You are hereರಾಣಿಯ ಪ್ರೇಮ

ರಾಣಿಯ ಪ್ರೇಮ


ಉತ್ತರ ದಿಕ್ಕಿಗೆ ರಾಣಿಯೊಬ್ಬಳು
ಇದ್ದಳು ಬಲು ಹಿಗ್ಗಿ
ಎತ್ತರದಲ್ಲಿ ರಾಣಿ ಇದ್ದಳು
ಕಣ್ಣುಗಳಿಗೆ ಸುಗ್ಗಿ

ಆಳನು ಕರೆದಳು ಪಟ್ಟದ ರಾಣಿ
ಆಳು ಬಾರೊ ನನ್ನ ಜೊತೆಗೆ
ಜೀತಗಾರನ ಜೊತೆಗೆ ಕರೆದಳು
ಪ್ರೀತಿ ಮಾಡೊ ನನ್ನ

ಆಳು: ಕೊಕ್ಕರೆಯೊಂದು ಮೀನ ಪ್ರೀತಿಸಿತು
ಈ ಪ್ರೇಮದ ಗುಟ್ಟೇನು
ಮಸೆದ ಕತ್ತಿಯು ಕೊರಳ ಪ್ರೀತಿಸಿತು
ಈ ಒಲವಿನ ಪರಿಯೇನು?

ರಾಣಿ: ಮನದಾಳದ ನೋವೇರುತಲಿರುವುದು
ತಲೆಯ ತಿಕ್ಕು ಬಾರೊ
ಕಣ್ಣ ಕೊಳದಲ್ಲಿ ಮುಖವ ನೋಡುವೆನು
ಎದೆಯ ಹೊಕ್ಕು ಬಾರೊ

ಆಳು: ನೆಲ ಮುಗಿಲುಗಳ ಸಂಗಮವಿಲ್ಲ
ಪ್ರೀತಿಯ ಎಲ್ಲೆಯ ಅರಿತಿಲ್ಲ
ಹಂಗಿನ ಅರಮನೆ ಭಂಗದ ಗುಡಿಸಲು
ಮನಗಳೊಪ್ಪಿ ಬೆರೆತಿಲ್ಲ

ಜೀತಗಾರನು ಜೀವಭಯದಲ್ಲಿ
ಊರ ಬಿಡುವೆನೆಂದ
ಬೇಲಿ ಮರೆಯಲ್ಲಿ ಹೆಣ ಬಿದ್ದಿತ್ತು
ನೋಡಿ ಪ್ರೇಮದಂದ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು