You are here ಹಣೆಬರಹವು ಎಂಬ ನಾಟಕವು

ಹಣೆಬರಹವು ಎಂಬ ನಾಟಕವು


ಅ: ವರಗಡೆ ಆಗಿದ್ದೀರಾ?
ಆ: ಇಲ್ಲ
ಅ: ಮತ್ಯಾಕೆ ಅತ್ತತ್ತ ಒತ್ರುಸ್ಕೊಂಡು ನಿಂತಿದ್ದಿರ ಗುಡಿತಾವು?
ಆ: ಗೊತ್ತಿಲ್ಲ
ಅ: ಬೆವರಲ್ಲಿ ಬಣ್ಣ ಬಳ್ದು ರಕ್ತದಲ್ಲಿ ನೆಲಸಾರ್‍ಸಿ
ಮೂಳೇಲಿ ಗ್ವಾಡೆ ಕಟ್ಟಿ ಗುಡಿಚಂದ ಮಾಡಿದೋರು ನೀವಲ್ಲವೆ?
ನಿಮ್ಮ ತೋಳಲ್ಲವೆ?
ಆ: ಹೌದೌದು
ಅ: ಕಟ್ಟೊತನ್ಕ ನೀವು ಬೇಕು ಕಟ್ಟುದ್ ಮ್ಯಾಲೆ ಕುಂತೊದ್ದೋರು
ಗುಡಿವಳ್ಗೆ ಅಡ್ರುಸ್ಕಂಡು ನಿಂತುಬುಟ್ಟವ್ರೆ
ದುಡುದೋರು ಮನುಸ್ರಲ್ಲವ?
ಅ: ಹಣೆಬರವು ಹಣೆಬರವು
ಬ್ರಮ್ಮನು ಹಣೆವಳ್ಗೆ ಬರೆದವನೆ
ಬರುಸ್ಕಂಡು ಬಂದಿತ್ತು ಅದೆಕಾಣ್ಲ
ಅ: ಕೆಂಪಿಂಕೇಲ್ ಬರುದಿರ್‍ಲಿ ಕಪ್ಪಿಂಕೇಲ್ ಬರುದಿರ್‍ಲಿ
ಅಳುಸ್ತೀನಿ ನನ್ತಾವು ರಬ್ಬರ್ರದೆ
ಆ: ಕೇಳಾನ ದೇವರ್ನೆ ಹುಟ್ಸಿದ ಮಕ್ಕುಳ್ಗೇನೆ
ವಬ್ಬುರ್ಗೊಂದು ವಬ್ಬುರ್ಗೊಂದು ಆಗಬೋದಾ?
ಬರಿವಾಗ್ಲೆ ಭೇದಾನ ಮಾಡುಬೋದಾ?
ಅ: ಕೂಗುದ್ರು ಕೇಳ್ಸಲ್ಲ ಕಿವುಡನಯ್ಯ ದೇವರು
ಕಷ್ಟವ ನೋಡಲಾರ ಕುರುಡನಯ್ಯ ದೇವರು
ಇದು ಜೀವವೋದ ದೇವರು ಕಲ್ಲು ದೇವರು
ಆ: ಎಲ್ಲವನೋ ಅವನೆಲ್ಲವನೋ
ಶಿವನಲ್ಲವೇನೋ ಅವನೆಲ್ಲವನೋ
ಅ: ಸಾವ್ಕಾರ್ರ ಮನೆವಳ್ಗೆ ಸುಕಭೋಜನದಲ್ಲವ್ನೆ
ಕಿಲಕಿಲ್ನೆ ನಗ್ತಾನೆ ಮಕ್ಕುಳ್ ನಗಂಗೇ
ಆ: ಬರ್ರಲಾ ಕೇಳಾನ ನ್ಯಾಯಾವ ಕೇಳಾನ
ತಿದ್ದಾನ ಹಣೆಬರವಾ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು