You are hereವಿಜಯೋತ್ಸವ

ವಿಜಯೋತ್ಸವ


ಧಣಿಗಳ ವಿಜಯೋತ್ಸವದಲ್ಲಿ
ನಮ್ಮಂಥವರಿಗೇನು ಕೆಲಸ

ಹಸು ಮಕ್ಕಳನ್ನು ತುಳಿದ ಗುಜ್ಜಾನೆಗಳ
ಗುಣಗಾನ ಮಾಡೋಣ
ಊರೂರಿಗೆ ಬೆಂಕಿಯಿಟ್ಟು ಲೋಕಕ್ಕೇ ಬೆಳಕಾದೆವೆಂದು
ಬೀಗುವವರನ್ನು ಅಭಿನಂದಿಸೋಣ
ದತ್ತಿ ಬಿಟ್ಟವರನ್ನು ದನಿಯೆತ್ತಿ ಹೊಗಳೋಣ

ಚಾಮುಂಡಿಯಿಂದ ಹತನಾದ ಮಹಿಷನೇ
ನಮ್ಮೂರಿನಲ್ಲಿ ಕದಿರನಾಗಿ ಹುಟ್ಟಿ
ಮಾರಮ್ಮನ ಗಂಡನಾಗಿ ತಲೆದಂಡವ ತೆತ್ತ
ಕದಿರನಾಗಿ ಹುಟ್ಟಿದ್ದು, ಅದನ್ನು ಮುಚ್ಚಿಟ್ಟಿದ್ದು
ಅವನ ಅಪರಾಧ
ಯಾಕೆಂದರೆ ಈ ದೇವತೆಗಳು
ಜಾತಿಜಾತಿಯ ನಡುವೆ ನಿಂತ ಎತ್ತರದ ಗೋಡೆಗಳು

ಬನ್ನಿಯಲಿ ಬಚ್ಚಿಟ್ಟ ಆಯುಧಗಳು
ಪ್ರಶ್ನೆ ಕೇಳುವ ಹುಡುಗ
ಬೆಲೆಯ ಕೇಳುವ ರೈತ
ಕೂಲಿ ಕೇಳುವ ಕಾರ್ಮಿಕನ ಮೇಲೆ
ಎರಗದಿರಲಿ

ಜೋಪಡಿಯಲ್ಲಿ ಉರಿಯುವ ಒಲೆಯ ಮೊರೆತದಂತೆ
ಬದುಕು ಸತ್ಯವಾಗಿರಲಿ
ಕಾಂಪೌಂಡು ಗೋಡೆಯ ಮೇಲೆ ಬರೆದ
ಕವಿತೆಯ ಸಾಲಿನಂತೆ ಸರಳವಾಗಿರಲಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು