You are hereForums / ಸಾಮಾಜಿಕ ವಿಚಾರಗಳು / ಭಯೋತ್ಪಾದನಾ ವಿರೋಧಿ ಅಭಿಯಾನದ ಜಿಜ್ಞಾಸೆ

ಭಯೋತ್ಪಾದನಾ ವಿರೋಧಿ ಅಭಿಯಾನದ ಜಿಜ್ಞಾಸೆ


By DIVAKAR N - Posted on 16 February 2009

೨೬/೧೧ರ ಮುಂಬೈ ದಾಳಿ ದೇಶದ ಜನತೆಯನ್ನು ಕಂಗೆಡಿಸಿರುವುದು ಮಾತ್ರವಲ್ಲದೆ ಆಳ್ವಿಕರನ್ನು ಎಚ್ಚರಿಸಿರುವುದೂ ನಿಜ. ಕಳೆದ ಹಲವು ವರ್ಷಗಳಲ್ಲಿ ಸಂಭವಿಸಿರುವ ಭಯೋತ್ಪಾದಕರ ದಾಳಿಯಲ್ಲಿ ಸಾವಿರಾರು ಮಂದಿ ಹತರಾಗಿದ್ದರೂ ಭಯೋತ್ಪಾದನೆಯ ಪಿಡುಗನ್ನು ಸೂಕ್ತರೀತಿಯಲ್ಲಿ ಗ್ರಹಿಸದೆ ಹೋದ ಆಳುವ ವರ್ಗಗಳನ್ನು ಮುಂಬೈ ಘಟನೆ ಬಡಿದೆಬ್ಬಿಸಿದೆ. ಏಕೆಂದರೆ ೨೬/೧೧ರ ಗುರಿ ದೇಶದ ಆರ್ಥಿಕ ನರಕೇಂದ್ರವಾಗಿದ್ದು ದಾಳಿಗೆ ಗುರಿಯಾದ ಕಟ್ಟಡಗಳು ಈ ಕೇಂದ್ರದ ಪ್ರಮುಖ ಸಂಕೇತವಾಗಿವೆ. ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿರುವುದರಿಂದ ದೇಶಾದ್ಯಂತ ಯುದ್ಧೋನ್ಮಾದವೂ ಸೃಷ್ಟಿಯಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಭಯೋತ್ಪಾದನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭದ್ರತಾ ವ್ಯವಸ್ಥೆಯಲ್ಲೂ ಸುಧಾರಣೆ ಕಂಡುಬಂದಿದೆ. ಕೇವಲ ಅಮಾಯಕ ಜನ ಸಮುದಾಯಗಳನ್ನು ಗುರಿ ಮಾಡುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಈಗ ದೇಶದ ವಿರುದ್ಧ ಸಮರ ಸಾರುವ ಮಟ್ಟಕ್ಕೆ ಬೆಳೆದಿರುವುದು ಸ್ಪಷ್ಟವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಜಾಲ ಹರಡಿರುವುದು ಅಲ್ಲಗಳೆಯಲಾಗದ ಸತ್ಯ. ಹಾಗಾಗಿ ಭಾರತ ಸರ್ಕಾರದ ಪ್ರತಿಯೊಂದು ನಿಲುವು ಮತ್ತು ಕ್ರಮಗಳೂ ಎಚ್ಚರಿಕೆಯಿಂದ ಕೂಡಿರುವುದು ಅಗತ್ಯವಾಗಿದೆ.

ಆಂತರಿಕವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಮತ್ತು ಅಂತಹ ಸಮಾಜಘಾತುಕ ಸಂಘಟನೆಗಳ ವಿರುದ್ಧ ಎಚ್ಚರಿಕೆ ವಹಿಸುವುದು ಈ ಸಂದರ್ಭದಲ್ಲಿ ಸ್ವಾಗತಾರ್ಹ. ಇದು ದೇಶದ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಅಳಿವು ಉಳಿವಿನ ಪ್ರಶ್ನೆ. ಮುಂಬೈ ದಾಳಿಯಲ್ಲಿ ಸ್ಥಳೀಯರ ಪಾತ್ರ ಇತ್ತೋ ಇಲ್ಲವೋ ಎನ್ನುವುದಕ್ಕಿಂತಲೂ, ಭಾರತೀಯ ಸಮಾಜದಲ್ಲಿ ಭಯೋತ್ಪಾದನೆ ನುಸುಳಿರುವುದು ಗಂಭೀರ ಸಮಸ್ಯೆಯಾಗಿದೆ. ಮಲೆಗಾಂವ್, ಹುಬ್ಬಳ್ಳಿ ಮತ್ತಿತರ ಪ್ರಕರಣಗಳ ಹಿನ್ನೆಲೆಯಲ್ಲಿ ನೋಡಿದಾಗ ದೇಶದ ಅಂತರಿಕ ಭದ್ರತೆ ಅಪಾಯದಲ್ಲಿರುವುದು ಸ್ಪಷ್ಟವಾಗುತ್ತದೆ. ಈ ಸನ್ನಿವೇಶದಲ್ಲಿ ಯಾವುದೇ ಪ್ರಜಾತಾಂತ್ರಿಕ ಸರ್ಕಾರವಾದರೂ ಎರಡು ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು. ಮೊದಲನೆಯದಾಗಿ ಆಂತರಿಕ ಭದ್ರತಾ ವ್ಯವಸ್ಥೆ, ಬೇಹುಗಾರಿಕೆಯ ಗುಣಮಟ್ಟವನ್ನು ಉತ್ತಮಗೊಳಿಸುವುದು, ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಿ ನಿಯಂತ್ರಿಸುವುದು ಹಾಗು ಭಯೋತ್ಪಾದನೆಯ ಘಟನೆಗಳಿಗೆ ರಾಜಕೀಯ ಲೇಪನ ನೀಡದೆ ನಿಷ್ಪಕ್ಷಪಾತವಾಗಿ, ಕಾನೂನು ರೀತ್ಯಾ ಸ್ಪಂದಿಸುವುದು. ಇದು ಸರ್ಕಾರದ ವತಿಯಿಂದ ಕೈಗೊಳ್ಳಬಹುದಾದ ಅಧಿಕೃತ ಕ್ರಮಗಳು. ಎರಡನೆಯದಾಗಿ ಸರ್ಕಾರವಾಗಲೀ, ಆಡಳಿತ ಯಂತ್ರವಾಗಲೀ ಮಾಡಬೇಕಾದ ಮುಖ್ಯ ಕೆಲಸವೆಂದರೆ ಜನಸಾಮಾನ್ಯರಲ್ಲಿ ದೈರ್ಯ ಮತ್ತು ವಿಶ್ವಾಸವನ್ನು ತುಂಬುವುದು. ಈ ನಿಟ್ಟಿನಲ್ಲಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಮೊದಲು ಜನತೆಯಲ್ಲಿ ಭಯೋತ್ಪಾದನೆ ಮತ್ತು ಅದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ಸೂಕ್ಷ್ಮತೆಯನ್ನು ಉಂಟುಮಾಡಬೇಕಾಗುತ್ತದೆ. ಜನಸಮುದಾಯಗಳಲ್ಲಿ ಭೀತಿ ಸೃಷ್ಟಿಸದೆ ವಿಶ್ವಾಸ ಮೂಡಿಸಬೇಕಾಗುತ್ತದೆ. ದ್ವೇಷ, ಅಸೂಯೆ, ಅಸಹಿಷ್ಣುತೆಗಳನ್ನು ಹೋಗಲಾಡಿಸಬೇಕಾಗುತ್ತದೆ. ನಾವು ಭಾರತೀಯರು ಎಂಬ ಕಲ್ಪನೆಗಿಂತಲೂ ಉನ್ನತವಾದ ನಾವು ಮನುಜರು ಎಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಬೇಕಾಗುತ್ತದೆ. ಪರಸ್ಪರ ಪ್ರೀತಿಸುವ, ಆದರಿಸುವ, ಅಪ್ಪಿಕೊಳ್ಳುವ ಮಾನವೀಯ ಸಂವೇದನಾಶೀಲ ಸಂಸ್ಕೃತಿಯನ್ನು ಜನರ ಮನದಾಳದಲ್ಲಿ ಶಾಶ್ವತವಾಗಿ ನೆಡುವುದು ಈ ಸಂದರ್ಭದಲ್ಲಿ ಅತ್ಯವಶ್ಯ.

ಮನುಕುಲಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಎಲ್ಲ ಧರ್ಮಗಳನ್ನೂ ಮೀರಿದ ಮಾನವ ಧರ್ಮಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಇದೆ. ಈ ಸಂಸ್ಕೃತಿ ಜನಪರವಾಗಿದ್ದು ಸಮಾಜದ ಎಲ್ಲ ವರ್ಗಗಳ ಜನರನ್ನೂ ತನ್ನ ಬಾಹುಗಳಲ್ಲಿ ಅಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಗುಡಿ ಮಸೀದಿ ಚರ್ಚುಗಳನ್ನು ಬಿಟ್ಟು ಹೊರಬಂದ ಮಾನವೀಯ ಸಂವೇದನೆಗಳು ಈ ಸಂಸ್ಕೃತಿಯ ಜೀವಾಳ. ಜಾತಿ-ಮತ-ಕುಲ-ಪಂಥಗಳ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಮುನ್ನಡೆಯುವ ಈ ಸಂಸ್ಕೃತಿಯೇ ಮನುಕುಲದ ಅಂತಃಸತ್ವ. ವಿಶ್ವದೆಲ್ಲೆಡೆ ನಾಗರಿಕ ಸಮಾಜದ ಆತ್ಮಸ್ಥೈರ್‍ಯವನ್ನು ಕುಗ್ಗಿಸಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಎದುರಿಸಲು, ಶಸ್ತ್ರಾಸ್ತ್ರಗಳಿಗಿಂತಲೂ ಈ ಸಾಂಸ್ಕೃತಿಕ ಅರಿವು ಹೆಚ್ಚು ಉಪಯುಕ್ತವಾಗುತ್ತದೆ. ಭಯೋತ್ಪಾದನೆಗೆ-ಭಯೋತ್ಪಾದಕರಿಗೆ ಯಾವುದೇ ಧರ್ಮ ಇಲ್ಲ ಎಂಬ ಮಾತು ಕೇಳಿಬರುತ್ತದೆ, ಇದು ಸತ್ಯವೂ ಹೌದು. ಆದರೆ ಭಯೋತ್ಪಾದನೆಗೆ ಸಂಸ್ಕೃತಿಯೂ ಇರುವುದಿಲ್ಲ. ಸಂವೇದನೆ ಇರುವುದಿಲ್ಲ. ಮಾನವತೆಗೆ ಅಲ್ಲಿ ಅವಕಾಶವಿರುವುದಿಲ್ಲ. ಏಕೆಂದರೆ ಭಯೋತ್ಪಾದನೆಯ ಮೂಲ ತಳಹದಿ ದ್ವೇಷ, ಅಸಹನೆ, ಹಿಂಸೆ, ಮತ್ಸರ, ಮತಾಂಧತೆ, ಸಮರಶೀಲತೆ ಮತ್ತು ಮಹತ್ವಾಕಾಂಕ್ಷೆ ಈ ಅರಿಷಡ್ವರ್ಗಗಳನ್ನು ಹೊಂದಿರುವ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇವೆಲ್ಲವನ್ನೂ ಮೀರಿ ನಿಂತಲ್ಲಿ ವಿಶ್ವಮಾನವ ಸಂಸ್ಕೃತಿಯತ್ತ ಮುನ್ನಡೆಯಬಹುದು. ಭಯೋತ್ಪಾದಕತೆಯನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಈ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

ಅಭಿಯಾನದ ಅಗತ್ಯತೆ

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ರಾಜ್ಯಾದ್ಯಂತ ಭಯೋತ್ಪಾದನೆ ವಿರೋಧಿ ಅಭಿಯಾನ ನಡೆಸಲಾಗುತ್ತಿದ್ದು, ರಾಜಕೀಯ ಕಾರಣಗಳಿಗಾಗಿ ತೀವ್ರ ಪ್ರತಿರೋಧ ಎದುರಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಎಲ್ಲ ಕಾಲೇಜುಗಳಲ್ಲೂ ಈ ಅಭಿಯಾನವನ್ನು ಹಮ್ಮಿಕೊಂಡಿರುವುದು, ಕೇಸರೀಕರಣದ ಆರೋಪಗಳಿಂದ ಆವೃತವಾಗಿದೆ. ಈ ಕೇಸರೀಕರಣ ಪ್ರಕ್ರಿಯೆಯನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳೂ ತಮ್ಮ ತೋಳ್ಬಲ ಪ್ರದರ್ಶನದಿಂದ ಕಾರ್ಯಕ್ರಮಗಳಿಗೆ ಅಡ್ಡಿ ಉಂಟುಮಾಡುತ್ತಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ತೀವ್ರ ಸಂದಿಗ್ಧತೆಯನ್ನು ಸೃಷ್ಟಿಸಿದೆ. ಇಷ್ಟು ದಿನ ನಿರುದ್ಯೋಗಿ ಯುವಕರನ್ನು ಮಾತ್ರ ತಮ್ಮ ರಾಜಕೀಯ ಚದುರಂಗದಾಟದ ದಾಳಗಳಂತೆ ಉಪಯೋಗಿಸುತ್ತಿದ್ದ ರಾಜಕೀಯ ಪಕ್ಷಗಳು ಈಗ ವಿದ್ಯಾರ್ಥಿ ಸಮುದಾಯಕ್ಕೆ ಲಗ್ಗೆ ಹಾಕಿರುವುದು ದುರದೃಷ್ಟಕರ ಬೆಳವಣಿಗೆ. ರಾಜ್ಯ ಸರ್ಕಾರದ ಅಭಿಯಾನವನ್ನು ಹೀಗೆ ವಿಶ್ಲೇಷಿಸಬಹುದು.

ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ಸೂಕ್ಷ್ಮಗ್ರಾಹಿಗಳನ್ನಾಗಿ ಮಾಡುವ ಉದ್ದೇಶ ಏನೆಂದು ಸರ್ಕಾರಕ್ಕೆ ಸ್ಪಷ್ಟವಾಗಿರಬೇಕು. ಮುಂಬೈ ದಾಳಿಯನ್ನೇ ಕೇಂದ್ರಬಿಂದುವನ್ನಾಗಿರಿಸಿಕೊಂಡು ಭಯೋತ್ಪಾದನೆಯನ್ನು ವಿಶ್ಲೇಷಿಸಿದಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಗೊಂದಲವೇ ಹೆಚ್ಚಾಗುತ್ತದೆ. ಕಳೆದ ಮೂರು ದಶಕಗಳ ಭಾರತದ ಇತಿಹಾಸದಲ್ಲಿ ಸಂಭವಿಸಿರುವ ಅನೇಕ ವಿಧ್ವಂಸಕ ಘಟನೆಗಳು, ಅವುಗಳ ಹಿನ್ನೆಲೆ, ರಾಜಕೀಯ ಬೆಳವಣಿಗೆ, ಆಧುನಿಕ ನಾಗರಿಕ ಸಮಾಜವನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆ, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಸೃಷ್ಟಿಯಾಗಲು ಇದ್ದ ಕಾರಣಗಳು, ಭಾರತೀಯ ಸಮಾಜವನ್ನು ಕಾಡುತ್ತಿರುವ ಹಲವು ರೀತಿಯ ಸಮಸ್ಯೆಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆಲೆ ಕಂಡಿರುವ ಭಯೋತ್ಪಾದನೆಯ ಲಕ್ಷಣಗಳು ಈ ಎಲ್ಲ ಅಂಶಗಳನ್ನೂ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡದಿದ್ದರೆ, ವಿಚಾರಸಂಕಿರಣದ ಭಾಷಣಗಳು ಕಾಗಕ್ಕ ಗೂಬಕ್ಕ ಕಥೆಗಳಾಗಿಬಿಡುತ್ತವೆ. ಜನಸಾಮಾನ್ಯರ ದೈನಂದಿನ ಬದುಕಿನಲ್ಲಿ ಸಂಭವಿಸುವ ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳು ಮತ್ತು ಇದರಿಂದ ಉಂಟಾಗುವ ಅಸಮಾನತೆಗಳು ಸಮಾಜವನ್ನು ಹೇಗೆ ತಪ್ಪುದಾರಿಗೆಳೆಯುತ್ತವೆ ಎಂಬ ಅಂಶವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡದೆ ಹೋದಲ್ಲಿ ಭಯೋತ್ಪಾದನೆಯ ಬಗ್ಗೆ ಅರಿವು ಮೂಡಿಸಲಾಗುವುದಿಲ್ಲ.

