಹಿಂದೆ ಅವನ ಮೇಲೆ ಹಲ್ಲೆ ನಡೆಸಿದ್ದು, ಅದನ್ನು ಸಂದೇಶ ಹಗೆ ಸಾಧಿಸಲು ಪ್ರಯತ್ನಿಸುತ್ತಿದ್ದಾನಾ? ಅವನ ಮಾತಿನಲ್ಲಿ ಏನಾದರೂ ವ್ಯಂಗ್ಯವಿದೆಯಾ? ಎಂದು ಹುಡುಕಿದರೂ ಯಾವುದರ ಸುಳಿವು ಅವನ ಮಾತಿನಲ್ಲಿರಲಿಲ್ಲ. ಒಂದು ಕ್ಷಣ ಅವನ ಮುಂದೆ ನಿಲ್ಲಲಾಗದೇ, ಏನೂ ಉತ್ತರಿಸದೇ ಹಾಗೆ ನಡೆದುಹೋದ.

ನಿಜವಾಗಿಯೂ ಅವನಿಗೆ ನಾಚಿಕೆಯಾಗಿತ್ತು. ಯಾರಾದರೂ ಒಮ್ಮೆ ದುರುಗುಟ್ಟಿ ನೋಡಿದರೆ ಹೊಡೆಯಲು ಹೋಗುವ ತನ್ನ ಜಾಯಮಾನಕ್ಕೂ, ಇಡೀ ಕಾಲೇಜಿನ ಎದುರಲ್ಲೇ ನಾನು ಸಂದೇಶನಿಗೆ ಹೊಡೆದರೂ ಅದೇನೂ ನಡೆದೇ ಇಲ್ಲದಂತೆ ಈ ಪರಿ ತನ್ನ ಬಗ್ಗೆ ಕಾಳಜಿ ತೋರಿಸುವ ಗುಣಕ್ಕೂ ಇರುವ ಅಗಾಧವಾದ ವ್ಯತ್ಯಾಸವು ಅರಿವಾಯಿತು.

ರಾಜಾರಾಮನು ಕಾಲೇಜಿಗೆ ಸೇರುವಾಗಲೇ ಓದಿ ಬಾರಿ ಮಾರ್ಕ್ಸು ಪಡೆಯುವುದಕ್ಕಿಂತ ಬಹುಬೇಗ ಎಲ್ಲರಿಗೂ ಗುರುತಿಸಿಕೊಳ್ಳುವಂತೆ ಹೊಡೆದಾಟ, ಪುಂಡಾಟಿಕೆಯ ಮುಖಾಂತರ ಕುಪ್ರಸಿದ್ಧನಾಗಿದ್ದ. ಆ ಸಮಯದಲ್ಲಿ ನಾನೇ ನಿಜವಾದ ನಾಯಕ ಎಂಬ ಭಾವನೆಯನ್ನು ತಂದಿತ್ತು. ಅವನ ಈ ಭಾವನೆಯನ್ನು ಚೆನ್ನಾಗಿ ಉಪಯೋಗಿಸಿಕೊಂಡವನೆಂದರೆ ಲಿಂಗಾಚಾರಿ. ಸರಿಯಾಗಿ ಕ್ಲಾಸುಗಳನ್ನು ತೆಗೆದುಕೊಳ್ಳದೇ ಅವನಿಗೆ ಮೂಡ್ ಇದ್ದಾಗ ಮಾತ್ರ ತರಗತಿಗೆ ಹೋಗುತ್ತಿದ್ದ. ಪರೀಕ್ಷೆಗಳು ಹತ್ತಿರ ಬಂದರೂ ಸಿಲಬಸ್‌ಗಳು ಮುಗಿಯದೇ ಇದ್ದ ಕಾರಣದಿಂದ ಒಮ್ಮೆ ರೋಸತ್ತ ವಿದ್ಯಾರ್ಥಿಗಳು ಲಿಂಗಾಚಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ತರಗತಿಗೆ ಹೋಗುವುದು, ಬಿಡುವುದು ತನ್ನ ಮೂಲಭೂತ ಹಕ್ಕು. ಅದನ್ನು ಯಾರೂ ಪ್ರಶ್ನಿಸಬಾರದು ಎಂಬ ದೃಷ್ಟಿಕೋನ ಹೊಂದಿದ್ದವನಿಗೆ ವಿದ್ಯಾರ್ಥಿಗಳ ತರಾಟೆ ಮುಜುಗರಕ್ಕೀಡುಮಾಡಿತ್ತು. ಆಗ ಇದೆ ರಾಜಾರಾಮನನ್ನು ಅದೇ ತರಗತಿಗೆ ಕಳುಹಿಸಿ ಇಡೀ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿಸಿದ್ದ. ಒಬ್ಬ “ನೀನ್ಯಾರು ಇದನ್ನು ಕೇಳುವುದಕ್ಕೆ” ಎಂದು ಕೇಳಿದ್ದಕ್ಕೆ ರಾಜಾರಾಮ್ ತರಗತಿಯಲ್ಲೇ, ಸರಿಯಾಗಿ ತದುಕಿದ್ದ.

ಈಗ ನೋಡಿದರೆ ನಾನ್ಯಾರೊ ತಿರುಬೋಕಿ ಎಂಬಂತೆ ನೋಡುತ್ತಿದ್ದ ಲಿಂಗಾಚಾರಿಯ ವರ್ತನೆಗೂ ತನ್ನಿಂದ ಪೆಟ್ಟು ತಿಂದರೂ ತನ್ನ ಬಗ್ಗೆ ಸಹಾನುಭೂತಿ ಹೊಂದಿರುವ ಸಂದೇಶನ ನಡತೆಗೂ ಇರುವ ವ್ಯತ್ಯಾಸವನ್ನು ಕಂಡು ಲಿಂಗಾಚಾರಿಯ ಬಗ್ಗೆ ತೀರಾ ಅಸಹ್ಯವೆನಿಸಿತು. ಇತ್ತೀಚೆಗಂತೂ ಸಂದೇಶನು ದೂರದಲ್ಲಿ ಕಂಡರೂ ಅವನಿಗೆ ಮುಖ ತೋರಿಸಲು ಮುಜುಗರವಾಗುತ್ತಿತ್ತು.

ವಿಚಾರಧಾರೆ ಬಳಗವು ಹೆಚ್ಚಿನ ಹಣ ಭರಿಸಬೇಕಾಗಿ ಬಂದುದರ ಬಗ್ಗೆ ಚರ್ಚೆ ನಡೆಸಿತು. ಮೊದಲು ಕಡಿಮೆಯಿದ್ದ ಬಳಗದ ಸಂಖ್ಯೆ ಕಾಲೇಜಿನ ಈ ಹೊಸ ವಿಷಯದಿಂದಾಗಿ ಹೆಚ್ಚಾಗಿತ್ತು. ದೈಹಿಕವಾಗಿ ದುರ್ಬಲನಾದರೂ ಮಾನಸಿಕವಾಗಿ ಸದೃಢನಾಗಿದ್ದ ಸಂದೇಶನು ಕಾಲೇಜಿನ ಕಾರ್ಯದರ್ಶಿ ನಾರಾಯಣಪ್ಪನಿಗೆ ಈ ವಿಚಾರವನ್ನು ಮನದಟ್ಟು ಮಾಡಲು ನಿರ್ಧರಿಸಿದ. ಚರ್ಚೆಯಲ್ಲಿ ನಾನಾ ರೀತಿಯ ಸಲಹೆಗಳು ಬಂದವು. ಅದರಲ್ಲಿ ಸೌಮ್ಯಳು ತಿಳಿಸಿದ ಸಲಹೆ ಶ್ರೀನಿವಾಸನಿಗೆ ಸೂಕ್ತವೆನಿಸಿತು. ಅದು ಉಪವಾಸ ಸತ್ಯಾಗ್ರಹ. ವಿದ್ಯಾರ್ಥಿಗಳೆಲ್ಲಾ ಒಕ್ಕೊರಲಿನಿಂದ, ಉತ್ಸಾಹದಿಂದ ಒಪ್ಪಿಗೆ ನೀಡಿದರು. ಮೂರನೇ ದಿನದಿಂದಲೇ ಇವರ ಉಪವಾಸ ಸತ್ಯಾಗ್ರಹ ಶುರುವಾಯಿತು. ಲಿಂಗಾಚಾರಿ ಬರೀ ಹುಡುಗಾಟ, ಸಾಯಂಕಾಲ ಹೊಟ್ಟೆ ಚುರುಗುಟ್ಟಿದಾಗ ಎಲ್ಲಾ ಮನೆ ಕಡೆಗೆ ಹೋಗುತ್ತಾರೆ ಎಂದು ಅವರ ಗುಂಪಿನ ಕಡೆಗೆ ನಿರ್ಲಕ್ಷ್ಯ ನೋಟ ಬೀರಿ ಹೋದ. ಆದರೆ ಅವನ ಎಣಿಕೆ ಸಂದೇಶ ಹಾಗೂ ಅವನ ಖಾಯಂ ಬಳಗದವರ ವಿಚಾರದಲ್ಲಿ ತಪ್ಪಾಗಿತ್ತು.

ಉಪವಾಸ ಸತ್ಯಾಗ್ರಹದ ಸುದ್ದಿ ಎರಡನೇ ದಿನಕ್ಕೆ ನಾನಾ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಹುಡುಗರ ಉಪವಾಸ ಸತ್ಯಾಗ್ರಹದಿಂದ ತೀವ್ರ ಕಳವಳಕ್ಕೊಳಗಾಗಿದ್ದವರು ಶ್ರೀನಿವಾಸ. ಕಾಲೇಜಿನ ಆಡಳಿತ ವರ್ಗದವರು ನಡೆಸಿದ ಬಗೆ ಅವರಿಗೂ ಸಂಪೂರ್ಣ ಮಾಹಿತಿ ಇತ್ತು. ವಿದ್ಯಾರ್ಥಿಗಳು ತನ್ನ ಬಗ್ಗೆ ಹೊಂದಿರುವ ಒಳ್ಳೆಯ ಭಾವನೆಯನ್ನು ಅವರು ಗುರುತಿಸಿದ್ದರು. ಆದರೆ ಯಾವುದರ ಕಡೆಗೂ ಗಮನ ಕೊಡದೇ ತಾನಾಯಿತು, ತನ್ನ ತರಗತಿಯಾಯಿತು ಎಂಬಂತೆ ಇದ್ದುಬಿಟ್ಟರು. ಉಪವಾಸ ಸತ್ಯಾಗ್ರಹದ ಪರೋಕ್ಷ ರೂವಾರಿ ಶ್ರೀನಿವಾಸರೆ ಎಂದು ಲಿಂಗಾಚಾರಿ ಮುಂತಾದವರು ಆಪಾದಿಸತೊಡಗಿದರು. ಇದನ್ನು ಸಹ ತಲೆಗೆ ಹಾಕಿಕೊಳ್ಳದ ಶ್ರೀನಿವಾಸ್ ಬಸ್ಸುಗಳಿಗೆ ಕಲ್ಲು ಹೊಡೆಯದೆ, ಯಾವುದಕ್ಕೂ ಬೆಂಕಿ ಹಚ್ಚದೆ, ಈ ರೀತಿಯ ಪ್ರತಿಭಟನೆ ಅವರ ಅಂತರಂಗದಲ್ಲಿ ಬಾಲ್ಯದಲ್ಲಿ ತೀರಾ ಅಪ್ಯಾಯಮಾನವೆನಿಸಿದ್ದನ್ನು ನೆನಪಿಸಿಕೊಂಡರು. ಹಾಗೆಯೆ ವಿಚಾರಧಾರೆ ಬಳಗದ ಬಗ್ಗೆಯೂ ಹೆಮ್ಮೆ ಮೂಡದಿರಲಿಲ್ಲ. ಆದರೂ ಆ ಕಾಲದ ಅಂತರದಲ್ಲಿ ಇಂತಹ ಪ್ರತಿಭಟನೆಗಳು ಹೇಗೆ ಫಲಕಾರಿಯಾಗಬಲ್ಲವು ಎಂಬುದು ಚಿಂತೆಯಾಯಿತು. ವಿದ್ಯಾರ್ಥಿಗಳ ಪ್ರತಿಭಟನೆ ಕಾವು ಮಂತ್ರಿಗಳಿಗೂ ತಾಕಿತು. ಯಾವುದೇ ಪತ್ರಿಕಾಗೋಷ್ಠಿಗೆ ಹೋದರೂ ಪತ್ರಕರ್ತರಿಂದ ಈ ಉಪವಾಸ ಸತ್ಯಾಗ್ರಹದ ಬಗ್ಗೆ ಅವರು ಉತ್ತರಿಸಬೇಕಾಯಿತು. ಇದು ಅವರನ್ನು ತೀರಾ ಮುಜುಗರಕ್ಕೀಡು ಮಾಡಿತು. ಮಾರನೇ ದಿನವೇ ಕಾಲೇಜಿಗೆ ಹೋಗಬೇಕು ಎಂದು ತನ್ನ ಪಿ.ಎ.ಗೆ ಹೇಳಿದರು.
ನಾರಾಯಣಪ್ಪ ಬಂದಾಗ ಸುಸ್ತಾಗಿದ್ದರೂ, ಸಂದೇಶ ಮಂತ್ರಿಗಳಿಗೆ ತನ್ನ ಖಾಸಗಿ ಪತ್ರಿಕೆಗಳ ಲೇಖನವನ್ನು ಓದಿ ತಿಳಿಸಿದ. ದೃಶ್ಯ ಮಾಧ್ಯಮದವರು ಅದನ್ನು ಲೈವ್ ಟೆಲಿಕಾಸ್ಟ್ ಮಾಡುತ್ತಿದ್ದರು. ಮಂತ್ರಿಗಳು ಕಾಲೇಜಿನ ಸಿಬ್ಬಂದಿಗಳ ತುರ್ತು ಸಭೆಯೊಂದನ್ನು ಕರೆದು ಚರ್ಚೆ ನಡೆಸಿದರು. ಅದರಲ್ಲಿ ಸಂದೇಶನು ವಿದ್ಯಾರ್ಥಿಗಳ ಪರವಾಗಿ ಹೋದನು. ಎಲ್ಲಾ ಲೆಕ್ಕಾಚಾರಗಳನ್ನು ನೋಡಿದಾಗ ಸತ್ಯ ಬೆಳಕಿಗೆ ಬಂದಿತು. ಮಂತ್ರಿಗಳು ಲಿಂಗಾಚಾರಿಯಾದಿಯಾಗಿ ನಾಲ್ಕೈದು ಜನ ಸಿಬ್ಬಂದಿಗಳನ್ನು ಕಾಲೇಜಿನಿಂದ ಹೊರಹಾಕಿದರು.

