You are hereಸಂಪಿಗೆಯ ಮರದಲ್ಲಿ

ಸಂಪಿಗೆಯ ಮರದಲ್ಲಿ


ನೂರಾರು ಹಾವುಗಳು ಊರೆಲ್ಲ ನೋವುಗಳು
ಸಂಪಿಗೆಯ ಮರದಲ್ಲಿ ಸಾವಿನಾಟ
ಕೊಂಬೆ ಕೊಂಬೆಯ ಕೆಳಗೆ ಮಸೆದ ಕತ್ತಿಯ ಸಾಲು
ಹೆಣಗಳುಯ್ಯಾಲೆಯಲಿ ಮರದ ಕುಣಿತ

ಹೂವುಗಳ ಒಡನಾಟ ಅಲೆಗಳಲಿ ತೇಲಾಟ
ವಿಷಸರ್ಪಗಳ ಸ್ನೇಹ ಜೊತೆಗೆ ಇತ್ತು
ಚುಕ್ಕೆಗಳ ಜೊತೆಯಲ್ಲಿ ಚಕ್ಕಂದವಾಡಿದರು
ಕನಸಿನಲಿ ಕಾಡಿತ್ತು ಧೂಮಕೇತು

ಬಡಜನರ ಗುಡಿಸಿಲಿಗೆ ಬೆಂಕಿಯನು ಇಟ್ಟವರು
ರಾಜರಾದರು ದೆಹಲಿ ನಾಡಿನಲ್ಲಿ
ಎಳೆಯ ಮಕ್ಕಳ ಕೊರಳ ದನಿಕಿತ್ತು ನಕ್ಕವರು
ರಕ್ತವನು ಹಂಚಿದರು ಅಮಲಿನಲ್ಲಿ

ಈ ನಾಡಿನಾಪತ್ತು ನಮ್ಮ ಜನಗಳ ಸಾವು
ಬಂದು ನಿಂತಿತ್ತಯ್ಯ ಕಣ್ಣಮುಂದೆ
ಪೋಲೀಸು ಪಹರೆಯಲಿ ಭಾಷಣದ ಹೊಗೆಯಲ್ಲಿ
ಮುಖವು ಕಾಣಿಸಲಿಲ್ಲ ಗಂಡೋ ಹೆಣ್ಣೋ

ಬೆಳಕು ಚೆಲ್ಲುವ ಸೂರ್ಯ ಹೊಳೆವ ಚುಕ್ಕೆಗಳನ್ನು
ಕೊಂಡುಕೊಂಡರೊ ಏನೋ ಶ್ರೀಮಂತರು
ಮಲಗಿದ್ದ ಹಕ್ಕಿಗಳು ಮೇಲೇಳಲಿಲ್ಲ
ಬೆಂಗಳೂರಿನ ಜನಕೆ ಬೆಳಕಾಗಲಿಲ್ಲ

ಖಾಲಿಯಾಕಾಶದಲಿ ಕಿರಣಗಳ ಸುಳಿವಿಲ್ಲ
ಇದು ಬೆಳಕೊ ಕತ್ತಲೆಯೊ ತಿಳಿಯದಲ್ಲ
ಹೂದೋಟಗಳ ತುಂಬ ಹುಚ್ಚುನಾಯಿಯ ಸಂತೆ
ಕಿಕ್ಕಿರಿದ ಜನಕಾಣೊ ಜೈಲಿನಲ್ಲಿ

ಏನಾದರೊ ಅವರು ವ್ಯಾನಿನಲಿ ಹೋದವರು
ಮರಮರವು ನರಳಿತ್ತು ಗಾಳಿಯಲ್ಲಿ
ಮದ್ದುಗುಂಡಿನ ಸದ್ದೊ ಎದೆಯೊಡೆದ ಸದ್ದೊ
ನೋವು ಬಿರಿಯುತ್ತಿತ್ತು ಹೂವಿನಲ್ಲಿ

ಬಡಜನರ ಜೋಪಡಿಗೆ ಕಾಡುಗಳ ಕತ್ತಲೆಗೆ
ಬೆಳಕು ಬೇಕೆಂದವರ ಕೊಂದರಲ್ಲೊ
ಈ ನೆಲದ ಹೂ ಬಳ್ಳಿ ಹಕ್ಕಿ ಮಕ್ಕಳಿಗೆಲ್ಲ
ಬದುಕು ಬೇಕೆಂದವರ ಬಗೆದರಲ್ಲೊ

ಏನು ಮಾಡುವೆ ಗೆಳೆಯ ಕಂಡಕಂಡಲ್ಲೆಲ್ಲ
ರುಂಡಗಳು ನೆಲಕುರುಳಿ ಬೀಳುವಾಗ
ಕಾದ ಬಂಡೆಯ ಸುತ್ತ ಬೆಳೆದ ಹಸುರಿನ ಮೇಲೆ
ಕೆಂಪು ರಕ್ತವು ಚಿಮ್ಮಿ ಹರಿಯುವಾಗ

ಕೆಂಡ ಸಂಪಿಗೆಯಲ್ಲಿ ಕೆಂಡಗಳು ಅಡಗಿದ್ದು
ಮುಡಿದ ಹೆಣ್ಣುಗಳೆಲ್ಲ ಬೂದಿಯಾದೊ
ಹೆಜ್ಜೆ ಇಟ್ಟಲ್ಲೆಲ್ಲ ಕೆಂಪು ಕಮಲವು ಮೂಡಿ
ಬರುವ ಜನತೆಗೆ ಹೂವು ಹಾದಿಯಾದೊ

ಎದೆ ಎದೆಯ ಮೇಲೆಲ್ಲ ಮೊಳೆ ಜಡಿಯುತಿದ್ದಾಗ
ಏಸುವಾಗಿದ್ದವರು ಎದ್ದರಲ್ಲೊ
ನೊಂದ ಮುಖಗಳ ತುಂಬ ನಗೆಯನ್ನು ಬಿತ್ತಿದರು
ಮೋರಿಗಳ ದಾರಿಯಲಿ ಬಂದ ಜನರು

ಗಗನಸಾಗರದಲ್ಲಿ ಮುಗಿಲ ದೋಣಿಯ ಸಾಲು
ಎಣಿಸಿದಷ್ಟೂ ಮಿಗುವ ಜನಸಂದಣಿ
ಕೆಂಪು ಸೂರ್ಯನು ಹುಟ್ಟಿ ಮೆರವಣಿಗೆ ಬರುವಾಗ
ಕಪ್ಪು ಕಾಡಿನ ಹಾಡು ಮೊಳಗುತಿತ್ತು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು