You are hereಸಾವಿರಾರು ನದಿಗಳು

ಸಾವಿರಾರು ನದಿಗಳು


ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು

ಕಪ್ಪುಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳನು ಸೀಳಿ ನಿದ್ದೆಯನ್ನು ಒದ್ದರು
ಕಂಬಳಿಗಳು ಕೊರಗಿದವು ಎದ್ದೇಳುವ ರೊಚ್ಚಿಗೆ
ಭೂಕಂಪನವಾಯಿತು ಅವರು ಕುಣಿದ ಹುಚ್ಚಿಗೆ
ಇರುವೆಯಂತೆ ಹರಿವಸಾಲು ಹುಲಿಸಿಂಹದ ದನಿಗಳು
ಧಿಕ್ಕಾರ ಧಿಕ್ಕಾರ ಅಸಮಾನತೆಗೆ
ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ
ಲಕ್ಷಾಂತರ ನಾಗರುಗಳು ಹುತ್ತಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು

ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿ ಕೂರುವ ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು

ಇವರು ಬಾಯಿ ಬಿಟ್ಟೊಡನೆ
ಅವರ ಬಾಯಿ ಕಟ್ಟಿತು
ಇವರ ಕಂಠ ಕೇಳಿದೊಡನೆ
ಅವರ ದನಿ ಇಂಗಿತು
ಕ್ರಾಂತಿಯ ಬಿರುಗಾಳಿಯಲ್ಲಿ ಕೈಬೀಸಿದ ನನ್ನ ಜನ
ಛಡಿಯ ಏಟು ಹೊಡೆದವರ
ಕುತ್ತಿಗೆಗಳ ಹಿಡಿದರು

ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ
ತರಗೆಲೆಕಸಕಡ್ಡಿಯಾಗಿ
ತೇಲಿತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು