You are hereಸ್ಪರ್ಧೆಗೆ ಲೇಖನ ಕಳುಹಿಸಿದವರೆಲ್ಲರಿಗೂ ಧನ್ಯವಾದಗಳು - ಫಲಿತಾಂಶ ಫೆಬ್ರವರಿ 15 ರಂದು
ಸ್ಪರ್ಧೆಗೆ ಲೇಖನ ಕಳುಹಿಸಿದವರೆಲ್ಲರಿಗೂ ಧನ್ಯವಾದಗಳು - ಫಲಿತಾಂಶ ಫೆಬ್ರವರಿ 15 ರಂದು
ಮೊದಲಿಗೆ, ಎಲ್ಲರಿಗೂ ಭಾರತದ 2009 ರ ಗಣರಾಜ್ಯೋತ್ಸವದ ಶುಭಾಶಯಗಳು.
ವಿಚಾರ ಮಂಟಪ ಆಹ್ವಾನಿಸಿದ್ದ ಲೇಖನಗಳಿಗೆ ಸ್ಪಂದಿಸಿ ಲೇಖನಗಳನ್ನು ಕಳುಹಿಸಿದ ನಾಲ್ವರು ಲೇಖಕರಿಗೂ (ಕೆ.ಆರ್.ರವೀಂದ್ರ, ವಿಜಯಲಕ್ಷ್ಮಿ ಉಡಿಕೇರಿ, ವಿನಾಯಕ ಎಲ್ ಪಟಗಾರ, ಜಿ. ಆರ್. ವಸಂತಕುಮಾರ್) ನಮ್ಮ ಕೃತಜ್ಞತೆಗಳು. ಸ್ಪರ್ಧೆಗೆ ಬಂದ ಲೇಖನಗಳನ್ನು ಈಗ ಪೂರ್ಣವಾಗಿ ಪ್ರಕಟಿಸಲಾಗಿದೆ.
ವಿಷಯ: ಗ್ರಾಮ-ರೈತ ಭಾರತಕ್ಕೆ ಸಂಬಂಧಿಸಿದಂತೆ
- ಆರ್ಥಿಕ ಅಸ್ಪೃಶ್ಯ ಸಮಾಜದ ಬದುಕು-ಬವಣೆ
- ಗ್ರಾಮ ಭಾರತದ ಸವಾಲುಗಳು ಮತ್ತು ಪರಿಹಾರಗಳು
- ದೇಶದ ಬೆನ್ನಲಬು ರೈತ, ರೈತನ ಬೆನ್ನಲಬು ... . . . .?
- ಭಾರತದ ಹಳ್ಳಿಗಳ ಸ್ಥಿತಿಗತಿ ಒಂದು ಇಣುಕುನೋಟ
ವಿಷಯ: ಐಟಿ-ಭಾರತಕ್ಕೆ ಸಂಬಂಧಿಸಿದಂತೆ
ಯಾವುವೂ ಬಂದಿಲ್ಲ!
ಕೇವಲ ಒಂದೇ ವಿಷಯಕ್ಕೆ ಲೇಖನಗಳು ಬಂದಿವೆ. ಬಂದಿರುವ ಲೇಖನಗಳ ಸಂಖ್ಯೆ 4. ಪ್ರತಿ ವಿಷಯಕ್ಕೂ ಗರಿಷ್ಠ 6 ಲೇಖನಗಳಿಗೆ ಬಹುಮಾನ ಇರುವುದರಿಂದ ಬಂದಿರುವ ಲೇಖನಗಳೆಲ್ಲವುಗಳಿಗೂ ಈಗ ನಗದು ಬಹುಮಾನ ಕೊಡಲಾಗುತ್ತದೆ. ಮೊದಲ ಬಹುಮಾನ ರೂ. 2500 ಮತ್ತು ಪ್ರೋತ್ಸಾಹಕರ ಬಹುಮಾನ ರೂ. 1000. ಬಂದಿರುವ ಲೇಖನಗಳಲ್ಲಿ ಉತ್ತಮವೆನಿದ ಲೇಖನವನ್ನು ಮತ್ತಿತರ ವಿವರಗಳನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುತ್ತದೆ.
