You are hereಶಬ್ದ
ಶಬ್ದ
ಕುಣಿವ ಸುಂಟರಗಾಳಿ ಬೇಲಿದಾಟದ ಹಾವು
ಅಲೆವ ಹುಂಜನ ಸದ್ದೆ ಕೇಳಿಸಿದ್ದು
ಹೆಬ್ಬಂಡೆ ಮೇಲಿಂದ ಬಾಡಬಕ್ಕದ ಹೂವು
ಬಸವಳಿದು ಬಿದ್ದುದನೆ ಆಲಿಸಿದ್ದು
ನಡುಮನೆಯ ಗೋಡೆ ತೊಟ್ಟಿಲಿನಲ್ಲಿ ಮಲಗಿರುವ
ಡೋಲುವಾಲಗ ಡೊಳ್ಳ ಮೊರೆತವಿಲ್ಲ
ಕಾಗೆ ಕೋಗಿಲೆ ಹಕ್ಕಿ ಕೊಕ್ಕರೆಯ ಸಂತತಿಗೆ
ನೀರುನೆರಳಿಲ್ಲದೆಯೆ ಸೊಲ್ಲೆ ಇಲ್ಲ
ಅಂಗಡಿಯ ಸಾಲಿನಲಿ ಸಂದಣಿಯ ಸುಳಿವಿಲ್ಲ
ಚೌಕಾಸಿಯೂ ಇಲ್ಲ ಎಂದಿನಂತೆ
ಎಲ್ಲವೂ ಮಾರಾಟವಾಗಿಹುದು ಮುಂದೇನು
ದಳ್ಳಾಳಿ ಕಣ್ಣಲ್ಲಿ ಬೆಳೆದ ಚಿಂತೆ
ಮೈದುಂಬುವುದು ನಿಂತು ದೇವತೆಯ ಸೊಲ್ಲಡಗಿ
ಗುಡಿಸುತ್ತ ಕತ್ತಾಳೆ ಬೆಳೆಯಿತಲ್ಲ
ಜನಸಾಗರದ ಮುಂದೆ ಮಾತುಗಳು ಮಂಕಾಗಿ
ಮೌನವೇ ಮಡುಗಟ್ಟಿ ನಿಂತಿತಲ್ಲ
ಕಂಗೆಟ್ಟ ನಟ್ಟಿರುಳ ಭೇದಿಸುತ ಗಡಿದಾಟಿ
ಎದೆಮೀಟಿ ಬಂದದ್ದು ಯಾವ ಸದ್ದು
ಕೊಲೆಗಡುಕರಾಡುತಿಹ ಪಿಸುಮಾತೆ ಈ ದನಿಯು
ಅಂತರಂಗದ ಸಾವೆ ಕೇಳಿಸಿದ್ದು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page