You are hereಯುಗಾದಿ - ೪
ಯುಗಾದಿ - ೪
ಮಂಡೆಲಾ ಬಿಡುಗಡೆಯ ಬೆನ್ನ ಹಿಂದೆ
ಬಂದ ಈ ಯುಗಾದಿ
ಜಾತಿಮತಗಳ ಜೈಲುವಾಸಿಗಳನ್ನು
ಬಿಡಿಸಿ ಕರೆತಂದೀತೆ
ಪ್ರೀತಿ ಮಾನವತೆಗಳ ಬಯಲ ಕಡೆಗೆ
ಕಂಡಕಂಡವರನ್ನು ಗುಂಡಿಟ್ಟು ಕೊಂದ
ಪುರುಷ ಸಿಂಹರ ವಿಚಾರಣೆಯ ದಿನಕ್ಕಾಗಿ
ಕಾದು ಕುಳಿತ ಮುದುಕನಂತೆ
ಯುಗಾದಿ ಭರವಸೆಗಳ ಪ್ರವಾದಿ
ಈ ಸಲದ ಯುಗಾದಿ
ಮಧ್ಯ ಮಯಸ್ಕನ ಉದ್ಯೋಗದ ಕನಸಿನಂತೆ
ಲಂಚಕೋರನ ಮೃದುವಾದ ಮಾತಿನಂತೆ
ಏರುವ ಬೆಲೆ, ಇಳಿಯುವ ಘನತೆಯಂತೆ
ಚಿಂತಾಜನಕವಾಗದಿರಲಿ
ಜನಸ್ತೋಮದ ಹಸಿರ ನಡುವೆ
ಬಾಂಧವ್ಯದ ಹೂಗಳರಳಿ
ಸಮಾನತೆಯ ಸಂತಸವನು
ಋತುವಸಂತ ಸಾರಲಿ
ಯುಗ ಯುಗಗಳಿಂದ ಧಗಧಗಿಸುತಿರುವ
ಜನಮನದ ಕಾಡಿನೊಳಗೆ
ಪುಟ್ಟ ಕಂದನ ಕಣ್ಣಲ್ಲಿ ಕಂಡ
ಕನಸಿರಲಿ ಕೊನೆಯವರೆಗೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page