ಮೇಲಿನ ವಿಷಯಗಳ ಮೇಲೆ ಈಗಲೂ ಲೇಖನ ಬರೆಯ ಬಯಸುವವರಿಗೆ ಈಗಲೂ ಬರೆಯಲು ಅವಕಾಶವಿದೆ. ಅವುಗಳನ್ನು ಅಂದಂದೇ ಪೂರ್ಣವಾಗಿ ಪ್ರಕಟಿಸಲಾಗುತ್ತದೆ. ಆದರೆ ಅವನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
ಧನ್ಯವಾದಗಳೊಂದಿಗೆ,
ರವಿ...
ಜನವರಿ 26, 2009.
ಅಂತರ್ಜಾಲದ ಕನ್ನಡ ಬರಹಗಳಿಗೆ ಆಹ್ವಾನ
ಗೆಳೆಯರೆ,
ಎಲ್ಲರಿಗೂ 2009, ಹೊಸ ವರ್ಷದ ಶುಭಾಶಯಗಳು.
ವಿಚಾರ ಮಂಟಪದ ವತಿಯಿಂದ ನಮ್ಮೆಲ್ಲರಿಗೂ ಸಂಬಂಧಿಸಿದ ಕನಿಷ್ಠ ಎರಡು ವಿಷಯಗಳ ಮೇಲೆ ಲೇಖನಗಳನ್ನು ಆಹ್ವಾನಿಸೋಣ ಎಂದು ಮನಸ್ಸಿಗೆ ಬಂದ ತಕ್ಷಣ ಈ ಆಹ್ವಾನ ಬರೆಯುತ್ತಿದ್ದೇನೆ. ಕನ್ನಡ ಬರೆಯಬಲ್ಲ ಯಾರು ಬೇಕಾದರೂ ಇದರಲ್ಲಿ ಪಾಲ್ಗೊಳ್ಳಬಹುದು. ಇಂಗ್ಲಿಷಿನಲ್ಲಿ ಬರೆದು ಕನ್ನಡಕ್ಕೆ ಭಾಷಾಂತರಿಸಿ ಬೇಕಾದರೂ ಸಲ್ಲಿಸಬಹುದು.
ದೇಶದ ಗ್ರಾಮೀಣ ಸ್ಥಿತಿ ಮತ್ತು ಕೃಷಿಯ ಬಗ್ಗೆ ಅನುಭವ ಅಥವ ಒಳನೋಟ ಇರುವ ಯಾರು ಬೇಕಾದರೂ ಯೋಚಿಸಿ ಬರೆಯಬಹುದಾದ
"ಗ್ರಾಮೀಣ/ಕೃಷಿ/ರೈತ ಭಾರತದ ಸವಾಲುಗಳು ಮತ್ತು ಪರಿಹಾರಗಳು; ಸರ್ಕಾರಗಳು ಕೈಗೊಳ್ಳಬೇಕಾದ ನೀತಿಗಳು; ಗ್ರಾಮೀಣ ಭಾರತದ ಪ್ರಜಾಆಡಳಿತದ ಸವಾಲುಗಳು; ಜನರ ಪಾತ್ರ ಮತ್ತು ಅವರ ಮಿತಿಗಳು; ಗ್ರಾಮೀಣ ಉದ್ದಿಮೆಗಳು; ಇತ್ಯಾದಿ...", ಮೊದಲ ವಿಷಯ.
ಎರಡನೆಯದು,
"ಭಾರತದ ಐಟಿ/ಬಿಪಿಒ ಉದ್ದಿಮೆ, ಅದರಿಂದಾದ/ಆಗುತ್ತಿರುವ ಒಳ್ಳೆಯ/ಕೆಟ್ಟ ಪರಿಣಾಮಗಳು; ನೌಕರರ ಮತ್ತು ಕಂಪನಿಗಳ ಸವಾಲುಗಳು, ಪರಿಹಾರಗಳು; ಮುಂದೆ ಸವೆಸಬೇಕಾದ ದಾರಿ; ಸರ್ಕಾರ ಮತ್ತು ಉದ್ಯಮ ತೆಗೆದುಕೊಳ್ಳಬಹುದಾದ ನಿರ್ಣಯಗಳು, ಇತ್ಯಾದಿ..."
ಪ್ರತಿ ವಿಷಯಕ್ಕೂ ಮೊದಲ ಬಹುಮಾನ ರೂ.2500
ಸಮಾಧಾನಕರ ಬಹುಮಾನಗಳು 5 - ತಲಾ ರೂ.1000
(ಒಂದು ವಿಷಯಕ್ಕೆ ಒಟ್ಟು ಬಹುಮಾನದ ಮೊತ್ತ ರೂ.7500)
ಪ್ರೀತಿಯಲ್ಲಿ,
ರವಿ...