ಯಾವುದೇ ವ್ಯಕ್ತಿಯ ಜೀವನದಲ್ಲಿ ವಿದ್ಯಾರ್ಥಿ ದೆಸೆ ಒಂದು ಮಹತ್ತರವಾದ ಘಟ್ಟ. ಅಲ್ಲಿ ಮನಸ್ಸುಗಳು ಅರಳುವ ಪ್ರಕ್ರಿಯೆಯಲ್ಲಿರುತ್ತವೆ ಆದರೆ ಪಕ್ವವಾಗಿರುವುದಿಲ್ಲ. ಈ ಮೊಗ್ಗುಗಳನ್ನು ಅರಳಿಸುವಷ್ಟೇ ಸುಲಭವಾಗಿ ಕಿವುಚಿ ನಾಶಪಡಿಸಲೂಬಹುದು. ಎಷ್ಟೇ ವೈಜ್ಞಾನಿಕ ಪ್ರಗತಿಯಾಗಿದ್ದರೂ, ಜ್ಞಾನಾರ್ಜನೆಯ ಬಾಗಿಲುಗಳು ಮುಕ್ತವಾಗಿದ್ದರೂ, ವಿದ್ಯಾರ್ಥಿಗಳ ಮನಸ್ಸು ಅಪಕ್ವವಾಗಿಯೇ ಇರುತ್ತದೆ. ಈ ಮನಸ್ಸುಗಳನ್ನು ಒಂದು ನಿರ್ದಿಷ್ಟ ಚಿಂತನೆಗೊಳಪಡಿಸಿ, ಸಾಮಾಜಿಕ ಸೌಹಾರ್ದತೆ ಮತ್ತು ಮನುಕುಲದ ಏಳಿಗೆಗೆ ಪೂರಕವಾಗಿ ಬೆಳೆಸುವುದು ಪ್ರಜ್ಞಾವಂತ ಸಮಾಜದ ಆದ್ಯ ಕರ್ತವ್ಯ. ಹಾಗಾಗಿ ಈ ಸಮುದಾಯವನ್ನು ಉದ್ದೇಶಿಸಿ ಭಯೋತ್ಪಾದನಾ ವಿರೋಧಿ ಅಭಿಯಾನವನ್ನು ಹಮ್ಮಿಕೊಂಡಿರುವ ಸಂದರ್ಭದಲ್ಲಿ ಸರ್ಕಾರವಾಗಲೀ, ಆಯೋಜಕರಾಗಲೀ ಎಚ್ಚರದ ಹೆಜ್ಜೆಗಳನ್ನಿಡಬೇಕಾಗುತ್ತದೆ. ಇಲ್ಲಿ ಸರ್ಕಾರದ ಉದ್ದೇಶವೊಂದೆ ಮುಖ್ಯವಾಗುವುದಿಲ್ಲ, ಅದರ ಹಿಂದಿನ ಕಾರ್ಯಸೂಚಿಯೂ ಮಹತ್ವ ಪಡೆಯುತ್ತದೆ. ಭಯೋತ್ಪಾದನಾ ವಿರೋಧಿ ಅಭಿಯಾನ ಸರ್ಕಾರದ ಕಾರ್ಯಕ್ರಮವೇ ಆಗಿದ್ದಲ್ಲಿ ಅದಕ್ಕೆ ಒಂದು ನಿರ್ದಿಷ್ಟ ಪಠ್ಯವಿಷಯ ಇರಬೇಕಾಗಿತ್ತು. ಈ ಪಠ್ಯವನ್ನು ಎಲ್ಲ ರಾಜಕೀಯ ಪಕ್ಷಗಳೂ ಸರ್ವಾನುಮತದಿಂದ ಅಂಗೀಕರಿಸಿ, ಎಲ್ಲೆಡೆ ಒಂದೇ ರೀತಿಯ ಸಂಕಿರಣಗಳನ್ನು ನಡೆಸಬೇಕಾಗಿತ್ತು. ವಿದ್ಯಾರ್ಥಿ ಸಂಘಟನೆಗಳನ್ನೂ ಒಳಗೊಂಡಂತೆ ಕಾರ್ಯಕ್ರಮವನ್ನು ಏರ್ಪಡಿಸಬೇಕಿತ್ತು. ಸಾರ್ವಜನಿಕರಿಗೂ ಈ ಪಠ್ಯ ವಿಷಯವನ್ನು ತಿಳಿಸಬೇಕಾಗಿತ್ತು.

