You are hereಸುಂಟರಗಾಳಿ
ಸುಂಟರಗಾಳಿ
ಸುಂಟರಗಾಳಿಯೊಳಗೆ ಸಿಕ್ಕಿ ಥರಥರಗುಡುವ
ಗುರುಮಠದ ಧ್ವಜದಲ್ಲಿ ಧರ್ಮವಿಲ್ಲ
ಮೂಳೆ ತುಂಬಿದ ಹಣೆಗೆ ಸೊಟ್ಟಸೊಟ್ಟಗೆ ಬಳಿದ
ನಾಮವೀಭೂತಿಯಲಿ ಧರ್ಮವಿಲ್ಲ
ದಕ್ಷಿಣೆಯ ರುಚಿಯುಂಡು ಉಬ್ಬಿರುವ ಒಡಲಿನಲಿ
ಜುಟ್ಟು ಜನಿವಾರದಲಿ ಧರ್ಮವಿಲ್ಲ
ಊದುಕಡ್ಡೀಯ ಅರೆದು ಮೇಲೆದ್ದ ಧೂಮದಲಿ
ಧರ್ಮ ಸುಳಿಸುಳಿಯಾಗಿ ಸುಳಿವುದಿಲ್ಲ
ದಾರ ರುದ್ರಾಕ್ಷಿಗಳ ಭಾರ ಬಿಗಿತಕೆ ಬೆದರಿ
ದೂರ ಸರಿಯುತಲಿಹುದು ನೈಜಧರ್ಮ
ಜಾಗಟೆಯ ಆರ್ಭಟಕೆ ಬೌನಾಸಿಯಬ್ಬರಕೆ
ಕಿವಿಯೊಡೆದು ಓಡುತಿದೆ ಬಿದ್ದು ಧರ್ಮ
ಒಂದೊಂದು ಜೀವದಲಿ ಎದೆಯಂತರಾಳದಲಿ
ಅಡಗಿಹುದು ಪರಿಶುದ್ಧ ಧರ್ಮಸತ್ವ
ಮಾನವತೆಗಾಪತ್ತು ಬಂದೊಡನೆ ಸಿಡಿದೆದ್ದು
ರಕ್ಷಣೆಗೆ ನಿಲ್ಲುವುದು ಯೋಧನಂತೆ
ನಿಜಧರ್ಮವರಿಯದವ ಹಾಕಿಕೊಳುವನು ಕೊನೆಗೆ
ಶಿವದಾರ ಜನಿವಾರಗಳಿಗೆ ನೇಣು
ಅಂಧಭಕ್ತನ ಬುದ್ಧಿ ಗುಡಿಯ ಕೆಂಗಲ್ಲಿನಡಿ
ಜಜ್ಜಿ ಪುಡಿಯಾಗುತಿದೆ ಇದುವೆ ಸತ್ಯ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page