You are hereವಿಚಾರಮಂಟಪ.ನೆಟ್‌ನ ಲೇಖನ ಸ್ಪರ್ಧೆಯ ಫಲಿತಾಂಶ
ವಿಚಾರಮಂಟಪ.ನೆಟ್‌ನ ಲೇಖನ ಸ್ಪರ್ಧೆಯ ಫಲಿತಾಂಶ
ವಿಚಾರಮಂಟಪ.ನೆಟ್ ಗ್ರಾಮೀಣ/ರೈತ ವಿಷಯಗಳಿಗೆ ಮತ್ತು ಐಟಿ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಲೇಖನಗಳನ್ನು ಆಹ್ವಾನಿಸಿತ್ತು. ಆ ಆಹ್ವಾನಕ್ಕೆ ಒಟ್ಟು ನಾಲ್ಕು ಲೇಖನಗಳು ಬಂದಿದ್ದವು. ಹೆಚ್ಚಿಗೆ ಲೇಖನಗಳು ಬಂದರೆ ಕನ್ನಡದ ಒಂದಿಬ್ಬರು ಪ್ರಮುಖ ಲೇಖಕರ ತೀರ್ಪುಗಾರ ಸಮಿತಿ ಏರ್ಪಡಿಸಬೇಕು ಎಂದುಕೊಂಡಿದ್ದೆ. ಆದರೆ ಬಂದಿರುವ ಲೇಖನಗಳ ಸಂಖ್ಯೆಯನ್ನು ಗಮನಿಸಿ, ಈ ಲೇಖನಗಳ ಕಿರು ಪರಿಚಯವನ್ನು ನಾನೆ ಮಾಡಿಕೊಟ್ಟು ನನಗೆ ಸರಿತೋರಿದ ಮಾನದಂಡದ ಮೇಲೆ ಫಲಿತಾಂಶ ಪ್ರಕಟಿಸುತ್ತಿದ್ದೇನೆ.
ಎಲ್ಲಾ ಲೇಖಕರ ಕಾಳಜಿಗಳೂ, ತುಮುಲಗಳೂ, ಹಾರೈಕೆಗಳೂ ಒಂದೇ ರೀತಿ ಇರುವ ಇಲ್ಲಿನ ಸಂದರ್ಭದಲ್ಲಿ ತೀರ್ಪು ನೀಡುವ ಕೆಲಸ ನಿಜಕ್ಕೂ ಕಷ್ಟದ್ದೆ. ಆದರೆ ಲೇಖನಗಳ ಗುಣಮಟ್ಟ ಮತ್ತು ಅವು ಒಳಗೊಂಡಿರುವ ಒಟ್ಟು ಧ್ವನಿಯ ಆಧಾರದ ಮೇಲೆ ಇರುವ ಲೇಖನಗಳಲ್ಲೆ ಉತ್ತಮ ಎನಿಸಿದ್ದನ್ನು ಹೇಳುವ ಜವಾಬ್ದಾರಿ ಹೊತ್ತುಕೊಂಡಿದ್ದೇನೆ. ಈ ಫಲಿತಾಂಶದ ಸರಿತಪ್ಪುಗಳು ನನ್ನವೆ ಎನ್ನುವುದನ್ನು ಒಪ್ಪಿಕೊಳ್ಳುತ್ತ, ಈ ವೆಬ್‌ಸೈಟ್ ಮಾಧ್ಯಮ ಕೊಟ್ಟಿರುವ ಕಾಮೆಂಟಿಂಗ್ ಸೌಲಭ್ಯಗಳನ್ನು ಬಳಸಿಕೊಂಡು ಓದುಗರು ತಮ್ಮ ತೀರ್ಪನ್ನು ನೀಡಲು ಅಥವ ನನ್ನ ತೀರ್ಪಿನ ಪರಾಮರ್ಶೆ ಮಾಡಲು ಆಹ್ವಾನಿಸುತ್ತಿದ್ದೇನೆ. ಇಲ್ಲಿ ಯಾವುದೇ ರೀತಿಯ Moderation ಇಲ್ಲ.