ಆದರೆ ಅಭಿಯಾನದಲ್ಲಿ ನಡೆದಿರುವುದೇ ಬೇರೆ. ಆಳುವ ಪಕ್ಷಕ್ಕೆ ಸೇರಿದ ವಿದ್ಯಾರ್ಥಿ ಸಂಘಟನೆ ಇಡೀ ಕಾರ್ಯಕ್ರಮದ ರೂವಾರಿಯಾಗಿದೆ. ಚುನಾವಣೆಗಳ ಸಮಯದಲ್ಲಿ, ಧಾರ್ಮಿಕ ಸಂಘರ್ಷಗಳ ಸಮಯದಲ್ಲಿ ವೈಷಮ್ಯ ಹರಡುವ ಅನೇಕ ನಾಯಕರು ಈ ಸಂಕಿರಣಗಳಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದಾರೆ. ರಾಷ್ಟ್ರದ ಏಕತೆಗಾಗಿ ನಡೆಸಿರುವ ಅಭಿಯಾನದಲ್ಲಿ ರಾಷ್ಟ್ರದ ಸಂಕೇತದ ಬದಲು, ಒಂದು ಮತೀಯ ಸಂಘಟನೆಯ ಸಂಕೇತಗಳು ರಾರಾಜಿಸಿವೆ. ಇಡೀ ಆಭಿಯಾನದಲ್ಲಿ ಧರ್ಮದ ನೆಲೆಗಟ್ಟಿನಲ್ಲೇ ಭಯೋತ್ಪಾದನೆಯನ್ನು ವಿಶ್ಲೇಷಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಅನ್ಯರ ಕಲ್ಪನೆಯನ್ನು ಶಾಶ್ವತವಾಗಿ ಮೂಡಿಸುವ ಯತ್ನ ನಡೆದಿದೆ. ಭಯೋತ್ಪಾದನಾ ಚಟುವಟಿಕೆಗಳನ್ನು ಪ್ರಸ್ತಾಪಿಸುವಾಗಲೂ ಸಾಮಾಜಿಕ-ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆ ಮಾಡದೆ ಧಾರ್ಮಿಕ ಚಿಂತನೆಗಳಿಗೇ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಅಭಿಯಾನಕ್ಕೆ ಮೆರಗು ತರಲು ರಾಷ್ಟ್ರ ನಾಯಕರನ್ನು ಸಾಂಕೇತಿಕವಾಗಿ ಬಳಸಿಕೊಳ್ಳುವಾಗಲೂ, ಭಾವುಕತೆಗೇ ಹೆಚ್ಚು ಒತ್ತು ನೀಡಿ, ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಸಂದೀಪ್ ಉನ್ನಿಕೃಷ್ಣನ್ ಅವರನ್ನು ಬಳಸಿಕೊಳ್ಳಲಾಗಿದೆ.

ವಿವೇಕಾನಂದ, ಬೋಸ್ ಮತ್ತು ಭಗತ್ ಸಿಂಗ್ ಅವರುಗಳು ಭಯೋತ್ಪಾದನೆಯನ್ನು ಕಂಡವರಲ್ಲ. ಅವರ ಹೋರಾಟಗಳು ವಸಾಹತುಶಾಹಿಯ ದಬ್ಬಾಳಿಕೆಯ ವಿರುದ್ಧ ನಡೆದಿತ್ತು. ವಸಾಹತು ಶಾಹಿಗಳ ದೃಷ್ಟಿಯಲ್ಲಿ ಬೋಸ್ ಮತ್ತು ಭಗತ್ ಸಿಂಗ್ ಉಗ್ರಗಾಮಿಗಳಾಗಿದ್ದವರಲ್ಲವೇ? ಬಂಗಾಲದ ಮೇಲ್ಜಾತಿಯವರ ದೃಷ್ಟಿಯಲ್ಲಿ ವಿವೇಕಾನಂದರೂ ದ್ರೋಹಿಯಾಗಿದ್ದರಲ್ಲವೇ? ವಸಾಹತುಶಾಹಿಯ ವಿರುದ್ಧ ಹೋರಾಡಿದ ನಾಯಕರ ಉಪನ್ಯಾಸಗಳನ್ನು, ಅಂದಿನ ಕಾಲಘಟ್ಟದ ಧಾರ್ಮಿಕ ಸ್ಥಿತ್ಯಂತರಗಳಿಗನುಗುಣವಾಗಿ ವಿವೇಕಾನಂದರು ನೀಡಿದ ಉಪದೇಶಗಳನ್ನು, ಇಂದಿನ ಭಯೋತ್ಪಾದನೆಯ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುವುದು ಬಾಲಿಶವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಹೆಚ್ಚಾಗುತ್ತದೆ. ಬಹುಶಃ ಈ ಮಹಾನ್ ನಾಯಕರು ಇಂದು ಬದುಕಿದ್ದಿದ್ದಲ್ಲಿ ಭಯೋತ್ಪಾದನೆಯನ್ನು ಇದೇ ದೃಷ್ಟಿಕೋನದಲ್ಲಿ ಗ್ರಹಿಸುತ್ತಿದ್ದರೇ? ಎಂಬ ಮೂರ್ತ ಪ್ರಶ್ನೆಗೆ ಅಭಿಯಾನದ ಆಯೋಜಕರು ಉತ್ತರಿಸಬೇಕಾಗಿದೆ. ಬಹುಶಃ ವಿವೇಕಾನಂದರು ಇಂದಿನ ದಲಿತರ ಶೋಷಣೆ ಮತ್ತು ದಮನವನ್ನೇ ಭಯೋತ್ಪಾದನೆಯೆಂದು ವಿಶ್ಲೇಷಿಸುತ್ತಿದ್ದರೇನೋ.

