You are hereವಿಚಾರ ಮಂಟಪಕ್ಕೆ ಪ್ರೇರಣೆಯಾದದ್ದು ಮತ್ತು ಇತರೆ...
ವಿಚಾರ ಮಂಟಪಕ್ಕೆ ಪ್ರೇರಣೆಯಾದದ್ದು ಮತ್ತು ಇತರೆ...
ಮುಂದೆ ಹೋಗುವುದಕ್ಕೆ ಮುಂಚೆ, ಈಗಾಗಲೇ ಕನ್ನಡ ಮತ್ತು ಕನ್ನಡದಲ್ಲಿರುವ ವಿಷಯ ಸಾಮಗ್ರಿ ಅಂತರ್ಜಾಲದಲ್ಲಿ ಗಣನೀಯವಾಗಿ ಲಭ್ಯವಿರುವಂತೆ ಮತ್ತು ಬೆಳೆಯಲು ದುಡಿದಿರುವ ಎಲ್ಲಾ ಸಾಧಕರಿಗೆ ನನ್ನ ನಮನ ಹೇಳಲೇಬೇಕು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಅನೇಕ ಕಥೆ, ಕಾದಂಬರಿ, ಕವನ, ಲೇಖನಗಳನ್ನು ನಾನು ಅಂತರ್ಜಾಲದಲ್ಲೇ ಓದಿದ್ದೇನೆ. ಕನ್ನಡದಲ್ಲಿ ಏನೂ ಇಲ್ಲ ಎನ್ನುವ ಆರೋಪಕ್ಕೆ ಈಗ ಅಂತಹ ತೂಕವಿಲ್ಲ. ಇದನ್ನು ಸಾಧ್ಯವಾಗಿಸಿದ ಎಲ್ಲಾ ಮಹನೀಯರಿಗೂ ಮತ್ತೊಮ್ಮೆ ನನ್ನ ಗೌರವಪೂರಕವಾದ ವಂದನೆಗಳು.
ಗಣನೀಯ ಸಂಖ್ಯೆಯ ಕನ್ನಡಿಗರು ಅಂತರ್ಜಾಲ ಉಪಯೋಗಿಸಲು ಪ್ರಾರಂಭಿಸಿ ಸರಿಸುಮಾರು ದಶಕವಾಗುತ್ತಾ ಬಂದಿರಬೇಕು. ನಾನು ಎಂದಿನಿಂದ ಕಂಪ್ಯೂಟರ್‌ನಲ್ಲಿ ಕನ್ನಡ ನೋಡಲು ಆರಂಭಿಸಿದೆನೊ ಅಂದಿನಿಂದಲೂ ವಿವಿಧ ಧನವಂತ ಸಂಘ-ಸಂಸ್ಥೆ-ಮಠಗಳು ಧರ್ಮಪ್ರಚಾರದ ದೃಷ್ಟಿಯಿಂದಲೊ ಇಲ್ಲ ತಾವು ಎಲ್ಲರಿಗಿಂತಲೂ ಶ್ರೇಷ್ಠ ಎಂಬ ಹುಸಿನಂಬಿಕೆಯಿಂದಲೊ ಕನ್ನಡದ ವಚನ, ದಾಸ ಮುಂತಾದ ಸಾಹಿತ್ಯ ಅಂತರ್ಜಾಲದಲ್ಲಿ ಲಭಿಸುವಂತೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಕಾಯುತ್ತಿದ್ದೆ. ವಿಶೇಷವಾಗಿ ಬಸವಣ್ಣನಾದಿಯಾಗಿ ಇತರ ವಚನ ಸಾಹಿತ್ಯಕಾರರ ಮಾತುಗಳಲ್ಲಿ ವೈಯುಕ್ತಿಕ ಮತ್ತು ಸಾಮಾಜಿಕ-ಸಾರ್ವಜನಿಕ ಸಮಸ್ಯೆಗಳಿಗೆ ಉತ್ತರ ಪಡೆಯಲು, ಮತ್ತಷ್ಟು ತಿಳಿಯಲು. ದಿನವೂ ಅಂತರ್ಜಾಲದ ಗೂಗ್ಲ್'ನಲ್ಲಿ ಪದ ಹಾಕಿ ಪದಾರ್ಥ ತೆಗೆಯುವ ಅಭ್ಯಾಸವಾಗಿ ಬೇಕಾದ ವಿಷಯಕ್ಕಾಗಿ ಪುಸ್ತಕ ಕೊಂಡುಕೊಳ್ಳುವುದು, ಅದನ್ನು ವಿರಾಮದಲ್ಲಿ ಓದುವುದು ನಮ್ಮಲ್ಲಿ ಬಹಳಷ್ಟು ಜನರಿಗೆ ಕಷ್ಟವೆ. ಹೀಗಿರುವಾಗ ಏನೋ ಅನಿಸಿಕೆ, ಪ್ರಶ್ನೆ ಹುಟ್ಟಿದ ತಕ್ಷಣ reference ಗಾಗಿ ಅಂತರ್ಜಾಲವೆಲ್ಲ ಹುಡುಕುವಾಗ ಕನ್ನಡಲ್ಲಿ ಬೇಕಾದದ್ದು (ವಿಶೇಷವಾಗಿ ವಿಚಾರ ಸಾಹಿತ್ಯ) ದೊರೆಯದೆ ಇರುವುದು ಈಗಲೂ ಸರ್ವೇಸಾಮಾನ್ಯ. ಇನ್ನು ಪುಸ್ತಕವಾದರೂ ಕೊಂಡುಕೊಳ್ಳೋಣವೆಂದರೆ ಅನಿವಾಸಿಗಳಂತೂ ಕರ್ನಾಟಕವನ್ನು ಸಂದರ್ಶಿಸುವ ತನಕ ಕಾಯಬೇಕು.
ಈ ವಿಷಯವಾಗಿ ಯೋಚಿಸುತ್ತ ಇಲ್ಲಿ ಅಮೇರಿಕದಲ್ಲಿ ಇರುವು ಕೆಲವು ಜಾತಿ-ಧರ್ಮಾಧಾರಿತ ಸಂಘಗಳಲ್ಲಿ ಮುಖ್ಯಸ್ಥರಾಗಿರುವ ಸ್ನೇಹಿತರನ್ನು ವಿನಂತಿಸಬೇಕೆಂದು ಬಹಳ ದಿನಗಳಿಂದ ಹಂಬಲವಿತ್ತು. ಅವರು ಯಾರಿಗೂ ಇಲ್ಲದ ಉಸಾಬರಿ ತಮಗೇಕೆ ಎಂದು ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲವೇನೋ ಎಂಬ ಸಂದೇಹದಿಂದ ಅದೂ ಮಾಡಲಾಗಲಿಲ್ಲ. ಕೊನೆಗೆ ನಾನೇ ಲೆಕ್ಕ ಹಾಕಲು ಇಳಿದಾಗ ಅನ್ನಿಸಿದ್ದು ಇದಕ್ಕೆ ತಗಲುವ ಖರ್ಚು ನಗಣ್ಯ ಆದರೆ ಶ್ರಮ ಗಣನೀಯ. ಒಂದು ಕೈ ನೋಡೇಬಿಡೋಣ ಎನ್ನಿಸಿತು; ಒಂದು ಜಾಲತಾಣವನ್ನು ಹೊರತರುವ ಯಾವುದೇ ಪೂರ್ವಜ್ಞಾನವಿಲ್ಲದೆ, ಹೀಗೆ ಸ್ನೇಹಿತರ ಜೊತೆ ಮಾತಾಡಿ, ಉಚಿತವಾಗಿ ಲಭ್ಯವಿರುವ ಬರಹ ಮತ್ತು ನೆಟ್‌ಸ್ಕೇಪ್ ಕಂಪೋಸರ್ ಉಪಯೋಗಿಸಿ, ಕೇವಲ ಮುರ್ನಾಲ್ಕು ದಿನಗಳಲ್ಲಿ ೫೦ಕ್ಕೂ ಹೆಚ್ಚು ವಚನಗಳನ್ನು, ಕುವೆಂಪುರವರ ಎರಡು ಲೇಖನಗಳನ್ನು, ಮುಖಪುಟವನ್ನೂ ಹೊರತರಲು ಸಾಧ್ಯವಾಯಿತು. ಇದನ್ನೆಲ್ಲಾ ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ ಮತ್ತಷ್ಟು ನನ್ನ ವಾರಿಗೆಯ ಜನ ಕನ್ನಡದಲ್ಲಿ ಏನಾದರೂ ತರಲಿ ಎಂದಷ್ಟೆ. ಇಂತಹ ಜಾಲತಾಣಕ್ಕೆ ಇಡೀ ವರ್ಷಕ್ಕೆ ತಗಲುವ ಖರ್ಚು ಬಹುಪಾಲು ಅಮೇರಿಕ-ಕನ್ನಡಿಗರ ಎರಡು ಇಲ್ಲವೆ ಮೂರು ಗಂಟೆಗಳ ದುಡಿಮೆಯ ಆದಾಯ ಮಾತ್ರ ಎಂದು ನನ್ನ ಸ್ವಾನುಭವ.
ಇನ್ನು, ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ಕಾಳಜಿಗಳು. ಪ್ರಜಾಪ್ರಭುತ್ವ ಮತ್ತು ಎಲ್ಲರಿಗೂ ಶಿಕ್ಷಣ ಎನ್ನುವ ಕೇಳರಿಯದ ಚಿಂತನವರ್ಷದ ಸಿಂಚನ ಭಾರತದ ಮಣ್ಣಿಗೆ ಪರಿಚಯವಾದದ್ದೆ ಕಳೆದ ೨೦ನೆಯ ಶತಮಾನದಲ್ಲಿ. ನಮ್ಮ ಸಮಸ್ಯೆ ಮತ್ತು ಅಗತ್ಯಗಳಾದ ದೈಹಿಕ-ಮಾನಸಿಕ-ಶೋಷಣೆ, ನಿರಭಿಮಾನ, ಕ್ಷಾತ್ರತೆ, ಕರ್ತೃತ್ವ, ಉದ್ಯಮ ಶೀಲತೆ, ಆರ್ಥಿಕ ಬೆಳವಣಿಗೆ, ಸ್ವಾವಲಂಬನೆ, ಸಮಾನತೆ ಮುಂತಾದವುಗಳ ಪರಿಹಾರ, ಅರ್ಥ ಮತ್ತು ಸಾಧನೆಗೆ ಇತಿಹಾಸ ಇಷ್ಟು ಚೆನ್ನಾಗಿ ಎಂದೂ ನಮಗೆ ಸಹಕರಿಸಿರಲಿಲ್ಲ. ಇಂತಹ ಸಮಯದಲ್ಲಿಯೂ ಚರ್ಚೆಗೆ, ವಿಚಾರಕ್ಕೆ ಮಡಿವಂತಿಕೆ ತೋರಿಸುವುದು ಪ್ರಬುದ್ಧತೆಯನ್ನು ತೋರಿಸುವುದಿಲ್ಲ. ಅಂತರ್ಜಾಲದ ಪರಿಚಯ ಇರುವ ಪ್ರತಿಯೊಬ್ಬರೂ ಅಕ್ಷರಸ್ಥರೇ, ವಿದ್ಯಾವಂತರೆ, ದೇಶದ ಬಹುಸಂಖ್ಯಾತರಿಗಿಂತ ಉತ್ತಮ ಆರ್ಥಿಕ ಸ್ಥಿತಿ ಉಳ್ಳವರೆ ಎನ್ನುವುದು ನಿರ್ವಿವಾದ. ಆ ಕಾರಣದಿಂದ ಮುಕ್ತ ಮತ್ತು ಪ್ರಾಮಾಣಿಕ ವಿಚಾರಗಳಿಗೆ, ಚಿಂತನೆಗಳಿಗೆ, ಮತ್ತು ಸಮಕಾಲೀನ ಕಾಳಜಿಗಳಿಗೆ ಸ್ಪಂದಿಸುವ ಸಹೃದಯರಿಗೆ ಸಮಕಾಲೀನ ವಿಚಾರಗಳನ್ನು ಇದೇ ತಾಣದಲ್ಲಿ ಒದಗಿಸುವ ಆಲೋಚನೆ ಬಂತು. ಇದು ಅಂತಹ ಕಷ್ಟದ ಕೆಲಸವೇನಲ್ಲ ಎನ್ನುವುದು ಸದ್ಯದ ಅಭಿಪ್ರಾಯ. ದಿನವೂ ಓದುವ ಪತ್ರಿಕೆಗಳಲ್ಲಿ ವರ್ತಮಾನದಲ್ಲಿ ಯಾವ ಸುದ್ದಿಗಳು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ ಎನ್ನಿಸುತ್ತದೆಯೊ ಅವಕ್ಕೆಲ್ಲ ಇಲ್ಲಿಂದ ಕೊಂಡಿ ಕೊಡುವುದು ಅಷ್ಟೆ.