ಬಂದಿರುವ ಲೇಖನಗಳನ್ನು ಅವುಗಳು ಬಂದಿರುವ ಕಾಲಾನುಕ್ರಮಣಿಕೆಯಲ್ಲಿಯೆ ಪರಿಚಯ ಮಾಡಿಕೊಡುತ್ತೇನೆ.
ಮೊದಲ ಲೇಖನ, ಕೆ.ಆರ್.ರವೀಂದ್ರರವರ "ಆರ್ಥಿಕ ಅಸ್ಪೃಶ್ಯ ಸಮಾಜದ ಬದುಕು-ಬವಣೆ." ಕೋಲಾರ ಜಿಲ್ಲೆಯ ಚಿಂತಾಮಣಿಯ ಸುತ್ತಮುತ್ತ ತಾವು ಗಮನಿಸಿದಂತೆ ರೈತರು ಹೇಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವಾಗ ಗೆದ್ದೆತ್ತಿನ ಬಾಲ ಹಿಡಿಯ ಹೋಗಿ ಎಲ್ಲರೂ ನಷ್ಟಕ್ಕೆ ಒಳಗಾಗುವಂತೆ ಮಾಡಿಕೊಳ್ಳುತ್ತಾರೆ ಎಂದು ಬರೆಯುವ ಮೂಲಕ ಲೇಖಕರು ನಾವು ರೈತರ ವಿವೇಚನೆಯನ್ನೆ ಪ್ರಶ್ನಿಸುವ ಆಲೋಚನೆಗೆ ಒಳಗಾಗುವವಂತೆ ಮಾಡುತ್ತಾರೆ. ಇನ್ನು ರೈತನ "ಅಸ್ಪೃಶ್ಯ" ಸ್ಥಿತಿಯನ್ನು ಗಮನಿಸಿ ಅವನ ವರ್ಗಕ್ಕೆ ಲೇಖಕರು ಮಾಡಿರುವ "ಆರ್ಥಿಕ ಅಸ್ಪೃಶ್ಯ" ಎನ್ನುವ ನಾಮಕರಣವಂತೂ ಕ್ರೂರ ಅನ್ನಿಸಿದರೂ ಬಹಳ ವಾಸ್ತವಾದದ್ದು ಮತ್ತು ಸರಿಯಾದದ್ದು. ಕೃಷಿಯ ಜೊತೆಗೆ ಉಪಕಸಬುಗಳನ್ನೂ ರೈತರೂ ರೂಢಿಸಿಕೊಳ್ಳಬೇಕು ಎನ್ನುತ್ತ ಲೇಖಕರು ರೈತನ ಸಮಸ್ಯೆಗಳು ಕೇವಲ ರೈತನದೇ ಅಲ್ಲ, ಅದೂ ಪ್ರತಿಯೊಬ್ಬ ಭಾರತೀಯನದೂ ಹೌದು ಮತ್ತು ಅವುಗಳ ನಿವಾರಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು ಎನ್ನುತ್ತಾರೆ.
ಎರಡನೆ ಲೇಖನ, ವಿಜಯಲಕ್ಷ್ಮಿ ಉಡಿಕೇರಿಯವರ "ಗ್ರಾಮ ಭಾರತದ ಸವಾಲುಗಳು ಮತ್ತು ಪರಿಹಾರಗಳು." ರೈತ ದುಡಿದು ಉಣ್ಣುವ ಸ್ವಾವಲಂಬಿ ಎನ್ನುವ ಲೇಖಕಿ, ಭಾರತ ಕೃಷಿಗೆ ಹೇಳಿ ಮಾಡಿಸಿದಂತಹ ಭೂಪ್ರದೇಶ ಮತ್ತು ಹವಾಮಾನ ಹೊಂದಿದೆ ಎನ್ನುವುದನ್ನು ಸರಿಯಾಗಿಯೆ ಗುರುತಿಸಿದ್ದಾರೆ. ಗ್ರಾಮ ಭಾರತದ ಸವಾಲುಗಳನ್ನು ಮತ್ತು ಅವುಗಳ ಪರಿಹಾರಕ್ಕೆ ಮತ್ತು ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೈಗೊಳ್ಳಬೇಕಾದ ನೀತಿಗಳನ್ನು ಪಟ್ಟಿ ಮಾಡುವ ಲೇಖಕಿ ಅನೇಕ ಸರ್ಕಾರಿ ಯೋಜನೆಗಳ ಬಗ್ಗೆ ಬರೆಯುತ್ತಾರೆ. ಗ್ರಾಮ ಪಂಚಾಯತಿ ಮತ್ತು ಗ್ರಾಮೀಣ ಉದ್ದಿಮೆಗಳ ಬಗ್ಗೆ ವಿಶೇಷವಾಗಿ ಬರೆದಿರುವ ಇವರು ಗ್ರಾಮ ಪಂಚಾಯತಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನೂ, ಅಲ್ಲಿ ಸುಸುಳುವ ರಾಜಕಾರಣವನ್ನೂ ಗುರುತಿಸುತ್ತಾರೆ. ಹಾಗೆಯೆ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕಳೆದ ಎರಡು ದಶಕಗಳಲ್ಲಿ ಕೈಗೊಂಡಿರುವ ಹಲವಾರು ಕಾರ್ಯಕ್ರಮಗಳನ್ನೂ ಲೇಖನದಲ್ಲಿ ಪರಿಚಯಿಸಿದ್ದಾರೆ.
ಮೂರನೆಯ ಲೇಖನ, ವಿನಾಯಕ ಎಲ್ ಪಟಗಾರರ "ದೇಶದ ಬೆನ್ನಲಬು ರೈತ, ರೈತನ ಬೆನ್ನಲಬು ... . . . .?." ರೈತ ಹಾಗು ಕೃಷಿಯ ಹೆಸರನ್ನು ಬಳಸಿಕೊಳ್ಳದೆ ರಾಜಕಾರಣ ಮಾಡುವುದು ಅಸಾಧ್ಯವೆನ್ನಿಸುವಷ್ಟರ ಮಟ್ಟಿಗೆ ಈ ಕ್ಷೇತ್ರ ಅನಿವಾರ್ಯವಾಗಿಬಿಟ್ಟಿದೆ ಎನ್ನುವ ಲೇಖಕರು ಕೃಷಿ ವಿಜ್ಞಾನಿಗಳ ಸಂಶೋಧನೆಗಳು, ಹೈಬ್ರಿಡ್ ತಳಿ, ಹೆಚ್ಚಿನ ಇಳುವರಿ, ಅದಕ್ಕಾಗಿ ಬಳಸಬೇಕಾದ ರಾಸಾಯನಿಕಗಳು, ಇಂತಹ ವರ್ತುಲವೊಂದಕ್ಕೆ ರೈತನನ್ನು ಬೀಳಿಸುವ ಬಹುರಾಷ್ಟ್ರೀಯ ಕಂಪನಿಗಳು ನಂತರ ಅವನ ಶೋಷಣೆ ಮಾಡುವುದು, ಇದನ್ನು ವಿಷದವಾಗಿ ವರೆಯುತ್ತಾರೆ. ಅತ್ತ ರಾಸಾಯನಿಕಾಧಾರಿತ ಆಧುನಿಕ ಕೃಷಿ ಬಿಡಲಾಗದ, ಇತ್ತ ಸಾಂಪ್ರದಾಯಿಕ ಕೃಷಿಗೂ ಮರಳಲಾಗದ ರೈತನ ಸ್ಥಿತಿ ನಡು ನೀರಿನಲ್ಲಿ ಬಿದ್ದವನ ಪರಿಸ್ಥಿತಿಯಾಗಿದೆ ಎನ್ನುತ್ತಾರೆ. ದೇಶದ ಬೆನ್ನೆಲುಬಾದ ಈ ರೈತನ ಇವತ್ತಿನ ಬೆನ್ನೆಲುಬು ಈ ರಾಸಾಯನಿಕ ಗೊಬ್ಬರಗಳಾಗಿವೆ ಎನ್ನುತ್ತ ರೈತನ ಪರಾವಲಂಬಿತನದ ದರ್ಶನ ಮಾಡಿಸುತ್ತಾರೆ.
ನಾಲ್ಕನೆಯ ಲೇಖನ, ಜಿ. ಆರ್. ವಸಂತಕುಮಾರರ "ಭಾರತದ ಹಳ್ಳಿಗಳ ಸ್ಥಿತಿಗತಿ - ಒಂದು ಇಣುಕುನೋಟ" ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗ ಬಾಧೆಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು, ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ, 21 ನೇ ಶತಮಾನದಲ್ಲೂ ಅನಕ್ಷರತೆ, ಅಸ್ಪೃಶ್ಯತೆ, ಅಂಧಕಾರ, ಹಾಗು ಗೊತ್ತು ಗುರಿಯಿಲ್ಲದ ಮೂಢನಂಬಿಕೆಗಳೇ ಇವತ್ತಿಗೂ ನಮ್ಮ ಹಳ್ಳಿಗಳಲ್ಲಿನ ವಾಸ್ತವ ಎನ್ನುವ ಲೇಖಕರು, ತಾತ್ಕಾಲಿಕ ಯೋಜನೆಗಳನ್ನು ಜಾರಿಗೊಳಿಸಿ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳುವ ಬದಲು ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎನ್ನುತ್ತಾರೆ. ಹಾಗೆಯೆ, ಕೇವಲ ಜೀವನೋಪಾಯದ ಬಗ್ಗೆ ಮಾತ್ರ ಬರೆಯದೆ ಇಡೀ ಬದುಕಿನ ವಿವಿಧ ಆಯಾಮಗಳ ಮತ್ತು ಅಗತ್ಯಗಳ ಕುರಿತೂ ಬರೆಯುತ್ತಾರೆ.
ಈಗ ನನ್ನ ಆಯ್ಕೆ. ಜಿ. ಆರ್. ವಸಂತಕುಮಾರರ "ಭಾರತದ ಹಳ್ಳಿಗಳ ಸ್ಥಿತಿಗತಿ - ಒಂದು ಇಣುಕುನೋಟ" ಗ್ರಾಮಜೀವನದ ಜೊತೆಜೊತೆಗೆ ಪರಿಸರ, ಆರೋಗ್ಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನ, ಮುಂತಾಗಿ, ಇಡೀ ಜೀವನದ ಒಟ್ಟು ಮುಖದ ಬಗ್ಗೆ ಬರೆದಿರುವುದರಿಂದ ಮತ್ತು ಕೂಲಂಕಷವಾಗಿ ಚರ್ಚಿಸಿರುವುದರಿಂದ, ಇದು ನನ್ನ ಮೊದಲ ಆಯ್ಕೆ.
ಇಲ್ಲಿ ಎಲ್ಲರೂ ಗೆದ್ದವರೆ. ಎಲ್ಲರಿಗೂ ಅಭಿನಂದನೆಗಳು. ಇವರೆಲ್ಲರಿಗೂ ನಗದು ಅಥವ ಡಿಡಿಯನ್ನು ಶೀಘ್ರದಲ್ಲಿಯೆ ಕಳುಹಿಸಲಾಗುತ್ತದೆ.
ವಿಚಾರ ಮಂಟಪದೊಡೆಗಿನ ಈ ಲೇಖಕರ ಒಡನಾಟ ಹೀಗೆಯೆ ಮುಂದುವರೆಯಲಿ ಮತ್ತು ಸೂಕ್ತ ಅನ್ನಿಸಿದ ವಿಚಾರಕ್ಕೆ ಲೇಖನಗಳನ್ನು ಬರೆದು ಇಲ್ಲಿ ಪ್ರಕಟಿಸಲಿ ಎಂದು ನಾನು ಈ ಸಂದರ್ಭದಲ್ಲಿ ಅವರನ್ನು ಕೋರುತ್ತೇನೆ. ಹಾಗೆಯೆ, ಓದುಗರು ಸಹ ಈ ಸಮುದಾಯ ವೆಬ್‌ಸೈಟ್‌ನಲ್ಲಿ ಪಾಲ್ಗೊಳ್ಳಬೇಕೆಂದು ಮತ್ತೊಮ್ಮೆ ಆಹ್ವಾನಿಸುತ್ತೇನೆ.