ಇಷ್ಟೆಲ್ಲಾ ಆದ ಮೇಲೆ ತನ್ನ ಸುದೀರ್ಘ ರಾಜಕೀಯ ಜೀವನದ ಬಗ್ಗೆ ಅವರು ಯೋಚಿಸಿದರು. ಮೊದಲು ತಾನು ಹೊರಟದಾರಿ, ಈಗ ಬಂದು ತಲುಪಿರುವ ಸ್ಥಿತಿಯ ಬಗ್ಗೆ ಅಜಗಜಾಂತರ ವ್ಯತ್ಯಾಸವನ್ನು ಗಮನಿಸಿದರು. ತನ್ನನ್ನು ಸಾಮಾಜಿಕವಾಗಿ ಮುಜುಗರಕ್ಕೀಡು ಮಾಡಿದ ವಿಚಾರಧಾರೆ ಬಳಗದ ಬಗ್ಗೆ ಅಸಹನೆ ಮೊದಲಿಗೆ ಮೂಡಿದಂತಾದರೂ ಅವರು ಸತ್ಯಾಗ್ರಹಕ್ಕೆ ಕುಳಿತಾಗ ಬೇರೆ ಪಕ್ಷದವರು ಬಂದು ತನ್ನ ವಿರುದ್ಧ ವಿದ್ಯಾರ್ಥಿಗಳನ್ನು ಎತ್ತಿಕಟ್ಟಲು ನೋಡಿದಾಗ ಅದಕ್ಕೆ ಸೊಪ್ಪು ಹಾಕದೇ ತಮ್ಮ ಉದ್ದೇಶ ಈಡೇರಿಕೆಗಾಗಿ ಮಾತ್ರ ತನ್ನ ಪ್ರತಿಭಟನೆಯನ್ನು ಸೀಮಿತಗೊಳಿಸಿದ್ದು ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಅಭಿಮಾನವುಂಟು ಮಾಡಿತು.

ನಾರಾಯಣಪ್ಪ ಶ್ರೀನಿವಾಸರವರನ್ನೇ ಮತ್ತೆ ಪ್ರಾಂಶುಪಾಲರನ್ನಾಗಿ ಸೂಚಿಸಿದಾಗ ಶ್ರೀನಿವಾಸರವರು ಅದನ್ನು ನಯವಾಗಿಯೇ ತಿರಸ್ಕರಿಸಿ ಕೇವಲ ಅಧ್ಯಾಪಕರಾಗಿಯೇ ಮುಂದುವರೆಯಲು ನಿಶ್ಚಯಿಸಿದರು. ವಿಚಾರಧಾರೆ ಬಳಗದ ಉಪವಾಸ ಸತ್ಯಾಗ್ರಹ ರಾಜ್ಯದಲ್ಲೇ ಸುದ್ದಿ ಮಾಡಿತು. ಯಾವಾಗ ಶ್ರೀನಿವಾಸರವರು ಪ್ರಾಂಶುಪಾಲ ಹುದ್ದೆ ಬೇಡವೆಂದರೋ, ವಿಚಾರಧಾರೆ ಬಳಗವು ನೇರ ಅವರ ಹತ್ತಿರ ಹೋಗಿ ವಿದ್ಯಾರ್ಥಿಗಳ ಒಳಿತಿಗಾಗಿ ಕಾಲೇಜಿನ ಅಭ್ಯುದಯಕ್ಕಾಗಿ ತಾವೇ ಪ್ರಾಂಶುಪಾಲರಾಗಬೇಕೆಂದು ಒತ್ತಾಯ ಹಾಕಿದರು. ಇದಕ್ಕೆ ಒಪ್ಪದಿದ್ದರೆ...? ಎಂದು ಸಂದೇಶನು ಬೆದರಿಸುವ ದನಿಯಲ್ಲಿ ಹೇಳಿದಾಗ ಶ್ರೀನಿವಾಸರ ಕಣ್ಣು ಹನಿಗೂಡಿತು.