ಇನ್ನು ವಿಚಾರಮಂಟಪ.ನೆಟ್‌ಗೆ ನನ್ನ ಬದ್ಧತೆಯ ಕುರಿತಾಗಿ: ವಿಚಾರಮಂಟಪ.ನೆಟ್, ಒಬ್ಬ ವ್ಯಕ್ತಿ ತನ್ನ ಬಿಡುವಿನ ಸಮಯದಲ್ಲಿ ಮಾತ್ರ ಮಾಡಬಹುದಾದ ಎಲ್ಲಾ ಯೋಜನೆಗಳಂತೆ ತನ್ನದೇ ಆದ ಕುಂದುಕೊರತೆಗಳೊಂದಿಗೆ ಬಂದಿದೆ. ಸದ್ಯಕ್ಕೆ ಇದು ನನ್ನ ವೈಯುಕ್ತಿಕ ಸಂಪನ್ಮೂಲಗಳ (ಮುಖ್ಯವಾಗಿ ಸಮಯದ) ಮೇಲೆ ಅವಲಂಬಿಸಿರುವುದರಿಂದ ಕಾಲ-ಕಾಲಕ್ಕೆ ಹೊಸ ವಿಷಯಗಳೊಂದಿಗೆ ನವೀಕೃತವಾಗದೇ ಇರುವ ಎಲ್ಲಾ ಸಾಧ್ಯತೆಗಳೂ ಇವೆ. ಅದಕ್ಕೆ ಮುಖ್ಯವಾಗಿ ನನ್ನ ಸೋಮಾರಿತನ, ನಿರುತ್ಸಾಹಗಳ ಜೊತೆಗೆ ವೃತ್ತಿ, ಸಾಮಾಜಿಕ ಮತ್ತು ಕೌಟುಂಬಿಕ ಜೀವನದ ಒತ್ತಡಗಳೂ ಸೇರಿಕೊಳ್ಳಬಹುದು. ಆದ್ದರಿಂದ, ನನಗೆ ಕೆಲವು ಜಾಲತಾಣಗಳ ವಿಷಯದಲ್ಲಿ ಆದಂತೆ ನಿಮಗೂ ಇಲ್ಲಿ ಹೊಸಹೊಸ ಸಾಮಗ್ರಿ ಬರದೆ ಭ್ರಮನಿರಸನವಾಗಬಹುದು. ಇವೆಲ್ಲವುಗಳ ಮಧ್ಯೆ ಬೇರೆ ವ್ಯವಸ್ಥೆ ಮಾಡುವ ತನಕ ಆದಷ್ಟು ಸಮಯವನ್ನು ವಿಚಾರ ಮಂಟಪಕ್ಕೆ ಮೀಸಲಿಡುವುದು ಸದ್ಯದ ತೀರ್ಮಾನ. ದಯವಿಟ್ಟು ಸಹಿಸಿಕೊಳ್ಳಿ.
