You are hereಹಕ್ಕಿಗಳು
ಹಕ್ಕಿಗಳು
ಬೆಟ್ಟವ ಹತ್ತಿ ಬೆಟ್ಟವ ಇಳಿಯುವ
ಬಾಲಕರಣ್ಣ ನಾವುಗಳು
ಆಳ ಪಾತಾಳದ ಕರಾಳದ ನೋವನು
ಕಂಡವರಣ್ಣಾ ನಾವುಗಳು
ಕುರಿಗಳ ಕಾಯ್ದು ದನಗಳ ಮೇಯಿಸಿ
ಹಾಲನು ಕುಡಿಯದೆ ಹೋದವರು
ಓದುವ ಬರೆಯುವ ಭಾಗ್ಯವು ಸಿಗದೆ
ಗಿಡಗಳ ಜೊತೆಯಲಿ ಬೆಳೆದವರು
ಎಂಜಲು ತೊಳೆದು ಗಂಜಲ ಬಳಿದು
ಗಂಜಿಯ ಕಾಣದೆ ದುಡಿದವರು
ಗುಡಿಗೋಪುರದ ಬಣ್ಣಗಳಾಗಿ
ಚಳಿಯನು ತಡೆಯದೆ ಕುಸಿದವರು
ಉರಿಬಿಸಿಲಲ್ಲಿ ಉರಿಯುವ ಎಲೆಗಳು
ಬೂದಿಯ ಕಣಗಳು ನಾವು
ಬಿರಿಯುವ ಮೊದಲೇ ಬಾಡುವ ಹೂಗಳು
ಕಮರುವ ಬಣ್ಣದ ಕನಸುಗಳು
ಹೊತ್ತನು ಅರಿಯದ ದಿಕ್ಕನು ಕಾಣದ
ಸೀಳುದಾರಿಯ ಪಯಣಿಗರು
ನೋವಿನ ಹಾಡಿನ ಕತ್ತಲ ನಾಡಿನ
ಬೆಳಕನು ಅರಸುವ ಹಕ್ಕಿಗಳು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page