You are hereForums / ಸಾಮಾಜಿಕ ವಿಚಾರಗಳು / CIVIL SOCIETY - ಯುದ್ಧೋನ್ಮಾದ ಬೇಕಿಲ್ಲ-ಹೊಣೆಗಾರಿಕೆ ಬೇಕಿದೆ

CIVIL SOCIETY - ಯುದ್ಧೋನ್ಮಾದ ಬೇಕಿಲ್ಲ-ಹೊಣೆಗಾರಿಕೆ ಬೇಕಿದೆ


By DIVAKAR N - Posted on 26 January 2009

ನವಂಬರ್ ೨೬ರಂದು ಮುಂಬೈನಲ್ಲಿ ನಡೆದ ಪಾಶವೀ ಕೃತ್ಯಗಳು ಇಡೀ ದೇಶದ ನಾಗರಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿದೆ. ಒಂದು ವರ್ಗದ ಜನತೆಗೆ ಐಷಾರಾಮಿ ಭಾರತದ ಸಂಕೇತಗಳಾದ ತಾಜ್ ಹೊಟೇಲ್, ನಾರಿಮನ್ ಮತ್ತು ಒಬಿರಾಯ್‌ಗಳ ಮೇಲೆ ನಡೆದ ದಾಳಿ ಮಹತ್ವ ಪಡೆದರೆ ಮತ್ತೊಂದು, ಬಹುಸಂಖ್ಯಾತ ವರ್ಗಕ್ಕೆ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಭಯೋತ್ಪಾದಕರ ಅಮಾನವೀಯ ದಾಳಿಗೆ ತುತ್ತಾದ ಅಮಾಯಕ ಜೀವಗಳು ಮಹತ್ವದ್ದೆನಿಸುತ್ತವೆ. ೬೦ ಗಂಟೆಗಳ ನಿರಂತರ ಹೋರಾಟವನ್ನು ಚಾಚೂತಪ್ಪದೆ ಬಿತ್ತರಿಸಿದ ದೃಶ್ಯ ಮಾಧ್ಯಮಗಳ ಪ್ರಸಾರ ವೈಖರಿಯಲ್ಲೂ ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದಿತ್ತು. ಆದರೆ ದಾಳಿಯ ನಂತರದಲ್ಲಿ ಮುಂಬೈನ ಸಾಮಾನ್ಯ ಜನತೆ ಪ್ರದರ್ಶಿಸಿದ ಅಪೂರ್ವ ಒಗ್ಗಟ್ಟು ಮತ್ತು ಸಾಮರಸ್ಯ ಭಾವನೆಗಳು ಯಾವುದೇ ಭಾರತೀಯನನ್ನು ಹೆಮ್ಮೆ ಪಡುವಂತೆ ಮಾಡುತ್ತದೆ. ಭಯೋತ್ಪಾದನೆಯನ್ನು ಖಂಡಿಸುವ ಸಲುವಾಗಿ ನವಂಬರ್ ೩ರಂದು ಮುಂಬೈನ ಗೇಟ್‌ವೇ ಆಫ್ ಇಂಡಿಯಾದ ಬಳಿ ಸೇರಿದ್ದ ಲಕ್ಷಾಂತರ ಮಂದಿಯಲ್ಲಿ ಯಾವುದೇ ಪೂರ್ವಾಗ್ರಹಗಳಿರಲಿಲ್ಲ, ಜಾತಿ-ಮತ-ಭಾಷಾ ಭೇದಗಳಿರಲಿಲ್ಲ. ಯಾವುದೇ ಸಮುದಾಯದ ಬಗ್ಗೆ ದ್ವೇಷವೂ ಅಲ್ಲಿ ವ್ಯಕ್ತವಾಗಿರಲಿಲ್ಲ. ಆದರೆ ಎಲ್ಲರ ಮನದಲ್ಲೂ ದೇಶವನ್ನಾಳುತ್ತಿರುವ ರಾಜಕೀಯ ಪಕ್ಷಗಳ ಬಗ್ಗೆ, ನಾಯಕರುಗಳ ಬಗ್ಗೆ ಅಸಮಧಾನದ ಹೊಗೆಯಾಡುತ್ತಿತ್ತು. ನಮಗೆ ರಕ್ಷಣೆ ನೀಡದಿದ್ದರೆ ತೆರಿಗೆ ನೀಡುವುದಿಲ್ಲ ಎಂಬ ಘೋಷಣೆಯನ್ನು ಹೊತ್ತ ಪೋಸ್ಟರುಗಳೂ ರಾರಾಜಿಸುತ್ತಿದ್ದವು. ನಿಷ್ಠೆಯಿಂದ ತೆರಿಗೆ ನೀಡುವ ಬೀದಿ ಬದಿಯ ವ್ಯಾಪಾರಿಯಷ್ಟೇ ಆವೇಶದಿಂದ ತೆರಿಗೆಯನ್ನೇ ಪಾವತಿಸದ ಸಿನಿಮಾ ನಟ ನಟಿಯರೂ ಈ ಘೋಷಣೆ ಕೂಗುತ್ತಿದ್ದುದು ವಿಡಂಬನೆಯಷ್ಟೆ.