ನನ್ನ ಕೆಲವು ಬರಹಗಳು ಈಗಾಗಲೆ ದಟ್ಸ್‌ಕನ್ನಡ.ಕಾಂನಲ್ಲಿ ಪ್ರಕಟವಾಗಿವೆ. ಆ ಬರಹಗಳ ಕೊಂಡಿಗಳಿಗಾಗಿ ಆಸಕ್ತರು ಇಲ್ಲಿ ಗಮನಿಸಬಹುದು.
ಇದರೊಂದಿಗೆ ನನ್ನ ವೈಯುಕ್ತಿಕ ಡಂಗೂರ ಮತ್ತು ಅಭಿಪ್ರಾಯಗಳು ವಿಚಾರ ಮಂಟಪ ತಾಣದಲ್ಲಿ ಈ ಬರಹದೊಂದಿಗೇ ನಿಲ್ಲಲಿ ಎಂದು ತೀರ್ಮಾನಿಸುತ್ತ;
ಸ್ನೇಹದಲ್ಲಿ,
ರವಿ ಕೃಷ್ಣಾ ರೆಡ್ಡಿ...
ಜೂನ್ ೨೧, ೨೦೦೪
ಸ್ನೇಹಿತರೆ,
ನಾವು ಆಗಸ್ಟ್ ೧೭, ೨೦೦೬ರಂದು ಪ್ರಾರಂಭಿಸಿದ ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ನಾನು ನಿಯಮಿತವಾಗಿ 'ಅಮೇರಿಕದಿಂದ ರವಿ' ಅಂಕಣವನ್ನು ಬರೆಯುತ್ತಿದ್ದೇನೆ. ಈ ಪತ್ರಿಕೆ ಕರ್ನಾಟಕದಾದ್ಯಂತ ಲಭ್ಯವಿದ್ದು, ಅಂತರ್ಜಾಲದಲ್ಲಿ ಇಮೇಯ್ಲ್ ಸಬ್ಸ್‌ಕ್ರಿಪ್ಷನ್ ಸಹ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ತಾವುಗಳು ವಿಕ್ರಾಂತಕರ್ನಾಟಕ.ಕಾಮ್ ಅನ್ನು ಸಂದರ್ಶಿಸಬೇಕೆಂದು ಕೋರುತ್ತಾ, ಈ ವಾರಪತ್ರಿಕೆಗೆ ತಮ್ಮ ಬೆಂಬಲ ಮತ್ತು ಪ್ರೋತ್ಸಾಹ ಇರಲೆಂದು ಕೋರಿಕೊಳ್ಳುತ್ತೇನೆ.
ಇಂತಿ,
ರವಿ ಕೃಷ್ಣಾ ರೆಡ್ಡಿ ...
"ವಿಕ್ರಾಂತ ಕರ್ನಾಟಕ"ದಲ್ಲಿನ ನನ್ನ ಅಂಕಣ ಬರಹಗಳ ಬ್ಲಾಗ್:
ಅಮೇರಿಕದಿಂದ ರವಿ
ಈ ಬರಹಗಳ ವಿಡಿಯೊ ಬ್ಲಾಗ್:
ಯೂಟ್ಯೂಬ್‌ನಲ್ಲಿಯ ವಿಡಿಯೊ ಬ್ಲಾಗ್
ನನ್ನ ವೆಬ್‍ಸೈಟ್:
ರವಿಕೃಷ್ಣಾರೆಡ್ಡಿ.ಕಾಂ
ದಟ್ಸ್‌ಕನ್ನಡದಲ್ಲಿ ಪ್ರಕಟವಾದ (ಏಪ್ರಿಲ್-2003 ರಿಂದ ಏಪ್ರಿಲ್-2006 ರ ವರೆಗಿನ) ಬರಹಗಳು
ಅನುವಾದಿತ ಕಾದಂಬರಿ - ಎದೆಯ ಕೂಗನು ಮೀರಿ
- Login or register to post comments
- Email this page
