You are hereಕ್ರಾಂತಿಪದ
ಕ್ರಾಂತಿಪದ
ಗುಡಿಸಿಲುಗಳು ಗುಡುಗುತಿವೆ ಬಂಗಲೆಗಳು ನಡುಗುತಿವೆ
ಎಲ್ಲೆಲ್ಲಿಯು ಮೊಳಗುತ್ತಿದೆ ನವಕ್ರಾಂತಿಯ ಗಾನ
ಮತಗಳು ಹತವಾಗುತಿವೆ ಜನಪಥಗಳು ಮೂಡುತಿವೆ
ಅಸಮಾನತೆ ಆಗುತ್ತಿದೆ ಕ್ರಾಂತಿಗೆ ಸೋಪಾನ
ರೈಲು ನಿಲುವ ತಾಣದಲಿ ಭಾರ ಹೊತ್ತ ರಟ್ಟೆಯಲಿ
ತೊಟ್ಟಿಕ್ಕಿದ ಬೆವರಿನಹನಿ ಬೆಂಕಿಯಾಗಿ ಸಿಡಿದು
ಬಡಜನಗಳ ಕಣ್ದೆರೆಸಿ ಶೋಷಕರನು ಕಂಗೆಡಿಸಿ
ಕೆಂಗಿಡಿಗಳ ಕಾರುತ್ತಿದೆ ಘೋರಾರ್ಭಟವಾಗಿ
ದೇವರುಗಳ ಪೂಜೆಯಲಿ ಗುರುವರ್ಯರ ದಾಸ್ಯದಲಿ
ಇಹಲೋಕಕು ಪರಲೋಕಕು ಸೇತುವೆಯನು ಕಟ್ಟಿ
ಪರಮಾತ್ಮನ ಪರದೆಯಲಿ ಜೀವಾತ್ಮನ ಕಬಳಿಸುವ
ಕಡುಜಾಣರ ಕೊಂದುತಿಂದು ಅನ್ಯಾಯವ ಮೆಟ್ಟಿ
ಕರ್ಮಕಥೆಯ ಚಾಟಿಯನು ಮುರಿದಿಕ್ಕುತ ಮುನ್ನಡೆದು
ಹಿಮ್ಮೆಟ್ಟಿಸಿ ಅಡ್ಡಬಂದ ಪಟ್ಟಭದ್ರ ಹಿತವ
ಮಿಡಿಯುತಲಿದೆ ಎದೆಗಳಲಿ ದಬ್ಬುತಲಿದೆ ಜಡತೆಯನು
ಚಿಮ್ಮುತಿರುವ ಹೋರಾಟವು ಹೊಮ್ಮಿ ಮುಗಿಲಿಗೇರಿ
ದಲಿತರಾಗ ಗುನುಗುತಿದೆ ಗೋರಿಯ ಕರಿಬಿರುಕಿನಲಿ
ಶೋಷಣೆಯಲೆ ಶ್ರಿಂಗಾರವು ಆಯಿತೆನ್ನ ಹೆಣಕೆ
ಸುಲಿದವರನು ಸುಲಿವದಿನ ಬಂದಿತೆಂದು ಹಿಗ್ಗುತಿದೆ
ಸುಡುಗಾಡಿನ ಬಿರುಗಾಳಿಯು ಕ್ರಾಂತಿಗೀತೆ ಹಾಡಿ
-
ಕವಿ: ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page