ಹಾಗಾಗಿ ಸೂಕ್ಷ್ಮ ಮತಿಗಳಾದ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ, ಸ್ನೇಹ, ಪ್ರೇಮ, ವಿಶ್ವಾಸಗಳನ್ನು ಮೂಡಿಸುವಂತಹ ಅಭಿಪ್ರಾಯಗಳು ಅಭಿಯಾನದ ಕೇಂದ್ರಬಿಂದುವಾಗಿರಬೇಕಿತ್ತು. ಈಗಾಗಲೇ ಕಾಲೇಜುಗಳಲ್ಲಿ ಜಾತಿ,ಧರ್ಮ, ಪ್ರಾಂತ್ಯ, ಭಾಷೆ ಹೀಗೆ ಅಸ್ಮಿತೆಗಳನ್ನಾಧರಿಸಿ ವಿದ್ಯಾರ್ಥಿಗಳು ಸಮಾಜದಿಂದ ವಿಮುಖರಾಗುತ್ತಿದ್ದಾರೆ. ಹೊರಗಿನ ಪ್ರಪಂಚದಲ್ಲಿ ತಮ್ಮ ಭವಿಷ್ಯಕ್ಕೆ ಮಾದರಿಯಾಗಬಲ್ಲ ಉನ್ನತ ಆದರ್ಶಗಳೇ ಇಲ್ಲದಿರುವುದು ವಿದ್ಯಾರ್ಥಿಗಳನ್ನು ಕಂಗೆಡಿಸುತ್ತಿದೆ. ಸ್ನೇಹದ ಬಳ್ಳಿ ಚಿಗುರಿ ಪ್ರೇಮಾಂಕುರ ಸೃಷ್ಟಿಯಾಗುವ ಓರಿಗೆಯಲ್ಲಿ ವಿದ್ಯಾರ್ಥಿಗಳಲ್ಲಿ ನಾವು-ಅವರು ಎಂಬ ವಿಷಬೀಜವನ್ನು ಬಿತ್ತಲಾಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿ ಅಗತ್ಯವಾಗಿ ಇರಬೇಕಾದ ಮಾನವೀಯ ಸಂವೇದನಗಳ ಸ್ಥಾನವನ್ನು ಧಾರ್ಮಿಕ ಅಸ್ಮಿತೆಗಳು ಆಕ್ರಮಿಸಿಕೊಂಡಿವೆ. ಆಧುನಿಕ ಸಮಾಜಕ್ಕೆ ಅವಶ್ಯವಾದ ಉನ್ನತ ಧ್ಯೇಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಅವಶ್ಯಕತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಸಂಪ್ರದಾಯವಾದ ಎಲ್ಲೆಡೆ ಪಸರಿಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಧರ್ಮಗಳ ಮೂಲಭೂತವಾದಿ ಸಂಘಟನೆಗಳೂ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತವೆ.