ಈ ಘೋಷಣೆ ಒಂದು ರೀತಿಯಲ್ಲಿ ರಂಜನೀಯವಾಗಿ ಕಂಡುಬಂದರೂ ಇದರ ಹಿಂದಿನ ಮನಃಸ್ಥಿತಿಗಳು ಪ್ರಜಾತಂತ್ರದ ಬೆಳವಣಿಗೆಗೆ ಮಾರಕವಾಗುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಭಾರತೀಯ ಜನತೆ ಕಳೆದ ಎರಡು ದಶಕಗಳಲ್ಲಿ ಭಯೋತ್ಪಾದನೆ, ಕೋಮವಾದ, ಜಾತಿ ಸಂಘರ್ಷ, ರಾಜಕೀಯ ಹಿಂಸಾಚಾರ ಹೀಗೆ ಹಲವಾರು ಹಿಂಸಾತ್ಮಕ ಪ್ರವೃತ್ತಿಗಳಿಂದ ತೀವ್ರ ಆತಂಕಕ್ಕೊಳಗಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಭಯ ಭೀತಿಯಿಲ್ಲದೆ ಓಡಾಡುವ ಸ್ಥೈರ್‍ಯವನ್ನು ಭಾರತೀಯ ಸಮಾಜ ಕಳೆದುಕೊಂಡಿದೆ. ೨೦೦೭ರ ವರ್ಷ ಆರಂಭಗೊಂಡಿದ್ದು ಮುಂಬೈನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ದಾಳಿಯಿಂದ. ಕೊನೆಗೊಂಡದ್ದು ಮುಂಬೈನ ಸಾಮಾನ್ಯ ಜನತೆಯ ಮೇಲಿನ ದಾಳಿಯಿಂದ. ಇಲ್ಲಿ ಭಯೋತ್ಪಾದಕರಷ್ಟೇ ಆತಂಕವನ್ನು ಇತರ ಸಮಾಜಘಾತುಕ ಶಕ್ತಿಗಳೂ ಸೃಷ್ಟಿಸುತ್ತಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಇತರ ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರು, ವ್ಯಾಲೆಂಟೈನ್ ದಿನವನ್ನು ಆಚರಿಸುವ ಯುವಕರು, ಬಿ.ಪಿ.ಒಗಳಲ್ಲಿ ರಾತ್ರಿ ಪಾಳಿ ಕೆಲಸ ನಿರ್ವಹಿಸುವ ಮಹಿಳೆಯರು, ಪ್ರವಾಸಕ್ಕೆಂದು ಗೋವಾದ ಕಡಲ ತಡಿಯಲ್ಲಿ ತಂಗಿರುವ ವಿದೇಶಿ ಮಹಿಳೆಯರು, ಹೊಸವರ್ಷ ಆಚರಣೆಯ ಉನ್ಮಾದದಲ್ಲಿ ತೊಡಗಿರುವ ಯುವಕ ಯುವತಿಯರು, ತಮ್ಮ ಧರ್ಮದ ಸಂದೇಶವನ್ನು ಪ್ರಸರಿಸುವ ಸಂತರು, ತಮ್ಮ ಮಾನವಿಕ ಹಕ್ಕುಗಳಿಗಾಗಿ ಹೋರಾಡುವ ದಲಿತರು, ತಮ್ಮ ಭೂಮಿಯ ಹಕ್ಕುಗಳಿಗಾಗಿ ಹೋರಾಡುವ ರೈತಾಪಿ ಜನತೆ, ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ನಡೆಯುವ ಹೋರಾಟಗಳಿಗೆ ಬೆಂಬಲ ನೀಡುವ ಪತ್ರಿಕೋದ್ಯಮಿಗಳು ಇತ್ಯಾದಿ, ಇತ್ಯಾದಿ ಎಲ್ಲಾ ವರ್ಗಗಳೂ ಒಂದಲ್ಲ ಒಂದು ರೀತಿಯಲ್ಲಿ ಆಕ್ರಮಣಕ್ಕೊಳಗಾಗುತ್ತಿರುತ್ತಾರೆ. ಈ ಪ್ರತಿಯೊಂದು ಸಂದರ್ಭದಲ್ಲೂ ಆಕ್ರಮಣಕಾರರು ವಿಭಿನ್ನ ರೂಪದಲ್ಲಿ ಪ್ರಕಟಗೊಳ್ಳುತ್ತಾರೆ. ಒಂದೆಡೆ ಆಕ್ರಮಣಕ್ಕೊಳಗಾಗುವವರೇ ಮತ್ತೊಂದು ಸಂದರ್ಭದಲ್ಲಿ ಅಕ್ರಮಣಕಾರರಾಗಿರಲಿಕ್ಕೂ ಸಾಕು.

ಈ ಎಲ್ಲ ಸಾಮಾನ್ಯ ನಾಗರಿಕರೂ ಭಯದ ವಾತಾವರಣದಲ್ಲೇ ಜೀವಿಸುವಂತಹ ಘಟ್ಟವನ್ನು ಭಾರತೀಯ ಸಮಾಜ ತಲುಪಿದೆ. ವಸಾಹತುಶಾಹಿಯ ಹಿಡಿತದಿಂದ ಮುಕ್ತಿ ಪಡೆದು ಸ್ವತಂತ್ರ ರಾಷ್ಟ್ರವೆಂಬ ಹಣೆಪಟ್ಟಿಯನ್ನು ಹೊತ್ತು ಆರು ದಶಕಗಳ ಕಾಲ ಸವೆಸಿರುವ ಭಾರತೀಯ ಸಮಾಜ, ವಸಾಹತುಶಾಹಿ ಮನೋಭಾವದಿಂದ ಇನ್ನೂ ಮುಕ್ತಿ ಪಡೆಯದಿರುವುದನ್ನು ಇಲ್ಲಿ ಗಮನಿಸಬಹುದು. ಹಾಗಾಗಿಯೇ ಯಾವುದೇ ಅವಘಡ ಸಂಭವಿಸಿದ ಕೂಡಲೇ ನಮಗೆ ರಕ್ಷಣೆ ಇಲ್ಲ ಎಂಬ ಕೂಗು ಕೇಳಿಬರುತ್ತದೆ. ಬೇಹುಗಾರಿಕೆಯ ವೈಫಲ್ಯವನ್ನು ಖಂಡಿಸಲಾಗುತ್ತದೆ. ಪೊಲೀಸರ ನಿರ್ಲಕ್ಷ್ಯವನ್ನು ಎತ್ತಿತೋರಿಸಲಾಗುತ್ತದೆ. ರಾಜಕಾರಣಿಗಳ ಸಮಯಸಾಧಕತನವನ್ನು ಹೀಯಾಳಿಸಲಾಗುತ್ತದೆ. ಮಾಧ್ಯಮಗಳಲ್ಲಿ ನಡೆದ ಅವಘಡಗಳ ಮರಣೋತ್ತರ ಪರೀಕ್ಷೆಗಳು ವ್ಯಾಪಕವಾಗಿ ನಡೆಯುತ್ತದೆ. ರಾಜಕೀಯ ರಂಗದಲ್ಲಿ ಕೆಲವು ಪದಚ್ಯುತಿಗಳಾಗುತ್ತವೆ. ಪೊಲೀಸ್ ಇಲಾಖೆಯಲ್ಲೂ ಕೆಲವು ಅಧಿಕಾರಿಗಳು ತಮ್ಮ ನಿರ್ಲಕ್ಷ್ಯಕ್ಕೆ ಬಲಿಯಾಗುತ್ತಾರೆ. ಬೇಹುಗಾರಿಕೆ, ಗುಪ್ತಚರ ಇಲಾಖೆಯನ್ನು ಬಲಗೊಳಿಸುವ ಆಶ್ವಾಸನೆ ನೀಡಲಾಗುತ್ತದೆ. ನಾಗರಿಕ ಸಮಾಜ ಸಂತೃಪ್ತವಾಗುತ್ತದೆ.

ಇಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಪರಸ್ಪರ ದೋಷಾರೋಪಣೆ. ಒಂದು ಸಣ್ಣ ದುರಂತ, ಗಲಭೆ ನಡೆದರೂ ಪೊಲೀಸ್ ಇಲಾಖೆಯ ನಿಷ್ಕ್ರಿಯತೆಯನ್ನು ಕುರಿತು ಆರೋಪ ಮಾಡುವುದು ಸಾಮಾನ್ಯ ಜನರಲ್ಲಿ ಸರ್ವೇ ಸಾಧಾರಣವಾಗಿಬಿಟ್ಟಿದೆ. ಆದರೆ ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಎಲ್ಲ ನಗರಗಳಲ್ಲೂ ಜನಸಾಂದ್ರತೆ ಮತ್ತು ವಾಹನ ದಟ್ಟಣೆಯ ಪ್ರಮಾಣ ಹೆಚ್ಚಿರುವಾಗ, ಎಲ್ಲೆಡೆ ಆಕ್ರಮಣಕಾರಿ ಮನೋಭಾವ ತುಂಬಿ ತುಳುಕುತ್ತಿರುವಾಗ, ಈ ಸಾಮಾಜಿಕ ಸ್ಥಿತ್ಯಂತರವನ್ನು ನಿಭಾಯಿಸಲು ಅಗತ್ಯವಿರುವಷ್ಟು ಭದ್ರತಾ ಪಡೆಗಳನ್ನು ಸರ್ಕಾರ ಒದಗಿಸಿದೆಯೇ ಎಂಬ ಪ್ರಶ್ನೆ ಎಲ್ಲಿಯೂ ಕೇಳಿಬರುವುದಿಲ್ಲ. ಹೆಚ್ಚಿನ ರಕ್ಷಣೆ ಒದಗಿಸುವುದು ಎಂದಾಕ್ಷಣ ಈಗಿರುವ ಸುರಕ್ಷತಾ ವ್ಯವಸ್ಥೆಯನ್ನೇ ಇನ್ನೂ ಬಲಗೊಳಿಸಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುವುದು ಎಂಬ ಅರ್ಥದಲ್ಲೇ ವ್ಯಾಖ್ಯಾನಿಸಲಾಗುತ್ತದೆ. ಭಾರಿ ಹೊಟೇಲ್‌ಗಳಲ್ಲಿ ಮತ್ತಿತರ ಪ್ರವಾಸಿ ಸ್ಥಳಗಳಲ್ಲಿ ಶಸ್ತ್ರಾಸ್ತ್ರ ಹೊಂದಿದ ಭದ್ರತಾ ವ್ಯವಸ್ಥೆ ನೀಡುವುದು, ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿ, ಉತ್ತಮ ತರಬೇತಿ ನೀಡುವುದು, ಆರಕ್ಷಕ ವ್ಯವಸ್ಥೆಗೆ ಹೆಚ್ಚಿನ ಅಧಿಕಾರ ನೀಡುವುದು, ಪ್ರತಿ ನಗರದಲ್ಲೂ ಕಮಾಂಡೋ ಪಡೆಗಳನ್ನು ನೇಮಿಸುವುದು, ಹೀಗೆ ಹತ್ತು ಹಲವಾರು ಸಲಹೆಗಳು ಬರುತ್ತವೆ. ಮುಂಬೈ ದಾಳಿಯ ನಂತರವೂ ಇದೇ ಪ್ರಕ್ರಿಯೆ ಜಾರಿಯಲ್ಲಿರುವುದನ್ನು ಗಮನಿಸಬಹುದು. ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಈ ರೀತಿಯ ಕ್ರಮಗಳಿಂದ ಅಪರಾಧಗಳ, ಪಾತಕಿ ಕೃತ್ಯಗಳ ನಿಯಂತ್ರಣ ಸಾಧ್ಯವೇ? ಎಂಬ ಗಂಭೀರವಾದ ಪ್ರಶ್ನೆ ಏಳುತ್ತದೆ.

ಭಯೋತ್ಪಾದನೆಯಾಗಲೀ, ಕೋಮುವಾದವಾಗಲೀ, ಜಾತಿಸಂಘರ್ಷಗಳಾಗಲೀ, ರಾಜಕೀಯ ಪಾತಕೀಕರಣವಾಗಲಿ ಈ ಎಲ್ಲ ದುರ್ಲಕ್ಷಣಗಳೂ ಯಾವುದೋ ಒಂದು ಸಾಮಾಜಿಕ ಸನ್ನಿವೇಶದಲ್ಲಿ ಆವಿರ್ಭವಿಸುತ್ತವೆ. ಪ್ರಾದೇಶಿಕ ಅಸಮತೋಲನದಿಂದ ಹಿಡಿದು ಆಳ್ವಿಕರ ತಾರತಮ್ಯ ನೀತಿಯವರೆಗೆ ಅನೇಕ ಸಂದರ್ಭಗಳು ಈ ಬೆಳವಣಿಗೆಗಳಿಗೆ ಕಾರಣವಾಗಿರುತ್ತವೆ. ಈ ಸಮಸ್ಯೆಗಳನ್ನು ಬಗೆಹರಿಸಲೆಂದೇ ನಾವು ನಮ್ಮ ರಾಷ್ಟ್ರವನ್ನು ಒಂದು ಸೆಕ್ಯುಲಾರ್ ಗಣತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದ್ದೇವೆ. ೧೦೦ ಕೋಟಿ ಭಾರತೀಯರನ್ನು ಪ್ರತಿನಿಧಿಸಲು ೪೮೯೬ ಜನಪ್ರತಿನಿಧಿಗಳನ್ನು ನಾವು ಕಾಲಕಾಲಕ್ಕೆ ಚುನಾಯಿಸಿ ಕಳುಹಿಸುತ್ತೇವೆ. ಈ ಜನ ಪ್ರತಿನಿಧಿಗಳು ಸಂಸತ್ತಿನ, ವಿಧಾನ ಸಭೆಗಳ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ರೂಪಿಸುವ ಸಾಮಾಜಿಕ-ಆರ್ಥಿಕ ನೀತಿಗಳು ೧೦೦ ಕೋಟಿ ಜನತೆಯ ಭವಿಷ್ಯವನ್ನು, ವಾಸ್ತವವನ್ನು ನಿರ್ಧರಿಸುತ್ತವೆ. ಈ ಪ್ರತಿನಿಧಿಗಳೂ ಕೈಗೊಳ್ಳುವ ರಾಜಕೀಯ ನಿರ್ಧಾರಗಳು ಇಡೀ ದೇಶದ ಭವಿಷ್ಯವನ್ನು ನಿರ್ಧರಿಸುತ್ತವೆ. ಗ್ಯಾಟ್ ಒಪ್ಪಂದ, ೧೨೩ ಅಣು ಒಪ್ಪಂದ ಕೆಲವು ನಿದರ್ಶನಗಳಷ್ಟೆ. ಮೇಲೆ ಹೇಳಿದ ಸಾಮಾಜಿಕ ಸಮಸ್ಯೆಗಳ ಮತ್ತು ಅದರಿಂದ ಉಂಟಾಗುವ ಪಾತಕೀಕರಣ ಪ್ರಕ್ರಿಯೆಯ ಉಲ್ಬಣಾವಸ್ಥ್ತೆಗೆ ಈ ಪ್ರತಿನಿಧಿಗಳ ಕೊಡುಗೆ ಏನು? ಈ ಗಂಭೀರವಾದ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳಬೇಕಿದೆ.

ಏಕೆಂದರೆ ಈ ಜನ ಪ್ರತಿನಿಧಿಗಳೇ ಪೊಲೀಸ್ ವ್ಯವಸ್ಥೆಯನ್ನೂ, ಆಡಳಿತ ವ್ಯವಸ್ಥೆಯನ್ನೂ, ನ್ಯಾಯಾಂಗವನ್ನೂ ನಿಯಂತ್ರಿಸುತ್ತಾರೆ. ಸಾಮಾನ್ಯ ಜನತೆಯ ದೈನಂದಿನ ಜೀವನಾವಶ್ಯಗಳನ್ನು ಪೂರೈಸುವುದರೊಂದಿಗೇ ಒಂದು ಸುಭದ್ರ, ಸಧೃಢ ಸಮಾಜವನ್ನು ನಿರ್ಮಿಸುವುದು ಈ ಪ್ರತಿನಿಧಿಗಳ ಮೂಲಭೂತ ಹೊಣೆಗಾರಿಕೆಯಾಗಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಚುನಾಯಿತ ಪ್ರತಿನಿಧಿಗಳು ಎಷ್ಟರ ಮಟ್ಟಿಗೆ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ? ನರೇಂದ್ರ ಮೋದಿಯವರ ನಾಟಕೀಯ ಮುಂಬೈ ಭೇಟಿ, ಕೇರಳದ ಮುಖ್ಯಮಂತ್ರಿಗಳ ಸಾಂತ್ವನದ ಪ್ರಹಸನ, ಎ.ಆರ್.ಅಂಟುಲೇ ಅವರ ಬಾಲಿಶ ಹೇಳಿಕೆ, ನಾವು ಹೇಳಿದಂತೆ ಮಾಡಿ ಇಲ್ಲವಾದಲ್ಲಿ ಈ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಬೀಗುವ ವಿರೋಧ ಪಕ್ಷಗಳ ನಡವಳಿಕೆ, ಇವೆಲ್ಲವೂ ನಮ್ಮನ್ನು ಆಳುತ್ತಿರುವ ಪ್ರತಿನಿಧಿಗಳ ಕಾರ್ಯವೈಖರಿಗೆ ನಿದರ್ಶನವಷ್ಟೆ. ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಧರ್ಮ, ಜಾತಿ, ಭಾಷೆ, ಲಿಂಗ, ಪ್ರಾಂತ್ಯ ಹೀಗೆ ಎಲ್ಲ ಅಸ್ಮಿತೆಗಳನ್ನೂ ದಾಳಗಳಂತೆ ಉಪಯೋಗಿಸುವ ರಾಜಕೀಯ ಶಕ್ತಿಗಳು ಇದೇ ಅಸ್ಮಿತೆಗಳನ್ನೇ ಉಪಯೋಗಿಸಿಕೊಂಡು ಒಂದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಏಕೆ ಶ್ರಮಿಸುವುದಿಲ್ಲ. ಮುಂಬೈ ದಾಳಿಯಲ್ಲಿ ಹಲವಾರು ಪೊಲೀಸರು ಹುತಾತ್ಮರಾಗಿದ್ದಕ್ಕೆ ಅವರ ಧೈರ್ಯ, ನಿಷ್ಠೆ ಮತ್ತು ಸಾಹಸಗಳು ಒಂದು ಕಾರಣವಾದರೆ, ಭಯೋತ್ಪಾದಕರೊಡನೆ ಕಾದಾಡಲು ಅವಶ್ಯವಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಅವರಿಗೆ ಒದಗಿಸದೆ ಇದ್ದುದೂ ಮತ್ತೊಂದು ಕಾರಣ ಎಂಬ ಮಾತು ಒಪ್ಪುವಂತಹುದೇ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಇದು ಅನಿವಾರ್ಯವೂ ಆಗಬಹುದು. ಆದರೆ ಒಂದು ಸುಭಿಕ್ಷ ಸಮಾಜದ ನಿರ್ಮಾಣಕ್ಕೆ ಸಾಮಾಜಿಕ ಜನಪರ ಕಾಳಜಿ ಮತ್ತು ರಾಜಕೀಯ ಇಚ್ಚಾಶಕ್ತಿಗಳು ಅವಶ್ಯವೇ ಹೊರತು ಸಶಸ್ತ್ರ ಸುಭದ್ರತೆಯಲ್ಲ.