ಜನವರಿ 1, 2009
ಶರಣರ ಬರವೆಮಗೆ ಜೀವ ಜೀವಾಳವಯ್ಯ
ಉಳ್ಳವರು ಶಿವಾಲಯವ ಮಾಡಿಹರು ! ನಾನೇನ ಮಾಡುವೆ ? ಬಡವನಯ್ಯ ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ! ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! - ಬಸವಣ್ಣ |
|
12 ನೇ ಶತಮಾನದಲ್ಲಿ ಬಸವಣ್ಣ ಮತ್ತು 20 ನೇ ಶತಮಾನದಲ್ಲಿ ಕುವೆಂಪು ಕರ್ನಾಟಕ ಕಂಡ ಕೆಚ್ಚೆದೆಯ ಸಾಮಾಜಿಕ ಸುಧಾರಣಾ ಪ್ರಜ್ಞೆಯ ದಾರ್ಶನಿಕರು. ಹಾಗೆಯೇ 2004 ನೇ ಇಸವಿ ಈ ಮಾನವತಾವಾದಿಗಳ ಧ್ಯೇಯ ಸಿದ್ಧಾಂತಗಳ ಬಗೆಗೆ ಹೆಚ್ಚೆಚ್ಚು ಚರ್ಚಿಸಲ್ಪಡುತ್ತಿರುವ ಸಂಧ್ಯಾಕಾಲ. ಕುವೆಂಪುರವರ ಜನ್ಮಶತಾಬ್ಧಿಯ ಅಂಗವಾಗಿ ನಾಡಿನಾದ್ಯಂತ ಕುವೆಂಪುರವರ ಬರಹ-ಬದುಕು ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತಿದೆ. "ಜಯ್ ಭಾರತ ಜನನಿಯ ತನುಜಾತೆ" ಗೀತೆಯನ್ನು ನಾಡಗೀತೆಯನ್ನಾಗಿ ಸರ್ಕಾರ ಆಯ್ದುಕೊಂಡಾಗಿನಿಂದ ಚರ್ಚೆ ಪ್ರಬಲವಾಗಿಯೇ ಪ್ರಾರಂಭವಾಗಿ ಕುವೆಂಪುರವರ ವೈಚಾರಿಕತೆಯನ್ನು ಶೋಧಿಸಲು ಅಕ್ಷರಸ್ಥರನ್ನು ಆಹ್ವಾನಿಸಿದೆ. ಇನ್ನೊಂದು ಕಡೆ ಚಿತ್ರದುರ್ಗದ ಮುರುಘರಾಜೇಂದ್ರ ಮಠಾಧೀಶರಿಂದ ಬಸವಧರ್ಮ ಸ್ಥಾಪನೆ ಮತ್ತು ಮಾಂಸಾಹಾರಿಗಳಿಗೂ ಹೊಸಧರ್ಮದಲ್ಲಿ ಪ್ರವೇಶ ಮತ್ತು ಸ್ಥಾನ ಎಂಬ ನೀತಿಯಿಂದಾಗಿ ಬಸವಣ್ಣ ಮತ್ತು ವಚನಸಾಹಿತ್ಯ ಚಳವಳಿ ಹೊಸ ಚರ್ಚೆಗೆ ಬಾಗಿಲು ತೆರೆದಿದೆ. ಈ ನಿಟ್ಟಿನಲ್ಲಿ ವಚನಸಾಹಿತ್ಯ, ಕುವೆಂಪುರವರ ವೈಚಾರಿಕ ಬರಹಗಳು, ನಾಡಿನ ಜನರ ತವಕ-ತಲ್ಲಣ, ಚರ್ಚೆಗಳನ್ನು ಅಂತರ್ಜಾಲದಲ್ಲಿ ದಾಖಲಿಸಲು ವಿಚಾರ ಮಂಟಪ ಮುಂದಾಗಿದೆ.