ಈ ಅಭಿಯಾನವನ್ನು ರಾಜಕೀಯ ದೃಷ್ಟಿಕೋನದಿಂದಲೇ ವಿರೋಧಿಸುವುದರ ಬದಲು, ಅಭಿಯಾನಕ್ಕೆ ಒಂದು ವಿಭಿನ್ನ ಸ್ವರೂಪ ನೀಡುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡಬಹುದಿತ್ತು. ಅಭಿಯಾನಕ್ಕೆ ತಡೆ ಒಡ್ಡಿ, ಕಾಲೇಜು ವಿದ್ಯಾರ್ಥಿಗಳ ಮೇಲೆ ಆಕ್ರಮಣ ಮಾಡಿ, ಕುಲಪತಿಗಳ ಕಛೇರಿಯನ್ನು ಧ್ವಂಸ ಮಾಡುವುದೂ ಒಂದು ರೀತಿಯ ಭಯೋತ್ಪಾದನೆಯೇ ಅಲ್ಲವೇ. ಪಬ್ ಮೇಲೆ ದಾಳಿ ಮಾಡಿದ ಶ್ರೀರಾಮಸೇನೆಗೂ, ಕಾಂಗ್ರೆಸ್ ಪಕ್ಷದ ಗೂಂಡಾಗಿರಿಗೂ ವ್ಯತ್ಯಾಸವೇನಿದೆ? ಸರ್ಕಾರ ಕೇಸರೀಕರಣ ಪ್ರಕ್ರಿಯೆಯಲ್ಲಿ ತೊಡಗಿದ್ದೇ ಹೌದೆಂದರೆ, ಅಭಿಯಾನಗಳಲ್ಲಿ ಭಾಗವಹಿಸಿ, ಅಲ್ಲಿನ ನ್ಯೂನತೆಯನ್ನು ಜನತೆಯ ಮುಂದಿಡಬಹುದಿತ್ತು. ಸರ್ಕಾರದ ಗುಪ್ತ ಕಾರ್ಯಸೂಚಿಯನ್ನು ಬಹಿರಂಗ ಪಡಿಸಬಹುದಿತ್ತು. ವಿದ್ಯಾರ್ಥಿಗಳಿಗೆ ಪ್ರಜಾತಾಂತ್ರಿಕ ರೀತಿಯಲ್ಲಿ ಭಯೋತ್ಪಾದನೆಯ ವಿರುದ್ಧ ಗ್ರಹಿಕೆ ಮೂಡುವಂತಹ ಉನ್ನತ ಆದರ್ಶಗಳ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು. ಆದರೆ ರಾಜ್ಯದಲ್ಲಿ ನಡೆದಿರುವುವ ಘಟನೆಗಳು ತದ್ವಿರುದ್ಧವಾಗಿದ್ದು, ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ, ವಿದ್ಯಾರ್ಥಿ ಸಮುದಾಯ ರಾಜಕೀಯ ಷಡ್ಯಂತ್ರಗಳಿಗೆ ಬಲಿಪಶುವಾಗಿದೆ.

ವಿದ್ಯಾರ್ಥಿ ಸಮುದಾಯಕ್ಕೆ, ಯುವಜನತೆಗೆ ಕೆಂಪು, ಕೇಸರಿಗಳಿಗಿಂತಲೂ ಹೆಚ್ಚಾಗಿ, ಉನ್ನತಾದರ್ಶಗಳ ಉತ್ತಮ ಸಮಾಜದ ನಿರ್ಮಾಣಕ್ಕೆ ಅನುಗುಣವಾದ ಹಸಿರು ನಿಶಾನೆ ಅಗತ್ಯವಾಗಿದೆ. ದೇಶದ ದುಡಿಯುವ ಜನತೆ, ಶ್ರಮಜೀವಿ ವರ್ಗಗಳು, ಮಹಿಳೆಯರು, ದಮನಿತ ಸಮುದಾಯಗಳು, ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ. ಭಯೋತ್ಪಾದನೆ ಸಾಮಾಜಿಕ ಪಿಡುಗಿನ ಲಕ್ಷಣ ಎಂದು ವಿದ್ಯಾರ್ಥಿಗಳಿಗೆ ಮನದಟ್ಟಾಗಬೇಕಾಗಿದೆ. ಭಯೋತ್ಪಾದನೆಯನ್ನು ಎದುರಿಸಲು ಧರ್ಮ, ಜಾತಿಗಳ ಅಸ್ಮಿತೆಗಳಿಗಿಂತಲೂ, ಮಾನವೀಯ ಹೃದಯ ವೈಶಾಲ್ಯ ಅಗತ್ಯವೆಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ. ಹಿಂದೂ, ಪಾಶ್ಚಿಮಾತ್ಯ, ಇಸ್ಲಾಂ ಸಂಸ್ಕೃತಿಗಿಂತಲೂ ಹೆಚ್ಚಾಗಿ, ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಮತ್ತು ಮೆಚ್ಚಿಕೊಳ್ಳುವ ಮಾನವೀಯ ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಮೂಡಬೇಕಾಗಿದೆ. ಈ ದೃಷ್ಟಿಯಿಂದ ಒಂದು ಸಧೃಡ, ಸೌಹಾರ್ದಯುತ, ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ನಾಳಿನ ಪ್ರಜೆಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಮುಂದುವರೆಯುವುದಾದಲ್ಲಿ ಭಯೋತ್ಪಾದನಾ ವಿರೋಧಿ ಅಭಿಯಾನ ಸಾರ್ಥಕತೆ ಪಡೆಯುತ್ತದೆ.

ನಾ ದಿವಾಕರ.