ನಾಗರಿಕತೆಯ ಉನ್ನತ ಹಂತದಲ್ಲಿರುವ ಯಾವುದೇ ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ಮುಕ್ತ ವಾತಾವರಣವನ್ನು ಬಯಸಬೇಕೇ ಹೊರತು, ಉಸಿರು ಕಟ್ಟುವ ವಾತಾವರಣವನ್ನಲ್ಲ. ಸಾರ್ವಜನಿಕರ ಸುರಕ್ಷತೆಗಾಗಿ ಆರಕ್ಷಕ ವ್ಯವಸ್ಥೆ ಒಂದು ಪರಿಕರವಾಗಬೇಕೇ ವಿನಹ ಅಗತ್ಯತೆಯಾಗಬಾರದು. ಯಾವುದೇ ಸಮಾಜ ಹೆಚ್ಚಿನ ರಕ್ಷಣೆ ಬಯಸುವುದು ಆ ಸಮಾಜದೊಳಗಿನ ಅಭದ್ರತೆ ಮತ್ತು ಅನಿಶ್ಚಿತತೆಯ ಕುರುಹಾಗಿರುತ್ತದೆ. ಭಾರತೀಯ ಸಮಾಜ ಇಂದು ಈ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಜಾತಾಂತ್ರಿಕ ಪ್ರಕ್ರಿಯೆ, ಚುನಾವಣೆಗಳ, ಸಂದರ್ಭದಲ್ಲೂ ಮುಕ್ತವಾಗಿ ಸಂಚರಿಸಲಾಗದ ಮಟ್ಟಿಗೆ ಭಾರತೀಯ ಸಮಾಜ ಶಿಥಿಲವಾಗಿದೆ. ಪಾತಕೀ ಕೃತ್ಯಗಳಲ್ಲಿ ತೊಡಗಿ, ಅಪರಾಧಗಳ ಸರಮಾಲೆಗಳನ್ನು ಹೊತ್ತ ಅನೇಕರನ್ನು ನಾವು ಸಂಸತ್ತಿಗೆ, ವಿಧಾನಸಭೆಗಳಿಗೆ ನಿಸ್ಸಂಕೋಚವಾಗಿ ಆರಿಸಿ ಕಳುಹಿಸುತ್ತಿದ್ದೇವೆ. ಸಾರ್ವಜನಿಕ ಜೀವನದಲ್ಲಿ ನಮ್ಮ ಸುತ್ತಲೂ ಸಂಭವಿಸುತ್ತಿರುವ ಅನೇಕ ಭ್ರಷ್ಟಾಚಾರಗಳಿಗೆ, ಪಾತಕಿ ಕೃತ್ಯಗಳಿಗೆ ಮೂಕಪ್ರೇಕ್ಷಕರಾಗಿದ್ದೇವೆ. ನಮ್ಮ ಆಂತರ್ಯದೊಳಗೇ ಅಡಗಿರುವ ಹಿಂಸಾತ್ಮಕ ಧೋರಣೆಗೆ ಧರ್ಮ, ಜಾತಿ, ಭಾಷೆಗಳ ಲೇಪನ ಮಾಡಿ ನಮ್ಮದೇ ಆದ ಅಹಮಿಕೆಯಲ್ಲಿ ಮೆರೆಯುತ್ತಿದ್ದೇವೆ. ಈ ಎಲ್ಲ ನ್ಯೂನತೆಗಳೂ ರಾಜಕೀಯ ಚದುರಂಗದಾಟಕ್ಕೆ ದಾಳಗಳಾಗಿವೆ. ಈ ನ್ಯೂನತೆಗಳನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲದೆ ನಮ್ಮ ರಕ್ಷಣೆಗಾಗಿ ಸರ್ಕಾರದ ಮೊರೆ ಹೋಗುತ್ತಿದ್ದೇವೆ.