ಇದಷ್ಟೇ ಅಲ್ಲದೆ ಇಂಗ್ಲಿಷ್‌ನಲ್ಲಿ ಈಗಾಗಲೆ ಹಲವು ಜಾಲತಾಣಗಳಲ್ಲಿ ಲಭ್ಯವಾಗಿರುವಂತೆ ಮೂಲಕೃತಿಯ ಹಕ್ಕು ಹೊಂದಿಲ್ಲದ ವೈಚಾರಿಕ ವಚನ ಸಾಹಿತ್ಯ, ದಾಸ ಸಾಹಿತ್ಯ*, ಮತ್ತು ಕಳೆದ ಶತಮಾನದ ಕನ್ನಡದ ಶ್ರೇಷ್ಠ ಚಿಂತಕರ ವೈಚಾರಿಕ ಬರಹಗಳನ್ನು ಪ್ರಕಟಿಸುವುದು ನಮ್ಮ ಸದ್ಯದ ಗುರಿ. ಇದಕ್ಕಾಗಿ ಇವೆಲ್ಲವುಗಳನ್ನು ಬರಹ/ಯೂನಿಕೋಡ್ ಲಿಪಿಗೆ ಕೀಲಿಸುವ ಸ್ವಯಂಸೇವಕರ ಅವಶ್ಯಕತೆ ಇದ್ದು ಇಚ್ಚೆಯಿದ್ದವರು ದಯವಿಟ್ಟು ನಮ್ಮನ್ನು ಸಂಪರ್ಕಿಸಬೇಕೆಂದು (vicharamantapa@vicharamantapa.net ಅಥವ ಕೆಳಗೆ ಕಾಮೆಂಟ್ ಹಾಕುವುದರ ಮೂಲಕ) ಕೋರುತ್ತೇವೆ.
ಸೈದ್ಧಾಂತಿಕ ಚಿಂತನಾ ಘರ್ಷಣೆ, ಭಿನ್ನ-ಅಭಿಪ್ರಾಯ, ಹಲವು ಮಜಲು-ಒಳನೋಟಗಳಿಲ್ಲದ ಒಂದು ವ್ಯವಸ್ಥೆ ಕಿಲುಬು ಹಿಡಿದು, ಅಲ್ಲಿ ಸೃಜನಶೀಲತೆ ಕ್ಷೀಣಿಸಿ, ಸಮಸ್ಯೆಗೆ ಪರಿಹಾರ ಹುಡುಕುವ ಧೈರ್ಯ ಇಲ್ಲವಾಗಿ, ವ್ಯವಸ್ಥೆಯೊಂದಿಗೆ ರಾಜಿಯಾಗುವ ಮನೋಭಾವ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಬಂದೇ ಬರುವ ಬದಲಾವಣೆ ಅಹಿಂಸಾತ್ಮಕವಾಗೇನೂ ಇರುವುದಿಲ್ಲ. ಸಮಸ್ಯೆಯನ್ನು ಕಂಡುಹಿಡಿಯುವುದು ಎಷ್ಟು ಮುಖ್ಯವೋ ಅದನ್ನು ತಾರ್ಕಿಕ ಅಂತ್ಯಕ್ಕೆ, ಕ್ರಿಯೆಯೆಡೆಗೆ ಕೊಂಡೊಯ್ಯುವುದೂ ಅಷ್ಟೇ ಮುಖ್ಯ. ಅದು ಅಹಿಂಸಾತ್ಮಕವಾಗಿದ್ದಷ್ಟೂ, ವಸ್ತುನಿಷ್ಠವಾಗಿದ್ದಷ್ಟೂ, ಆಧಾರಪೂರ್ವಕವಾಗಿದ್ದಷ್ಟೂ ಒಳ್ಳೆಯದು. ಹೀಗಾಗಿ, ಕನ್ನಡ ಅಂತರ್ಜಾಲ ಚಾರಣಿಗರಿಗೆ ನಮ್ಮ ಹಿಂದಿನ/ಇಂದಿನ ಚಿಂತಕರ ಚಿಂತನೆಯ ಆಧಾರಗಳ ಪರಾಮರ್ಶೆಗೆ ವಿಚಾರ ಮಂಟಪ ಒಂದು ಆನ್‌ಲೈನ್ ಗ್ರಂಥಾಲಯವಾಗಲಿ ಎಂಬ ಸಣ್ಣ ಆಶಯ ಈ ಜಾಲತಾಣ.
---
ರವಿ ಕೃಷ್ಣಾ ರೆಡ್ಡಿ
ವಿಚಾರಮಂಟಪ.ನೆಟ್ ನಿರ್ವಾಹಕ.
ಜೂನ್, 2004
*
ಸಮಗ್ರ ದಾಸ ಸಾಹಿತ್ಯವನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಅತ್ಯಂತ ಸುಂದರವಾಗಿ, ಯೋಜನಾಬದ್ಧವಾಗಿ www.dasasahitya.org ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಾಶಿಸಿದೆ. ಈ ತಾಣ ತಂತ್ರಜ್ಞಾನದ ಉತ್ತಮ ಸಾಧನಗಳನ್ನು ಚೆನ್ನಾಗಿ ದುಡಿಸಿಕೊಂಡು ಬ್ರೌಸ್ ಮಾಡಲು ತುಂಬಾ ಅನುಕೂಲ ರೀತಿಯಲ್ಲಿದೆ. ಅವರ ಈ ಕಾರ್ಯಕ್ಕೆ ವಿಚಾರಮಂಟಪದ ಪರವಾಗಿ ಹಾರ್ದಿಕ ಧನ್ಯವಾದಗಳು ಮತ್ತು ಶುಭಾಶಯಗಳು. ಇದೇ ಸಮಯದಲ್ಲಿ ಅವರ ಮುಂದಿನ ಯೋಜನೆಗಳಿಗೂ ಶುಭ ಹಾರೈಸುತ್ತಾ ಆದಷ್ಟು ಬೇಗ ಸಮಗ್ರ ವಚನ ಇತ್ಯಾದಿ ಸಾಹಿತ್ಯವನ್ನು ಪ್ರಕಾಶಿಸಲಿ, ತಂತ್ರಜ್ಞಾನವನ್ನು ಕನ್ನಡದ ಉಳಿವು ಬೆಳವಣಿಗೆಗೆ ಉಪಯೋಗಿಸಿಕೊಳ್ಳಲಿ ಎಂದು ಕೋರುತ್ತೇವೆ.
- Login or register to post comments
- Email this page
ವಿಚಾರ ಮಂಟಪ ಸುಂದರವಾಗಿದೆ. ಮಂಟಪ ಸುಂದರವಾಗಿ ಬೆಳೆಯುತ್ತ ಹೋಗಲಿ ಎಂದು ಶುಭ ಹಾರೈಕೆ. -ಸಿದ್ಧರಾಮ ಹಿರೇಮಠ.
Shubhavagali. Nimma blog ella kannadigarannu talupali.
Kaligananath gudadur
Nimma anisikegalige nanu abhaari!!!!!!
ರವಿ,
ವಿಚಾರಮಂಟಪದ ಹೊಸ ತಾಣ ಸುಂದರವಾಗಿ ಮೂಡಿ ಬಂದಿದೆ.
ಸ್ನೇಹದೊಂದಿಗೆ,
ಬಾಲ.
ಇದು ವಿಚಾರಮಂಟಪ.ನೆಟ್‌ನಲ್ಲಿ ಕಾಮೆಂಟ್ಸ್ ಯಾವ ರೀತಿಯಲ್ಲಿ ತೋರಿಸಲ್ಪಡುತ್ತದೆ ಎಂದು ಪರೀಕ್ಷಿಸಲು ಹಾಕಿದ ಕಾಮೆಂಟ್. ಓದುಗರೂ ಸಹ ಈ ಸೌಲಭ್ಯವನ್ನು ಬಳಸಲು ಆಹ್ವಾನಿಸುತ್ತೇನೆ.
ರವಿ...
ಕನ್ನಡ ಓದುಗರಿಗೆ, ಬರಹಗಾರರಿಗಾಗಿ ರೂಪಿಸಿದ ನಿಮ್ಮ ಪ್ರಯತ್ನ ಶ್ಲಾಘನೀಯ. ನಿಮ್ಮೀ ಪ್ರಯತ್ನಕ್ಕೆ ಯಶಸ್ಸು ದೊರಕಲಿ ಎಂಬ ಹಾರೈಕೆ ನನ್ನದು.
.... ದಿನಕರ ಎಸ್.ಬೆಂಗ್ರೆ,ಉಡುಪಿ
ಒಳ್ಳೆಯ ಆರಂಭ.ಶುಭವಾಗಲಿ!
-ಡಿ.ಎಸ್.ನಾಗಭೂಷಣ