ನಮಸ್ಕಾರ,
ರವಿ ಕೃಷ್ಣಾ ರೆಡ್ಡಿ
ದಿನಾಂಕ: ಫೆಬ್ರವರಿ 14, 2009
ಮೊದಲಿಗೆ, ಎಲ್ಲರಿಗೂ ಭಾರತದ 2009 ರ ಗಣರಾಜ್ಯೋತ್ಸವದ ಶುಭಾಶಯಗಳು.
ವಿಚಾರ ಮಂಟಪ ಆಹ್ವಾನಿಸಿದ್ದ ಲೇಖನಗಳಿಗೆ ಸ್ಪಂದಿಸಿ ಲೇಖನಗಳನ್ನು ಕಳುಹಿಸಿದ ನಾಲ್ವರು ಲೇಖಕರಿಗೂ (ಕೆ.ಆರ್.ರವೀಂದ್ರ, ವಿಜಯಲಕ್ಷ್ಮಿ ಉಡಿಕೇರಿ, ವಿನಾಯಕ ಎಲ್ ಪಟಗಾರ, ಜಿ. ಆರ್. ವಸಂತಕುಮಾರ್) ನಮ್ಮ ಕೃತಜ್ಞತೆಗಳು. ಸ್ಪರ್ಧೆಗೆ ಬಂದ ಲೇಖನಗಳನ್ನು ಈಗ ಪೂರ್ಣವಾಗಿ ಪ್ರಕಟಿಸಲಾಗಿದೆ.
ವಿಷಯ: ಗ್ರಾಮ-ರೈತ ಭಾರತಕ್ಕೆ ಸಂಬಂಧಿಸಿದಂತೆ
- ಆರ್ಥಿಕ ಅಸ್ಪೃಶ್ಯ ಸಮಾಜದ ಬದುಕು-ಬವಣೆ
- ಗ್ರಾಮ ಭಾರತದ ಸವಾಲುಗಳು ಮತ್ತು ಪರಿಹಾರಗಳು
- ದೇಶದ ಬೆನ್ನಲಬು ರೈತ, ರೈತನ ಬೆನ್ನಲಬು ... . . . .?
- ಭಾರತದ ಹಳ್ಳಿಗಳ ಸ್ಥಿತಿಗತಿ ಒಂದು ಇಣುಕುನೋಟ
ವಿಷಯ: ಐಟಿ-ಭಾರತಕ್ಕೆ ಸಂಬಂಧಿಸಿದಂತೆ
ಯಾವುವೂ ಬಂದಿಲ್ಲ!
ಕೇವಲ ಒಂದೇ ವಿಷಯಕ್ಕೆ ಲೇಖನಗಳು ಬಂದಿವೆ. ಬಂದಿರುವ ಲೇಖನಗಳ ಸಂಖ್ಯೆ 4. ಪ್ರತಿ ವಿಷಯಕ್ಕೂ ಗರಿಷ್ಠ 6 ಲೇಖನಗಳಿಗೆ ಬಹುಮಾನ ಇರುವುದರಿಂದ ಬಂದಿರುವ ಲೇಖನಗಳೆಲ್ಲವುಗಳಿಗೂ ಈಗ ನಗದು ಬಹುಮಾನ ಕೊಡಲಾಗುತ್ತದೆ. ಮೊದಲ ಬಹುಮಾನ ರೂ. 2500 ಮತ್ತು ಪ್ರೋತ್ಸಾಹಕರ ಬಹುಮಾನ ರೂ. 1000. ಬಂದಿರುವ ಲೇಖನಗಳಲ್ಲಿ ಉತ್ತಮವೆನಿದ ಲೇಖನವನ್ನು ಮತ್ತಿತರ ವಿವರಗಳನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುತ್ತದೆ.
ಮೇಲಿನ ವಿಷಯಗಳ ಮೇಲೆ ಈಗಲೂ ಲೇಖನ ಬರೆಯ ಬಯಸುವವರಿಗೆ ಈಗಲೂ ಬರೆಯಲು ಅವಕಾಶವಿದೆ. ಅವುಗಳನ್ನು ಅಂದಂದೇ ಪೂರ್ಣವಾಗಿ ಪ್ರಕಟಿಸಲಾಗುತ್ತದೆ. ಆದರೆ ಅವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಧನ್ಯವಾದಗಳೊಂದಿಗೆ,
ರವಿ...
ಜನವರಿ 26, 2009.
ಅಂತರ್ಜಾಲದ ಕನ್ನಡ ಬರಹಗಳಿಗೆ ಆಹ್ವಾನ
ಗೆಳೆಯರೆ,
ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.
ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.
ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ
"ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ ಭಾರತದ ಪ್ರಜಾಆಡಳಿತದ ಸವಾಲುಗಳು; ಜನರ ಪಾತ್ರ ಮತ್ತು ಅವರ ಮಿತಿಗಳು; ಗ್ರಾಮೀಣ ಉದ್ದಿಮೆಗಳು; ಇತ್ಯಾದಿ...", ಮೊದಲ ವಿಷಯ.
ಎರಡನೆಯದು,
"ಭಾರತದ ಐಟಿ/ಬಿಪಿಒ ಉದ್ದಿಮೆ, ಅದರಿಂದಾದ/ಆಗುತ್ತಿರುವ ಒಳ್ಳೆಯ/ಕೆಟ್ಟ ಪರಿಣಾಮಗಳು; ನೌಕರರ ಮತ್ತು ಕಂಪನಿಗಳ ಸವಾಲುಗಳು, ಪರಿಹಾರಗಳು; ಮುಂದೆ ಸವೆಸಬೇಕಾದ ದಾರಿ; ಸರ್ಕಾರ ಮತ್ತು ಉದ್ಯಮ ತೆಗೆದುಕೊಳ್ಳಬಹುದಾದ ನಿರ್ಣಯಗಳು, ಇತ್ಯಾದಿ..."
ಪ್ರತಿ ವಿಷಯಕ್ಕೂ ಮೊದಲ ಬಹುಮಾನ ರೂ.2500
ಸಮಾಧಾನಕರ ಬಹುಮಾನಗಳು 5 - ತಲಾ ರೂ.1000
(ಒಂದು ವಿಷಯಕ್ಕೆ ಒಟ್ಟು ಬಹುಮಾನದ ಮೊತ್ತ ರೂ.7500)
ಪ್ರೀತಿಯಲ್ಲಿ,
ರವಿ...
ಜನವರಿ 1, 2009
ಶರಣರ ಬರವೆಮಗೆ ಜೀವ ಜೀವಾಳವಯ್ಯ
ಉಳ್ಳವರು ಶಿವಾಲಯವ ಮಾಡಿಹರು ! ನಾನೇನ ಮಾಡುವೆ ? ಬಡವನಯ್ಯ ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! - ಬಸವಣ್ಣ |
|
12 ನೇ ಶತಮಾನದಲ್ಲಿ ಬಸವಣ್ಣ ಮತ್ತು 20 ನೇ ಶತಮಾನದಲ್ಲಿ ಕುವೆಂಪು ಕರ್ನಾಟಕ ಕಂಡ ಕೆಚ್ಚೆದೆಯ ಸಾಮಾಜಿಕ ಸುಧಾರಣಾ ಪ್ರಜ್ಞೆಯ ದಾರ್ಶನಿಕರು. ಹಾಗೆಯೇ 2004 ನೇ ಇಸವಿ ಈ ಮಾನವತಾವಾದಿಗಳ ಧ್ಯೇಯ ಸಿದ್ಧಾಂತಗಳ ಬಗೆಗೆ ಹೆಚ್ಚೆಚ್ಚು ಚರ್ಚಿಸಲ್ಪಡುತ್ತಿರುವ ಸಂಧ್ಯಾಕಾಲ. ಕುವೆಂಪುರವರ ಜನ್ಮಶತಾಬ್ಧಿಯ ಅಂಗವಾಗಿ ನಾಡಿನಾದ್ಯಂತ ಕುವೆಂಪುರವರ ಬರಹ-ಬದುಕು ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತಿದೆ. "ಜಯ್ ಭಾರತ ಜನನಿಯ ತನುಜಾತೆ" ಗೀತೆಯನ್ನು ನಾಡಗೀತೆಯನ್ನಾಗಿ ಸರ್ಕಾರ ಆಯ್ದುಕೊಂಡಾಗಿನಿಂದ ಚರ್ಚೆ ಪ್ರಬಲವಾಗಿಯೇ ಪ್ರಾರಂಭವಾಗಿ ಕುವೆಂಪುರವರ ವೈಚಾರಿಕತೆಯನ್ನು ಶೋಧಿಸಲು ಅಕ್ಷರಸ್ಥರನ್ನು ಆಹ್ವಾನಿಸಿದೆ. ಇನ್ನೊಂದು ಕಡೆ ಚಿತ್ರದುರ್ಗದ ಮುರುಘರಾಜೇಂದ್ರ ಮಠಾಧೀಶರಿಂದ ಬಸವಧರ್ಮ ಸ್ಥಾಪನೆ ಮತ್ತು ಮಾಂಸಾಹಾರಿಗಳಿಗೂ ಹೊಸಧರ್ಮದಲ್ಲಿ ಪ್ರವೇಶ ಮತ್ತು ಸ್ಥಾನ ಎಂಬ ನೀತಿಯಿಂದಾಗಿ ಬಸವಣ್ಣ ಮತ್ತು ವಚನಸಾಹಿತ್ಯ ಚಳವಳಿ ಹೊಸ ಚರ್ಚೆಗೆ ಬಾಗಿಲು ತೆರೆದಿದೆ. ಈ ನಿಟ್ಟಿನಲ್ಲಿ ವಚನಸಾಹಿತ್ಯ, ಕುವೆಂಪುರವರ ವೈಚಾರಿಕ ಬರಹಗಳು, ನಾಡಿನ ಜನರ ತವಕ-ತಲ್ಲಣ, ಚರ್ಚೆಗಳನ್ನು ಅಂತರ್ಜಾಲದಲ್ಲಿ ದಾಖಲಿಸಲು ವಿಚಾರ ಮಂಟಪ ಮುಂದಾಗಿದೆ.
ಇದಷ್ಟೇ ಅಲ್ಲದೆ ಇಂಗ್ಲಿಷ್‌ನಲ್ಲಿ ಈಗಾಗಲೆ ಹಲವು ಜಾಲತಾಣಗಳಲ್ಲಿ ಲಭ್ಯವಾಗಿರುವಂತೆ ಮೂಲಕೃತಿಯ ಹಕ್ಕು ಹೊಂದಿಲ್ಲದ ವೈಚಾರಿಕ ವಚನ ಸಾಹಿತ್ಯ, ದಾಸ ಸಾಹಿತ್ಯ*, ಮತ್ತು ಕಳೆದ ಶತಮಾನದ ಕನ್ನಡದ ಶ್ರೇಷ್ಠ ಚಿಂತಕರ ವೈಚಾರಿಕ ಬರಹಗಳನ್ನು ಪ್ರಕಟಿಸುವುದು ನಮ್ಮ ಸದ್ಯದ ಗುರಿ. ಇದಕ್ಕಾಗಿ ಇವೆಲ್ಲವುಗಳನ್ನು ಬರಹ/ಯೂನಿಕೋಡ್ ಲಿಪಿಗೆ ಕೀಲಿಸುವ ಸ್ವಯಂಸೇವಕರ ಅವಶ್ಯಕತೆ ಇದ್ದು ಇಚ್ಚೆಯಿದ್ದವರು ದಯವಿಟ್ಟು ನಮ್ಮನ್ನು ಸಂಪರ್ಕಿಸಬೇಕೆಂದು (vicharamantapa@vicharamantapa.net ಅಥವ ಕೆಳಗೆ ಕಾಮೆಂಟ್ ಹಾಕುವುದರ ಮೂಲಕ) ಕೋರುತ್ತೇವೆ.