ಆಳುವ ವರ್ಗಗಳಿಗೆ ಈ ರೀತಿಯ ಸನ್ನಿವೇಶಗಳು ವರದಾನವಿದ್ದಂತೆ. ಜನಸಾಮಾನ್ಯರ ಸಮಸ್ಯೆಗಳು ಉಲ್ಬಣಗೊಂಡಂತೆಲ್ಲಾ ಕ್ಷೆಭೆ ಹೆಚ್ಚಾಗುತ್ತದೆ, ಪರಸ್ಪರ ಅಸೂಯೆ ಮೂಡುತ್ತದೆ, ತಮ್ಮ ಸಮಸ್ಯೆಗಳಿಗೆ ಪರರನ್ನು ನಿಂದಿಸುವ ಪ್ರವೃತ್ತಿ ಬೆಳೆಯುತ್ತದೆ. ಈ ಸನ್ನಿವೇಶವನ್ನು ಬಳಸಿಕೊಂಡು ರಾಜಕೀಯ ಸಂಘಟನೆಗಳು ಜನರ ಮನಗಳಲ್ಲಿ ದ್ವೇಷ ಭಾವನೆಯನ್ನು ಬಿತ್ತುತ್ತವೆ. ಈ ದ್ವೇಷ ಅಸೂಯೆಗಳೇ ಜನರ ಐಕ್ಯತೆಗೆ ಭಂಗ ತರುತ್ತವೆ. ಇದೇ ದ್ವೇಷವನ್ನು ಆಂತರಿಕವಾಗಿ ಬೃಹದಾಕಾರವಾಗಿ ಬೆಳೆಸಿ, ನಂತರದಲ್ಲಿ ರಾಷ್ಟ್ರದ ಐಕ್ಯತೆಯ ಹೆಸರಿನಲ್ಲಿ ಬಾಹ್ಯ ವೈರಿಯ ವಿರುದ್ಧ ತಿರುಗಿಸುವುದು ಯುದ್ಧೋನ್ಮಾದಕ್ಕೆ ಎಡೆಮಾಡಿಕೊಡುತ್ತದೆ. ಮುಂಬೈ ದಾಳಿಯ ನಂತರದಲ್ಲಿ ಈ ಪ್ರಕ್ರಿಯೆ ಅನಾವರಣಗೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬಿಕ್ಕಟ್ಟು ತೋರಿದಾಗಲೆಲ್ಲಾ ಯುದ್ಧದ ಕಾರ್ಮೋಡ ಕವಿಯುತ್ತದೆ. ಆದರೆ ಯುದ್ಧ ಸೋಲು ಗೆಲುವಿನ ಪ್ರಶ್ನೆಯಲ್ಲ, ವಿನಾಶದ ಮಾರ್ಗ ಎಂಬ ಸತ್ಯವನ್ನು ನಾವಿಂದು ಗ್ರಹಿಸಬೇಕಾಗಿದೆ. ಎಲ್ಲ ಯುದ್ಧಗಳೂ ನಡೆಯುವುದು ಶಾಂತಿಗಾಗಿ ಎಂದು ದಾರ್ಶನಿಕರೊಬ್ಬರು ಹೇಳುತ್ತಾರೆ. ಆದರೆ ಶಾಂತಿ ನೆಲೆಸುವ ಹಾದಿಯಲ್ಲಿ ಸಾವಿರಾರು ಅಮಾಯಕ ಜೀವಗಳ ಮಾರಣ ಹೋಮವಾಗಿರುತ್ತದೆ. ಜಾಗತಿಕ ಇತಿಹಾಸದಲ್ಲಿ ಪ್ರತಿಯೊಂದು ಯುದ್ಧದ ನಂತರವೂ ಬಿಕ್ಕಟ್ಟಿಗೆ ಸಿಲುಕಿದ್ದ ಬಂಡವಾಳಶಾಹಿ ವ್ಯವಸ್ಥೆ ಚೇತರಿಸಿಕೊಂಡಿದೆ. ಆದರೆ ಇನ್ನೊಂದೆಡೆ ಸಾಮಾನ್ಯ ಜನತೆ ಅದರ ಭೀಕರ ಪರಿಣಾಮಗಳನ್ನು ಮೌನವಾಗಿ ಸಹಿಸಿಕೊಂಡಿದೆ. ಹಿರೋಷಿಮಾದಿಂದ ಹಿಡಿದು ಆಫ್ಘಾನ್ ಯುದ್ಧದವರೆಗೂ ಇದು ಸರ್ವಕಾಲಿಕ ಸತ್ಯ. ಆದರೆ ಈ ಯುದ್ಧಗಳಿಂದ ಸಮಸ್ಯೆ ಬಗೆಹರಿದಿದೆಯೇ ಎಂಬ ಪ್ರಶ್ನೆ ಏಕೆ ಮೂಡುವುದಿಲ್ಲ ? ತನ್ನ ಏಳು ವರ್ಷಗಳ ಭೀಕರ ಕಾಳಗದಲ್ಲಿ ಅಮೆರಿಕಾ ತಾಲಿಬಾನ್ ನಾಯಕರನ್ನು ಬಂಧಿಸಲಾಗಿಲ್ಲ. ಅಥವಾ ತಾಲಿಬಾನ್ ಸೃಷ್ಟಿಸಿದ ಭಯೋತ್ಪಾದನೆಯನ್ನು ತಡೆಗಟ್ಟಲಾಗಿಲ್ಲ. ಮತ್ತೊಂದು ಯುದ್ಧ ನಡೆದರೂ ಇದೇ ಪರಿಣಾಮವೇ ಉಂಟಾಗುವುದಲ್ಲವೇ ?

