You are hereಮೆರವಣಿಗೆ
ಮೆರವಣಿಗೆ
ಮಲಗಿದ್ದ ಜನವೆದ್ದು ದನಿಯೆತ್ತಿ ಮೊಳಗಿಸಿದ
ಧಿಕ್ಕಾರಗಳ ನಡುವೆ ಬೆಳೆದ ಚೆಲುವೆ
ನರಭಕ್ಷಕರ ಬಂಗಲೆಯಂಗಳದಲ್ಲಿ
ಕ್ರಾಂತಿ ಕಣ್ಣಾಗಿ ಅರಳಿದವಳೆ
ಹಾರಿದೆವು ಜೋಡಿ ಪಾರಿವಾಳಗಳಾಗಿ
ತಡಿಕೆ ಗುಡಿಸಲ ಕೇರಿಮೇಲೆ
ನೇಗಿಲಿಗೆ ನೆಲವಾಗಿ ನೀರುಗೊಬ್ಬರವಾಗಿ
ಬಿತ್ತಿ ಬೆಳೆದೆವು ಕೆಂಡಗಳ ಫಸಲು
ನಾವು ಆಡಿದ ಮಾತು
ಭೂಲೋಕವನು ಮೀರಿ ಹಬ್ಬಿತ್ತು ದೇವಲೋಕ
ಕೆಂಬಾವುಟವ ಹಿಡಿದು ಹೊಂಟಿತು
ದೇವರುಗಳದೊಂದು ದೊಡ್ಡ ಮೆರವಣಿಗೆ
ಮೋಡಗಳ ನಾಡಿನಲಿ ಮಿಂಚುಗಳ ಘೋಷಣೆ
ಗುಡುಗು ಸಿಡಿಲುಗಳ ಸೆರಗಿನಲಿ ಕಟ್ಟಿಕೊಂಡೆ
ಚುಕ್ಕೆಗಳ ಲೋಕದಲಿ ಚಿಕ್ಕವನು ನಾನು
ಬೆಳ್ಳಿಬನ ಬೆಳ್ಳಿಹೂ ಬಿಳಿಯ ಮಾತುಗಳು
ಬೆಳಕುಂಡು ಬೆಳೆಯಬೇಕು
ಬಿಳುಪಾಯ್ತು ಬಾವುಟದ ಬಣ್ಣ
ನಾನಾದೆ ಸಣ್ಣ ಸಣ್ಣ
ನೀನಂದು ಬಲತುಂಬಿದೆ
ಮುನ್ನಡೆಸಿದೆ
ದೇವಮಾನವರೆಲ್ಲ ಒಂದಾದರು
ಪಂತ್ ನಗರದ ಸೀಳುನಾಯಿಗಳ ಹಿಡಿಯಲು
ಬೆಲ್ಚಿಯಲಿ ಅಡಗಿದ್ದ ರಾಕ್ಷಸರ ಕಾಣಲು
ಹೊಂಟಿತ್ತು ಮೆರವಣಿಗೆ ಸಾಲು ಸಾಲು
ಕಾಡುಗಳು ಚಲಿಸಿದವು
ಬೆಟ್ಟಗಳು ಬಯಲಾದವು
ಹಕ್ಕಿ ಹಕ್ಕಿಗಳಲ್ಲಿ ಧಿಕ್ಕಾರ ಹೊಮ್ಮಿತ್ತು
ಹೂವುಗಳು ಹಾವಾದವು
ಈ ಸಾಗರದ ಕೂಗಿನಲಿ ನಿನ್ನ ದನಿಯಿಲ್ಲ
ಕ್ರಾಂತಿ ಕಣಿವೆಯಲೆಲ್ಲೊ ಮರೆಯಾದೆಯ?
ಯಾರು ಎಳೆದರೆ ನಿನ್ನ
ಯಾರು ಸೆಳೆದರೆ ನಿನ್ನ
ನನ್ನಾಸೆ ಹಣ್ಣನು ಗಿಣಿಕಚ್ಚಿತೆ?
ನೂರು ನೋವಿನ ಮರಳಿನಲ್ಲಿ
ಹರಿಯುತ್ತಿದ್ದ ಗಂಗೆಯೆ
ಹತ್ತಿ ಉರಿದವು ಜಾಜಿಮಲ್ಲಿಗೆ
ಉರಿಬಿಸಿಲು ಮುಂಗಾರಿಗೆ
ಹೆತ್ತ ಹೆಣಗಳು ನೆಟ್ಟ ಮುಳ್ಳುಬೇಲಿಯ ನೀನು
ನೆಗೆಯಲಾರದೆ ಹೋದೆಯ?
ಒಂದಾದ ಮನಸುಗಳ ಪಾಲುಮಾಡಿದ ಜನರ
ಬಗೆಯಲಾರದೆ ಹೋದೆಯ?
ಯಾರು ಯಾರೋ ಅವರು?
ನನ್ನ ಮನಸಿನ ಕೊಂಬೆ ರೆಂಬೆಗಳ ಕಡಿದವರು
ಮಲ್ಲಿಗೆಯ ಬನಗಳಿಗೆ ಬೆಂಕಿಬರೆ ಎಳೆದವರು
ಹುಟ್ಟೂರು ಸುಟ್ಟವರು
ನನ್ನೆಲುಬುಗಳ ಕಿತ್ತು ನೆಕ್ಕಿ
ನಲಿದವರು ಯಾರೋ?
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page