ಸೈದ್ಧಾಂತಿಕ ಚಿಂತನಾ ಘರ್ಷಣೆ, ಭಿನ್ನ-ಅಭಿಪ್ರಾಯ, ಹಲವು ಮಜಲು-ಒಳನೋಟಗಳಿಲ್ಲದ ಒಂದು ವ್ಯವಸ್ಥೆ ಕಿಲುಬು ಹಿಡಿದು, ಅಲ್ಲಿ ಸೃಜನಶೀಲತೆ ಕ್ಷೀಣಿಸಿ, ಸಮಸ್ಯೆಗೆ ಪರಿಹಾರ ಹುಡುಕುವ ಧೈರ್ಯ ಇಲ್ಲವಾಗಿ, ವ್ಯವಸ್ಥೆಯೊಂದಿಗೆ ರಾಜಿಯಾಗುವ ಮನೋಭಾವ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಬಂದೇ ಬರುವ ಬದಲಾವಣೆ ಅಹಿಂಸಾತ್ಮಕವಾಗೇನೂ ಇರುವುದಿಲ್ಲ. ಸಮಸ್ಯೆಯನ್ನು ಕಂಡುಹಿಡಿಯುವುದು ಎಷ್ಟು ಮುಖ್ಯವೋ ಅದನ್ನು ತಾರ್ಕಿಕ ಅಂತ್ಯಕ್ಕೆ, ಕ್ರಿಯೆಯೆಡೆಗೆ ಕೊಂಡೊಯ್ಯುವುದೂ ಅಷ್ಟೇ ಮುಖ್ಯ. ಅದು ಅಹಿಂಸಾತ್ಮಕವಾಗಿದ್ದಷ್ಟೂ, ವಸ್ತುನಿಷ್ಠವಾಗಿದ್ದಷ್ಟೂ, ಆಧಾರಪೂರ್ವಕವಾಗಿದ್ದಷ್ಟೂ ಒಳ್ಳೆಯದು. ಹೀಗಾಗಿ, ಕನ್ನಡ ಅಂತರ್ಜಾಲ ಚಾರಣಿಗರಿಗೆ ನಮ್ಮ ಹಿಂದಿನ/ಇಂದಿನ ಚಿಂತಕರ ಚಿಂತನೆಯ ಆಧಾರಗಳ ಪರಾಮರ್ಶೆಗೆ ವಿಚಾರ ಮಂಟಪ ಒಂದು ಆನ್‌ಲೈನ್ ಗ್ರಂಥಾಲಯವಾಗಲಿ ಎಂಬ ಸಣ್ಣ ಆಶಯ ಈ ಜಾಲತಾಣ.
---
ರವಿ ಕೃಷ್ಣಾ ರೆಡ್ಡಿ
ವಿಚಾರಮಂಟಪ.ನೆಟ್ ನಿರ್ವಾಹಕ.
ಜೂನ್, 2004
*
ಸಮಗ್ರ ದಾಸ ಸಾಹಿತ್ಯವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಅತ್ಯಂತ ಸುಂದರವಾಗಿ, ಯೋಜನಾಬದ್ಧವಾಗಿ www.dasasahitya.org ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಾಶಿಸಿದೆ. ಈ ತಾಣ ತಂತ್ರಜ್ಞಾನದ ಉತ್ತಮ ಸಾಧನಗಳನ್ನು ಚೆನ್ನಾಗಿ ದುಡಿಸಿಕೊಂಡು ಬ್ರೌಸ್ ಮಾಡಲು ತುಂಬಾ ಅನುಕೂಲ ರೀತಿಯಲ್ಲಿದೆ. ಅವರ ಈ ಕಾರ್ಯಕ್ಕೆ ವಿಚಾರಮಂಟಪದ ಪರವಾಗಿ ಹಾರ್ದಿಕ ಧನ್ಯವಾದಗಳು ಮತ್ತು ಶುಭಾಶಯಗಳು. ಇದೇ ಸಮಯದಲ್ಲಿ ಅವರ ಮುಂದಿನ ಯೋಜನೆಗಳಿಗೂ ಶುಭ ಹಾರೈಸುತ್ತಾ ಆದಷ್ಟು ಬೇಗ ಸಮಗ್ರ ವಚನ ಇತ್ಯಾದಿ ಸಾಹಿತ್ಯವನ್ನು ಪ್ರಕಾಶಿಸಲಿ, ತಂತ್ರಜ್ಞಾನವನ್ನು ಕನ್ನಡದ ಉಳಿವು ಬೆಳವಣಿಗೆಗೆ ಉಪಯೋಗಿಸಿಕೊಳ್ಳಲಿ ಎಂದು ಕೋರುತ್ತೇವೆ.
- Login or register to post comments
- Email this page