ಯಾವುದೋ ಒಂದು ವಿಕಲ್ಪ ಮನಸ್ಸಿನ ಗುಂಪು ಎಸಗುವ ಅಪರಾಧಗಳಿಗೆ ಇಡೀ ಸಮುದಾಯವನ್ನು ಗುರಿಪಡಿಸುವುದು ಮಾನವೀಯ ಲಕ್ಷಣವಲ್ಲ. ವಂಚಿತ ಸಮುದಾಯಗಳ ಹಿತರಕ್ಷಣೆಯ ಹೆಸರಿನಲ್ಲಿ ಮನುಕುಲವನ್ನೇ ನಾಶಮಾಡಲು ಹೊರಟಿರುವ ಹೋರಾಟಗಾರರೂ ಈ ಸತ್ಯವನ್ನು ಗ್ರಹಿಸಬೇಕಾಗಿದೆ. ವಂಚಿತ ಸಮುದಾಯಗಳೂ ತಮ್ಮನ್ನು ಹಾದಿ ತಪ್ಪಿಸುವವರಿಂದ ದೂರ ಇರಬೇಕಾಗಿದೆ. ತಮ್ಮ ಸಾಮುದಾಯಿಕ ಆಶೋತ್ತರಗಳ ಈಡೇರಿಕೆಗೆ ಪ್ರಜಾತಾಂತ್ರಿಕ ಹಾದಿಯಲ್ಲೇ ಹೋರಾಡುವ ಸಾಧ್ಯತೆಗಳಿರುವುದನ್ನು ಗಾಂಧಿ, ಅಂಬೇಡ್ಕರ್, ಮಂಡೇಲ ಮುಂತಾದ ಮಹಾನ್ ನಾಯಕರು ತೋರಿಸಿಕೊಟ್ಟಿದ್ದಾರೆ. ಯುದ್ಧೋನ್ಮಾದವನ್ನು ಸೃಷ್ಟಿಸುವ ಮೂಲಕ ಜನಗಳ ಮೂಲಭೂತ ಸಮಸ್ಯೆಗಳನ್ನು ಮರೆಮಾಚುವ ಬಂಡವಾಳಶಾಹಿ ವ್ಯವಸ್ಥೆಯ ಹುನ್ನಾರಗಳಿಗೆ ಬಲಿಯಾಗದಿರಲು, ಸಾಮಾನ್ಯ ಜನತೆ ಸ್ಪಷ್ಟವಾದ ಯುದ್ಧವಿರೋಧಿ ನಿಲುವು ತಾಳುವುದು ಇಂದಿನ ತುರ್ತು ಅಗತ್ಯತೆಯಾಗಿದೆ. ಹಾಗಾದಲ್ಲಿ ಮಾತ್ರ ಆಳುವ ವರ್ಗಗಳಿಗೆ ಮತ್ತು ನಾಗರಿಕ ಸಮಾಜಕ್ಕೆ ತನ್ನ ಹೊಣೆಗಾರಿಕೆಯ ಅರಿವು ಮೂಡುತ್ತದೆ.

ನಾ ದಿವಾಕರ.

ದಿವಾಕರ್ ಅವರೇ,
ನಿಮ್ಮ ವಿಚಾರಗಳು ಅಕ್ಷರ ಸಹ ನಿಜ. ವಿಪರ್ಯಾಸವೆಂದರೆ ಭಾರತವನ್ನೊಳಗೊಂಡು ಪ್ರಪಂಚದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಭಯೋತ್ಪಾದನೆಯನ್ನು ಹತ್ತಿಕ್ಕಲು ರಾಜತಾಂತ್ರಿಕ ಮಾರ್ಗಗಳನ್ನು ಅನುಸರಿಸುತ್ತಲೇ ಬಂದಿವೆ. ಆದರೂ ದುಷ್ಟ ಶಕ್ತಿಗಳು ತಮ್ಮ ಅಟ್ಟ ಹಾಸ ಮೆರೆಯುತ್ತಲಿರುವುದು ದಿನ ಬೆಳಗಿನ ಸಮಸ್ಯೆಯಾಗಿದೆ. ಖಂಡಿತವಾಗಿಯೂ ಯುದ್ದ ಪರಿವಾರವಲ್ಲ, ಆದರೆ ಯಾರ ಸಹಾಯವೂ ಇಲ್ಲದೆ ಇಂತಹ ದುಷ್ಕ್ರುತ್ಯಗಳನ್ನೆಸಗುವುದು ಸುಲಭವಲ್ಲ ಎನ್ನುವುದು ಸತ್ಯ ಸಂಗತಿ. ಹಾಗಾಗಿ ಪ್ರತಿಯೊಬ್ಬ ನಾಗರೀಕರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ.